“ಇಲ್ಲಿವೆ ಒಲವಿನ ಮಧುರ ಭಾವಸಂವೇದನೆಗಳ ಐದು ಹನಿಗವಿತೆಗಳು. ಪ್ರೇಮಾನುರಾಗದ ಸುಂದರ ಹೊಂಗಿರಣಗಳ ಚೆಲ್ಲುವ ಕಾವ್ಯಪ್ರಣತೆಗಳು. ಓದಿ ನೋಡಿ.. ಇವುಗಳಲ್ಲಿ ಪ್ರೇಮದ ಮಾಧುರ್ಯ ಮಾರ್ದನಿಸುವ ರಿಂಗಣಗಳಿವೆ. ಅನುರಾಗದ ಆಂತರ್ಯ ಬಿಂಬಿಸುವ ಭಾವಸ್ಫುರಣಗಳಿವೆ. ಮನವರಳಿಸುವ ಒಲವಿನ ಹೃದ್ಯ ಪ್ರೀತಿಯ ಅನುರಣನಗಳಿವೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
1. ಅಕ್ಷರ ಪ್ರಣತೆ.!
ಗೆಳತಿ ಕಾವ್ಯವಲ್ಲವಿದು
ಎದೆಯ ಭಾವನೈವೇದ್ಯ.!
ಬರಿಯ ಪದ್ಯವಲ್ಲವಿದು
ಒಲವ ದೀಪದೇದೀಪ್ಯ.!
******
2. (ನಿ)ವೇದನೆ.!
ಎಲ್ಲರೆದುರು ಸುಖಾಸುಮ್ಮನೆ
ಉದುರಿಸಬೇಡ ನಗೆಮುತ್ತು
ನೆನಪಿರಲಿ ಗೆಳತಿ ಅದು..
ನನ್ನೆದೆಯ ಅಮೂಲ್ಯ ಸಂಪತ್ತು.!
*******
3. ಧ್ಯಾನ.!
ನನ್ನಯ ಎದೆಯ ಹಕ್ಕಿಗೆ
ನಿನ್ನ ಹೆಸರಿನದೇ ಧ್ಯಾನ
ನೆನಪಿನಂಬರದ ಚುಕ್ಕಿಗಳ
ಎಣಿಕೆಯಲ್ಲೇ ತಲ್ಲೀನ.!
******
4. ಮನವಿ..!
ನಿನ್ನಯ ಕಳ್ಳನೋಟಕ್ಕೆ
ಅರ್ಧ ಜೀವವಾಗಿದ್ದೇನೆ
ಮತ್ತೆ ತುಂಟನಗೆ ಬೀರಿ
ಪೂರ್ಣ ಸಾಯಿಸಬೇಡ.!
******
5. ಒಗಟು..!
ಸೋಲೇ ಇಲ್ಲದ ಒಲವಿನಲಿ
ಗೆಲುವಿನ ಹಂಬಲವೇಕೆ.?
ಸೋಲು ಗೆಲುವಿನ ಹಂಗಿಲ್ಲದೆ
ಆರಾಧಿಸುವ ಅನುರಾಗದಲಿ
ಬಲಾಬಲಗಳ ಬೆಂಬಲವೇಕೆ.?
*******
6. ಪರಿಹಾರ..!
ನಿನ್ನ ಸಮಯ ಪಾಲನೆಗೂ
ನಿತ್ಯ ನನ್ನ ಕಾಯುವಿಕೆಗೂ
ಹೊಂದುವುದಿಲ್ಲ ಲಕ್ಕಾಚಾರ.!
ಹಾಗಾಗಿ ಬಿಚ್ಚಿಟ್ಟು ಬರುತ್ತೇನೆ
ಸದಾ ನನ್ನಯ ಕೈಗಡಿಯಾರ.!
- ಎ.ಎನ್.ರಮೇಶ್.ಗುಬ್ಬಿ.