ಅವರಿಬ್ಬರು ಏಳು ವರ್ಷದಿಂದ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಹೆಂಡತಿ ಸಸ್ಯಹಾರಿಯಾಗಿದ್ದರೆ, ಗಂಡ ಮಾಂಸಹಾರಿ ಪ್ರಿಯನಾಗಿದ್ಧ, ಅವರಿಬ್ಬರ ಜಗಳಕ್ಕೆ ಅವರ ಆಹಾರವೇ ಮುಳುವಾಗಿತ್ತು. ಆ ಸಣ್ಣ ಜಗಳಕ್ಕೆ ತಾರಕಕ್ಕೆ ಏರಿದಾಗ ಡೈವೋರ್ಸ್ ವರೆಗೂ ಬಂದು ನಿಂತಿತ್ತು, ಅದನ್ನು ವಕೀಲೆ ಹೆಚ್. ಆರ್ . ಪವಿತ್ರ ಧರ್ಮಪ್ಪ ಅವರು ಡೈವೋರ್ಸ್ ಕೊಡಿಸಿದರಾ ಅಥವಾ ಇಲ್ಲವಾ?… ಅನ್ನೋದನ್ನು ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕಥೆಗಳು’ ಅಂಕಣವನ್ನು ತಪ್ಪದೆ ಓದಿ…
ಬೆಳ್ಳಂಬೆಳಗ್ಗೆ ಆಂಜನೇಯನ ಗುಡಿಗೆ ಹೋಗಿದ್ದೆ, “ಶ್ರೀರಾಮರಾಮೇತಿ ಮನೋರಮೇ ತತ್ಯುಲಂ ” ಶ್ಲೋಕ ಹೇಳಿಕೊಂಡು ತೀರ್ಥ, ಪ್ರಸಾದ ಸ್ವೀಕರಿಸಿ… ಪ್ರದಕ್ಷಿಣೆ ಹಾಕಿ… ಅಂಗಳದಲ್ಲಿ ಅರಳಿದ ಮಲ್ಲಿಗೆಯ ಘಮಲನ್ನು, ಹೂನಗೆ ಚೆಲ್ಲಿ ನಿಂತ ಕರವೀರ, ದಾಸವಾಳದ ಚೆಲುವನ್ನು ಕಣ್ಣರಳಿಸಿ ನೋಡಿ ಮನಸಾರೆ ಆಸ್ಪಾದಿಸುತ್ತಾ ತುಂಟಿಯಂಚಿನಲ್ಲಿ ನಗೆ ಚೆಲ್ಲಿ ಮೈ ಮರೆತು ಮೆಟ್ಟಿಲು ಮೇಲೆ ಕುಳಿತಿದ್ದಲ್ಲಿಗೆ ಒಂದು ಅಜ್ಜಿ ಬಂದ್ರು, ಅವರ ಕೈಯಲ್ಲಿ ಹಿಡಿದಿದ್ದ ವಾಕಿಂಗ್ ಸ್ಟಿಕ್ ಸದ್ದಿಗೆ ನನ್ನ ಗಮನ ವಾಸ್ತವಕ್ಕೆ ಹರಿಯಿತು. ಅಜ್ಜಿಯನ್ನು ನೋಡಿ ಮುಗುಳ್ನಗೆ ಬೀರಿ ಅಲ್ಲಿಂದ ಎದ್ದು ಹೊರಡಲು ಅನುವಾದವಳಿಗೆ ಅಜ್ಜಿಯ ಕೋಲು ಕೆಳಕ್ಕೆ ಬಿದ್ದು ಕೂರಲು ತಡಕಾಡುತ್ತಿದ್ದಳು, ಅವಳಿಗೆ ಕೋಲು ತೆಗೆದು ಕೊಟ್ಟು ಎಲ್ಲಿ ನಿಮ್ಮನೆ ಎಂದವಳಿಗೆ ಇಲ್ಲೆ ಹೌಸಿಂಗ್ ಬೋರ್ಡ್ನಲ್ಲಿರುವ ಸರ್ಕಾರಿ ಕ್ವಾರ್ಟರ್ಸ್ ಲ್ಲಿದ್ದಿನಿ… ನಮ್ಮೂರು ಶಿರಗುಪ್ಪೆ… ಮಗ ಪಿ.ಡಬ್ಲ್ಯೂ ಆಫೀಸ್ನಾಗೆ ಕೆಲಸ ಮಾಡ್ತಾನೆ ಅಂದ್ಲು, ಬಹಳ ಹಿಂದಿನಿಂದ ಪರಿಚಯ ಇರುವ ಹಾಗೆ ಅಜ್ಜಿ ತುಂಬಾ ಹೊತ್ತು ಮಾತಾಡುತ್ತಾ ನಿಮ್ಮ ಮನೆ ಎಲ್ಲಿರೋದು, ಯಾರ್ಯಾರಿದಿರಿ? ಎನ್ನುವ ಲೋಕಾರೂಢಿ ಪ್ರಶ್ನೆಗಳನ್ನು ಹಾಕುತ್ತ ಜೀವನದಾಗ ಒಬ್ಬರಿಗೊಬ್ಬರ ಆಸರೆ ಬೇಕೇ ಬೇಕು ಎನ್ನುವ ತತ್ವ ವೇದಾಂತಗಳ ಅನುಭವದ ನುಡಿಗಳನ್ನು ಕಿವಿಯಲ್ಲಿ ತುಂಬಿದಳು ಅವು ಲೋಕವನ್ನು ಬೆಳಗುವ ಬೆಳಗಿನ ಸೂರ್ಯ ಕಿರಣಗಳಂತೆ ಕೇವಲ ತತ್ವ ಸಿದ್ದಾಂತ ಮತ್ತು ವೈರಾಗ್ಯದ ಮಾತುಗಳಾಗಿರದೆ ಈ ಲೋಕದ ನೀತಿಗಳಾಗಿದ್ದವು, ವಿವೇಕವನ್ನು ಮೂಡಿಸುವ ನುಡಿಗಳಾಗಿದ್ದವು, ನೂರಾರು ವಾಕ್ಯಗಳಲ್ಲಿ ಹೇಳಬೇಕಾದ್ದನ್ನು ಕೇವಲ ಕೆಲ ಸತ್ವಯುತ ಪದಪುಂಜಗಳಲ್ಲಿ ತನ್ನಿಡೀ ಜೀವನಾನುಭವಗಳನ್ನು ನನ್ನ ಮುಂದೆ ಸುರಿದಿದ್ದಳು.
ಆಕೆಯ ಮಾತಿಗೆ ಕಿವಿಯಾಗಿದ್ದ ನಾನು ಇಡೀ ದಿನ ಇದೆ ಗುಂಗಿನಲ್ಲಿದ್ದೆ, ಮಧ್ಯಾಹ್ನ ಊಟ ಮುಗಿಸಿ ಕೋರ್ಟ್ನಲ್ಲಿ ಕೆಲಸವಿಲ್ಲದ ಕಾರಣ ಆಫೀಸ್ನಲ್ಲಿ ಮರುದಿನದ ಕೇಸುಗಳ ಬಗ್ಗೆ ಒಂದಷ್ಟು ತಯಾರಿ ನಡೆಸುತ್ತಿದ್ದೆ ಆಗ ಮೂವತ್ತರ ಆಸುಪಾಸಿನ ಒಬ್ಬ ಯುವಕ ಅವನೊಂದಿಗೆ ಇಪ್ಪತ್ತಾರು ವಯಸ್ಸಿನ ಹೆಣ್ಣುಮಗಳು ಐದು ವರ್ಷದ ಒಂದು ಪುಟ್ಟ ಹೆಣ್ಮುಗುವಿನೊಂದಿಗೆ ಬಂದರು. ಬಂದವರಿಗೆ ಕೂರಲು ಕುರ್ಚಿ ತೊರಿಸಿ ಏನು ವಿಷಯ ಎಂದೇ.???
ಆಕೆ ಮೇಡಂ ನನಗೆ ಡಿವೋರ್ಸ್ ಬೇಕು ನೀವು ಕೇಸ್ ತಗೊತೀರಾ.. ಏನೆಲ್ಲಾ ಡ್ಯಾಕ್ಯುಂಮೆಂಟ್ ಕೊಡಬೇಕು ಹೇಳಿ, ಹಾಗೆ ನಿಮ್ಮ ಫೀಜು ಎಷ್ಟು..? ಇಲ್ಲಿಯ ಕೋರ್ಟ್ನಲ್ಲಿ ಕೇಸ್ ಹಾಕ್ಬಹುದಾ..?? ಇಲ್ಲ ಮಡಿಕೇರಿಗೆ ಹೋಗ್ಬೇಕಾ..? ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳ್ತಾ ಹೋದ್ಲು ಒಂದೇ ಉಸಿರಿಗೆ, ಅವಳೆಲ್ಲಾ ಪ್ರಶ್ನೆಗಳಿಗೆ ಬ್ರೇಕ್ ಹಾಕಿ ಯಾರಿಗೆ ಡಿವೋರ್ಸ್ ಬೇಕಿರೋದು ಅಂದೆ..
‘ನನಗೆ ಮೇಡಂ’… ‘ಜೊತೆಯಲ್ಲಿರುವ ಇವರು ಯಾರು?? ನಿಮ್ಮ ಅಣ್ಣ ನಾ’..?? ಎನ್ನುವ ನನ್ನ ಪ್ರಶ್ನೆಗೆ.. ‘ನನ್ನ ಗಂಡ’… ಅಂದ್ಲು ನಿಜಕ್ಕೂ ಶಾಕ್ ಆದೆ. ಕ್ಷಣಕಾಲ ಅವರಿಬ್ಬರನ್ನು ನೋಡಿ ಮೊದಲೇ ಗಂಡನಿಗೆ ಡೈವೋರ್ಸ್ ಕೊಡದೆ ಇವರನ್ನು ಮದುವೆ ಮಾಡಿಕೊಂಡ್ಯಾ..??. ‘ಇಲ್ಲ ಮೇಡಂ, ಈ ಮಗುವಿನ ಅಪ್ಪ..? ಇವರೇ ಮೇಡಂ. ಇವರನ್ನೆ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ವಿ. ಈಗ ಡೈವೋರ್ಸ್ ಬೇಕು. ದಯವಿಟ್ಟು ಕೊಡಿಸಿ ಕೊಡಿ’… ಅನ್ನುವ ಮಾತಿಗೆ ಆ ಹುಡುಗನ ಮುಖ ನೋಡಿದೆ..ಹೀಗೂ ಇದೆಯಾ ..?? ವಿಚ್ಛೇದನ ಕೇಳೋಕ್ಕೆ ಗಂಡ ಹೆಂಡತಿ ಒಟ್ಟಿಗೆ ಬರೋದುಂಟಾ!. ಸಿನಿಮಾದಲ್ಲಿ ನಡೆಯುವ ಕಥೆ ನನ್ನ ಕಛೇರಿಯಲ್ಲಿ ನಡೆಯುತ್ತಾ ಇದೆಯಲ್ಲ ಅನಿಸಿ ಆಶ್ಚರ್ಯ ಸಹ ಆಯ್ತು.
ಅವರಿಬ್ಬರು ನನ್ನ ಕಛೇರಿಯಿಂದ ಹದಿನೇಳು ಕೀಲೋ ಮೀಟರ್ ದೂರದಲ್ಲಿರುವ ಒಂದು ಗ್ರಾಮದವರು, ಹುಡುಗನ ಮನೆಯಲ್ಲಿ ಅಮ್ಮ , ಅವನು, ಇವಳು, ಆ ಪುಟ್ಟ ಮಗು ಇದ್ದದ್ದು ಅಷ್ಟೆ, ಏಳು ವರ್ಷಗಳ ಹಿಂದೆ ಡಿಪ್ಲೊಮೊ ಇಂಜಿನಿಯರ್ ಆಗಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಸುಷ್ಮಾಳನ್ನು ನೋಡಿ ತಾನಾಗಿಯೇ ಹಿಂದೆ ಬಿದ್ದು. ಕಾಡಿಬೇಡಿ ಪ್ರೀತಿಸಿದ್ದ. ರವಿಯ ಹುಚ್ಚು ಪ್ರೀತಿಗೆ ಮನಸೋತು ಸುಷ್ಮಾಳು ಒಪ್ಪಿಗೆ ಕೊಟ್ಟಿದ್ಲು . ಅವ್ರಿಬ್ರದ್ದು ಇಂಟರ್ ಕ್ಯಾಸ್ಟ್ ಲವ್ ಮ್ಯಾರೇಜ್. ಹೆತ್ತವರನ್ನು ದಿಕ್ಕರಿಸಿಕೊಂಡಾದರೂ, ಮದುವೆ ಆಗೋಕೆ ರೆಡಿಯಾಗಿದ್ದಾಗ,
ಒಲ್ಲದ ಮನಸ್ಸಿನಿಂದಲೇ ಎರಡು ಕುಟುಂಬಗಳು ಸೇರಿ ಮದುವೆ ಮಾಡಿಸಿ ಕೈ ತೊಳೆದು ಕೊಂಡಿದ್ದರು. ಮದುವೆ ಆದ ಹೊಸತರಲ್ಲಿ ಇಬ್ಬರಲ್ಲಿ ಅನ್ಯೋನ್ಯತೆ ಇದ್ದು ಮಗು ಹುಟ್ಟಿ ಬೆಳೆದು ಸ್ಕೂಲಿಗೆ ಸೇರಿಸುವವರೆಗೂ ಎಲ್ಲವೂ ಸುಲಲಿತವಾಗಿತ್ತು. ಅಷ್ಟರಲ್ಲಿ ರವಿಯ ತಂದೆ ತೀರಿಕೊಂಡ ಪರಿಣಾಮ ಊರಲ್ಲಿ ತಾಯಿ ಒಬ್ಬರೆ ಆಗ್ತಾರೇ ಜಮೀನು ನೋಡಿಕೊಳ್ಳೋಕ್ಕೆ ಯಾರಿಲ್ಲಾ ಎಂದು ಮೈಸೂರಿನಿಂದ ಹಳ್ಳಿಗೆ ಶಿಫ್ಟ್ ಆದ್ರು. ಊರಿಗೆ ಗಂಡನೊಂದಿಗೆ ಸುಷ್ಮಾ ನಗು ನಗುತ್ತಲೇ ಬಂದಳು, ಅಲ್ಲದೆ ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿ ಆ ಪ್ರಯತ್ನದಲ್ಲಿ ಯಶಸ್ಸು ಸಹ ಕಂಡಿದ್ಲು. ಆದರೆ ದಿನ ಕಳೆದಂತೆ ಇಬ್ಬರಲ್ಲೂ ಮೊದಲಿದ್ದ ಆಕರ್ಷಣೆ ಕಡಿಮೆಯಾಗ ತೊಡಗಿದವು.
ಮೊದಲೇ ಹೇಳಿದ್ದಿನಲ್ಲಾ ಇವ್ರದ್ದು ಇಂಟರ್ ಕ್ಯಾಸ್ಟ್ ಮ್ಯಾರೇಜ್ ಅಂತಾ ಹೆಂಡತಿ ಸಸ್ಯಹಾರಿಯಾಗಿದ್ದರೆ, ಇವನು ಮಾಂಸಹಾರ ಪ್ರಿಯನಾಗಿದ್ಧ. ಗಂಡನಿಗೆ ವಾರಕ್ಕೆ ಮೂರು ದಿನವಾದ್ರು ಚಿಕನ್ ,ಮಟನ್, ಬಿರಿಯಾನಿ ಏನಾದರೂ ಬೇಕಾಗಿತ್ತು. ಮನೆಯಲ್ಲಿ ಹೆಂಡತಿಯ ತರಕಾರಿ ಅಡುಗೆ ತಿಂದು ತಿಂದು ನಾಲಿಗೆ ಸಪ್ಪೆ ಹಿಡಿದಿತ್ತು.
ಮೊದ ಮೊದಲು ಹೋಟೆಲ್ ಗೆ ಹೋಗಿ ಸವಿದು ಬರುತ್ತಿದ್ದ. ಆದರೆ ಜಮೀನು ಜೊತೆಗೆ ಸಣ್ಣದೊಂದು ದಿನಸಿ ಅಂಗಡಿ ಹಾಕ್ಕೊಂಡು ಆರಕ್ಕೆ ಏರದ ಮೂರಕ್ಕೆ ಇಳಿಯಂದಂತೆ ಸಂಸಾರ ನಡೆಸುತ್ತಿದ್ದವನಿಗೆ ಇದು ದುಬಾರಿ ಅನಿಸುತ್ತಿತ್ತು. ಮನೆಯಲ್ಲಿ ಹೆಂಡತಿಗೆ ನೀನು ತಿನ್ನದೆ ಇದ್ದರೆ ಏನಂತೆ ಮಾಡಿಕೊಡು ಎಂದು ಪೀಡಿಸಲಾರಂಭಿಸಿದ. ಅದೂ ಅಲ್ಲದೆ ಮಗುವಿಗೆ ಅದರ ರುಚಿ ಹತ್ತಿಸಬೇಕು, ಆಗಲಾದರೂ ಹೆಂಡತಿ ಮಾಡುತ್ತಾಳೆ ಮತ್ತು ಮಗುವಿನ ಜಾತಿ ನಿರ್ಧಾರವಾಗುವುದು ತನ್ನಿಂದ ಹೀಗಾಗಿ ಮಗು ತಿನ್ನಲೇಬೇಕು ಅಂತ ಹೋಟೆಲ್ ಗೆ ಕರ್ಕೊಂಡು ಹೋಗಿ ತಿನ್ನಿಸಲು ಪ್ರಾರಂಭಿಸಿದ. ಕೆಲವೂಮ್ಮೆ ಹೆಂಡತಿ ಹೊರಗೆ ಹೋದ ಸಮಯ ನೋಡಿ ತನ್ನಮ್ಮನಿಗೆ ಹೇಳಿ ಮಾಡಿಸಿ ತಿನ್ನುವುದು ರೂಢಿ ಆಗಿತ್ತು. ಇದು ಸುಷ್ಮಾಳಿಗೆ ಸಹಿಸಲು ಸಹ್ಯವಲ್ಲದಾದ್ದರಿಂದ ಮಗಳಿಗೆ ಮಾಂಸಹಾರದ ಅಭ್ಯಾಸ ಮಾಡಿಸದಂತೆ ಗಲಾಟೆ ಮಾಡುತ್ತಿದ್ದಳು. ಈ ಗಲಾಟೆ ಮುಂದುವರಿದು ಅತ್ತೆ – ಸೊಸೆ ಜಗಳವಾಗಿ ಬಿಡುತ್ತಿತ್ತು. ಇದರ ಜೊತೆಗೆ ಬೇರೆ ಬೇರೆ ವಿಚಾರದಲ್ಲಿ ಜಗಳ ಖಾಯಂ ಆಯ್ತು.
ನೊಂದ ಸುಷ್ಮಾ ತಾನು ಕಲಿತ ವಿದ್ಯೆಗೆ ತಕ್ಕನಾದ ಶಿಕ್ಷಕಿಯಾಗಿ ಕೆಲಸ ಸೇರಿಕೊಂಡ್ಲು…ಇವಳು ಕೆಲಸ ಮಾಡುತ್ತಿದ್ದ ಶಾಲೆ ಊರಿನಿಂದ ತುಂಬಾ ದೂರ ಇದ್ದ ಪರಿಣಾಮ ಬೆಳಗ್ಗೆ ಬೇಗನೆ ಹೋಗಬೇಕಾಗುತ್ತಿತ್ತು. ಸರಿಯಾಗಿ ಅಡಿಗೆ,ತಿಂಡಿ ಮಾಡಲ್ಲಾ, ಬಾಗಿಲಿಗೆ ನೀರು ಹಾಕೋಲ್ಲ, ಅಮ್ಮನಿಗೆ ಮರ್ಯಾದೆ ಕೊಡೋಲ್ಲ, ತನ್ನಿಷ್ಟದ ಅಡುಗೆ ಮಾಡಲ್ಲಾ.. ಕೆಲಸಕ್ಕೆ ಹೋಗುವಂತ್ತದ್ದು ಏನಿದೆ ..? ಹೋಗುವುದು ಬೇಡಾ ಎಂಬಿತ್ಯಾದಿ ಚಿಕ್ಕ ಪುಟ್ಟ ವಿಚಾರಗಳಿಗೆ ಶುರುವಾಗುವ ಜಗಳ ತಾರಕಕ್ಕೇರಿದ್ದುಂಟ್ಟು, ಒಮ್ಮೊಮ್ಮೆ ಇವನನ್ನು ಬಿಟ್ಟು ಹೋಗಬೇಕು ಅಂದುಕೊಳ್ಳುವವಳಿಗೆ ಅಪ್ಪ ಅಮ್ಮನ ಎದುರು ಹಾಕಿ ಮದುವೆ ಮಾಡಿಕೊಂಡಿದ್ದು ನೆನಪಾಗುತ್ತಿತ್ತು, ಇವನಿಗೂ ಅಷ್ಟೆ ಅದೆಷ್ಟು ಹೆಂಡತಿಯೊಂದಿಗೆ ಜಗಳಕಾದರೂ ಅವಳು ಬೇಕು ಎಂಬ ಹಂಬಲ. ಆದರೂ ದಿನ ಕಿತ್ತಾಟದಿಂದ ಬೇಸತ್ತು ಒಟ್ಟಿಗೆ ಇಬ್ಬರು ನಿರ್ಧರಿಸಿ ಪರಸ್ಪರ ದೂರವಾಗುವ ಇಚ್ಚೆಯಿಂದ ನನ್ನ ಕಛೇರಿಗೆ ಬಂದಿದ್ದರು ವಿವಾಹ ಬಂಧನದಿಂದ ಮುಕ್ತಿ ಬಯಸಿ!!
ಇವರಿಬ್ಬರ ಸಮಸ್ಯೆ ಕೇಳಿದವಳಿಗೆ ಇವರದ್ದು ಸಮಸ್ಯೆ ಅಲ್ಲ ಅನಿಸಿತು ಅಲ್ಲದೆ ಬೆಳಗ್ಗೆ ತಾನೆ ದೇವಸ್ಥಾನದಲ್ಲಿ ಸಿಕ್ಕ ಅಜ್ಜಿ ತನ್ನ ಜೀವಾನುಭವಗಳನ್ನು ಅದೆಷ್ಟು ಚಂದವಾಗಿ ಹೇಳಿದ್ಲು..ಇವರ ಈ ಚಿಕ್ಕ ಪುಟ್ಟ ವಿಚಾರಗಳನ್ನು ಕೆದಕಿ ಇನ್ನಷ್ಟು ಕಂದಕ ನಿರ್ಮಿಸಿ ವಿಚ್ಛೇದನ ಕೊಡಿಸುವುದಕ್ಕಿಂತಲೂ… ವಿಷಯವನ್ನು ಅಷ್ಟು ತ್ರೀವ್ರವಾಗಿ ನೋಡದೆ ಒಂದು ಮಾಡಲು ಏನ್ಮಾಡ್ಬೇಕು ಅನ್ನುವ ಯೋಚನೆ ಅಷ್ಟೆ ಬಂತು ನನ್ನ ಮನಸಿಗೆ.
ನನ್ನ ಸಮಯ ವ್ಯರ್ಥವಾದರೂ ಪರವಾಗಿಲ್ಲ ಇವರಿಗಾಗಿ..ಈ ದಿನದ ಅರ್ಧದಿನ ಹೋಗಲಿ ಎಂದು ನಿರ್ಧರಿಸಿದೆ.. ಗಂಡ ಹೆಂಡತಿಯ ಮಧ್ಯೆ ವಾದ ವಿವಾದ ಕೋಪ ತಾಪ ಸಹಜವೇ ಅವು ಬೆಳೆಯಬಾರದೆಂದರೆ ಸಮಸ್ಯೆ ಸಣ್ಣದಾಗಿರುವಾಗಲೆ ಪರಿಷ್ಕರಿಸಬೇಕು ಎಂಬ ಯೋಚನೆಯಿಂದ ಅವಳಿಗೆ ಕೇಳಿದೆ ನೀನು ನಿನ್ನ ಗಂಡನನ್ನು ಎಷ್ಟು ದ್ವೇಷ ಮಾಡ್ತಿಯಾ ಅಂತ ಅದ್ಕವಳು ಅವರು ಮಲಗಿದ್ದಾಗ ಏನಾದರೂ ಎತ್ತಿ ಹಾಕಿ ಸಾಯಿಸಬೇಕು ಅನಿಸುತ್ತೆ ಅಷ್ಟು ಕೋಪ ಅಂದ್ಲು, ಅವನನ್ನು ಕೇಳಿದೆ ಅವ ಅಂದ ಊಟದಲ್ಲಿ ವಿಷ ಬೆರೆಸಿ ಕೊಟ್ಟು ಬಿಡಬೇಕು, ಇಲ್ಲ ನಾನೇ ನೇಣು ಬಿಗಿದುಕೊಳ್ಳಷ್ಟು ಕೋಪ ಬರುತ್ತದೆ ಅಂದ !!!
ಓಹ್ ..ಹೌದಾ.. ಹಾಗಾದರೆ ಒಮ್ಮೆಯೂ ಪ್ರೀತಿ ಬರೋದೆ ಇಲ್ವಾ ಇಬ್ಬರ ಮಧ್ಯೆ.. ಬರೋಕೆ ಹೋಗಿದ್ದರೆ ತಾನೆ “ರವಿ ಅಂದ್ರೆ ಪ್ರಾಣ ” ಎಷ್ಟು ಪ್ರೀತಿ ನಿನಗೆ ಹಾಗಿದ್ದರೆ ಅವನಮೇಲೆ..??
“ಅವನ ಪಾದ ಪೂಜೆ ಮಾಡಿ ನೀರು, ಕುಡಿಯುವಷ್ಟು” ಅಬ್ಬಾ!! ಇಷ್ಟೊಂದು ಪ್ರೀತಿನಾ..ಹಾಗಿದ್ದರೆ ರವಿ ನಿನಗೆ ಹೆಂಡತಿ ಅಂದ್ರೆ..?? ” ಅವಳು ನನ್ನ ಸರ್ವಸ್ವ,” ನನ್ನ ಮಗುವಿನ ತಾಯಿ, ಕೆಲವೂಮ್ಮೆ ಅವಳು ಕಾಣಿಸದೆ ಹೋದರೆ ತುಂಬಾ ಭಯವಾಗುತ್ತದೆ.
ಇಷ್ಟೆಲ್ಲಾ ಪ್ರೀತಿಸುವ ನೀವುಗಳು ಮತ್ಯಾಕೆ ಚಿಕ್ಕ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ವಕೀಲರ ಕಛೇರಿ ಹುಡುಕಿ ಬಂದಿದ್ದು. ನಿಮ್ಮಿಬ್ಬರಿಗೂ ಬೇಕಿರೋದು ವಿಚ್ಛೇದನ ಅಲ್ಲ, ಅಪ್ತ ಸಮಾಲೋಚನೆ ಅಷ್ಟೆ. ಇಬ್ಬರಲ್ಲೂ ಒಂದಷ್ಟು ಇಗೋ ಇದೆ ನನ್ನ ಮಾತನ್ನು ಪೂರ್ತಿಯಾಗಿ ಕೇಳುವ ಮನಸ್ಸಿದೆಯಾ ಅಂದೆ.
ಇಬ್ಬರು ಅಷ್ಟೊತ್ತಿಗೆ ಮೆತ್ತಗೆ ಆಗಿದ್ರು ಒಕ್ಕೊರಲಿಂದ ಹೇಳಿ ಮೇಡಂ ಅಂದ್ರು.
ನಿಮ್ಮಿಬ್ಬರಿಂದ ಯಾವುದಾದರೂ ತಪ್ಪು ಜರುಗಿದರೆ ಪ್ರತಿ ಸಂದರ್ಭದಲ್ಲೂ ನಿನ್ನಿಂದಲೆ ಹೀಗಾಯಿತು ..ಎನ್ನುತ್ತಾ ದೂರಬಾರದು, ಯಾವುದಾದರೂ ಜಗಳ ನಡೆದರೆ ಬೇರೆಯವರನ್ನು ಹೊಣೆ ಮಾಡುವ ಪ್ರಯತ್ನ ಮಾಡಬಾರದು. ಒಂದು ವೇಳೆ ನಿಜವಾಗಿಯೂ ತಪ್ಪು ನಡೆದರೆ ಅದಕ್ಕೆ ಕಾರಣವನ್ನು ಸರಿಯಾಗಿ ತಿಳಿದುಕೊಳ್ಳಿ ಮತ್ತು ಜೊತೆಯಾಗಿ ನಿಂತು ಅದನ್ನು ಸರಿಪಡಿಸಿಕೊಳ್ಳುವ ಮಾರ್ಗ ಅಲೋಚಿಸಿ.
ನಾಲ್ಕು ಜನರ ಮಧ್ಯೆ, ನಿಮ್ಮ ತಂದೆ ತಾಯಿಯರ ಮುಂದೆ, ಬಂಧುಗಳ ಎದುರಿನಲ್ಲೆ ಹೆಂಡತಿಯ ಮೇಲೆ ವ್ಯಂಗ್ಯ ಮಾತುಗಳನ್ನು ಆಡಬಾರದು, ಆ ಕ್ಷಣಕ್ಕೆ ನಿಮಗೆ ಅವಳು ಪ್ರತಿಕ್ರಿಯಿಸದೆ ಇದ್ದರು ಮನಸ್ಸು ಮುದುಡುವುದು ಸಹಜ ಆದರೆ ಅರಿತು ನಡೆಯಿರಿ, ಇಲ್ಲದಿದ್ದರೆ ಈ ಸಮಸ್ಯೆಯೇ ನಿಮ್ಮಿಬ್ಬರನ್ನು ದೂರಮಾಡಲು ಕಾರಣವಾಗಬಹುದು.
ಒಬ್ಬರ ಮಾತನ್ನು ಒಬ್ಬರು ಸಾವಧಾನವಾಗಿ ಕೇಳಿ,ಇಬ್ಬರೂ ಪರಸ್ಪರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳದೆ ಹೋದರೆ ಜಗಳ ವಿಪರೀತಕ್ಕೆ ಹೋಗುತ್ತದೆ ತಾಳ್ಮೆಯಿಂದ ಒಬ್ಬರ ಅಭಿಪ್ರಾಯ ಒಬ್ಬರು ತಿಳಿಯಲು ಪ್ರಯತ್ನಿಸಿ.ಎಷ್ಟೇ ಜಗಳವಿದ್ದರು ರಾತ್ರಿ ಒಳಗೆ ಮುಗಿಯಬೇಕು ಮಲಗುವ ಕೋಣೆಗೆ ಒಯ್ಯಬೇಡಿ, ಮರುದಿನಕ್ಕೂ ಎಳೆಯಬೇಡಿ..ಒಬ್ಬರನ್ನೊಬ್ಬರು ಹಂಗಿಸದಿರೀ
ಹಾಗೆ ಗಂಡನ ಆಸೆ ಆಕಾಂಕ್ಷೆಗಳ ಬಗ್ಗೆ ನಿರ್ಲಕ್ಷ್ಯ ಬೇಡಾ,ಹೆಂಡತಿ ಆಸೆ ಬಯಕೆಗಳ ಬಗ್ಗೆ ಅಸಡ್ಡೆ, ಅಸಹನೆಯೂ ಬೇಡಾ, ಇವನು, ಇವಳು ನಮ್ಮವರು ಎಂಬ ಭಾವನೆಯಲ್ಲಿ ನಿರ್ಲಕ್ಷ್ಯ ಮಾಡದೆ ಅದೆಷ್ಟೆ ಒತ್ತಡಗಳು ಇದ್ಜರೂ ಪರಸ್ಪರ ಸ್ವಲ್ಪ ನಿಮಗಾಗಿ ಸಮಯ ಕೊಟ್ಟು ಕೊಳ್ಳಿ.
ಸುಷ್ಮಾ ನಿನಗೆ ಮದುವೆ ಮುಂಚೆಯೇ ಗೊತ್ತಿದೆ ನಿನ್ನ ಗಂಡ ಮಾಂಸಾಹಾರಿ ಅಂತ ನೀನು ತಿನ್ನದೆ ಇದ್ದರು ಆತನಿಗಾಗಿ ಅಡುಗೆ ಮಾಡಿಕೊಡುವ ಮನಸ್ಸು ಮಾಡು..ಸ್ವಲ್ಪ ದಿನ ಕಷ್ಟ ಆಗಬಹುದು ನಂತರ ಅಭ್ಯಾಸ ಆಗುತ್ತೆ, ರವಿ ನೀನು ಅಷ್ಟೆ. ಆಕೆ ಅಷ್ಟು ಬೇಗನೆ ಎದ್ದು ಕೆಲಸಕ್ಕೆ ಹೋಗುವುದರಿಂದ ಅವಳ ಮನೆ ಕೆಲಸಗಳೊಂದಿಗೆ ಕೈ ಜೋಡಿಸು. ನಿಮ್ಮಿಬ್ಬರದು ಸಮಸ್ಯೆಯೇ ಅಲ್ಲ ಗಂಡ ಹೆಂಡತಿಯ ಸಂಬಂಧ ಅನ್ನೋದು ನಾವು ಪ್ರತಿದಿನವೂ ಕೂಡಿಡುವ ಉಳಿತಾಯದ ಹಣದಂತೆ ಅದನ್ನು ಸರಿಯಾಗಿ ಖಾತೆಯಲ್ಲಿ ಜಮೆ ಮಾಡುತ್ತಾ ಬಂದರೆ ಹೇಗೆ ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತೋ ಹಾಗೆ ಸದ್ಭಾವನೆಗಳಿಂದ ಕೂಡಿದ ಸಂಬಂಧ ನೆಮ್ಮದಿ ತೃಪ್ತಿಯ ಗಣಿಗಳನ್ನೇ ನಮ್ಮದಾಗಿಸುತ್ತದೆ.
ಸಂಸಾರದಲ್ಲಿ ಬರುವ ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ವಿಚ್ಛೇದನವೆ ಪರಿಹಾರವಲ್ಲ, ಇಬ್ಬರ ಆಭಿರುಚಿಗಳು ಯಾವಗಾಲೂ ಬೇರೆ ಬೇರೆಯಾಗೆ ಇರುತ್ತದೆ ಆದರೆ ಅವುಗಳನ್ನು ಪರಸ್ಪರ ಗೌರವಿಸಬೇಕು ಅಷ್ಟೆ ಯಾರಿಗೂ ಒಳ್ಳೆಯ ಗಂಡ, ಒಳ್ಳೆಯ ಹೆಂಡತಿ ಅಂತ ಸಿಗುವುದಿಲ್ಲ ನಾವು ಆರಿಸಿಕೊಂಡವರು ಈ ಋಣಾನುಬಂಧಕ್ಕೆ ದಕ್ಕಿದವರನ್ನು ಒಳ್ಳೆಯ ಗಂಡನಾಗಿ, ಒಳ್ಳೆಯ ಹೆಂಡತಿಯಾಗಿ ಪರಿವರ್ತಿಸಿಕೊಳ್ಳಬೇಕು.
ಆಗಷ್ಟೇ ಸಂಸಾರ ಸ್ವರ್ಗವಾಗುತ್ತದೆ ಎಂದೆ ಅಷ್ಟೆ. ಅವರಿಬ್ಬರಿಗೂ ಅರ್ಥವಾಗಿತ್ತು, ಎಲ್ಲಿ ಎಡವಿದ್ದು ಎಂದು, ‘ಮೇಡಂ… ಇನ್ಯಾವತ್ತೂ ನಮ್ಮ ತಲೆಯಲ್ಲಿ ಡೈವೋರ್ಸ್ ಪಡೆಯಬೇಕು ಎಂಬ ಅಲೋಚನೆ ಬರುವುದಿಲ್ಲ.. ನಿಮ್ಮಿಂದ ತುಂಬಾ ಉಪಕಾರ ಆಯ್ತು’ ಅಂದು ಇಷ್ಟೊತ್ತು ನೀವು ನಮ್ಮೊಂದಿಗಿದ್ದು ನಮ್ಮೆಲ್ಲ ವಿಷಯಗಳನ್ನು ಆಲಿಸಿ, ಪರಿಹಾರ ನೀಡಿದ್ದೀರಿ, ನಿಮ್ಮ ಫೀಜು ಎಷ್ಟು?’ ಅಂದ್ರು.. ‘ಈ ಮುಸ್ಸಂಜೆಯಲ್ಲಿ ಒಂದೊಳ್ಳೆ ಬಾಂಧವ್ಯವ ಬೆಸುಗೆಯನ್ನು ಬೆಸೆದ ಆತ್ಮ ತೃಪ್ತಿ ಇದೆ ಅಷ್ಟೆ ಸಾಕು ನನಗೆ ಫೀ ಬೇಡಾ.. ಇನ್ನೆಂದು ಬೇರೆಯಾಗುವ ಮನಸ್ಸು ಮಾಡುವುದಿಲ್ಲ ಎಂಬುದಾಗಿ ವಾಗ್ದಾನ ಮಾಡಿ ಮತ್ತೊಮ್ಮೆ’… ಅಂದೆ ಏಕೆಂದರೆ ಸಂಬಂಧಗಳಲ್ಲಿ ಬರುವ ಏರು ಪೇರುಗಳು ಯಾವಗಾಲೂ ಮೆತ್ತಗೆ ಬೀಸುವ ಗಾಳಿಯ ಹಾಗಿರಲಿ, ಕಣ್ಮುಚ್ಚಿ ಸುರಿದ ಮಳೆಗೆ ಮೈದುಂಬಿ ಹರಿಯುವ ನದಿಯಂತಿರಲಿ, ಜೀವನದ ಏರಿಳಿತಗಳ ಜೊತೆಗೆ ಹೆಗಲಾಗಿ ಏಗಿದ ಜೀವದಂತಿರಲೀ , ಏಕೆಂದರೆ ಕಸುವಿದ್ದಾಗಲೇ ದಾಂಪತ್ಯದ ಬೆಲೆ ಅರಿಯಬೇಕು ಸಡಿಲಗೊಳ್ಳದಂತೆ ಬೆಸುಗೆ ಬೆಸೆಯಬೇಕು ಎಂದೆ..
ಸುಷ್ಮಾ… ‘ರೀ.. ಹೋಗಿ ಸ್ವೀಟ್ಸ್ ತಗೊಂಡು ಬನ್ನಿ ಮೇಡಂಗೆ, ಕೊಟ್ಟು ಹೋಗೋಣ’… ಅಂದಾಗ ಆಕೆಯ ಮುಖದಲ್ಲಿ ಸಂತಸದ ಮಿಂಚೊಂದು ಫಕ್ಕನೆ ಮಿಂಚಿತು !! ಅಜ್ಜಿಯ ಜೀವನಾನುಭವದ ಪಾಠ ನನಗೆ ದಂಪತಿಗಳನ್ನು ಒಂದು ಮಾಡಿಸಲು ಸಹಾಯ ಮಾಡಿದಕ್ಕೆ ಮನದಲ್ಲೆ ಅಜ್ಜಿಗೆ ಧನ್ಯವಾದ ಅರ್ಪಿಸಿದೆ. ನನ್ನ ಕುಳಿತಿದ್ದ ಕುರ್ಚಿ ಹಿಂಭಾಗದಲ್ಲಿ ತೂಗು ಹಾಕಿದ್ದ ಕಪ್ಪು ಕೋಟು ತುಸು ಮುನಿಸಿನಿಂದಲೇ ಕಿಸಕ್ಕನೆ ನಕ್ಕಿತ್ತು ನನ್ನ ಧರಿಸದೆ ನೀ ಕೊಟ್ಟ ತೀರ್ಪೆ ಸರಿ ಎಂದು.
‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕಥೆಗಳು’ ಹಿಂದಿನ ಅಂಕಣವನ್ನು ಓದಲು ಕೆಳಗಿನ ಲಿಂಕ್ ಬಳಸಿ :
- ಹೆಚ್. ಆರ್ . ಪವಿತ್ರ ಧರ್ಮಪ್ಪ