ಬಿಚ್ಚಿದ ಜೋಳಿಗೆ ಮತ್ತು…

ಡಾ. ಸ. ಜ.ನಾಗಲೋಟಿಮಠ ಆತ್ಮವೃತ್ತಾಂತ ”ಬಿಚ್ಚಿದ ಜೋಳಿಗೆ ಮತ್ತು….” ಪುಸ್ತಕದ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪ್ರಕಾಶಕರು: ಎಸ್.ಜೆ.ನಾಗಲೋಟಿಮಠ ಇಂಟರ್ ನ್ಯಾಷನಲ್ ಫೌಂಡೇಶನ್, ಬೆಳಗಾವಿ.
ಪುಟಗಳು :380.00
ಬೆಲೆ:  350.00
ಪರಿಷ್ಕೃತ ಮತ್ತು ವಿಸ್ತೃತ ಮುದ್ರಣ:2021.

‘ಪುಸ್ತಕ ಪರಿಚಯ’

“ಬನಹಟ್ಟಿ ನೆಲದ ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ(ಸಜನಾ) ಅವರ ಅನನ್ಯ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಹಿಡಿದಿಡಿವುದು ಬೊಗಸೆ ನೀರಿನಲ್ಲಿ ಸಾಗರ ತೋರಿಸಿದ ಹುಚ್ಚುತನದಂತೆ!!” ಪುಸ್ತಕದ ಕೊನೆಯ ಸಾಲುಗಳು ಇವು. ಹೀಗಿರುವಾಗ ಆ ಬೊಗಸೆ ನೀರಿನ ಕೆಲವು ಹನಿಗಳನ್ನು ಆಯ್ದುಕೊಂಡು ಪುಸ್ತಕದ ಆಳ ಮತ್ತು ಅಗಲವನ್ನು ವಿವರಿಸುವುದು ವ್ಯರ್ಥ ಪ್ರಯತ್ನವೇ ಸರಿ. ಆದರೂ ಕೆಲವೊಂದು ಘಟನೆಗಳ ಮೂಲಕ ವಿಷಯಗಳನ್ನು ತಿಳಿಸುವ ಪ್ರಯತ್ನ ಇಲ್ಲಿದೆಯಷ್ಟೆ.

‘ಬಿಚ್ಚಿದ ಜೋಳಿಗೆ’ ನೆನಪಿದ್ದದ್ದನ್ನು ನೆನಪಾದದ್ದನ್ನು ನೇರವಾಗಿ ನಿರ್ಲಿಪ್ತ ಮನದಿಂದ ದಾಖಲಿಸಿದ್ದೇನೆ ಎಂದು ಲೇಖಕರು ಹೇಳಿರುವುದು ಸರಿಯಾಗಿದೆ. ಯಾವುದೇ ಅಲಂಕಾರಗಳ ಸೋಗಿಗೆ ಹೋಗದೆ ಸರಳವಾಗಿ ಬದುಕಿರುವುದನ್ನು ಅಷ್ಟೇ ಸರಳ ಬಾಷೆಯಲ್ಲಿ ನೇರವಾಗಿ ತೆರೆದಿಟ್ಟಿದ್ದಾರೆ. ಹಾಗಾಗಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ನಿಜವಾದ ಜಂಗಮ ಭಾವದಿಂದ ಹೇಳಿರುವುದರಿಂದ ಎಲ್ಲೂ ದಾರಿಯಲ್ಲಿ ಅಡ್ಡಿಯಾದವರ ಬಗ್ಗೆ ಕೋಪ, ದ್ವೇಷ, ಅಸಹನೆ ವ್ಯಕ್ತಿಪಡಿಸಿಲ್ಲ ಅಥವ ಸಂದ ಸತ್ಕಾರಗಳಿಗೆ ಅತಿಯಾದ ಮೋಹ ತೋರಿಸಿಲ್ಲ. ಇವುಗಳು ನಿಜವಾದ ಜಂಗಮರ ಗುಣವೇ ಸರಿ.

‘ಬೆಳೆಯುವ ಪೈರು ಮೊಳಕೆಯಲ್ಲಿ ನೋಡು’ ಎಂಬ ಗಾದೆಯೊಂದಿದೆ. ‘ಗೂಡಿನೊಳಗಿನ ಹಕ್ಕಿಯ ಮರಿ’ಯಲ್ಲಿ ಹುಟ್ಟಿನಿಂದ ಪ್ರಾರಂಭವಾಗಿ ಡಾಕ್ಟರ್ ಆಗುವವರೆಗಿನ ಜೀವನ ಮುಂದೆ ಕಾಣಬಹುದಾದ ವ್ಯಕ್ತಿಯ ಅನಾವರಣ ಮಾಡುತ್ತದೆ. ಜಂಗಮ ಕುಟುಂಬದಿಂದ ಬಂದ ತಂದೆ ನಾಟಕಗಳ ಗೀಳು ಹತ್ತಿಸಿಕೊಂಡು ತಿರುಗುತ್ತಿರುವಾಗ ಮದುವೆಮಾಡಿಕೊಂಡರೂ, ನಂತರ ಎಲ್ಲರಿಂದ ಸೈ ಎನಸಿಕೊಂಡಿದ್ದು ಮತ್ತು ಆಗ ಮನೆ ನೋಡಿಕೊಂಡ ತಾಯಿಯ ಚಿತ್ರಣ ಸೊಗಸಾಗಿ ಮೂಡಿಬಂದಿದೆ. ಅದು ಸಜನಾರವರ ವ್ಯಕ್ತಿತ್ವ ರೂಪಗೊಂಡ ಬಗೆಗೂ ಕೂಡ ಹೇಳುತ್ತದೆ.

ಬಡತನದ ಜೀವನ:

ನಿಜವಾದ ಪರೀಕ್ಷೆ ಸಜನಾರವರು ಎರಡನೇಯ ವರ್ಷದ ಪದವಿಯಲ್ಲಿರುವಾಗ ಎದುರಾಗುತ್ತದೆ. ನಯವಂಚಕರ ಸಂಚಿನ ದೆಸೆಯಿಂದ ತಂದೆಯ ಎಲ್ಲಾ ಆಸ್ತಿಯನ್ನು ಕಳೆದುಕೊಂಡು ದಿವಾಳಿಕೋರನಂತಾಗುತ್ತಾರೆ. ಒಂದು ಕಾಲದಲ್ಲಿ ತುಪ್ಪ ಹಾಕಿ ಸಜ್ಜಿಗೆ ಬಡಿಸುತ್ತಿದ್ದ ತಾಯಿಯ ಕೈ ಹೇಗೋ ಹೊಂದಿಸಿ ಹಳದಿ ಬಣ್ಣದ ರೊಟ್ಟಿ ಊಟಕ್ಕೆ ಬಡಿಸುತ್ತಾರೆ. ಅದು ಗೋವಿನ ಜೋಳದ ರೊಟ್ಟಿಯಾಗಿರುತ್ತದೆ!

ಆಗ ಸಹಾಯಕ್ಕೆ ಬಂದವರೇ ಸ್ನೇಹಿತ ಇಂಜನಿಯರ್ ಶಂಭು ವಿಜಾಪೂರರವರು. ಅತ್ಯಂತ ಬಡತನದಿಂದ ಬಂದ ಶಂಭು ವಿಜಾಪುರರವರು ವಿಧ್ಯಾರ್ಥಿಯಾಗಿದ್ದಾಗ ಅವರ ಪರೀಕ್ಷೆ ಶುಲ್ಕ ಕಟ್ಟಲು ಸಜನಾ ಸಹಾಯ ಮಾಡಿದ್ದು, ನಂತರ ಇವರ ಕೊಠಡಿಯಲ್ಲಿ ಒಟ್ಟಿಗೆ ಇದ್ದಿರು. ‘ಬೀಜ ಹ್ಯಾಂಗೊ ಫಸಲು ಹಾಂಗ ಅಲ್ವೇನ್ರಿ’ ಎಂಬ ತಲೆಬರಹದಲ್ಲಿ ಬಂದಿರುವ ಘಟನೆ ಮನ ಮುಟ್ಟುತ್ತದೆ. ಒಂದು ಪ್ಯಾಂಟ್, ಎರಡು ಬುಶ್ ಷರ್ಟ್ ನಲ್ಲಿ ಪದವಿ ಮುಗಿಸುತ್ತಾರೆ. ಮೆಡಿಸಿನ್ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯದ ಬಂಗಾರದ ಪದಕ ಕೂಡ ಗಳಿಸುತ್ತಾರೆ. ಒಂದು ವರ್ಷದ ಹೌಸ್ ಮನ್ ಶಿಷ್ನಲ್ಲಿ ಬರುತ್ತಿದ್ದ ಒಂದು ನೂರು ರೂಪಾಯಿ ಅವರ ಜೀವನದ ದಿಕ್ಕನ್ನು ತಿರುಗಿಸುತ್ತದೆ.

ಚಹದ ಸುತ್ತ:

ಹೈಸ್ಕೂಲ್ನಲ್ಲಿ ಇರುವಾಗ ಸಾಭೋಜಿ ಎನ್ನುವ ಧೃಡಕಾಯದ ವ್ಯಕ್ತಿ ದಿನಾಲು ಹಾಲು ಕುಡಿಯಬೇಕು, ಚಹ ಕುಡಿದರೆ ಹಣ ಆಂಗ್ಲರಿಗೆ ಹೋಗುತ್ತದೆ, ಶಕ್ತಿ ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಆಗ ಚಹ ಕುಡಿಯುವುದು ದೇಶದ್ರೋಹವೇ ಎನ್ನುವ ತರಹದಲ್ಲಿ ತಿಳಿದು ಸಜನಾರವರು ಜೀವಮಾನವಿಡೀ ಚಹ ಕುಡಿಯಲಿಲ್ಲ!

ಎಂ.ಡಿ. ಕೊನೆಯ ವರ್ಷದಲ್ಲಿ ಮೌಖಿಕ ಪರೀಕ್ಷೆ ಸಾಮಾನ್ಯವಾಗಿ ನಡೆಯುವ ೪೫ ನಿಮಿಷಗಳ ಬದಲು ಇವರಿಗೆ ಮೂರು ಗಂಟೆಯವರೆಗೆ ನಡೆಯಿತು. ನಂತರ ಥರ್ಮಾಸ್ ಫ್ಲಾಸ್ಕಿನಲ್ಲಿ ಚಹಾ ಬರುತ್ತದೆ. ಅವರ ಪರೀಕ್ಷೆಗೆ ಬಂದವರು ಎಲ್ಲರಿಗೂ ಚಹ ಕೊಟ್ಟು ಇವರಿಗೂ ಕೊಡುತ್ತಾರೆ. ಆಗ ಇವರ ಫ್ರೊಫೆಸರ್ ” ನೋಡು, ನಿನಗೆ ಈಗ ಸಿಗುತ್ತಿರುವುದು ಚಹ ಸಾಮಾನ್ಯವಲ್ಲ. ಅದನ್ನು ದೇಶದ ಶ್ರೇಷ್ಠ ಪೆಥಾಲಜಿಷ್ಟ್ ಆದ ಡಾ.ಭೆಂಡೆ ಕೊಡುತ್ತಿರುವರು. ತೆಗೆದುಕೋ” ಎನ್ನುತ್ತಾರೆ. ಇದನ್ನು ಕುಡಿದರೆ ವ್ರತ ಮುರಿಯುತ್ತದೆ ಎಂಬ ಯೋಚನೆ ಸಜನಾರವರಿಗೆ. ಇವರು ಚಹ ಕುಡಿಯದಿದ್ದರೆ ಪರೀಕ್ಷರಿಗೆ ಮಾಡಿದ ಅವಮಾನವೆಂದು ಇವರ ಫ್ರೋಫೆಸರ್ ಕೋಪದಿಂದ ಬೇರೆ ಹೇಳುತ್ತಾರೆ. ಆಗ ಇವರು ಧೈರ್ಯದಿಂದ ಪರೀಕ್ಷರಿಗೆ “ಸರ್., ನಾನು (ಚಹ) ಕುಡಿಯಬಾರದೆಂದು ಪ್ರತಿಜ್ಞೆ ಮಾಡಿರುವೆ. ಕುಡಿದರೆ ನನ್ನ ವ್ರತ ಮುರಿದಂತಾಗುತ್ತದೆ..” ಎಂದು ಹೇಳಿದಾಗ ಪರೀಕ್ಷಕರಾಗಿ ಬಂದಿದ್ದ ಡಾ.ಭೇಂಡೆಯವರು ನಗುತ್ತಾ ತಮಗೆ ಈ ವಿಷಯ ಗೊತ್ತಿರಲಿಲ್ಲವೆಂದು ತಿಳಿಸುತ್ತಾ ‘”ಈಗ ಆ ಚಹವನ್ನು ನೀವೇ ಎದ್ದು ನಿಂತು ನನಗೆ ಕೊಡಿರಿ. ನಾನು ನಿಮ್ಮಿಂದ ಪಡೆದ ಚಹ ಕುಡಿಯುವೆ” ಎಂದು ಅವರೇ ತರಿಸಿದ ಚಹವನ್ನು ಸಜನಾರ ಕೈಲಿ ತೆಗೆದುಕೊಂಡು ಕುಡಿದು ಇವರಿಗೆ ಗೌರವ ತೋರಿಸುತ್ತಾರೆ. ನೋಡಲು ಇದೊಂದು ಸಣ್ಣ ಘಟನೆ ಎನಿಸಿದರೂ ಇದರಲ್ಲಿ ಎಲ್ಲೂ ಸಜನಾರವರ ದೊಡ್ಡಸ್ತಿಕೆ ಕಾಣುವುದಿಲ್ಲ. ಜೊತೆಗೆ ಡಾ.ಭೆಂಡೆಯಂತಹ ಹಿರಿಯರು ಇವರನ್ನು ವಿಧ್ಯಾರ್ಥಿಯಾಗಿದ್ದಾಗಲೇ ಗೌರವದಿಂದ ಕಂಡ ಬಗೆಯನ್ನು ತಿಳಿಸುತ್ತದೆ.

ಸ್ವಚ್ಛತೆಯ ಸುತ್ತ:

ಇವರು ಪ್ರಥಮವಾಗಿ ಉಪನ್ಯಾಸಕರಾಗಿ ಹುಬ್ಬಳ್ಳಿಯ ಕಾಲೇಜಿಗೆ ಬಂದಾಗ ಬೆಳಿಗ್ಗೆ ೭ ಗಂಟೆಗೆ ಬರಬೇಕೆಂದು ಮುಖ್ಯಸ್ಥ ಡಾ.ರಾಮಪ್ರಸಾದ್ ಹೇಳಿದಾಗ ಸರಿಯಾದ ಸಮಯಕ್ಕೆ ಇವರು ತಲುಪುತ್ತಾರೆ. ಆಗ ಬ್ಯಾಕ್ಟೀರಿಯ ವಿಭಾಗದ ಕೀಲಿ ತೆಗೆದು ಇವರ ಕೈಗೆ ಪರಕೆ ಕೊಟ್ಟು ಕಸ ಗುಡಿಸಲು ಹೇಳುತ್ತಾರೆ. ಇವರು ಗುಡಿಸುವ ರೀತಿ ನೋಡಿ, ಅವರು ಸರಿಯಾದ ರೀತಿ ಕಸ ಗುಡಿಸುವುದನ್ನು ತೋರಿಸಿಕೊಡುತ್ತಾರೆ. ನಂತರ ನೆಲವನ್ನು ಒದ್ದೆ ಬಟ್ಟೆಯಿಂದ ಒರೆಸುವುದು, ಪ್ರಯೋಗಾಲಯ ಟೇಬಲ್ ಗಳನ್ನು ಒರೆಸುವುದು, ಗಾಜಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದನ್ನು ಒಂದು ವಾರ ಹೇಳಿಕೊಟ್ಟು, ನಂತರ ವೈದ್ಯರು ಮಾಡಬೇಕಾದ ವಿಷಯಗಳನ್ನು ತಿಳಿಸುತ್ತಾರೆ!

ಇವರು ಬೆಳಗಾವಿಯ ಕಾಲೇಜಿನಲ್ಲಿ ಇರುವಾಗ ಒಂದು ದಿನ ಬೆಳಿಗ್ಗೆ ಮ್ಯೂಜಿಯಮ್ ಫ್ಯೂನ್ ಬಂದು “ಯಾರೋ ಇಬ್ಬರು ಹಿರಿಯರು ಬಂದು ಮ್ಯೂಜಿಯಮ್ ನೋಡುತ್ತಿದ್ದಾರೆ” ಎಂದು ಹೇಳಿದಾಗ, ಸಜನಾರವರು ಅಲ್ಲಿಗೆ ಹೋಗಿ ನೋಡಿದರೆ ಬಂದವರು ಡಾ.ದೇ.ಜವರೇಗೌಡರು ಮತ್ತು ಶ್ರೀ ಸಿದ್ದಯ್ಯ ಪುರಾಣಿಕರು. ಅವರಿಗೆ ಸಜನಾರವರೇ ಮ್ಯೂಜಿಯಮ್ ತೋರಿಸಿ ನಂತರ ಅವರಿಗೆ ನಿಮ್ಮ ಪಾದರಕ್ಷೆಗಳೆಲ್ಲಿ ಎಂದು ಕೇಳಿದಾಗ “ಏನ್ರೀ ಡಾಕ್ಟ್ರೇ! ಇಷ್ಟು ನಿರ್ಮಲವಾದ ಮ್ಯೂಜಿಯಮ್ ನೆಲದ ಮೇಲೆ ಪಾದರಕ್ಷೆಗಳನ್ನು ಹಾಕಿಕೊಂಡು ನಡೆಯುವುದು ತರವಲ್ಲ. ನಿಮ್ಮ ಮ್ಯೂಜಿಯಮ್ ಒಂದು ದೇವರ ಗುಡಿ. ಕಾರಣ ನಾವಿಬ್ಬರೂ ನಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರಿಗಾಲಿನಿಂದ ಬಂದೆವು” ಎಂದು ದೇಜೆಗೌ ರವರು ಹೇಳುತ್ತಾರೆ.

ಸತ್ಯ ಹೇಳುವ ವಿದ್ಯಾರ್ಥಿ:

ಸ್ನಾತಕೋತ್ತರ ಡಿಪ್ಲೊಮ ಪರೀಕ್ಷೆಯಲ್ಲಿ ಪರೀಕ್ಷಕರಾಗಿ ಬಂದಂತ ಹೆಸರಾಂತ ಪೆಥಾಲಜಿಷ್ಟ್ ಡಾ.ಘೋರ್ಪಡೆ ಸಜನಾರು ಕೊಟ್ಟ ಉತ್ತರವೊಂದು ತಪ್ಪೆಂದು ಹೇಳುತ್ತಾರೆ. ಆಗ ಸಜನಾರವರು ತನ್ನ ಉತ್ತರವೇ ಸರಿಯೆಂದು ವಾದಿಸುತ್ತಾರೆ. ಇದು ಆ ವಿಭಾಗದ ಮುಖ್ಯಸ್ಥರಿಗೆ ಸಿಟ್ಟು ತರಿಸುತ್ತದೆ. ಆಗ ಕಾಲೇಜಿನ ಪುಸ್ತಕಾಲಯದಿಂದ ಹೊಸ ಜರ್ನಲ್ ತಂದು ಹೇಗೆ ತಮ್ಮ ಉತ್ತರ ಸರಿಯೆಂದು ತಿಳಿಸಿದಾಗ ಅದನ್ನು ಒಪ್ಪಿ ಡಾ.ಘೋರ್ಪಡೆಯವರು ಇವರ ಮನಃಪೂರ್ತಿಯಾಗಿ ಹೊಗಳುತ್ತಾರೆ.

ಫ್ರೋಫೆಸರ್ ಭೇಂಡೆಯವರು ಬರೆದ ಹೊಸ ಪೆಥಾಲಜಿ ಪುಸ್ತಕದಲ್ಲಿರುವ ಮುದ್ರಣ ದೋಷಗಳನ್ನು ಸಜನಾರವರು ತೋರಿಸಿದಾಗ, ಬೇಂಡೆಯವರು ಅದನ್ನು ಒಪ್ಪಿಕೊಂಡು ಮುಂದಿನ ಮುದ್ರಣದಲ್ಲಿ ಸರಿಪಡಿಸುತ್ತಾರೆ. ‘ಸತ್ಯವಂತನಿಗಿದು ಕಾಲ’ ಶೀರ್ಷಿಕೆಯಲ್ಲಿ ಬರೆದ ಘಟನೆ ಡಾ.ಭೇಂಡೆಯಂತಹ ವಿದ್ವಾಂಸರ ದೊಡ್ಡತನದ ಜೊತೆಗೆ ನಿರ್ಭೀತಿಯಿಂದ ಸತ್ಯ ಹೇಳುವ ಸಜನಾರ ವ್ಯಕ್ತಿತ್ವದ ಪರಿಚಯ ಮತ್ತು ವಿದ್ಯಾರ್ಥಿಯಾಗಿರುವ ವೇಳೆಗೆ ಅವರು ಗಳಿಸಿದ ಆಳವಾದ ಜ್ಞಾನವನ್ನು ತೋರಿಸುತ್ತದೆ.

ಹಕ್ಕಿ ಹಾರುತಿದೆ ನೋಡಿದಿರಾ :

ಎಂ.ಡಿ. ಪರೀಕ್ಷೆ ಮುಗಿಯಲು ಆರು ತಿಂಗಳು ಇರುವಾಗಲೇ ಬೆಳಗಾವಿ ಮೆಡಿಕಲ್ ಕಾಲೇಜಿನ ಡೀನ್ ರವರಿಂದ ಅಸಿಸ್ಟೆಂಟ್ ಫ್ರೋಫೆಸರ್ ಆಗಿ ಬಂದು ಸೇರಲು ಆಹ್ವಾನ ಬರುತ್ತದೆ. ಎಂ.ಡಿ. ಮುಗಿಸಿ ಅಲ್ಲಿಗೆ ಸೇರಿದಾಗಿನಿಂದ ಪ್ರಾರಂಭವಾದ ಸೇವಾವೃತ್ತಿ ಮುಂದಿನ ಮೂರು ದಶಕಗಳಿಗಿಂತ ಹೆಚ್ಚು ಕಾಲ ವಿವಿಧ ಸ್ಥಳಗಳಲ್ಲಿ ನಿರಂತರವಾಗಿ ನಡೆಯುತ್ತದೆ. ಉಪನ್ಯಾಸ, ಸಂಶೋಧನೆ, ಸಂಘಟನೆ, ಆಡಳಿತ, ಈ ರೀತಿ ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುತ್ತಾರೆ. ಬೆಳಗಾವಿಯಲ್ಲಿ ಇವರು ಪ್ರಾರಂಭ ಮಾಡಿ ಸ್ಥಾಪಿಸಿದ ಪೆಥಾಲಜಿ ಮ್ಯೂಜಿಯಮ್ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿ ಉತ್ತಮವಾದ ಮ್ಯೂಜಿಯಮ್ ಗಳಲ್ಲಿ ಒಂದಾಗುತ್ತದೆ. ಇದೊಂದು ಉದಾಹರಣೆ ಅಷ್ಟೆ. ಮಾಡಿದ ಕೆಲಸ ಯಾವುದೇ ಇರಲಿ ಅದು ಉತ್ಕೃಷ್ಟ ಮಟ್ಟದಾಗಿರುತ್ತಿತ್ತು. ಅವರು ಮುಂದೆ ನಿಂತು ಮಾಡಿದ ಕೆಲಸ ನೂರಾರು. ಪೆಥಾಲಜಿ ಸಮ್ಮೇಳನ, ಕಟ್ಟಿದ ರಾಷ್ಟ್ರೀಯ ಪೆಥಾಲಜಿ ಸಂಘ, ಪ್ರಾರಂಭಿಸಿದ ಕ್ಲಿನಿಕೊ ಪೆಥಾಲಜಿಕಲ್ ಕಾನ್ಫರೆನ್ಸ್-ಸಿ.ಪಿ.ಸಿ, ಈ ರೀತಿಯ ಅನೇಕ ಕೆಲಸಗಳನ್ನು ಹೇಳಬಹುದು. ಇಪ್ಪತ್ತು ವರ್ಷಗಳ ನಂತರ ಬಿಜಾಪುರಕ್ಕೆ ಕಾಲೇಜಿಗೆ ಪ್ರಿನಿಪಾಲ್ ಆಗಿ ಹೋಗಿ ಅಲ್ಲಿ ಹೊಸ ಮೆಡಿಕಲ್ ಕಾಲೇಜಿನ ಪ್ರಾರಂಭಕ್ಕೆ ಬೆನ್ನೆಲುಬಾಗಿ ನಿಂತು ದೇಹದ ಹರಳು ಮ್ಯೂಜಿಯಮ್ ಸ್ಥಾಪನೆ, ನಂತರ ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನಲ್ಲಿ ಸೇವೆ, ಓದಿದ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯ ಪ್ರಥಮ ಡೈರೆಕ್ಟರ್, ಬಾಗಲಕೋಟೆಯ ಬವಿವ ಸಂಘ ಮೆಡಿಕಲ್ ಕಾಲೇಜಿನ ಡೈರಕ್ಟರ್, ಎಸ್.ಎಸ್.ಎನ್. ಮೆಡಿಕಲ್ ಕಾಲೇಜ್ ಪ್ರಾರಂಭದ ಜೊತೆಗೆ ದೇಶ ಮತ್ತು ವಿದೇಶಗಳಲ್ಲಿ ನಡೆದ ಅನೇಕ ವೈದ್ಯಕೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಹೀಗೆ ಹಕ್ಕಿ ಹಾರಾಡಿದ ಜಾಗಗಳು ಅನೇಕ. ಆದರೆ ಹೋದಡೆಯೆಲ್ಲಾ ಅಲ್ಲಿ ಶಾಶ್ವತವಾಗಿ ಇರುವ ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಾರೆ.

ಸಂಶೋಧನೆ:

ಎಂ.ಡಿ.ಪ್ರಬಂಧಕ್ಕೆ ಕುಷ್ಠ ರೋಗವನ್ನು ಆರಿಸಿಕೊಂಡಿದ್ದರು. ಕುಷ್ಠ ರೋಗ ರಕ್ತ ಪರಿಚಲನೆಯ ಮಾರ್ಗವಾಗಿ ದೇಹದ ಎಲ್ಲಾ ಮೂಲೆಗಳಿಗೂ ತಲುಪುವವು ಎಂದು ಸಾಬೀತು ಪಡಿಸಿದರು. ಈ ಸಂಶೋಧನೆ ಆವರೆಗೆ ಯಾವ ದೇಶದಲ್ಲೂ ಆಗಿರಲಿಲ್ಲ.

ಇವರು “ಬ್ರುಸೆಲ್ಲಾ” ರೋಗದ ಬಗ್ಗೆ ಹೇಳಿದಾಗ ‘ಹೊಸದಾಗಿ ಸೇರಿದ ಪೆಥಾಲಜಿಷ್ಟ್ ಅರೆ ಹುಚ್ಚ, ಬ್ರುಸೆಲ್ಲಾ ರೋಗ ಬೆಳಗಾವಿಗೆ ಬಂದಿದೆ ಎನ್ನುತ್ತಾನೆ. ಎಂ.ಡಿ.ಪಾಸಾಗಿ ಇನ್ನೂ ಒಂದು ವರ್ಷವೂ ಆಗಿಲ್ಲ’ ಎಂದು ಇತರರು ಹೇಳುತ್ತಿದ್ದರು. ಪ್ರತಿಷ್ಠಿತ ಆಂಡರ್ಸನ್ ಪುಸ್ತಕ ಇವರ ಸಂಶೋಧನೆಯನ್ನು ಗಣನೆಗೆ ತೆಗೆದುಕೊಂಡು ಇವರು ಪ್ರಕಟಿಸಿದ ಸಂಶೋಧನಾ ಲೇಖನವನ್ನು ಮೆಚ್ಚಿತ್ತು. ಆದರೂ ಅವರು ಹೇಳಿರುವುದು “ಇದರಲ್ಲಿ ನನ್ನ ಹೆಗ್ಗಳಿಕೆ ಯಾವುದೇ ಇಲ್ಲ. ಹಿಡಿದ ಕೆಲಸ ಹಿಂಜರಿಯದೆ ಮಾಡಿ ಮುಗಿಸಿದೆ” ಎಂದು ಮಾತ್ರ. ಆಳವಾದ ಅಭ್ಯಾಸ, ಜನಸಾಮಾನ್ಯರ ಅನುಭವವನ್ನು ಕಡೆಗಣಿಸದೆ ವೈದ್ಯಕೀಯವಾಗಿ ಪರೀಕ್ಷಿಸುವುದು ಇವರ ಯಶಸ್ಸಿನ ಗುಟ್ಟು.

ದಾರಿಯಲ್ಲಿ ಅಡ್ಡ ಬಂದವರು :

ಬೆಳಗಾವಿಯ ಕಾಲೇಜಿನಲ್ಲಿ ಮೈಕ್ರೋಬಯಾಲಜಿ ವಿಭಾಗದಲ್ಲಿ ಸಹಾಯಕ ಹುದ್ದೆಗೆ ಸೇರಿಕೊಂಡಾಗ ಅಲ್ಲಿಯ ಮುಖ್ಯಸ್ಥರು “ನಿನಗೆ ಮೈಕ್ರೋಬಯಾಲಜಿಯಲ್ಲಿ ಗಂಧವೇ ಇಲ್ಲ” ಎಂದು ಇವರಿಗೆ ಕೂರಲೂ ಸ್ಥಳವಿಲ್ಲವೆಂದಿದ್ದರು! ‘ವಿರೋಧಿಸುವ ಜನರಿಗೆಲ್ಲಾ ನಾನು ಋಣಿಯಾಗಲೇ ಬೇಕು. ಅವರ ಸಂಘರ್ಷ ಇರದಿದ್ದರೆ ನಾನು ಇಷ್ಟು ಚೆನ್ನಾಗಿ ಬೆಳೆಯುವುದು ಸಾಧ್ಯವಿದ್ದಿಲ್ಲ ಎನಿಸಿತು’ ಎಂದು ಸಜನಾ ಹೇಳಿದ್ದಾರೆ.

ಸಾಹಿತ್ಯ/ಪುಸ್ತಕಗಳು :

ಡಾ.ಜವರೇಗೌಡರ ಆಶಯದಂತೆ ಇವರು ಬರೆದ “ಅನ್ನ ಮಾರ್ಗದ ಅಪಘಾತಗಳು” ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಿಗುತ್ತದೆ(1989).

ಪ್ರಪ್ರಥಮ ಅಖಿಲ ಕರ್ನಾಟಕ ಕನ್ನಡ ವೈದ್ಯಕೀಯ ಸಮ್ಮೇಳನ ಎಲ್ಲರ ಜೊತೆಗೂಡಿ ನಡೆಸುತ್ತಾರೆ. ಅದರಲ್ಲಿ “ಕನ್ನಡದಲ್ಲಿ ವೈದ್ಯ ಸಾಹಿತ್ಯ ” ಎನ್ನುವ ಪ್ರಬಂಧ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ನಂತರ ಅದು ‘ಪ್ರಜಾಮತ’ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ.

1989ರಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವ ಇಂಡಿಯಲ್ಲಿ ನಡೆದಾಗ ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿಯ ಪುಸ್ತಕ ಮಳಿಗೆಗಳಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಸಾಹಿತಿಗಳ ಚಿತ್ರಗಳು ಮಾರಾಟಕ್ಕೆ ಇರುವುದಿಲ್ಲ. ಆಗ ಫ.ಗು.ಹಳಕಟ್ಟಿ, ಹರ್ಡೇಕರ ಮಂಜಪ್ಪ, ಮಧುರಚೆನ್ನ, ಈಶ್ವರ ಸಣಕಲ್ಲ ಇವರೆಲ್ಲರ ದೊಡ್ಡ ಚಿತ್ರಗಳನ್ನು ಬರೆಸಿ, 2000 ಪ್ರತಿಗಳನ್ನು ಮುದ್ರಿಸಿ ಎಲ್ಲಾ ಶಾಲೆಗಳಲ್ಲಿ ಹಾಕಿಸುವ ವ್ಯವಸ್ಥೆ ಮಾಡುತ್ತಾರೆ.

ಪ್ರಶಸ್ತಿ:

ಇವರು ಕಟ್ಟಿ ಬೆಳೆಸಿದ ಪೆಥಾಲಜಿ ಮ್ಯೂಜಿಯಮ್ ದೇಶಾದ್ಯಂತ ಹೆಸರು ಮಾಡಿತು. 1989ರಲ್ಲಿ ಇವರಿಗೆ ಬಿ.ಸಿ.ರಾಯ್ ಪ್ರಶಸ್ತಿ ದೊರಯಿತು. ಅದನ್ನು 1991ರಲ್ಲಿ ಅಂದಿನ ರಾಷ್ಟ್ರಪತಿಗಳಿಂದ ಸ್ವೀಕರಿಸಿದರು. ಭಾರತೀಯ ವೈದ್ಯರಿಗೆ ಸಿಗುವ ಅತಿ ಶ್ರೇಷ್ಠ ಪ್ರಶಸ್ತಿ ಅದು. ಅದು ಸಿಕ್ಕಿದ್ದು ‘ತನ್ನ ಸುದೈವ ಮತ್ತು ತಂದೆ-ತಾಯಿ ಮಾಡಿದ ಪುಣ್ಯದ ಫಲ’ವೆಂದು ಹೇಳಿದ್ದಾರೆ.

ಆಧ್ಯಾತ್ಮಿಕ:

ಯಾವಾಗಲೂ ವಿಭೂತಿ ಧರಿಸಿರುತ್ತಿದ್ದ ಸಜನಾರವರ ಆಧ್ಯಾತ್ಮಿಕ ಚಿಂತನೆಯೇನೆಂದು ತಿಳಿಯುವುದು ಅವರ ಕೆಲಸಗಳ ಮೂಲಕ ಮಾತ್ರ. ಎಲ್ಲೂ, ಯಾವುದರ ಬಗ್ಗೆಯೂ ಉಪದೇಶ ಮಾಡುವ ಕೆಲಸವೂ ಮಾಡಿಲ್ಲ. ‘ಕಾಯಕವೇ ಕೈಲಾಸ’ ಪದದ ಸಾಕಾರವೇ ಇವರ ಜೀವನವೆಂದು ಹೇಳಬಹುದು. ಓಳ್ಳೆಯ ಕೆಲಸ ಮಾಡುವವರ ಬಳಿ ದೇವರು ಇರುತ್ತಾನೆ ಎಂಬ ಮಾತು ಶಿವಾಲಯವೊಂದು ಕಟ್ಟಲು ಹೊರಟಾಗ ಒದಗಿ ಬರುವ ಸಹಾಯ, ಸಂಕಷ್ಟೀ ಹೆಸರಿನಲ್ಲಿ ಉಪವಾಸ ಮಾಡಿದಾಗ ಆಗುವ ವಿಶೇಷ ಘಟನೆ ಪುಸ್ತಕದಲ್ಲಿ ಓದಿಯೇ ಆನಂದಿಸಬೇಕು.

ವೇಷ ಭೂಷಣ :

ಒಂದು ಪ್ಯಾಂಟ್ ಮತ್ತು ಷರ್ಟ ಧರಿಸುತ್ತಿದ್ದ ಸಜನಾರ ಇನ್ನೊಂದು ಅಲಂಕಾರವೆಂದರೆ ಅದು ಯಾವಾಗಲೂ ಧರಿಸಿರುತ್ತಿದ್ದ ವಿಭೂತಿ. ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸುವಾಗಲೂ ಇದೇ ಡ್ರೆಸ್. ಓಮ್ಮೆ ಅವರ ಕಾಲೇಜಿಗೆ ಪ್ರಧಾನಮಂತ್ರಿಯವರು ಭೇಟಿಕೊಟ್ಟಾಗ, ವಿಭಾಗದ ಮುಖ್ಯಸ್ಥರೆಲ್ಲರೂ ಸೂಟ್ ಹಾಕಿಕೊಂಡು ಬರಬೇಕೆಂದು ಆಡಳಿತ ಮಂಡಲಿ ಹೇಳಿದಾಗ, ಸೂಟ್ ಹಾಕದ ಇವರು ಆ ಕಾರ್ಯಕ್ರಮದಿಂದ ದೂರವುಳಿಯುತ್ತಾರೆ.

ಸಾಂಸಾರಿಕ ಜೀವನ :

ಮದುವೆಯಾಗಿದ್ದು 1962ರಲ್ಲಿಯಾದರೂ ಪದವಿ ಮುಗಿಸಿ ನೌಕರಿ ಸೇರಿ ಪ್ರಥಮ ಪಗಾರ ಬಂದಿದ್ದು 1967ರಲ್ಲಿ. ಆಗ ಮನೆ ಮಾಡಿ ಪತ್ನಿಯನ್ನು ಕರೆದುಕೊಂಡು ಬಂದರು. ಆಗ ಮನೆಯ ಎಲ್ಲಾ ಕೆಲಸವನ್ನು ಒಂದೊಂದಾಗಿ ವಹಿಸಿಕೊಂಡು, “ನನ್ನನ್ನು ನನ್ನ ಓದಿಗಾಗಿ ಪೂರ್ಣ ಸ್ವತಂತ್ರ ಮಾಡಿ ಬಿಟ್ಟಳು” ಎಂದು ಕೊನೆಯಲ್ಲಿ ತಮ್ಮ ಸಾಂಸಾರಿಕ ಜೀವನದ ಬಗ್ಗೆ ಹೇಳಿದ್ದಾರೆ. ‘ಬೆಚ್ಚನೆಯ ಮನೆಯಾಗಿ’ ಶೀರ್ಷಿಕೆಯಡಿಯಲ್ಲಿ ಸಂಕ್ಷಿಪ್ತವಾಗಿ ತೆರೆದಿಟ್ಟಿರುವ ಸಾಂಸಾರಿಕ ಜೀವನ ಅವರ ಸಮಯವೆಲ್ಲಾ ಕೆಲಸದಲ್ಲಿ ಮುಳುಗಿರುವುದನ್ನು ಮತ್ತೊಮ್ಮೆ ಸೂಚಿಸುತ್ತದೆ.

ಇವರ ಸಾಂಸಾರಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಅವರ ಕೊನೆಯ ದಿನಗಳ ಮಾಹಿತಿ ಅವರ ಮಗ, ಮಡದಿ, ತಂಗಿ, ಅಳಿಯ, ಗೆಳೆಯರ ಬರಹಗಳ ಮೂಲಕ ಪರಿಷ್ಕೃತ ಆವೃತಿಯಲ್ಲಿ ಅನುಬಂಧಗಳಾಗಿ ಹೊರಗೆ ಬಂದು ಕೆಲವು ಮಟ್ಟಿಗೆ ಆ ವಿಷಯದಲ್ಲಿದ್ದ ಕೊರತೆ ತುಂಬಿದೆ.

ಇವರು ಬರೆದಿರುವುದು ಐವತ್ತು ಕನ್ನಡ ಹಾಗೂ ಹದಿನ್ಕಾಲು ಇಂಗ್ಲೀಷ್ ಪುಸ್ತಕಗಳೆಂದು ಶ್ರೀ ಜಯಂತ ಕಾಡದೇವರು ತಿಳಿಸುತ್ತಾ, ‘ಡಾ.ಹೆಚ್. ನರಸಿಂಹಯ್ಯ ನೆನಪಿನ ಕ್ಷಣಗಳು’, ‘ವೀರಶೈವ ಧರ್ಮ’, ‘ವೈಜ್ಞಾನಿಕತೆ ಹಾಗೂ ವಚನ’, ‘ಸತ್ತ ಮೇಲೆ ಸಮಾಜ ಸೇವೆ’, ‘ಶ್ರೀ ಸಾಮಾನ್ಯ ಮತ್ತು ವೈದ್ಯ’, ಇತ್ಯಾದಿ ಪುಸ್ತಕಗಳನ್ನು ಬರೆಯುವುದರ ಜೊತೆಗೆ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿ ಶನಿವಾರ ಸಜನಾ ಅಂಕಣವನ್ನು ಕೊನೆಯ ತನಕ ಬರೆದ ಮಾಹಿತಿ ತಿಳಿಸುತ್ತಾರೆ.

ಯಾರು ಈ ಪುಸ್ತಕ ಓದಬೇಕು? :

ವಿದ್ಯಾಭ್ಯಾಸದ ರೀತಿ ನೋಡಿದರೆ ಇದ್ದಾಗ ಇತರರಿಗೆ ಕೈಲಾದ ಸಹಾಯ ಮಾಡಿದರೆ, ಇಲ್ಲದೇ ಇರುವುವಾಗ ಒಂದು ಪ್ಯಾಂಟು, ಎರಡು ಷರ್ಟನಲ್ಲಿ ವಿದ್ಯಾಭ್ಯಾಸ ಮುಗಿಸುತ್ತಾರೆ. ಯಾವುದೇ ಸ್ಥಿತಿಯಲ್ಲೂ ವಿದ್ಯೆಯಿಂದ ವಿಮುಖವಾಗುವುದಿಲ್ಲ. ಇದು ಶಕ್ತ ಮತ್ತು ಆಶಕ್ತ ವಿದ್ಯಾರ್ಥಿಗಳಿಗಿಬ್ಬರಿಗೂ ಒಂದು ರೀತಿಯ ಪಾಠವೇ ಸರಿ. ಎಲ್ಲಾ ವಿದ್ಯಾರ್ಥಿಗಳು ಇದನ್ನು ಓದಬೇಕು.

ಸಾಧನೆಯ ಹಾದಿಯಲ್ಲಿ ಅಡ್ಡ ಬಂದವರಿಂದ ಹೆಚ್ಚಿನದನ್ನು ಕಲಿತೆ ಎನ್ನುವ ಇವರು, ಜೀವನ ರೂಪುಗೊಳ್ಳುವಲ್ಲಿ ಪ್ರಭಾವ ಬೀರಿದವರಿಗೆ ಬರಹದ ಉದ್ದಕ್ಕೂ ಅರ್ಪಿಸಿರುವ ಕೃತಜ್ಞತೆ ಎದ್ದು ಕಾಣುತ್ತದೆ. ಯಾವುದೇ ರೀತಿಯ ಕೆಲಸ ಮಾಡುತ್ತಿರುವವರಿಗೆ ಇದೊಂದು ಪಾಠ. ಕೆಲಸ ಮಾಡುವವರೆಲ್ಲರೂ ಓದಬೇಕು.

ಸಂಸ್ಕೃತ ಪರೀಕ್ಷೆಯಲ್ಲಿ ಸಜನಾರವರಿಗೆ ಸಿಗಬೇಕಾದ ಅಂಕ ಅವರಿಗೆ ಸಿಗಲಿಲ್ಲ. ಅವರಿಗೆ rank ಬರಬಾರದೆಂದು ಬಂದ ಅಂಕಗಳನ್ನು ಆಗ ತಿದ್ದಲಾಗಿತ್ತು. ಇದು ಸುಮಾರು 1955ರ ಹತ್ತಿರದಲ್ಲಿ ಅವರಿನ್ನು ಹೈಸ್ಕೂಲಿನ ವಿದ್ಯಾಭ್ಯಾಸದ ಹೊಸ್ತಿಲನಲ್ಲಿ ಇದ್ದಾಗ ನಡೆದ ಘಟನೆ. 1970ರ ಸುಮಾರಿಗೆ ಎಂ.ಡಿ. ಪರೀಕ್ಷೆಯಲ್ಲಿ ಇವರನ್ನು ಅನುತ್ತೀರ್ಣರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತದೆ. ಇವೆಲ್ಲಾ ಸೂಕ್ಷ್ಮವಾಗಿ ನೋಡಿದಾಗ ಅದಕ್ಕೆ ಕಾರಣರಾದವರು ಇವರ ಏಳಿಗೆ ಸಹಿಸಿದ ಜನರಿಂದ ವೈಯುಕ್ತಿಕ ಮಟ್ಟದಲ್ಲಿ ನಡೆದ ಪ್ರಯತ್ನವೆಂದು ಹೇಳಬಹುದು. ಇವರ ಕಾರ್ಯ ಕ್ಷೇತ್ರ ವಿಸ್ತಾರವಾಗುತ್ತಾ ಹೋಗುತ್ತಿದ್ದಾಗ, ಇನ್ನೊಂದೆಡೆ ಇವರ ಏಳಿಗೆ ಸಹಿಸದವರ ಸಂಖ್ಯೆಯೂ ಹೆಚ್ಚುತ್ತದೆ. ಇಲ್ಲಿ ನೋಡಿದರೆ ಈ ವಿರೋಧ ಬಂದಿರುವುದು ಬರಿಯ ಏಳಿಗೆ ನೋಡಿ ಮಾತ್ರವಲ್ಲದೇ, ಯಾವುದೇ ಸಂಧರ್ಭದಲ್ಲೂ ನೀತಿ, ನಿಯಮಗಳನ್ನು ಮೀರದಂತೆ ನಡೆದುಕೊಳ್ಳುವ ಇವರ ಗುಣ ಇತರರಿಗೆ ಸಹಿಸಲು ಆಗುತ್ತಿರಲಿಲ್ಲವೆಂದು ಗೊತ್ತಾಗುತ್ತದೆ. 1996ರಲ್ಲಿ ವೈದ್ಯಕೀಯ ಸಂಸ್ಥೆಯ ಡೈರೆಕ್ಟರ್ ಆಗಿ ಅಲ್ಲಿ ಗುಡಿಸಿ, ಸಾರಿಸಿ ಹೊರ ವಾತಾವರಣ ಸ್ವಚ್ಛ ಗೊಳಿಸಿದರೂ ನಂತರದ ದಿನಗಳಲ್ಲಿ ಅಲ್ಲಿಯ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳದೇ ಹೊರಗೆ ಬರುತ್ತಾರೆ. ಸರಿ ಸುಮಾರು 1970ರಿಂದ ಮುಂದಿನ ಇಪ್ಪತೈದು ವರ್ಷಗಳಲ್ಲಿ ಅಡ್ಡ ಬರುವ ರೀತಿ ಬದಲಾಗುತ್ತಾ ಬಂದು, ನಂತರ ಈಡೀ ವ್ಯವಸ್ಥೆಯೇ ಅಡ್ಡ ಬರುವುದನ್ನು ಕಾಣುತ್ತೇವೆ. ಹಾಗಾಗಿ ಸಮಾಜಶಾಸ್ತ್ರ ವಿದ್ಯಾರ್ಥಿಗಳು ಈ ಪುಸ್ತಕ ಓದಬೇಕು.

ಇದೊಂದು ಅದ್ಭುತ ಆತ್ಮಕಥೆ. ಯಾರೇ ಪುಸ್ತಕ ಓದಿದರೂ ಅವರು ಈ ಪುಸ್ತಕದಿಂದ ಸ್ಪೂರ್ತಿ ಪಡೆಯುವುದರಲ್ಲಿ ಆಶ್ಚರ್ಯವಿಲ್ಲ.

ಪುಸ್ತಕ ಓದಿದ ನಂತರ ‘ಬಿಚ್ಚಿದ ಜೋಳಿಗೆ’ ಸತ್ತ್ವ, ಸ್ವತ್ವ, ತತ್ತ್ವಗಳ ತ್ರಿವೇಣಿ ಸಂಗಮ’ವೆಂದು ಪ್ರಥಮ ಮುದ್ರಣದ ಮುನ್ನುಡಿಯಲ್ಲಿ ಶ್ರೀ ಜಿ.ಟಿ.ನಾರಾಯಣರಾವ್ ಹೇಳಿರುವುದು ಅಕ್ಷರಶಃ ಸತ್ಯವೆಂದು ಎಲ್ಲರಿಗೂ ಅನಿಸುವುದರಲ್ಲಿ ಆಶ್ಚರ್ಯವಿಲ್ಲ.


  • ಎನ್.ವಿ.ರಘುರಾಂ – ಲೇಖಕರು, ಸಾಹಿತ್ಯ, ವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading