‘ಬಿದಿರ ತಡಿಕೆ’ ಪುಸ್ತಕ ಪರಿಚಯ – ಸರ್ವಮಂಗಳ ಜಯರಾಂ.

ಡಾ. ಎಚ್. ಎಸ್. ಸತ್ಯನಾರಾಯಣ. ಅವರ ‘ಬಿದಿರ ತಡಿಕೆ’ ಕೃತಿಯಲ್ಲಿ ಒಂದು ಲೇಖನದಲ್ಲಿ ಅಲಂಪು ಶಬ್ಧ ಗಮನ ಸೆಳೆಯುತ್ತದೆ. “ಅಲಂಪು” ಹಳಗನ್ನಡ ಶಬ್ಧವಾಗಿದ್ದು ರನ್ನ ಪೊನ್ನರ ಕಾಲದ ಪುರಾತನ ಶಬ್ಧ. ಈ ಶಬ್ಧವು ಸ್ನೇಹ, ಪ್ರೀತಿ, ಕೋಮಲವಾದ ಭಾವನೆ ಎಂಬರ್ಥವನ್ನು ಹೊಂದಿದ್ದು ಲೇಖಕರಿಗೆ ಪ್ರಿಯವಾದ ಶಬ್ಧವಾಗಿದೆ. ಸರ್ವಮಂಗಳ ಜಯರಾಂ ಅವರು ‘ಬಿದಿರ ತಡಿಕೆ’ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕದ ಶೀರ್ಷಿಕೆ – ಬಿದಿರ ತಡಿಕೆ. (ಲಲಿತ ಪ್ರಬಂಧಗಳು)
ಲೇಖಕರು – ಡಾ. ಎಚ್. ಎಸ್. ಸತ್ಯನಾರಾಯಣ.
ಪ್ರಕಾಶನ – ಮಿಂಚುಳ್ಳಿ ಪ್ರಕಾಶನ
ಬೆಲೆ – 150 ರೂ.
ಪುಟಗಳು – 105

ಬೆರಗು ಮೂಡಿಸುವ ಬಿದಿರ ತಡಿಕೆ 

ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆಯಾದ ಶ್ರೀಯುತ ಡಾ. ಎಚ್ ಎಸ್ ಸತ್ಯನಾರಾಯಣ ಸರ್ ಅವರ ಎರಡನೇ ಲಲಿತ ಪ್ರಬಂಧಗಳ ಸಂಕಲನ ಬಿದಿರ ತಡಿಕೆಯು ಸುಮಾರು ಒಂಬತ್ತು ಲಲಿತ ಪ್ರಬಂಧಗಳನ್ನೊಳಗೊಂಡ ಕೃತಿಯಾಗಿದೆ. ಶ್ರೀಯುತರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರೂ ಹಾಗೂ ನಾಡಿನ ಖ್ಯಾತ ವಿಮರ್ಶಕರು, ಸಾಹಿತಿಗಳು, ಬರಹಗಾರರೂ ಆಗಿದ್ದಾರೆ. ಬಿದಿರ ತಡಿಕೆ ಶೀರ್ಷಿಕೆಯು ಕೆ. ಎಸ್ ನರಸಿಂಹ ಸ್ವಾಮಿಯವರ ಒಂದು ಕವನದ (ಕವನ ಹುಟ್ಟುವ ಸಮಯ) ಸಾಲಿನಿಂದ ಆಯ್ದುಕೊಂಡಿದ್ದು ಒಂದೊಂದು ಲೇಖನವೂ ಬೆರಗು ಮೂಡಿಸುವಂತಿವೆ . ಹೆಸರೇ ಹೇಳುವಂತೆ ಇಲ್ಲಿರುವ ಲಲಿತ ಪ್ರಬಂಧಗಳು ಇತ್ತ ಗಂಭೀರವೂ ಅಲ್ಲದ ಅತ್ತ ತೀರಾ ಹಾಸ್ಯ ಲೇಖನಗಳೂ ಅಲ್ಲದ ನವಿರು ಹಾಸ್ಯ ಲೇಪಿತ ಬರಹಗಳಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ನಾನಂತೂ ಒಂದೇ ಗುಕ್ಕಿನಲ್ಲಿ ಓದಿ ದಕ್ಕಿಸಿಕೊಂಡೆ ಎಂದೇ ಹೇಳಬಹುದು. ಏಕೆಂದರೆ ಇಡೀ ಪುಸ್ತಕವನ್ನು ಅಂದರೆ ಒಂಬತ್ತು ಲೇಖನಗಳನ್ನು ಒಂದೇ ದಿನದಲ್ಲಿ ಓದಿ ಮುಗಿಸಿದೆ. ಇಲ್ಲಿರುವ ಪ್ರತಿಯೊಂದು ಲೇಖನವೂ ಲೇಖಕರ ದಿನನಿತ್ಯದ ಜೀವನದ ಅನುಭವದ ಮೂಸೆಯಲ್ಲಿ ಮೂಡಿ ಬಂದಂತವು.ಲೇಖಕರು ಅದೆಷ್ಟು ಸಹಜವಾಗಿ ಲೇಖನಗಳನ್ನು ನಿರೂಪಿಸಿದ್ದಾರೆಂದರೆ ನಮ್ಮ ಕಣ್ಣ ಮುಂದೆಯೇ ಅವರು ಕುಳಿತು ಹೇಳುತ್ತಿದ್ದಾರೇನೋ ಎಂಬಷ್ಟು ಪರಿಣಾಮವಾಗಿ ಬರೆದಿದ್ದಾರೆ. ಕೇವಲ ಅವರ ಭಾಷಣಗಳನ್ನಷ್ಟೇ ಕೇಳಿದ್ದ ನನಗೆ ಇಂದು ಅವರ ಸಾಹಿತ್ಯ ಓದುವ ಸುಖ ಹಾಗೂ ಸದವಕಾಶ ದೊರೆತಿದ್ದು ನನ್ನ ಪುಣ್ಯ.ಇಲ್ಲಿರುವ ಪ್ರತಿಯೊಂದು ಲೇಖನವೂ ಮನರಂಜನೆಯನ್ನು ನೀಡುವುದರ ಜೊತೆಗೆ ತಾತ್ವಿಕ ಚಿಂತನೆಗೆ ನಮ್ಮನ್ನು ಹಚ್ಚುತ್ತವೆ. ಭೂತ ಕಾಲದ ಸಂಗತಿಗಳನ್ನು ವರ್ತಮಾನ ಕಾಲದೊಂದಿಗೆ ಸಮ್ಮಿಳಿತಗೊಳಿಸಿ ಅದ್ಭುತ ಹಾಸ್ಯಲೋಕವನ್ನೇ ಸೃಷ್ಟಿಸಿದ್ದಾರೆ.

ಲೇಖಕರ ನೆನಪಿನ ಶಕ್ತಿ ಅದೆಷ್ಟು ನಿಖರವಾಗಿದೆಯೆಂದರೆ ತಾವು ಪ್ರಾಥಮಿಕ ಶಾಲೆಯಲ್ಲಿ ಕಲಿತ ಪದ್ಯಗಳಿಂದ ಹಿಡಿದು ಶಿಕ್ಷಕರ ಹೆಸರು, ಅವರು ಗಂಟಲು ಹರಿಯುವಂತೆ ಕಿರುಚುತ್ತಾ ಪಾಠ ಹೇಳಿ ಕೊಡುತ್ತಿದ್ದ ಶೈಲಿ, ಗೋವಿನ ಹಾಡು, ಆ ಹಾಡಿನ ರೂಪಕದಲ್ಲಿ ತನ್ನ ಸಹಪಾಠಿಯೊಬ್ಬ ವ್ಯಾಘ್ರನಾಗಿ ಅಭಿನಯಿಸಿ ಟೇಬಲ್ ಮೇಲಿಂದ ಕೆಳಕ್ಕೆ ಬಿದ್ದು ( ಹುಲಿ ಪ್ರಪಾತಕ್ಕೆ ಬೀಳುವಂತೆ ಅಭಿನಯಿಸಿ) ಕಾಲು ಮುರಿದು ಕೊಂಡಿದ್ದು, ಅವರ ಅಜ್ಜಿ, ಅಮ್ಮ ಬಂದು ಶಿಕ್ಷಕಿಯ ಜನ್ಮ ಜಾಲಾಡಿಸಿದ್ದು, ಎಲ್ಲರೂ ಕುಂಟು ಹುಲಿ ಎಂದು ಅವನನ್ನು ಗೋಳು ಹುಯ್ದು ಕೊಳ್ಳುತ್ತಿದ್ದುದು, ಲೇಖಕರ ತಾಯಿ, ಅಜ್ಜಿ ಗೋವಿನ ಹಾಡನ್ನ ಲೇಖಕರಿಂದ ಹಾಡಿಸಿ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ತಾವೇ ಕಣ್ಣೀರು ಹಾಕುತ್ತ ಕೇಳುವುದು… ಎಲ್ಲವನ್ನೂ ಒಂದು ರೂಪಕದಂತೆಯೇ ವರ್ಣಿಸಿದ್ದಾರೆ. ಗೋವಿನ ಹಾಡು ತುಂಬಾ ದೀರ್ಘವಾಗಿದ್ದರಿಂದ ಪದೇ ಪದೇ ಓದಲು ರೇಜಿಗೆ ಹುಟ್ಟಿಸುತ್ತಿತ್ತಾದರೂ ಅಮ್ಮ ಹಾಗೂ ಅಜ್ಜಿಗೆ ಸ್ವಲ್ಪವಾದರೂ ಮನರಂಜಿಸಬೇಕೆಂದು ಬೇಸರಿಸಿಕೊಳ್ಳದೆ ಅವರ ಇಷ್ಟದ ಹಾಡನ್ನು ಓದುತ್ತಿದ್ದರು.ಅನಕ್ಷರಸ್ಥರಾದ ಲೇಖಕರ ಅಜ್ಜಿ ಮತ್ತು ತಾಯಿ ಗೋವಿನ ಹಾಡನ್ನು ತುಂಬಾ ಆಸ್ಥೆಯಿಂದ ಕೇಳಿ ಅಲ್ಲಿನ ಪಾತ್ರಗಳಲ್ಲಿ ತಲ್ಲೀನರಾಗಿ ಕಣ್ಣೀರಾಗುತ್ತಿದ್ದರು.

ಇಲ್ಲಿನ “ಪ್ರಾತಃಕಾಲದ ದನಿಗಳು” ಪ್ರಬಂಧದಲ್ಲಿ ಲೇಖಕರು ಪ್ರತಿನಿತ್ಯ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಸಾಮಾನ್ಯ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳ ಬಗ್ಗೆ ವಿಚಾರಿಸುತ್ತ ಅವರ ಜೀವನದ ಅನುಭವಗಳನ್ನು ಕಲೆ ಹಾಕುತ್ತ ಅವರೊಂದಿಗೆ ಸಂಭಾಷಣೆ ಮಾಡಿದ ಮನದ ಮಾತುಗಳಿಗೆ ಇಲ್ಲಿ ಅಕ್ಷರದ ರೂಪ ಕೊಟ್ಟಿದ್ದಾರೆ.ಲೇಖಕರೇ ಹೇಳುವಂತೆ ಅವರಿಗೆ ಮೊದಲಿನಿಂದಲೂ ಇಂತಹ ಬೀದಿ ಬದಿಯ ಜನರ ಜೀವನದ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಹೆಚ್ಚಾಗಿ ಇದ್ದಿದ್ದರಿಂದ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಅವರ ಜೀವನದ ಬಗ್ಗೆ ಸೂಕ್ಷ್ಮ ದೃಷ್ಟಿಕೋನ ಬೀರಿದ್ದಾರೆ.

“ಕಾಲವೆಂಬ ರೈಲುಗಾಡಿ ” ಲೇಖನವು ರೈಲು ಭೋಗಿಯಂತೆಯೇ ಸುದೀರ್ಘವಾಗಿದ್ದು, ಅವರ ಬಹುತೇಕ ಪ್ರಯಾಣವು ರೈಲಿನಲ್ಲೇ ಆಗಿರುವುದರಿಂದ ಪ್ರಯಾಣದ ಸಂದರ್ಭದಲ್ಲಿ ನಡೆದ ಹಲವಾರು ಸ್ವಾರಸ್ಯಕರ ಘಟನೆಗಳನ್ನು ಹಾಸ್ಯ ರಸ ಲೇಪಿಸಿ ವಿಭಿನ್ನವಾದ ಶೈಲಿಯಲ್ಲಿ ದಾಖಲಿಸಿದ್ದಾರೆ. ಅದೆಷ್ಟು ಅದ್ಭುತ ಹಾಸ್ಯವೆಂದರೆ ನೀವು ಪುಸ್ತಕ ಓದಿಯೇ ಓದಿನ ಸುಖ ಅನುಭವಿಸಬೇಕು. ಅದನ್ನು ಪದಗಳಲ್ಲಿ ಸೆರೆ ಹಿಡಿಯಲು ಕಷ್ಟಸಾಧ್ಯ .

“ಪರೀಕ್ಷೆಗಳು ಸಾರ್ ಪರೀಕ್ಷೆಗಳು” ಎಂಬ ಲೇಖನವಂತೂ ಪ್ರಸ್ತುತ ಶಿಕ್ಷಕರು, ಉಪನ್ಯಾಸಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಉದಾಹರಿಸುತ್ತ ,ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಗೈಯ್ಯುವ ತಪ್ಪುಗಳು, ಅವರ ಮನಸ್ಥಿತಿ, ಮೂರು ಗಂಟೆಗಳ ಕಾಲ ಒಂದೇ ಕೊಠಡಿಯಲ್ಲಿ ಕಳೆಯಲು ಶಿಕ್ಷಕರು ಬೀಳುವ ಪಡಿಪಾಟಲು,ವಿದ್ಯಾರ್ಥಿಗಳು ಒಂದೇ ಕಡೆ ಕುಳಿತು ಪರೀಕ್ಷೆ ಬರೆಯಲು ಅವರ ಒದ್ದಾಟ, ಮಾತಾಡದೆ, ತಿರುಗಾಡದೆ, ಹರಟೆ ಹೊಡೆಯಲು ಸಾಧ್ಯವಾಗದೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಂಕಷ್ಟ ಹೇಳತೀರದೆಂದು ಹೇಳುತ್ತಾ ನಗೆಗಡಲಿನಲ್ಲಿ ತೇಲಿಸಿದ್ದಾರೆ. ಅದೆಷ್ಟು ವಾಸ್ತವವಾಗಿ ಲೇಖನ ಮೂಡಿಬಂದಿದೆಯೆಂದರೆ ಸ್ವತಃ ಶಿಕ್ಷಕಿಯಾದ ನನಗೂ ಕೂಡ ಇಂತಹ ಅನುಭವಗಳು ಆಗಿವೆ. ಹಾಗಾಗಿ ಲೇಖನವು ಕಣ್ಣಿಗೆ ಕಟ್ಟಿದಂತಿದೆ.

ನಾಗಾಲೋಟದಲ್ಲಿ ಓಡುತ್ತಿರುವ ಕಾಲದ ಓಘಕ್ಕೆ ಸಿಲುಕಿ , ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಇಂದು ನಾವು ಅಂದಿನ ಕಾಲದ ಪ್ರಭಾವಶಾಲಿ ಹಾಗೂ ಸುಲಭದ ಮನರಂಜನಾ ಮಾಧ್ಯಮವಾಗಿದ್ದ ರೇಡಿಯೋವನ್ನು ನಿರ್ಲಕ್ಷಿಸಿದ್ದೇವೆಂದು ಸೂಚ್ಯವಾಗಿ ಹೇಳುತ್ತಾ” ಹಾಡು ಹಳೆಯದಾದರೇನು ” ಎಂಬ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಲೇಖಕರ ಬಾಲ್ಯದಲ್ಲಿ ಅವರ ಮನೆಗೆ ಹೊಸ ರೇಡಿಯೋ ಬಂದಾಗ ಊಟ, ನಿದ್ರೆಯನ್ನೂ ಬಿಟ್ಟು ಹಬ್ಬವೆಂಬಂತೆ ಸಂಭ್ರಮಿಸಿದ ಬಗೆಯನ್ನು, ರೇಡಿಯೋದಲ್ಲಿ ವಾರ್ತೆ, ಕೃಷಿ ಸಮಾಚಾರ ಮುಂತಾದ ವಿಷಯಗಳು ಭಿತ್ತರಗೊಳ್ಳುತ್ತಿದ್ದರೂ ಚಿತ್ರಗೀತೆಗಳಿಗಾಗಿಯೇ ಜಾತಕಪಕ್ಷಿಯಂತೆ ಕಾತರದಿಂದ ಕಾಯುತ್ತಿದ್ದುದು, ಚಿತ್ರಗೀತೆಗಳು ಬೆಳಿಗ್ಗೆ ಮದ್ಯಾನ್ಹ ರಾತ್ರಿ ಎಷ್ಟು ಹೊತ್ತಿಗೆ ಪ್ರಸಾರವಾಗುತ್ತವೆ ಎಂಬುದನ್ನು ಚೆನ್ನಾಗಿ ನೆನಪಿಟ್ಟಕೊಂಡು ಕೇಳುವುದು, ಅವುಗಳ ಸಾಹಿತ್ಯದ ಅರ್ಥ ಗೊತ್ತಿಲ್ಲದಿದ್ದರೂ ತಪ್ಪು ತಪ್ಪಾಗಿ ಹೇಳಿಕೊಂಡು ಅಡ್ಡಾಡುವುದು ಲೇಖಕರಿಗೆ ಪ್ರಿಯವಾಗಿತ್ತು. ಹೀಗೇ ಒಮ್ಮೆ ಅವರು ಕಾಕನಕೋಟೆ ಸಿನಿಮಾದ…. ನೇಸರ…. ನೋಡು…. ನೇಸರ ನೋಡು…. ಎಂಬ ಹಾಡನ್ನು ನೀ…. ಸರ ನೋಡು… ನೀ… ಸರ ನೋಡು ಎಂದು ತಪ್ಪಾಗಿ ಹೇಳಿಕೊಂಡು ಓಡಾಡುತ್ತಿದಾಗ ಯಾರೋ ಹಿರಿಯರೊಬ್ಬರು, ಅದು ನೀ… ಸರ ಅಲ್ಲ…. ನೇಸರ ಎಂದು ಹೇಳುತ್ತಾ ನೇಸರ ಅಂದರೆ ಅರ್ಥ ಗೊತ್ತಾ ಎಂದು ಕೇಳುತ್ತಾರೆ. ಲೇಖಕರು ಗೊತ್ತಿಲ್ಲ ಎಂದಾಗ ಅರ್ಥಕೋಶದಲ್ಲಿ ಹುಡುಕಿ ನೀನೇ ತಿಳಿದುಕೋ ಎಂದು ಹೇಳಿದರಂತೆ. ಲೇಖಕರ ಪುಟ್ಟ ತಲೆಗೆ ಆ ಹಿರಿಯರು ಬಿಟ್ಟ ಹುಳು ತುಂಬಾ ಪ್ರಭಾವಶಾಲಿಯಾಗಿ ಕೆಲಸ ಮಾಡಿತ್ತು. ಕೂಡಲೇ ಲೇಖಕರು ಸಮೀಪದಲ್ಲಿದ ಗ್ರಂಥಾಲಯಕ್ಕೆ ಹೋಗಿ ಅಕ್ಷರದ ಎಳೆ ಹಿಡಿದು ಅಕಾರಾದಿಯಲ್ಲಿ ಪದಗಳ ಅರ್ಥ ಹುಡುಕುವುದನ್ನು ಕಲಿತರು. ಸ್ವಂತಕ್ಕೊಂದು ನಿಘಂಟು ಕೊಳ್ಳುವ ಆಸೆಯನ್ನು ಮನದಲ್ಲಿ ಚಿಗುರಿಸಿಕೊಂಡರು.

ಮತ್ತೊಂದು ಲೇಖನ “ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ” … ಈ ಬರಹದಲ್ಲಿ ಸ್ವತಃ ಲೇಖಕರು ನಲವತ್ತು ವರ್ಷಗಳಿಂದ ಅಡುಗೆ ಮಾಡುವ ಅನುಭವಿ ಬಾಣಸಿಗರೆಂದು ತಮ್ಮ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮಹಾನ್ ತಿಂಡಿ ಪೋತರಾದ ಲೇಖಕರು ರಾತ್ರಿ ಎಷ್ಟು ಹೊತ್ತಾದರೂ ಸರಿ, ಪ್ರಯಾಣದ ಆಯಾಸವನ್ನೂ ಮರೆತು ರುಚಿಕರ ಅಡುಗೆ ಮಾಡಿ ಉಂಡರೆ ಮಾತ್ರ ಅವರಿಗೆ ನಿದ್ರೆ ಬರುತ್ತಿತ್ತಂತೆ. ಅವರ ದೃಷ್ಟಿಯಲ್ಲಿ ಅಡುಗೆ ಮಾಡುವುದೂ ಒಂದು ಕಲೆ. ಕತೆ ಕವಿತೆ ಬರೆಯುವಾಗಲೂ ನಮ್ಮ ಅನುಭವಗಳು ನಮ್ಮೊಳಗೆ ಕುದಿದು, ಕೆನೆಗಟ್ಟಿ, ಭಟ್ಟಿ ಇಳಿಯುವ, ಹದಗೊಳ್ಳುವ ಪ್ರಕ್ರಿಯೆಗಳು ಬರಹವನ್ನು ರುಚಿಕಟ್ಟಾಗಿಸುತ್ತವೆ ಎಂದು ಹೇಳಿದ್ದಾರೆ.

ಹಾಗೆಯೇ ಇನ್ನೊಂದು ಲೇಖನ “ಮುನ್ನುಡಿ ಬೆನ್ನುಡಿಗಳೆಂಬ ಬೆಂಬಲದ ದಾರಿ” ಯಲ್ಲಿ ಮುನ್ನುಡಿ ಎಂಬುದು ಸಹ ಲೇಖಕರಿಗೆ ತೋರುವ ಆದರದ ಭಾವ, ಗೌರವ, ವಿಶ್ವಾಸ ಮತ್ತು ಹೃದಯವಂತಿಕೆಯ ಸಂಕೇತ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಯಾವುದೇ ಪುಸ್ತಕದ ಪ್ರಕಟಣೆಯು ಆಯಾ ಲೇಖಕರ ಪಾಲಿಗೆ ಸಂಭ್ರಮದ ಕ್ಷಣಗಳಾಗಿದ್ದು, ಆ ಸಂಭ್ರಮಕ್ಕೆ ನುಡಿ ತೋರಣ ಕಟ್ಟಿ ಶುಭ ಹಾರೈಸುವ ಮಹತ್ತರ ಕೆಲಸ ಮುನ್ನುಡಿಕಾರರು ಮಾಡಬೇಕಾಗುತ್ತದೆ. ತಾನು ಮುನ್ನುಡಿ ಬರೆಯುತ್ತಿರುವ ಕೃತಿಯ ಒಳ ಹೊರಗನ್ನು ಸ್ಥೂಲವಾಗಿ ಅವಲೋಕಿಸಿ, ತಮ್ಮದೇ ಆದ ಶೈಲಿಯಲ್ಲಿ ಸಾಹಿತ್ಯಿಕ ಅಭಿರುಚಿಗೆ ತಕ್ಕ ಘನತೆ, ಗಾಂಭೀರ್ಯವನ್ನು ಕಾಪಾಡಿಕೊಂಡು ಹೇಳಬೇಕಾದುದನ್ನು ನಯವಾಗಿ ಯೂ, ನಾಜೂಕಾಗಿಯೂ ಹೇಳಬೇಕಾಗಿರುವುದು ಮುನ್ನುಡಿಕಾರನ ಆದ್ಯ ಕರ್ತವ್ಯ ಎಂದು ಹೇಳಿದ್ದಾರೆ.

ಈ ಕೃತಿಯಲ್ಲಿನ ಒಂದು ಲೇಖನದಲ್ಲಿ ಅಲಂಪು ಶಬ್ಧ ಗಮನ ಸೆಳೆಯುತ್ತದೆ. “ಅಲಂಪು” ಹಳಗನ್ನಡ ಶಬ್ಧವಾಗಿದ್ದು ರನ್ನ ಪೊನ್ನರ ಕಾಲದ ಪುರಾತನ ಶಬ್ಧ. ಈ ಶಬ್ಧವು ಸ್ನೇಹ, ಪ್ರೀತಿ, ಕೋಮಲವಾದ ಭಾವನೆ ಎಂಬರ್ಥವನ್ನು ಹೊಂದಿದ್ದು ಲೇಖಕರಿಗೆ ಪ್ರಿಯವಾದ ಶಬ್ಧವಾಗಿದೆ. ಹಳಗನ್ನಡ ಶಬ್ಧಗಳನ್ನು ಉಳಿಸಿ ಬೆಳೆಸುವ ಉಮೇದಿನಿಂದ ಲೇಖಕರು ತಮ್ಮ ಮನೆಗೆ ಅಲಂಪು ಎಂದು ಹೆಸರಿಟ್ಟಿದ್ದಾರೆ. ಈ ಅಪರಿಚಿತ ಶಬ್ಧವನ್ನು ಎಂದೂ ಕೇಳಿರದವರು ಹಾಗೂ ಮನೆಗೆ ಬಂದವರೆಲ್ಲಾ ಈ ಪದದ ಅರ್ಥವೇನೆಂದು ಕೇಳುವವರೇ. ಆಗ ಲೇಖಕರು ಈ ಶಬ್ಧದ ಅರ್ಥ ವಿವರಿಸುವ ಅನಿವಾರ್ಯತೆಗೆ ಒಳಗಾಗುತ್ತಾರೆ. ಅದು ಅವರಿಗೆ ಖುಷಿ ಕೊಡುವ ವಿಷಯವೂ ಹೌದು. ಮಾಲೂರಿನ ಅವರ ಶಿಷ್ಯ ಬಳಗ ಲೇಖಕರ ಮೇಲಿನ ಅಭಿಮಾನದಿಂದ ಪ್ರಕಾಶನ ಸಂಸ್ಥೆಗೆ “ಅಲಂಪು ಪ್ರಕಾಶನ ” ಎಂದು ಹೆಸರಿಟ್ಟಿರುವುದನ್ನೂ ಸ್ಮರಿಸುತ್ತಾರೆ. ಒಟ್ಟಿನಲ್ಲಿ “ಅಲಂಪು” ಶಬ್ಧ ವಿಶಿಷ್ಟವಾಗಿದ್ದು ಇದೇ ಮೊದಲ ಬಾರಿಗೆ ಅದರ ಅರ್ಥ ತಿಳಿದಂತಾಯ್ತು.

ಹೀಗೆ ಹೇಳುತ್ತ ಹೋದರೆ ಪ್ರತಿಯೊಂದು ಬರಹವೂ ಓದುಗನನ್ನು ಸೆಳೆದು ಒಂದೆಡೆ ಕೂಡಿಸಿ ಓದಿಸಿಕೊಳ್ಳುತ್ತದೆ ಹಾಗೂ ಸಮೃದ್ಧ ಹಾಸ್ಯದ ಹೊನಲನ್ನು ಹರಿಸುತ್ತದೆ ಎಂದು ಹೇಳಬಹುದು. ಇಲ್ಲಿನ ಕೆಲವೊಂದು ಲೇಖಕರ ಅನುಭವಗಳು ನಮ್ಮ ಅನುಭವಗಳೂ ಆಗಿರುವುದರಿಂದ ಸಹಜವಾಗಿಯೇ ಲೇಖನಗಳು ಆಪ್ತವಾಗುತ್ತವೆ. ಒಟ್ಟಾರೆ ವಾರದ ಕೊನೆಯಲ್ಲಿ ಒಂದು ಶುದ್ಧ ಮನರಂಜನಾತ್ಮಕ ಹಾಗೂ ಸ್ವಾನುಭವದಿಂದ ಮೂಡಿದ ಒಂದು ಉತ್ತಮ ಸದಭಿರುಚಿಯ ಪ್ರಬಂಧ ಸಂಕಲನವನ್ನು ಓದಿನ ಖುಷಿ ನನಗೆ ದೊರೆತಿದ್ದು, ನನ್ನ ಅರಿವಿಗೆ ದಕ್ಕಿದ ಸಾಲುಗಳಲ್ಲಿ ಕೆಲವು ಘಟನೆಗಳನ್ನಷ್ಟೇ ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದ್ದೇನೆ, ಕಾರಣ ಸಮಯದ ಅಭಾವ, ಸುದೀರ್ಘ ಲೇಖನ ಎಂದು ಓದುಗರು ಬೇಸರಗೊಳ್ಳಬಾರದೆಂದು ಹಾಗೂ ಓದುಗರ ಕುತೂಹಲವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ. ಮುಂಬರುವ ದಿನಗಳಲ್ಲಿ ಶ್ರೀಯುತ ಡಾ. ಸತ್ಯನಾರಾಯಣ ಸರ್ ರವರ ಲೇಖನಿಯಿಂದ ಮತ್ತಷ್ಟು ಮಗದಷ್ಟು ಇಂತಹ ಅಭೂತಪೂರ್ವ ಹಾಗೂ ಸಶಕ್ತ ಬರಹಗಳು ಹರಿದು ಬರಲಿ ಎಂದು ಹಾರೈಸುತ್ತ ಅವರನ್ನು ಅಭಿನಂದಿಸುತ್ತಿದ್ದೇನೆ. ಸಕಾಲಕ್ಕೆ ಪುಸ್ತಕವನ್ನು ತಲುಪಿಸಿ ಓದಲು ನೆರವಾದ ಮಿಂಚುಳ್ಳಿ ಪ್ರಕಾಶನದ ರೂವಾರಿಗಳಾದ ಯುವ ಉತ್ಸಾಹಿ ಸಾಹಿತಿಗಳಾದ ಶ್ರೀಯುತ ಶಂಕರ್ ಸಿಹಿಮೊಗ್ಗೆ ಹಾಗೂ ಶ್ರೀಯುತ ಸೂರ್ಯಕೀರ್ತಿ ಸರ್ ರವರಿಗೆ ನಲ್ಮೆಯ ಧನ್ಯವಾದಗಳು.


  • ಸರ್ವಮಂಗಳ ಜಯರಾಂ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading