ಇಬ್ಬರ ಗೆಳೆಯರ ಬಾಂಧವ್ಯದ ಕತೆ ಇದು. ಗೆಳೆಯನಿಗೆ ಪ್ರೋತ್ಸಾಹ ನೀಡುವುದು ಒಬ್ಬ ಗೆಳೆಯನ ಖುಷಿಯಾದರೆ, ಪ್ರೋತ್ಸಹ ಕೊಟ್ಟ ಗೆಳೆಯನಿಗೆ ಕೃತಜ್ಞತೆ ಹೇಳಿ ಪ್ರೀತಿ ತುಂಬುವ ಇನ್ನೊಬ್ಬ ಗೆಳೆಯ…ಹರಿಹರ ಬಿ ಆರ್ ಅವರ ಗೆಳೆಯರ ಬಾಂಧವ್ಯದ ಕತೆ. ತಪ್ಪದೆ ಮುಂದೆ ಓದಿ…
“ಸಂಗಾತಿಯಂತ ಗೆಳೆಯ ಧನ್ಯವಾದಗಳು. ‘ಟಾಮ್ ಅಂಡ್ ಜೆರಿ’ ಎಂದು ನಮ್ಮಿಬ್ಬರ ಜೋಡಿ ನೋಡಿ ಎಲ್ಲರೂ ಹೇಳುವರು. ಅದು ಇಂದು ನಿಜವಾಯ್ತು ಗೆಳೆಯ” ಎಂದು ಹೇಳುತ್ತ ಹಾರ, ತುರಾಯಿ, ವಿಗ್ರಹ, ದಾಖಲೆಗಳನ್ನೆಲ್ಲ ಕೊಟ್ಟು, ಖುಷಿಯಾಗಿ ಅವನನ್ನಪ್ಪಿ ಕುಣಿಯುತ್ತಲೇ ಇದ್ದ.
ಇತ್ತ ಏನೊಂದು ಅರಿಯದೆ “ಸಹಜಕ್ಕೆ ಬಾ ತಣ್ಣಗಾಗು ಮಿತ್ರ. ಯಾಕಿಷ್ಟು ಖುಷಿಯಾಗಿದೀಯಾ? ಏನಾಯ್ತು ಅಂತ ವಿವರವಾಗಿ ಹೇಳಪ್ಪಾ. ಇದೆಲ್ಲ ನನ್ನ ತಲೆ ಮೇಲೆ ಯಾಕೆ ಹಾಕ್ತಾ ಇದೀಯ? ನಿಜ ಹೇಳಬೇಕು ಅಂದರೆ ಇದುವರೆಗೂ ನಾನು ಒಂದು ಪ್ರಶಸ್ತಿ ಇರಲಿ ಬಹುಮಾನ ಕೂಡ ಗೆದ್ದವನಲ್ಲ. ಅದೂ ಬೇರೆ ಎಲ್ಲ ನನಗಾಗಿ ಅಂತ ಹೇಳ್ತಾ ಇದೀಯಲ್ಲಪ್ಪಾ” ಎಂದು ಮಿತ್ರನನ್ನು ದೂರ ಸರಿಸಿ ಕೇಳಿದ.
“ಇದು ನಿನಗೆ ಗೊತ್ತಿರೋ ವಿಷಯಾನೇ ಕೇಳು ಗೆಳೆಯ”
“ಅಷ್ಟೇನಾ. ಎಲ್ಲರೂ ಮಾಡೋ ಉಪಕಾರಾನೇ ನಾನೂ ಮಾಡಿದ್ದು ಅದರಲ್ಲೇನು ಅತಿಶಯೋಕ್ತಿ ಇದೆ ಹೇಳು ಮಿತ್ರ”
“ನೀನೇ ನನ್ನನ್ನ ಸೋತ ಪಂದ್ಯದಲ್ಲಿ ತಯಾರು ಮಾಡಿದ್ದು. ನಾನೊಮ್ಮೆ ಸೋತಿದ್ದರೂ ಕೂಡ ಬಿಡಲಿಲ್ಲ. ಇನ್ನೊಮ್ಮೆ ಪಂದ್ಯ ಇದೆ ಅಂತ ವಿಷಯ ತಿಳಿಸಿದೆ ಗೆಳೆಯ. ಆಗಲೂ ಸಹನೆಯಿಂದ ನನ್ನ ಪೂರ್ವಾಪರಗಳನ್ನ ಚೆನ್ನಾಗಿ ತಿಳಿದು ನನಗಾಗಿ ಸಹನೆಯಿಂದ ಸಲಹೆಯನಿತ್ತೆ ಮಿತ್ರ”
“ಅದೆಲ್ಲ ಗೊತ್ತಿರೋ ವಿಷಯ ಬಿಡೋ. ನೀನು ಪಂದ್ಯಕ್ಕಾಗಿ ಮತ್ತೊಮ್ಮೆ ಭಾಗವಹಿಸುವ ಅವಕಾಶಕ್ಕೆ ಕೈ ಚೆಲ್ಲಿ ಕೂತಿದ್ದೆ. ಅದೂ ಏನು ತುಂಬಾ ಚಟುವಟಿಕೆಯಲ್ಲಿದ್ದವನು ಗುಬ್ಬಿ ಮರಿ ತರಹ ಕೂತಿದ್ದೆ. ನಿನ್ನ ಬೇಸರದ ಮುಖ ನೋಡಕ್ಕೆ ಆಗ್ತಿರಲಿಲ್ಲ. ಹೇಗಾದರೂ ಮಾಡಿ ನಿನಗೆ ಹುರುಪು ತರಬೇಕು. ಭಾಗವಹಿಸೋ ತರ ಆಗಬೇಕು ಅಂತ ನಾನು ಯೋಚನೆ ಮಾಡಿ ಸ್ಪೂರ್ತಿ ತುಂಬಿದ್ದು ಅಷ್ಟೇ ಮಿತ್ರ. ಇದರಲ್ಲೇನು ನನ್ನ ಪಾತ್ರ ಇಲ್ಲ, ಏಕೆಂದರೆ ಭಾಹವಹಿಸಿದ್ದವನು ವಿಜೇತನಾದವನು ಎರಡೂ ನೀನೇ ಅಲ್ವಾ?”
“ಈ ಸ್ಪರ್ಧೆಗೋಸ್ಕರ ಒಂದು ವಾರದಿಂದ ಬೆಳಿಗ್ಗೆಯಾಗಲಿ, ಕಚೇರಿಯಿಂದ ಬಂದು ತಡರಾತ್ರಿಯಾಗಲಿ, ರಜಾ ದಿನಗಳೂ ಬಿಡದೆ ಹೇಗೆ ತಯಾರಿಯಾಗಬೇಕು ಅಂತ ಚೆನ್ನಾಗಿ ತಿಳಿಸಿಕೊಟ್ಟೆ ಅರ್ಥಾತ್ ನನ್ನ ತಲೆ ತಿಂದು ಹಾಕೇಬಿಟ್ಟಿದ್ದೆ. ಸ್ಪರ್ಧೆಗೆ ಸಂಬಂಧಪಟ್ಟ ವಿಷಯ, ನಿಯಮ, ವಿಭಿನ್ನ ರೀತಿಯ ಎದುರಾಳಿಯ ಅಡೆತಡೆಗಳು, ನನ್ನ ಅನುಭವಗಳಿಂದ ನೀನು ಸಕಲವನ್ನೂ ತಿಳಿದುಕೊಂಡು ನನಗೆ ಹೇಳಿಕೊಟ್ಟ ರೀತಿ ಏನು ಸಾಮಾನ್ಯಾನ? ನಾನು ನನ್ನ ಜನ್ಮದಲ್ಲಿ ಯಾವತ್ತೂ ನಿನ್ನನ್ನ ಮರೆಯಲ್ಲ, ಮರೆಯೋಕ್ಕಾಗಲ್ಲ. ವಾಹ್ ಗೆಳೆಯ”
ಮತ್ತೊಮ್ಮೆ ಅವನ ಜೊತೆ ಜೊತೆಗೆ ಕುಣಿಯುತ್ತಲೇ ಇದ್ದ. ಮುತ್ತುಗಳ ಮಳೆಯನ್ನೂ ಹರಿಸುತ್ತಲೇ ಇದ್ದ.
- ಹರಿಹರ ಬಿ ಆರ್
