ಕುರುವಂಶದ ಮೂಲ ಪುರುಷ “ಯಯಾತಿ” ರಾಜನ ಮಗಳೇ ‘ಮಾಧವಿ’. ಡಾ ಅನುಪಮಾ ನಿರಂಜನ ಅವರ ಮಾಧವಿ ಪುಸ್ತಕದ ಕುರಿತು ಪ್ರಭಾವತಿ ಎಸ ವಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮಾಧವಿ
ಲೇಖಕರು : ಡಾ ಅನುಪಮಾ ನಿರಂಜನ
ಪ್ರಕಾರ : ಪೌರಾಣಿಕ ಕಾದಂಬರಿ
ಪ್ರಕಾಶಕರು : ಡಿ.ವಿ.ಕೆ.ಮೂರ್ತಿ, ಮೈಸೂರು.
ಬೆಲೆ : ೬೦ ರೂಪಾಯಿ.
ಡಾ ಅನುಪಮಾ ನಿರಂಜನ ಆವರು ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಆನೇಕ ಸಾಮಾಜಿಕ ಕಾದಂಬರಿಗಳನ್ನೂ ಬರೆದರು. ಆದರೆ, ಅವರಿಗೆ ತುಂಬಾ ಹೆಸರು ತಂದು ಕೊಟ್ಟ ಕಾದಂಬರಿ ‘ಮಾಧವಿ’. ಮಹಾಭಾರತ ಕತೆಯ ಮೂಲ ಪುರುಷ ಯಯಾತಿ ಅವನ ಕೊನೆಯ ಮಗಳು ಮಾಧವಿ . ವಿಶ್ವಾಮಿತ್ರರ ಶಿಷ್ಯನಾದ ಗಾಲವನು ಗುರುದಕ್ಷಿಣೆಯಾಗಿ ಏನು ಕೊಡಲಿ ಎಂದು ಪೀಡಿಸಿದಾಗ ಒಂದು ಕಿವಿಯು ನೀಲಿ ಬಣ್ಣಕ್ಕೆ ಇರುವ ಮೈಯೆಲ್ಲಾ ಬೆಳ್ಳಗಿರುವ ಎಂಟು ನೂರು ಕುದುರೆಗಳನ್ನು ಅವರು ಬಯಸುತ್ತಾರೆ. ಅವನು ಮೊದಲು ಯಯಾತಿಯ ಬಳಿ ಬರುತ್ತಾನೆ. ಚಕ್ರವರ್ತಿ ಪುತ್ರನನ್ನು ಹೆರುವ ಯೋಗ್ಯತೆ ಇರುವ ಅವಳನ್ನು ನಾಲ್ವರು ರಾಜರಿಗೆ ಮಾರಿ ಕುದುರೆ ಗಳನ್ನು ಪಡೆದು ಕೊಳ್ಳಲು ಯಯಾತಿಯೇ ಸೂಚಿಸುತ್ತಾನೆ. ಅಯೋಧ್ಯೆಯ ರಾಜ ಹರ್ಯಶ್ವ, ಕಾಶಿರಾಜ ದೀವೋದಾಸ, ಭೋಜರಾಜ ಉಶೀನರ -ಎಂಬ ಮೂವರು ರಾಜರಿಗೆ ಮಕ್ಕಳನ್ನು ವರ್ಷಕ್ಕೊಂದರಂತೆ ಹೆರುತ್ತಾಳೆ. ಎಳೆ ಮಗುವನ್ನು ಬಿಟ್ಟು ಮುಂದೆ ಹೊರಡುವ ಇವಳ ಮಾನಸಿಕ ಹೋರಾಟವನ್ನು ಮಹಾಭಾರತದ ಕತೆಯಲ್ಲಿ ಕಾಣಲಾಗುವುದಿಲ್ಲ .

ಇವಳ ವೇದನೆಗೆ ಮೊದಲು ಬಾಯಿ ಕೊಟ್ಟವರು ಅನುಪಮಾ. first of it s kind in Asia ಎಂಬ ಮನ್ನಣೆ ಪಡೆದ ಈ ಕೃತಿ ( ಇದು ವಿದ್ಯಾರ್ಥಿಯೊಬ್ಬ ಕೊಟ್ಟ ಮಾಹಿತಿ ) ಇನ್ನೂ ಮದುವೆಯಾಗದ ಹುಡುಗಿಯು ಗಳಿತರೂ ವೃದ್ಧರೂ ವಿವಾಹಿತರೂ ಅಪರಿಚಿತರೂ ಆದ ಆ ಮೂವರು ರಾಜರೊಂದಿಗೆ ಒಂದು ವರ್ಷಕ್ಕೆ ಒಬ್ಬರಂತೆ ಮಲಗಿ ಕೇವಲ ಮಗು ಹೆರುವ ಕೆಲಸ ಮತ್ತು ಮಗುವನ್ನು ಬಿಟ್ಟು ಹೋಗುವ ಕೆಲಸ ಮಾಡುವಾಗ ಅವಳ ಮನಸ್ಸಿನ ಭಾವನೆ, ಬೇಸರ , ದುಃಖ ಚಡಪಡಿಕೆಗೆ ಸೂಕ್ತ ವೇದಿಕೆಯನ್ನು ಅನುಪಮಾ ಈ ಕಾದಂಬರಿಯಲ್ಲಿ ನಿರ್ಮಿಸಿದರು . ಮೂವರು ರಾಜರಿಂದ ಆರು ನೂರು ಕುದುರೆಗಳನ್ನು ಪಡೆದ ಗಾಲವನು ಉಳಿದ ಇನ್ನೂರು ಕುದುರೆಗಳಿಗೆ ಬದಲಾಗಿ ಮಾಧವಿಯನ್ನು ವಿಶ್ವಾಮಿತ್ರರಿಗೆ ಕೊಟ್ಟು ಒಬ್ಬ ಚಕ್ರವರ್ತಿ ಪುತ್ರನನ್ನು ಪಡೆಯುವಂತೆ ತಿಳಿಸುತ್ತಾನೆ . ಹೀಗೆ ಹುಟ್ಟಿದವರೇ ಪ್ರತರ್ಧನ , ಶಿಬಿ , ಅಷ್ಟಕ , ವಸುಮಂತ .
ನಾಲ್ಕು ವರ್ಷಗಳ ಕಾಲ ತನ್ನೊಂದಿಗೇ ನಡೆದು ಬರುತ್ತಿದ್ದ ತರುಣನಾದ ಗಾಲವನನ್ನು ಮಾಧವಿ ಬಯಸಿರಬಹುದೇ ಎಂಬ ಕುತೂಹಲದಿಂದ ಹುಟ್ಟಿದ ಕಾದಂಬರಿ ಲಕ್ಷ್ಮಣ ಕೌಂಟೆಯವರ ‘ಆಹುತಿ’. ಇದನ್ನಾಧರಿಸಿ ಶೈಲಜಾ ಸುರೇಶ್ ಅವರು ಮಾಧವಿ ಎಂಬ ಕತೆಯನ್ನೂ ಬೇಲೂರು ರಘುನಂದನ್ ಅವರು ಅದೇ ಹೆಸರಿನ ನಾಟಕವನ್ನೂ ಬರೆದಿದ್ದಾರೆ. ರಂಗಪ್ರಯೋಗವೂ ಆಗಿದೆ .

ಸ್ತ್ರೀ ವಾದ ಎಂಬ ಪದವು ಕನ್ನಡ ಸಾಹಿತ್ಯವನ್ನು ಪ್ರವೇಶಿಸುವ ಮುನ್ನವೇ ಬಂದ ಈ ಕಾದಂಬರಿ ಯು ಅವರ ಉಳಿದ ಸಾಮಾಜಿಕ ಕಾದಂಬರಿಗಳಿಗಿಂತ ಭಿನ್ನವಾಗಿ ಅನಂತರದ ಅವರ ಬರವಣಿಗೆಯ ಮೇಲೂ ಪ್ರಭಾವ ಬೀರಿತು. ನಾಲ್ಕು ಜನರನ್ನು ಸೇವಿಸಿ ಹಿಂದಿರುಗಿದ ಮಾಧವಿಗೆ ಅವಳ ತಂದೆ ಸ್ವಯಂವರ ಏರ್ಪಡಿಸುತ್ತಾನೆ. ಅದನ್ನು ಧಿಕ್ಕರಿಸಿ ಮಾಧವಿ ಕಾಡಿಗೆ ಹೊರಟು ಹೋಗುತ್ತಾಳೆ. ಮೇಲೆ ಹೇಳಿದ ಮೂರೂ ಕೃತಿಗಳು ಇಲ್ಲಿಗೆ ನಿಲ್ಲುತ್ತವೆ .
ಆದರೆ ಇವರೆಲ್ಲರಿಗಿಂತ ಬಹು ಮುಂಚೆಯೇ ತಿರುಮಲಾಂಬ ಅವರು ಬರೆದ ‘ವಿವೇಕೋದಯ’ ಎಂಬ ನಾಟಕ ದಲ್ಲಿ ಮತ್ತೊಂದು ಶಾಪಕ್ಕೆ ಗುರಿಯಾಗಿದ್ದ ತಮ್ಮ ತಾತ ಯಯಾತಿಯನ್ನು ಮಾಧವಿಯ ನಾಲ್ಕು ಮಕ್ಕಳಾದ ಪ್ರತರ್ದನ , ಶಿಬಿ , ವಸುಮಂತ , ಅಷ್ಟಕ ಕಾಪಾಡುತ್ತಾರೆ . ಹಾಗಾಗಿ ಇವರದೇ ಪೂರ್ಣ ದೃಷ್ಟಿ ಎಂದು ಉಷಾ ಮಲ್ಲಾರಾಧ್ಯ ಪ್ರತಿಪಾದಿಸುತ್ತಾರೆ. ಅಂದರೆ ಒಂದು ದೊಡ್ಡ ಕಿತ್ತಳೆ ಹಣ್ಣಿನ ಎರಡು ತೊಳೆಗಳು ಸ್ತ್ರೀ ವಾದವಾಗುತ್ತದೆ ಮಾರ್ಕ್ಸ್ ವಾದವೂ ಅಷ್ಟೇ . ಗಾಂಧಿ ವಾದ ಇನ್ನೇನು . ಪರಿಪೂರ್ಣ ವಾದದ್ದು ಪರಂಪರೆಯೇ ಎಂದಂತಾಯಿತು
- ಪ್ರಭಾವತಿ ಎಸ ವಿ
