ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)

ಗುಜರಾತಿಗರು ನರ್ಮದಾ ಪರಿಕ್ರಮ ವಾಸಿಗಳಿಗೆ ಭರಪೂರ ಸೇವೆಯನ್ನು ಒದಗಿಸುತ್ತಾರೆ. ಆಹಾರದಲ್ಲಿ ಕಿಂಚಿತ್ ಕೊರತೆ ಬೀಳದೆ ಇರೋ ತರ ನೋಡಿಕೊಳ್ಳುವರು. “ಕಹೋಣಾ”(ವಡೋದರ ಜಿಲ್ಲಾ) ಗ್ರಾಮದ ಆಂಜನೇಯ ದೇವಸ್ಥಾನವಿರುವ ‘ತಪೋವನಧಾಮ ಆಶ್ರಮ”ದ ಸನ್ಯಾಸಿ ನನ್ನ ಕೂಗಿ ಕರೆದು, “ಇಲ್ಲಿಯೇ ಉಳಿದುಕೊಳ್ಳಿ” ಎಂದರು. “ಮುಂದೆ ಹೋಗುವೆ” ಎಂದರೂ.. ಕಕ್ಕುಲತೆಯಿಂದ ಉಳಿದುಕೊಳ್ಳಲು ಒತ್ತಾಯಿಸಿದರು. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಭಾರಿ ಇಬ್ಬನಿ ತುಂಬಿದ್ದ ವಾತಾವರಣ. ಸಮಯ ಬೆಳಿಗ್ಗೆ 7 ಆದರೂ ಕರಗದ ಇಬ್ಬನಿ, ಚಳಿಗೆ ಮೈ ಕಂಪಿಸುತಿತ್ತು‌. ನಲ್ಲಿಯಿರುವ 5 ಲೀಟರ್ ಥರ್ಮಸ್ ತುಂಬಾ ಹಬೆಯಾಡುವ ಚಹಾ ತುಂಬಿಟ್ಟಿದ್ದರು‌. ಗ್ಲಾಸ್ ತುಂಬಿಕೊಂಡು ಮೆಲ್ಲಗೆ ಚಹಾ ಹೀರಿದಾಗಲೆ ಚಳಿ ಕಡಿಮೆಯಾದಂತಾಯಿತು‌.

7:30 ಆದರೂ ಸೂರ್ಯ ಪತ್ತೆ ಇಲ್ಲ. ಆದರೂ ಇಬ್ಬನಿ ಪ್ರಮಾಣ ಕಡಿಮೆಯಾಗಿತ್ತು, ಸರಿ ನಂದಿಯ ಜೊತೆ “ಭರೂಚ್”ನತ್ತ ಹೊರಟೆ‌. ಹೈವೇ ಮೂಲಕ ಹೊರಟವನಿಗೆ, ಕಾರು, ಬಸ್ಸಿನಲ್ಲಿ ಹೋಗುತ್ತಿದ್ದವರು “ನರ್ಮದೇ ಹರ್!!” ಎಂಬ ಘೋಷಣೆಯೊಂದಿಗೆ ಹರಿಸುತ್ತಿದ್ದರು‌. ಸುಮಾರು 25 ಕಿ‌ ಮೀ ದೂರಕ್ಕೆ ರಸ್ತೆಯ ಮೂಲಕ ಹೋದವನಿಗೆ, ನರ್ಮದಾ ಮಾತೆಯ ದಡಕ್ಕೆ ಹೋಗುವ ಹಪಾಹಪಿ ಶುರುವಾಯಿತು‌. ಸಮಯ 11:30 ಆಗಿತ್ತು, ಬಿಸಿಲು ಮೈ ಸುಡುವ ತನ್ನ ನಿತ್ಯ ಕಾಯಕ ಯಥಾವತ್ತಾಗಿ ಪಾಲಿಸುತ್ತಿತ್ತು‌.‌ ಮುಖ್ಯ ರಸ್ತೆಯಿಂದ 3 ಕಿ. ಮೀ ಒಳಗೆ ನಂದಿಯನ್ನು ತಿರುಗಿಸಿಕೊಂಡು ಹೋದಾಗ ತಾಯಿ ನರ್ಮದೆಯ ದರ್ಶನವಾಯಿತು.

ವಿಶಾಲವಾದ ನದಿ ಹರವು, ನದಿ ನಿಂತಂತೆ ಕಂಡರೂ ಸದಾ ಲವಲವಿಕೆಯಿಂದ ಹರಿಯುವ ನರ್ಮದೆ. ಅವಳ ಲವಲವಿಕೆ ಮತ್ತು ರೌದ್ರ ನರ್ತನಕ್ಕೆ ಕಡಿವಾಣ ಹಾಕಲು ಹಲವು ಡ್ಯಾಂಗಳು ನಿರ್ಮಾಣವಾಗಿವೆ‌‌. ಆದರೂ ಸದಾ ಹಸನ್ಮುಖಿ‌, ನಿತ್ಯನೂತನ. ನದಿಯ ತಟಕ್ಕೆ ಅರ್ಧ ತಾಸು ಕೂತು, ನಮಸ್ಕರಿಸಿ.. ನದಿ ದಂಡೆಯ ಕಾಲುದಾರಿಯಲ್ಲಿ ನಂದಿಯನ್ನು ಓಡಿಸತೊಡಗಿದೆ‌. ಅಂಕುಡೊಂಕಾದ ಕಚ್ಚಾ ರೋಡು, ಉರಿ ಬಿಸಿಲು ಒಂದೆಡೆಯಾದರೆ, ನದಿಯಿಂದ ತೇಲಿ ಬರುವ ಬಿಸಿಗಾಳಿ.

ಆದರೂ ಆ ಪ್ರಯಾಣದಲ್ಲಿ ವರ್ಣಿಸಲಾಗದ ಆನಂದವಿದೆ‌.‌ ಒಬ್ಬನೇ ನದಿಯ ಜೊತೆ ಮಾತಿಗಿಳಿದೆ‌. ಆ ಏಕಾಂತ ಸಂವಾದ ಅವರ್ಣನೀಯ. ಬರುವ ಉತ್ತರುವ ಒಮ್ಮೊಮ್ಮೆ ದಂಗಾಗಿಸುತ್ತೆ‌.
12 ಕಿ.ಮೀಟರ್ ದೂರದವರೆಗೂ ನಂದಿ ನದಿಯ ಪಕ್ಕವೇ ಓಡಿದ..‌ ಮುಂದೆ ರಸ್ತೆಯಿರಲಿಲ್ಲ.. ಕೆಸರು ತುಂಬಿದ ದಂಡೆ ಇದ್ದುದರಿಂದ… ಊರಿನ ಕಡೆ ಹೋಗುವ ಮುಳ್ಳು ಗಿಡಗಂಟಿ ನಡುವಿನ ಕಾಲುದಾರಿಯಲ್ಲಿ ತುಂಬಾ ಕಷ್ಟಪಟ್ಟು ಟಾರು ರೋಡಿಗೆ ಬಂದವನೆ, ರಸ್ತೆಯ ಮೂಲಕವೇ ಭರೂಚನತ್ತ ಹೊರಟವನಿಗೆ ಹಸಿವು ಹೆಚ್ಚಾಗತೊಡಗಿತು, ಬಿಸಿಲಿನ ತಾಪ ಸಹ ಹೆಚ್ಚು.

ಭರೂಚ ಊರಿನೊಳಗೆ ಬರುತ್ತಿದ್ದಂತೆ ಮೊದಲೇ ಸಿಗುವ ಸ್ವಯಂ ಉದ್ಭವ ಲಿಂಗ “ಕಾಮನಾಥ ಮಹಾದೇವ ಮಂದಿರ ಮತ್ತು ಅನ್ನಕ್ಷೇತ್ರ” ಕ್ಕೆ ಹೋದೆ, ಊಟ ಮತ್ತು ವಿಶ್ರಾಂತಿಯೂ ಆಯಿತು, ಇದು ಹಳೆಯ ಭರೂಚನಲ್ಲಿ ಇದೆ. ಇಳಿ ಮಧ್ಯಾಹ್ನದ ಸಮಯಕ್ಕೆ ಹಳೆಯ ಭರೂಚ್ ನೋಡುತ್ತಾ, ಸಿಟಿಯ ಕಡೆ ಹೊರಟೆ‌.‌

ಹಳೆಯ ಭರೂಚ್ ಮೊದಲು ಬಂದರು ಪ್ರದೇಶವಾಗಿತ್ತಂತೆ, ಇಲ್ಲಿನ ಹಳೆಯ ಮನೆಗಳನ್ನು ಸಹ ವಿಶೇಷವಾಗಿ ಸಾಗುವಾನಿ ಮರದ ಕಟ್ಟಿಗೆಯಿಂದ ಕಟ್ಟಲಾಗಿದೆ, ಗಚ್ಚಿನ ಮನೆಗಳು‌. ರಾಜರು ಕಟ್ಪಿಕೊಂಡ ವಿಶ್ರಾಂತಿ ಧಾಮಗಳು ಇದ್ದಂತಿವೆ. ಇದರಿಂದಲೇ ತಿಳಿಯುತ್ತೆ, ಇಲ್ಲಿ ಬದುಕಿದ್ದವರೆಲ್ಲ ಆಗರ್ಭ ಶ್ರೀಮಂತರಾಗಿದ್ದರು. ಆದರೆ ಈಗ ಇಲ್ಲಿರುವುದು ಆ ಮನೆಗಳಷ್ಟೇ, ಶ್ರೀಮಂತಿಕೆ ಎಂದಿಗೂ ತೀರಿ ಹೋಗಿದೆ. ಮನೆಗಳು ಪಾಳು ಬಿದ್ದಿವೆ, ಮೂರ್ನಾಲ್ಕು ತಲೆಮಾರು ಕಂಡಂತ ಮನೆಗಳು ಅನಾಥ. ನಾಯಿ, ಹಂದಿ ಮತ್ತು ಭಿಕ್ಷುಕರ ವಾಸಸ್ಥಾನಗಳಿವು ಅಷ್ಟೇ, ಈಗಿನ ಮನೆಯ ವಾರಸುದಾರರು ವಿದೇಶಗಳಿಗೆ ಮತ್ತು ಮಹಾನಗರಗಳಿಗೆ ವಲಸೆ ಹೋಗಿದ್ದಾರೆ. ಕೆಲವರಂತೂ ಮಾರಿ ಕೈ ತೊಳೆದುಕೊಂಡಿದ್ದಾರೆ. ಯಾವುದೂ ಶಾಶ್ವತವಲ್ಲ…
ಭೃಗು ಮಹರ್ಷಿಯ ದೇವಸ್ಥಾನ ಮಾ ನರ್ಮದೆಯ ತಟದಲ್ಲಿಯೆ ಇದೆ. ಅಲ್ಲಿಯೇ ಶನಿ ಮಹಾತ್ಮನ ಮಂದಿರವೂ ಉಂಟು.‌

ಮಂದಿರದಿಂದ ಓಣಿಯಲ್ಲಿ ಹೊರಟು, “ನೀಲಕಂಠ ಮಹಾದೇವ ಆಶ್ರಮ”ದ ಕಡೆ ಹೊರಟವನಿಗೆ. 3 ಮನೆಯವರು ಬಂದು 4 ಕೆ.ಜಿ ಅಕ್ಕಿ ಮತ್ತು ಬೇಳೆ ಕೊಟ್ಟು ನಮಸ್ಕರಿಸಿ ಹೋದರು‌. ಹೀಗೆ ನರ್ಮದಾ ಪ್ರದಕ್ಷಿಣೆ ಮಾಡುವವರಿಗೆ ಧಾನ್ಯ ದಾನ ಮಾಡುವುದು ಇಲ್ಲಿನ ಪದ್ಧತಿಯಂತೆ. ಕಾರಿನಲ್ಲಿ ಬಂದಿಳಿದ ದಂಪತಿ ಹಣ್ಣು ಮತ್ತು ಬಿಳಿ ಟವೆಲ್ ಇರುವ ಚೀಲವನ್ನು ಕೈಗಿಟ್ಟು ಹೋದರು‌.

ಅವರು ನಮಗೆ ಏನೇ ಕೊಟ್ಟರು ನರ್ಮದಾ ಮಾತೆಗೆ ಅರ್ಪಿಸಿದಂತೆ ಅವರ ಭಾವನೆ. ಅವರಿಗೆ ವಂದಿಸಿ ಆಶ್ರಮಕ್ಕೆ ಹೊರಟೆ. “ನೀಲಕಂಠ ಮಹಾದೇವ ಆಶ್ರಮ”ಕ್ಕೆ ಹೋದವನೆ, ನನಗೆ ದಾನವಾಗಿ ಬಂದ ಅಕ್ಕಿ ಮತ್ತು ಬೇಳೆ ಕಾಳನ್ನು ಅಡುಗೆ ಮನೆಗೆ ಕೊಟ್ಟು ವಿಷಯ ತಿಳಿಸಿದೆ. ಅವರು ಅಷ್ಟೇ ಭಕ್ತಿಯಿಂದ ದಾನವಾಗಿ ಸ್ವೀಕರಿಸಿದರು. ಇಲ್ಲಿನ ಆಶ್ರಮಗಳಲ್ಲಿ ನಿತ್ಯ ದಾಸೋಹ ಇರುತ್ತೆ.

ಇವಾಗ ನದಿ ದಂಡೆಗೆ ಅಂಟಿಕೊಂಡಿರುವ ಆಶ್ರಮದಲ್ಲಿ ಮಲಗಿರುವೆ.. ಚಳಿ ಶುರುವಾಗಿದೆ. ನರ್ಮದೆ ಬೆಚ್ಚಗೆ ಹರಿಯುತ್ತಿದ್ದಾಳೆ. ನಾನು ಸ್ಲೀಪಿಂಗ್ ಬ್ಯಾಗಿನಲ್ಲಿ ಹುದುಗಿಕೊಳ್ಳುವ ಹೊತ್ತು.

ಇವತ್ತು ಬೆಳಿಗ್ಗೆ ಚಳಿಯ ಆರ್ಭಟ ಜೋರಾಗಿಯೇ ಇತ್ತು‌. ನಿಸರ್ಗದಲ್ಲಿ ಇಬ್ಬನಿ ತುಂಬಿ ತುಳುಕುತಿತ್ತು. ತುಂಬಾ ದಟ್ಟವಾದ ಇಬ್ಬನಿ. ಕೊರೆಯುವ ಚಳಿಯಲ್ಲಿ ನದಿಯ ನೀರು ಬಿಸಿಯಾಗಿರುತ್ತೆ, ನದಿ ಸ್ನಾನ ಮಾಡಿ, ಪೂಜೆ ಮುಗಿಸಿ ಹೊರಡುವಾಗ ಸಮಯ 7, ಆದರೂ ಇಬ್ಬನಿ ಹಾಗೇ ಇತ್ತು. ಪಯಣ ಶುರುಮಾಡಿದೆ. ಇಬ್ಬನಿ ಕರಗುವವರೆಗೆ ನಡೆದು ಹೋಗಲು ಯೋಚಿಸಿ, ಭರೂಚ್’ನ ರಸ್ತೆಯಲ್ಲಿ ನಂದಿಯನ್ನು ತಳ್ಳಿಕೊಂಡು ಹೊರಟೆ.

ಆ ನಡಗುವ ಚಳಿಯಲ್ಲೂ ಸುಮಾರು ಮೂರು ಕಡೆ, ನರ್ಮದಾ ಪ್ರದಕ್ಷಿಣೆ ಮಾಡುವ ಶ್ರದ್ಧಾಳುಗಳಿಗೆ ಬೆಳಗಿನ ಉಪಹಾರ ಮತ್ತು ಚಹಾದ ವ್ಯವಸ್ಥೆ ಮಾಡಲಾಗಿತ್ತು. 400 ಮೀಟರ್ ರಸ್ತೆಯಲ್ಲಿ 3 ಕಡೆ ಸೇವೆ, ಒಂದು ಕಡೆ ಉಚಿತ ಔಷಧ ವಿತರಣೆ ಮತ್ತು ಅವಶ್ಯಕತೆ ಬಿದ್ದರೆ ವೈದ್ಯರ ಸಲಹೆ ಪಡೆಯುವ ಸೌಲಭ್ಯ ಒದಗಿಸಲಾಗಿತ್ತು. ಇವರೆಲ್ಲರೂ ನರ್ಮದಾ ಮಾತೆಯ ಭಕ್ತರು‌.

ಒಂದು ಕಡೆ ಉಪಹಾರ ಮುಗಿಸಿ 8:30ರ ವರೆಗೆ ನಡೆದೆ, ಆಮೇಲೆ ಸೂರ್ಯ ಇಣುಕದಿದ್ದರೂ ಇಬ್ಬನಿಯ ದಟ್ಟತೆ ಕಡಿಮೆಯಾಯಿತು. ತಣ್ಣನೆಯ ಹವೆಯಲ್ಲಿ “ಶುಕ್ಲ ತೀರ್ಥ”ದ ಕಡೆ ನಂದಿಯನ್ನು ಓಡಿಸತೊಡಗಿದೆ. ಭರೂಚನಿಂದ “ಶುಕ್ಲ ತೀರ್ಥ” ಊರಿನವರಿಗೆ ನಂದಿ ಓಡಿದ, “ಶುಕ್ಲೇಶ್ವರ ಮಹಾದೇವ” ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಮಾಡಿದೆ. ಅಲ್ಲಿಂದ ಹೊರಟಿದ್ದು “ಅಂಗಾರೇಶ್ವರ ತೀರ್ಥ”ದ ಕಡೆ. ಇನ್ನೂ ಅಂಗಾರೇಶ್ವರ ತೀರ್ಥ ತಲುಪುವ ಮೊದಲೇ ತಡೆದು ನಿಲ್ಲಿಸಿದ ಊರಿನವರು “ಊಟ ಮಾಡಲೇ ಬೇಕು” ಎಂದು ದುಂಬಾಲು ಬಿದ್ದರು. “ಹಸಿವು ಇಲ್ಲ ಇವಾಗ, ಮುಂದಿನ ಆಶ್ರಮದಲ್ಲಿ ಊಟ ಮಾಡುವೆ” ಎಂದು ಕೈ ಮುಗಿದರೂ.. ಅವರ ಒತ್ತಾಯಕ್ಕೆ ಮಣಿದು ಒಂದೇ ಒಂದು “ಸಜ್ಜೆ ರೊಟ್ಟಿ” ತಿಂದು ಹೊರಟೆ. ಆಗ ಸಮಯ ಮಧ್ಯಾಹ್ನ 12 ಗಂಟೆ‌. ಆಮೇಲೆ ಊಟ ಮಾಡಲಿಲ್ಲ.

ಗುಜರಾತಿಗರು ನರ್ಮದಾ ಪರಿಕ್ರಮ ವಾಸಿಗಳಿಗೆ ಭರಪೂರ ಸೇವೆಯನ್ನು ಒದಗಿಸುತ್ತಾರೆ. ಆಹಾರದಲ್ಲಿ ಕಿಂಚಿತ್ ಕೊರತೆ ಬೀಳದೆ ಇರೋ ತರ ನೋಡಿಕೊಳ್ಳುವರು.
ಅಲ್ಲಿಂದ ನರ್ಮದಾ ನದಿಯ ಪಕ್ಕದ ಕಾಲುದಾರಿಯಲ್ಲಿ ನಂದಿಯನ್ನು ಓಡಿಸತೊಡಗಿದೆ‌. ಒಂದು ಕಡೆ ಹಸಿರು, ಇನ್ನೊಂದು ಕಡೆ ಮೋಕ್ಷದಾಯಿನಿ ನರ್ಮದಾ. ನಟ್ಟ ನಡುವೆ ನಂದಿ ನನ್ನ ಹೊತ್ತುಕೊಂಡು ಮೆರವಣಿಗೆ ಹೊರಟಂತ ಸನ್ನಿವೇಶ. ನಂದಿಯನ್ನು ಓಡಿಸಿ ಓಡಿಸಿ, ಮೈಯೆಲ್ಲಾ ಬೆವರೆದ್ದು ಬಟ್ಟೆ ತೊಪ್ಪನೆ ತೊಯ್ದಾಗ, ನದಿಯಲ್ಲಿಳಿದು ನೀರು ತುಂಬಿ ಕುಡಿದರೆ ಆ ಜಲ ಅಮೃತ ಸಮಾನ. ದಣಿವನ್ನು ನಿವಾರಿಸಿ, ನರಗಳಲ್ಲಿ ಶಕ್ತಿ ತುಂಬಿದಂಗಾಗುತಿತ್ತು.

ನದಿಯ ಪಕ್ಕವೆ ನಂದಿಯನ್ನು ನಡೆಸಿ, ಕಾಲುದಾರಿ ಮುಗಿಯುತ್ತದ್ದಂತೆ, ನಂದಿಯನ್ನು ರಸ್ತೆಯ ಕಡೆ ತಿರುಗಿಸಿ “ನಾರೇಶ್ವರ ಆಶ್ರಮಕ್ಕೆ” ಬಂದಿಳಿದೆ. ಸಾಯಂಕಾಲದ ಚಹಾ ಮುಗಿಸಿ, ಮುಂದಿನ ಆಶ್ರಮ ಹುಡುಕಿ ಹೊರಟಾಗ “ಕಹೋಣಾ”(ವಡೋದರ ಜಿಲ್ಲಾ) ಗ್ರಾಮದ ಆಂಜನೇಯ ದೇವಸ್ಥಾನವಿರುವ ‘ತಪೋವನಧಾಮ ಆಶ್ರಮ”ದ ಸನ್ಯಾಸಿ ನನ್ನ ಕೂಗಿ ಕರೆದು, “ಇಲ್ಲಿಯೇ ಉಳಿದುಕೊಳ್ಳಿ” ಎಂದರು. “ಮುಂದೆ ಹೋಗುವೆ” ಎಂದರೂ.. ಕಕ್ಕುಲತೆಯಿಂದ ಉಳಿದುಕೊಳ್ಳಲು ಒತ್ತಾಯಿಸಿದರು.

ಧ್ಯಾನ ಮಂದಿರ

ಆ ಗುರುಗಳ ಮಾತಿಗೆ ಬಾಗಿ, 5:10 ಕ್ಕೆ ಪ್ರಯಾಣಕ್ಕೆ ಮುಕ್ತಾಯ ಹಾಡಿ, ನಂದಿಗೆ ವಿಶ್ರಾಮ ನೀಡಿದೆ. ಈ ಆಶ್ರಮದ ಹಿಂದೆಯೇ ತಾಯಿ “ನರ್ಮದಾ ಮಾತೆ” ಪ್ರಸನ್ನಳಾಗಿ ತೇಲಿ ಹೋಗುತ್ತಿದ್ದಾಳೆ. ಆಶ್ರಮದ ಸುತ್ತಾ ಕಾಡು ಆವರಿಸಿಕೊಂಡಿದೆ. ಶಾಂತ ವಾತಾವರಣ. ಚಳಿ ಮೈ ನಡುಗಿಸುವಂತಿದೆ. ಊಟಕ್ಕೆ ಬಿಸಿ ಬಿಸಿಯಾದ ಚಪಾತಿ ಮತ್ತು ಕಿಚಡಿ ಮಾಡಲಾಗಿತ್ತು. ನೀರು ಕುಡಿಯುವ ಎಂದು ಕುಡಿದರೆ, ತಣ್ಣನೆಯ ನೀರಿಗೆ ಹುಲ್ಲು “ಚುಳ್” ಎಂದವು. ನೀರು ತಂಪು ತಂಪು. ವಾತಾವರಣ ಅದಕ್ಕಿಂತ ತಂಪು. ನದಿಯ ಪಕ್ಕದ ಆಶ್ರಮದಲ್ಲಿ ನಿದ್ದೆಗೆ ಜಾರುವ ಸಮಯ ಇದು.

ಮುಂದಿನ ಪಯಣ ನಾಳೆಗೆ.
ನರ್ಮದೇ ಹರ್

ಹಿಂದಿನ ಸಂಚಿಕೆಗಳು :


  •  ಡಾ. ಪ್ರಕಾಶ ಬಾರ್ಕಿ –  ವೈದ್ಯರು, ಲೇಖಕರು, ಕಾಗಿನೆಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading