“ಇದು ನಮ್ಮ ನಿಮ್ಮದೇ ಅಂತರಂಗದ ನಿವೇದನೆಯ ಕವಿತೆ. ಜಗದೆದುರು ಮಾಡಿದ ಸೂಕ್ಷ್ಮ ಸಂವೇದನೆಗಳ ಎದೆಯ ಬಿನ್ನಹದ ಭಾವಗೀತೆ. ಇದು ಪ್ರತಿ ಬದುಕಿನ ನಿತ್ಯ ಸತ್ಯಗೀತೆ. ಅದೇಕೋ ಲೋಕದಲ್ಲಿ ಬಹುಪಾಲು ಮಂದಿಗೆ ಇತರರನ್ನು ಅರಳಿಸುವುದಕ್ಕಿಂತ ನರಳಿಸುವುದರಲ್ಲೇ ಆನಂದ. ಪರರನ್ನು ಪುಳಕಿಸುವುದಕ್ಕಿಂತ ಪರದಾಡಿಸುವುದರಲ್ಲೇ ಆಹ್ಲಾದ. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಹೊಗಳದಿದ್ದರೂ ಬೇಡ ಬೇಸರವಿಲ್ಲ
ಹೀಗೆಳೆಯದಿರಿ ಎನ್ನ ಜನರೆದುರು.!
ಆದರಿಸದಿದ್ದರೂ ಬೇಡ ಮುಜುಗರವಿಲ್ಲ
ಅನುಮಾನಿಸದಿರಿ ಎನ್ನ ಸಭೆಯೆದುರು.!
ಅಭಿನಂದಿಸದಿದ್ದರೂ ಬೇಡ ಯಾತನೆಯಿಲ್ಲ
ಅನುಮಾನಿಸದಿರಿ ಎನ್ನ ಅನ್ಯರೆದುರು.!
ಆರಾಧಿಸದಿದ್ದರೂ ಬೇಡ ಯೋಚನೆಯಿಲ್ಲ
ಅಲಕ್ಷಿಸದಿರಿ ಎನ್ನನು ಸಕಲರೆದುರು.!
ಪೊರೆಯದಿದ್ದರೂ ಬೇಡ ಚಿಂತೆಯಿಲ್ಲ
ಜರಿಯದಿರಿ ಎನ್ನ ಮಂದಿಯೆದುರು.!
ಪ್ರೋತ್ಸಾಹಿಸದಿದ್ದರೂ ಬೇಡ ನಿರಾಸೆಯಿಲ್ಲ
ಕಾಡಿ ಕಾಲೆಳೆಯದಿರಿ ಎನ್ನ ಎಲ್ಲರೆದುರು.!
ಹುರಿದುಂಬಿಸದಿದ್ದರೂ ಬೇಡ ದುಃಖವಿಲ್ಲ
ದಿಕ್ಕು ತಪ್ಪಿಸದಿರಿ ಎನ್ನ ಗುರಿಯೆದುರು.!
ಹಾರೈಸದಿದ್ದರೂ ಬೇಡ ಹತಾಶೆಯಿಲ್ಲ
ಹಣಿದು ಹಿಂಸಿಸದಿರಿ ಎನ್ನ ಎಲ್ಲರೆದುರು.!
ಅನುಸರಿಸದಿದ್ದರೂ ಬೇಡ ಅಪೇಕ್ಷೆಯಿಲ್ಲ
ಅಡ್ಡಪಡಿಸದಿರಿ ಎನ್ನ ತಪಸ್ಸಿನೆದುರು.!
ಆನಂದಿಸದಿದ್ದರೂ ಬೇಡ ನಿರೀಕ್ಷೆಯಿಲ್ಲ
ಅಸೂಯೆಪಡದಿರಿ ಎನ್ನ ಯಶಸ್ಸಿನೆದುರು.!
ಕಣ್ಣೀರಿಡದಿದ್ದರೂ ಬೇಡ ಕನಲುವುದಿಲ್ಲ
ಕೇಕೆ ಹಾಕದಿರಿ ಎನ್ನ ನೋವುಗಳೆದುರು.!
ಸಂಕಟಪಡದಿದ್ದರೂ ಬೇಡ ಕೊರಗುವುದಿಲ್ಲ
ಸಂಭ್ರಮಿಸದಿರಿ ಎನ್ನ ಸೋಲುಗಳೆದುರು.!
- ಎ.ಎನ್.ರಮೇಶ್.ಗುಬ್ಬಿ – ಲೇಖಕರು, ಕವಿಗಳು, ಕೈಗಾ
