‘ಬೆಂಗಳೂರು ನಾಗೇಶ್’ ಅವರ ಸಾಧನೆ – ಎನ್.ಎಸ್.ಶ್ರೀಧರ ಮೂರ್ತಿ

ಬೆಂಗಳೂರು ನಾಗೇಶ್ ಅವರು ಖ್ಯಾತ ನಟರಲ್ಲಿಯೊಬ್ಬರು. ಇಂದಿನ ಪೀಳಿಗೆಗೆ ಅವರ ಪರಿಚಯ ಅಷ್ಟಾಗಿ ಇರಲಿಕ್ಕಿಲ್ಲ. ‘ಸತ್ಯ ಹರಿಶ್ಚಂದ್ರ’ ‘ಗುರು ಶಿಷ್ಯರು’ ಸೇರಿದಂತೆ ಸುಮಾರು ೧೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರ ಸಾಧನೆಯ ಕುರಿತು ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…

ಬಹಳ ದಿನಗಳ ನಂತರ ಹಿರಿಯರಾದ ಬೆಂಗಳೂರು ನಾಗೇಶ್ ಅವರನ್ನು ಭೇಟಿ ಮಾಡಿದ್ದೆ. ಈಗಿನ ಪೀಳಿಗೆಗೆ ಬೆಂಗಳೂರು ನಾಗೇಶ್ ಅವರ ಪರಿಚಯ ಅಷ್ಟಾಗಿ ಇರಲಾರದು. ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಶ್ರಾದ್ದದೂಟ ಸುಮ್ಮನೆ, ನೆನಸಿಕೊಂಡರೆ ಝುಮ್ಮನೆ’ ಹಾಡನ್ನು ಒಮ್ಮೆ ನೆನೆಪು ಮಾಡಿ ಕೊಳ್ಳಿ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸುವ ನಾಲ್ವರು ಶಿಷ್ಯರ ಪೈಕಿ ನಾಗೇಶ್ ಕೂಡ ಒಬ್ಬರು. ‘ಗುರು ಶಿಷ್ಯರು’ ಚಿತ್ರದ ಪರಂಧಾಮಯ್ಯನವರ ಶಿಷ್ಯರ ಪೈಕಿ ಇವರೂ ಒಬ್ಬರು. ಇವು ತಕ್ಷಣಕ್ಕೆ ನೆನಪಾದ ಚಿತ್ರಗಳು, ಅವರು ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಫೋಟೋ ಕೃಪೆ: youtube

ನಾಗೇಶ್ ಕೇವಲ ಅಭಿನಯಕ್ಕೆ ಸೀಮಿತವಾದವರಲ್ಲ. ಅವರ ಪ್ರತಿಭೆಯ ಮೂಲಕ್ಷೇತ್ರ ನಿರ್ದೇಶನ. ಸಿನಿಮೋಟೋಗ್ರಫಿಯಲ್ಲಿ ಡಿಪ್ಲೊಮೋ ಪೂರೈಸಿ ಆಗಿನ ಕಾಲಕ್ಕೆ ಸಾಕಷ್ಟು ಕಲಿತವರು ಎನ್ನಿಸಿ ಕೊಂಡಿದ್ದ ನಾಗೇಶ್ ಚಿತ್ರರಂಗ ಪ್ರವೇಶಿಸಿದ್ದು ಜಿ.ವಿ.ಅಯ್ಯರ್ ಅವರ ‘ಲಾಯರ್ ಮಗಳು’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಮುಂದೆ ಕನ್ನಡ ಚಿತ್ರರಂಗದ ಭೀಷ್ಮ ಎನ್ನಿಸಿ ಕೊಂಡ ಆರ್.ನಾಗೇಂದ್ರ ರಾಯರಿಗೆ ‘ಪತಿಯೇ ದೈವ’ ಚಿತ್ರಕ್ಕೆ ಸಹ ನಿರ್ದೇಶಕರಾಗುವ ಅವಕಾಶ ಸಿಕ್ಕಿತು. ನಾಗೇಂದ್ರ ರಾಯರ ಮಗ ಆರ್.ಎನ್.ಜಯಗೋಪಾಲ್ ಅವರ ‘ಧೂಮಕೇತು’ ಚಿತ್ರಕ್ಕೂ ನಾಗೇಶ್ ಸಹ ನಿರ್ದೇಶಕರು.

ಪತ್ರಕರ್ತ ಎನ್.ಎಸ್.ಶ್ರೀಧರ ಮೂರ್ತಿ ಮತ್ತು ಬೆಂಗಳೂರು ನಾಗೇಶ್

ವಿಜಯಾ ರೆಡ್ಡಿ (ಮಯೂರ, ಗಂಧದ ಗುಡಿ), ವೈ.ಆರ್.ಸ್ವಾಮಿ (ಭಲೇ ಹುಚ್ಚ, ಸಿಪಾಯಿ ರಾಮು) ಪೆಕೇಟಿ ಶಿವರಾಂ (ಮಾತು ತಪ್ಪದ ಮಗ) ಎ.ವಿ.ಶೇಷಗಿರಿ ರಾವ್ (ಸೊಸೆ ತಂದ ಸೌಭಾಗ್ಯ) ಎಸ್.ಕೆ.ಎ.ಚಾರಿ (ಕುಂಕಮ ರಕ್ಷೆ) ಹೀಗೆ ಆಗಿನ ಬಹುತೇಕ ಎಲ್ಲಾ ಪ್ರಮುಖ ನಿರ್ದೇಶಕರ ಜೊತೆಗೂ ಕೆಲಸ ಮಾಡಿದ ನಾಗೇಶ್ ಇದ್ದರೆ ನಿರ್ದೇಶಕರಿಗೆ ನಿರಾಳ, ಬಹುತೇಕ ನಿರ್ದೇಶನದ ಎಲ್ಲಾ ಕೆಲಸಗಳನ್ನೂ ಅವರು ಮಾಡಿ ಬಿಡುತ್ತಿದ್ದರು. ಆದರೆ ಅವರಿಗೆ ಸ್ವತಂತ್ರ ನಿರ್ದೇಶಕರಾಗುವ ಅವಕಾಶ ಸಿಕ್ಕಿದ್ದು ‘ಮಂಜಿನ ತೆರೆ’ ಒಂದೇ ಚಿತ್ರಕ್ಕೆ ವಿಭಿನ್ನವಾಗಿದ್ದ ಈ ಚಿತ್ರ ಸೋತಿದ್ದರಿಂದ ಅವರಿಗೆ ಮತ್ತೆ ಅವಕಾಶ ಸಿಕ್ಕಲಿಲ್ಲ. ಆದರೆ ತೆರೆಯ ಹಿಂದಿನ ಅವರ ಕಾಯಕ ಮುಂದುವರೆಯಿತು. ತುಂಬಾ ಸೊಗಸಾದ ಇಂಗ್ಲೀಷ್ ಬಲ್ಲ ಅವರು ಆಗ ಚಿತ್ರರಂಗಕ್ಕೆ ಅಗತ್ಯದ ವ್ಯಕ್ತಿ. ಡಾ.ರಾಜ್ ಕುಮಾರ್ ಅವರಿಗೆ ಕೂಡ ಇಂಗ್ಲೀಷ್ ಕಲಿಸಿದ ಹೆಗ್ಗಳಿಕೆ ನಾಗೇಶ್ ಅವರದು. ರಜನೀಕಾಂತ್ ಅವರ ವೃತ್ತಿ ಜೀವನವನ್ನು ರೂಪಿಸುವಲ್ಲಿ ಕೂಡ ಮುಖ್ಯ ಪಾತ್ರ ವಹಿಸಿದವರು ಅವರು. ಇತ್ತೀಚಿನ ಚಾರ್ಲಿ 777, ತೋತಾಪುರಿ ಚಿತ್ರಗಳಲ್ಲಿ ಕೂಡ ಅಭಿನಯಿಸಿರುವ ಅವರು ಅನೇಕ ಮಧುರ ಗೀತೆಗಳನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು. ಇದರ ಕತೆಯೇ ಇನ್ನೊಂದು ರೋಚಕ ಅಧ್ಯಾಯ.

ನಾಗೇಂದ್ರ ರಾಯರಿಂದ ಹಿಡಿದು ರಕ್ಷಿತ್ ಶೆಟ್ಟಿಯವರೆಗೆ ಸುಮಾರು ಮೂರು ತಲೆಮಾರಿನ ಜೊತೆಗೆ ಅರವತ್ತು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ 85ರ ಹರಯದಲ್ಲಿ ಉತ್ಸಾಹಿಯಾಗಿರುವ ಬೆಂಗಳೂರು ನಾಗೇಶ್ ಅವರ ಜೊತೆಗೆ ಮಾತಿಗೆ ಕುಳಿತರೆ ಚಿತ್ರರಂಗದ ಸುದೀರ್ಘ ಇತಿಹಾಸವೇ ಅನಾವರಣಗೊಳ್ಳುತ್ತದೆ. ತೆರೆ ಮರೆಯಲ್ಲಿಯೇ ಇರುವ ಈ ಹಿರಿಯರಿಗೆ ಯಾವ ಗೌರವಗಳೂ ಸಿಕ್ಕಿಲ್ಲ, ಮಾಧ್ಯಮಗಳೂ ಗುರುತಿಸಿಲ್ಲ ಎನ್ನುವುದು ವಿಷಾದಕರ ಸಂಗತಿ.. ತೀರಾ ತಡವಾಗುವ ಮೊದಲು ಈ ಹಿರಿಯರನ್ನು ಸಮಾಜ ಗುರುತಿಸಲಿ ಎನ್ನುವುದೂ ಕೂಡ ಈ ಬರಹದ ಉದ್ದೇಶಗಳಲ್ಲಿ ಒಂದು.


  • ಎನ್.ಎಸ್.ಶ್ರೀಧರ ಮೂರ್ತಿ – ಲೇಖಕರು, ಪತ್ರಕರ್ತರು, ಉಪನ್ಯಾಸಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW