ನಮ್ಮ ಜನಪದರಲ್ಲಿ ಜೋಕುಮಾರನ ಬಗ್ಗೆ ಇರುವ ಅಪಾರ ಭಕ್ತಿ, ಗೌರವ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದ ಲೇಖನವನ್ನು ತಪ್ಪದೆ ಓದಿ…
ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಯಾವುದೇ ಹಬ್ಬಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತವೆ. ಭಾದ್ರಪದ ಮಾಸದ ಶುದ್ಧ ನವಮಿಯಿಂದ ಹುಣ್ಣಿಮೆಯ ತನಕ ಜೋಕುಮಾರಸ್ವಾಮಿಯನ್ನು ಪೂಜಿಸುತ್ತಾರೆ. ಇದು ಮಹಿಳೆಯರ ಸಲುವಾಗಿ ವಿಶೇಷವಾಗಿ ಆಚರಿಸುವ ಸಾಂಪ್ರದಾಯಿಕ ಹಬ್ಬ! ಅನಂತನ ಹುಣ್ಣಿಮೆಯನ್ನು ಜೋಕುಮಾರಸ್ವಾಮಿ ಹುಣ್ಣಿಮೆಯೆಂದೇ ಪರಿಗಣಿಸಿ ಈ ಹಬ್ಬ ಆಚರಿಸುವುದು ರೂಢಿ.
ಉತ್ತರ ಕರ್ನಾಟಕದ ಭಾಗದಲ್ಲಿ ರೈತರ ಪೂರ್ಣವಾದ ಆಚರಣೆ ಎನಿಸಿರುವ ಜೋಕುಮಾರಸ್ವಾಮಿ ರೈತರ ದೃಷ್ಟಿಯಲ್ಲಿ ಜೋಕುಮಾರ ಮಳೆ ತರಿಸುವ ಮತ್ತು ಜನತೆಯ ಬಾದೆಗಳನ್ನು ದೂರ ಮಾಡುವ ದೇವರು. ಭಾದ್ರಪದ ತಿಂಗಳಲ್ಲಿ ಜೋಕುಮಾರಸ್ವಾಮಿ ಜನಿಸುವನು. ಈ ದಿನಕ್ಕೆ “ಜ್ಯೋಕ್ಯಾನ ಹುಣ್ಣಿಮೆ” ಎಂದೇ ಕರೆಯುತ್ತಿದ್ದು, ನಮ್ಮ ಜನಪದರು ಪ್ರತಿ ವರ್ಷ ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಸಡಗರ ಸಂಭ್ರಮದಿಂದ ಆಚರಿಸುವರು.

ಗ್ರಾಮೀಣ ದೇವತೆ, ಮಳೆ ತರುವ ದೇವತೆ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕೊಡುವ ದೇವತೆ, ಫಲದೇವತೆ, ಒಟ್ಟಾರೆ ಮನುಷ್ಯ ಬಾಳಿನ ಎಲ್ಲಾ ಸುಖ- ಸಮೃದ್ಧಿಯನ್ನು ದಯಪಾಲಿಸುವ ದಯಾಳು ಜೋಕುಮಾರ.
ಅಂಬಿಗರು, ಕಬ್ಬಲಿಗರು, ತಳವಾರರು ಗಂಗೆಯಮಕ್ಕಳು ಜೋಕುಮಾರನನ್ನು ಬುಟ್ಟಿಯಲ್ಲಿ ಕೂಡ್ರಿಸಿಕೊಂಡು ಜ್ಯೋಕ್ಯಾನ ವರ್ಣನೆಯ ಜನಪದ ಹಾಡುಗಳನ್ನು ಲಯ ಬದ್ದವಾಗಿ ಹಾಡುತ್ತಾ ಹಳ್ಳಿಹಳ್ಳಿಯ ಓಣಿಓಣಿಯಲ್ಲಿ ತಿರುಗುತ್ತಾರೆ. ಪ್ರತಿಯೊಬ್ಬರ ಮನಗೆ ಜೋಕುಮಾರನ ಬುಟ್ಟಿ ಭೇಟಿ ನೀಡಿದಾಗ ಜೋಳ ಅಕ್ಕಿ ಬೆಲ್ಲ ಕಾಳು ಕಡಿ ತರಕಾರಿ ಇತ್ಯಾದಿ ಧಾನ್ಯಗಳನ್ನು ಜೋಕುಮಾರನಿಗೆ ಅರ್ಪಿಸುದಾಗ ಬುಟ್ಟಿ ಹೊತ್ತು ತಂದ ಮಹಿಳೆಯರು ಪ್ರತಿಯಾಗಿ ಅವರ ಮರದಲ್ಲಿ ಬೇವಿನ ತಪ್ಪಲು, ನುಚ್ಚನ್ನು ಪ್ರಸಾದವಾಗಿ ನೀಡುತ್ತಾರೆ.

ಜೋಕುಮಾರಸ್ವಾಮಿಯದು ವಿಶಿಷ್ಟ ವ್ಯಕ್ತಿತ್ವ ಅಗಲವಾದ ಮುಖ, ದಿಟ್ಟ ಕಣ್ಣುಗಳು, ಎತ್ತರದ ತಿಲಕ, ಚೂಪಾದಮೀಸೆ, ತೆರೆದಬಾಯಿ, ಹಣೆತುಂಬ ವಿಭೂತಿ, ಕುಂಕಮ ಇಷ್ಟಲ್ಲಾ ಶೋಭಾಯಮಾನವಾಗಿ ಪೂರ್ತಿ ತುಂಬಿರುವ ಬೇವು ತಪ್ಪಲದ ಬುಟ್ಟಿಯಲ್ಲಿ ಕುಳಿತು 7 ದಿನಗಳ ತನಕ ಕೇರಿ ಕೇರಿ ತಿರುಗುತ್ತಾನೆ ಮೂರ್ನಾಲ್ಕು ಮಹಿಳೆಯರು ಜೋಕುಮಾರ ಬುಟ್ಟಿಯನ್ನು ಹೊತ್ತುಕೊಂಡು, ಆತನ ಸ್ತುತಿಯನ್ನು ಹಾಡುತ್ತಾ ಅಲೆಯುತ್ತಾರೆ.
ನಮ್ಮ ಜನಪದರಲ್ಲಿ ಜೋಕುಮಾರನ ಬಗ್ಗೆ ಅಪಾರ ಭಕ್ತಿ ಗೌರವ ಉಪ್ಪು, ಮೆಣಸಿನಕಾಯಿ, ದುಡ್ಡು, ಬಟ್ಟೆ, ಬೆಣ್ಣೆ, ಹುಣಸೆಹಣ್ಣು, ಕಾಳು-ಕಡಿ, ದವಸ ಧಾನ್ಯ ಕುಲಾಯಿಗಳನ್ನು ಜೋಕುಮಾರನಿಗೆ ಕಾಣಿಕೆಯಾಗಿ ನೀಡಿದರೆ ರೋಗ-ರುಜಿನ, ತಿಗಣಿಕಾಟ, ಕ್ರಿಮಿ, ಕೀಟಗಳ ಹಾವಳಿ ತಪ್ಪುತ್ತದೆ. ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ಬಲವಾದ ನಂಬಿಕೆ. ವಿಶೇಷವಾಗಿ ಬಂಜೆಯರು ಜೋಕುಮಾರ ಸ್ವಾಮಿಯಲ್ಲಿ ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎಂಬ ಗಾಢವಾದ ನಂಬಿಕೆ ಮಹಿಳೆಯರಲ್ಲಿದೆ. ಹೀಗಾಗಿ ಜೋಕುಮಾರ ಸ್ವಾಮಿ ಎಲ್ಲರ ಮನೆ – ಮನದಲ್ಲಿ ಉಳಿದುಕೊಂಡಿದ್ದಾನೆ.
- ಚಿತ್ರ ಲೇಖನ: ಟಿ.ಶಿವಕುಮಾರ್ – ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.
