ಸಿಂಹಗಳಿಗೆ ಇನ್ನೊಂದು ಅಭಯರಣ್ಯ ಏಕೆ ಬೇಕು?

ಹುಲಿಯನ್ನು ಸಿಂಹಕ್ಕೆ ಬದಲಾಗಿ ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಲಾದ ನಂತರ, ಗುಜರಾತ್ ಸರ್ಕಾರವು ಸಿಂಹವನ್ನು ‘ರಾಜ್ಯ ಪ್ರಾಣಿ’ ಎಂದು ಘೋಷಿಸಿ ಅದನ್ನು ಗುಜರಾತ್ ರಾಜ್ಯದ ಪ್ರತಿಷ್ಟಿತ ಸಂಕೇತವನ್ನಾಗಿಸಿದೆ.ಏಷಿಯಾದ ಸಿಂಹಗಳ ಸಂಖ್ಯೆ ಕೇವಲ 700 ರ ಆಸುಪಾಸಿನಲ್ಲಿ. ವಿಜ್ಞಾನಿ ಡಾ .ಶಕುಂತಲಾ ಶ್ರೀಧರ್ ಅವರು ಸಿಂಹಗಳ ಕುರಿತು ಬರೆದ ಮಹತ್ವದ ಲೇಖನವನ್ನು ತಪ್ಪದೆ ಓದಿ…

ನನ್ನ ಸಂಶೋಧನೆಯ ವಿಷಯ ಇಲಿ, ಹೆಗ್ಗಣಗಳು. ಆದರೆ ನನ್ನ ಒಂದು ಮೆಚ್ಚಿನ ಅಧ್ಯಯನ ಕ್ಷೇತ್ರ ಪ್ರಾಣಿಗಳ ವರ್ತನೆ ಮತ್ತು ಜೀವ ವೈವಿದ್ಯದ ಸಂರಕ್ಷಣೆ. ಈ ಬಗ್ಗೆ ಓದುತ್ತಿರುವಾಗ ಇಡೀ ಪ್ರಪಂಚದಲ್ಲೇ ಏಷ್ಯಾದ ಸಿಂಹ ಕೇವಲ ಗುಜರಾತಿನ ಗೀರ್ ಅಭಯರಾಣ್ಯದಲ್ಲೇ ಏಕೆ ಉಳಿದು ಸುರಕ್ಷಿತವಾಗಿದೆ ಎಂಬ ಜಿಗ್ನಾಸೆಯಾಯಿತು. ಎರಡು ವರ್ಷಗಳ ಹಿಂದೆ ಪರಿಚಯವಾದ ಗುಜರಾತ್ ರಾಜ್ಯದ ಮುಖ್ಯ ವನ್ಯ ಪ್ರಾಣಿ ಸಂರಕ್ಷರಾದ ಅಂದರೆ ಚೀಫ್ conservator of forests for wild life, Dr. D. P. S. ವರ್ಮಾ ಅವರೊಂದಿನ ಸಮಾಲೋಚನೆಗಳು, ಸಂಭಾಷಣೆಗಳು ಈ ವಿಷಯದ ಮೇಲೆ ಒಂದಷ್ಟು ಬೆಳಕು ಚೆಲ್ಲಿದವು. ಅದರ ಫಲವೇ ನನ್ನ ಈ ದಿನದ ಮಾತುಗಳು.

ಸಿಂಹವು ಫೆಲಿಡೆ ಕುಟುಂಬಕ್ಕೆ ಸೇರಿದ ದೊಡ್ಡ, ಶಕ್ತಿಯುತ ಬೆಕ್ಕು. ಹುಲಿಯ ನಂತರ ಇದು ಎರಡನೇ ಅತಿದೊಡ್ಡ ಮಾಂಸಾಹಾರಿಯಾಗಿದೆ. “ಮೃಗಗಳ ರಾಜ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಿಂಹವು ಅತ್ಯಂತ ವಿಸ್ಮಯಕಾರಿ ಪ್ರಾಣಿಗಳಲ್ಲಿ ಒಂದು, ಅನಾದಿ ಕಾಲದಿಂದಲೂ ಪ್ರಪಂಚದ ಎಲ್ಲ ಪುರಾಣ ಕಥೆಗಲ್ಲೂ, ಸಾಹಿತ್ಯದಲ್ಲೂ ಸಿಂಹಗಳ ಬಗ್ಗೆ ಸಾಕಷ್ಟು ಬರೆಯಲಾಗಿದೆ. ದುರದೃಷ್ಟವಶಾತ್, ಇದು ಉತ್ತರ ಅಮೆರಿಕಾದಲ್ಲಿ ಸುಮಾರು 10,000 ವರ್ಷಗಳ ಹಿಂದೆ ನಶಿಸಿದರೆ, ಬಾಲ್ಕನ್ ದೇಶಗಳಲ್ಲಿ { Croatia, Serbia, Montenegro, Kosovo, Slovenia, Albania, ಉತ್ತರ Macedonia, Bosnia and Herzegovina, Bulgaria, Romania, Moldova, Greece ಮತ್ತು Turkey} ಹಾಗೂ ಪ್ಯಾಲೆಸ್ಟೈನ್‌ನಲ್ಲಿನ ಧರ್ಮಯುದ್ಧಗಳ ಸಮಯದಲ್ಲಿ 2,000 ವರ್ಷಗಳ ಹಿಂದೆ ನಿರ್ನಾಮವಾಯಿತು. ಆದರೂ ಹತ್ತೊಂಬತ್ತನೇ ಶತಮಾನದಲ್ಲಿ ಇನ್ನೂ ಒಂದು ಮಿಲಿಯನ್ ಸಿಂಹಗಳು ಬದುಕಿದ್ದವು. ದುರಂತವೆಂದರೆ, ಕಳೆದ 200 ವರ್ಷಗಳಿಂದ ಶೆಕಡಾ 60 ಸಿಂಹಗಳು ಕ್ಷೀಣಿಸಿದವು. ಇಂದು ಕಾಡಿನಲ್ಲಿ ಕೇವಲ 20,000 ಸಿಂಹಗಳನ್ನು ಹೊಂದಿದ್ದೇವೆ. ಇದಕ್ಕೆ ಮುಖ್ಯ ಕಾರಣಗಳೆಂದ ಕಾಡುಗಳ ನಾಶ ಮತ್ತು ಅವನತಿ. ಉದ್ಯಮ, ಗಣಿಗಾರಿಕೆ, ಕಲ್ಲುಗಣಿಗಾರಿಕೆ, ರಸ್ತೆಗಳು ಮತ್ತು ರೈಲುಮಾರ್ಗಗಳಿಗಾಗಿ ಭೂಮಿಯನ್ನು ವಿಭಜಿಸುವುದು, ಕಾಡುಗಳ ಒಳಗಿನ ಮನುಷ್ಯರ ಅವಾಸ ಸ್ಥಾನಗ ಮತ್ತು ಅರಣ್ಯವನ್ನು ಅತಿಕ್ರಮಿಸಿ ಕೃಷಿಯನ್ನು ವಿಸ್ತರಿಸುವುದು.

ಪ್ರಸ್ತುತ ಎರಡು ಜಾತಿಯ ಸಿಂಹಗಳಿವೆ, ಪ್ಯಾಂಥೆರಾ ಲಿಯೋ ಲಿಯೋ, ಅಂದರೆ ಏಷ್ಯಾಟಿಕ್ ಸಿಂಹ. ಭಾರತ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಒಮ್ಮೆ ವಿಶಾಲವಾಗಿ ಹರಡಿತ್ತು. ಆದರೆ ಪ್ರಸ್ತುತ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವಕ್ಕೆ ಸೀಮಿತವಾಗಿದೆ. ಎರಡನೆಯ ಜಾತಿಯ ಆಫ್ರಿಕನ್ ಸಿಂಹ, ಪ್ಯಾಂಥೆರಾ ಲಿಯೋ ಮೆಲನೊಚೈಟಾ ಪೂರ್ವ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುತ್ತದೆ.

ಫೋಟೋ ಕೃಪೆ : ZSL

ಮೂರು ಜೈವಿಕ ಅಂಶಗಳು ಸಿಂಹಗಳು ತಮ್ಮ ಪರಿಸರದಲ್ಲಿ ಬದುಕುಳಿಯಲು ಸಹಾಯ ಮಾಡುತ್ತವೆ. ಅವುಗಳೆಂದರೆ ಹುಲ್ಲು, ಮರಗಳು ಮತ್ತು ಬೇಟೆಯ ಪ್ರಾಣಿಗಳು. ಅವುಗಳಿಗೆ ಸಹಾಯ ಮಾಡುವ ಮೂರು ಪರಿಸರ ಅಂಶಗಳೆಂದರೆ ಮೊದಲನೆಯದಾಗಿ ಬಂಡೆಗಳು. ಏಕೆಂದರೆ ಅವು ಸಿಂಹಗಳು ನಿದ್ರಿಸುವ ಗುಹೆಗಳನ್ನು ರೂಪಿಸುತ್ತವೆ. ಎರಡನೆಯ ಅಜೀವಕ ಅಂಶವೆಂದರೆ ಮಣ್ಣು, ಇದು ಸಿಂಹದ ಚರ್ಮವನ್ನು ಕಠಿಣವಾದ ಸೂರ್ಯನಿಂದ ರಕ್ಷಿಸುತ್ತದೆ ಮತ್ತು ಅದರ ದೇಹವನ್ನು ತಂಪಾಗಿಸುತ್ತದೆ. ಮೂರನೇ ಅಜೀವಕ ಅಂಶವೆಂದರೆ ಕೊಳಗಳು, ತೊರೆಗಳು ಮತ್ತು ನದಿಗಳಂತಹ ಜಲಮೂಲಗಳು.

ಸಿಂಹ ಬಲಿಷ್ಠವಾದ, ಭಾರಿ ಗಾತ್ರದ ಪ್ರಾಣಿ.ಗಂಡು ಸಿಂಹವು 2 ಮೀ ಅಂದರೆ 6.8 ಅಡಿ ಎತ್ತರವನ್ನು ತಲುಪಬಹುದು,ಮತ್ತು 217 ಕೆಜಿ ವರೆಗೆ ತೂಗುತ್ತದೆ. ಅದರ ಸ್ನಾಯುಗಳು ಭಾರಿ ಶಕ್ತಿಯುತ. ಅದರ ಹಿಂಗಾಲುಗಳು ಎಷ್ಟು ಶಕ್ತಿಯುತಾವಾಗಿರುತ್ತೆoದರೆ ಅವು 36 ಅಡಿಗಳವರೆಗೆ ನೆಗೆಯಲು ಸಹಾಯ ಮಾಡುತ್ತವೆ. ಅವುಗಳ ಚೂಪಾದ ಉಗುರುಗಳು ಕಾಡೆಮ್ಮೆಗಳಂತಹ ದೊಡ್ಡ ಪ್ರಾಣಿಗಳನ್ನು ಕೊಲ್ಲುವಷ್ಟು ಶಕ್ತಿಯುತವಾಗಿವೆ.

ಸಿಂಹದ ಘರ್ಜನೆಯು ತುಂಬಾ ಜೋರಾಗಿರುತ್ತದೆ, ಇದು ಸಿಂಹಗಳ ನಡುವೆ ಸಂವಹನಕ್ಕೆ ಸಹಾಯ ಮಾಡುತ್ತದೆ ಮತ್ತು ಇತರ ಪ್ರಾಣಿಗಳಿಗೆ ಎಚ್ಚರಿಕೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಘರ್ಜನೆಯು ತುಂಬಾ ಜೋರು ಮತ್ತು ಉಗ್ರವಾಗಿದ್ದು 5 ಮೈಲುಗಳವರೆಗೆ ಪ್ರಯಾಣಿಸುತ್ತದೆ. ಇದರ ಶಕ್ತಿ 114 ಡೆಸಿಬಲ್‌ಗಳವರೆಗೆ ತಲುಪಬಹುದು, ಅಂದರೆ ಜೆಟ್ ವಿಮಾನಗಳು ಟೇಕ್ ಆಫ್ ಆಗುವಾಗ ಹೊರಹೊಮ್ಮುವ 120 ಡೆಸಿಬಲ್‌ಗಳಿಗೆ ಹತ್ತಿರದಲ್ಲಿದೆ.ಆಫ್ರಿಕಾದ ಸೇರೆಗೇಟಿ ಅಭಯರಾಣ್ಯದಲ್ಲಿ ಸಿಂಹಗಳ ಮೇಲೆ ಸಂಶೋಧನೆ ಮಾಡಿದ ಪ್ರೊ. ಬರ್ನಹಾರ್ಡ್ಗ್ರಿಮೆಕ್ 1959 ರಲ್ಲಿ ಇದರ ಬಗ್ಗೆ ಏನು ಹೇಳುತ್ತಾರೆಂದರೆ, “ಕೆಂಪು ಮುಂಜಾನೆಯಲ್ಲಿ ಸಿಂಹವು ಪೊದೆಗಳಿಂದ ಹೊರಬಂದು ಭಿಕರ ಘರ್ಜನೆಯನ್ನು ಹೊರಡಿಸಿದಾಗ, ಐವತ್ತು ವರ್ಷಗಳವರೆಗೆ ಅದನ್ನು ಕೇಳಿದ ಮನುಷ್ಯ ಇನ್ನೂ ಭಯಭೀತನಾಗಿಯೇ ಉಳಿಯುತ್ತನೇ.”

ಸಿಂಹಗಳು ಇಲಿ, ಹೆಗ್ಗಣಗಳಿಂದ ಹಿಡಿದು ಎಮ್ಮೆ ಮತ್ತು ಹಿಪಪಾಟಮಸ್‌ಗಳವರೆಗಿನ ದೊಡ್ಡ ಗಾತ್ರದ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ ಅವು ಮಧ್ಯಮ ಗಾತ್ರದ, ಪ್ರಾಣಿಗಳಾದ ಕಾಡುಕೋಣಗಳು, ಜೀಬ್ರಾಗಳು ಮತ್ತು ಜಿಂಕೆಗಳನ್ನು ಕೊಲ್ಲಲು ಮತ್ತು ತಿನ್ನಲು ಬಯಸುತ್ತವೆ. ಬೇಟೆಯ ಆದ್ಯತೆಗಳು ಭೌಗೋಳಿಕವಾಗಿ ಮತ್ತು ನೆರೆಯಲ್ಲಿ ವಾಸಿಸುವ ಸಿಂಹಗಳ ಮೇಲೆ ನಿರ್ಧಾರಿತವಾಗುತ್ತವೆ.

ಫೋಟೋ ಕೃಪೆ : iStock

ಕುತೂಹಲಕಾರಿ ಸಂಗತಿಯೆಂದರೆ, ತಾಜಾ ಪ್ರಾಣಿಗಳನ್ನಷ್ಟೇ ತಿನ್ನು ವುದಿಲ್ಲ. ಯಾವುದೇ ಮಾಂಸವಾದರೂ ಸರಿ ಅಂದರೆ ಸತ್ತ ಪ್ರಾಣಿಗಳು, ಜೊತೆಗೆ ಕತ್ತೆಕಿರುಬಗಳು, ಚಿರತೆಗಳು ಮತ್ತು ಕಾಡು ನಾಯಿಗಳು ಬೇಟೆಯಾಡಿದ ಪ್ರಾಣಿಗಳನ್ನು ಸಹ ಬಲವಂತವಾಗಿ ಕಸಿದುಕೊಳ್ಳುವುದಕ್ಕೂ, ಕದಿಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಹುಲ್ಲುಗವಾಲುಗಳಲ್ಲಿ ವಾಸಿಸುವ ಸಿಂಹಿಣಿಗಳು ಹೆಚ್ಚಿನ ಬೇಟೆಯನ್ನು ಮಾಡುತ್ತವೆ, ಆದರೆ ಸೋಮಾರಿಯಾದ ಗಂಡು ಸಿಂಹ ಹೆಣ್ಣಿನ ಬೇಟೆಯನ್ನು ಕಬಳಿಸುತ್ತದೆ. ಆದಾಗ್ಯೂ, ಗಂಡು ಸಿಂಹಗಳು ಸಹ ಕೌಶಲ್ಯಪೂರ್ಣ ಬೇಟೆಯಾಡುವ ಪ್ರಾಣಿಗಳು.

ಆಶ್ಚರ್ಯದ ಅಂಶವೆಂದರೆ ಇಂಥ ಬೃಹತ್ ಗಾತ್ರದ, ಅಘಾದ ಶಕ್ತಿಯ ಸಿಂಹದ ಸಾವಿಗೆ ಕಾರಣವಾಗುವ ಏಕೈಕ ಪ್ರಾಣಿ ಎಂದರೆ ಮುಳ್ಳುಹಂದಿ. ಅದರ ಮೈಮೇಲಿನ ಮುಳ್ಳುಗಳು ಸಿಂಹದ ಹೃದಯ ಅಥವಾ ಪ್ರಮುಖ ಅಪಧಮನಿಗಳನ್ನು ಚುಚ್ಚುತ್ತದೆ, ಇದರ ಪರಿಣಾಮವಾಗಿ ಉಂಟಾದ ನಿರಂತರ ರಕ್ತಸ್ರಾವ ಸಿಂಹಗಳ ಸಾವಿಗೆ ಕಾರಣವಾಗುತ್ತದೇ. ಅಥವಾ ಸಿಂಹಗಳು ಗಂಭೀರವಾಗಿ ಗಾಯಗೊಳ್ಳುತ್ತವೆ. ಅಂತಹ ಗಾಯಗೊಂಡ ಸಿಂಹಗಳು ಚುರುಕಾದ ಅಥವಾ ದೊಡ್ಡ ಬೇಟೆಯನ್ನು ಬೇಟೆಯಾಡಲು ತುಂಬಾ ದುರ್ಬಲವಾಗಿರುತ್ತವೆ. ಇವು ನಿಧಾನವಾಗಿ ಜಾನುವಾರುಗಳನ್ನು ಮತ್ತು ಅಪರೂಪದ ಸಂದರ್ಭಗಳಲ್ಲಿ ಮನುಷ್ಯರನ್ನು ಕೊಲ್ಲುತ್ತವೆ. ಕೇವಲ ತೀವ್ರ ಬರಗಾಲದ ಸಮಯದಲ್ಲಿ ಸಿಂಹಗಳು ಮುಳ್ಳುಹಂದಿಗಳನ್ನು ಬೇಟೆಯಾಡುತ್ತವೆ.
ಗಂಡು ಮತ್ತು ಹೆಣ್ಣು ಸಿಂಹಗಳೆರಡೂ ಬಹುಪತ್ನಿ, ಪತಿತ್ವವನ್ನು ಹೊಂದಿವೆ. ಅಂದರೆ ಒಂದು ಗಂಡು ಅಥವಾ ಒಂದು ಹೆಣ್ಣು ಸಿಂಹ ಬೇರೆ ಬೇರೆ ಸಂಗಾತಿಗಳೊಂದಿಗೆ ಕೂಡುತ್ತವೆ.ಸರಳವಾಗಿ ಹೇಳಬೇಕೆಂದರೆ ಲೈಂಗಿಕ ಕ್ರಿಯೆಗಳಲ್ಲಿ ಅವು ಏಕ ಪತಿ ಅಥವಾ ಏಕ ಪತ್ನಿವ್ರತಸ್ತರಾಗಿರೋದಿಲ್ಲ. ಆದಾಗ್ಯೂ, ಹೆಣ್ಣುಗಳು ತಮ್ಮ ಮೆಚ್ಚಿನ ಒಂದು ಅಥವಾ ಎರಡು ಗಂಡುಗಳೊಂದಿಗೆ ಮಾತ್ರ ಸಂಗಾತಿಯಾಗುತ್ತವೆ.

ಸಿಂಹಗಳು ಸಾಮಾನ್ಯವಾಗಿ ಸೆರೆಯಲ್ಲಿ ಪ್ರತಿ ವರ್ಷ ಸಂತಾನೋತ್ಪತ್ತಿ ಮಾಡುತ್ತವೆಯಾದರೂ, ಕಾಡಿನಲ್ಲಿ ಅವು ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಮರಿ ಹಾಕುತ್ತವೆ. ಗರ್ಭಾವಸ್ಥೆಯ ಅವಧಿಯು ಸುಮಾರು 108 ದಿನಗಳು. ಒಮ್ಮೆಗೆ ಒಂದರಿಂದ ಆರು ಮರಿಗಳವರೆಗೆ ಜನ್ಮ ನೀಡುತ್ತವೆ. ನವಜಾತ ಮರಿಗಳು ಅಸಹಾಯಕ ಮತ್ತು ಕುರುಡಾಗಿರುತ್ತವೆ., ಹುಟ್ಟಿದ ಮರಿಗಳಲ್ಲಿ ಐವತ್ತು ಪ್ರತಿಶತ ಮರಿಗಳು ಹಲ್ಲು ನೋವಿಗೆ, ರೋಗಳಿಗೆ ಮತ್ತು ಪರಭಕ್ಷಕಗಳಿಗೆ ಬಲಿಯಾಗುತ್ತವೆ. ಸಿಂಹಗಳ ಸಾವಿಗೆ ಮತ್ತ್ತೊಂದು ಕಾರಣ ಸಿಂಹಗಳೇ.
ಸಿಂಹಗಳು ಸಾಮಾನ್ಯವಾಗಿ ಹೆಮ್ಮೆ ಎಂದು ಕರೆಯಲ್ಪಡುವ ಗುಂಪಿನಲ್ಲಿ ವಾಸಿಸುತ್ತವೆ. ಗುಂಪಿನ ಗಾತ್ರವು 4 ರಿಂದ 37 ಸದಸ್ಯರವರೆಗೆ ಇರಬಹುದು, ಆದರೆ ಸರಾಸರಿ 15 ಆಗಿರುತ್ತದೆ. ಇವು ಸಾಮಾನ್ಯವಾಗಿ ಒಟ್ಟಿಗೆ ಬೇಟೆಯಾಡಿ ಕೊಂದ ಪ್ರಾಣಿಗಕಳನ್ನು ಹಂಚಿಕೊಳ್ಳುತ್ತವೆ . ಅನೇಕ ಬಾರಿ ಒಂದು ಹೆಮ್ಮೆಯು ಹಲವಾರು ತಲೆಮಾರುಗಳ ಸಿಂಹಿಣಿಗಳನ್ನು, ಒಂದು ಅಥವಾ ಎರಡು ತಳಿ ಗಂಡು ಮರಿಗಳನ್ನು ಒಳಗೊಂಡಿರುತ್ತದೆ. ಗಂಡು ಸಿಂಹಗಳು ಹೆಮ್ಮೆಯನ್ನು ರಕ್ಷಿಸುವ ಜವಾಬ್ದಾri ಹೊರುತ್ತವೆ. ಗಂಡು ಸಿಂಹಗಳು ಬೇಟೆಗಾರರಾಗಿರುವಾಗ ಗುಂಪಿನ ಎಲ್ಲಾ ಸದಸ್ಯರಿಗೆ ಆಹಾರದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತವೆ.ಸಾಮಾನ್ಯವಾಗಿ ಗಂಡು ಸಿಂಹವೊಂದು ಹಲವಾರು ವಯಸ್ಕ ಹೆಣ್ಣು ಮತ್ತು ತನಗೆ ಹುಟ್ಟಿದ ಮರಿಗಳೊಂದಿಗೆ ವಾಸಿಸಿರುತ್ತದೆ. ಅದಕ್ಕೆ ವಯಸ್ಸಾಗಿ ಬಲಹೀನವಾದಾಗ, ಬೇರೊಂದು ಹೆಮ್ಮೆಯ ಹೊರಗಿನ ಬಲಿಷ್ಠ ಸಿಂಹ ಮುದಿ ಸಿಂಹವನ್ನು ಸೋಲಿಸಿಯೋ, ಕೊಂದೊ ಈ ಸಂಸಾರದ ಸಾರತ್ಯವಹಿಸಿಕೊಳ್ಳುತ್ತದೆ. ಈ ಹೊಸ ಯೆಜಮಾನ ಗುಂಪಿನಲ್ಲಿರುವ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮರಿಗಳನ್ನು ಕೊಲ್ಲುತ್ತಾನೆ. ಆದರೆ ಹೆಣ್ಣುಗಳು ತಮ್ಮ ಮರಿಗಳನ್ನು ಅಡಗಿಸಿ ಅಥವಾ ನೇರವಾಗಿ ರಕ್ಷಿಸುವ ಮೂಲಕ ಈ ಶಿಶುಹತ್ಯೆಯನ್ನು ತಡೆಯುತ್ತವೆ.

ಫೋಟೋ ಕೃಪೆ :ibtimes

ಕಾಡಿನಲ್ಲಿ ಸಿಂಹಗಳು 8 ರಿಂದ 10 ವರ್ಷಗಳವರೆಗೆ ಜೀವಿಸುತ್ತವೆ ; ಸೆರೆಯಲ್ಲಿ, ಬಂದನದಲ್ಲಿ ಅಂದರೆ ಮೃಗಾಲಯಗಳಲ್ಲಿ ಅವು 25 ವರ್ಷಗಳವರೆಗೆ ಬದುಕುತ್ತವೆ. ಸಿಂಹಗಳಲ್ಲಿ ಕೆಲವು ರೀತಿಯ ಪ್ರಾದೇಶಿಕ ಬಾಂಧವ್ಯವಿದೆ ಎಂದು ತೋರುತ್ತದೆ. ಏಕೆಂದರೆ ಕೆಲವು ಹೆಮ್ಮೆಗಳು ಅದೇ ಪ್ರದೇಶವನ್ನು ದಶಕಗಳವರೆಗೆ ಬಳಸುತ್ತವೆ ಮತ್ತು ನಂತರ ಆ ಪ್ರದೇಶವನ್ನು ಸಿಂಹಣಿಯರಿಗೆ ವರ್ಗಾಯಿಸುತ್ತವೆ.

ಈಗ ಗೀರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಕ್ಕೆ ಬರೋಣ.

ಪ್ರಸ್ತುತ, ಗೀರ್‌ನಲ್ಲಿ 600 ಕ್ಕೂ ಹೆಚ್ಚು ಸಿಂಹಗಳಿವೆ. ಐತಿಹಾಸಿಕವಾಗಿ ಏಷ್ಯಾಟಿಕ್ ಸಿಂಹಗಳು ಭಾರತದಲ್ಲಿ ಹೇರಳವಾಗಿದ್ದರೂ, ಪದೇ ಪದೇ ಆಢರುತ್ತಿದ್ದ ಕ್ಷಾಮಗಳು ಮತ್ತು ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತೀಯ ರಾಜರು ಮತ್ತು ಬ್ರಿಟಿಷರು ತೀವ್ರ ಬೇಟೆಯಾಡುವುದರಿಂದ 19 ನೇ ಶತಮಾನದಲ್ಲಿ ಅವುಗಳ ಸಂಖ್ಯೆಯು ಕೇವಲ 31 ಕ್ಕೆ ಕುಸಿಯಿತು. ಜುನಾಗಢದ ನವಾಬನು ಲಾರ್ಡ್ ಕರ್ಜನ್ನನ್ನು ಬೇಟೆಯಾಡಲು ಆಹ್ವಾನಿಸಿದಾಗ, ಈ ಬೇಟೆಯನಂತರ ಸಿಂಹಗಳ ಬೇಟೆಯಾಡಬಾರದು ಎಂಬ ಷರತ್ತನ್ನು ವೈಸ್ ರಾಯ್ ಕರಜನ್ ಹಾಕಿ ಒಪ್ಪಿಕೊಂಡನು. ಅಷ್ಟೇ ಅಲ್ಲ ಲಾರ್ಡ್ ಕರ್ಜನ್ ಸಿಂಹಗಳನ್ನು ಕಳುಹಿಸಿಕೊಡಬೇಕೆಂಬ ಗ್ವಾಲಿಯರ್ ಮಹಾರಾಜನ ಮನವಿಯನ್ನು ನಿರಾಕರಿಸಿದನು. ಕಾರಣ ಆ ಬೇಡಿಕೆ ಸಿಂಹಗಳನ್ನು ಸೆರೆಯಲ್ಲಿಟ್ಟು ಅಥವಾ ಬೊನಿನಲ್ಲಿಟ್ಟು ಮನರಂಜನೆ ಪಡೆಯುವುದು ಈ ಬೇಡಿಕೆಯ ಉದ್ದೇಶವಾಗಿತ್ತು. ಏಷ್ಯಾಟಿಕ್ ಸಿಂಹಗಳನ್ನು ಸಂರಕ್ಷಿಸುವ ಮೊದಲ ಪ್ರಮುಖ ಪ್ರಯತ್ನ ಲಾರ್ಡ್ ಕರ್ಝನ್ಗೆ ಸಲ್ಲಬೇಕು.

ಗೀರ್ ಸಿಂಹಗಳ ಮರಣಕ್ಕೆ ಕಾರಣಗಳನ್ನು ಹುಡುಕಲು ಹೊರಟರೆ ಅತೀ ದೊಡ್ಡ ಕಾರಣವೆಂದರೆ ರೋಗಗಳು. ಶೇಕಡಾ 30 ಸಿಂಹಗಳು ರೋಗಗಳಿಂದ ಬಳಲಿ ಸಾಯುತ್ತವೆ. ಇನ್ನುಳಿದ ಸಿಂಹಗಳು ನೈಸರ್ಗಿಕ ಕಾರಣಗಳಿಗೆ ಅಂದರೆ ಬರಗಾಲ, ಆಹಾರ ಕೊರತೆ, ಬೇಟೆಯಾಡುವಾಗ ಆಗುವ ಗಾಯಗಳು, ಬಲಿಷ್ಠ ಗಂಡುಗಳ ನಡುವಿನ ಹೋರಾಟ ಮುಂತಾದವು. ಇತರ ಕಾರಣಗಳೆಂದರೆ, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅರಣ್ಯದೊಳಗೆ ಅನೇಕ ರೆಸಾರ್ಟ್‌ಗಳು ಬಂದಿರುವುದರಿಂದ ಸಿಂಹಗಳಿಗೆ ಸಾಕಷ್ಟು ತೊಂದರೆಯಾಗಿದೆ.ಇದಲ್ಲದೆ, ಕೋರ್ ಏರಿಯಾದ ಹೊರಗೆ ವಾಸಿಸುವ ಮತ್ತು ಅಡಗಿಕೊಳ್ಳುವ ಸುತ್ತಮುತ್ತಲಿನ ಹುಲ್ಲುಗಾವಲುಗಳು ವೇಗವಾಗಿ ಕಣ್ಮರೆಯಾಗುತ್ತಿರುವುದೂ ಸಿಂಹಗಳು ಹಗಲು ವಿಶ್ರಮಸಿಕೊಳ್ಳಲು ಜಾಗವಿಲ್ಲದಂತೆ ಮಾಡಿವೆ. ಗ್ರಾಮಸ್ಥರು ಅಕ್ರಮವಾಗಿ ಎಳೆದ ವಿದ್ಯುತ್ ತಂತಿಗಳ ಸ್ಪರ್ಶಕ್ಕೆ ಬರುವುದು, ನೀರು ಕುಡಿಯಲು ಪ್ರಯತ್ನಿಸುವಾಗ ತೆರೆದ ಬಾವಿಗಳಲ್ಲಿ ಬೀಳುವುದು ಸಿಂಹಗಳ ಮರಣಕ್ಕೆ ಇತರೆ ಕಾರಣಗಳು.

ಫೋಟೋ ಕೃಪೆ : The wire

ಈ ಗೀರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯ ಕೇವಲ 259 ಚ.ಕಿ.ಮೀ.ಗಳಷ್ಟು ಹರಡಿದೆ. ಇ ಅಭಾಯಾರಣ್ಯವನ್ನು ಮಾನವ ವಾಸವಿಲ್ಲದ ಮತ್ತು ಉಚಿತ ಶ್ರೇಣಿಯ ಸಿಂಹಗಳಿಗೆ ಮಾತ್ರ ಮೀಸಲಾಗಿರಸಲಾಗಿದೆ. .ಇನ್ನುಳಿದ ಕೋರ್ ಪ್ರದೇಶ ಅಂದರೆ ಇದರ ಸುತ್ತಲಿನ ಸುಮಾರು -13000 ಚ.ಕಿ.ಮೀ.ಗಳ ರಾಷ್ಟ್ರೀಯ ಉದ್ಯಾನವನದಲ್ಲಿ ಮನುಷ್ಯರು ಮತ್ತು ಸಿಂಹಗಳು ಸಹಬಾಳ್ವೆ ನಡೆಸುತ್ತಿದ್ದಾರೆ.

ಇವುಗಳ ಸಾಮಾಜಿಕ ಜೀವನದ ಬಗ್ಗೆ ಇತ್ತೀಚೆಗೆ ಅಧ್ಯಯನ ಮಾಡಲಾಗಿದೆ. ಅವುಗಳ ಹೆಮ್ಮೆಗಳು ಹೆಣ್ಣು ಮತ್ತು ಅವುಗಳ ಅವಲಂಬಿತ ಮರಿಗಳನ್ನು ಮಾತ್ರ ಒಳಗೊಂಡಿರುತ್ತವೆ ಎಂದು ವರದಿಯಾಗಿದೆ, ಆoದರೆ ವಯಸ್ಕ ಪುರುಷ ಸಿಂಹಗಳು ಒಂಟಿಯಾಗಿರುತ್ತವೆ ಅಥವಾ ಕೇವಲ ಯುವ ಪುರುಷ ಸಿಂಹಗಳ ಗುಂಪುಗಳಾಗಿರುತ್ತವೆ

ಇಲ್ಲಿ ಹೆಣ್ಣು ಹೆಮ್ಮೆಗಳು ಪ್ರಾದೇಶಿಕವಾಗಿದ್ದು, ಅವು ಒಂದೇ ಪ್ರದೇಶದಲ್ಲಿ ಹಲವಾರು ವರ್ಷಗಳವರೆಗೆ ಬದುಕು ಉಳಿಯುತ್ತವೆ. ಪುರುಷ ಹೆಮ್ಮೆಗಳು ಸ್ತ್ರೀ ಹೆಮ್ಮೆಗಳ ವ್ಯಾಪ್ತಿ ಪ್ರದೇಶದೊಳಗೆ ಚಲಿಸುತ್ತವೆ. ಪುರುಷ ಸಿಂಹಗಳು ಸಾಮಾಜಿಕ ಕ್ರಮಾನುಗತವನ್ನು ಪ್ರದರ್ಶಿಸುತ್ತವೆ. ಈ ಕ್ರಮಅಂಕದ ಮೊದಲನೇ ಸಿಂಹಕ್ಕೆ ಹೆಣ್ಣು, ಪ್ರದೇಶದ ಸ್ವಾಮಿತ್ವ ಮತ್ತು ಆಹಾರಗಳಿಗೆ ಪ್ರಪ್ರಥಮ ಸ್ಥಾನ

ಏಷ್ಯಾಟಿಕ್ ಸಿಂಹಗಳ ಕುರಿತಾದ ಸಂಶೋಧನೆಯು 1960 ರ ಕೊನೆಯಲ್ಲಿ ಪ್ರಾರಂಭವಾಗಿ. 2018 ರವರೆಗೆ ಮುಂದುವರೆಯಿತು. ಈ ಸಂಶೋಧನೆ ಭಾರತದಲ್ಲಿ ಅತಿ ದೀರ್ಘ ಕಾಲದ ಪರಿಸರ ಯೋಜನೆ ಎಂದು ಪರಿಗಣಿಸಲಾಗಿದೆ. ಗುಜರಾತ್ ಅರಣ್ಯ ಇಲಾಖೆಯ ಸುಧಾರಿತ ಮತ್ತು ರಕ್ಷಣಾತ್ಮಕ ಕ್ರಮಗಳ ಪರಿಣಾಮವಾಗಿ ಸಿಂಹಗಳ ಸಂಖ್ಯೆಯು 1965 ರ ವೇಳೆಗೆ 287 ಕ್ಕೆ, 2015 ರ ವೇಳೆಗೆ 500 ಕ್ಕೆ ಮತ್ತು 2022 ರ ವೇಳೆಗೆ ಸುಮಾರು 730 ಕ್ಕೆ ಸ್ಥಿರವಾಗಿ ಏರಿಕೆಯಾಗಿದೆ. ಇoದು ಗಿರ್ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಅಭಯಾರಣ್ಯದೊಳಗೆ 300 ವಯಸ್ಕ ಸಿಂಹಗಳನ್ನು ಮತ್ತು ಸುತ್ತಮುತ್ತಲಿನ ಅಗ್ರೋಪಾಸ್ಟೊರಲ್, ಮಾನವ ಪ್ರಾಬಲ್ಯದ ಭೂಪ್ರದೇಶಗಳಲ್ಲಿ ಪ್ರತಿಯೊಂದರಲ್ಲೂ 50 ಕ್ಕಿಂತ ಹೆಚ್ಚು ಸಿಂಹಗಳ ಹಲವಾರು ಗುಂಪುಗಳನ್ನ ಒಳಗೊಂಡಿದೆ.

ಗುಜರಾತ್‌ನಲ್ಲಿ ಮಾನವ ಜನಸಂಖ್ಯೆಯ ಬೆಳವಣಿಗೆಯ ದರ 19.2 % ಇದಕ್ಕೆ ಹೋಲಿಸಿದರೆ, ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯದಲ್ಲಿನ ಸಿಂಹಗಳು ಕಳೆದ ಇಪ್ಪತ್ತು ವರ್ಷಗಳಲ್ಲಿ 126% ರಷ್ಟು ಬೆಳೆದಿವೆ.

ಫೋಟೋ ಕೃಪೆ : google

ಸಿಂಹಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುವ ಪ್ರಮುಖ ಅಂಶವೆಂದರೆ ಸಾಕಷ್ಟು ಆಹಾರ ಪ್ರಾಣಿಗಳ ಲಭ್ಯತೆ. 1970 ರ ಮೊದಲು ಗಿರ್‌ನಲ್ಲಿ ಸಿಂಹಗಳ ಮುಖ್ಯ ಆಹಾರವೆಂದರೆ ಕಾಡಿನಲ್ಲಿದ್ದ ಸಸ್ಯಾಹಾರಿಗಳಾದ ಜಿಂಕೆ, ಕಣವೆ, ಕೃಷ್ಣ ಮೃಗ, ಮುಳ್ಳುಹಂದಿಗಳೇ ಮುಂತಾದವು. ಆದರೆ ಇವುಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಸಿಂಹಗಳು ಜಾನುವಾರುಗಳನ್ನು ಕೊಲ್ಲುತ್ತಿದ್ದವು. ಆದರೆ ನಂತರದ ವರ್ಷಗಳಲ್ಲಿ ಸುಧಾರಿತ ಹುಲ್ಲುಗಾವಾಲುಗಳ ಬೆಳವಣಿಗೆಯಿಂದ ಸಿಂಹಗಳ ಆವಾಸಸ್ಥಾನ ಸುಧಾರಿಸಿದಲ್ಲದೆ ಅರಣ್ಯ ಸಸ್ಯಹಾರಿಗಳು ಸಿಂಹಗಳ ಪ್ರಮುಖ ಆಹಾರವಾದವು, ಇವು ಸಿಂಹಗಳ 76.4% ಆಹಾರದ ಅಗತ್ಯಗಳನ್ನು ಪೂರೈಸುತ್ತವೆ. ಜಾನುವಾರುಗಳು ಸಿಂಹದ ಆಹಾರದಲ್ಲಿ 25 ರಿಂದ 42% ರಷ್ಟು ಕೊಡುಗೆ ನೀಡುತ್ತವೆ. ಅದರಲ್ಲಿ ಕೇವಲ 16% ಬೇಟೆಯಿಂದ ಮತ್ತು ಉಳಿದವುಗಳನ್ನು ಬೇರೆ ಪ್ರಾಣಿಗಳಿಂದ ಕಸಿದುಕೊಳ್ಳವುದರಿಂದ ಲಭ್ಯ ಮಾಡಿಕೊಳ್ಳುತ್ತವೆ. ವಾರ್ಷಿಕವಾಗಿ 3000-4000 ಜಾನುವಾರುಗಳು ಸಿಂಹಗಳ ಬಾಯಿಗೆ ತುತ್ತಾಗುತ್ತವೆ. ಆಹಾರದ ಮಾದರಿಗಳು ಕಾಲೋಚಿತವಾಗಿದ್ದು, ಬೇಸಿಗೆಯಲ್ಲಿ ಜಾನುವಾರುಗಳಾದರೇ ಇತರ ಋತುಗಳಲ್ಲಿ ಕಾಡು ಸಸ್ಯಾಹಾರಿಗಳು ಜಲ ಮೂಲಗಳಿಗೆ ನೀರು ಕುಡಿಯಲು ಬಂದಾಗ ಬೇಟೆಗೆ ಬಲಿಯಾಗುತ್ತವೆ.

ಗಿರ್‌ನಲ್ಲಿ ಸಿಂಹಗಳನ್ನು ಸಂರಕ್ಷಿಸಲು, ಅರಣ್ಯ ಇಲಾಖೆಯು 800 ಅರಣ್ಯ ಸಿಬ್ಬಂದಿ ಮತ್ತು 175 ಟ್ರ್ಯಾಕರ್‌ಗಳನ್ನು ಒಳಗೊಂಡಂತೆ ಮೀಸಲಾದ ನೌಕರರನ್ನು ಹೊಂದಿದೆ. ಟ್ರ್ಯಾಕರ್‌ಗಳನ್ನು ಉಪಯೋಗಿಸಿ ವಿವಿಧ ಹೆಮ್ಮೆಗಳು, ಅವುಗಳ ಚಟುವಟಿಕೆಗಳು, ಮರಿಗಳ ಜನನ, ಅವುಗಳ ಉಳಿವು ಮತ್ತು ಸಿಂಹಗಳ ಸಾವಿನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ರೀತಿಯ ಕಣ್ಗಾವಲು ದಿನವಿಡೀ ಹರಡಿರುತ್ತದೆ.ಒಂದು ತುಂಬಾ ಅಪರೂಪದ ವಿಷಯವೆಂದರೆ ಗೀರ್ನಲ್ಲಿ ಸಿಂಹಗಳ ಬಗ್ಗೆ ಮಾಹಿತು ಸಂಗ್ರಹಿಸಲು ಸ್ತ್ರೀ ಫಾರೆಸ್ಟ್ ಗಾರ್ಡ್ಗಳನ್ನು ನೇಮಿಸಿರುವುದು.

ಹೆಚ್ಚುವರಿ ಸಿಂಹದ ಸಂಖ್ಯೆಗಳನ್ನು ನಿರ್ವಹಿಸಲು ಗಿರ್ ಸಂರಕ್ಷಿತ ಪ್ರದೇಶದ ಆವಾಸಸ್ಥಾನದಲ್ಲಿ,, ಸುತ್ತಮುತ್ತಲಿನ ಹುಲ್ಲುಗಾವಲುಗಳಲ್ಲಿ ಮತ್ತು ಸುತ್ತಲಿನ ಕೃಷಿ ಭೂಪ್ರದೇಶದಲ್ಲಿ ಚದುರಿದಹೋಗಿ ವಾಸಿಸುವ ಸಣ್ಣ ಸಣ್ಣ ಸಿಂಹಗಳ ಗುಂಪುಗಳಿಗೆ ಪ್ರಸರಣವಾಗಲು ಕಾರಿಡಾರ್ಗಳನ್ನು ಒದಗಿಸಲಾಗಿದೆ. ಇದರೊಂದಿಗೆ ಗುಜರಾತ್ ಉಚ್ಚ ನ್ಯಾಯಾಲವು ಸಿಂಹಗಳನ್ನು ಶಾಂತಿಯಿಂದ ಬದುಕಲು ಬಿಡಬೇಕು, ಜನರು ಮತ್ತು ಸಿಂಹಗಳ ನಡುವಿನ ಸಂಘರ್ಷ್ವನ್ನು ಕಡಿಮೆ ಮಾಡಬೇಕು ಎಂದು ತೀರ್ಪು ನೀಡಿದೆ. ಹಾಗೆಯೇ ಇತರ ದೇಶಗಳು ಅಳವಡಿಸಿಕೊಂಡಿರುವ ಸಂರಕ್ಷಣಾ ಕ್ರಮಗಳನ್ನು ಅಧ್ಯಯನ ಮಾಡಿದ ನಂತರ ಈ ವಿಷಯದಲ್ಲಿ ನೀತಿಯನ್ನು ತರಲು ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಈ ರೀತಿ ನ್ಯಾಯಾಂಗವು ಸಹ ಸಿಂಹ ಸಂರಕ್ಷಣೆಯಲ್ಲಿ ಭಾಗಿಯಾಗಿದೆ..

ಇನ್ನೊಂದು ಅತಿ ಮುಖ್ಯ ವಿಶೇಷ ಸಂಗತಿ ಎಂದರೆ ಗೀರ್ ಅರಣ್ಯದಲ್ಲಿ ಇನ್ನೂರು ವರ್ಷಗಳಿಂದ ಮಾಲ್ಧಾರಿಗಲಳೆoಬಾ ಅಲೆಮಾರಿ ಜನಾಂಗ ವಾಸಿಸುತ್ತಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಸಿಂಹಗಳೊಂದಿಗೆ ಪರಸ್ಪರ ಲಾಭವಾಗುವಂತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಅವರು ಸಸ್ಯಾಹಾರಿಗಳು, ಅವರ ಜೀವನೋಪಾಯವು ದನಗಳನ್ನು ಸಾಕುವುದು ಮತ್ತು ಸರ್ಕಾರದಿಂದ ಅನುಮತಿಸಲಾದ ಅರಣ್ಯ ಸಂಪನ್ಮೂಲಗಳನ್ನು ಸಂಗ್ರಹಿಸುವುದು. ಉಚಿತವಾಗಿ ಮೇಯಿಸುವ ಹಕ್ಕುಗಳು, ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮತ್ತು ಸಿಂಹಗಳಿಗೆ ತುತ್ತಾದ ಜಾನುವಾರುಗಳಿಗೆ ಸೂಕ್ತ ಪರಿಹಾರ ಪಡೆಯುವುದರಿಂದ , ಮಾಲ್ಧಾರಿಗಳು ಸಿಂಹಗಳಿಗೆ ತೊಂದರೆ ನೀಡುವುದಿಲ್ಲ. ಮತ್ತೊಂದೆಡೆ, ಮಾಲ್ಧಾರಿಗಳು ಸಾಕಿರುವ ಜಾನುವಾರುಗಳಿಂದ ಸಿಂಹಗಳು ಗಣನೀಯ ಪ್ರಮಾಣದ ಆಹಾರವನ್ನು ಪಡೆಯುತ್ತವೆ. ಸಿಂಹಗಳಿಗೆ ಹೆಚ್ಚುವರಿ ಮೂಲ ಆಹಾರವು ಮಾಲ್ಧಾರಿಗಳು ಎಸೆಯಲ್ಪಟ್ಟ ಸತ್ತ ಜಾನುವಾರುಗಳಿಂದಲೂ ಬರುತ್ತದೆ.

ಫೋಟೋ ಕೃಪೆ : brandsynario

ಈ ಕಾಡಿನಲ್ಲಿ ವಾಸಿಸುವ ದನಗಾಹಿಗಳು ಸಿಂಹಗಳನ್ನು ಬೇಟೆಯಾಡುವುದಿಲ್ಲ ಅಥವಾ ಕೊಲ್ಲುವುದಿಲ್ಲ ಆದರೆ ಪ್ರಕೃತಿ ಮತ್ತು ಸಿಂಹಗಳನ್ನು ಗೌರವಿಸುತ್ತಾರೆ. ಸಿಂಹಗಳೊಂದಿಗೆ ಮುಖಾಮುಖಿಯಾಗುವುದನ್ನು ಸಂಪೂರ್ಣವಾಗಿ ತಪ್ಪಿಸುತ್ತಾರೆ. ಇದು ಮಾನವರು ಮತ್ತು ಭಾರಿ ಗಾತ್ರದ ಮಾಂಸಾಹಾರಿ ಪ್ರಾಣಿಗಳು ಪರಸ್ಪರ ಪ್ರಯೋಜನದೊಂದಿಗೆ ಹಬಾಳ್ವೆಯನ್ನು ನಡೆಸುತ್ತಿರುವ ಒಂದು ವಿಶಿಷ್ಟ ಪ್ರಕರಣವಾಗಿದೆ. ಹೀಗೆ ಮಾಲ್ಧಾರಿಗಳು ಮತ್ತು ಸಿಂಹಗಳ ನಡುವಿನ ಸಂಬಂಧವು ಸಾಂಸ್ಕೃತಿಕ ಆಚರಣೆಗಳ ಸೂಕ್ಷ್ಮ ಸಮತೋಲನ, ಕಾನೂನುಗಳ ತೀವ್ರ ಜಾರಿಕೆ , ಕೊಲ್ಲಲ್ಪಟ್ಟ ಜಾನುವಾರುಗಳಿಗೆ ಸಾಕಷ್ಟು ಹಣದ ಪರಿಹಾರ ಮತ್ತು ಸಿಂಹಗಳ ಬಗ್ಗೆ ಈ ಬುಡಕಟ್ಟಿನ ಅಂತರ್ಗತ ಸಹಿಷ್ಣುತೆ ಮತ್ತು ಗೌರವದಿಂದ ನಿರ್ವಹಿಸಲ್ಪಡುತ್ತದೆ.
ಗಿರ್ ಸಿಂಹಗಳ ಸಂಖ್ಯೆಯ ಮೇಲ್ಮುಖ ಪ್ರವೃತ್ತಿಗೆ ಪ್ರಮುಖ ಅಂಶವೆಂದರೆ ಜನರ ವರ್ತನೆ. ಗಿರ್ ಮತ್ತು ಸುತ್ತಮುತ್ತಲಿನ ಜನರು ಸಿಂಹಗಳನ್ನು ಹೆಚ್ಚು ಸಹಿಸಿಕೊಳ್ಳುತ್ತಾರೆ, ಅವರು ಈ ಉಗ್ರ ಮಾಂಸಾಹಾರಿಗಳಿಗೆ ಹೆದರುವುದಿಲ್ಲ ಮತ್ತು ಅವುಗಳನ್ನು ಅನಗತ್ಯವಾಗಿ ಪ್ರಚೋದಿಸುವುದಿಲ್ಲ. ಸಿಂಹಗಳು ಮತ್ತು ಜನರ ನಡುವೆ ಪರಸ್ಪರ ಗೌರವವಿದೆ. ಗ್ರಾಮಸ್ಥರ ಸಹಾನುಭೂತಿ ಎಷ್ಟು ಎಂದರೆ, ಬೇಸಿಗೆಯಲ್ಲಿ ರಾತ್ರಿಯಲ್ಲಿ ಸಿಂಹಗಳು ಬಾವಿಗೆ ಬಿದ್ದಾಗ ತಕ್ಷಣ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡುವುದಲ್ಲದೆ, ತಜ್ಞರು ಬರುವಷ್ಟರಲ್ಲಿ ಗ್ರಾಮಸ್ಥರು ಹಗ್ಗ ಮತ್ತು ಇತರ ಸಹಾಯ ಸಾಮಗ್ರಿಗಳೊಂದಿಗೆ ಸಿಂಹಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ.

ಮನುಷ್ಯರೊಂದಿಗಿನ ಸಂಘರ್ಷಕ್ಕೆ ಸಂಬಂಧಿಸಿದಂತೆ, ಸಿಂಹವು ಸಮಸ್ಯಾತ್ಮಕ ಪ್ರಾಣಿಯೇ ಅಲ್ಲ; ಚಿರತೆ ಮತ್ತು ಮೊಸಳೆಗಳು ಸಿಂಹಗಳಿಗಿಂತ ಹೆಚ್ಚು ಜನರನ್ನು ಕೊಲ್ಲುತ್ತವೆ. ಆಕಸ್ಮಿಕ ಎದರು ಬದರಾದಾಗ, ತಪ್ಪಾಗಿ ಗುರುತು ಹಿಡಿಯುವಿಕೆ ಮತ್ತು ಸಿಂಹಗಳಿಂದ ದನಗಳನ್ನು ರಕ್ಷಿಸುವ ಸಮಯದಲ್ಲಿ ಮನುಷ್ಯರ ಸಾವುಗಳು ಸಂಭವಿಸುತ್ತವೆ. 2007 ಮತ್ತು 2017 ರ ನಡುವೆ ಸಿಂಹಗಳಿಂದ ಮನುಷ್ಯರ ಮೇಲೆ ನಲವತ್ತು ದಾಳಿಗಳು ವರದಿಯಾಗಿದ್ದು, ಸಾವಿನ ಪ್ರಮಾಣವು ವರ್ಷಕ್ಕೆ ಕೇವಲ 1.3 ಮಾನವರು ಸಿಂಹಗಳು ಗಿರ್‌ನಲ್ಲಿ ಎರಡು ಪ್ರಮುಖ ಆರ್ಥಿಕ ಪ್ರಯೋಜನಗಳನ್ನು ನೀಡುತ್ತವೆ ಅವುಗಳೆಂದರೆ (1) ಮೊದಲನೆಯದಾಗಿ ಕಾಡು ಸಸ್ಯಾಹಾರಿಗಳಾದ ನೀಲಗಾಯ್ ಮತ್ತು ಮುಳ್ಳುಹಂದಿಗಳ ಮೇಲೆ ಅವುಗಳ ಬೇಟೆಯು ಕೃಷಿ ಬೆಳೆಗಳಿಗೆ ಗಣನೀಯ ಹಾನಿಯನ್ನು ಕಡಿಮೆ ಮಾಡುತ್ತದೆ (2) ಎರಡನೆ ಮೊದಲನೆಯದಾಗಿಯದಾಗಿ ಸಿಂಹಗಳು ಪ್ರವಾಸೋದ್ಯಮವನ್ನು ಹೆಚ್ಚಿಸಿವೆ. ಏಕೆಂದರೆ ಭಾರಿ ಶುಲ್ಕದಲ್ಲಿ ಆಯೋಜಿಸಲಾಗಿ “ಲಯನ್ ಶೋಗಳು ಮೊದಲನೆಯದಾಗಿ ಖಾಸಗಿ ಭೂಮಿಯಲ್ಲಿ ಸತ್ತ ಜಾನುವರುಗಳನಿಟ್ಟು ಸಿಂಹಗಳನ್ನು ಆಕಕರ್ಷಸಲಾಗುತ್ತದೆ..ಹೀಗೆ ಬಂದ ಸಿಂಹಗಗಳನ್ನು ಪ್ರವಾಸಿಗರು ಹತ್ತಿರದಿಂದ ವೀಕ್ಷಿಸುತ್ತಾರೆ ಮತ್ತು ಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಮಾನವ ಸಾಮೀಪ್ಯವು ಸಿಂಹಗಳ ಮೇಲೆ ಅಡ್ಡ ಪರಿಣಾಮ ಬೀರುತ್ತೆoದು ಗುಜರಾತ್ ಸರ್ಕಾರವು “ಲಯನ್ ಶೋಗಳನ್ನು” ನಿಗ್ರಹಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಹೆಚ್ಚಿನ ಸಂಖ್ಯೆಯ ಸಿಂಹಗಳು ಗೀರ್ನಲ್ಲಿ ಸಮಸ್ಯೆಯಾಗಿದೆ. ಇಂದು ಗಿರ್‌ನಲ್ಲಿ 694 ಸಿಂಹಗಳಿವೆ. ಇದು ಅಭಯಾರಣ್ಯದ ಹೊರುವ ಸಾಮರ್ಥ್ಯವನ್ನು ಮೀರಿದೆ. ಅಭಯಾರಣ್ಯವು ಗರಿಷ್ಠ 300 ಸಿಂಹಗಳನ್ನು ಮಾತ್ರ ಬೆಂಬಲಿಸುತ್ತದೆ. ಇದರ ಪರಿಣಾಮವಾಗಿ ಹೆಚ್ಚುವರಿ ಸಿಂಹಗಳು ಸುತ್ತಮುತ್ತಲಿನ ಹುಲ್ಲುಗಾವಲುಗಳಿಗೆ ತಳ್ಳಲ್ ಪಡುತ್ತವೆ. ಕೆಲವಂತೂ ಕೋರ್ ಪ್ರದೇಶದಿಂದ 150 ಕಿಮೀ ದೂರದಲ್ಲಿ ವಾಸಿಸುತ್ತಿವೆಯೆಂದು ತಿಳಿದುಬಂದಿದೆ. ಗಿರ್‌ನ ಸೀಮಿತ ಪ್ರದೇಶದಲ್ಲಿ ಸಿಂಹಗಳ ಹೆಚ್ಚಿನ ಸಂಖ್ಯೆಯಿಂದ ಸಂತಾನೋತ್ಪತ್ತಿಯು ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಯಿತು. ಕಡಿಮೆ ರೋಗನಿರೋಧಕ ಶಕ್ತಿ, ಹಲ್ಲಿನ ಆಸಹಜತೆಗಳು ಮತ್ತು , ಕಡಿಮೆಯಾದ ಹೆಟೆರೋಜೈಗೋಸಿಟಿಯು (Heterozygocity) ಸಂತಾನೋತ್ಪತ್ತಿಯ ಚೈತನ್ಯವನ್ನು ಕಡಿಮೆ ಮಾಡುತ್ತದೆ.

ಫೋಟೋ ಕೃಪೆ : economictimes

ಪರಿಸರ ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ಅದನ್ನು ಹೆಚ್ಚು ಸುಸ್ಥಿರಗೊಳಿಸಲು ಹತ್ತು ಸಿಂಹಗಳನ್ನು ಚಂದ್ರಪ್ರಭ ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಈ ಸಿಂಹಗಳು ಆವಾಸಸ್ಥಾನದ ಗುಣಮಟ್ಟ ಅಥವಾ ಸ್ಥಳೀಯರ ಅಸಹಕಾರ ಮತ್ತು ದ್ವೇಷ ಮನೋಭಾವದಿಂದ ಅಥವಾ ಎರಡರಿಂದಲೂ ಹೊಸ ಪರಿಸರದಲ್ಲಿ ಬದುಕುಳಿಯಲಿಲ್ಲ. ಏಷಿಯಾಟಿಕ್ ಸಿಂಹದ ಜನಸಂಖ್ಯೆಯು ಹೆಚ್ಚಾಗುತ್ತಿದ್ದಂತೆ, ಭಾರತದ ಸರ್ವೋಚ್ಚ ನ್ಯಾಯಾಲಯವು 2013 ರಲ್ಲಿ ಕೆಲವು ಸಿಂಹಗಳನ್ನು ಕುನೋ-ಪಾಲ್ಪುರ್ ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಗುಜರಾತ್ ರಾಜ್ಯ ಸರ್ಕಾರವನ್ನು ಕೇಳಿತು. ಕಾಡ್ಗಿಚ್ಚು, ಸಾಂಕ್ರಾಮಿಕ ರೋಗಗಳು, ಅಂತಃಕಲಹ, ಸಂತಾನಾಭಿವೃದ್ಧಿ ಇತ್ಯಾದಿಗಳಿಂದಾಗಿ ಗಿರ್ ಜನಸಂಖ್ಯೆಯನ್ನು ಸಂಭಾವ್ಯ ಅಳಿವಿನಿಂದ ರಕ್ಷಿಸುವ ಉದ್ದೇಶವನ್ನು ಈ ಪ್ರಸ್ತಾವನೆಯು ಹೊಂದಿತ್ತು. ಆದಾಗ್ಯೂ, ಗುಜರಾತ್ ಸರ್ಕಾರವು ಸಿಂಹಗಳನ್ನು ಸ್ಥಳಾಂತರಿಸುವ ಕಲ್ಪನೆಯನ್ನು ತಿರಸ್ಕರಿಸಿತು ಮತ್ತು ಗಿರ್‌ನಲ್ಲಿ “ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂದು ಭರವಸೆ ಕೊಟ್ಟಿತ್ತು.

ಸಿಂಹಕ್ಕೆ ಬದಲು ಹುಲಿಯನ್ನು ಪರ್ಯಾಯವಾಗಿ ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಲಾದ ನಂತರ, ಗುಜರಾತ್ ಸರ್ಕಾರವು ಸಿಂಹವನ್ನು ರಾಜ್ಯ ಪ್ರಾಣಿ ಎಂದು ಘೋಷಿಸಿ ಅದನ್ನು ಗುಜರಾತ್ ರಾಜ್ಯದ ಪ್ರತಿಷ್ಟಿತ ಸಂಕೇತವನ್ನಾಗಿಸಿದೆ. ಗುಜರಾತಿನ ಜನರು ಈ ಅಪ್ರತಿಮ ಸ್ಥಾನಮಾನದ ಬಗ್ಗೆ ಹೆಮ್ಮೆಪಡುತ್ತಾರೆ. ಈ ಭಾವೋದ್ರಿಕ್ತ ಗುರುತಿಸುವಿಕೆ ಸಂರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸಿದೆ ಎಂಬುದರಲ್ಲಿ ಸಂದೇಹವಿಲ್ಲ, ಈ ಉತ್ಸಾಹದ ತೀವ್ರ ಮಟ್ಟದಲ್ಲಿ, ಗುಜರಾತ್ ಸರ್ಕಾರವು ಮಧ್ಯಪ್ರದೇಶದಲ್ಲಿ ಏಷ್ಯಾಟಿಕ್ ಸಿಂಹಗಳಿಗೆ ಎರಡನೇ ಅಭಯಾರಣ್ಯವನ್ನು ಸ್ಥಾಪಿಸಲು ಸಂಸ್ಥಾಪಕ ಸಿಂಹಗಳ ಸಂಗ್ರಹವನ್ನು ಒದಗಿಸಲು ಹಿಂಜರಿಯುತ್ತಿದೆ. ಏಷ್ಯಾಟಿಕ್ ಸಿಂಹಗಳು ಕೇವಲ ಗುಜರಾತಿನ ಆಸ್ತಿಯಾಗಬೇಕೆಂಬುದು ಈ ರಾಜ್ಯದ ಹಾಗೂ ಜನಗಳ ಆಸೆ. ಹೀಗಾಗಿ ನ್ಯಾಯಾಲಯ ತೀರ್ಪಿನ ಅನುಷ್ಠಾನವು ಇನ್ನೂ ಬಾಕಿ ಉಳಿದಿದೆ ಈ ನಿರ್ದಾರವು ಗುಜರಾತ್, ಮಧ್ಯಪ್ರದೇಶದ ಅರಣ್ಯ ಇಲಾಖೆಗಳು ಮತ್ತು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯದ ನಡುವೆ ಅಂತ್ಯವಿಲ್ಲದ ಚರ್ಚೆಯಲ್ಲಿ ಮುಳುಗಿದೆ. ಬದಲಾಗಿ ಗುಜರಾತ್ ಸರ್ಕಾರವು ರಾಜ್ಯದ ಜಾಮ್‌ನಗರ ಬಳಿ ಸಿಂಹದ ಪರಿಚಿತ ಜೀವವೈವಿಧ್ಯದೊಂದಿಗೆ ಸೂಕ್ತವಾದ ಆವಾಸಸ್ಥಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಏಶಿಯಾದ ಸಿಂಹಗಳ ಸಂಖ್ಯೆ ಕೇವಲ 700 ರ ಆಸುಪಾಸಿನಲ್ಲಿ. ಅಕಸ್ಮಾತ್ ಗೀರ್ ಅಭಯರಣ್ಯ ಧಾಮದಲ್ಲಿ ರೋಗ ಹರಡಿಯೋ, ಬೆಂಕಿ ಬಿದ್ದು ಅವುಗಳು ಅಳಿದುಹೋದರೆ ಅದಕ್ಕೆ ನಾವೇ, ಭಾರತೀಯರೇ ಜವಾಬ್ದಾರರು. ಆದಾಗಬಾರದೆಂದರೆ ಇನ್ನೊಂದು ಸಿಂಹಗಳ ಅಭಯಾರಣ್ಯ್ ಸ್ಥಾಪಿಸಲೇಬೇಕು. ವನ್ಯ ಜೀವಿ ಪ್ರೇಮಿ ಪ್ರಧಾನಿ ನರೇಂದ್ರ ಮೋದಿ ತಮ್ಮ 72ನೇ ಜನ್ಮದಿನಕ್ಕೆ, ನಮ್ಮಲ್ಲಿ ನಶಿಸಿಹೋಗಿದ್ದ ಚಿರತೆಗಳನ್ನು ಮರುವಸತಿಗೊಳಿಸಲು ಏಳು ಚಿರತೆಗಳನ್ನ ಆಫ್ರಿಕಾದಿಂದ ತರಿಸಿ ಮಧ್ಯ ಪ್ರದೇಶದ ಸೂಕ್ತ ಕಾಡುಗಳಲ್ಲಿ ಬಿಡಿಸಿದ್ದಾರೆ. ಅಂತಾಯೀ ನಮ್ಮದೇ ಆದ ಏಷ್ಯಾ ಸಿಂಹಗಳಿಗೆ ಇನ್ನೊಂದು ಅಭಯರಣ್ಯ ಕಲ್ಪಿಸಿ, ಗುಜರಾತದ ಗೀರ್ ನಿಂದ ಕೇವಲ 10 ಸಿಂಹಗಳನ್ನ ಕೊಡಿಸಿದರೆ ಅವರ ಹೆಸರು ಅಜರಾಮರವಾಗುತ್ತೆ.


  • ಡಾ .ಶಕುಂತಲಾ ಶ್ರೀಧರ್ – ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಗೌರವಾನ್ವಿತ ವಿಜ್ಞಾನಿ, ಲೇಖಕಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW