ಬ್ರಿಟಿಷ್ ನಾಟಕಕಾರ ಪೀಟರ್ ಶಾಫರ್ ಅವರ ನಾಟಕ ʼಬ್ಲಾಕ್ ಕಾಮೆಡಿʼ ಯನ್ನು ಕನ್ನಡಕ್ಕೆ ರೂಪಾಂತರಿಸಿ ರಂಗರೂಪ ನೀಡಿ ರಂಗಕ್ಕೆ ತಂದವರು ಖ್ಯಾತ ರಂಗನಿರ್ದೇಶಕರಾದ ಸುರೇಶ್ ಆನಗಳ್ಳಿ ಅವರು. ಈ ನಾಟಕ ಬೇರೆಲ್ಲ ನಾಟಕಗಳಿಗಿಂತ ತುಂಬ ವಿಭಿನ್ನಬಾಗಿರುವದು ಅದರ ʼರಿವರ್ಸ್ ಲೈಟಿಂಗ್ʼ ನಿಂದ. ಒಂದು ರೀತಿಯಲ್ಲಿ ಬೆಳಕೇ ಈ ನಾಟಕದ ಹೀರೋ. ರಂಗನಿರ್ದೇಶಕರಾದ ಕಿರಣ ಭಟ್ ಅವರು ಈ ನಾಟಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಾಟಕ : ʼಬ್ಲಾಕ್ ಕಾಮೆಡಿʼ
ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು
ನಿರ್ದೇಶನ : ಸುರೇಶ್ ಆನಗಳ್ಳಿ
ತಂಡ : ಅನೇಕ
ಮಧ್ಯಮ ವರ್ಗದ ಕನಸುಗಳು, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಅವರು ಪಡುವ ಪಡಿಪಾಟಲು, ಹೇಳುವ ಸುಳ್ಳುಗಳು ತೊಟ್ಟುಕೊಳ್ಳುವ ಮುಖವಾಡಗಳಿಗೆಲ್ಲ ಹಾಸ್ಯದ ಲೇಪ ಹಚ್ಚಿ ಎದುರಿಗಿಟ್ಟವರು ಬ್ರಿಟಿಷ್ ನಾಟಕಕಾರ ಪೀಟರ್ ಶಾಫರ್. ಅವರ ನಾಟಕ ʼಬ್ಲಾಕ್ ಕಾಮೆಡಿʼ ಯನ್ನು ಕನ್ನಡಕ್ಕೆ ರೂಪಾಂತರಿಸಿ ರಂಗರೂಪ ನೀಡಿ ರಂಗಕ್ಕೆ ತಂದವರು ಸುರೇಶ್ ಆನಗಳ್ಳಿ. ಅವರ ತಂಡ ʼಅನೇಕʼ ಕ್ಕಾಗಿ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ʼಮುಕುಲ್ʼ ಒಬ್ಬ ಯುವ ಕಲಾವಿದ.ʼಕನಿಷ್ಠಾʼ ಆತನ ಹೊಸ ಗೆಳತಿ. ಹೇಗಾದರೂ ಮಾಡಿ ಮುಕುಲ್ ನ ಕಲಾಕೃತಿಗಳನ್ನು ಮಾರಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬೇಕೆಂಬುದು ಈ ಜೋಡಿಯ ಅಸೆ. ಇವತ್ತು ಇವರ ಮನೆಗೆ ʼಮಲ್ಯʼ ಬರಲಿದ್ದಾರೆ. ಅಗರ್ಭ ಶ್ರೀಮಂತ ಕಲಾಸಂಗ್ರಹಕಾರ ಮಲ್ಯರ ಮನ ಗೆಲ್ಲಲು ತನ್ನ ಹರಕು ಮುರುಕು ಮನೆಯನ್ನು ಪಕ್ಕದ ʼಕಲಾಧರನ್ʼ ನ ಮನೆಯಿಂದ ಕದ್ದು ತಂದ ಫರ್ನಿಚರ್, ಕಲಾಕೃತಿಗಳಿಂದ ಸಿಂಗರಿಸಿದ್ದಾರೆ ಮುಕುಲ್. ಇನ್ನೇನು ಮಲ್ಯರು ಬರಲಿದ್ದಾರೆ ಎನ್ನುವಷ್ಟರಲ್ಲಿ ಕರೆಂಟ್ ಹೋಗಿ ಕತ್ತಲಾವರಿಸುತ್ತದೆ. ಕತ್ತಲ ಭಯ ತಪ್ಪಿಸಿಕೊಳ್ಳಲು ಮೇಲಿನ ಮನೆಯ ಪೂರ್ಣಿಮಾ ಕುಮಾರಿ ಇವರ ಜೊತೆಯಾಗುತ್ತಾಳೆ. ಕನಿಷ್ಠಾಳ ಅಪ್ಪ ಕರ್ನಲ್ ಕುಪ್ಪಣ್ಣನೂ ಎಂಟ್ರಿ ಕೊಡುತ್ತಾನೆ. ಎಲ್ಲ ಕತ್ತಲಲ್ಲಿ ತಡವರಿಸುತ್ತ ಒಡಾಡುತ್ತಿರುವಾಗಲೇ ಅದೆಲ್ಲೋ ಹೋಗಿದ್ದ ಕಲಾಧರನ್ ಅಚಾನಕ್ಕಾಗಿ ಇವರ ಮನೆಯನ್ನು ಹೊಕ್ಕಿಬಿಡುತ್ತಾನೆ. ನಿಜ ನಾಟಕ ಶುರುವಾಗುವದು ಆಗಲೇ. ಕಳ್ಳತನ ಮುಚ್ಚಿಕೊಳ್ಳಲು ಕಲಾಧರನ್ ನ ಮನೆಯ ವಸ್ತುಗಳನ್ನು ಕತ್ತಲೆಯಲ್ಲೇ ತಿರುಗಿ ಸಾಗಿಸಬೇಕು. ಇನ್ನು ಮಲ್ಯ ಬಂದರೆ? ಎಲ್ಲ ಕಲಸು ಮೇಲೋಗರ. ಇನ್ನಷ್ಟು ತಲೆಬಿಸಿ ಹೆಚ್ಚಿಸುವ ಹಾಗೆ ಮುಕುಲ್ ನ ಹಳೆಯ ಪ್ರೇಯಸಿ ʼವೀಣಾʼ ಇವರನ್ನ ಸೇರಿಕೊಳ್ಳುತ್ತಾಳೆ. ಕಪ್ಪು ಕತ್ತಲ ಗೋಜಲುಗಳ ಮಧ್ಯೆ ಹುಸಿ ಸಂಬಂಧಗಳು ಅನಾವರಣಗೊಳ್ಳುತ್ತ ಹೋಗುತ್ತವೆ.ಸತ್ಯದ ಬೆಳಕು ಕಾಣತೊಡಗುತ್ತದೆ.

“ನೀನು ಕತ್ತಲಲ್ಲೇ ಇರೋಕೆ ಇಷ್ಟಪಡೋನು. ಬೆಳಕಲ್ಲಿ ನಿನ್ನನ್ನು ಕಾಣೋಕೆ ಇಷ್ಟಪಡಲ್ಲ. ಯಾಕಂದ್ರೆ ಯಾರೂ ನಿನ್ನನ್ನು ಪ್ರೀತಿಸಲಾರರು ಎನ್ನೋ ಭಯ ನಿನಗೆ” ಎನ್ನುವ ಕನಿಷ್ಠಾಳ ಮಾತು ಮಧ್ಯಮ ವರ್ಗದ ಯುವ ಜೀವಗಳ ಆತಂಕವನ್ನು ಎದುರಿಗೆ ತಂದಿಡುತ್ತದೆ.
ಪೀಟರ್ ಶಾಫರ್ ನ ʼ ಬ್ಲಾಕ್ ಕಾಮಿಡಿʼ ಯನ್ನು ತುಂಬ ನಿಷ್ಠವಾಗಿ ಸುರೇಶ್ ಆನಗಳ್ಳಿ ಕನ್ನಡದ ಸಂದರ್ಭಕ್ಕೊಪ್ಪುವಂತೆ ರೂಪಾಂತರಿಸಿದ್ದಾರೆ.ತುಸು ವಿಸ್ತರಿಸಿಕೊಂಡಿದ್ದಾರೆ ಕೂಡ.ಇದಕ್ಕೆ ಮರುನಾಮಕರಣವೂ ಹುಷಾರಿತನದ್ದೇ.ಪೀಟರ್ ಶಾಫರ್ ನಿಧನರಾದಾಗ ʼ ಬ್ರಾಡ್ ವೇʼ ಥಿಯೇಟರ್ ಅವರ ಗೌರವಾರ್ಥವಾಗಿ ದೀಪಗಳನ್ನು ಅರ್ಧ ಆರಿಸಿತ್ತು. ʼಲೈಟ್ಸ್ ಆಫ್ʼ ಹೆಸರೂ ಅದಕ್ಕೆ ಅನುಗುಣವಾಗಿದೆ. ಇಂಥ ನಾಟಕಗಳ ಮಜಾ ಇರುವದೇ ಅದರ ಸಂಭಾಷಣೆಗಳ ತೀವ್ರತೆಯಲ್ಲಿ. ಆನಗಳ್ಳಿ ಸಾಕಷ್ಟು ಚುರುಕಾಗಿಯೇ ಸಂಭಾಷಣೆ ಬರೆದಿದ್ದಾರೆ. ಅಪರೂಪದ ʼಪನ್ʼ ನ ಜೊತೆಯಲ್ಲಿ ಅಲ್ಲಲ್ಲಿ ನುಸುಳುವ ಸಣ್ಣ ಪೋಲಿತನ ಕಚಗುಳಿಯಿಡುತ್ತದೆ.
ಈ ನಾಟಕ ಬೇರೆಲ್ಲ ನಾಟಕಗಳಿಗಿಂತ ತುಂಬ ವಿಭಿನ್ನಬಾಗಿರುವದು ಅದರ ʼರಿವರ್ಸ್ ಲೈಟಿಂಗ್ʼ ನಿಂದ. ಮೂಲದಲ್ಲೇ ಶಾಫರ್ ಅದನ್ನು ಹೇಳಿಬಿಟ್ಟಿದಾನೆ. ಅದು ಹೇಗೆಂದರೆ, ಕೋಣೆಯಲ್ಲಿ ಕತ್ತಲು ಆವರಿಸಿದ ಸಂದರ್ಭದಲ್ಲಿ ರಂಗದಲ್ಲೆಲ್ಲ ಪ್ರಖರ ಬೆಳಕು. ಕೋಣೆ ಬೆಳಗಿದಾಗ ರಂಗದ ತುಂಬ ಕತ್ತಲು. ಬೆಳಕಿನ ಆಕರಗಳು ಕೋಣೆಗೆ ಹೊಕ್ಕಿದವೆಂದರೆ ರಂಗದಲ್ಲಿ ಮಂದ ಬೆಳಕು. ಇದೊಂಥರಾ ʼಬೆಳಕಿನಾಟʼ. ಒಂದು ರೀತಿಯಲ್ಲಿ ಬೆಳಕೇ ಈ ನಾಟಕದ ಹೀರೋ.ಇಂಥ ಬೆಳಕಿನಾಟವನ್ನು,ಅದರ ಸಮಯ ನಿಯಂತ್ರಣವನ್ನು ಅಪೂರ್ವ ಆನಗಳ್ಳಿ ಚುರುಕಿನಿಂದ ನಿಭಾಯಿಸಿದ್ದಾರೆ.
ಇದೊಂದು ʼ ಆಂಗಿಕ ಹಾಸ್ಯʼ ದ ನಾಟಕ. ಹಾಗಾಗಿಯೇ ಇದು ʼನಟʼರ ನಾಟಕ ಕೂಡ.ಬೆಳಗಿದ ರಂಗದಲ್ಲೇ ಕತ್ತಲೆಯನ್ನು ಅನುಭವಿಸುತ್ತ, ಪರಿಕರಗಳಿಂದ ತುಂಬಿಹೋದ ರಂಗದಲ್ಲಿ,ಬೇರೆ ಬೇರೆ ಅಂತಸ್ತುಗಳನ್ನು ನಿಭಾಯಿಸುತ್ತ ಅಭಿನಯಿಸುವದು ಮುಖ್ಯವಾಗಿ ಶರೀರವನ್ನು ದುಡಿಸಿಕೊಳ್ಳುವದು ಸುಲಭದ ಮಾತಲ್ಲ.ಪ್ರತಿ ಕ್ಷಣದ ಎಚ್ಚರ ಕಾಪಿಟ್ಟುಕೊಂಡು, ತಡವರಿಸುತ್ತ, ಬೀಳುತ್ತ, ಎಳುತ್ತ ಭಾವಗಳನ್ನು ಅಭಿವ್ಯಕ್ತಿಸುವದು ನಿಜಕ್ಕೂ ಒಂದು ಸವಾಲು. ಇಂಥ ಸವಾಲನ್ನು ಎಲ್ಲ ನಟರೂ ಎದುರಿಸಿ ಗೆದ್ದಿದ್ದಾರೆ. ವಿವರವಾದ, ಹಲವು ಅಂತಸ್ತುಗಳ ರಂಗಸಜ್ಜಿಕೆ ನಾಟಕಕ್ಕೆ ಬಹು ಆಯಾಮ ಒದಗಿಸಿದೆ.
ಮುದ್ರಿತ ಸಂಗೀತ ಹಿತವಾಗಿದೆ. ನಾಟಕದಲ್ಲಿ ಬಳಸಿಕೊಂಡ ʼಮಗುವಿನ ಗಾಡಿʼ ಕವನ ನೆಪಿನಲ್ಲಿಳಿಯುತ್ತದೆ. ನಾಟಕ ಎಲ್ಲೂ ಬೇಸರ ತರಿಸುವದಿಲ್ಲವಾದರೂ ಇನ್ನೊಂದಿಷ್ಟು ಟ್ರಿಮ್ ಮಾಡಿದ್ದರೆ ಇನ್ನೂ ಮಜಾ ಬರುತ್ತಿತ್ತೇನೋ ಅನಿಸದಿರದು.
- ಕಿರಣ ಭಟ್, ಹೊನ್ನಾವರ
