ಸಚಿನ್ ತೀರ್ಥಹಳ್ಳಿ ಅವರ C/O ಚಾರ್ಮಾಡಿ ಕಾದಂಬರಿಯ ಕುರಿತು ಎನ್.ವಿ.ರಘುರಾಂ ಅವರು ಬರೆದಿರುವ ಪುಸ್ತಕ ಕಿರು ಪರಿಚಯವನ್ನು ತಪ್ಪದೆ ಮುಂದೆ ಓದಿ…
ಕಾದಂಬರಿ: C/O ಚಾರ್ಮಾಡಿ
ಸಾಹಿತಿ: ಸಚಿನ್ ತೀರ್ಥಹಳ್ಳಿ
ಪ್ರಕಾರ : ಕಾದಂಬರಿ
ಪ್ರಕಾಶನ: ಸಪ್ನ ಬುಕ್ ಹೌಸ್, ಬೆಂಗಳೂರು
ಮೊದಲ ಮುದ್ರಣ: ನವೆಂಬರ್ ೨೦೨೨
ಪುಟಗಳು: ೧೧೧
ಬೆಲೆ: ೧೧೦/-
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರವನ್ನು ದಕ್ಷಿಣ ಕನ್ನಡದ ಬೆಳ್ತಂಗಡಿಗೆ ಸೇರಿಸುವ ರಸ್ತೆಯೇ ಚಾರ್ಮಾಡಿ ಘಾಟ್. ಇದೊಂದು ಸುಂದರ ಸ್ಥಳ. ಬೆಟ್ಟ, ಗುಡ್ಡಗಳ ಸಾಲುಗಳು, ನೀರಿನ ಝರಿಗಳು, ನಿತ್ಯ ಹರಿದ್ವರ್ಣದ ಕಾಡು ಈಗಲೂ ಸ್ವಲ್ಪ ಮಟ್ಟಿಗೆ ನೋಡಲು ಸಿಗುವ ಸ್ಥಳವೇ ಈ ಚಾರ್ಮಾಡಿ ಘಾಟ್. ಬೇಸಿಗೆಯಲ್ಲಿ ಅಲ್ಲಲ್ಲಿ ಎಲೆಗಳ ಮಧ್ಯೆ ತೂರಿ ಬರುವ ಸೂರ್ಯನ ಕಿರಣಗಳ ಸಂಭ್ರಮ ಒಂದು ಕಡೆಯಾದರೆ, ಮಳೆಗಾಲದಲ್ಲಿ ಮೋಡಗಳ ಮಧ್ಯೆಯೇ ಹೋಗುವ ಅನುಭವವಾಗುತ್ತದೆ.
ಆದರೆ ಇಲ್ಲಿ ಪ್ರಯಾಣ ಮಾಡುವಾಗ ಪ್ರಕೃತಿ ಸೌಂದರ್ಯದಲ್ಲಿ ವಾಹನ ಚಾಲಕ ಮೈಮೆರವ ಹಾಗಿಲ್ಲ. ವಾಹನ ಚಾಲಕ ಬಹಳ ಕರಾರುವಕ್ಕಾಗಿ ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ಮೈಯೆಲ್ಲಾ ಕಣ್ಣಾಗಿ ವಾಹನ ಚಲಾಯಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುಟ್ಟಿ. ಅವನಿಗೆ ಮಾತ್ರವಲ್ಲ, ಅವನ ನಂಬಿ ಕೂತ ಸಹಪ್ರಯಾಣಿಕರಿಗೂ ತೊಂದರೆ. ಅದಕ್ಕೆ ಮುಖ್ಯ ಕಾರಣ ಅಲ್ಲಿರುವ ೧೨ ‘ಹೇರ್ ಪಿನ್ ಕರ್ವ್ಸ್’. ಈ ತಿರುವುಗಳಲ್ಲಿ ಜೋಪಾನವಾಗಿ ವಾಹನ ಚಲಾಯಿಸಲು ಏನಾದರೂ ಸಿದ್ದ ಸೂತ್ರಗಳು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆಗ ಎಲ್ಲರೂ ಆ ಸೂತ್ರಗಳನ್ನು ಪಾಲಿಸಿದರೆ ಯಾವುದೇ ತೊಂದರೆ ಇಲ್ಲದೇ ಊರು ಸೇರಬಹುದು. ಆದರೆ ಆ ರೀತಿಯ ಸಿದ್ದ ಸೂತ್ರಗಳಿಲ್ಲ. ಸಾಮಾನ್ಯವಾಗಿ ಪಾಲಿಸಬೇಕಾದ ಸಂಚಾರ ನಿಯಮಗಳನ್ನು ಇಲ್ಲಿ ಕೂಡ ಪಾಲಿಸಬೇಕು. ಆದರೆ ಆ ನಿಯಮಗಳನ್ನು ಓದಿಯೋ, ಬಾಯಿಪಾಠ ಮಾಡಿಯೋ ಕಲಿಯಲು ಆಗಲ್ಲ. ಹಾಗೆ ನೋಡಿದರೆ ಸರಿಯಾದ, ನೇರವಾದ ರಸ್ತೆಯಲ್ಲಿ ಕೂಡ ವಾಹನ ಚಲಾಯಿಸಲು ಕಲಿಯಬೇಕು. ಆಗ ಅದು ಕ್ರಮೇಣ ಕರಗತವಾಗುತ್ತದೆ. ಕೆಲವರು ವಾಹನ ಚಾಲನಾ ತರಬೇತಿಯ ಸಂಸ್ಥೆಗಳ ಮೂಲಕ ಒಂದಿಷ್ಟು ಕಲಿತು ಪರವಾಗಿನೆ ತೆಗೆದುಕೊಂಡರೆ, ಇನ್ನು ಕೆಲವರು ತಾವೇ ಕಲಿತು ನೇರವಾಗಿ ಪಡೆಯಲು ಪ್ರಯತ್ನ ಪಡುತ್ತಾರೆ. ಒಟ್ಟಿನಲ್ಲಿ ಪ್ರಯತ್ನ ಇಲ್ಲದೆ ಅನುಭವ ಆಗಲ್ಲ. ಅನುಭವವಿಲ್ಲದೆ ಸುರಕ್ಷಿತವಾಗಿ ಮನೆಗೆ ಸೇರಲು ಕಷ್ಟವಾಗಬಹುದು.
ಜೀವನ ಕೂಡ ಹಾಗೆ ಅಲ್ಲವೇ? ಅನೇಕ ಬಾರಿ ನೇರವಾದ ರಸ್ತೆಯಲ್ಲಿ ಆರಾಮವಾಗಿ ಸಾಗುತ್ತೇವೆ, ಕೆಲವೊಮ್ಮೆ ರಸ್ತೆ ಉಬ್ಬು ತಗ್ಗುಗಳು ಎದುರಾಗುತ್ತದೆ, ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತದೆ. ನಾವು ಜೀವನದಲ್ಲಿ ಮಾಗಿದಂತೆ ಈ ಪ್ರಯಾಣ ಅಂಥ ಪ್ರಯಾಸದಾಯಕ ಎಂದೆಣಿಸುವುದಿಲ್ಲ. ಸಂಸಾರದಲ್ಲಿ ಮುಂದೆ ಬರಲು ಅನೇಕ ಅನುಭವ ಆಧಾರಿತ ಸೂತ್ರಗಳು ಸಿಗುತ್ತವೆ. ಆದರೆ ಮದುವೆಯ ಮುನ್ನ ಬೀಳುವ ಪ್ರೀತಿಯ ಬಲೆಗೆ ಯಾವ ಅನುಭವವಿರಲು ಸಾಧ್ಯ?
ಹಾಗೆ ನೋಡಿದರೆ ಯಾವುದೇ ಸಿದ್ದ ಸೂತ್ರಗಳಿಗೆ ಬಂದಿಯಾಗಿರದೆ ಇರುವುದೆಂದರೆ ಪ್ರೀತಿ ಮಾತ್ರ. ಈ ಪ್ರೀತಿ ಹುಟ್ಟುವುದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ, ಕೆಲವೊಮ್ಮೆ ಯಾವುದೇ ಕಾರಣ ಕೂಡ ಬೇಕಾಗಿರುವುದಿಲ್ಲ. ನೋಡಿ, ಪ್ರೀತಿಗೂ ಗುಲಾಬಿಗೂ ಮೊದಲಿಂದಲೂ ಸಂಬಂಧವಿದೆ. ಈ ಪ್ರೀತಿ ಪ್ರತಿ ದಿನ ಅರಳುವ ಗುಲಾಬಿಯ ತರಹ. ಎಷ್ಟೋ ವರ್ಷಗಳಿಂದಲೂ ಗುಲಾಬಿ ಅರಳುತ್ತಿದ್ದರೂ, ಪ್ರತಿ ದಿನ ಅರಳಿದಾಗಲೂ ಅದು ಹೊಸದಾಗಿ ಕಾಣುವಂತೆ ಪ್ರೀತಿ ಕೂಡ ಅನುಭವಿಸುವ ಹೃದಯಕ್ಕೆ ಹೊಸದಾಗಿ ಕಾಣುತ್ತದೆ. ಒಂದು ಸಾರಿ ಪ್ರೀತಿಯ ಬಲೆಯಲ್ಲಿ ಬಿದ್ದ ಮೇಲೆ ಅದನ್ನು ಪಡೆಯುವ ತನಕ, ಉಳಿದೆಲ್ಲಾ ವಿಷಯಗಳು ಗೌಣವಾಗಿ ಬಿಡುತ್ತವೆ. ಆಗ ತನ್ನತನವನ್ನು ಮರೆತು ವಾಹನವನ್ನು ವೇಗವಾಗಿ ಓಡಿಸಿ ಒಂದೇ ಅಪಘಾತ ಮಾಡಕೊಳ್ಳಬಹುದು ಅಥವ ದಾರಿತಪ್ಪಿ ಇನ್ನೆಲ್ಲೋ ಹೋಗಬಹುದು. ಹಾಗಾಗಿ ಪ್ರೀತಿಯ ಬಲೆಗೆ ಬಿದ್ದ ಮೇಲೆ ಮುಂದುವರಿದು ಆಕೆಯ ಕೈ ಹಿಡಿಯಲು ಸಿದ್ಧ ಸೂತ್ರಗಳು ಇದ್ದರೆ ಎಷ್ಟು ಚೆನ್ನ ಅಲ್ಲವೇ?
ಹಾಗೆ ನೋಡಿದರೆ ಈಗ ಪ್ರೀತಿಯ ಬಲೆಗೆ ಬೀಳುವುದೇ ಮೊದಲ ಹೆಜ್ಜೆಯಲ್ಲ. ಮೊದಲು ಓಡಾಡಬೇಕು. ನಂತರ ಸ್ವಲ್ಪ ದಿವಸ ಒಟ್ಟಿಗಿದ್ದು, ಪರೀಕ್ಷೆ ಮಾಡಿ ನಂತರ ಪ್ರೀತಿಯ ವಿಷಯ. ಒಂದು ತರಹ ಗಾಡಿ ಓಡಿಸಲು ‘ಲರ್ನಿಂಗ್ ಲೈಸೆನ್ಸ್’ ತೆಗೆದುಕೊಳ್ಳುವ ತರಹ. ಈ ತರಹದ ಹುಡುಗಾಟಕ್ಕೆ ಇಟ್ಟಿರುವ ಹೆಸರು ‘ಲಿವಿಂಗ್- ಇನ್-ರಿಲೇಷೇನ್ಷಿಪ್’!
ಹೌದು! ಈ ಕಾದಂಬರಿಯೂ ಈಗಿನ ಕಾಲದ ‘ಡೇಟಿಂಗ್ ಆಪ್’ನಲ್ಲಿ ಪರಿಚಯ ಮಾಡಿಕೊಂಡು ‘ಲಿವಿಂಗ್-ಇನ್-ರಿಲೆಷೇನ್ಷಿಪ್’ ನಲ್ಲಿದ್ದ ನಾಯಕ ಹುಡುಗಿಗೆ ಕೊನೆಯ ಬಾರಿಗೆ ಟಾಟ, ಬೈ ಬೈ ಹೇಳಲು ತಯಾರಿ ನಡೆಸಿರುವ ಕಥೆಯಿಂದ ಪ್ರಾರಂಭವಾಗುತ್ತದೆ. ನಾಯಕ ಸ್ವಲ್ಪ ಮಟ್ಟಿಗೆ ಓದ್ದಾಡಿ ಬೈ, ಬೈ ಹೇಳಿದಾಗ ಆ ಹುಡುಗಿ ಅವನಿಗೆ “ವಿಶ್ ಯು ಫೈಂಡ್ ಯುವರ್ ಎಪಿಕ್ ಲವ್” ಎಂದು ಹಾರೈಸಿ ಆರಾಮಾಗಿ ಹೊರಟೇ ಹೋಗುತ್ತಾಳೆ. ಹಾಗಾಗಿ ಇದು ಪಕ್ಕಾ ಈ ಕಾಲದ ಕಥೆ ಎಂದು ತೀರ್ಮಾನ ಮಾಡುವುದು ಸಾಮಾನ್ಯ.
ಆದರೆ ಇದು ಕೇವಲ ಈ ಕಾಲದ ಕಥೆಯಲ್ಲ. ಏಕೆಂದರೆ ನಾಯಕ ಸಾಮಾನ್ಯನಲ್ಲ. ವಿದ್ಯಾವಂತ, ಒಳ್ಳೆಯ ಕೆಲಸದಲ್ಲಿ ಇರುವವನು ಕೂಡ. ಕೇವಲ ಅಷ್ಟೇ ಅಲ್ಲ, ನಾಯಕ ಹವ್ಯಾಸಿ ಕಥೆಗಾರ ಕೂಡ. ಕಥೆಗಾರರೆಂದರೆ ಭಾವನಾತ್ಮಕ ಜೀವಿಗಳು ಎಂದು ಗೊತ್ತಲ್ಲ! ಈ ಭಾವನಾತ್ಮಕ ಜೀವಿಗೂ ತನ್ನ ಕಥೆಯೊಂದು ಸಿನಿಮಾ ಮಾಡಲು ಆಯ್ಕೆಯಾದಾಗ, ಚಿತ್ರೀಕರಣದ ಜಾಗವನ್ನು ಆಯ್ಕೆಮಾಡಲು ಕಾಡಿನ ಮಧ್ಯದಲ್ಲಿ ಒಂದು ಸಣ್ಣ ಹಳ್ಳಿಯಲ್ಲಿರುವ ಪರಿಚಿತರಾದ ಕೇಶವಮೂರ್ತಿಗಳ ಮನೆಯಲ್ಲಿ ತಂಗುತ್ತಾರೆ. ಚಾರ್ಮಾಡಿ ಘಾಟ್ನಲ್ಲಿ ಅವರ ತಂಡ ಸಂಚಾರ ಮಾಡುತ್ತದೆ. ಆಗ ದಾರಿಯಲ್ಲಿ ಮಧ್ಯಾಹ್ನದ ನಿದ್ದೆಯಲ್ಲಿ ಮೈಮೆರೆತ ನಾಯಕ ತಂಡದಿಂದ ಹಿಂದೆ ಉಳಿಯುತ್ತಾನೆ. ನಂತರ ಆ ದಟ್ಟ ಕಾಡಿನಲ್ಲಿ ಸಂಜೆಯ ಸಮಯದಲ್ಲಿ ನಾಯಕನಿಗೆ ‘ಹುಡುಗಿ’ಯೊಬ್ಬಳು ಎದುರು ಬರುತ್ತಾಳೆ. ತನ್ನ ಕಥೆಯ ಪಾತ್ರವಾಗಿ ಬಂದಂತ ಹುಡುಗಿ ಎದರುಗಡೆ ಪ್ರತ್ಯಕ್ಷಳಾಗಿದ್ದಾಳೆ ಎಂದು ನಾಯಕನಿಗೆ ಅನಿಸುತ್ತದೆ! ಅವಳನ್ನು ನೋಡಿದ ತಕ್ಷಣ ‘ಜೀವನಪೂರ್ತಿ ನಾನು ಕಾಯುತ್ತಿದ್ದುದು ಇವಳಿಗಾಗೇ, ಬದುಕನ್ನು ಹಂಚಿಕೊಳ್ಳುವುದಾದರೆ ಅದು ಇವಳ ಜೊತೆ ‘ ಎಂದುಕೊಳ್ಳುತ್ತಾನೆ ನಾಯಕ. ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ ನಾಯಕನಿಗೆ ಅವರು ಉಳಿದುಕೊಂಡಿದ್ದ ಮನೆಗೆ ತಲುಪಿಸುತ್ತಾಳೆ ಆ ಹಳ್ಳಿಯ ಬೆಡಗಿ. ಆವಳ ಗುಂಗಿನಲ್ಲೇ ಇರುವಾಗ ಬೆಳಿಗ್ಗೆ ಆ ಹಳ್ಳಿಯ ಬೆಡಗಿ ‘ಫೇಡಾದ ಜಿನ್ಸು’ ಧರಿಸಿ, ಕೈಯಲ್ಲಿ ‘ಐಫೋನ್’ ಹಿಡಿದು ಬಂದಾಗ ನಾಯಕನಿಗೆ ಆಶ್ಚರ್ಯವಾಗುತ್ತದೆ. ಆಗ ಕೇಶವಮೂರ್ತಿಗಳು ತನ್ನ ಮೊಮ್ಮಗಳು ಎಂದು ಪರಿಚಯ ಮಾಡಿಕೊಡುತ್ತಾರೆ. ನಿನ್ನೆ ಸಂಜೆ ನೋಡಿದ್ದರೂ ಆಕೆಯೇನು ಪರಿಚಯದ ನಗೆ ಬೀರವುದಿಲ್ಲ. ಇವರ ಜೊತೆಗೆ ಅವಳೂ ಊರಿಗೆ ಹೊರಡುತ್ತಾಳೆ. ನಾಯಕನ ಜೊತೆ ಮಾಡುವ ಈ ಪ್ರಯಾಣ ಮುಂದುವರೆಯುತ್ತದೆಯೇ? …. ಮುಂದೆ ಏನಾಯಿತು ಎನ್ನುವುದೇ ಕಥೆ! ಅದನ್ನು ಪುಸ್ತಕದಲ್ಲಿ ಓದಿ ಆನಂದಿಸಬೇಕು.
ಹಾಗಾದರೆ ಇದೊಂದು ‘ಲವ್ ಸ್ಟೋರಿ’ ಎಂದು ನಿಶ್ಚಿತವಾಯಿತು. ಆದರೆ ಇದು ಈ ಕಾಲದ ಬೆಳಿಗ್ಗೆ ಪರಿಚಯವಾಗಿ, ಮಧ್ಯಾಹ್ನದ ಊಟಕ್ಕೆ ಜೊತೆಯಾಗಿ, ಸಂಜೆಯ ಹೊತ್ತಿಗೆ ಬೈ, ಬೈ ಹೇಳುವ ಸಾಮಾನ್ಯ ಕಥೆಯಲ್ಲ. ಚಾರ್ಮಾಡಿ ಘಾಟ್ ಕಾಡಿನ ಮಧ್ಯೆದಲ್ಲಿ ಪ್ರಾರಂಭವಾದ ಈ ‘ಲವ್ ಎಟ್ ಫಸ್ಟ್ ಸೈಟ್’ ಕಥೆ ನಂತರ ನಡೆಯುವುದು ಬೆಂಗಳೂರಿನಲ್ಲೇ. ಆದರೆ ಆ ಘಾಟಿನ ದಟ್ಟವಾದ ಛಾಯೆ ಕತೆಯುದ್ದಕ್ಕೂ ಹರಡಿದೆ. ಘಾಟಿನ ದಟ್ಟ ಅರಣ್ಯದಲ್ಲಿ ನಡೆದಾಡುವಾಗ ಸುತ್ತ ಮುತ್ತಲಿನ ಸೌಂದರ್ಯ ನೋಡಿ ಮೈಮರೆಯುವ ಕ್ಷಣಗಳ ರೀತಿ ನಾಯಕ ಆ ಹುಡುಗಿಯ ಧ್ಯಾನದಲ್ಲಿ ಮೈಮರೆಯುತ್ತಾನೆ. ಆಕೆಯಿಂದ ಆಗಾಗ ಬರುವ ಸಂದೇಶಗಳು ಬೇಸಿಗೆಯಲ್ಲಿ ಎಲೆಗಳ ಸಂದಿಯಿಂದ ತೂರಿ ಬಂದ ಬೆಳಕಿನ ಕಿರಣಗಳನ್ನು ನೆನಪಿಸಿದರೆ, ಆಕೆಯ ಬಗ್ಗೆ ಮತ್ತಷ್ಟು ತಿಳಿಯಲು ಪ್ರಯತ್ನಿಸಿ ನಿರಾಶನಾದಾಗ ಮೋಡ ಮುಸುಕಿದ ವಾತಾವರಣ ನೆನಪಾಗುತ್ತದೆ. ಮಲೆನಾಡಿನಲ್ಲಿ ಧೋ ಎಂದು ಸುರಿಯುವ ಮಳೆ ಎಲ್ಲರನ್ನೂ ಮನೆಯಲ್ಲಿ ಬಂದಿಯಾಗಿಸುವಂತೆ ಭಾವನೆಗಳ ಸುರಿಮಳೆಯಲ್ಲಿ ಬಂದಿಯಾಗಿರುವ ನಾಯಕನ ದಿನಗಳು ಕೂಡ ಇದೆ. ಮಳೆಗಾಲ ಮುಗಿದ ಮೇಲೆ, ತಿಳಿಯಾದ ನೀಲಾಕಾಶದಲ್ಲಿ ಬೆಳಕು ಮೂಡಿತೆ? ಕಥೆಯಲ್ಲೇ ಓದಿ ತಿಳಿದರೆ ಚೆನ್ನ.
ಕೇವಲ ಇಷ್ಟೇ ಆಗಿದ್ದರೆ ಇದೊಂದು ಎಲ್ಲ ನವಿರಾದ ಪ್ರೀತಿಯ ಕಥೆಗಳ ತರಹ ಇನ್ನೊಂದು ಕಥೆ ಆಗುತ್ತಿತ್ತು. ಇದು ಕೇವಲ ಚಾರ್ಮಾಡಿ ಘಾಟ್ ಪ್ರದೇಶದ ಬಗ್ಗೆ ಮಾತ್ರ ಹೇಳುವುದಿಲ್ಲ. ‘ನೋ ಫಾರ್ ರೊಮ್ಯಾನ್ಸ್’ ಎಂದು ಪ್ರಿಂಟ್ ಆಗಿರುವ ಟಾಪ್ ಹಾಕಿಕೊಂಡು ಓಡಾಡುವ ಹುಡುಗಿಯನ್ನು ಒಲಸಿಕೊಳ್ಳುವ ಬಗೆ ಹೇಗೆ? ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ ನಡೆಸುವಾಗ ‘ಜೆನ್ ಜಿ ಕಿಡ್ಸ್’ಗಳ ಮನ ಗೆಲ್ಲಲು ಇರುವ ಹನ್ನೆರಡು ಸೂತ್ರಗಳು ಯಾವುವು? ಸಂದೇಶ ಕಳುಹಿಸಿ ಒಂದೆರಡು ಸೆಕೆಂಡುಗಳಲ್ಲಿ ‘ ಬ್ಲೂ ಟಿಕ್’ ಬರೆದೇ ಇದ್ದರೆ ಚಡಪಡಿಸುವ ಈ ಕಾಲದಲ್ಲಿ ಪ್ರೀತಿಯ ನಡುವೆಯೂ ‘ಹೌ ಟು ರಿಮೈನ್ ಎನಿಗ್ಮಾ ಟು ಹರ್’? ಈ ಎಲ್ಲಾ ವಿಷಯಗಳ ತಿಳಿದುಕೊಳ್ಳಲು ಪುಸ್ತಕ ಓದಿದರೆ ಚೆನ್ನ. ಚಾರ್ಮಾಡಿ ಘಾಟಿನಲ್ಲಿ ಹನ್ನೆರಡು ತಿರುವುಗಳು ಇರುವುದು ಮತ್ತು ಇಲ್ಲಿ ಕೂಡ ಹನ್ನೆರಡು ಸೂತ್ರಗಳು ಇರುವುದು ಕೇವಲ ಕಾಕತಾಳಿಯವೇ? ಗೊತ್ತಿಲ್ಲ. ಈ ಎಲ್ಲಾ ಸೂತ್ರಗಳು ತಿರುವುಗಳ ಮುಂದೆ ಹಾಕಿರುವ ಸಂಚಾರ ಸೂಚಿ ಚಿನ್ಹೆಗಳ ತರಹ ಮೂಡಿ ಬಂದಿದೆ.
ಇದರ ಜೊತೆಗೆ ನಾಯಕ ತನ್ನ ಪ್ರೀತಿಯ ಪ್ರಯಾಣದಲ್ಲಿ ಎದುರಿಸುವ ತಿರುವುಗಳು ಘಾಟಿನ ಯಾವುದೇ ತಿರುವುಗಳಿಗಿಂತ ಕಡಿಮೆ ಇಲ್ಲ. ಹಾಗಾಗಿ ಈ ಪ್ರೇಮಕಥೆಗೆ ರೋಚಕತೆಯೂ ಸೇರುತ್ತಾ ಹೋಗುತ್ತದೆ. ಘಾಟಿನ ‘ಹೇರ್-ಪಿನ್-ಕರ್ವ್’ ತರಹ ತೀವ್ರವಾದ ತಿರುವುಗಳು ಈ ಪ್ರೀತಿಯ ಪ್ರಯಾಣದಲ್ಲೂ ಬರುತ್ತವೆ. ಕೆಲವೊಮ್ಮೆ ‘ಬ್ಲೈಂಡ್ ಕರ್ವ್’ ಎದುರಿಸಿದರೆ, ಕೆಲವೊಮ್ಮೆ ‘ನೂರಾ ಎಂಭತ್ತು ಡಿಗ್ರಿ ಯೂ ಟರ್ನ್’! ಹಾಗಾಗಿ ಇದೊಂದು ಈಗಿನ ಕಾಲದ ‘ರೊಮ್ಯಾಂಟಿಕ್ ಥ್ರಿಲ್ಲರ್’ ಆಗಿ ಬದಲಾಗುತ್ತದೆ.
C/O ಚಾರ್ಮಾಡಿ ಲೇಖಕರು ಸಚಿನ್ ತೀರ್ಥಹಳ್ಳಿ
ಈಗಾಗಲೇ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಶ್ರೀ ಸಚಿನ್ ತೀರ್ಥಹಳ್ಳಿಯವರ ಪ್ರಥಮ ಕಾದಂಬರಿ ಇದು. ಅವರ ಮಾತಿನಂತೆ ಹೇಳುವುದಾದರೆ ‘ಕಥೆಯೆಂದರೆ ಮಿಂಚೊಂದು ಅಗಸದಲ್ಲಿ ಮೂಡಿ ಮರೆಯಾದಂತೆ. ಆದರೆ ಕಾದಂಬರಿ ಬರೆಯುವುದಕ್ಕೆ ಒಂದು ಮಳೆಗಾಲವನ್ನೇ ಸೃಷ್ಟಿಸಬೇಕು’. ಹಾಗೆ ನೋಡಿದರೆ ಇಲ್ಲಿ ತೀವ್ರವಾದ ವರ್ಷಕಾಲ ಮಾತ್ರವಲ್ಲದೆ ಶಿಶಿರದಿಂದ ಹಿಡಿದು ಹೇಮಂತ ಋತುಗಳವರೆಗೆ ಎಲ್ಲಾ ಕಾಲಗಳು ಬರುತ್ತವೆ. ಹಾಗಾಗಿ ಈ ಕಾದಂಬರಿಗೆ ಒಂದು ಪರಿಪೂರ್ಣತೆ ಇದೆ.
ಖ್ಯಾತ ಸಾಹಿತಿ ಶ್ರೀಯುತ ಜೋಗಿಯವರು ಕೂಡ ಕಥೆಯಲ್ಲಿ ಪಾತ್ರಧಾರರು. ಹಾಗಾಗಿ ಓದಿದವರು ಇದೊಂದು ಲೇಖಕರ ಆತ್ಮಕಥೆಯೇ ಎಂದು ಅನಿಸಿದರೆ ಆಶ್ಚರ್ಯವಿಲ್ಲ. ಲೇಖಕರು ಪ್ರಥಮ ಕಾದಂಬರಿಯಲ್ಲೇ ನಿರೂಪಣೆ ಶೈಲಿಯಲ್ಲಿ ಯಶಸ್ವಿಯಾಗಿರುವುದನ್ನು ಇದು ತೋರಿಸುತ್ತದೆ.
ಪುಸ್ತಕ ಓದಿ ಮುಗಿದ ಮೇಲೆ ಹಾಗೆ ಸುಮ್ಮನೆ ಈ ಪುಸ್ತಕವನ್ನು ಆಘ್ರಾಣಿಸಿದರೆ ಒಂದು ಕ್ಷಣ ಗಾಢವಾದ ಬಿಯರ್ ಅಥವ ವಿಸ್ಕಿಯ ವಾಸನೆ ಅಲೆ ಅಲೆಯಾಗಿ ಬಂದು ಹೋಗುವ ಅನುಭವವಾದರೆ ಆಶ್ಚರ್ಯವಿಲ್ಲ! ಅಷ್ಟು ದಟ್ಟವಾಗಿ ಕಾದಂಬರಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಪುಸ್ತಕದ ಗಮವನ್ನು ಮಲ್ಲಿಗೆಯ ಸುವಾಸನೆಗೆ ಹೋಲಿಸದೆ ಬಿಯರ್ ಎಂದು ಹೇಳಿರುವದಕ್ಕೆ ಏನಾದರೂ ಕಾರಣವಿದೆಯೇ, ಅಮೆರಿಕಾದ ಗಾಯಕ ಬಾಬ್ ಡಾಯ್ಲನ್ ಹೇಳಿದ “ಯೂ ಕಾನ್ಟ್ ಬಿ ವೈಸ್ ಎಂಡ್ ಇನ್ ಲವ್ ಎಟ್ ದ ಸೇಮ್ ಟೈಮ್ ” ಹೇಳಿಕೆ ನಿಜವೇ ಎನ್ನುವುದನ್ನು ಕಾದಂಬರಿ ಓದಿಯೇ ತಿಳಿದುಕೊಂಡರೆ ಒಳ್ಳೆಯದು.
ಉತ್ತಮ ಕಾದಂಬರಿ ಕೊಟ್ಟ ಶ್ರೀ ಸಚಿನ್ ತೀರ್ಥಹಳ್ಳಿವರಿಗೆ ಅಭಿನಂದನೆಗಳು. ಇನ್ನಷ್ಟು ಕಾದಂಬರಿಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ.
- ಎನ್.ವಿ.ರಘುರಾಂ , ನಿವೃತ್ತ ಅಧೀಕ್ಷಕ ಅಭಿಯಂತ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.