ಶಾಲೆಯಲ್ಲಿ ಗಾಂಧೀಜಿಯವರ ಅಸ್ಪೃಶ್ಯತಾ ಆಂದೋಲನದ ಪಾಠ ಮಾಡುತ್ತಿದ್ದ ತನ್ನ ಗುರುಗಳೇ, ಮನೆಗೆ ಏನನ್ನಾದರೂ ಕೊಡಲು ಹೋದರೆ..’.ಹೊರಗೇ ನಿಂತ್ಕೊಳ್ಳಮ್ಮ….ಅಮ್ಮನೇ ಇಲ್ಲಿಗೆ ಬರೋತನಕ ‘ ಎಂದು ಲಕ್ಷ್ಮಣ ರೇಖೆ ಎಳೆಯುತ್ತಿದ್ದುದನ್ನು ಕಂಡು,’ಗುರುಗಳೇ ಈ ರೀತಿ ಮಾಡುತ್ತಿದ್ದಾರಲ್ಲ’
ಎನಿಸಿ ಮನಸ್ಸು ಮುದುಡಿಸಿಕೊಳ್ಳುತ್ತಿದ್ದಳು. ತಪ್ಪದೆ ಮುಂದೆ ಓದಿ ಶಿವದೇವಿ ಅವನೀಶಚಂದ್ರ ಅವರ ಕಪ್ಪೆಗೂಡಿನ ಉಳಿದ ನೆನಪುಗಳು ಅಂಕಣ…
‘ಏ ! ನೀನು ಮುಟ್ಟಿದೆಯಾ? ನಾನು ಮಡಿನೀರು ತುಂಬಿಸಲು ಇಟ್ಟಿದ್ದೆ’ ಎನ್ನುತ್ತಾ ತುಂಬಿದ ಇಡೀ ಬಿಂದಿಗೆಯ ನೀರನ್ನು ಕೆಳಗೆ ಸುರಿಯುತ್ತಾ ಸರತಿಯ ಉದ್ದಸಾಲಿನಲ್ಲಿದ್ದವರಾರನ್ನೂ ಗಮನಿಸದೆ ಗೊಣಗಿಕೊಂಡಳು ಶಾಂತಮ್ಮ! ಸಾಲಿನಲ್ಲಿದ್ದ ತನ್ನನ್ನು ಮತ್ತಷ್ಟು ಹೊತ್ತು ಕಾಯಿಸಿಬಿಟ್ಟಆಕೆಯನ್ನು
ಕಂಡು ಏಕೋ ಕೆಡುಕೆನಿಸಿತು ಮಾಧವಿಗೆ !
ಮತ್ತೆ ತಾನು ಮುಟ್ಟಿದ್ದ ನಲ್ಲಿಯನ್ನು ಹುಣಸೆ ನೀರಿನಲ್ಲಿ ತೊಳೆದು, ಬಿಂದಿಗೆಗೂ ಹಚ್ಚಿದಳು. ತನ್ನ ಸೆರಗಿನಿಂದಲೇ ಅದನ್ನು ಒರೆಸಿ ಮಡಿಮಾಡಿ ನೀರು ತುಂಬಿಸಿ ಒಂದೆರಡು ಬೈಗುಳನ್ನೂ ನೀಡಿ ಮನೆಯ ಕಡೆ ತಿರುಗಿದಳು.
ಫೋಟೋ ಕೃಪೆ : google
ಅಲ್ಲೇ ಇದ್ದ ಮಾಧವಿಗೆ ಏನನ್ನಿಸಿತೋ ಪುಟ್ಟ ಬಾಲೆ ! ತನ್ನ ಕೈಯನ್ನು ತಿರುಗಿಸಿ ನೋಡಿ ಅವರ ಸೆರಗಿಗಿಂತ ನನ್ನ ಕೈಯೇ ಸ್ವಚ್ಛವಾಗಿದೆಯಲ್ಲ, ಎಂದು ಕೊಂಡು ಅಮ್ಮನಲ್ಲಿ ಪ್ರಶ್ನಿಸಿದಾಗ, ಅದು, ‘ಅವರು ಮಾಂಸ ಮೀನು ತಿನ್ನುವುದಿಲ್ಲ. ತಿಂದವರನ್ನು ಕಂಡಾಗ ಅಸಹ್ಯ ಪಟ್ಟುಕೊಳ್ಳುತ್ತಾರೆ. ಅವರು ಯಾವುದೇ ವಸ್ತುವನ್ನು ಬರಿಗೈಯಿಂದ ಮುಟ್ಟುವುದಿಲ್ಲ. ಅದು ಮೈಲಿಗೆಯಂತೆ,ಅದಕ್ಕೇ ಸೀರೆಯ ಸೆರಗಿನಿಂದಲೇ ಅದನ್ನೆಲ್ಲ ಹಿಡಿಯುತ್ತಾರೆ’ ಎಂದಾಗ ಆ ಶಾಂತಮ್ಮ ಯಾಕೆ ಹಾಗೆ ಮಾಡಿದರು ಎಂದು ಅವಳಿಗೆ ಅರ್ಥವಾಯಿತು.
ಆದರೆ ಅವಮಾನದ ಗಾಯ ಮಾತ್ರ ಮಾಸಲೇ ಇಲ್ಲ. ಮಾಂಸ ತಿಂದ್ರೆ ನಾವೇನು ಸಾಬೂನು ಹಚ್ಚಿ ಕೈತೊಳ್ಕೊಳ್ಳೋದಿಲ್ವಾ? ಯಾವಾಗ್ಲೂ ಮಾಂಸ ಮೀನು ಎಲ್ಲ ಈ ಊರಲ್ಲಿ ಎಲ್ಲಿ ಸಿಗುತ್ತೆ? ತಿಂಗಳಿಗೊಂದುಸರ್ತಿ ತರ್ಸಿದ್ರೆ ಹೆಚ್ಚು! ಅಥವಾ ನೆಂಟರಿಷ್ಟರು ಬಂದಾಗ ಮಾತ್ರ ! ತಲೆಯಲ್ಲಿ ನೆಟ್ಟ ಈ ಸಂಶಯದ ಹುಳ ಸದಾ ಕುಟುಕುತ್ತಲೇ ಇತ್ತು ಅವಳ ಮನವನ್ನು!
ಫೋಟೋ ಕೃಪೆ : google
ಮತ್ತೊಂದು ಸಂದರ್ಭದಲ್ಲಿ, ಅವರು ಮುಟ್ಟಿದ ನಲ್ಲಿಯನ್ನು ಅವರೆದುರಿಗೇ ತಾನೂ ಹುಣಸೆಯಲ್ಲಿ ತೊಳೆದು, ‘ಯಾವಾಗ್ಲಾದ್ರೂ ಒಂದ್ಸಲ ಸ್ನಾನ ಮಾಡುವ ನಿಮಗೇ ನಮ್ಮನ್ನು ಕಂಡರೆ ಮೈಲಿಗೆಯಾಗುವುದಾದರೆ ದಿನಾ ಸ್ನಾನ ಮಾಡುವ ನಮಗೆ ನೀವು ಮುಟ್ಟಿದ್ದು ಮೈಲಿಗೆ ಅನಿಸುವುದಿಲ್ಲವೇ’ ಎಂದು ಬಿಟ್ಟಳು. ಮಾಧವಿ, ಮಡಿಮೈಲಿಗೆಯ ಅವರ ಆಚರಣೆಗೆ ಉತ್ತರವಾಗಿ ! ಅಲ್ಲಿಗೆ ಆ ಪುಟ್ಟ ಹುಡುಗಿಯ ಸೇಡು ತೀರಿತ್ತು. ಆದರೆ ಅದನ್ನೆಲ್ಲ ನೋಡುತ್ತಿದ್ದ ನಾನು ಮಾತ್ರ ಈ ಪ್ರಸಂಗವನ್ನು ಇಂದಿಗೂ ಮರೆಯಲಾಗಿಲ್ಲ.
*
ಶಾಲೆಯಲ್ಲಿ ಎಲ್ಲ ಜಾತಿಯ ಮಕ್ಕಳೂ ಶಿಕ್ಷಕರೊಂದಿಗೆ ಸೇರಿ ಸರದಿಯಂತೆ ಉಪ್ಪಿಟ್ಟು ತಯಾರಿಸುವಾಗ ಈ ಆಚರಣೆ ಎಲ್ಲಿ ಮರೆಯಾಗುತ್ತದೆ. ಒಟ್ಟಿಗೆ ಕುಳಿತು ತಿನ್ನುವಾಗಲೂ!
ಫೋಟೋ ಕೃಪೆ : google
*
ರಾಮಣ್ಣನ ಹೊಟೆಲ್ಗೂ ಹಾಲು ಕೊಡುತ್ತಿದ್ದವರಿಗೆ ಆ ಜಾತಿ ಈ ಜಾತಿ ಎಂಬ ಲೇಬಲ್ ಇರಲಿಲ್ಲ. ಅಲ್ಲಿ ಇದ್ದ ಒಂದು ಡಜನ್ ಗ್ಲಾಸುಗಳನ್ನೇ ಮತ್ತೆ ಮತ್ತೆ ಒಂದೇ ಟಬ್ಬಿನಲ್ಲಿ ಹಾಕಿ ಮುಳುಗಿಸಿ ಎತ್ತುವುದನ್ನು ಕಂಡರೂ ಹೊಟೆಲ್ನಲ್ಲಿ ಎಲ್ಲರೂ ಅದರಲ್ಲಿಯೇ ಕುಡಿಯುವಾಗ ಆ ಮಡಿಯ ಆಚರಣೆಗೆ ಮಹತ್ವವೇ ಇರಲಿಲ್ಲ ಏಕೆ? ಬ್ರಾಹ್ಮಣ ವಿಧವೆ ಹೆಂಗಸರನ್ನು ಮಡಿ ಆಚರಿಸುವ ಕಟ್ಟುಪಾಡಿಗೆ ಒಳಪಡಿಸಿ, ಅವರು ಸಾಗುವ ದಾರಿಯಲ್ಲೆಲ್ಲ ಗಂಗಾಜಲವನ್ನು ಸಿಂಪಡಿಸಿಕೊಂಡು ಹೋಗುವಾಗ ಮಣ್ಣಿನ ತೇವಕ್ಕೆ ಮತ್ತಷ್ಟು ಧೂಳಿನ ಕಣಗಳು ಅಂಟಿಕೊಳ್ಳುತ್ತಿದ್ದುದು ನಿಜವಾದ ಮಡಿ ಹೇಗಾದೀತು?
*
ಈಗ ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಇಂತಹ ಆಚರಣೆಗಳ ಕಲ್ಪನೆಯೂ ಇಲ್ಲದಿರಬಹುದು. ಆದರೆ ನಾಲ್ಕೈದು ದಶಮಾನಗಳ ಹಿಂದಿದ್ದ ಇಂತಹ
ಮಡಿ ಆಚರಣೆಗಳಲ್ಲಿ ಎಂತಹ ವಿಡಂಬನೆ ತುಂಬಿರುತ್ತಿತ್ತು!
*
ಒಂದು ಕಡೆ ಅಗ್ರಹಾರ ಮತ್ತೊಂದು ಮೂಲೆಯಲ್ಲಿ ಅಸ್ಪೃಶ್ಯರಿಗೆಂದೇ ಮೀಸಲಾದ ಕೇರಿಗಳು!
ನಡು ನಡುವೆ ವೃತ್ತಿಯಲ್ಲಿ ತೊಡಗಿರುವವರು ಆಯಾ ಜಾತಿಯ ಜನ ವಾಸಿಸುವ ಬೀದಿಗಳು!
ಹಳ್ಳಿಗಳಲ್ಲಿ ನಡೆಯುವ ಹಬ್ಬ ಹರಿ ದಿನಗಳಲ್ಲಿ ವಾದ್ಯ, ವಾಲಗಗಳಿಗೆಂದು, ಇವರ ಎಲ್ಲೆಯನ್ನು ಪ್ರವೇಶಿಸುವ ಅಸ್ಪ್ರಶ್ಯರು!
ಸಾಧಾರಣವಾಗಿ ಮಡಿವಾಳ ಕುಂಭಾರ, ಕಮ್ಮಾರ, ಅಕ್ಕಸಾಲಿಗರಿರುವ ಬೀದಿಗಳು! ಊರ ತಲೆಬಾಗಿಲಲ್ಲಿ ಇರುವ ಹನುಮ ದೇವರು!
ಊರ ಹೊರವಲಯದಲ್ಲಿ ಕಾಡಂಚಿನಲ್ಲಿ ವನದೇವತೆ !
ಆಚರಣೆಗಳಿಗೆಲ್ಲ ಒಟ್ಟಾಗುತ್ತಿದ್ದ ವಿವಿಧ ವೃತ್ತಿಯವರು ದೇವಾಲಯದ ಒಳಗೆ ಬರುವಂತಿರಲಿಲ್ಲ. ಸೇವೆ ಸಲ್ಲಿಸುತ್ತಿದ್ದರೂ , ಗುಡಿಯೊಳಗೆ ಅಡಿಯಿಡುವಂತಿರಲಿಲ್ಲ. ಏಕೋ ಬಹಳ ಹಿಂದಿನಿಂದಲೂ ಈ ವಿಚಾರ ಮಾಧವಿಯನ್ನು ಕಾಡುತ್ತಲೇ ಇತ್ತು.
ತನ್ನದೇ ಬೆಂಚಿನಲ್ಲಿ ಕುಳಿತುಕೊಂಡು ಕಲಿಯುವ ಸಹಪಾಠಿ ರುಕ್ಮಿಣಿ ಅದು ಹೇಗೆ ಮನೆಯ ಕಡೆ ಹೋದಕೂಡಲೇ ಅಲ್ಲಿ ಪ್ರವೇಶ ಪಡೆಯದಂತಾಗುತ್ತಾಳೆ…..
*
ಶಾಲೆಯಲ್ಲಿ ಗಾಂಧೀಜಿಯವರ ಅಸ್ಪೃಶ್ಯತಾ ಆಂದೋಲನದ ಪಾಠ ಮಾಡುತ್ತಿದ್ದ ತನ್ನ ಗುರುಗಳೇ, ಮನೆಗೆ ಏನನ್ನಾದರೂ ಕೊಡಲು ಹೋದರೆ..’.ಹೊರಗೇ ನಿಂತ್ಕೊಳ್ಳಮ್ಮ….ಅಮ್ಮನೇ ಇಲ್ಲಿಗೆ ಬರೋತನಕ ‘ ಎಂದು ಲಕ್ಷ್ಮಣ ರೇಖೆ ಎಳೆಯುತ್ತಿದ್ದುದನ್ನು ಕಂಡು,’ಗುರುಗಳೇ ಈ ರೀತಿ ಮಾಡುತ್ತಿದ್ದಾರಲ್ಲ’
ಎನಿಸಿ ಮನಸ್ಸು ಮುದುಡಿಸಿಕೊಳ್ಳುತ್ತಿದ್ದಳು.
*
ಮನೆಯ ಮುಂದಿನ ನೇರಳೆ ಮರ !
ಬೇಸಿಗೆ ರಜೆಯ ಆತ್ಮಸಂಗಾತಿಗಳಲ್ಲಿ ಒಂದು.’ಅಕ್ಕಾ,ಅಕ್ಕಾ,ಕಾಯಿ ನೋಡು;ಕಾಯಿ ತಿಂದೋರ ಬಾಯಿ ನೋಡು’ ಎನ್ನುತ್ತಾ ತಿಂದವರೆಲ್ಲ ಒಬ್ಬೊಬ್ಬರೇ ಚಪ್ಪಾಳೆ ತಟ್ಟುತ್ತಾ ಸುತ್ತ ಕುಣಿಯುತ್ತಿದ್ದರೆ, ‘ಅದೂ ಆಟದ ಒಂದು ಅಂಗವೇ’ಎಂಬ ಖುಷಿಯನ್ನು ನೀಡುತ್ತಿತ್ತು. ಆದರೆ, ಮರವೆಂದರೆ, ನೀರೆಂದರೆ, ಸರ್ಕಸ್ಸೆಂದರೆ,ಬೆಟ್ಟ ವೆಂದರೆ,ಕತ್ತಲೆಂದರೆ ಸದಾ ಭಯಪಡುವ ಮಾಧವಿಗೆ,ಆಟದ ಮನೋರಂಜನೆಯನ್ನು ಪೂರ್ಣವಾಗಿ ಸವಿಯಲಾಗುತ್ತಿರಲಿಲ್ಲ.
ಫೋಟೋ ಕೃಪೆ : google
ಇದನ್ನೇ ಬಂಡವಾಳವಾಗಿಸಿ ಕೊಂಡು,ಮರಹತ್ತಿದ ತಿರುಮಲನನ್ನು,’ಏ!ತಿರುಮಲಾ,ನನಗೂ ಒಂದು ಗೊಂಚಲು ಎಸೆಯೋ…ಎಂದು ಬಟ್ಟಲುಗಂಗಳಲ್ಲಿ ಮೇಲೆ ನೋಡುತ್ತಾ, ತನ್ನ ಲಂಗವನ್ನು ಅಗಲವಾಗಿ ಹರಡಿ ಆಸೆಯಿಂದ ನೋಡುತ್ತಿದ್ದಳು.ಅದನ್ನೇ ನೆಪಮಾಡಿಕೊಂಡ ಈ ವಾನರವೀರ,ತನಗೊಬ್ಬನಿಗೇ ಈ ಬ್ರಹ್ಮವಿದ್ಯೆ ಸಿದ್ಧಿಸಿರುವುದೇನೋ’ಎಂಬಂತೆ ಹಮ್ಮಿನಿಂದ ಬೀಗುತ್ತಾ…ತನ್ನ ಬಾಯಿಗೇ ಎಸೆದುಕೊಳ್ಳುತ್ತಾ ಅಣಕಿಸುತ್ತಿರುವಾಗ ಈ ಪುಟ್ಟ ಬಾಲೆ ಪಡುತ್ತಿದ್ದ ಸಂಕಟವೆಷ್ಟೋ!
‘ತಾನೇ ಮರ ಹತ್ತಿದರೆ ಈ ಅವಲಂಬನೆ ಇರಲಾರದಲ್ಲ’
ಎಂದು ದೃಢನಿರ್ಧಾರ ಮಾಡಿ
ಏರುವ ಪ್ರಯತ್ನ ಮಾಡಿದರೂ
ನಾಲ್ಕೈದು ಅಡಿ ಎತ್ತರ ಏರುವಷ್ಟರಲ್ಲಿ ,’ಅಯ್ಯಯ್ಯೋ ಕೆಳಗೆ ಎಷ್ಟು ಆಳ ಇದೆ,ಬಿದ್ಬಿ ಟ್ಟರೆ,ಮೈಕೈಗೆಲ್ಲಾ,ನೋವಾಗುತ್ತದಲ್ಲಾ ಎಂದುಹೇಳಿ , ಅಲ್ಲಿಂದಲೇ ಇಳಿದು ಬಿಡುತ್ತಿದ್ದಳು.ಬದುಕಿನ ಸಾಹಸಗಳ ಅನುಭವ ವೀರರಿಗೆ ಮಾತ್ರ ದಕ್ಕುವುದಲ್ಲವಾ ..? ಹೆಣ್ಣಾಗಲಿ ಗಂಡಾಗಲಿ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವ ವಿದ್ಯೆಯನ್ನು ತಾವೇ ಕರಗತ ಮಾಡಿಕೊಂಡಾಗ ಮಾತ್ರ ನಾವು ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುತ್ತೇವೆ.ಕೆಲವು ವಿಶಿಷ್ಟ ಹಾಗೂ ವಿಭಿನ್ನ ಅನುಭವಗಳಿಗೆ ಪಕ್ಕಾಗುತ್ತೇವೆ.
ಪುಕ್ಕಲುತನ ಬದುಕಿನ ನೈಜ ಆಸ್ವಾದನೆಯಿಂದ ನಮ್ಮನ್ನು ವಂಚಿಸುತ್ತದೆ.ಇತರರ ಸಾಮರ್ಥ್ಯವನ್ನು ಪ್ರಶಂಸಿಸುವುದರಲ್ಲೇ ನಮ್ಮೊಳಗಿರುವ ಅದ್ಭುತ ಕೃತುಶಕ್ತಿಯನ್ನು ಕಡೆಗಣಿಸಿಬಿಡುತ್ತೇವೆ.
*
ನೀರು
ಬೆರಗು, ಬೆಡಗು, ಅನಿವಾರ್ಯತೆಗಳ ಸಾಧನ!
ಹರಿಯುವ ನೀರಿನ ಗತಿಯಲ್ಲೇ ಸಾಗಿದರೆ ಎಂತಹ ಮಾನಸೋಲ್ಲಾಸ! ಅನುಭವಪಾಠ ! ಅದರ ಪರಿಸರವೇ ಸದಾ ಚೈತನ್ಯಶೀಲ!
ಅದರ ಸಾಂಗತ್ಯದಲ್ಲಿ ಇಡೀ ಪ್ರಕೃತಿಯೇ ಚಲನಶೀಲ ವಾಗಿರುತ್ತದೆ.ಅದರ ಸಖ್ಯ
ಮಧುರವಾಗಿರುವಾಗಿರುತ್ತದೆ.ಮಾಧವಿಗೆ ಇಂತಹ ಅನುಭವಗಳೂ ದಕ್ಕುವುದಿಲ್ಲ.
ಫೋಟೋ ಕೃಪೆ : google
ಮೇಲೆ ನಡೆದು ಹೋಗುವಾಗಲೂ ಕಣ್ಮುಚ್ಚಿ ಬೇರೆಯವರ ಕೈಹಿಡಿದು ಸಾಗುವ ಅವಳಿಗೆ ನಿಸರ್ಗವೇ ನೀಡಿದ ಇಂತಹ ಅಪರೂಪದ ದೃಶ್ಯವನ್ನು ಒಳಗಾಗಿಸಿಕೊಳ್ಳುವ ಸಾಮರ್ಥ್ಯವಾದರೂ ಹೇಗೆ ಬಂದೀತು? ಮನೋಭೂಮಿಕೆಯಲ್ಲಿ ಚಿಗುರೊಡೆಸುವ ಹಸಿರುತನದ ಬೀಜಗಳನ್ನು ಹೇಗಾದರೂ ದಕ್ಕಿಸಿಕೊಳ್ಳುವುದು ಸಾಧ್ಯ?.
*
ಆಷಾಢದಲ್ಲಿ ಮಳೆಯಾಗುವಾಗ ಉನ್ಮಾದದಿಂದ ದಡಮೀರಿ ಹರಿಯುವ ಕಾವೇರಿಯ ಯೌವನದ ಉಕ್ಕು ಸೊಕ್ಕುಗಳನ್ನು ಆಸ್ವಾದಿಸಲು ಎರಡು ಕಣ್ಣುಗಳೂ ಸಾಲವು.
ದಡದಲ್ಲಿ ಬಿತ್ತಿದ್ದ ಬೆಳೆಗಳು,ದಡಮೀರಿ ಬಂದು ನದೀ ಪ್ರವಾಹದಲ್ಲಿ ಮುಳುಗುತ್ತಿರುವಾಗ ಆಕ್ರಂದಿಸುತ್ತಾ ಓಡಿ ಬರುವ ರೈತರು ತಮಗೆ ದಕ್ಕಿದಷ್ಟನ್ನಾದರೂ ಕಿತ್ತುಕೊಳ್ಳೋಣವೆಂದು ನೀರಿನ ರಭಸವನ್ನೂ ಲೆಕ್ಕಿಸದೆ ಪ್ರವಾಹದೊಂದಿಗೆ ಇಳಿಯುವಾಗ ತೀರದಲ್ಲಿ ನಿಂತವರು ಸುಮ್ಮನಿರಲಾ
ದೀತೇ? ಮಾಧವಿಯಂತಹವರು ಇಂತಹ ಅನುಭವಗಳಿಂದಲೂ ದೂರವುಳಿದುಬಿಡುತ್ತಾರೆ.ಆ ವಿಕೋಪಗೊಂಡ ಪ್ರಕೃತಿ ನೀಡುವ ಪ್ರತ್ಯಕ್ಷ ಪಾಠವನ್ನು ಬೇರೆ ಯಾವ ವಿಶ್ವವಿದ್ಯಾನಿಲಯ ನೀಡಲು ಸಾಧ್ಯ?
*
ಹಳ್ಳಿಯೇ ನಿಜವಾದ ಅನುಭವದ ಪಾಠಶಾಲೆ!
ಪ್ರಾಣಿಗಳೊಂದಿಗಿನ ಸಖ್ಯ ಮಾನವ ಬದುಕಿನ ವಿವಿಧ ಘಟ್ಟಗಳ ಅನುಭವ ನೀಡಿ ಕುತೂಹಲವನ್ನು ತಣಿಸುತ್ತದೆ.
ಉದಾಹರಣೆ : ಪ್ರಸವ. ‘ನಮ್ಮ ಹಸು ಕರು ಹಾಕೋಕೆ ಆಗಿದೆ. ಕೆಚ್ಚಲು ಸಡ್ಲಬಿಡ್ತಾ ಇದೆ’ ಎಂದು ಮಾತನಾಡಿಕೊಳ್ಳುವಾಗ, ಅದರ ಕಡೆಗೆ ಮನಸ್ಸು ಕುತೂಹಲಗೊಳ್ಳುತ್ತದೆ.
ಹೌದಲ್ವಾ..ಇನ್ನು ಸ್ವಲ್ಪ ದಿನಗಳಲ್ಲಿ ನಮ್ಮ ಮನೆಯಲ್ಲೇ ಜೀಬಾಲು ಸಿಗುತ್ತದೆ.ಅಮ್ಮ ಗಿಣ್ಣು ತಯಾರಿಸುತ್ತಾಳೆ.ರೊಟ್ಟಿ ಜೊತೆಗೆ ತಿನ್ನೋಕೆ ಎಷ್ಟು ಚೆನ್ನಾಗಿರುತ್ತೆ ಅಥವಾ ಹಾಗೇ ತಿನ್ನಬಹುದು.ಹಾಲು ಮೊಸರು ಬೆಣ್ಣೆ ಎಲ್ಲಾ ಸಾಕಷ್ಟು ಮನೆಯಲ್ಲೆ ಸಿಗುತ್ತಲ್ಲಾ!
ಸರಿ ಹಟ್ಟಿಗೆ ಓಡಿದ ಮಾಧವಿ ದೂರ ನಿಂತು ನೋಡಿದಳು.
ಹೊಟ್ಟೆ ತುಂಬಾ ಉಬ್ಬಿದೆ.ಎಲ್ಲಿಂದ ಬರುತ್ತೆ ಕರು…ಬಾಯಿಗೆ ಬೆರಳಿಟ್ಟು ಅಮ್ಮನನ್ನು ಕೇಳುವಾಗ,ನೀನೇ ನೋಡುವೆಯಂತೆ,ಇನ್ನು ಕೇವಲ ಕೆಲವೇ ದಿನಗಳಲ್ಲಿ ಬರುತ್ತೆ ‘ಆಗ ತಿಳಿಯುವೆಯಂತೆ ! ಈಗ ಆಡಿಕೋ ಹೋಗು’ಎಂದು ಕಳುಹಿಸಿದರು.
*
ಒಂದು ಜೀವ ಧರೆಗಿಳಿಯುವ ಬಗೆಯೇ ಸೃಷ್ಟಿಯ ಒಂದು ಅದ್ಭುತ ವಿಸ್ಮಯ! ಅದರಂತಹುದೇ ಚಿಕ್ಕ ಮರಿಗಳು ಅದರ ಹೊಟ್ಟೆಯಿಂದ ಹೊರಬರುವ
ಕ್ರಿಯೆಯಲ್ಲಿ,ಅದು ಅನುಭವದೊಂದಿಗೆ ಸಂವೇದನಾಶೀಲತೆಯನ್ನೂ ಧಾರೆಯೆರೆದು ಬಿಡುತ್ತದೆ.ತಾಯಿ ತನ್ನ ಮಗುವಿಗಾಗಿ ಸತ್ತು ಹುಟ್ಟುವ ಯಮಯಾತನೆಯು ನಿಜವಾದ ಮನುಷ್ಯತ್ವವನ್ನು ಜಾಗೃತಗೊಳಿಸುತ್ತದೆ. ಈ ಸಂದರ್ಭವನ್ನು ವೀಕ್ಷಿಸಿದ ಮನುಷ್ಯ ತನ್ನ ಸಾಂಸಾರಿಕ ಹೊಣೆಗಾರಿಕೆಯಿಂದ ಎಂದೂ ಜಾರಿಕೊಳ್ಳಲಾರ… ಸರಿಯೇ ನಾನು ಹೇಳಿದ್ದು…?’ಅಲ್ಲ’, ಅನ್ನ ಬಹುದು ನೀವು…ಏಕೆಂದರೆ ತನ್ನ ಎರಡು ಮಕ್ಕಳನ್ನೂ ಹೆತ್ತ ತಂದೆಯೇ ಸುತ್ತಿಗೆಯಿಂದ ಹೊಡೆದು ಕೊಂದ ಪ್ರಸಂಗವೊಂದು ನಿನ್ನೆಯಿಂದ ವರದಿಯಾಯಿತಲ್ಲಾ….ಇಂತಹ ವ್ಯತಿರಿಕ್ತ ಉದಾಹರಣೆಗಳು ಪ್ರತಿನಿತ್ಯ ಕರ್ಣ ಕಠೋರವಾಗಿ ನಿಮ್ಮ ಕಿವಿದೆರೆಗೆ ಅಪ್ಪಳಿಸುತ್ತಲೇ ಇರುತ್ತವಲ್ಲ!
*
ಬೆಕ್ಕಿನ ಸಂಸಾರ ಚಂದ. ತನ್ನ ಚಕ್ಕಂದ ಮುಗಿಯುವವರೆಗೂ ತನ್ನ ಸಂಗಾತಿಯನ್ನು ಪೀಡಿಸುವ ಯಾರದೋ ಮನೆಯ ಗಂಡು ಬೆಕ್ಕು, ಅದು ತನ್ನ ಕೆಲಸ ಮುಗಿಸಿದ ನಂತರ ತೊರೆದು ಹೋಗಿಬಿಡುವುದಿಲ್ಲ.ತನ್ನ ಸಂಗಾತಿಯ ಯೋಗಕ್ಷೇಮ ನೋಡಿಕೊಂಡು ಅದನ್ನು ಸಂತೈಸುತ್ತಾ ಒಡನೆಯೇ ಇರುತ್ತದೆ.ಇದೂ ಅಷ್ಟೆ.
ಫೋಟೋ ಕೃಪೆ : google
ಅದು ಊಟದ ವೇಳೆಗೆ ಹಾಜರಾಗುವವರೆಗೂ ಅದನ್ನು ತಟ್ಟೆಯಲ್ಲಿರಿಸಿಕೊಂಡೇ ಕಾಯ್ದು..ಅದರ ಊಟ ಮುಗಿದ ಕೂಡಲೇ ತಾನು ಊಟ ಮಾಡುತ್ತದೆ. ಪ್ರತಿದಿನ, ಪ್ರತಿ ಊಟವನ್ನೂ ಜೊತೆಯಲ್ಲೆ ತಿನ್ನುತ್ತವೆ.ಹೆಣ್ಣು ಬೆಕ್ಕಿಗೆ ಸರಿಯಾದ ಸುರಕ್ಷಿತ ಜಾಗ ಹುಡುಕಿ ಪ್ರಸವದ ತಯಾರಿ ನಡೆಸಿಕೊಡುತ್ತದೆ.ಅದು ಶತ್ರುಗಳ ಪಾಲಾಗದಂತೆ ಕಾವಲು ಕಾಯುತ್ತದೆ ಮತ್ತು ಮರಿಗಳೊಂದಿಗೆ ಊಟವನ್ನೂ ಮುಂದುವರಿಸುತ್ತದೆ.
ಆದರೆ ನಾವು… ಬದುಕುವ ಎಲ್ಲ ಸೌಲಭ್ಯ ಪಡೆದವರು ನಮ್ಮದೇ ಸಂತಾನವನ್ನು ನಿರ್ಲಕ್ಷಿಸುತ್ತೇವೆ. ತಾಯ್ತನದ ಮೌಲ್ಯಕ್ಕೆ ಬೆಲೆಕೊಡದೆ ಅಮಾನುಷರಾಗಿಬಿಡುತ್ತೇವೆ.
*
ಬದುಕು ಬಹಳ ಸುಂದರ!
ಅದನ್ನು ತೀವ್ರವಾಗಿ ಬಾಳುವವರಿಗೆ ಮಾತ್ರ ಅದರ ಬೆಲೆ ತಿಳಿದಿರುತ್ತದೆ.
ಮಾಸ್ತಿ ವೆಂಕಟೇಶ ಅಯ್ಯಂಗಾರರು ಒಂದು ಕಡೆ ಬರೆದ್ದಾರೆ. ‘ಬಾಳು ತಾಳೆ ಹೂವಿನಂತೆ ; ಅರಿತು ಮುಡಿ ಗಂಧ,ಮರೆತು ಹಿಡಿ ಮುಳ್ಳು, ಬಾಳು ಇಂತೆ’ ಎಂದು ನಿಜ ಅಲ್ವಾ?ಎಚ್ಚರಿಕೆಯಿಂದ ಬದುಕಿದರೆ ಬಾಳು ಘಮ ಘಮಿಸುತ್ತದೆ. ದೀರ್ಘಕಾಲದವರೆಗೂ, ಅರಿತು ಹಿಡಿಯಬೇಕು, ಮರೆತರೆ ನೋವಿನ ಹಿಂಸೆ ತಾಳಲು ಸಿದ್ಧರಿರಬೇಕು’ ಅಲ್ಲವಾ?
*
ಪ್ರಕೃತಿ ಬೇರೆಯಲ್ಲ; ಮನುಷ್ಯನ ಪ್ರಕೃತಿಯೂ ಇದಕ್ಕಿಂತ ಭಿನ್ನವಾಗಿಲ್ಲ.ಅದೇ ಅಗಾಧ ಸಾಮರ್ಥ್ಯ,ಗ್ರಹಿಕೆ, ಸಹಿಷ್ಣುತೆ, ಸಂದರ್ಭ ಬಂತೆಂದರೆ,ಕ್ಷಣ ಮಾತ್ರದಲ್ಲೇ ಜಾಗೃತಗೊಳ್ಳುವ ವಿವೇಕ ಪ್ರಜ್ಞೆ, ತೋರುವ ಪ್ರತಿರೋಧ… ಬದಲಾಗುವ ಬಣ್ಣಗಳು, ಅನ್ವೇಷಣಾ ಸಾಮರ್ಥ್ಯ…ಇತ್ಯಾದಿ ಒಂದೊಂದೂ …ಅಚ್ಚರಿಯ ಮಡು!
ಅದು ಕೆಲವು ಕಠಿಣ ಪರಿಸ್ಥಿತಿಗಳಲ್ಲಷ್ಟೇ ಸಾಬೀತಾಗುತ್ತದೆ.ಪ್ರತಿಯೊಂದು ಪರೀಕ್ಷೆಯೂ ಅವನ ಸಾಮರ್ಥ್ಯ ವನ್ನು ಹುರಿಗೊಳಿಸುವ ಸಾಧನ!
ಇದರ ಸಹಜ ಅನುಭವ ಪ್ರಕೃತಿಯ,ಪರಿಸರದ ಒಡನಾಟದಿಂದ,ವಿಭಿನ್ನ ರೀತಿಯ ಜನರ ನಡುವೆ ಬದುಕುತ್ತಾ ಅವರ ಬದುಕನ್ನು ತೀವ್ರವಾಗಿ ಅವಲೋಕಿಸು ವುದರಿಂದ ದೊರೆಯುತ್ತದೆ.
ಸದಾ ಬದುಕಿನಲ್ಲಿ ಕ್ಷಣಕ್ಷಣದ ಸ್ಪಂದನ ಹೊಂದಿದ್ದಾಗಷ್ಟೆ ಈ ಅನುಭವ ಅವನಿಗೆ ದಕ್ಕುತ್ತದೆ. ಹಿರಿಯರೊಡನಾಟ ಕಿರಿಯರಿಗೆ ಮಾರ್ಗದರ್ಶಕ ಮಾತ್ರವಲ್ಲ,ರಕ್ಷಣೆಯೂ ಹೌದು! ತಮ್ಮ ಅಪ್ಪಅಮ್ಮಂದಿರ ಸಾಂಸಾರಿಕ ಹೊಣೆಗಾರಿಕೆಯಲ್ಲಿ ಮಕ್ಕಳ ಕುತೂಹಲ ಪ್ರವೃತ್ತಿಯನ್ನು ತಣಿಸುವ ವ್ಯವಧಾನ ಕಡಿಮೆಯಿರುತ್ತದೆ.
ಹಿರಿಯರ ಸಾಹಚರ್ಯ ಅವರ ಏಕಾಕಿತನವನ್ನು ನೀಗಿಸುತ್ತದೆ. ರಮ್ಯಕತೆಗಳ, ಅನುಭವಗಳು ಲೋಕದಲ್ಲಿ ವಿಹರಿಸುತ್ತದೆ. ಇಳಿ ವಯಸ್ಸಿನಲ್ಲಿ ಅಪಾರ ಜೀವನಾನುಭವ ಭಂಡಾರವಾಗಿರುವ ಅವರು ಮಕ್ಕಳೊಡನಾಟದಲ್ಲಿ ಅವರಿಗೆ ನೀಡುವ ಮೌಲ್ಯಗಳ ಕೊಡುಗೆ ಅಪಾರವಾದುದು. ಇಂತಹ ಅಮೂಲ್ಯ ಅನುಭವದ ಕಣಜಗಳು ವೃದ್ಧಾಶ್ರಮದ ಕೋಣೆಗಳಲ್ಲಿ ತಮ್ಮ ಆಯುಷ್ಯರೇಖೆಗಳನ್ನು ಹುಡುಕುತ್ತಾ ಪಶ್ಚಿಮಕ್ಕೆ ಅಸ್ತಂಗತದೆಡೆಗೆ ಮುಖಮಾಡಿರುವುದು ನಮ್ಮ ಅವಿವೇಕವೋ ದುರದೃಷ್ಟವೋ ಅರಿಯೆ.
‘ಪ್ರಕೃತಿ ನವನವೋನ್ಮೇಷ ಶಾಲಿನಿ’ ಅದರ ಬೆರಗು ಹಾಗೂ ಬೆಡಗು ಎರಡನ್ನೂ ಮೈಗೂಡಿಸಿಕೊಳ್ಳಬೇಕೆಂದರೆ ಅದರ ಮಡಿಲಲ್ಲಿ ಆನಂದವಾಗಿ ಸಮಯ ಕಳೆಯಬೇಕಾಗುತ್ತದೆ.ಅನುಭವದ ಬೇರಿನಾಳಕ್ಕೆ ನೀರೆರೆದರೆ ಮಾತ್ರ ಅದರಲ್ಲಿ ಮನೋಹರ ಹೂವುಗಳೂ,ಪ್ರಯೋಜನಕಾರಿಯಾದ ಫಲಗಳೂ ಹೊಮ್ಮಲು ಸಾಧ್ಯ! ಅದರ ಪರಂಪರೆಯೂ ಮುಂದಿನ ಪೀಳಿಗೆಗೆ ಪ್ರವಹಿಸಲು ಸಾಧ್ಯ!ಜೀವ ಪರಂಪರೆಯನ್ನು ಮುಂದುವರಿಸಲು ಜೀವನ ಪ್ರೀತಿಮೈಗೂಡಿಸಿಕೊಳ್ಳುವುದು ಬಹಳ ಅನಿವಾರ್ಯ!
ಮಣ್ಣಿನ ವಾಸನೆಗೆ ಮಿಡಿದಾಗ,ಕಲ್ಪನೆಯ ಹರಹು ವಿಸ್ತಾರಗೊಳ್ಳುತ್ತದೆ. ಆಸಕ್ತಿ ಬೇರುಗಳು ಆಳಕ್ಕಿಳಿದಾಗ ನೆಲದ ಸತ್ವ ಮೈಗೂಡುತ್ತದೆ. ಜನಸಮುದಾಯದ ಸಂಸ್ಕೃತಿಯಲ್ಲಿ ಬೆರೆತಾಗ ಅದಕ್ಕೆ ಜೀವಜಲ ದೊರೆಯುತ್ತದೆ. ಆಮೇಲೆ ಸನ್ನಿವೇಶಕ್ಕೆ ಅನುಗುಣವಾಗಿ ಅದು ತನ್ನ ವಿಶಿಷ್ಟತೆಯೊಂದಿಗೆ ಘಮ ಘಮಿಸುತ್ತದೆ. ಇಂತಹ ಬಾಂಧವ್ಯಕ್ಕೆ ಸ್ಪೃಶ್ಯ ಅಸ್ಪೃಶ್ಯತೆಯ ಹಂಗಿಲ್ಲ,ಆ ಸ್ನೇಹದ ಫಲಿತ ದಿವ್ಯವಾಗಿರುತ್ತದೆ. ರಸಗ್ರಾಹಿತ್ವದ ಮನೋಭಾವವನ್ನು ಉದ್ದೀಪಿಸುತ್ತದೆ. ಬಾಹ್ಯದಲ್ಲಿ ಕಾಣುವಂತಹ ದೂರ ಅಂತರಂಗವನ್ನೂ ದರ್ಶನ ಮಾಡುವ ಶಕ್ತಿಯನ್ನು ನೀಡುತ್ತದೆ. ನಿಜವಾದ ಅರ್ಥದಲ್ಲಿ ಕೃತುಶಕ್ತಿ ದೇದೀಪ್ಯಮಾನವಾಗುತ್ತದೆ. ಬದುಕು ಹಾಗೂ ಪ್ರಕೃತಿ ಎರಡೂ ಆಪ್ತವಾಗುತ್ತದೆ.
ಆಗಲೇ ಎಲೆಯ ಮಡಿಲಲ್ಲಿ ಮಲಗಿರುವ ಶಿಶು,ಕವಿ ಕುವೆಂಪುರವರಿಗೆ ಕಂಡಂತೆ,
‘ಎಲೆಯ ಹಸಿರು ತೊಟ್ಟಿಲಲ್ಲಿ
ಹನಿಯ ಹಸುಳೆ ನಗುತಿದೆ’
ಎಂದು ಅನಿಸುವುದು.
‘ಜಗಮಂದಿರ ಶಿವಸದನವಾಗುವುದು’
‘ಬೆಳ್ಳಕ್ಕಿಯ ಸಾಲು ದೇವರು ರುಜು ಮಾಡಿದಂತೆ’ ತೋರುವುದು!
ಬೇಂದ್ರೆಯವರಿಗೆ ಕಂಡಂತೆ
‘ಹಗಲಿರುಳೆಂಬ ರೆಕ್ಕೆಯ ಬಿಚ್ಚಿ
ಕಾಲದ ಹಕ್ಕಿಯು ಹಾರುತ್ತಿರುವಂತಹ’ಕಾಣ್ಕೆ ಸಿದ್ಧಿಸುವುದು,
ಅಷ್ಟೇ ಅಲ್ಲ ಈ ಜಗ ನನ್ನದೆನಿಸಿ
ಸುಂದರವಾಗುವುದು!
*
ನಾವು ಪ್ರಕೃತಿ ಸ್ನೇಹಿಗಳಾಗೋಣ…ಅಲ್ಲಿ ಎಲ್ಲವೂ ಮುಕ್ತ ಮುಕ್ತ…
ಬಾವಿಯಲ್ಲಿರುವ ಕಪ್ಪೆ
ಮುಟ್ಟಿದ ನೀರು ಅಸ್ಪೃಶ್ಯವೆನಿಸುವುದಿಲ್ಲ.ಹರಿಯುವ ನದಿಯಲ್ಲಿ ವಾಸನೆಯ ಮೀನು ಕಪ್ಪೆಗಳಿದ್ದರೂ ಅದು ಮಲಿನವೆನಿಸುವುದಿಲ್ಲ, ಎಲ್ಲರ ಮೈಯನ್ನೂ ಸ್ಪರ್ಶಿಸುವ ತಂಗಾಳಿಯು ಅಸ್ಪೃಶ್ಯತೆಯ ಕಳಂಕ ಹೊರುವುದಿಲ್ಲ.
ನಾವು ಸ್ನೇಹಸ್ಪೃಶ್ಯರಾಗೋಣ,
ಭಾವಗಳನ್ನು ಆಲೋಚನೆಗಳನ್ನು ಸಂಸ್ಕಾರ ಗೊಳಿಸಿ ಉದಾತ್ತವಾಗಿ ಬಾಳೋಣ…ಅಲ್ಲವೇ?
*
ಮತ್ತೆ ಸಿಗುವೆ ಕೆಲವು ಅಂತರಂಗದ ಮಾತುಗಳನ್ನು ಹೊತ್ತು!
- ಶಿವದೇವಿ ಅವನೀಶಚಂದ್ರ, ಕೊಡಗು