ಬೈಕ್ ನಲ್ಲಿ ಹಿಂದೆ ಕೂರುವುದು ಸುಲಭ. ಅದನ್ನು ಓಡಿಸುವುದು ಸರಳ. ಆದರೆ ಬೈಕ್ ನ್ನು ಸಾವಿರಾರು ಕಿಲೋಮೀಟರ್ ಒಬ್ಬಂಟಿ ಮಹಿಳೆ ಓಡಿಸುವುದಿದೆಯಲ್ಲ ಅದು ಸವಾಲಿನ ಕೆಲಸ. ಆ ಸವಾಲನ್ನು ಸಂತೋಷದಿಂದ ಸ್ವೀಕರಿಸಿ ಯಶಸ್ವಿಯಾದ ಕರ್ನಾಟಕದ, ಹುಬ್ಬಳ್ಳಿ ಬೈಕರ್ ಕ್ಯಾಂಡಿಡಾ ಅವರ ಸಾಹಸಗಾಥೆಯ ಕತೆಯಿದು…
ಅಪ್ಪನ ಸ್ಕೂಟರ್ ನ್ನೇರಿ ಶಾಲೆಗೆ ಹೋಗುತ್ತಿದ್ದ ಹೆಣ್ಮಕ್ಕಳು , ಗಂಡನ ಹಿಂದೆ ಬೈಕ್ ನಲ್ಲಿ ಕೂತು ಮಾರ್ಕೆಟ್ ಹೋಗುತ್ತಿದ್ದ ಹೆಂಡತಿ, ಅದ್ಯಾವುದು ಇಲ್ಲದಿದ್ದಾಗ ಬಸ್ ನಲ್ಲಿ ನೇತಾಡಿಕೊಂಡು ಹೋಗುತ್ತಿದ್ದ ಹೆಣ್ಮಕ್ಕಳ ಕಾಲವೊಂದಿತ್ತು. ಆ ಕಾಲ ಈಗ ಬದಲಾಗಿದೆ. ಗಂಡಕ್ಕಳಷ್ಟೇ ಅಲ್ಲ, ಹೆಣ್ಮಕ್ಕಳು ಎಲ್ಲದರಲ್ಲೂ ಸರಿ ಸಮಾನರಾಗಿ ನಿಂತಿದ್ದಾರೆ. ಸೈಕಲ್, ಸ್ಕೂಟಿ, ಕಾರ್ ಹೀಗೆ ಹಂತ ಹಂತವಾಗಿ ವಾಹನಗಳ ಡ್ರೈವಿಂಗ್ ಕಲಿತಿರುವ ಹೆಣ್ಮಕ್ಳು, ಗಂಡ ಹೈಕ್ಳು ಓಡಿಸುವ ಬೈಕ್ ನ್ನು ಕಲಿಯುವುದಷ್ಟೇ ಅಲ್ಲ, ಎಷ್ಟೇ ದೂರಕ್ಕಾದರೂ ಸುಲಭವಾಗಿ ಓಡಿಸ ಬಲ್ಲರು.
ಗಂಡ ಹೈಕ್ಳು ವೀಲಿಂಗ್ ಮಾಡಿ ಒಂದು ಕೈ ಎತ್ತಿದರೆ, ‘ಹೆಣ್ಣಮಕ್ಕಳೇ ಸ್ಟ್ರಾಂಗ್ ಗುರು…’ ಅಂತ ಬೈಕ್ ನಲ್ಲಿಯೇ ಪ್ರಪಂಚ ಸುತ್ತುವ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಆಕೆಯ ಹೆಸರು ಕ್ಯಾಂಡಿಡಾ ಆನ್ ಲೂಯಿಸ್. ಕ್ಯಾಂಡಿಡಾ ಅವರು ಬೈಕ್ ನಲ್ಲಿ ೨೮, ೦೦೦ ಕಿ.ಮೀ ದೂರಾ ಕ್ರಮಿಸಿದ ಭಾರತದ ಪ್ರಥಮ ಮಹಿಳೆ.
ಆಕೆಗೆ ಬೈಕ್ ಎಂದರೆ ಪರಮಾಪ್ತ ಗೆಳೆಯ. ಪ್ರೀತಿಯಿಂದ ಬೈಕ್ ಗೆ ಇಟ್ಟ ಹೆಸರು ‘ಸ್ಕೈ’. ಆಕೆ ಎಲ್ಲೇ ಹೋಗಲಿ ಜೊತೆಗೆ ಸ್ಕೈ ಇದ್ದೆ ಇರುತ್ತದೆ. ಸ್ಕೈ ಜೊತೆ ಓಡಾಡದೆ ಇದ್ದಂತಹ ಜಾಗಗಳಿಲ್ಲ. ಮಡಿವಂತ ಸಮಾಜದಲ್ಲಿ ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ಎಂದು ಸಾಧಿಸಿ ತೋರಿಸಿದ ಗಟ್ಟುಗಿತ್ತಿ ಕ್ಯಾಂಡಿಡಾ.
ಬಾಲ್ಯದಿಂದಲೂ ಸಾಹಸ ಪ್ರಿಯಳಾಗಿದ್ದ ಕ್ಯಾಂಡಿಡಾ ಹುಟ್ಟಿದ್ದು, ನವೆಂಬರ್ ೨೩, ೧೯೯೦ ರಲ್ಲಿ ಕರ್ನಾಟಕದ ಗಂಡು ಮೆಟ್ಟಿದ ನೆಲ ಹುಬ್ಬಳ್ಳಿಯಲ್ಲಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರ ತಂದೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗಿಯಾದರೆ, ತಾಯಿ ಶಾಲೆಯೊಂದರಲ್ಲಿ ಶಿಕ್ಷಕಿ. ತಮ್ಮ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿಯೇ ಮುಗಿಸಿ, ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದರು. ಆರೇಕಲ್, ಇನ್ಫೋಸಿಸ್ ನಂತಹ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವಗಳಿದ್ದವು. ಕೈ ತುಂಬಾ ಸಂಬಳ ಬರುತ್ತಿತ್ತು. ಆದರೆ ಬೆಂಗಳೂರು ಟ್ರಾಫಿಕ್ , ಕಾಂಕ್ರಿಟ್ ನಡುವಿನ ಜೀವನ ಸ್ವತಂತ್ರವಾಗಿ ಹಾರಾಡುವ ಹಕ್ಕಿಯನ್ನು ಪಂಜರದಲ್ಲಿ ಇಟ್ಟಂತೆ ಅವರಿಗೆ ಭಾಸವಾಯಿತು. ಆಗ ಕ್ಯಾಂಡಿಡಾ ಕೆಲಸಕ್ಕೆ ಗುಡ್ ಬೈ ಹೇಳಿ ತಮ್ಮ ಪೂರ್ಣ ಸಮಯವನ್ನು ಬೈಕ್ ರೈಡಿಂಗ್ ಮಾಡಲು ಶುರುಮಾಡಿದರು.
ಬೈಕ್ ರೈಡಿಂಗ್ ಆರಂಭ
ಅವರಿಗೆ ಬೈಕ್ ರೈಡಿಂಗ್ ಆಸೆ ಹುಟ್ಟಿದ್ದು ನಿನ್ನೆ ಮೊನ್ನೆಯದಲ್ಲ. ಚಿಕ್ಕವರಿದ್ದಾಗ ಅಪ್ಪನ ಜೊತೆ ಗೋವಾ, ಕಾರವಾರ ಸೇರಿದಂತೆ ಹತ್ತಿರದ ಸ್ಥಳಗಳಿಗೆ ಬೈಕ್ ರೈಡಿಂಗ್ ಮಾಡುತ್ತಿದ್ದರು. ಕೆಲಸ ಬಿಟ್ಟ ಮೇಲೆ ಪೂರ್ಣಾವಧಿಯಾಗಿ ಬೈಕ್ ರೈಡರ್ ಆದರು. ಬೈಕ್ ರೈಡರ್ ಗುಂಪಿನಲ್ಲಿ ಸೇರಿಕೊಂಡು ದಕ್ಷಿಣ ಭಾರತ ಪ್ರವಾಸಕ್ಕೆಲ್ಲಾ ಹೋದರು. ಕ್ರಮೇಣ ಆ ಗುಂಪಿನಿಂದ ಹೊರಕ್ಕೆ ಬಂದು, ಉತ್ತರ ಭಾರತಕ್ಕೆಲ್ಲಾ ಒಬ್ಬಂಟಿಯಾಗಿ ಬೈಕ್ ಸವಾರಿ ಮಾಡಿದರು. ಹೀಗೆ ಹಂತ- ಹಂತವಾಗಿ ಬೆಳೆದ ಆತ್ಮವಿಶ್ವಾಸ ಮುಂದೆ ದೇಶದ ಗಡಿಬಿಟ್ಟು ಪ್ರವಾಸ ಮಾಡುವಂತೆ ಪ್ರೇರಪಿಸಿತು.
ಆಗಸ್ಟ್ ೨೫, ೨೦೧೮ ರಲ್ಲಿ ಕ್ಯಾಂಡಿಡಾ ಭಾರತದಿಂದ ಆಸ್ಟ್ರೇಲಿಯಾಕ್ಕೆ ೧೦ ದೇಶಗಳ ಮುಖಾಂತರ ಬೈಕ್ ನಲ್ಲೆ ಹಾದು ಹೋದರು. ಭಾರತ, ಭೂತಾನ್, ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್, ಮಲೇಷ್ಯಾಕ್ಕೆ ೪೦೦ ಸಿಸಿ ಮೋಟಾರ್ ಸೈಕಲ್. ಸಿಂಗಾಪುರ, ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ವಿಯೆಟ್ನಾಂಗೆ ಅವಳು ಸ್ಥಳೀಯ ಕಂಟ್ರಿ ಬೈಕು ಬಳಸಿದರು.
ಅವರು ಸಾಗುವ ದಾರಿಗಳು ಸುಗಮವಾಗಿರಲಿಲ್ಲ. ದೇಶದ ಒಂದೊಂದು ಗಡಿ ದಾಟುತ್ತಿದ್ದಂತೆ ಹಿಮಪಾತ, ಮಳೆ, ಧೂಳು, ಪರ್ವತಗಳ ಕುಸಿತ, ಕಲ್ಲು ಮಣ್ಣಿನ ದಾರಿಗಳನ್ನು ದಾಟುವಾಗ ಸಾಕಷ್ಟು ಸವಾಲಗಳನ್ನೂ ಎದುರಿಸಬೇಕಿತ್ತು. ಆ ಕಷ್ಟಗಳನ್ನೆಲ್ಲ ಧೈರ್ಯದಿಂದ ಎದುರಿಸಿ ಮುನ್ನುಗುತ್ತಾ ಹೋದರು ಕ್ಯಾಂಡಿಡಾ. ಸಾಕಷ್ಟು ರೀತಿಯ ಹೊಸ ಅನುಭವಗಳನ್ನು ಪಡೆಯುತ್ತಾ, ಸುಮಾರು ೨೯, ೨೭೭ ಕಿ.ಮೀ ಮತ್ತು ೬ತಿಂಗಳುಗಳ ಕಾಲ ಕ್ರಮಿಸಿ ಮಾರ್ಚ್ ೩೧, ೨೦೧೯ರಂದು ಭಾರತಕ್ಕೆ ವಾಪಸ್ಸಾದರು.
ರೋಶನಿ ಶರ್ಮ ಭಾರತದ ಮೊದಲ ಬೈಕ್ ರೈಡರ್ ಮಹಿಳೆಯಾದರೆ, ಏಕವ್ಯಕ್ತಿ ಸವಾರಿ ಮತ್ತು ಅತಿ ದೂರ ಕ್ರಮಿಸಿದ ಭಾರತದ ಮೊದಲ ಮಹಿಳೆ ಕ್ಯಾಂಡಿಡಾ ಆಗಿದ್ದಾರೆ. ಅವರ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಗಿದೆ.
ಕರ್ನಾಟಕದ ಹೆಮ್ಮೆಯ ಮಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ದೇಶದ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ.
- ಶಾಲಿನಿ ಹೂಲಿ ಪ್ರದೀಪ್