ಪ್ರೀತಿಯಿಂದ ಸಾಕಿ ಬೆಳೆಸಿದ ಮಗ ಹರಿತ ನಾಲಗೆಯವನಾಗಿ, ಗಂಟು ಮುಖದವವನಾದಾಗ ತಾಯಿಗೆ ನಡುವಯಸ್ಸು. ಆಕೆಯ ಭಾವನೆಗಳನ್ನು ಸೂಕ್ಶ್ಮವಾಗಿ ಕವಿ ಮೇಗರವಳ್ಳಿ ರಮೇಶ್ ಅವರು ಕವನದಲ್ಲಿ ಹಿಡಿದಿಟ್ಟಿದ್ದಾರೆ…
ಮಕ್ಕಳು ಸ್ನೇಹಿತರಾಗುಳಿಯದೇ
ದೋಷ ದರ್ಶಿಗಳಾಗಿ ಗಂಟು ಮುಖದವರಾಗಿ
ಹರಿತ ನಾಲಗೆಯವರಾದಾಗ
ನಿನಗೆ ನಡುವಯಸ್ಸು.
ಕೋಶವನ್ನೊಡೆದು ಬಲಿತ ವೈಭವದಲ್ಲಿ
ಚಿಟ್ಟೆಯಾಗಿ ಹೊರಹೊಮ್ಮುವ ಕಾಲವದು ಅವರಿಗೆ
ನೀನವರಿಗೆ ಬೇಕು
ಚಹಾ ಮಾಡಿಕೊಡಲು
ಬಟ್ಟೆಗಳಿಗೆ ಇಸ್ತ್ರಿ ಮಾಡಿಕೊಡಲು ಮಾತ್ರ
ಉಳಿದಂತೆ ನೀನವರಿಗೆ ಬೇಡವಾದವಳು
ನಿನಗಾದರೋ ಅವರೆಲ್ಲರೂ ಬೇಕೇ ಬೇಕು
ಹಾಗಾಗಿ ಒಬ್ಬಳೇ ಇರುವಾಗ
ಅವರ ಪುಸ್ತಕಗಳನ್ನು ಮುಟ್ಟಿ
ವಸ್ತುಗಳನ್ನು ತಡವಿ
ಗುಪ್ತವಾಗಿ ದುಃಖಿಸುತ್ತಿ ಅಂತರಾಳದಲ್ಲಿ
ನಿನ್ನ ಮಗನಿಗೆ ನೀನೊಮ್ಮೆ
ಹಬ್ಬಕ್ಕೆ ಬಾ ಎಂದು ಅರ್ತಿಯಿಂದ ಆಹ್ವಾನಿಸಿ
ಪ್ರೀತಿಯ ಶಾಯಿಯಲ್ಲಿ ಬರೆದು
ರಾತ್ರೋರಾತ್ರಿ ಅಂಚೆಯ ಡಬ್ಬಿಗೆ ಹಾಕಿದೆ
ನಿನ್ನ ಮಮತೆಯ ಆಮಂತ್ರಣವನ್ನವನು
ತಿರಸ್ಕರಿಸಿ ನಿರಾಸೆಗೊಳಿಸಿದಾಗ
ನೀನು ನಿನ್ನ ಕನಸಿನ ಲೋಕದಲ್ಲೇ
ಬದುಕೆಲ್ಲ ಕಳೆದೆ ಅಳುತ್ತಾ
ಇದೀಗ ಕಾಲ ಪಕ್ವವಾಗಿದೆ
ತಾಯಿ
ನೀನಿನ್ನು ಯುವತಿಯಾಗುಳಿದಿಲ್ಲ
ನಿನಗೂ ಗೊತ್ತಲ್ಲ!
- ಮೇಗರವಳ್ಳಿ ರಮೇಶ್