ಸರಿ ಸುಮಾರು ಎರೆಡು ನೂರು ವರ್ಷಗಳ ಕಾಲ ಮತ್ತೊಬ್ಬರ ಅಧೀನದಲ್ಲಿದ್ದ ಭಾರತ ೧೯೪೭ರ ಆಗಸ್ಟ್ ಮಾಹೆಯ ೧೫ನೇ ದಿನಾಂಕದಂದು ಸ್ವತಂತ್ರವಾಯಿತು. ಇದಾದ ಎರೆಡು ವರ್ಷದ ನಂತರ, ಅಂದರೆ ೧೯೫೦ರ ಜನವರಿ ೨೬ರಂದು ಭಾರತ ಗಣರಾಜ್ಯವಾಯಿತು. ತನ್ನದೇ ಸಂವಿಧಾನ ಅಂದಿನಿಂದ ಜಾರಿಗೊಳಿಸಲಾಯಿತು.
ಇಂದು ಭಾರತ ತನ್ನ ೭೨ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಆಚರಣೆಯಲ್ಲಿ ವಿವಿಧ ರಾಜ್ಯಗಳ ಸ್ತಭ್ದ ಚಿತ್ರಗಳು ಭಾರತೀಯ ಸೇನೆಯ, ಮೂರೂ ವಿಭಾಗಗಳ ಬಲ ಪ್ರದರ್ಶನ ಹಾಗೂ ಹೊಸದಾಗಿ ಸೇರ್ಪಡೆಯಾಗಿರುವ ಹೊಸ ಹೊಸ ಯುದ್ಧ ಉಪಕರಣಗಳು, ‘ಅನೇಕತೆಯಲ್ಲಿ ಏಕತೆ’ಯನ್ನು ಬಿಂಬಿಸುವ ಎಲ್ಲಾ ರಾಜ್ಯಗಳ ವಿಶಿಷ್ಟ, ವೈವಿಧ್ಯ ನೃತ್ಯ ಪ್ರದರ್ಶನಗಳು ಪ್ರಮುಖ ಆಕರ್ಷಣೆ. ಇವುಗಳನ್ನು ಸಾವಿರಾರು ಭಾರತೀಯರು, ಭಾರತದ ರಾಜಧಾನಿ ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ನೋಡಿ ಕಣ್ತುಂಬಿಕೊಂಡರೆ, ಲಕ್ಷಾಂತರ ಮಂದಿ ದೇಶ ವಿದೇಶಗಳಲ್ಲಿ ನೇರ ಪ್ರಸಾರವನ್ನು ದೂರದರ್ಶನ ಹಾಗೂ ಇನ್ನಿತರೆ ದೃಶ್ಯ ಮಾಧ್ಯಮಗಳ ಮೂಲಕ ನೋಡಿ ಕೃತಾರ್ಥರಾಗುತ್ತಾರೆ.
ಫೋಟೋ ಕೃಪೆ : The indian Express
ಗಣರಾಜ್ಯೋತ್ಸವದ ಹಿಂದಿರುವ ವಿಶೇಷತೆಗಳು ಏನು? ನೋಡುವ ಬನ್ನಿ…
● ಭಾರತದ ದೇಶವು ೨೬ನೇ ಜನವರಿ ೧೯೫೦ರ ಬೆಳಿಗ್ಗೆ ೧೦.೧೮ ಗಂಟೆಗೆ ಗಣರಾಜ್ಯವಾಯಿತು.
● ಭಾರತ ಗಣರಾಜ್ಯವಾದ ಆರು ನಿಮಿಷಗಳ ತರುವಾಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲಿನಲ್ಲಿ, ಡಾ, ರಾಜೇಂದ್ರ ಪ್ರಸಾದ್, ರವರು ಭಾರತದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
● ಗಣರಾಜ್ಯೋತ್ಸವದ ಪೆರೇಡ್ ಮೊದಲ ಬಾರಿ ರಾಜ್‌ಪಥ್‌ನಲ್ಲಿ ನಡೆದದ್ದು ೧೯೫೫ರಲ್ಲಿ. ಅಲ್ಲಿಯವರೆಗೆ ಅಂದರೆ, ೧೯೫೦ ರಿಂದ ೧೯೫೪ ಐದು ವರ್ಷಗಳ ಕಾಲ ಗಣರಾಜ್ಯೋತ್ಸವದ ಆಚರಣೆಗೆ ಸಾಕ್ಷಿಯಾಗಿದ್ದು ಕೆಂಪು ಕೋಟೆ, ರಾಷ್ಟ್ರೀಯ ಕ್ರೀಡಾಂಗಣ , ಕಿಂಗ್ಸ್ ವೇ ಮತ್ತು ರಾಮಲೀಲಾ ಮೈದಾನಗಳು.
● ದಿನಾಂಕ ಆಗಸ್ಟ್ ೧೫, ೧೯೪೭ರಂದು ಪೂರ್ಣ ಸ್ವಾತಂತ್ರ್ಯಗಳಿಸಿದರೂ, ಅದಾದ ಸುಮಾರು ಎರೆಡು ವರ್ಷ ಐದು ತಿಂಗಳ ನಂತರ, ಅಂದರೆ ದಿನಾಂಕ ಜನವರಿ ೨೬, ೧೯೫೦ರಲ್ಲಿ ಭಾರತ ಗಣರಾಜ್ಯವಾಯಿತು.
● ಭಾರತ ಸಂವಿಧಾನದ ಕರಡನ್ನು ತಯಾರಿಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು, ಡಾ, ಬಿ,ಆರ್ ಅಂಬೇಡ್ಕರ್ ಅವರನ್ನು ಅದ್ಯಕ್ಷರನ್ನಾಗಿ ಚುನಾಯಿಸಿತು. ಡಾ, ಬಿ,ಆರ್ ಅಂಬೇಡ್ಕರ್ ಅದ್ಯಕ್ಷತೆಯಲ್ಲಿದ್ದ ಈ ಸಮಿತಿಯಲ್ಲಿ ಎನ್, ಗೋಪಾಲಸ್ವಾಮಿ ಐಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಡಾ. ಕೆ.ಎಂ.ಮುನ್ಶಿ, ಸಯ್ಯದ್ ಮೊಹಮ್ಮದ್ ಸಾದುಲ್ಲಾ, ಬಿ.ಎಲ್.ಮಿಟ್ಟರ್ ಹಾಗೂ ಡಿ.ಪಿ ಕೈತಾನ್ ಇದ್ದರು. (ಅನಾರೋಗ್ಯದ ಕಾರಣ ಬಿ.ಎಲ್.ಮಿಟ್ಟರ್ ಸಮಿತಿಯಿಂದ ಹೊರಬಂದರೆ, ೧೯೪೮ರಲ್ಲಿ ಡಿ.ಪಿ ಕೈತಾನ್ ಸಾವನ್ನಪಿದ್ದರು. ಎನ್. ಮಾಧವ್‌ರಾವ್ ಹಾಗೂ ಟಿ.ಟಿ.ಕೃಷ್ಣಮಾಚಾರಿ ಇವರುಗಳು ಸಮಿತಿಯಲ್ಲಿ ಅವರ ಸ್ಥಾನ ತುಂಬಿದ್ದರು)
● ಈ ಸಮಿತಿಯು ಭಾರತ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಲು ಎರೆಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳ ಕಾಲಾವಕಾಶ ತೆಗೆದುಕೊಂಡಿತ್ತು.
● ಕರಡು ಸಂವಿಧಾನವು ೨೨ ವಿಭಾಗಗಳಲ್ಲಿ (ಪಾರ್ಟ್ಸ್) ೪೪೮ ವಿಧಿಗಳು (ಆರ‍್ಟಿಕಲ್ಸ್) ಹಾಗೂ ೧೨ ಅನುಸೂಚನೆ (ಶೆಡ್ಯೂಲ್ಗಳು) ಗಳನ್ನು ಹೊಂದಿದೆ. ಇದು ಇಡೀ ವಿಶ್ವದಲ್ಲೇ ಅತಿ ದೀರ್ಘವಾದ ಸಂವಿಧಾನ.
● ಭಾರತದ ಮೂಲ ಸಂವಿಧಾನ ಬೆರಳಚ್ಚಿನಲ್ಲಾಗಲಿ, ಮುದ್ರಣದಲ್ಲಾಗಲಿ ಇಲ್ಲ. ಬದಲಿಗೆ ಅಂದವಾದ ಕೈ ಬರಹದಲ್ಲಿ, ಹಿಂದಿ ಮತ್ತು ಆಂಗ್ಲ ಬಾಷೆಯಲ್ಲಿ ಬರೆಯಲಾಗಿದೆ.
● ಕೈ ಬರಹದಲ್ಲಿರುವ ಭಾರತ ಸಂವಿಧಾನದ ಪ್ರತಿಯಲ್ಲಿ, ೩೦೮ ಅಸೆಂಬ್ಲಿ ಸದಸ್ಯರ ಹಸ್ತಾಕ್ಷರವಿದೆ. ಜನವರಿ ೨೪, ೧೯೫೦ ರಂದು ಅಸೆಂಬ್ಲಿ ಸದಸ್ಯರು ತಮ್ಮ ಹಸ್ತಾಕ್ಷರವನ್ನು ಸಂವಿಧಾನದ ಪ್ರತಿಯಲ್ಲಿ ಲಗತ್ತಿಸಿದ್ದರು.
● ಹಸ್ತಾಕ್ಷರ ಹೊಂದಿರುವ ಹಿಂದಿ ಮತ್ತು ಆಂಗ್ಲ ಭಾಷೆಯ ಮೂಲ ಪ್ರತಿಗಳನ್ನು, ಸಂಸತ್ತಿನ ಗ್ರಂಥಾಲಯದಲ್ಲಿ ಸುರಕ್ಷಿತವಾಗಿ, ಹೀಲಿಯಮ್ ಅನಿಲ ತುಂಬಿದ ಬಾಕ್ಸ್ ಗಳಲ್ಲಿ ಇಡಲಾಗಿದೆ.
● ಈ ಸಂವಿಧಾನವು, ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ ಭಾರತ ಸರ್ಕಾರದ ಆಕ್ಟ್ (೧೯೩೫) ಗೆ ಪರ್ಯಾಯವಾಯಿತು.
● ಭಾರತೀಯರ ಧ್ಯೇಯ ವಾಕ್ಯ “ಸತ್ಯಮೇವ ಜಯತೆ” ಯನ್ನು ಅಥರ್ವ ವೇದದ ಮುಂಡಕೋಪನಿಷತ್‌ನಿಂದ ಪಡೆಯಲಾಗಿದೆ.
● ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಗಳು ಭಾರತದ ಧ್ವಜವನ್ನು ಹಾರಿಸಿದ ನಂತರ ೨೧ ಗನ್ ಸೆಲ್ಯೂಟ್ ನೀಡಲಾಗುವುದು.
● ಗಣರಾಜ್ಯೋತ್ಸವದ ಕೊನೆಯ ಹಾಗೂ ಮುಕ್ತಾಯದ ಕಾರ್ಯಕ್ರಮ ‘ಬೀಟಿಂಗ್ ದ ರೆಟ್ರೀಟ್’. ಇದು ಜನವರಿ ೨೯ ರಂದು, ವಿಜಯ್ ಚೌಕ್‌ನಲ್ಲಿ, ಸೇನೆಯ ಎಲ್ಲಾ ವಿಭಾಗಗಳ ಉಪಸ್ಥಿತಿಯಲ್ಲಿ ನಡೆಯುತ್ತದೆ.
ಫೋಟೋ ಕೃಪೆ : sify.com
(ಇವೇ ಗಣರಾಜ್ಯೋತ್ಸವದ ಕೆಲವು ವಿಶೇಷತೆಗಳು. ಈ ಸಂಕ್ಷಿಪ್ತ ಮಾಹಿತಿಯನ್ನು ಅಂತರ್ಜಾಲದಿಂದ ಹೆಕ್ಕಿ ತೆಗೆದು ತಮ್ಮ ಮುಂದೆ ಇಟ್ಟಿದ್ದೇನೆ. ದಯವಿಟ್ಟು ಸ್ವೀಕರಿಸಿ. ಮುಗಿಸುವ ಮುನ್ನ ಎಂದಿನಂತೆ ಇಂದು ಸಹ ಒಂದು ಸಣ್ಣ (ತರಲೆ/ತಲೆಹರಟೆ) ಪ್ರಶ್ನೆಯನ್ನು ತಮ್ಮೆಲ್ಲರ ಮುಂದೆ ಮಂಡಿಸುತ್ತಿದ್ದೇನೆ.
ಅದೇನೆಂದರೆ? ಅಮೇರಿಕದ ಪ್ರೆಸಿಡೆಂಟರನ್ನಾಗಲಿ, ರಷ್ಯಾದ ಪ್ರೆಸಿಡೆಂಟರನ್ನಾಗಲಿ ನಾವುಗಳು ಅಮೇರಿಕದ “ಅಧ್ಯಕ್ಷರು”, ರಷ್ಯಾದ “ಅಧ್ಯಕ್ಷರು” ಎಂದೇ ಸಂಬೋಧಿಸುತ್ತೇವೆ. ಆದರೆ, ಭಾರತದ ಪ್ರೆಸಿಡೆಂಟರನ್ನು ಮಾತ್ರ “ರಾಷ್ಟ್ರಪತಿ” ಎನ್ನುತ್ತೇವೆ. ಹೀಗೇಕೆ? ಕಾರಣ ಏನಿರಬಹುದು?…)
ಜೈ ಹಿಂದ್
- ಶಿವಕುಮಾರ್ ಬಾಣಾವರ (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ. ಎಲ್)