ಕಾಳುಮೆಣಸಿನ ರಾಣಿಯ ಕಾನೂರು ಕೋಟೆಯ ಕುರಿತಾದ ಕಾದಂಬರಿಯನ್ನು ಲೇಖಕ ಡಾ.ಗಜಾನನ ಶರ್ಮಾ ಅವರು ಸದ್ಯದಲ್ಲೇ ಪುಸ್ತಕರೂಪದಲ್ಲಿ ಹೊರತರಲಿದ್ದಾರೆ…ಇದೊಂದು ರೋಚಕ ಕಾದಂಬರಿ. ಅದರಲ್ಲಿನ ಒಂದಷ್ಟು ತುಣುಕುಗಳನ್ನು ಓದುಗರಿಗೆ ಆಕೃತಿ ಕನ್ನಡ ನೀಡುತ್ತಿದೆ…
ಕಾನೂರು ಕೋಟೆ ಅಲ್ಲಿಂದ ಮೂರು ಹರದಾರಿ ದೂರದಲ್ಲಿದೆಯೆಂದೂ, ಗೇರುಸೊಪ್ಪೆಯ ಅನರ್ಘ್ಯ ಸಂಪತ್ತು ಹಾಗೂ ಅಪಾರ ಪ್ರಮಾಣದ ಕಾಳುಮೆಣಸಿನ ಸಂಗ್ರಹವೂ ಅಲ್ಲಿದೆಯೆಂದು ಬೇಹುಗಾರರು ಬಂದು ತಿಳಿಸಿದಾಗ ಅಟಾಯಿಡೆ ಕುಣಿದು ಕುಪ್ಪಳಿಸಿದ.
ಪವಿತ್ರ ರೋಮಿನ ಧರ್ಮ ಯುದ್ಧವನ್ನೇ ಗೆದ್ದ ತನ್ನಂತಹ ವೀರಪುರುಷನಿಗೆ ಇದ್ಯಾವುದೋ ಕಾಡು ಪಾಗನ್ ( ಮೂರ್ತಿ ಪೂಜಕರನ್ನು ಹಂಗಿಸುವ ಯುರೋಪಿಯನ್ ಪದ) ಹೆಂಗಸು ಸವಾಲು ಹಾಕುವುದೆಂದರೇನೆಂದು ಗರ್ಜಿಸಿದ. ಮರುದಿನ ಬೆಳಿಗಿನ ಉಪಾಹಾರ ಮುಗಿಸಿ ನಗಿರೆಯ ಅಪಾರ ಸಂಪತ್ತನ್ನು ಸೂರೆಗೈಯ್ಯುವ ರಣೋತ್ಸಾಹದಲ್ಲಿ ಪರಂಗಿ ಸೈನ್ಯವನ್ನು ಕಾನುಹಾದಿಯಲ್ಲಿ ಕಾನೂರು ಘಟ್ಟದತ್ತ ನುಗ್ಗಿಸಿದ. ಮೊದಮೊದಲು ಅತ್ಯುತ್ಸಾಹದಿಂದ ನುಗ್ಗಿದ ಸೈನ್ಯಕ್ಕೆ ಜಿನಬೈಲಿನಿಂದ ಒಂದೆರಡು ಹರದಾರಿ ದೂರ ಕ್ರಮಿಸುವಷ್ಟರಲ್ಲೇ ಕಾನೂರಿನ ಹಾದಿ ತಾವು ಭಾವಿಸಿದಷ್ಟು ಸುಲಭವಲ್ಲವೆಂಬ ಸತ್ಯ ಅರಿವಾಗತೊಡಗಿತು.
ಪ್ರಾಕೃತಿಕ ಅಡಚಣೆಗಳ ಜೊತೆಗೆ ರಾಣಿಯೂ ಮಾರ್ಗ ದುರ್ಗಮವಾಗುವಂತೆ ಹಲವು ಕೃತಕ ತಡೆಗಳನ್ನು ಒಡ್ಡಿದ್ದಳು. ಸಹ್ಯಾದ್ರಿ ಶ್ರೇಣಿಯ ದಟ್ಟಡವಿಯನ್ನು ಹೊಕ್ಕ ಸೈನಿಕರ ಕೆಂಪು ಚರ್ಮ ಕೆಂಜಿಗೆ, ಮುಳ್ಳುಸೀಗೆ, ಬೆತ್ತ, ಬಾಡಹರ್ಕದಂತಹ ಮುಳ್ಳುಗಿಡ ಬಳ್ಳಿಗಳಿಗೆ ಸಿಕ್ಕಿ ಮತ್ತಷ್ಟು ಕೆಂಪಾಯಿತು.
ಆನೆ ಹುಲಿ ಚಿರತೆಗಳ ಕೂಗು ಅವರೆದೆಯನ್ನು ನಡುಗಿಸುತ್ತಿತ್ತು. ಮಳೆಗಾಲ ಮುಗಿದು ಹೆಚ್ಚು ದಿನ ಕಳೆದಿರಲಿಲ್ಲವಾಗಿ ಹೆಜ್ಜೆಯಿಟ್ಟಲ್ಲಿ ನೆಲ ಜಾರುತ್ತಿತ್ತು. ಮಳೆಗಾಲದಲ್ಲಿ ಮುರಿದು ಬಿದ್ದ ಬೃಹತ್ ವೃಕ್ಷಗಳು ದಾರಿಗಡ್ಡವಾಗಿದ್ದವು. ಬಾಗಿದ್ದ ಗಿಡ ಮರ ಬಳ್ಳಿಗಳು ಹಣೆಗೇ ಬಡಿಯುತ್ತಿದ್ದವು. ಕೊಳೆತ ತರಗೆಲೆಗಳ ರಾಶಿಯಿಂದ ಹಾವು ಚೇಳು ಇಂಬಳ ಕಟ್ಟಿರುವೆಗಳ ಸಾಲು ಹೊರಬರುವುದನ್ನು ಕಂಡು ಸೈನಿಕರು ಮುಂದೆ ಹೋಗಲು ಅಂಜತೊಡಗಿದರು. ಅವರಿಗೆ ಮುಸಿಯ, ಗುಮ್ಮನ ಹಕ್ಕಿ, ಕಾನುಕುರಿಗಳು ಕೂಗಿದರೂ ನಡುಕ ಹುಟ್ಟುತ್ತಿತ್ತು. ಕಡಿದಾದ ಏರನ್ನು ಹತ್ತಲಾರದೆ ಹೇರೆತ್ತು ಕುದುರೆಗಳು ಜೊಲ್ಲು ಸುರಿಸತೊಡಗಿದವು. ಏರುದಾರಿಯಲ್ಲಿ ನಡೆಯಲಾರದೆ ತಲೆಹೊರೆ ಹೊತ್ತ ಗುಲಾಮರು ಬಳಲಿದರು. ಇಂತಹ ದುರ್ಗಮ ಅರಣ್ಯದಲ್ಲಿ ಸಂಚರಿಸಿ ಅನುಭವವಿರದಿದ್ದ ಅಟಾಯಿಡೆ ಸ್ವತಃ ಬೆವರಿ ಬಸವಳಿದ. ನೀರಿನ ಕಡಾಯಿಗಳು ಬರಿದಾಗಿದ್ದರೂ, ಹರಿಯುವ ನೀರಿಗೆ ವಿಷ ಬೆರೆಸಿರಬಹುದೆಂಬ ಶಂಕೆಯಿಂದ ಹಳ್ಳಗಳ ನೀರು ಕುಡಿಯಲೂ ಭಯಗೊಂಡು ಯೋಧರು ಬಾಯಾರಿಕೆಯಿಂದ ನರಳಿದರು.
ಈ ನಡುವೆ ಮರಗಳ ಮರೆಯಿಂದ ವಿಷ ಸವರಿದ ಬಾಣಗಳು, ಕವಣೆಗಲ್ಲು, ಉರುಳುಗಲ್ಲು ಬಂದು ಬೀಳತೊಡಗಿದ್ದವು. ಈಟಿಗಳನ್ನೂ, ಮುಳ್ಳುಮರದ ದಂಡಗಳನ್ನೂ ಮೈಮೇಲೆ ಎಸೆಯಲಾಗುತ್ತಿತ್ತು. ನಡು ನಡುವೆ ಸೈನಿಕರ ಮೇಲೆ ಮರಗಳು ಉರುಳಿ ಬೀಳುತ್ತಿದ್ದವು. ಬಳ್ಳಿಗಳನ್ನು ಹಿಡಿದು ರೊಂಯ್ಯನೆ ಬಂದು ಬಂದೂಕು, ಕತ್ತಿ ಈಟಿಗಳನ್ನು ಕಸಿದು ಓಡಲಾಗುತ್ತಿತ್ತು. ಮರದ ಮೇಲಿನಿಂದ ಮೈಗೆ ತಾಗಿದರೆ ಬೊಕ್ಕೆಗಳೇಳುವ, ತುರಿಕೆ ಉಂಟಾಗುವ ಗಿಡಮರಗಳ ರಸಗಳನ್ನು ಎರೆಚಲಾಗುತ್ತಿತ್ತು. ಸರಸರನೆ ಕತ್ತಿಯನ್ನು ಕುಕ್ಕುತ್ತ ಮರವೇರಿ ಕೊಂಬೆಗಳ ಮೇಲೆ ಕೈಬಿಟ್ಟು ನಡೆಯುತ್ತ ತಮ್ಮ ಮೇಲೆ ಆಯುಧಗಳನ್ನೆಸೆಯುವ ಗೊಂಡರು, ಹಸಲರು ಕಾನುದೀವರ ಪರಿಣತಿಯನ್ನು ಕಂಡು ಪರಂಗಿಗಳು ಅವರೇನು ಮನುಷ್ಯರೋ ಮಂಗಗಳೋ ಎಂದು ಆಶ್ಚರ್ಯಪಟ್ಟರು.
ಈ ನಡುವೆ ನಗಿರೆಯವರು ಹಾರಿಬಿಟ್ಟ ಹೆಜ್ಜೇನು, ಭಂಡಾರಿಹುಳಗಳಂತಹ ಕೀಟಗಳು ಪರಂಗಿ ಯೋಧರನ್ನು ಕಚ್ಚಿ ಹಿಂಸಿಸತೊಡಗಿದ್ದವು. ಹೋಗುವ ದಾರಿಯ ಪಕ್ಕದ ಗಿಡಗಳಲ್ಲೆಲ್ಲ ಚಿಗುಳಿ, ಕಟ್ಟಿರುವೆ, ಕೊಣಜಿ ಕೊಟ್ಟೆಗಳನ್ನು ಕಟ್ಟಿಟ್ಟಿದ್ದರು. ಅವುಗಳ ಕಡಿತಕ್ಕೆ ಪರಂಗಿ ಸೈನಿಕರು ತಮ್ಮ ಸಮವಸ್ತ್ರಗಳನ್ನು ಕಳಚಿಕೊಂಡು ಒದ್ದಾಡುವಂತಾಯಿತು. ದಟ್ಟಕಾಡಿನಲ್ಲಿ ಅವರು ಸಿಡಿಮದ್ದನ್ನೂ ಎಸೆಯುವಂತಿರಲಿಲ್ಲ. ಎಸೆದರೆ ಅದರ ಸ್ಪೋಟಕ್ಕೆ ಸಿಕ್ಕಿ ಉರುಳುವ ಮರಗಿಡ ಬಂಡೆಗಳು ಎಸೆದವರಿಗೇ ಅಪಾಯ ಉಂಟುಮಾಡುತ್ತಿದ್ದವು. ಈ ಪರಿಸ್ಥಿತಿಗೆ ಕಂಗೆಟ್ಟ ಅಟಾಯಿಡೆ ಸ್ವಲ್ಪ ಸುಧಾರಿಸಿಕೊಂಡು ಮುಂದೆ ಹೋಗೋಣವೆಂದು ಒಂದು ಜಾಗದಲ್ಲಿ ಕುಳಿತುಕೊಳ್ಳಲು ತನ್ನ ಕಪ್ತಾನನಿಗೆ ಸೂಚಿಸಿದ. ಅವರು ಕುಳಿತ ಜಾಗಕ್ಕೆ ಮೇಲಿನಿಂದ ಉರುಳುಗಲ್ಲುಗಳು, ಮರಗಿಡಗಳ ಮರೆಯಿಂದ ವಿಷಸರ್ಪಗಳು, ಚೇಳು ಹುಲಿಸಾಲಿಂಗಗಳು ಬಂದು ಬೀಳತೊಡಗಿದವು.
ಹಿಂಸ್ರಕಾಡುಪ್ರಾಣಿಗಳು ಮೈಮೇಲೇ ನುಗ್ಗತೊಡಗಿದವು. ಮರದ ಮೇಲಿಂದ ಒಂದೇ ಸವನೆ ವಿಷಸವರಿದ ಬಾಣಗಳು ಬಂದು ಕುಳಿತವರನ್ನು ಗಾಯಗೊಳಿಸತೊಡಗಿದವು. ಹೋಗಲಿ, ಕುಳಿತುಕೊಳ್ಳುವುದೇ ಬೇಡವೆಂದು ಎದ್ದು ಮುಂದೆ ಹೊರಟರೆ, ಮುಂದೆ ದಾರಿಗಡ್ಡ ಬೃಹತ್ ಗುಂಡಿಗಳನ್ನು ತೋಡಲಾಗಿತ್ತು. ಬೃಹತ್ ಗಾತ್ರದ ಬಂಡೆಗಳನ್ನು ಉರುಳಿಸಿಡಲಾಗಿತ್ತು. ಮುಳ್ಳುಗಿಡಗಳನ್ನು ಕಡಿದು ಹಾಸಲಾಗಿತ್ತು. ಇದ್ದಕ್ಕಿದ್ದಂತೆ ಹೋಗುತ್ತಿದ್ದ ಸೈನಿಕರ ಮೇಲೇ ಮರಗಳು ಉರುಳಿ ಬೀಳತೊಡಗಿದವು. ಕಡಿಯುವವರೇ ಕಾಣದೆ ಮರಗಳು ಬೀಳುತ್ತಿರುವುದು ಹೇಗೆಂದು ನೋಡಿದರೆ ಮೊದಲೇ ಮರಗಳನ್ನು ಕಡಿದು ಹಗ್ಗದಲ್ಲಿ ಪಕ್ಕದ ಮರಗಳಿಗೆ ಕಟ್ಟಿಡಲಾಗಿತ್ತು. ಇವರು ಹತ್ತಿರ ಹೋಗುತ್ತಿದ್ದಂತೆ ಹಗ್ಗ ಕತ್ತರಿಸಿ ಮರಗಳನ್ನು ಉರುಳಿಸಲಾಗುತ್ತಿತ್ತು. ಎಗ್ಗು ಸಿಗ್ಗಿಲ್ಲದೆ ಮಹಾಸಾಗರಗಳನ್ನು ದಾಟಿ ಖಂಡಾಂತರಗಳಲ್ಲಿ ಕೀರ್ತಿಪತಾಕೆ ಹಾರಿಸಿ ಬಂದವರು ನಾವೆಂಬ ಕೆಂದೊಗಲಿನ ಕೆಚ್ಚು, ಸಹ್ಯಾದ್ರಿ ಬೆಟ್ಟದ ದಟ್ಟಡವಿಯ ನಟ್ಟ ನಡುವೆ ಮಣ್ಣುಪಾಲಾಗತೊಡಗಿತ್ತು.
ಪರಂಗಿ ಯೋಧರು ಪರಿಪರಿ ಪರಿತಪಿಸಿದರು. ತಮ್ಮ ತರಬೇತಿಯಲ್ಲಿ ಕಲಿತ ಗುಡ್ಡವೇರುವ, ಬಂಡೆ ಹತ್ತುವ, ಬಳ್ಳಿ ಹಿಡಿದು ಜೋತಾಡಿ ಮುನ್ನುಗ್ಗುವ ಕಲಿಕೆಗಳೆಲ್ಲ ಈ ದಟ್ಟಡವಿಯ ನಡುವಲ್ಲಿ ಬಳಕೆಗೆ ಬರಲು ಸೋತವೆಂದು ನೊಂದು ತಮ್ಮ ಕಪ್ತಾನನ ಮುಖ ನೋಡಿದರು. ಗುಂಡು ಹಾರಿಸಿ ಯಾರ ಗುಂಡಿಗೆಯನ್ನೂ ಸೀಳಿ ಎಸೆವೆನೆಂಬ ಬಂದೂಕಿನ ಮದ ಮಣ್ಣುಮುಕ್ಕಿತ್ತು. ಖಡ್ಗಗಳು ಶತ್ರುಗಳ ಕತ್ತನ್ನು ಕತ್ತರಿಸಿ ಉರುಳಿಸುವುದಿರಲಿ ಉರುಳಿಬಿದ್ದ ಕೊಂಬೆಗಳನ್ನು ಕತ್ತರಿಸಲೂ ಕೈಸೋತು ಒರೆ ಸೇರಿದ್ದವು.ಸೈನಿಕರ ಅಸಹಾಯಕ ಸ್ಥಿತಿಯನ್ನು ಮನಗಂಡ ಕಪ್ತಾನ ಡಿಸಿಲ್ವ ಹಿಂದಿರುಗೋಣವೆಂದು ಅಟಾಯಿಡೆಯ ಬಳಿ ಗೋಗರೆದ. ಮೊದಲು ಅಟಾಟೋಪ ತೋರಿದ ಅಟಾಯಿಡೆ, ಪರಿಸ್ಥಿತಿ ಕೈ ಮೀರುತ್ತಿರುವ ವಾಸ್ತವವನ್ನು ಮನಗಂಡು ಸಮ್ಮತಿ ನೀಡಿದ. ಪರಂಗಿಸೈನ್ಯ ಮೆಲ್ಲನೆ ಹಿಂದೆ ಸರಿದು ಸದ್ದಿಲ್ಲದೆ ಹೊನ್ನಾವರ ಸೇರಿಕೊಂಡಿತು. ಅಟಾಯಿಡೆ ಅವಮಾನವನ್ನು ತಡೆದುಕೊಳ್ಳಲಾಗದೇ ಅರೆಹುಚ್ಚನಂತೆ ಕುಣಿದಾಡಿದ. ಅವನ ಆತ್ಮಾಭಿಮಾನಕ್ಕೆ ಬಲವಾದ ಪೆಟ್ಟು ಬಿದ್ದಿತ್ತು.
ಇನ್ನೂರು ಸೈನಿಕರು ರಾಣಿಗೆ ಸೆರೆಸಿಕ್ಕಿದ್ದರು. ನೆಲದ ಮೇಲಿನಿಂದ ಹೊರಟ ಮೆಂಜಿಸನ ತುಕಡಿಯನ್ನೂ ಇದೇ ಬಗೆಯ ಅರಣ್ಯಯುದ್ಧದಲ್ಲಿ ಹೆದರಿಸಿ ಹಿಂದಕ್ಕೋಡಿಸಿ ಅವರು ಹೆದರಿದ ಗುಡ್ಡವನ್ನು ಹೇಡಿಗುಡ್ಡವೆಂಬ ಅಡ್ಡಹೆಸರಿನಿಂದ ಕರೆದು ಅವಮಾನಿಸಿ ಕಳುಹಿಸಿದ್ದರು.’ಹೊನ್ನಾವರದ ಕೋಟೆಯನ್ನು ವಶಪಡಿಸಿಕೊಂಡಿದ್ದೇವೆ. ರಾಣಿಯು ನಮ್ಮನ್ನು ಎದುರಿಸಲಾರದೆ ಪರಾರಿಯಾದಳು. ಅವಳಿಗೆ ಕಪ್ಪ ಸಲ್ಲಿಸಲು ಸೂಚಿಸಲಾಗಿದೆ’ ಎಂದು ಅಟಾಯಿಡೆ ಪೋರ್ಚುಗಲ್ಲಿಗೆ ಪತ್ರ ರವಾನಿಸಿ, ಬಸ್ರೂರನ್ನು ಆಕ್ರಮಿಸುವ ತಯಾರಿ ಆರಂಭಿಸಿದ. ಈ ಸುಳಿವನ್ನು ಅರಿತ ರಾಣಿ ಬಸ್ರೂರಿಗೆ ಸುದ್ದಿ ಕಳಿಸಿ, ಅವರ ಸಹಾಯಕ್ಕಾಗಿ ಮೂರು ಸಾವಿರ ಆಯ್ದ ಸೈನಿಕರನ್ನು ರವಾನಿಸಿದಳು.
ಗೇರುಸೊಪ್ಪೆಯ ಪರಾಭವ ಅಟಾಯಿಡೆಯನ್ನು ಬಿಟ್ಟೂ ಬಿಡದೆ ಕಾಡುತ್ತಿತ್ತು. ಅವನಿಗೆ ಕುಂತರೂ ನಿಂತರೂ ಅಡವಿಯ ನಡುವಿನ ಕಡು ಅಸಹಾಯಕತೆಯ ಕ್ಷಣಗಳು ಕಣ್ಣ ಮುಂದೆ ಬರುತ್ತಿದ್ದವು. ರಾಣಿಯ ನೆನಪಾದರೆ ಸಾಕು, ಆತನ ಧಮನಿಧಮನಿಗಳಲ್ಲಿ ನೆತ್ತರೊತ್ತಡವೇರಿ ಉನ್ಮತ್ತನಾಗುತ್ತಿದ್ದ. ಸೊಂಡಿಲೊಳಗೆ ಕಟ್ಟಿರುವೆ ಹೊಕ್ಕ ಆನೆಯಂತೆ ಅರಚುತ್ತಿದ್ದ.
ರಾಣಿ ಮಾತ್ರ ತನ್ನ ಜೈನಧರ್ಮದ ದ್ಯೇಯವಾಕ್ಯ, “ಅಹಿಂಸಾ ಪರಮೋ ಧರ್ಮ” ಎಂಬುದನ್ನು ಅಕ್ಷರಶಃ ಪಾಲಿಸಿ, ರಕ್ತಪಾತವಿಲ್ಲದೆ ಯುದ್ದಗೆದ್ದ ಸಂತಸದಲ್ಲಿ ನೆಮ್ಮದಿಯಿಂದ ಕಾನೂರಿನಿಂದ ಗೇರುಸೊಪ್ಪೆಗೆ ಮರಳಿದ್ದಳು.
- ಡಾ.ಗಜಾನನ ಶರ್ಮಾ