ನಾಯಿಗಳಲ್ಲಿ ಪಾರ್ವೋ ಸೋಂಕು – ಡಾ ಯುವರಾಜ್ ಹೆಗಡೆ



ಉತ್ತಮ ತಳಿಯ ಶ್ವಾನಗಳನ್ನು ರಕ್ಷಣೆಗಾಗಿ, ಮುದ್ದಿಗಾಗಿ ದುಬಾರಿ ಬೆಲೆಗೆ ಖರೀದಿಸಿ ಪೋಷಿಸುವ ಮಾಲೀಕರಿಗೆ ಹಾಗೂ ವಿವಿಧ ಶ್ವಾನ ತಳಿಗಳನ್ನು ಬ್ರೀಡಿಂಗ್ ಮಾಡಿ ಉಪ ಉದ್ಯೋಗ ಕಂಡು ಕೊಂಡಿರುವ ಬ್ರೀಡರ್ ಗಳಿಗೆ ನಾಯಿಗಳಲ್ಲಿ ಕಾಣುವ “ಪಾರ್ವೋ” ಕಾಯಿಲೆ ಸಾಕಷ್ಟು ನಷ್ಟ ಮಾಡುತ್ತದೆ, ಮುಂದೆ ಓದಿ…

ನಾಯಿಗಳಲ್ಲಿ “ಪಾರ್ವೋ” (Canine Parvo Viral Infection ) ಹೆಚ್ಚಾಗಿ ಎಳೆಯ ವಯಸ್ಸಿನ ಶ್ವಾನಗಳಿಗೆ ಭಾದಿಸುವ ಸೋಂಕಾಗಿದ್ದು, ಜೀರ್ಣಾಂಗ ವ್ಯವಸ್ಥೆಯಾದ ಜಠರ ಹಾಗೂ ಕರುಳಿಗೆ ಉಂಟಾಗುವ ಹಾನಿಯಿಂದ ವಾಂತಿ, ಅತಿಸಾರ (ರಕ್ತ ಬೇದಿ) ಮತ್ತು ನಿರ್ಜಲೀಕರಣದಿಂದ ಬಳಲಿ ಸಾವನ್ನಪ್ಪುತ್ತವೆ. 6 ತಿಂಗಳ ಒಳಗಿನ ಮರಿಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುತ್ತದೆ. ವರ್ಷದ ಯಾವುದೇ ಸಮಯದಲ್ಲೂ ಪಾರ್ವೋ ಸೋಂಕು ಕಂಡು ಬರಬಹುದಾದರೂ ಹೆಚ್ಚಾಗಿ ಚಳಿಗಾಲ ಮುಗಿಯುವ ಸಮಯದಲ್ಲಿ ಅಂದರೆ ಜನವರಿ ಮಾಹೆಯಲ್ಲಿ ಪ್ರಾರಂಭವಾಗಿ ಬೇಸಿಗೆಯಾದ್ಯಂತ ಶ್ವಾನಗಳನ್ನು ಭಾದಿಸುತ್ತದೆ. ಮಳೆಗಾಲದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿರುತ್ತದೆ.

ಉತ್ತಮ ತಳಿಯ ಶ್ವಾನಗಳನ್ನು ರಕ್ಷಣೆಗಾಗಿ, ಮುದ್ದಿಗಾಗಿ ದುಬಾರಿ ಬೆಲೆಗೆ ಖರೀದಿಸಿ ಪೋಷಿಸುವ ಮಾಲೀಕರಿಗೆ ಹಾಗೂ ವಿವಿಧ ಶ್ವಾನ ತಳಿಗಳನ್ನು ಬ್ರೀಡಿಂಗ್ ಮಾಡಿ ಉಪ ಉದ್ಯೋಗ ಕಂಡು ಕೊಂಡಿರುವ ಬ್ರೀಡರ್ ಗಳಿಗೆ ಪಾರ್ವೋ ಸಾಕಷ್ಟು ನಷ್ಟವನ್ನುಂಟು ಮಾಡುತ್ತದೆ.

ಸೋಂಕಿನ ಲಕ್ಷಣಗಳು:

1. ಜ್ವರ
2. ಆಹಾರ ಬಿಡುವುದು
3. ವಾಂತಿ
4. ಅತಿಸಾರ ಹಾಗೂ ರಕ್ತ ಬೇದಿ
5. ನಿರ್ಜಲೀಕರಣ
6. ಚಿಕಿತ್ಸೆ ದೊರಕದ ಮರಿಗಳಲ್ಲಿ ಶೇ.90 ರಷ್ಟು ಮರಣ

ಪ್ರಾರಂಭದಲ್ಲಿ 104-106 ‘F ಜ್ವರ ಬಾದೆ, ಆಹಾರ ಬಿಡುವುದು, ಎರಡರಿಂದ ಮೂರುದಿನಗಳಲ್ಲಿ ತೀವ್ರತರನಾದ ವಾಂತಿ , ಕರುಳಿನಲ್ಲಿ ಉಂಟಾಗುವ ಹುಣ್ಣಿನಿಂದಾಗಿ ಅತಿಸಾರ (ರಕ್ತ ಬೇದಿ)ದಿಂದ ಬಳಲುತ್ತವೆ . ಸೋಂಕು ಹೆಚ್ಚಾಗಿ ಚಿಕ್ಕ ವಯಸ್ಸಿನ ಮರಿಗಳಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳುವುದರಿಂದ ನಿರ್ಜಲೀಕರಣದಿಂದ ಬೇಗನೆ ಸಾವನ್ನಪ್ಪುತ್ತವೆ. ಪ್ರೌಢ ವಯಸ್ಸಿನ ಶ್ವಾನಗಳಲ್ಲಿ ಸೋಂಕು ಕಂಡು ಬಂದರೂ ತೀವ್ರತೆ ಕಡಿಮೆ ಇರುವ ಕಾರಣ ಸೂಕ್ತ ಚಿಕಿತ್ಸೆ ದೊರಕಿದಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವಾಗಿ ಗುಣ ಮುಖವಾಗುತ್ತವೆ.

ಹರಡುವ ಬಗೆ: ಸೋಂಕಿಗೊಳಗಾದ ಶ್ವಾನದ ಮಲ ಹಾಗೂ ವಾಂತಿಯಲ್ಲಿ ವೈರಾಣುವಿನ ಸಾಂದ್ರತೆ ಹೆಚ್ಚಿದ್ದು, ಸುತ್ತಲಿನ ನೀರು, ಆಹಾರವನ್ನು ಕಲುಷಿತಗೊಳಿಸಿ ರೋಗಪ್ರಸಾರವಾಗುತ್ತದೆ . ಈ ಮೂಲಕ ಕಲುಷಿತ ಆಹಾರ ಮತ್ತು ನೀರು ಈ ಸೋಂಕು ಹರಡಲು ಪ್ರಮುಖ ಕಾರಣವಾಗಿರುತ್ತದೆ. ಸೋಂಕಿನಿಂದ ಗುಣಪಟ್ಟ ಶ್ವಾನಗಳು ಎರಡು ವಾರಗಳವರೆಗೆ ತಮ್ಮ ದೇಹದಿಂದ ವೈರಾಣುವನ್ನು ಮಲ ವಿಸರ್ಜನೆಯ ಮುಖಾಂತರ ಹೊರಹಾಕುತ್ತವೆ ಹಾಗೂ ಆರೋಗ್ಯವಂತ ಶ್ವಾನಗಳಲ್ಲಿ ರೋಗ ಪ್ರಸಾರ ಮಾಡಲು ಕಾರಣವಾಗುತ್ತವೆ. ಇನ್ನುಳಿದಂತೆ ಕಫ, ದೇಹದಿಂದ ಸೃಜಿಸುವ ಎಲ್ಲಾ ವಿಸರ್ಜನೆಗಳಲ್ಲಿ ವೈರಾಣುಗಳು ಹೊರಸೂಸಲ್ಪಟ್ಟರೂ ಅಷ್ಟು ಮಹತ್ವ ಪಡೆದಿರುವುದಿಲ್ಲ.

ಚಿಕಿತ್ಸೆ: ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೆ ಮರಿಗಳಿಗೆ ಹತ್ತಿರದ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಸೂಕ್ತ. ಇಲ್ಲದಿದ್ದಲ್ಲಿ ಮರಣದ ಪ್ರಮಾಣವು ಹೆಚ್ಚುವ ಸಾಧ್ಯತೆ ಇರುತ್ತದೆ. ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿರುವುದಿಲ್ಲ. ಕೇವಲ ರೋಗದ ಗುಣ ಲಕ್ಷಣಗಳನ್ನು ಆದರಿಸಿ ವೈದ್ಯರು #ಚಿಕಿತ್ಸೆ ನೀಡುತ್ತಾರೆ. ನಿರ್ಜಲೀಕರಣದಿಂದ ಬಳಲುವ ಕಾರಣ ಹೆಚ್ಚಾಗಿ ಡ್ರಿಪ್ ನೀಡುವ ಮುಖಾಂತರ ಅದನ್ನು ತಡೆಗಟ್ಟುವ ವೈದ್ಯರು, ಆಂಟಿಬಯೋಟಿಕ್ ಗಳು, ಕರುಳಿನಲ್ಲಿ ರಕ್ತ ಸ್ರಾವವಾಗದಂತೆ ಹಾಗೂ ವಾಂತಿಯಾಗದಂತೆ ಅಗತ್ಯ ಚಿಕಿತ್ಸೆಗಳನ್ನು ನೀಡುವ ಮುಖಾಂತರ ನಿಯಂತ್ರಿಸುತ್ತಾರೆ. ಒಮ್ಮೆ ವಾಂತಿ ಕಡಿಮೆಯಾದ ನಂತರ (ಸೋಂಕು ತಗಲಿ 5-6 ದಿನಗಳ ಬಳಿಕ) ದ್ರವ ರೂಪದ ಆಹಾರ, ಗಂಜಿ, ಎಳನೀರು, ಓ.ಆರ್.ಎಸ್ ಗಳನ್ನು ನೀಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಮಾರುಕಟ್ಟೆಯಲ್ಲಿ ಕರುಳಿನ ಸೋಂಕಿನ ಸಂದರ್ಭಗಳಲ್ಲಿ ನೀಡಬಹುದಾದ ಸಿದ್ದ ಆಹಾರ ಕೂಡ ಲಭ್ಯವಿದ್ದು ವೈದ್ಯರ ಸಲಹೆಯಂತೆ ನೀಡಬಹುದಾಗಿದೆ.
ಸೋಂಕಿಗೆ ಒಳಗಾದ ನಾಯಿಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ದೊರಕಿದಲ್ಲಿ ಶೇ 80-85 ರಷ್ಟು ಗುಣಮುಖವಾಗುವ ಸಾದ್ಯತೆ ಇದೆಯಾದರೂ ಚಿಕಿತ್ಸಾ ಅವಧಿ 7-10 ದಿನಗಳವರೆಗೆ ನಿಗಾವಹಿಸಬೇಕಾಗುತ್ತದೆ. ಚಿಕಿತ್ಸೆ ದೊರಕದ ಶ್ವಾನಗಳಲ್ಲಿ ಮರಣದ ಪ್ರಮಾಣ ಶೇ 90 ರಷ್ಟಿರುತ್ತದೆ.

ತಡೆಗಟ್ಟುವ ವಿಧಾನ : ಸೋಂಕಿನ ತೀವ್ರತೆ ಹಾಗೂ ಮರಣದ ಪ್ರಮಾಣ ಹೆಚ್ಚಿರುವುದರಿಂದ ಮುಂಜಾಗ್ರತಾ ವಿಧಾನವಾಗಿ ಸೋಂಕನ್ನು ಲಸಿಕೆ ಹಾಕುವುದರ ಮುಖಾಂತರ ತಡೆಗಟ್ಟಬಹುದಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಲಸಿಕೆ ಲಭ್ಯವಿದ್ದು, ಶ್ವಾನಗಳಿಗೆ ತಗಲುವ ಪ್ರಮುಖ ಕಾಯಿಲೆಗಳಾದ ಪಾರ್ವಾ, ಡಿಸ್ಟೆಂಪರ್,ಹೆಪಟೈಟಿಸ್, ಪ್ಯಾರಾ ಇನ್ ಪ್ಲೋಯೆನ್ಸಾ, ಇಲಿಜ್ವರಗಳಿಗೆ ಸಂಯೋಜಿಸಿದ ( Combined Vaccine) ಲಸಿಕೆ ಲಭ್ಯವಿದ್ದು #ಪಶುವೈದ್ಯರನ್ನು ಸಂಪರ್ಕಿಸಿ ತಮ್ಮ ಮುದ್ದಿನ ಶ್ವಾನಗಳಿಗೆ ಲಸಿಕೆ ಪಡೆಯಿರಿ.

ಸಾಮಾನ್ಯವಾಗಿ ಮರಿಗಳಿಗೆ ಮೊದಲ ವರ್ಷ ಹಾಕುವ ಲಸಿಕಾ ವಿಧಾನ:

* ಮೊದಲ ಡೋಸ್- ಮರಿಗಳು 4-6 ವಾರಗಳು ಇರುವಾಗ.
* ಎರಡನೆಯ ಬೂಸ್ಟರ್ ಡೋಸ್- 8-10 ವಾರಗಳು
* ಮೂರನೆಯ ಬೂಸ್ಟರ್ ಡೋಸ್- ಎರಡನೆಯ ಲಸಿಕೆ ಪಡೆದ ಮೂರು ವಾರಗಳ ಬಳಿಕ.
ನಂತರ ವರ್ಷಕ್ಕೊಮ್ಮೆ ಬೂಸ್ಟರ್( Annual Booster ) ಲಸಿಕೆ ಪಡೆಯಬೇಕು.

ಲಸಿಕೆಯನ್ನು ತಡವಾಗಿ ಪ್ರಾರಂಭಿಸಿದರೂ ಕೂಡ ಪಶುವೈದ್ಯರ ಸಲಹೆಯಂತೆ ಅದನ್ನು ಪೂರ್ಣಗೊಳಿಸಿ ತಮ್ಮ ಶ್ವಾನಗಳನ್ನು ರಕ್ಷಿಸಿಕೊಳ್ಳಬಹುದು. ಆಯಾ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಮತ್ತು ತೀವ್ರತೆಯನ್ನು ಆಧರಿಸಿ ಪಶುವೈದ್ಯರು ಲಸಿಕಾ ವಿಧಾನ ಮತ್ತು ವೇಳಾಪಟ್ಟಿಯನ್ನು ನಿರ್ಧರಿಸುತ್ತಾರೆ. ಎಲ್ಲಾ #ವೈರಸ್_ಸೋಂಕುಗಳಲ್ಲಿ ಇರುವಂತೆ ಪಾರ್ವಾದಲ್ಲಿ ಕೂಡ ರೂಪಾಂತರಿ ವೈರಸ್ ಗಳು ಆಗಾಗ್ಗೆ ಪತ್ತೆಯಾಗುತ್ತಿದ್ದು( Variant Strain ) ಅಪರೂಪಕ್ಕೊಮ್ಮೆ ರೂಪಾಂತರಿ ವೈರಸ್ ನಿಂದ ಉಂಟಾಗುವ ಸೋಂಕು ಲಸಿಕೆ ಪಡೆದ ಶ್ವಾನಗಳಲ್ಲಿ ಕೂಡ ಕಂಡುಬರಬಹುದು. ಅಂತಹ ಸಂದರ್ಭಗಳಲ್ಲಿ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ, ಸಲಹೆಗಳನ್ನು ಪಡೆಯ ಬೇಕಾಗುತ್ತದೆ.



ಗಮನಿಸಿ:

1) ಲಸಿಕೆ ಹಾಕುವ ಮೊದಲು ಪೂರ್ವ ಸಿದ್ದತೆಯಾಗಿ ಜಂತುನಾಶಕ ಔಷದಿ ಹಾಗೂ ಪೋಷಕಾಂಶವುಳ್ಳ ಸಮತೋಲನ ಆಹಾರ ನೀಡುವುದರಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.
2) ಲಸಿಕೆ ಹಾಕಿದ ನಂತರ ಉತ್ತಮ ರೋಗನಿರೋದಕ ಶಕ್ತಿ ದೇಹದಲ್ಲಿ ವೃದ್ದಿಸಲು 3 ವಾರಗಳ ಸಮಯಾವಕಾಶ ಬೇಕಿರುತ್ತದೆ ಹಾಗೂ ಸೂಕ್ತ ಸಮಯದಲ್ಲಿ ಬೂಸ್ಟರ್ ಲಸಿಕೆ ಅವಶ್ಯಕತೆ ಇರುತ್ತದೆ.
3) ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಗಳಲ್ಲೂ ಗುಣಮಟ್ಟದಲ್ಲಿ ವ್ಯತ್ಯಾಸವಿದ್ದು ಪಶುವೈದ್ಯರನ್ನು ಸಂಪರ್ಕಿಸಿ ಉತ್ತಮ ಗುಣಮಟ್ಟದ ಲಸಿಕೆಯನ್ನು ಕೇಳಿ ಪಡೆಯಿರಿ.
4) ಶ್ವಾನಗಳಿಗೆ ಸರ್ಕಾರದಿಂದ ಮೇಲೆ ತಿಳಿಸಿದ ಲಸಿಕೆ ಸರಬರಾಜು ಇರುವುದಿಲ್ಲ . ಆದ್ದರಿಂದ ಇದನ್ನು ಖಾಸಗಿಯಾಗಿ ಪಡೆಯಬೇಕಿರುತ್ತದೆ.


  • ಡಾ ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW