ಕಣ್ಮುಂದೇ ಮುಗಿದು ಹೋದ ಬದುಕು – ಮಂಜುನಾಥ ಚಾಂದ್



ಆ ಬೆಡ್ಡಿನ ಪಕ್ಕದಲ್ಲೇ Cardiac arrest ಆದ ರೋಗಿಗೆ ಸಾಕ್ಷಿಯಾದ ನನಗೆ, ಈಗಲೂ ಅದನ್ನು ನೆನಸಿಕೊಂಡರೆ ಮೈ ಬೆವರುತ್ತದೆ ಎಂದು ನಾಲ್ಕು ವರ್ಷದ ಹಿಂದೆ ತಾವು ಆಸ್ಪತ್ರೆಯಲ್ಲಿ ಕಂಡ ದೃಶ್ಯವನ್ನು ಮತ್ತು Cardiac arrest ಬಗ್ಗೆ ಖ್ಯಾತ ಲೇಖಕ ಮಂಜುನಾಥ ಚಾಂದ್ ಅವರು ಬರೆದ, ಇಂದಿನ ವಾಸ್ತವಕ್ಕೆ ಹತ್ತಿರವಾದ ಲೇಖನವಿದು. ಮುಂದೆ ಓದಿ…

ಆತ ನೋಡಲು ಥೇಟ್ ವಿಂಡೀಸ್ ಕ್ರಿಕೆಟರ್ ರಿಚರ್ಡ್ಸ್ ಥರಾನೇ ಇದ್ದ. ಸಂಜೆ ಬಂದಾಗ ಆ ಬೆಡ್ಡಿನ ಮೇಲೆ ದೈತ್ಯನಂತೆ ಮಲಗಿದ್ದ. ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿತ್ತು. ಉಸಿರಾಡಲು ಇನ್ನಿಲ್ಲದಂತೆ ಕಷ್ಟಪಡುತ್ತಿದ್ದ. ಅದಾಗಿ ಕೆಲವೇ ನಿಮಿಷಗಳಲ್ಲಿ ಚಡಪಡಿಸಿದ ಆತ ತನಗೆ ವಾಮಿಟ್ ಮಾಡಬೇಕು ಎಂಬಂತೆ ಸೂಚಿಸಿದ. ತಕ್ಷಣ ಸ್ಪಂದಿಸಿದ ಆ ಐಸಿಯುನ ಪುಟಾಣಿ ನರ್ಸ್ ಲಿಂಡಾ
“ಓಕೆ, ಓಕೆ don’t worry, be calm,” ಎನ್ನುತ್ತಾ ಕಾಟ್ ಎತ್ತರಿಸಿ ಆತನನ್ನು ನೇರ ಕುಳಿತುಕೊಳ್ಳುವಂತೆ ಮಾಡಿ, ಒಂದು ದೊಡ್ಡ ಟಬ್ ತಂದು ಆತನ ಮುಂದೆ ಹಿಡಿದಳು. ತಕ್ಷಣ ಹೊಟ್ಟೆಯಲ್ಲಿ ಇದ್ದುದಷ್ಟನ್ನೂ ಕಕ್ಕಿಬಿಟ್ಟ. ಅಷ್ಟನ್ನೂ ಟಾಯ್ಲೆಟ್ ಗೆ ಸುರಿದು ಬಂದ ಸಿಸ್ಟರ್, ಮತ್ತೆ ಆತನ ಎದೆಯನ್ನು ನೀವಿ ಸಾಂತ್ವನ ಹೇಳಿದಳು.

“ಈಗ ಇಷ್ಟಕ್ಕೆ ನಿನಗೆ ಏನೂ ಆಗಿಲ್ಲ, ಎಲ್ಲಾ ಸರಿ ಹೋಗತ್ತೆ, ಇಲ್ಲಿ ಕೆಳಗೆ ಚೇರ್ ಹಾಕಿಕೊಡುವೆ, ಬಂದು ಕುತ್ಕೊ, ಸಲ್ಪ ರೆಸ್ಟ್ ತಕೋ,” ಎನ್ನುತ್ತಾ ಪಟಪಟನೆ ಎಲ್ಲವನ್ನೂ ವ್ಯವಸ್ಥೆ ಮಾಡಿದಳು.
ಆತ ಚೇರಿನಲ್ಲಿ ಬಂದು ಕುಳಿತ. ಮತ್ತೆ ಆಕ್ಸಿಜನ್ ಮಾಸ್ಕ್ ಹಾಕಿದಳು. ದೇಹಕ್ಕೆ ಅಳವಡಿಸಿದ ಎಲ್ಲಾ vital ಸಮಪರ್ಕವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಚೆಕ್ ಮಾಡಿಕೊಂಡಳು.
“You have omitted all the food. Take some food, otherwise you will not get enough energy,” ಎಂದು ಮತ್ತೆ ಸಮಾಧಾನ ಪಡಿಸುತ್ತಿದ್ದಳು. ಆತ ತನಗೇನೂ ಬೇಡ ಎಂದು ಹೂಂಕರಿಸುತ್ತಲೇ ಇದ್ದ. ನರ್ಸ್ ಆತನಿಗೆಂದೇ ಅರ್ಜೆಂಟಾಗಿ ಇಂಟರ್ನ್ಯಾಷನಲ್ ಫುಡ್ ಆರ್ಡರ್ ಮಾಡಿದಳು.

“Which language are you speaking? English, Hindi? ”

ಫೋಟೋ ಕೃಪೆ : heraldscotland

ಯಾವುದಕ್ಕೂ ಆತನ ಬಳಿ ಉತ್ತರವಿಲ್ಲ. ಆತನಿಗದು ಅರ್ಥ ವೂ ಆಗುತ್ತಿಲ್ಲ. ಆ ಹೊತ್ತಿಗೆ ಬಂದ ಫುಡ್ ಅನ್ನು ಪ್ರೀತಿಯಿಂದ ತಿನ್ನಿಸಿದಳು. “ಈಟ್ ಲಿಟ್ಲ್ ಮೋರ್” ಎಂದು ಒತ್ತಾಯ ಮಾಡುತ್ತಿದ್ದಳು. ಅಷ್ಟಾಗಿ ವಾರ್ಡಿನ ಇತರ ಪೇಷಂಟ್ ಗಳನ್ನೂ ವಿಚಾರಿಸಿಕೊಳ್ಳುತ್ತಾ ಓಡಾಡಿಕೊಂಡಿದ್ದಳು.

ಒಂದು ತಾಸಿಗೂ ಹೆಚ್ಚು ಕಾಲ ಕುಳಿತೇ ಇದ್ದ ಆತ ಮತ್ತೆ ವಾಂತಿ ಮಾಡಿಕೊಂಡ. ನರ್ಸ್ ಮತ್ತೆ ಎಲ್ಲವನ್ನೂ ಕ್ಲೀನ್ ಮಾಡಿದಳು.

ಅದಾದ ತಕ್ಷಣ ಆತ “ಆಲಾ, ಆಲಾ, ಆಲಾ,” ಎಂದು ಕಿರುಚಿಕೊಳ್ಳುತ್ತ ಎದ್ದು ನಿಂತು ಹಾಸಿಗೆ ಮೇಲೆ ಪ್ರಜ್ಞೆ ತಪ್ಪಿದ. ವಾರ್ಡ್ ನಲ್ಲಿದ್ದ ಮೂವರೂ ನರ್ಸ್ ಗಳು ಗಡಿಬಿಡಿಗೆ ಬಿದ್ದರು. “ಚೆಕ್ ಹಾರ್ಟ್ ಬೀಟ್, ಬೀಪಿ, ಸ್ಯಾಚುರೇಷನ್,” ಎಂಬ ಕೂಗು. ಕ್ಷಣಾರ್ಧದಲ್ಲಿ ಎಲ್ಲವೂ ಏರುಪೇರಾಗಿ ಹೋಗಿತ್ತು. ಆದರೆ ಯಾರೂ ಗಾಬರಿಗೆ ಬೀಳಲಿಲ್ಲ. ಕ್ಷಣದಲ್ಲೇ ವೈದ್ಯರಿಗೆ ಕರೆ, ಅಷ್ಟೇ ವೇಗದಲ್ಲಿ ವೈದ್ಯರ ತಂಡವೇ ಧಾವಿಸಿ ಬಂತು.

ಫೋಟೋ ಕೃಪೆ : khn.org

ಯಾರೋ crash cart ಅನ್ನು ಎಳೆದು ತಂದರು. ನೋಡನೋಡುತ್ತಿದ್ದಂತೆ ಆತನ ಬೆಡ್ ಸುತ್ತ ಒಂದು ಆಪರೇಷನ್ ಥಿಯೇಟರ್ ಕೆಲಸ ಮಾಡುವಂತೆ ಸಜ್ಜಾಗಿ ಹೋಯಿತು.
ನಿಜ, ಆತನಿಗೆ cardiac arrest ಆಗಿತ್ತು!

ಮುಂದಿನ ಮುಕ್ಕಾಲು ತಾಸು war foot ನಂತಹ ಕೆಲಸ. ಪ್ರತಿ ಕ್ಷಣವೂ ಅಮೂಲ್ಯ ಎನ್ನುವಂತೆ ಮೂವರು ಡಾಕ್ಟರ್, ಬ್ರದರ್ಸ್‌ ಆ ದೈತ್ಯ ದೇಹಿಯ ಎದೆಯ ಮೇಲೆ ಪಂಪ್ ಮಾಡುತ್ತಲೇ ಹೋದರು. ಲೀಡಿಂಗ್ ಫ್ರಮ್ ದಿ ಫ್ರಂಟ್ ಎನ್ನುವಂತೆ ಐಸಿಯು ಸ್ಪೆಷಲಿಸ್ಟ್ ಡಾ.ಅಶುತೋಶ್ ರೋಗಿಯ ಬಾಯಿಗೆ ಆಕ್ಸಿಜನ್ ಪಂಪ್ ಮಾಡುತ್ತಲೇ ಕ್ಷಣಕ್ಷಣಕ್ಕೂ ನಿರ್ದೇಶನ ನೀಡುತ್ತಲೇ ಇದ್ದರು. Start Adrenalin every two minutes, ಎನ್ನುವ ಸೂಚನೆ ಕೊಡುತ್ತಿದ್ದರು. ಪ್ರತಿಯೊಂದು ಆ್ಯಕ್ಷನ್.ನ್ನೂ ರೆಕಾರ್ಡ್ ಮಾಡಿ, ಡಾಕ್ಯುಮೆಂಟ್ ಇಟ್ ಎನ್ನುತ್ತಿದ್ದರು. ಯಾವ ಕ್ಷಣದಲ್ಲಾದರೂ ಜೀವ ಪುಟಿಯಬಹುದೆಂಬ ಅದಮ್ಯ ನಂಬಿಕೆ ಅವರಲ್ಲಿತ್ತು. ಅದಕ್ಕಾಗಿ ಇಡೀ ಟೀಮ್ ಅನ್ನು ಚಾರ್ಜ್ ಮಾಡುತ್ತಿದ್ದರು. ಕಮಾಂಡರ್ ನ ಆಣತಿಯಂತೆ ಅಷ್ಟೂ ಜನ ಕೆಲಸ ಮಾಡುತ್ತಿದ್ದರು. ಎರಡೆರಡು ನಿಮಿಷಕ್ಕೂ Adrenalin ಇಂಜೆಕ್ಷನ್ ಕೊಡುವುದನ್ನು ತಪ್ಪಿಸದಂತೆ ಎಚ್ಚರಿಕೆ.

ಫೋಟೋ ಕೃಪೆ : shutterstock

ಆ ಹೊತ್ತಿಗೆ ಶಾಕ್ ಟ್ರೀಟ್ಮೆಂಟ್ ಕೂಡಾ ಶುರುವಾಯಿತು. ಡಾಕ್ಟರ್ ಅಶುತೋಶ್ ಚಾರ್ಜ್ ಎನ್ನುತ್ತಿದ್ದರು. Expertಗಳಿಂದ ಮೂರು ಬಾರಿ ಆ ಪ್ರಯತ್ನವೂ ನಡೆಯಿತು. ಜೀವ ಚಾರ್ಜ್ ಆಯಿತೇನೋ ಎಂದು ಎಲ್ಲರೂ ದಿಟ್ಟಿಸಿದರು. ಅಂತಹ ಯಾವ ಲಕ್ಷಣವೂ ಕಾಣಿಸಲಿಲ್ಲ. ಕೊನೆಕೊನೆಗೆ ಇಂಜೆಕ್ಷನ್ ಕೊಡಲೂ veins ಸಿಗುತ್ತಿರಲಿಲ್ಲ. ಜೀವ ಮಿಡಿದೇ ಮಿಡಿಯುತ್ತೆ ಎಂಬ ಅಚಲ ನಂಬಿಕೆಯನ್ನು ಕೊನೆಯ ಕ್ಷಣದವರೆಗೂ ಬಿಡಲಿಲ್ಲ. ಆ ಟೀಮ್ ನಲ್ಲಿದ್ದ ಯಾರೊಬ್ಬರಲ್ಲೂ ಬಳಲಿಕೆ ಕಾಣಲಿಲ್ಲ. ಆ ರಾತ್ರಿ 8.20ರ ಸುಮಾರಿಗೆ ಆರಂಭವಾದ ಈ ಜೀವನ್ಮರಣದ ಹೋರಾಟ ಮುಗಿದಿದ್ದು 9.15ಕ್ಕೆ. ಅಷ್ಟಾದರೂ ಒಂದು ಹನಿ ಉಸಿರು ಪುಟಿಯಲೇ ಇಲ್ಲ. ಅಷ್ಟೂ ಜನರ ತಂಡ ನಿಜಕ್ಕೂ ಯುದ್ಧ ಸೋತ ದುಗುಡದಲ್ಲಿ ಕೈಚೆಲ್ಲಿದ್ದರು. ಅರೆಕ್ಷಣವೂ tremendous ಎನ್ನುವಂತೆ ಕೆಲಸ ಮಾಡಿದ ಡಾ.ಅಶುತೋಶ್ ಕಣ್ಣಿನಲ್ಲಿ ನಿರಾಶೆ..!



ಸೌದಿ ಅರೇಬಿಯಾದವ ಎನ್ನಲಾದ ಆ ದೈತ್ಯ ದೇಹಿಯ ಹೆಸರು ತಾಹ..! ಕೊನೆಗೂ ಆತ ಕಣ್ಣು ಬಿಡಲೇ ಇಲ್ಲ.

ದೇಶವೂ ಗೊತ್ತಿಲ್ಲದ, ಭಾಷೆಯೂ ಅರಿಯದ, ಜಾತಿಯಂತೂ ಗೊತ್ತೇ ಇಲ್ಲದ ಒಂದು ಜೀವವನ್ನು ಉಳಿಸಲು ವೈದ್ಯರು ಮತ್ತವರ ತಂಡ ಮಾಡಿದ ಹೋರಾಟ ಕಂಡು ನಿಜಕ್ಕೂ ನಡುಗಿ ಹೋದೆ.
ವೈದ್ಯೋ ನಾರಾಯಣೋ ಹರಿಃ ಅನ್ನುವುದು ಇದಕ್ಕೇ ಅಲ್ಲವೆ?

ಬದುಕಿನ ಇಷ್ಟೂ ಯುದ್ಧ ನಡೆದಿದ್ದು ಬಿಜಿಎಸ್ ಆಸ್ಪತ್ರೆಯ ನನ್ನ ಪಕ್ಕದ ಬೆಡ್ ನಲ್ಲಿ..! ಅಷ್ಟೆಲ್ಲ ಸವಲತ್ತು ಸನಿಹದಲ್ಲೇ ಇದ್ದರೂ, ತಜ್ಞರ ದಂಡೇ ಪಕ್ಜದಲ್ಲಿದ್ದರೂ ತಾಹ ಉಳಿಯಲಿಲ್ಲ. ಈಗಲೂ ಆ ಕ್ಷಣಗಳು ನನ್ನ ಕಣ್ಮುಂದೇ ಇವೆ.

ಬದುಕು ಯಾವ ಕ್ಷಣವಾದರೂ ಮುಗಿದು ಹೋಗಿ ಬಿಡಬಹುದು ಅಲ್ವಾ?


  • ಮಂಜುನಾಥ ಚಾಂದ್ (ಖ್ಯಾತ ಲೇಖಕರು, ಕತೆಗಾರರು, ಪತ್ರಕರ್ತರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW