ರೆಮ್ ಡೆಸಿವಿರ್ ಔಷಧಿಯ ಕೊರತೆಯಂತೆ !! ಹೌದು. ರೆಮ್ ಡೆಸಿವಿರ್ ಔಷಧಿಯ ಲಭ್ಯತೆಯೂ ಕಡಿಮೆಯಿದ್ದರೂ ಸಹ ಇದರಷ್ಟೇ ಪರಿಣಾಮಕಾರಿಯಾಗಬಹುದಾದ ಇತರ ಅನೇಕ ಔಷಧಿಗಳೂ ಇವೆ. ಔಷಧೀಯ ಕುರಿತಾಗಿ ಉತ್ತಮ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಡಾ. ಎನ್.ಬಿ.ಶ್ರೀಧರ ಅವರು. ಮುಂದೆ ಓದಿ…
ರೆಮ್ ಡೆಸಿವಿರ್ ಔಷಧಿಯ ಕೊರತೆಯಂತೆ !! ಹೌದು. ಬೆಳಗಿನಿಂದ ಸಂಜೆಯವರೆಗೂ ಕೊರೋನಾದೇ ರೋಧನ. ಈ ಎರಡನೆಯ ಅಲೆ ಯಾವಾಗ ಮುಗಿಯುತ್ತೋ .. ಯಾವಾಗ ನಮಗೆ ಈ ಗೃಹ ಬಂಧನದಿಂದ ಬಿಡುಯಾಗುತ್ತೋ? ಎಂದು ಲಕ್ಷಾಂತರ ಜನ ಕಾಯುತ್ತಿದ್ದಾರೆ. ರೆಮ್ ಡೆಸಿವಿರ್ ಔಷಧಿಯ ಲಭ್ಯತೆಯೂ ಕಡಿಮೆಯಿದ್ದರೂ ಸಹ ಇದರಷ್ಟೇ ಪರಿಣಾಮಕಾರಿಯಾಗಬಹುದಾದ ಇತರ ಅನೇಕ ಔಷಧಿಗಳೂ ಇವೆ ಮತ್ತು ಸಂಶೋಧನೆಗಳೂ ಮುಂದುವರೆಯುತ್ತಿವೆ.. ಕಾರಣ ಗಾಬರಿಯಾಗುವ ಅವಶ್ಯಕತೆ ಏನೂ ಇಲ್ಲ. ಇದಕ್ಕೆ ಅನೇಕ ಚಿಕಿತ್ಸೆಗಳು ಜಾರಿಯಲ್ಲಿವೆ. ಪರ್ಯಾಯ ಔಷಧಿಗಳೂ ಲಭ್ಯವಿವೆ. ಹಾಗಿದ್ದರೆ ಈ ಕಾಯಿಲೆಗೆ ಚಿಕಿತ್ಸೆಗಾಗಿ ಯಾವ ಯಾವ ಔಷಧಿ ಬಳಸಬಹುದು ಎಂಬ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ. ಓದಿ.

ಕೊರೋನಾ ಮಾರಿ ಪ್ರಪ೦ಚಾದ್ಯಂತ ಮರಣ ಮೃದಂಗ ಭಾರಿಸುತ್ತಿರುವುದು ಎಲ್ಲರಿಗೆ ತಿಳಿದ ವಿಷಯ. ಒಂದು ರೋಗ ಎಂದರೆ ಅದಕ್ಕೊಂದು ಕಾರಣ ಇರಲೇ ಬೇಕು. ಕಾರಣ ಇದ್ದ ಕೂಡಲೇ ಅದಕ್ಕೊಂದು ಪರಿಹಾರ ಅದರಲ್ಲು ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಬೇಕು. ಸಧ್ಯ ಈ ಕರೋನಾ ವೈರಾಣು ಭಾದೆಗೆ ಜಗತ್ತಿನ ವಿಜ್ಞಾನಿಗಳು ಪರಿಹಾರ ಕಂಡು ಹಿಡಿಯಬೇಕಿದೆ. ಕೊರೋನಾ ವೈರಾಣು ಕಾಯಿಲೆ ಬಂದರೆ ಸೂಕ್ತ ವೈರಾಣು ನಾಶಕ ಚಿಕಿತ್ಸೆಯೂ ಇಲ್ಲ, ಬರದಂತೆ ತಡೆಯಲು ಲಸಿಕೆಯೂ ಇಲ್ಲ. ಇಲ್ಲದಿದ್ದರೆ ಈ ಪರಿಯ ಲಾಕ್ ಡೌನ್ ಮತ್ತು ಗೃಹ ಬಂಧನ ಯಾರಿಗಿಷ್ಟ ಹೇಳಿ?
ರೋಗದ ಚಿಕಿತ್ಸೆ.
ಅನೇಕ ವಿಧದ ಔಷಧಿಗಳನ್ನು ಇದಕ್ಕೆ ಬಳಸುತ್ತಾರೆ. ಇದರಲ್ಲಿ ವೈರಣುನಾಶಕ ಔಷಧಿಗಳ ಕಂಡು ಹಿಡಿಯುವಿಕೆ ಸೇರಿದೆ. ಆದರೆ ವೈರಾಣು ನಾಶಕಗಳನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ.
ಕರೋನಾ ವೈರಾಣು ೧೦೦ ನ್ಯಾನೋಮೀಟರುಗಳಿಗಿಂತಲೂ ಕಡಿಮೆ ಗಾತ್ರದ್ದು. ಬರಿಗಣ್ಣಿನ ಪ್ರಶ್ನೆ ದೂರ ಉಳಿಯಿತು. ಸಾಮಾನ್ಯ ದೂರದರ್ಶಕದಲ್ಲಿ ಇದನ್ನು ನೋಡಲು ಸಾಧ್ಯವೇ ಇಲ್ಲ. ಬ್ಯಾಕ್ಟಿರಿಯಾಗಳಿಗಿಂತ ಸಹಸ್ರ ಪಾಲು ಚಿಕ್ಕದು. ಈ ರೋಗಾಣು ವೈರಸ್ ಆರ್ ಎನ್ ಎ ಗುಂಪಿಗೆ ಸೇರಿದ್ದು. ಇದೊಂದು ನಗ್ನ ವೈರಾಣು. ಇದು ಮನುಷ್ಯ ಜೀವಕೋಶದ ಮೇಲಿರುವ ಎಂಜಿಯೋಟೆನ್ಸಿನ್ ಕನ್ವರ್ಟಿಂಗ್ ಕಿಣ್ವದ ರಿಸೆಪ್ಟಾರುಗಳ ಮೇಲೆ ವಿಲೀನಗೊಂಡು ಜೀವಕೋಶವನ್ನು ಪ್ರವೇಶಿಸುತ್ತದೆ. ಜೀವಕೋಶದೊಳಗಿರುವ ರೈಬೋಸೋಮುಗಳನ್ನು ತನ್ನ ಹತೋಟಿಗೆ ತೆಗೆದುಕೊಂಡು ತನ್ನದೇ ಆರ್ ಎನ್ ಎಗಳನ್ನು ಉತ್ಪಾದಿಸಲು ನಿರ್ದೇಶನ ನೀಡುತ್ತದೆ. ಅದು ಹೇಳಿದಂತೆ ಕೇಳುವ ಮನುಷ್ಯ ಜೀವಕೋಶಗಳು ಅದರ ಮರಿ ವೈರಾಣುವನ್ನು ತಯಾರಿಸಲು ಅವಶ್ಯವಿರುವ ಆರ್ ಎನ್ ಏ ಗಳನ್ನು ಉತ್ಪಾದಿಸುತ್ತವೆ. ಸುತ್ತಮುತ್ತಲಿನ ವಾತಾವರಣದಿಂದ ಅವಶ್ಯಕ ವಸ್ತುಗಳನ್ನು ಪಡೆದು ಹೊಸ ನವಜಾತ ಮರಿ ವೈರಾಣುವಿನ ಉತ್ಪನ್ನವಾಗುತ್ತದೆ. ಹೀಗೆಯೇ ಮನುಜ ಜೀವಕೋಶದಿಂದ ಸಹಸ್ರಾರು ಮರಿ ಕರೋನಾ ವೈರಾಣು ವೈರಾಣುಗಳು ಉತ್ಪನ್ನವಾಗುತ್ತವೆ. ಬಾಧಿತ ಮನುಷ್ಯನ ಕೆಮ್ಮಿನಿಂದ ಹೊರ ಬರುವ ಇವು ಅವುಗಳ ಸಂತಾನ ವೃದ್ಧಿಸಲು ಹೊಸ ಮನುಷ್ಯನ ಜೀವಕೋಶವನ್ನು ಹುಡುಕುತ್ತವೆ. ಹೀಗೆ ಒಬ್ಬರಿಂದ ಮತ್ತೊಬ್ಬರಿಗೆ ವೈರಾಣು ಹರಡುತ್ತದೆ. ಇದರ ಬೆಳವಣಿಗೆಯ ವಿವಿಧ ಹಂತಗಳನ್ನು ತಿಳಿದುಕೊಂಡಾಗ ಇದರ ವಿರುದ್ಧ ಔಷಧಿ ಕಂಡು ಹಿಡಿಯಲು ಅನುಕೂಲವಾಗುವುದು.
ಈ ವೈರಾಣು ವಿರುದ್ಧ ಔಷಧಿ ಕಂಡು ಹಿಡಿಯಲು ಇರುವ ಅಡಚಣೆಗಳೇನು?
ವೈರಾಣು ಮತ್ತು ಮನುಜ ಜೀವಕೋಶದಲ್ಲಿರುವ ಆರ್ ಎನ್ ಎ ಗಳ ರಚನೆ ಒಂದೇ ತೆರನಾಗಿರುವುದರಿಂದ ವೈರಾಣು ನಾಶಕ ಔಷಧಿ ಮನುಷ್ಯನ ಜೀವಕೋಶಕ್ಕೂ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ಯಾವುದೇ ವೈರಾಣುನಾಶಕ ಔಷಧಿ ಕಂಡು ಹಿಡಿಯಲು ಹೋದರೂ ಶರೀರದ ಜೀವಕೋಶಗಳಿಗೆ ಹಾನಿಯಾಗಿ ಅವುಗಳಿಗೆ ವಿಷಬಾಧೆಯಾಗುತ್ತದೆ. ಆದರೂ ಇದ್ದುದರಲ್ಲಿ ವೈರಾಣುವಿನ ಮೇಲೆಯೇ ಜಾಸ್ತಿ ಕೆಲಸಮಾಡಿ ಶರೀರದ ಜೀವಕೋಶದ ಮೇಲೆ ಕಡಿಮೆ ತೊಂದರೆ ನೀಡುವ ಔಷಧಗಳ ಸಂಶೋಧನೆಗೆ ಆಧ್ಯತೆ ನೀಡಿದೆ.
ಇದರಲ್ಲಿ ಹಗಲಿರುಳು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಅದರ ಫಲವೇ ಈ ಕೆಳಗಿನ ಔಷಧಿಗಳ ಪತ್ತೆ.
ವೈರಾಣು ನಾಶಕ ಔಷಧಗಳು:
ಸಾರ್ಸ್ ಮತ್ತು ಕೋವಿಡ್ -೧೯ ಈ ರೋಗ ಉಂಟು ಮಾಡುವ ವೈರಾಣುಗಳು ಶೇ ೯೦ ರಷ್ಟು ಸಮಾನ ಗುಣಗಳನ್ನು ಹೊಂದಿವೆ. ಈಗ ಅತ್ಯಂತ ಸವಾಲಾಗಿರುವ ವಿಷಯವೆಂದರೆ ಮೇಲಿಂದ ಮೇಲೆ ಈ ವೈರಾಣು ರೂಪಾಂತರಗೊಳ್ಳುತ್ತಿರುವುದು. ಇದರಿಂದ ಲಸಿಕೆ ಅಥವಾ ಔಷಧಿಯನ್ನು ಕಂಡು ಹಿಡಿದರೂ ಸಹ ರೂಪಾಂತರ ಗೊಂಡ ವೈರಾಣುವಿನ ಮೇಲೆ ಅದು ಕೆಲಸ ಮಾಡದೇ ಇರುವ ಸಾಧ್ಯತೆ ಜಾಸ್ತಿಯಾಗಿರುವುದು.
ರೆಮ್ ಡೆಸಿವಿರ್
ಅಮೇರಿಕಾದ ಗಿಲೀಡ್ ಪ್ರಯೋಗಾಲಯ ಇತ್ತೀಚೆಗಷ್ಟೇ ಕಂಡು ಹಿಡಿದ ಇದು ವೈರಾಣುನಾಶಕ ಔಷಧಿಯಾಗಿ ಕೆಲಸ ಮಾಡುತ್ತಿದೆ. ಈ ಔಷಧಿ ಕೊರೋನಾ ವೈರಾಣುವಿನಲ್ಲಿರುವ ಆರ್ ಎನ್ ಎ ಪಾಲಿಮರೇಸ್ ಎಂಬ ಕಿಣ್ವವನ್ನು ಪ್ರತಿಬಂಧಿಸಿ ವೈರಾಣುವಿನ ಆರ್ ಎನ್ ಎ ಸರಪಳಿ ಬೆಳೆಯದಂತೆ ಮಾಡುತ್ತದೆ. ಆಗ ಮರಿ ವೈರಾಣುವಿನ ಉತ್ಪಾದನೆ ಮತ್ತು ಬೆಳವಣಿಗೆ ತಹಬಂದಿಗೆ ಬಂದು ವೈರಾಣು ಶಿವನ ಪಾದ ಸೇರುತ್ತದೆ. ಇದನ್ನು ೧೦ ಮಿಗ್ರಾಂ/ಪ್ರತಿ ಕೆಜಿ ಗೆ ರಕ್ತನಾಳದ ಮೂಲಕ ಬೆಕ್ಕುಗಳ ಫೆಲೈನ್ ಕರೋನಾ ವೈರಾಣುಗಳ ಖಾಯಿಲೆಯಲ್ಲಿ ಇದು ಉತ್ತಮ ಔಷಧಿಯಾಗಿದೆ. ಅಂತಹ ಅಡ್ಡ ಪರಿಣಾಮಗಳೂ ಗೋಚರಿಸಿಲ್ಲ. ಈಗಾಗಲೇ ಇದು ಕೊರೋನಾ ಕಾಯಿಲೆಯ ಚಿಕಿತ್ಸೆಯ ಬಳಕೆಯಲ್ಲಿದೆ.
ಲೋಪಿನಾವಿರ್ ಮತ್ತು ರಿಟೋನಾವಿರ್
ಇವೆರಡೂ ಜೋಡಿ ಔಷಧಿಗಳನ್ನು ವೈರಾಣು ಪ್ರೋಟಿಯೇಸ್ ನಿರ್ಭಂಧಕಗಳ ಗುಂಪಿಗೆ ಸೇರಿಸುತ್ತಾರೆ. ಏಡ್ಸ್ ಚಿಕಿತ್ಸೆಯಲ್ಲಿ ಬಳಸಲ್ಪಡುವ ಇವುಗಳನ್ನು ಉತ್ತಮ ಕೊರೋನಾ ವೈರಾಣು ನಾಶಕ ಔಷಧಗಳೆಂದು ಬಿಂಭಿಸಲಾಯಿತು. ಇವು ಪ್ರಾರಂಭಿಕ ಹಂತದಲ್ಲಿ ೪೦೦ ಮತ್ತು ೧೦೦ ಮಿಲಿಗ್ರಾಂ ಪ್ರಮಾಣವನ್ನು ೧೪ ದಿನ ಕೊರೋನಾ ಪೀಡಿತ ರೋಗಿಗಳ ಮೇಲೆ ಪ್ರಯೋಗಿಸಿದಾಗ ಅಂತಹ ಪರಿಣಾಮ ಕಾಣದೇ ಹಳ್ಳ ಹಿಡಿದು ಹೋದವು. ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎಂಬಂತೇ ಕೊರೋನಾ ವೈರಾಣು ಈ ಔಷಧಿಗಳಿಗೆ ಬಗ್ಗದೇ ಇರುವುದು ಈಗ ಇತಿಹಾಸ.
ಫಾವಿಪಿರಾವಿರ್
ಈ ಔಷಧಿಯನ್ನು ಇನ್ಫ್ಲ್ಯುಯೆಂಜಾ ವೈರಾಣುವಿನ ವಿರುದ್ಧ ಉಪಯೋಗಿಸಲಾಗುತ್ತಿತ್ತು. ಇದೊಂದು ಹೊಸ ಔಷಧಿ. ಇದೂ ಸಹ ಆರ್ ಎನ್ ಎ ಪಾಲಿಮರೇಸ್ ಕಿಣ್ವವನ್ನು ಪ್ರತಿಬಂಧಿಸುತ್ತದೆ. ಲೋಪಿನಾವಿರ್ ಮತ್ತು ರಿಟೋನಾವಿರ್ ಇವೆರಡೂ ಔಷಧಿಗಳಿಂತ ಇದು ಉತ್ತಮ ಎನ್ನುತ್ತದೆಯಂತೆ. ಅಡ್ಡ ಪರಿಣಾಮಗಳೂ ಕಡಿಮೆಯಂತೆ. ಇದರ ಪ್ರಯೋಗಗಳು ನಡೆಯುತ್ತಿದ್ದು ಎಲ್ಲ ವಿಷಯ ಗೊತ್ತಾಗಲಿದೆ.
ಫೋಟೋ ಕೃಪೆ : ಹಲವು ಜಾಲತಾಣಗಳು
ಇಂಟರ್ ಫೆರಾನ್
ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ. ಈ ಇಂಟರ್ ಫೆರಾನುಗಳ ಬಗ್ಗೆ ನೆನಪಿಸಬೇಕೆಂದರೆ ಶಂಕರ್ ನಾಗ್ ಅವರ “ಗೀತಾ” ಚಲನ ಚಿತ್ರ ನೆನಪಿಸಿಕೊಳ್ಳಬೇಕು. ಅದರಲ್ಲಿ ನಾಯಕಿಗೆ ಬಿಳಿರಕ್ತಕಣಗಳ ಕ್ಯಾನ್ಸರ್ ಆಗಿರುತ್ತದೆ. ಆಗ ನಾಯಕ ಶಂಕರ್ ನಾಗ್ ಇದನ್ನು ಕಷ್ಟ ಪಟ್ಟು ತರುತ್ತಾನೆ. ಬರುವಷ್ಠರಲ್ಲಿ ನಾಯಕಿಯ ಪ್ರಾಣ ಹಾರಿ ಹೋಗಿರುತ್ತದೆ. ಆಯ್ ಎಫ್ಎನ್ –ಅಲ್ಫಾ ಔಷಧಿ ಅನೇಕ ವೈರಾಣುಗಳ ವಿರುದ್ಧ ಕೆಲಸ ಮಾಡುತ್ತಿದ್ದು ಕೊರೊನಾ ವೈರಾಣುಗಳ ವಿರುದ್ದವೂ ಕೆಲಸ ಮಾಡುತ್ತದೆಯಂತೆ. ಇದನ್ನು ಮೂಗಿನ ಮೂಲಕ ಇನ್ಹೇಲರ್ ರೀತಿಯಲ್ಲಿ ರಿಬಾವರಿನ್ ಜೊತೆ ನೀಡಿದರೆ ಪರಿಣಾಮಕಾರಿಯಂತೆ. ಇದರ ಬಗ್ಗೆಯೂ ಸಹ ಸಂಶೋಧನೆ ನಡೆಯುತ್ತಿದೆ. ಕಾದು ನೋಡೋಣ.
ಆರ್ಬಿಡಾಲ್
ಈ ಔಷಧಿಯೂ ಸಹ ಇನ್ಫ್ಲ್ಯುಯೆಂಜಾ ಚಿಕಿತ್ಸೆಗೆಂದೇ ಬಂದಿದ್ದು. ಆದರೆ ಇದೂ ಸಹ ಕೊರೊನಾ ವೈರಾಣುನಾಶಕವಾಗಿ ಅನೇಕ ರೋಗಿಗಳಲ್ಲಿ ಪರೀಕ್ಷಿಸಲ್ಪಟ್ಟಿದೆ. ಪ್ರಾಯೋಗಿಕ ಹಂತದಲ್ಲಿದ್ದು ವಿಜ್ಞಾನಿಗಳು ಇದರ ಪರಿಣಾಮದ ಬಗ್ಗೆ ಆಶಾಭಾವ ಹೊಂದಿದ್ದಾರೆ.
ರಿಬಾವೆರಿನ್
ಈ ಔಷಧಿಯನ್ನು ಸಾರ್ಸ್ ಕಾಯಿಲೆಯಲ್ಲಿ ಬಳಸಿದ್ದರು. ಕೋವಿಡ್-೧೯ ರಲ್ಲ್ಲಿ ಈ ಔಷಧಿಯನ್ನು ೫೦೦ ಮಿಗ್ರಾಂ ಪ್ರತಿ ದಿನ ೨-೩ ಭಾರಿ ನೀಡಿದಾಗ ಸಹ ಅಷ್ಟೇನೂ ತೃಪ್ತಿಕರ ಪರಿಣಾಮ ಕಂಡು ಬರದೇ ಇರುವುದರಿಂದ ಅದನ್ನು ಕೈಬಿಡಲಾಯಿತು. ಆದರೆ ಈ ಔಷಧಿಯನ್ನು ಲೋಪಿನಾವಿರ್ ಮತ್ತು ರಿಟೊನಾವಿರ್ ಇವುಗಳನ್ನು ಜೊತೆಯಾಗಿ ನೀಡಿದಾಗ ಒಂದಿಷ್ಟು ಉತ್ತಮ ಪರಿಣಾಮ ಕಂಡು ಬಂದಿದೆ. ಹಾಂಕಾಂಗ್ ವಿಶ್ವವಿದ್ಯಾಲಯದಲ್ಲಿ ಈ ಕುರಿತು ಸಂಶೋಧನೆ ಮುಂದುವರೆದಿದೆ.

ಫೋಟೋ ಕೃಪೆ : times of india
ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್
ಅನೇಕ ದಿನಗಳಿಂದ ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಈ ಔಷಧಿಗಳ ಬಗ್ಗೆ ತರಹೇವಾರಿ ಸುದ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಳೆದ ೭೦ ವರ್ಷಗಳಿಂದ ಮಲೇರಿಯಾಕ್ಕೆ ರಾಮಬಾಣವಾಗಿರುವ ಈ ಔಷಧಿ ಸೇವಿಸಿದರೆ ಕೊರೋನಾ ಮಂಗಮಾಯವಾಗುತ್ತದೆಯೆಂದು ವಿಜ್ಞಾನ ಅದರಲ್ಲೂ ವೈದ್ಯಕೀಯ ವಿಜ್ಞಾನ ಏನೇನೂ ಗೊತ್ತಿಲ್ಲದ ಕೇವಲ ವ್ಯಾಪಾರಿ ಮನೋಭಾವದ ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾ ಗೋಷ್ಟಿಯೊಂದರಲ್ಲಿ “ ಕ್ಲೋರೋಕ್ವಿನ್ ಸೇವಿಸಿ; ಕೊರೋನಾ ಓಡಿಸಿ” ಎಂದು ಅಪ್ಪಣೆ ಕೊಡಿಸಿ ಬಿಟ್ಟಿದ್ದರು ಎಂಬುದು ನಿಮಗೆಲ್ಲಾ ನೆನಪಿರಬಹುದು. ದೊಡ್ಡಣ್ಣನನ್ನು ಓಲೈಸಲು ಬ್ರಾಜಿಲ್ ಅಧ್ಯಕ್ಷ ಬೋಲ್ಸೊನಾರೊ ಸಹ “ಈ ಔಷಧಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ; ಸೇವಿಸಿ ಇದನ್ನು” ಎಂದು ಬಿಟ್ಟರು. ಎಂದಿಗೂ ವಿಜ್ಞಾನಿಗಳನ್ನು ನಂಬದ ಟ್ರಂಪ್ ಯಾವುದೋ ಸಂಶೋಧನಾ ವರದಿಯನ್ನು ಪ್ರಥಮ ಬಾರಿಗೆ ಓದಿ ಅದನ್ನೇ ಒದರಿದ್ದರೆ ಪರಿಣಾಮ ಇದು !. ಮೊದಲಿನಿಂದಲೂ ಟ್ರಂಪಿಗೆ ಜೈವಿಕ ವಿಜ್ಞಾನಿಗಳ ಸಂಶೋಧನೆಗಳ ಬಗ್ಗೆ ಅಸಡ್ಡೆ. ಒಬ್ಬ ವಾಣೋಜ್ಯೋಧ್ಯಮಿಯನ್ನು ಅದರ ಅಧ್ಯಕ್ಷನನ್ನಾಗಿ ಮಾಡಿಕೊಂಡ ಅಮೇರಿಕ ವಿಜ್ಞಾನವನ್ನು ನಿರ್ಲಕ್ಷಿಸಿದ್ದಕ್ಕೆ ಈವತ್ತಿಗೆ ಬೆಲೆ ತೆರುತ್ತಿದೆ. ಕೇವಲ ಮಿಲಿಟರಿಗೆ ಹಣ ಹಾಕಿದರೆ ಮಾತ್ರ ಸಾಕು, ಈ ವಿಜ್ಞಾನಿಗಳೆಲ್ಲ ದಂಡ ಎಂದುಕೊಂಡ ಟ್ರಂಪ್ ಮರುಗಿದ್ದು ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಮೇರಿಕಾದ ಪತ್ರಿಕಾಗಾರರು.
ಈ ಕಥೆ ಕೇಳಿ. ನಮ್ಮ ದೇಶದಲ್ಲಿಯೇ ಮೌಢ್ಯ ಜಾಸ್ತಿ ಎಂದು ಕೊಂಡರೆ ಅಮೇರಿಕಾದಲ್ಲಿ ವಿದ್ಯಾವಂತರಲ್ಲಿಯೂ ಸಹ ಮೌಢ್ಯವೇ. ಟ್ರಂಪ್ ಎಂಬಾತ ಹೇಳಿದ್ದನ್ನು ನಂಬಿ ಅರಿಜೋನಾದ ೬೦ ವರ್ಷದ ದಂಪತಿಗಳು ಕೊರೋನಾ ಕಾಯಿಲೆ ತಮಗೆ ಬರಬಹುದೆಂಬ ಆತಂಕದಲ್ಲಿ ಅವರ ಮನೆಯಲ್ಲಿ ಮೀನುಗಳ ಚಿಕಿತ್ಸೆಗಾಗಿ ಬಳಸಬೇಕಾದ ಕ್ಲೋರೋಕ್ವಿನ್ ಹೊಂದಿದ ಔಷಧಿಯನ್ನು ಕರಡಿ ಗಟಗಟ ಕುಡಿದು ಬಿಟ್ಟರು. ಮುಂದೇನು? ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕ್ಲೋರೋಕ್ವಿನ್ ಡೋಸ್ ಜಾಸ್ತಿಯಾಗಿ ಇಬ್ಬರೂ ಏಸುಕ್ರಿಸ್ತನಲ್ಲಿ ಐಕ್ಯರಾದರು. ಇನ್ನೆಷ್ಟು ಮೂರ್ಖರು ಈ ರೀತಿ ಸ್ವಯಂ ವೈದ್ಯ ಮಾಡಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆಯೋ ಗೊತ್ತಿಲ್ಲ.
ಈ ಔಷಧಿಯೂ ಸಹ ರೆಮ್ ಡೆಸಿವಿರ್ ಔಷಧಿಯಂತೆ ಆರ್ ಎನ್ ಎ ಪಾಲಿಮರೇಸ್ ಎಂಬ ಕಿಣ್ವವನ್ನು ಪ್ರತಿಬಂಧಿಸಿ ವೈರಾಣುವಿನ ಬೆಳವಣಿಗೆಯನ್ನು ತಡೆಯುತ್ತಿದೆ ಎನ್ನುತ್ತಾರೆ. ಈ ಔಷಧಿಯು ಕೊರೋನಾ ವೈರಾಣುವಿನ ವಿರುದ್ಧ ಪರಿಣಾಮಕಾರಿ ಎಂದು ಸಂಪೂರ್ಣ ಸಾಬೀತಾಗಿಲ್ಲ. ಅನೇಕ ದೇಶಗಳಲ್ಲಿ ಸಂಶೋಧನಾ ಕಾರ್ಯ ನಡೆಯುತ್ತಿದೆ. ಸದ್ಯಕ್ಕೆ ಈ ಔಷಧಿಯನ್ನು ೩೦೦ ಮಿಗ್ರಾಮ್ ಪ್ರತಿ ದಿನಕ್ಕೆರಡು ಬಾರಿ ೧೦ ದಿನ ನೀಡಲು ಸೂಚಿಸಿದ್ದಾರೆ.
ದೊಡ್ಡಣ್ಣ ಟ್ರಂಪ್ ಭಾರತಕ್ಕೆ “ನಿಮ್ಮಲ್ಲಿರುವ ಕ್ಲೋರೋಕ್ವಿನ್ ಔಷಧಿ ಕೂಡಲೇ ಅಮೇರಿಕಾಕ್ಕೆ ಕಳಿಸಿ, ಇಲ್ಲಾ ಪರಿಣಾಮ ಎದುರಿಸಿ” ಎಂದು ಧಮ್ಕಿ ಹಾಕಿದ್ದಾರಂತೆ. ಭಾರತವೂ ಒಂದಿಷ್ಟು ಔಷಧಿ ಕಳಿಸಿಕೊಟ್ಟಿದೆಯಂತೆ. ನಮಗೂ ಮುಂದೆ ಅವರಿಂದ ಸಹಾಯ ಬೇಕಲ್ಲ !!. ಇದೆಲ್ಲ ಈಗ ಮುಗಿದ ಕಥೆ. ಏನಿದ್ದರೂ ಈಗ ಎರಡನೆಯ ಅಲೆಯದೇ ಕಥೆ.!

ಫೋಟೋ ಕೃಪೆ : BBC
ಐವೆರ್ಮೆಕ್ಟಿನ್
ಇದು ಮನುಷ್ಯರಲ್ಲಿ ಹೊಸ ಔಷಧ. ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಇತ್ತೀಚಿಗಿನ ಒಂದು ಸಂಶೋಧನೆಯ ಪ್ರಕಾರ ಐವೆರ್ಮೆಕ್ಟಿನ್ ಎಂಬ ಜಾನುವಾರುಗಳಲ್ಲಿ ಉಣ್ಣೆ ಮತ್ತು ದುಂಡುಹುಳಗಳ ವಿರುದ್ಧ ಉಪಯೋಗಿಸುತ್ತಿರುವ ಔಷಧ ಕೊವಿಡ್-೧೯ ನ್ನು ಉಂಟು ಮಾಡುವ ವೈರಾಣುಗಳ ಶರೀರದ ಹೊರಗಡೆ ಉತ್ತಮ ಪರಿಣಾಮ ಉಂಟು ಮಾಡಿದೆಯಂತೆ. ಅಲ್ಲದೇ ಇದಕ್ಕೆ ಅಡ್ಡ ಪರಿಣಾಮವೂ ಸಹ ಕಡಿಮೆಯಿರುವುದರಿಂದ ಎಫ್ ಡಿ ಏ ಸಹ ಇದನ್ನು ಅನುಮೋದಿಸಿದೆ. ಇದರ ಮೇಲೆ ವಿಜ್ಞಾನಿಗಳು ತುಂಬಾ ಭರವಸೆ ಇಟ್ಟಿದ್ದಾರೆ. ಈಗಾಗಲೇ ಇದರ ಬಳಕೆ ಅನೇಕ ದೇಶಗಳಲ್ಲಿ ಇದೆ.
ಇಮ್ಯೂನೋಗ್ಲೋಬುಲಿನ್ಸ್
ಕೊರೋನಾ ರೋಗಾಣುಗಳ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಂಡ ಒಬ್ಬ ಅರೋಗ್ಯವಂತ ವ್ಯಕ್ತಿಯ ರಕ್ತ ಪಡೆದು ಅದರಲ್ಲಿನ ಇಮ್ಯೂಗ್ಲೋಬಿನ್ನುಗಳನ್ನು ತೆಗೆದು ರೋಗಪೀಡಿತ ವ್ಯಕ್ತಿಗೆ ನೀಡಿದಲ್ಲಿ ಕೊರೋನಾ ವೈರಾಣು ನಿಷ್ಕ್ರಿಯಗೊಳ್ಳುತ್ತದೆ ಎನ್ನಲಾಗಿದೆ. ಇದಕ್ಕೆ ರಕ್ತ ನೀಡುವ ಕೊರೋನಾ ಗುಣಮುಖರು ಒಪ್ಪ ಬೇಕು ಅಷ್ಟೇ !!.
ಜೀವ ನಿರೋಧಕಗಳು.
ಕೊರೋನಾ ಕಾಯಿಲೆಯಲ್ಲಿ ಶ್ವಾಸಕೋಶದ ಕಾಯಿಲೆ ನ್ಯುಮೋನಿಯಾ ಅಗುವುದರಿಂದ ಮತ್ತು ಬಹುತೇಕ ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆಗೊಳಪಡುವುದರಿಂದ ಅವರಿಗೆ ಅನೇಕ ಬ್ಯಾಕ್ಟಿರಿಯಾಗಳು ಹಬ್ಬುವ ಸಾಧ್ಯತೆ ಇದೆ.
ಅಮೇರಿಕಾದ ಶ್ವಾಸಕೋಶ ತಜ್ಞರುಗಳ ಸಂಘದ ಒಮ್ಮತದಂತೆ ಶ್ವಾಸಕೋಶದ ಸೋಂಕಿಗೆ ಸಾಮಾನ್ಯವಾಗಿ ಅಮೋಕ್ಸಿಸಿಲಿನ್ ಅಥವಾ ಡಾಕ್ಸಿಸೈಕ್ಲಿನ್ ಅಥವಾ ಮ್ಯಾಕ್ರೋಲೈಡ್ ಜೀವನಿರೋಧಕ ಬಳಸುತ್ತಾರೆ. ಹೆಚ್ಚಿನ ಬಾಧೆ ಇದ್ದರೆ ಸಿಫಾಲೋಸ್ಪೋರಿನ್ನುಗಳನ್ನು ಸಹ ಬಳಸುತ್ತಾರೆ. ಕೆಲವೊಮ್ಮೆ ಮಾರ್ಬೋಫ್ಲಾಕ್ಸಾಸಿನ್ನುಗಳಂತ ಹೆಚ್ಚಿನ ಶಕ್ತಿಯ ಜೀವನಿರೋಧಕಗಳು ಬೇಕಾಗಬಹುದು. ಅಥವಾ ಇವೆಲ್ಲವುಗಳ ಸಮ್ಮಿಶ್ರಣವೂ ಬೇಕಾಗಬಹುದು.
ಕಾರ್ಟಿಕೋಸ್ಟಿರಾಯ್ಡ್ಸ್
ಸಾರ್ಸ್ ಮತ್ತು ಮೆರ್ಸ್ ಕರೋನಾ ವೈರಾಣು ಬಾಧೆಯಲ್ಲೂ ಬಳಸಿದ ಕಾರ‍್ಟಿಕೋಸ್ಟಿರಾಯ್ಡುಗಳು ಈಗಲೂ ಕೋವಿಡ್-೧೯ ಕಾಯಿಲೆಯಲ್ಲೂ ಜೀವರಕ್ಷಕವಾಗಿವೆ ಎಂದರೆ ತಪ್ಪಾಗಲಾರದು. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಇವುಗಳ ಉಪಯೋಗವನ್ನು ಅತ್ಯಂತ ತೀವ್ರತರವಾದ ಪರಿಸ್ಥಿತಿಯಲ್ಲಿ ಮಾತ್ರ ಬಳಸಿ ಎನ್ನುತ್ತದೆ. ಇದಕ್ಕೆ ಕಾರಣ ಕೊರೋನಾ ವೈರಾಣು ಕಾಯಿಲೆ ಶರೀರದ ರೋಗ ನಿರೋಧಕ ಶಕ್ತಿಯು ಬಹಳ ಮುಖ್ಯವಾಗಿದ್ದು ಇದನ್ನು ಸ್ಟಿರಾಯ್ಡುಗಳು ಬಗ್ಗು ಬಡಿಯುವುದರಿಂದ ಅತ್ಯಂತ ತೀವ್ರವಾದ ಪರಿಸ್ಥಿತಿಯಲ್ಲಿ ಮಾತ್ರ ವೈದ್ಯರು ಬಳಸುತ್ತಾರೆ. ಅಲ್ಲದೇ ವೈರಾಣುವಿನ ರೋಗಕಾರಕ ಆರ್ ಎನ್ ಎ ಯನ್ನು ಹೊರಹಾಕುವುದು ತಡವಾಗುತ್ತದೆ. ಅಲ್ಲದೇ ಇದರಿಂದ ಅನೇಕ ನರಮಾನಸಿಕ ಕಾಯಿಲೆಗಳೂ ಬರಬಹುದು ಎನ್ನುತ್ತಾರೆ ತಜ್ಞರು. ಸಿಡಿಸಿ (ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಯಂಡ್ ಪ್ರಿವೆಂಶನ್) ವಿಜ್ಞಾನಿಗಳು ಹೈಡ್ರೋಕಾರ್ಟಿಸೋನ್, ಪ್ರೆಡ್ನಿಸೋಲೋನ್, ಡೆಕ್ಸಾಮಿಥಸೋನ್ ಇತ್ಯಾದಿ ಸ್ಟಿರಾಯ್ಡುಗಳನ್ನು ಎಚ್ಚರಿಕೆಯಿಂದ ಬಳಸಬಹುದೆಂಬ ಸಲಹೆ ನೀಡುತ್ತರೆ.
ಇದಲ್ಲದೇ ಇನ್ನೂ ಅನೇಕ ರೋಗಲಕ್ಷಣಗಳನ್ನು ನೋಡಿ ಮಾಡುವ ಚಿಕಿತ್ಸೆಗಳಿವೆ. ಇವುಗಳನ್ನು ಮಾಡಲು ವೈದ್ಯಲೋಕಕ್ಕೆ ಅಗಾಗ್ಗೆ ವಿಶ್ವ ಆರೋಗ್ಯ ಸಂಸ್ಥೆಗಳು ಹೆಚ್ಚುವರಿ ಮಾಹಿತಿ ನೀಡುತ್ತಲೇ ಇರುತ್ತಾರೆ. ಇವುಗಳಲ್ಲಿ ನಿಗದಿತ ಸಮಯದಲ್ಲಿ ವೆಂಟಿಲೇಟರುಗಳನ್ನು ಹಾಕಿ ಆಮ್ಲಜನಕ ಪೂರೈಸುವುದು ಇತ್ಯಾದಿ ಸೇರಿವೆ.
ಏನಿದ್ದರೂ ಸಹ ನಮ್ಮ ಎಚ್ಚರಿಕೆಯಲ್ಲಿ ನಾವಿರಲೇ ಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಹೊರಗೆ ಹೋಗದಿರಿ, ಕೈ ತೊಳೆದುಕೊಳ್ಳುತ್ತಾ ಇರಿ. ಕೋವಿಡ್ ನಿಯಮ ಪಾಲಿಸಿ.
- ಡಾ. ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
