ಸೆಲೆಬ್ರೆಟಿ ಗುಂಗಿನಲ್ಲಿ ನಿಮ್ಮ ಸುತ್ತ ಕೋಟೆಯನ್ನು ಕಟ್ಟದಿರಿ !

ಜಯನಗರ ಕಾಂಪ್ಲೆಕ್ಸ್ ನಲ್ಲಿ ಸುತ್ತುವಾಗ ಪ್ರಣಯ ರಾಜ ಶ್ರೀನಾಥ್ ಅವರು ಕಣ್ಣಿಗೆ ಬಿದ್ದರು. ಅತ್ಯಂತ ಸ್ಪುರದ್ರೂಪಿ ನಟ. ಹಳೆ ನಟರಾದರೇನು? ಅವರ ಅಂದ-ಚಂದ ಈಗಲೂ ಪ್ರಣಯವನ್ನು ಉಕ್ಕಿ ಹರಿಸುತ್ತದೆ. ಅದೇ ಕಣ್ಣು, ಅದೇ ಆಕರ್ಷಣೆ ನಾನಂತೂ ಮೈ ಮರೆತು ಅವರನ್ನೇ ನೋಡುತ್ತಾ ನಿಂತಿದ್ದೆ.

ಅಷ್ಟರಲ್ಲಿ ಅವರ ಧರ್ಮಪತ್ನಿ ಅವರ ಪಕ್ಕದಲ್ಲಿ ಬಂದು ನಿಂತರು. ಅವರಿಬ್ಬರು ನಗು ನಗುತ್ತ ಜಯನಗರದಲ್ಲಿ ಶಾಪಿಂಗ್ ಮಾಡುತ್ತಿದ್ದರು. ದೊಡ್ಡ ದೊಡ್ಡ ನಟರೆಲ್ಲ ಸಿಂಗಪೂರ್, ಪ್ಯಾರಿಸ್ ಅಂತೆಲ್ಲ ವಿದೇಶದಲ್ಲಿ ಶಾಪಿಂಗ್ ಮಾಡುತ್ತಾರೆ ಎಂದು ಕೇಳಿದ್ದೆ. ಆದರೆ ಶ್ರೀನಾಥ್ ಅವರನ್ನು ಜಯನಗರದಲ್ಲಿ ಮುಕ್ತವಾಗಿ ಓಡಾಡುತ್ತಿದ್ದನ್ನು ನೋಡಿ ನಾನಷ್ಟೇ ಅಲ್ಲ. ಅಲ್ಲಿದ್ದ ಎಷ್ಟೋ ಜನ ಅವಕ್ಕಾಗಿ ಹೋಗಿದ್ದರು. ಮತ್ತು ಎಲ್ಲರೂ ಅವರನ್ನು ದೂರದಿಂದ ನೋಡಿ ಸಂತೋಷಪಟ್ಟು ಕೊಂಡರು.

ಇನ್ನು ರವೀಂದ್ರ ಕಲಾಕ್ಷೇತ್ರ ಎಂದರೆ ನನಗೆ ವಿಶೇಷ ಪ್ರೀತಿ. ರವೀಂದ್ರ ಕಲಾಕ್ಷೇತ್ರ ಎಷ್ಟೋ ಕಲಾವಿದರನ್ನು ಪರಿಚಯಿಸಿಕೊಟ್ಟಂತಹ ವೇದಿಕೆ. ಕಲಾವಿದರ ದೇಗುಲ. ಅಲ್ಲಿಗೆ ಯಾವಾಗಲೇ ಹೋದರು ಏನಾದರೂ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಹಾಗಾಗಿ ನನ್ನ ಮನಸ್ಸಿಗೆ ತೋಚಿದಾಗಲೆಲ್ಲ ನಾನು, ಆಗೊಮ್ಮೆ ಈಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿರುತ್ತೇನೆ. ಹೀಗೆ ಒಮ್ಮೆ ಅಲ್ಲಿಗೆ ಹೋಗಿದ್ದೆ. ಅಲ್ಲಿಗೆ ನಾನು ಯಾವಾಗಲೇ ಹೋದರೂ ನಾನು ಸೀದಾ ಪ್ರೇಕ್ಷಕರ ಸೀಟಿನಲ್ಲಿ ಕೂತು ಎದ್ದು ಬರುವಳಲ್ಲ. ವೇದಿಕೆಯ ಹಿಂದೆ ಒಂದು ಸುತ್ತು ಹಾಕಿ ಬಂದು ಪ್ರೇಕ್ಷಕರ ಸೀಟಿನಲ್ಲಿ ಕೂರುವ ಜಾಯಮಾನ ನನ್ನದು. ಏಕೆಂದರೆ ವೇದಿಕೆಯ ಹಿಂದೆಯೇ ಸ್ನೇಹಿತರು, ರಂಗಕರ್ಮಿಗಳು ಹೆಚ್ಚಾಗಿ ಕಾಣ ಸಿಗುತ್ತಾರೆ ಎನ್ನುವ ನಂಬಿಕೆ. ಅಂದು ಕೂಡ ನಾನು ಹಾಗೆ ಹಿಂದೆ ಒಂದು ಸುತ್ತು ಹಾಕಿದೆ. ನನ್ನ ನಂಬಿಕೆಗೆ ಮೋಸವಾಗಲಿಲ್ಲ. ಅಲ್ಲಿ ನನಗೆ ಸಿಕ್ಕವರು ಖ್ಯಾತ ನಿರ್ದೇಶಕ ಟಿ. ಎಸ್.ನಾಗಾಭರಣ. ಹಿರಿಯ ಹಾಗು ಅನುಭವಿ ನಿರ್ದೇಶಕ, ನಟ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಯಶಸ್ವೀ ರಂಗಸಂಘಟಕ. ಅವರನ್ನು ನೋಡುವುದೇ ಒಂದು ರೀತಿಯ ಸಂತೋಷ. ಇನ್ನು ಅವರೊಂದಿಗೆ ಮಾತಾಡುವುದೆಂದರೆ ಪರಮಾನಂದ. ಅವರನ್ನು ವೇದಿಕೆಯ ಹಿಂದೆ ನೋಡಿದ್ದು ಇದೇನು ಮೊದಲೇನಲ್ಲ. ಸಾಕಷ್ಟು ಭಾರಿ ನೋಡಿದ್ದೇನೆ. ಅವರೊಂದಿಗೆ ಮನಸ್ಪೂರ್ತಿಯಾಗಿ ಹರಟಿದ್ದೇನೆ. ನನ್ನ ಲೇಖನವು ಇಷ್ಟವಾದಾಗ ಅವರು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅತ್ಯಂತ ಸರಳ ಹಾಗು ತೂಕದ ವ್ಯಕ್ತಿತ್ವ ಅವರದು.

ಈ ಎಲ್ಲ ಗಣ್ಯವ್ಯಕ್ತಿಗಳ ಬಗ್ಗೆ ಏಕೆ ಹೇಳುತ್ತಿದ್ದೇನೆ ಅಂದರೆ ಅವರನ್ನೆಲ್ಲ ನಾನು ನೋಡಿದ್ದು ಯಾವುದೇ ಐಷಾರಾಮಿ ಕಾರಿನಲ್ಲಿ ಅಲ್ಲ ಅಥವಾ ಐಷಾರಾಮಿ ಬಂಗಲೆಯಲ್ಲ. ಒಂದೆರಡು ಸಿನಿಮಾ ಮಾಡಿದವರಲ್ಲ. ನೂರಕ್ಕೂ ಹೆಚ್ಚು ಸಿನಿಮಾ ಮಾಡಿ ಯಶಸ್ಸನ್ನು ಕಂಡ ಸಾಧಕರು ಅವರು. ಅವರೆಲ್ಲ ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡುಡುತ್ತಾರೆ. ಅವರಂತೆ ಸಾಕಷ್ಟು ದೊಡ್ಡ ಸಿನಿ ಕಲಾವಿದರನ್ನು ರಸ್ತೆಗಳಲ್ಲಿ, ಜನ ಜಂಗುಳಿಯಲ್ಲಿ ನೋಡಿದ್ದೇನೆ. ಅವರ್ಯಾರು ಸೆಲೆಬ್ರೆಟಿ ರೀತಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರೇ ಅಲ್ಲ. ಅವರೆಲ್ಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರು. ಯಶಸ್ಸನ್ನು ಕಂಡರು. ಯಶಸ್ಸು ಸಿಕ್ಕಾಗ ಹಿಗ್ಗಲಿಲ್ಲ. ಸೋತಾಗ ಕುಗ್ಗಲಿಲ್ಲ. ಎರಡನ್ನು ಸರಿ ಸಮವಾಗಿ ಸ್ವೀಕಾರ ಮಾಡಿದರು. ಅವರ ಕಲಾ ಸೇವೆಗೆ ಪ್ರಶಸ್ತಿಗಳು, ಗೌರವಗಳು ಹುಡುಕಿಕೊಂಡು ಬಂದಾಗ ವಿನಮ್ರವಾಗಿ ಸ್ವೀಕರಿಸಿದರು. ತಾನೊಬ್ಬ ಸೆಲೆಬ್ರೆಟಿ. ನಾನು ಹೀಗೆಯೇ ಬದುಕಬೇಕು. ಆಡಿ,ಬೆಂಜ್ ಕಾರ್ ನಲ್ಲೆ ಓಡಾಡಬೇಕು. ಫೈವ್ ಸ್ಟಾರ್ ಹೋಟೆಲ್ ನಲ್ಲೆ ತಿನ್ನಬೇಕು. ವಿದೇಶದಲ್ಲೇ ಶಾಪಿಂಗ್ ಮಾಡಬೇಕು ಎಂದೆಲ್ಲ ತಮ್ಮ ಸುತ್ತ ತಾವೇ ಗೋಡೆಗಳನ್ನೂ ಏರಿಸಿಕೊಂಡವರಲ್ಲ. ಹಸಿವಾದಾಗ ಕಾರಂತರ ಹೋಟೆಲ್ ನಲ್ಲೋ, ಅಡಿಗಾಸ್ ಹೋಟೆಲ್ ನಲ್ಲೋ ತಿಂದು ತಮ್ಮ ಹಸಿವನ್ನು ನೀಗಿಸಿಕೊಂಡವರು. ಓಡಾಡಬೇಕು ಎನಿಸಿದಾಗ ಯಾವುದೋ ಇಂಡಿಯನ್ ಕಾರ್ ನಲ್ಲಿ ಅಥವಾ ಹೆಚ್ಚೆಂದರೆ ಇನ್ನೋವಾ ಕಾರಿನಲ್ಲಿ ಸ್ವಚ್ಚಂದವಾಗಿ ಓಡಾಡಿಕೊಂಡು ಎಲ್ಲರನ್ನು ಪ್ರೀತಿಯಿಂದ ಕಂಡವರು. ಅವರೆಲ್ಲ ಬದುಕನ್ನು ಕಂಡ ರೀತಿಯೇ ಅದ್ಬುತ. ಆಡಿ, ಬೆಜ್ ಕಾರಿನ ಹಿಂದೆ ಓಡಿದವರಲ್ಲ. ಜನರಿಂದ ಅಂತರ ಕಾಯ್ದುಕೊಂಡವರಲ್ಲ. ಅಭಿಮಾನಿಗಳನ್ನು ಬೆಳೆಸಿಕೊಳ್ಳಬೇಕು ಎಂದು ಸ್ಟಾರ್ಡಮ್ ನ್ನು ಮಾಡಿದವರೇ ಅಲ್ಲ. ಅತ್ಯಂತ ಸರಳ ಬದುಕನ್ನು ಕಂಡವರು. ಕನ್ನಡ ಚಿತ್ರರಂಗವನ್ನು ಬೆಳಸಬೇಕು. ಹೊಸ ಕಲಾವಿದರಿಗೆ ತರಬೇತಿ ನೀಡಬೇಕು. ಜನರಿಗೆ ಇನ್ನಷ್ಟು ಒಳ್ಳೆ ಸಿನಿಮಾ ಕೊಡಬೇಕು ಎನ್ನುವ ಹತ್ತಾರು ಕನಸ್ಸುಗಳು ಹೊತ್ತಿದ್ದರು ಅಂದಿನ ಕಲಾವಿದರು,ತಂತ್ರಜ್ಞರು.

ಆದರೆ ಇಂದಿನ ಬಹುತೇಕ ಕಾಲೇಜು ಹುಡುಗ-ಹುಡುಗಿಯರಲ್ಲಿ ತಾನೊಬ್ಬ ದೊಡ್ಡ ನಾಯಕ/ನಾಯಕಿಯಾಗಬೇಕು ಎನ್ನುವ ಆಸೆಗಳು,ಕನಸ್ಸುಗಳಿವೆ. ಹಣ, ಕೀರ್ತಿ ಸಂಪಾದಿಸಲು ಏಕೈಕ ಮಾರ್ಗವೆಂದರೆ ಸಿನಿಮಾ ಎಂದು ಭಾವಿಸಿದ್ದಾರೆ. ಹಾಗಾಗಿ ಸಿನಿಮಾ ಪ್ರಪಂಚಕ್ಕೆ ಬರುವ ಮೊದಲೇ ಸೆಲೆಬ್ರೆಟಿ ರೀತಿಯಲ್ಲಿ ಬದುಕಬೇಕೆನ್ನುವ ಕೆಲವು ಚೌಕಟ್ಟನ್ನು ಹಾಕಿಕೊಂಡೇ ಬರುತ್ತಾರೆ. ಅದರಂತೆ ಅವರ ಒಂದೇ ಒಂದು ಸಿನಿಮಾ ಧೂಳೆಬ್ಬಿಸಿದರೆ ಸಾಕು. ಅವರನ್ನು ಹಿಡಿಯುವುದೇ ಕಷ್ಟ. ಸಿಕ್ಕ ಕ್ಷಣಿಕ ಯಶಸ್ಸು ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಯನ್ನೇ ತರುತ್ತದೆ. ತಾನೊಬ್ಬ ದೊಡ್ಡ ಸೆಲೆಬ್ರೆಟಿ ಎನ್ನುವ ಅಹಂನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಅವರ ಅಹಂಗೆ ತುಪ್ಪ ಸುರಿವಿದಂತೆ ರಾತ್ರೋ ರಾತ್ರಿ ಅಭಿಮಾನಿ ಬಳಗ ಹುಟ್ಟಿ ಕೊಳ್ಳುತ್ತದೆ ಅಥವಾ ಅವರೇ ಹುಟ್ಟಿಸಿಕೊಳ್ಳುತ್ತಾರೆ. ಐಷಾರಾಮಿ ಕಾರ್, ಬಂಗಲೆ, ಸಾಲದಕ್ಕೆ ತಮ್ಮ ಅಕ್ಕ ಪಕ್ಕದಲ್ಲಿ ಬಾಡಿ ಗಾರ್ಡ್ ಇಟ್ಟುಕೊಂಡು ಓಡಾಡುತ್ತಾರೆ. ಹೀಗೆ ಜನರೊಂದಿಗೆ ಅಂತರ ಕಾಯ್ದು ಕೊಳ್ಳುತ್ತಾ ಬೇರೆ ಪ್ರಪಂಚದಲ್ಲಿಯೇ ಮುಳುಗಿ ಹೋಗುತ್ತಾರೆ. ಅವರ ಶಾಪಿಂಗ್, ಅವರ ಪ್ರವಾಸ ಎನ್ನಿದ್ದರೂ ವಿದೇಶದಲ್ಲಿಯೇ. ಅವರ ಅಭಿಮಾನಿಗಳ ಜೊತೆ ಮಾತನಾಡುವುದಿರಲಿ. ತಮ್ಮ ಸಹಕಲಾವಿದರೊಂದಿಗೆ ಕೂಡ ಬೆರೆಯುವುದಿಲ್ಲ.ಇಂದಿನ ಎಷ್ಟೋ ನಟ-ನಟಿಯರಿಗೆ ತಮ್ಮ ಸಿನಿಮಾದಲ್ಲಿ ಹಾಡಿದ ಗಾಯಕ/ಗಾಯಕಿ ಯಾರೆಂಬುದೇ ಗೊತ್ತಿರುವುದಿಲ್ಲ. ಇನ್ನು ತಮ್ಮ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದವರ ಪರಿಚಯ ದೂರದ ಮಾತು. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಅವರಿಗೆ ಭಯವೋ ಅಥವಾ ಅದೊಂದು ಸ್ಟಾರ್ಡಮ್ ಗೊತ್ತಿಲ್ಲ. ಮುಖಕ್ಕೆ ಬಟ್ಟೆ ಕಟ್ಟಿಕೊಂಡೋ, ಹೆಲ್ಮೆಟ್ ಧರಿಸಿಕೊಂಡೋ ಅಥವಾ ವೇಷ ಮರಿಸಿಕೊಂಡೋ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಾರೆ. ಅದನ್ನು ನಮ್ಮ ಮಾಧ್ಯಮ ಮಿತ್ರರು ದೊಡ್ಡದಾಗಿ ಹೆಡ್ ಲೈನ್ ಕೊಟ್ಟು ಅವರನ್ನು ಧರೆಗೆ ಇಳಿದು ಬಂದ ಇಂದ್ರನಂತೋ, ರಂಭೆಯಂತೋ ಬಿಂಬಿಸುತ್ತಾರೆ. ಅವರು ಕೂತರು ಸುದ್ದಿ, ನಿಂತರು ಸುದ್ದಿ ಮಾಡಿ, ಅವರನ್ನು ಮೇಲೆ ಮೇಲೆ ಹತ್ತಿಸಿ ಕೈ ಬಿಡುತ್ತಾರೆ. ಇನ್ನೇನ್ನು ಆಕಾಶದಲ್ಲಿ ನಕ್ಷತ್ರದಂತೆ ಮಿನುಗಬೇಕು ಎನ್ನುವಷ್ಟರಲ್ಲಿ ಸಿನಿಮಾ ಕೈ ಕೊಡುತ್ತದೆ. ದಬ್ಬರಿಸಿ ಮೇಲಿಂದ ಬೀಳುತ್ತಾರೆ. ಆ ಸೋಲನ್ನು ಸಹಿಸಿಕೊಳ್ಳಲಾಗದೆ ಹತಾಶರಾಗುತ್ತಾರೆ.

ಇದು ಅಂದಿನ ಹಾಗು ಇಂದಿನ ಕಲಾವಿದರಲ್ಲಿ, ತಂತ್ರಜ್ಞರಲ್ಲಿರುವ ಒಂದು ಅಂತರ. ಸಿನಿಮಾ ಎನ್ನುವುದು ಮೋಜು,ಮಸ್ತಿಯ ಅಡ್ಡವಾಗಬಾರದು. ಸರಳ ಜೀವನ ಮುಂದೊಂದು ದಿನ ನಮ್ಮ ಕೈ ಹಿಡಿದೇ ಹಿಡಿಯುತ್ತದೆ. ಆದರೆ ತೋರಿಕೆಯ ಬದುಕು ನಮ್ಮ ದಾರಿ ತಪ್ಪಿಸುತ್ತದೆ ಎನ್ನುವುದನ್ನು ಇಂದಿನ ಕೆಲವು ಕಲಾವಿದರು ಅರ್ಥೈಸಿಕೊಂಡರೆ ಒಳಿತು. ತಮ್ಮ ಸುತ್ತ ಕಟ್ಟಿರುವ ಗೋಡೆಯನ್ನು ಬೀಳಿಸಿ ಸಹಕಲಾವಿದರು ಹಾಗು ಜನರೊಂದಿಗೆ ಬೆರೆಯಿರಿ. ನಿಮ್ಮಿಂದ ಜನ ಮತ್ತು ಜನರಿಂದ ನೀವು ಸಾಕಷ್ಟು ಕಲಿಯುವುದಿದೆ. ನಿಮ್ಮ ಅಂಗೈಯಲ್ಲಿ ನಿಮ್ಮ ಬದುಕಿದೆ ಎನ್ನುವುದನ್ನು ಮರೆಯದಿರಿ ಎನ್ನುವ ಮಾತನ್ನು ಇಂದಿನ ಕಲಾವಿದರಿಗೆ ಹೇಳುತ್ತಾ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸುತ್ತೇನೆ.

ಲೇಖನ : ಶಾಲಿನಿ ಪ್ರದೀಪ್

ak.shalini@outlook.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW