ವಾರದ ಕೊನೆ ಎಂದಾಕ್ಷಣ ಕಣ್ಣು ಟಿವಿಯತ್ತ ಮುಖ ಮಾಡಿ ಬಿಡುತ್ತಿತ್ತು. ಮನಸ್ಸು ಡಾನ್ಸ್ ರಿಯಾಲಿಟಿ ಶೋವನ್ನು ನೋಡಲು ಹಾತೊರೆಯುತ್ತಿತ್ತು. ನಾನು ಈ ರಿಯಾಲಿಟಿ ಶೋ ನೋಡುವುದಕ್ಕಾಗಿಯೇ ಮನೆಕೆಲಸವನ್ನು ಪಟಪಟನೇ ಮುಗಿಸಿ ಸರಿಯಾದ ಸಮಯಕ್ಕೆ ಟಿವಿ ಮುಂದೆ ಹಾಜರಾಗಿ ಬಿಡುತ್ತಿದ್ದೆ. ಇದು ಹಿರಿಯರಿಂದ ಕಿರಿಯರವರೆಗೂ ಸಂತೋಷವನ್ನು ಕೊಟ್ಟಂತಹ ಕಾರ್ಯಕ್ರಮ. ಕರ್ನಾಟಕದ ಮೂಲೆ ಮೂಲೆಯಲ್ಲಿ ಅಡಗಿ ಕೂತಿದ್ದ ಪ್ರತಿಭೆಗಳನ್ನು ನಾಡಿನಾದ್ಯಂತ ಪರಿಚಯ ಮಾಡಿಕೊಟ್ಟಿದ್ದು ಇದೆ ಡಾನ್ಸ್ ರಿಯಾಲಿಟಿ ಶೋಗಳು. ಕಲಾವಿದರು ತಮ್ಮಲ್ಲಿನ ನೃತ್ಯ ಕಲೆಯನ್ನು ಹೊರಹಾಕಲು ಈ ವೇದಿಕೆಯು ವರದಾನವಾಯಿತು. ಇವೆಲ್ಲವೂ ಒಂದು ಹಂತದವರೆಗೆ ಸಾಕಷ್ಟು ಮನರಂಜನೆ ಕೊಟ್ಟಿತು.ಆದರೆ ಬರುಬರುತ್ತ ಇತ್ತೀಚಿನ ಡ್ಯಾನ್ಸ್ ರಿಯಾಲಿಟಿ ಶೋಗಳು ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿವೆ. ಮನರಂಜನೆಗಿಂತ ಭಯ,ಹಿಂಸೆ, ನೋವನ್ನು ಕೊಡಲು ಶುರು ಮಾಡಿವೆ. ಮೊನ್ನೆ ಕನ್ನಡ ವಾಹಿನಿಯೊಂದರಲ್ಲಿ ಡಾನ್ಸ್ ಶೋ ನೋಡಿದೆ. ಭಯಾನಕವಾಗಿತ್ತು.
ಆ ಡಾನ್ಸ್ ಮಾಡುತ್ತಿದ್ದ ಆ ಮಕ್ಕಳ ವಯಸ್ಸು ಬಹುಶಃ ಆರರಿಂದ ಎಂಟು ವರ್ಷದ ಆಸುಪಾಸಿನಲ್ಲಿರಬಹುದು. ಮುದ್ದಾದ ಮುಗ್ಧ ಮಕ್ಕಳು. ವೇದಿಕೆಯಲ್ಲಿದ್ದ ಒಂದು ಕಾರ್ ಮೇಲೆ ನಿಂತು ಡಾನ್ಸ್ ಮಾಡುತ್ತಿದ್ದರು. ಅವರ ಹುಮ್ಮಸ್ಸನ್ನು ನೋಡಿ ಹುಬ್ಬೇರಿಸಬೇಕು ಅಷ್ಟು ಧೈರ್ಯವಾಗಿ ಡ್ಯಾನ್ಸ್ ಮಾಡುತ್ತಿದ್ದರು. ಅದೇ ರೀತಿಯ ಇನ್ನೊಂದು ಡಾನ್ಸ್ ನೋಡಿದೆ. ಚಿಕ್ಕ ಹುಡುಗಿಯೊಬ್ಬಳ ಕೈ ಮುರಿದಿತ್ತು. ಅದು ಹೇಗೆ ಮುರಿದಿತ್ತು ಎನ್ನುವುದು ಗೊತ್ತಿಲ್ಲ.ಆದರೆ ಆ ಹುಡುಗಿ ಕೈಗೆ ಪ್ಲಾಸ್ಟರ್ ಕಟ್ಟಿಕೊಂಡಿಯೇ ಡಾನ್ಸ್ ಮಾಡುತ್ತಿದ್ದಳು. ಅವಳ ಡಾನ್ಸ್ ಗೆ ಸಾಥ್ ನೀಡಿದ ಅವಳ ಗುರು ಆ ಹುಡುಗಿಯನ್ನು ಬಟ್ಟೆ ಒಗೆದಂತೆ ಎತ್ತಿ ಎತ್ತಿ ಬಿಸಾಕುತ್ತಿದ್ದ. ಆ ಹುಡುಗಿಯು ಆ ನೋವನ್ನು ಸಹಿಸಿಕೊಂಡು ಮತ್ತೆ ಎದ್ದುನಿಂತು, ಮತ್ತೆ ಡ್ಯಾನ್ಸ್ ಮಾಡುತ್ತಿದ್ದಳು. ಅದನ್ನು ನೋಡಿ ಆ ಹುಡುಗಿಯ ಮೇಲೆ ಅನುಕಂಪ ಹುಟ್ಟಿದರೆ, ಅವಳ ಗುರುವನ್ನು ಬಿಡಬೇಕು ಎನ್ನುವಷ್ಟು ಕೋಪವು ಬಂತು. ಡ್ಯಾನ್ಸ್ ಶೋಗಳಲ್ಲಿ ಬಹುತೇಕ ಡ್ಯಾನ್ಸ್ ಗಳು ಇದೇ ರೀತಿಯೇ ಇವೆ. ಹಗ್ಗದ ಮೇಲೆ ಡಾನ್ಸ್, ಎತ್ತರದಿಂದ ಜಿಗಿಯುವುದು, ಒಬ್ಬರನೊಬ್ಬರು ಬಿಸಾಕುವುದು ಈಗೀನ ಡಾನ್ಸ್ ಶೈಲಿಯಾಗಿ ಹೋಗಿವೆ. ಈ ರೀತಿಯ ಡ್ಯಾನ್ಸ್ ಮಾಡುವರ ಗುಂಡಿಗೆ ಗಟ್ಟಿಯಾಗಿದ್ದರೇ ಸಾಲದು, ನೋಡುಗರ ಗುಂಡಿಗೆಯು ಗಟ್ಟಿಯಿರಲೇಬೇಕು.
ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಾಗಿ, ತೀರ್ಪುಗಾರರನ್ನು ಮೆಚ್ಚಿಸುವುದಕ್ಕಾಗಿ ಸ್ಪರ್ಧಿಗಳು ಆಯ್ದುಕೊಳ್ಳುವ ಅಪಾಯಕಾರಿ ಡ್ಯಾನ್ಸ್ ನೋಡಿ ಮನಸ್ಸಿಗೆ ನೋವಾಗುತ್ತದೆ.ಅವುಗಳ ಮೇಲೆ ಕಡಿವಾಣ ಹಾಕುವವರಿಲ್ಲ ಎನ್ನುವುದಕ್ಕೆ ಕೋಪ ಉಕ್ಕಿಬರುತ್ತದೆ.ಇವು ಮನರಂಜನೆ ಹೆಸರಿನಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಮಾಡುವ ಹಿಂಸಾಚಾರ. ಈ ಹಿಂದೆ ಬಾಲಿವುಡ್ ಡಾನ್ಸ್ ಗುರು ಕೊರಿಯೋಗ್ರಾಫರ್ ಸರೋಜ್ ಖಾನ್ ಇಂದಿನ ಡಾನ್ಸ್ ನಲ್ಲಿ ಡ್ಯಾನ್ಸಕ್ಕಿಂತ ಸರ್ಕಸ್ ಜಾಸ್ತಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅವರು ಹೇಳಿದ್ದು ಸತ್ಯದ ಮಾತು. ಇಂದಿನ ಡ್ಯಾನ್ಸ್ ಗಳು ಜಂಬೊ ಸರ್ಕಸ್ ಗಳಾಗಿವೆ. ಸರ್ಕಸ್ ಮಾಲೀಕರು ಕೂಡ ತಮ್ಮ ಕಲಾವಿದರಿಗೆ ಈ ರೀತಿಯ ಅಪಾಯವನ್ನು ತಂದೊಡ್ಡುವುದಿಲ್ಲ. ಅವರ ರಕ್ಷಣೆಗೆ ಬೇಕಾದ ವ್ಯವಸ್ಥೆಯನ್ನು ಮುಂಜಾಗ್ರತೆಯಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿರುತ್ತಾರೆ. ಆದರೆ ಈ ಡಾನ್ಸ್ ಶೋಗಳಲ್ಲಿ ಸ್ಪರ್ಧಿಗಳಿಗೆ ಯಾವುದೇ ರೀತಿಯ ರಕ್ಷಣೆಯಿಲ್ಲ. ಆಯತಪ್ಪಿ ಬಿದ್ದರೆ ಮುಗಿಯಿತು ಕೈಯೋ, ಕಾಲೋ ಅಥವಾ ಜೀವವವೇ ಹೋಗುತ್ತದೆ. ಇದನ್ನು ಕಣ್ಮುಂದೆ ಕೂತು ನೋಡುವ ಸ್ಪರ್ಧಿಗಳ ಸಂಬಂಧಿಕರು, ಅಪ್ಪ-ಅಮ್ಮನ ಕರುಳು ಹಿಡುತ್ತದೆಯೋ ಇಲ್ಲವೋ?ಗೊತ್ತಿಲ್ಲ. ಆದರೆ ಸೋಫಾ ಮೇಲೆ ಕೂತು ನೋಡುವ ಪ್ರತಿಯೊಬ್ಬ ಪ್ರೇಕ್ಷಕನ ಕರುಳಂತೂ ಖಂಡಿತ ಹಿಡುತ್ತದೆ.
ವಾಹಿನಿಗಳು ಇಂತಹ ರಿಯಾಲಿಟಿ ಶೋ ನಿಂದ ಸಾಕಷ್ಟು ದುಡ್ಡು ಮಾಡುತ್ತವೆ ಮತ್ತು TRP ಯನ್ನು ಗಿಟ್ಟಿಸಿಕೊಳ್ಳುತ್ತವೆ. ಹೀಗಿರುವಾಗ ವಾಹಿನಿಯವರು ಸ್ಪರ್ಧಿಗಳಿಗೆ ಯಾವುದೇ ಇನ್ಸೂರೆನ್ಸ್ ಭರವಸೆ ಕೊಡುತ್ತದೆಯೇ?ಅಥವಾ ಸ್ಪರ್ಧಿಗಳಿಗೆ ಸರಿಯಾದ ವೇತನವನ್ನಾದರೂ ನೀಡುತ್ತದೆಯೇ? ಎನ್ನುವುದನ್ನು ವಾಹಿನಿಯವರೇ ಬಾಯಿಬಿಡಬೇಕು. ಸ್ಪರ್ಧಿಗಳು ಮಾತ್ರ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಡಾನ್ಸ್ ಮಾಡುತ್ತಾರೆ. ಅವರ ಶ್ರದ್ದೆಗೆ ಮತ್ತು ಅವರ ಶ್ರಮಕ್ಕೆ ಖಂಡಿತ ಮೆಚ್ಚುಗೆ ಇದೆ. ಆದರೆ ತಾವೊಬ್ಬ ಸೆಲೆಬ್ರೆಟಿಯಾಗಬೇಕು ಎನ್ನುವ ಹಂಬಲದಲ್ಲಿಎಂತಹ ಅಪಾಯಕ್ಕೂ ಈ ಸ್ಪರ್ಧಿಗಳು ಸಿದ್ಧರಾಗಿ ಬಿಡುತ್ತಾರೆ. ಈ ಹಿಂದೆ ಕಿ ಕಿ ಡಾನ್ಸ್ ಗೆ ಕೈ ಹಾಕಿ ಎಷ್ಟೋ ಯುವಕರು ದಾರಿ ತಪ್ಪಿದ್ದರು. ಅದನ್ನು ನಿಷೇಧಿಸಿದ ಮೇಲೆ ಎಷ್ಟೋ ಜೀವ ಉಳಿದುಕೊಂಡಿತು. ಆದರೆ ಈಗಿನ ಅಪ್ಪ-ಅಮ್ಮಂದಿರು ಇಂತಹ ಸಾಹಸ, ಅಪಾಯಕಾರಿ ಡ್ಯಾನ್ಸಗೆ ಸೊಪ್ಪು ಹಾಕುತ್ತಿರುವುದು ಆಶ್ಚರ್ಯ ಹಾಗು ಬೇಸರದ ಸಂಗತಿ.
ಸ್ಪರ್ಧಿಗಳ ಸರಿ ತಪ್ಪುಗಳನ್ನು ತಿದ್ದಿ ಹೇಳಬೇಕಾದ ಡ್ಯಾನ್ಸ್ ಶೋನ ತೀರ್ಪುಗಾರರೇ ಇಂತಹ ಅಪಾಯಕಾರಿ ಡ್ಯಾನ್ಸನ್ನು ಹಾಡಿ ಹೊಗಳಿ ಸ್ಪರ್ಧಿಗಳ ದಾರಿ ತಪ್ಪಿಸುತ್ತಿದ್ದಾರೆ. ಇನ್ನೊಂದು ನಾನು ಗಮನಿಸಿದ ಹಾಗೆ ಈ ಡ್ಯಾನ್ಸ್ ಶೋಗಳಲ್ಲಿ ಕೆಲವು ತೀರ್ಪುಗಾರರಿಗೆ ಡ್ಯಾನ್ಸ್ ನ ಗಂಧವೇ ಇಲ್ಲ. ಅದ್ಭುತವಾಗಿ ಡ್ಯಾನ್ಸ್ ಮಾಡುವ ವಿನೋಧ ರಾಜ್, ಶಶಿಕುಮಾರ್ ಅವರಂತಹ ಖ್ಯಾತ ನಾಮಧೇಯಗಳು ನಮ್ಮ ಕನ್ನಡ ಚಿತ್ರರಂಗದಲ್ಲಿದ್ದಾರೆ. ಅಂತಹ ಹಿರಿಯ ಕಲಾವಿದರನ್ನು ಬಿಟ್ಟು ಸಂಗೀತ ನಿರ್ದೇಶಕರನೋ ಅಥವಾ ಬೇರೆ ಯಾವುದೋ ಕ್ಷೇತ್ರದವರನ್ನೋ ಡಾನ್ಸ್ ತೀರ್ಪುಗಾರರ ಸ್ಥಾನದಲ್ಲಿ ತಂದು ಕೂರಿಸಿರುವುದು ಸರಿಯೇ?. ಮತ್ತು ಈ ರೀತಿಯ ಅಪಾಯಕಾರಿ ಡಾನ್ಸ್ ಮಾಡಲು ತಮ್ಮ ಮಕ್ಕಳಿಗೆ ಪ್ರಚೋಧಿಸುತ್ತಾರೆಯೇ ? ಅಥವಾ ಅವರೇ ಅಪಾಯಕಾರಿ ಡ್ಯಾನ್ಸ್ ಗೆ ಬರಿ ನಾಲ್ಕೇ ನಾಲ್ಕು ಸ್ಟೆಪ್ ಹಾಕಿ ತೋರಿಸುತ್ತಾರೆಯೇ? ಎನ್ನುವ ಹಲವಾರು ಪ್ರಶ್ನೆಗಳಿಗೆ ತೀರ್ಪುಗಾರರಿಂದ ಉತ್ತರ ಬೇಕಿದೆ. ಅವುಗಳ್ಯಾವವೂ ತಮ್ಮಿಂದ ಸಾಧ್ಯವಾಗದಿದ್ದಾಗ ಬೇರೆಯವರಿಗೆ ಈ ರೀತಿಯ ಅಪಾಯಕಾರಿ ಡ್ಯಾನ್ಸ್ ಮಾಡುವಂತೆ ಕುಮ್ಮಕ್ಕು ನೀಡುವುದು ಎಷ್ಟರ ಮಟ್ಟಿಗೆ ಸರಿ. ಈ ರೀತಿಯ ಡ್ಯಾನ್ಸ್ ನಿಂದ ಪ್ರಾಣವೇ ಹೋದರೆ ಇದಕ್ಕೆ ಯಾರು ಹೊಣೆ?.
ಡ್ಯಾನ್ಸ್ ಒಂದು ಮನರಂಜನೆಯಾಗಬೇಕೇ ವಿನಃಹ ಬೇರೊಬ್ಬನ ಪ್ರಾಣ ತೆಗೆಯುವ ಮನನೋಯಿಸುವ ಕಾರ್ಯಕ್ರಮವಾಗಬಾರದು. ಅನಾಹುತ ಸಂಭವಿಸುವ ಮೊದಲೇ ಎಚ್ಛೆತ್ತುಕೊಂಡರೆ ಒಳಿತು.
ಲೇಖನ : ಶಾಲಿನಿ ಪ್ರದೀಪ್