ಚದುರಿದ ಟಿಪ್ಪಣಿಗಳು : ಭಾಗ- ೧

ಕರ್ನಾಟಕದ ವಿಚಾರವಾದಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅನೇಕ ವರ್ಷಗಳಿಂದ ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸಲು ಶ್ರಮಿಸುತ್ತಿರುವ ಡಾ.ಎಚ್.ಆರ್.ಸ್ವಾಮಿ  ಅವರ ಸಂಶೋಧನಾ ಕೃತಿ “ಕರ್ನಾಟಕದ ಕೊರಚರು’ ಸಮಾಜ ವಿಜ್ಞಾನ ಮತ್ತು ಮಾನವ ಕುಲಶಾಸ್ತ್ತೀಯ ಆಧ್ಯಯನ ಕ್ಷೇತ್ರಕ್ಕೆ ಸಂದ ಅಮೂಲ್ಯ ಕೊಡುಗೆಯಾಗಿದೆ. ಈ ಕೃತಿಯ ಕುರಿತು ಹೆಸರಾಂತ ವಿಮರ್ಶಕ  ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕಗಳು : ಕರ್ನಾಟಕದ ಕೊರಚರು
ಲೇಖಕರು : ಡಾ.ಎಚ್.ಆರ್.ಸ್ವಾಮಿ 
ಪ್ರಕಾರ : ಸಂಶೋಧನಾ ಕೃತಿ

ಕರ್ನಾಟಕದ ವಿಚಾರವಾದಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅನೇಕ ವರ್ಷಗಳಿಂದ ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸಲು ಶ್ರಮಿಸುತ್ತಿರುವ ಡಾ.ಎಚ್.ಆರ್.ಸ್ವಾಮಿ  ಅವರ ಸಂಶೋಧನಾ ಕೃತಿ “ಕರ್ನಾಟಕದ ಕೊರಚರು’ ಸಮಾಜ ವಿಜ್ಞಾನ ಮತ್ತು ಮಾನವ ಕುಲಶಾಸ್ತ್ತೀಯ ಆಧ್ಯಯನ ಕ್ಷೇತ್ರಕ್ಕೆ ಸಂದ ಅಮೂಲ್ಯ ಕೊಡುಗೆಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ Edgar Thurston ಎಂಬ ಬ್ರಿಟಿಷ್ ಮಾನವಶಾಸ್ತ್ರಜ್ಞನು ಅಧ್ಯಯನ ಮಾಡಿ ಪ್ರಕಟಿಸಿದ Castes and tribes of southern India ಸಂಪುಟಗಳಲ್ಲಿ ದಾಖಲಿಸಲಾಗಿರುವ ಕೊರಚ- ಕೊರಮರನ್ನು ಕುರಿತಾದ ವಿವರಗಳನ್ನು ಮೂಲ ಆಕರವನ್ನಾಗಿಸಿಕೊಂಡ ಎಚ್.ಆರ್.ಸ್ವಾಮಿಯವರು, ವರ್ತಮಾನ ಭಾರತದಲ್ಲಿ ಕೊರಚ ಸಮುದಾಯದ ತಲಸ್ಪರ್ಶಿ ಕುಲಶಾಸ್ತ್ರೀಯ ಅಧ್ಯಯನ ನಡೆಸುವ ಮೂಲಕ, ಇವತ್ತಿನ ಹೊಸ ಅಧ್ಯಯನ ಶಾಖೆಯಾದ ‘ಸಬಾಲ್ಟರ್ನ್ ಸ್ಟಡೀಸ್’ಗೆ ಉತ್ತಮ ಆಕರವನ್ನು ಒದಗಿಸಿದ್ದಾರೆ. ನಮ್ಮವರೇ ಆದ ಎಸ್.ಕೆ.ರಂಗಾಚಾರ್ಯ, ಎಲ್.ಕೆ.ಅನಂತಕೃಷ್ಣ ಅಯ್ಯರ್ ಇನ್ನೂ ಮುಂತಾದ ಪೂರ್ವಸೂರಿ ಅಧ್ಯಯನಕಾರರು ಈಗಾಗಲೇ ಕೊರಚ ಸಮುದಾಯವನ್ನು ಅಧ್ಯಯನ ಮಾಡಿದ್ದರೂ ಮತ್ತೊಮ್ಮೆ ಅಧ್ಯಯನಕ್ಕೊಳಪಡಿಸಿ ಅಧ್ಯಯನದ ಹೊಸ ಸಾಧ್ಯತೆಯನ್ನು ತೋರಿಸುವುದು ಸರಳ ಸಾಮಾನ್ಯವಾದ ಸಂಗತಿಯಲ್ಲ. ಸಮುದಾಯವೊಂದು ಮತ್ತೆ ಮತ್ತೆ ಅಧ್ಯಯನಕ್ಕೊಳಪಡುವುದೆಂದರೆ ಅದು ಈ ಕಾಲದ ವಿಕಸಿತ ಅಸ್ಮಿತೆಗಳನ್ನು ರೂಪಿಸಿಕೊಂಡಿರುತ್ತದೆ ಎಂದೇ ಅರ್ಥ.

ಬ್ರಿಟಿಷ್ ವಸಾಹತು ಆಡಳಿತದ ಕಾಲದಲ್ಲಿ 1871 ರಲ್ಲಿ ಜಾರಿಗೆ ತಂದ Criminal Tribes Act (CTA) ನೂರಕ್ಕೂ ಹೆಚ್ಚು ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಹುಟ್ಟಿನಿಂದಲೇ ಅಪರಾಧಿ ಪ್ರವೃತ್ತಿಗಳನ್ನು ಹೊಂದಿರುವವರೆಂದು ಅಪರಾಧೀಕರಿಸುವ ಮೂಲಕ ಕೊರಚ- ಕೊರಮರನ್ನು ಕೂಡಾ ಈ ಪಟ್ಟಿಗೆ ಸೇರಿಸಿ ಅವರ ಚಲನವಲನಗಳ ಮೇಲೆ ನಿರ್ಬಂಧವನ್ನು ವಿಧಿಸಲಾಯಿತು. ಅಂತಹ ಗುಂಪುಗಳ ವಯಸ್ಕ ಪುರುಷ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೋಗಿ ವಾರಕ್ಕೊಮ್ಮೆ ವರದಿ ಮಾಡುವಂತೆ ಒತ್ತಾಯಿಸಲಾಯಿತು. ಈ ಕಾಯಿದೆ ಸರಿಸುಮಾರು 80 ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಬ್ರಿಟಿಷ್ ಭಾರತದ ಅಪರಾಧಿ ಬುಡಕಟ್ಟುಗಳ ಕಾಯಿದೆಯನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈಗಲೂ ಕೆಲವು ಪೊಲೀಸ್ ಅಧಿಕಾರಿಗಳು ಅಘೋಷಿತವಾಗಿ ಜಾರಿಯಲ್ಲಿಟ್ಟಿದ್ದಾರೆಂಬುದನ್ನು ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಯ “ಕರ್ನಾಟಕ ಬುಡಕಟ್ಟು ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಮೀಕ್ಷೆ-2023” ರ ಅಪ್ರಕಟಿತ ಅಧ್ಯಯನ ವರದಿಯು ಬಹಿರಂಗ ಪಡಿಸಿದೆ. “ನಿಲ್ಲದ ಯಾತನೆಯ ಪಯಣ” ಎಂಬ ಶೀರ್ಷಿಕೆಯ ಈ ವರದಿಗೆ ನಾನು ಮುನ್ನುಡಿ ಬರೆದಿದ್ದೇನೆ.

ಕ್ರಿಮಿನಲ್ ಅಪರಾಧಗಳನ್ನು ವ್ಯಕ್ತಿಯ ಹುಟ್ಟಿನಿಂದಲೂ ಎಸಗಿಕೊಂಡೇ ಹಲವು ಅಲೆಮಾರಿ ಬುಡಕಟ್ಟು ಸಮುದಾಯಗಳು ಬದುಕುತ್ತಿವೆ ಎಂದು 1871 ರ ಕಾಯ್ದೆ ಘೋಷಿಸಿತ್ತು.
ಅಪರಾಧಿ ಬುಡಕಟ್ಟುಗಳೆಂದು ಘೋಷಿಸಲಾಗಿದ್ದ ಸಮುದಾಯಗಳ ವ್ಯಕ್ತಿಗಳನ್ನು ಹುಟ್ಟಿನಿಂದಲೇ ಅಪರಾಧಿಗಳೆಂದು ನೋಡುವ stigma ದಿಂದ ಹೊರತರಲು ನಡೆಸಿದ ಪ್ರಯತ್ನಗಳು ತೀರಾ ಅಪರೂಪ. ಅಂತಹ social stigma ವನ್ನು ಹಣೆಪಟ್ಟಿಯನ್ನಾಗಿಯೇ ಅಂಟಿಸಿ ವಸಾಹತು ಆಡಳಿತ 1871 ರಲ್ಲಿ ಜಾರಿಗೆ ತಂದ Criminal Tribes Act (CTA) ಅನ್ನು ಜವಾಹರಲಾಲ್ ನೆಹರೂ 1952 ರಲ್ಲಿ ರದ್ದು ಮಾಡಿದ್ದರು. ಆದರೆ ಭಾರತದ ಊಳಿಗಮಾನ್ಯ ಆಡಳಿತ ವ್ಯವಸ್ಥೆ ಅದೇ ಕಾಯ್ದೆಯನ್ನು Habitual Offenders Act ಹೆಸರಿನ ಮಾರುವೇಷದಲ್ಲಿ ಇನ್ನೂ ಜೀವಂತವಾಗಿಟ್ಟಿರುವ ಕ್ರೂರ ವಾಸ್ತವದ ಕಡೆಗೆ Alternative Law Forum (ALF) ತನ್ನ ಸಮೀಕ್ಷಾ ವರದಿಯಲ್ಲಿ ಬೊಟ್ಟುಮಾಡಿ ತೋರಿಸಿದೆ. ಡಾ.ಎಚ್.ಆರ್.ಸ್ವಾಮಿಯವರ ಪ್ರಸ್ತುತ “ಕರ್ನಾಟಕದ ಕೊರಚರು” ಕೃತಿಯು ಇಂದಿಗೂ ಕೊರಚ ಸಮುದಾಯವನ್ನು ಅಪರಾಧಿ ಪ್ರಜ್ಞೆಯಲ್ಲಿ ನೋಡುತ್ತಿರುವ ಮುಖ್ಯ ವಾಹಿನಿ ಜನರ ರೂಢಿಗತ ನೋಟವನ್ನು ಮನಗಾಣಿಸಿದೆ. ಕರ್ನಾಟಕದ ವಿಮುಕ್ತ ಬುಡಕಟ್ಟುಗಳ ಮೇಲೆ ದಾಖಲಾಗುತ್ತಿರುವ ಪೊಲೀಸ್ ಪ್ರಕರಣಗಳನ್ನು ಅಧ್ಯಯನ ಮಾಡುವ ಪ್ರಯತ್ನದಲ್ಲಿ ಪರ್ಯಾಯ ಕಾನೂನು ವೇದಿಕೆಯು ಆಧುನಿಕ ಸೆಟ್ಲಮೆಂಟುಗಳಲ್ಲಿ ನೆಲೆಸಿರುವ ‘ಹರಿಣ ಶಿಕಾರಿ’ ಮತ್ತು ‘ಕೊರಮ’ ಸಮುದಾಯಗಳನ್ನು ಮಾತ್ರ ಆಯ್ದುಕೊಂಡು ಕ್ಷೇತ್ರಕಾರ್ಯದ ಮೂಲಕ ಪರಿಶೀಲಿಸಿರುತ್ತದೆ. ಇತರೆಲ್ಲಾ ಸಮುದಾಯಗಳಿಗಿಂತಲೂ ಈ ಎರಡು ಸಮುದಾಯಗಳ ಮೇಲೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಕೇಸುಗಳು ದಾಖಲಾಗಿವೆ ಎಂಬುದು ALFನ ಅಧ್ಯಯನದಿಂದ ತಿಳಿದುಬಂದಿದೆ.

ಕೊರಮ, ಕೊರಚ, ಕೊರಚರ್, ಕೇಪ್ಮಾರಿಸ್, ಕುಳುವ, ಕೈಕಾಡಿ, ಕೊರವರ್, ಕುರವರ್, ಕುಂಚಿ ಕೊರಚ, ಕುಂಚಿ ಕೊರವ, ಎರಕುಲ, ಕೊರಮಶೆಟ್ಟಿ, ಭಜಂತ್ರಿ, ವಾಜಂತ್ರಿ ಮುಂತಾದ ಹೆಸರುಗಳಿಂದ ಗುರುತಿಸಲಾಗಿರುವ ಆದಿಮ ದ್ರಾವಿಡ ಬುಡಕಟ್ಟಿ‌ನಲ್ಲಿಯೇ ಇಂದಿಗೂ ಅತ್ಯಂತ ಕಟ್ಟಕಡೆಯವರಾಗಿ ಕುಂಚಿಕೊರವರು ಅಥವಾ ಕುಂಚಿ ಕೊರಚರು ಎಂಬ ಗುಂಪಿನವರು ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಎಟುಕಿಸಿಕೊಳ್ಳಲಾಗದೆ ದಯನೀಯ ಸ್ಥಿತಿಯಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಗ್ರಾಮದಲ್ಲಿ ನಾನು ಕ್ಷೇತ್ರಕಾರ್ಯ ನಡೆಸುತ್ತಿದ್ದ ಹೊತ್ತಿನಲ್ಲಿ ಕಂಡಂತೆ ಕುಂಚಿಕೊರವರ ಗುಂಪಿನಲ್ಲಿ ಇಂದಿಗೂ ಕನಿಷ್ಠ ಒಬ್ಬ ವ್ಯಕ್ತಿಯೂ ಕಾಲೇಜು ಹಂತ ತಲುಪಿಲ್ಲ. ಭೂಮಿ ಮತ್ತು ವಸತಿಹೀನತೆ, ಜಾತಿಪತ್ರ ಸಮಸ್ಯೆ, ಸಾಮಾಜಿಕ ಕೀಳರಿಮೆ, ಅಲೆಮಾರಿತನ ಹಾಗೂ ಆರ್ಥಿಕ ಅಭದ್ರತೆಯ ಕಾರಣಗಳಿಂದ ಈ ಅಲೆಮಾರಿಗಳ ಬದುಕು ಅತ್ಯಂತ ಶೋಚನೀಯವಾಗಿದೆ. ಮೂಲತಃ ಕ್ರಿಮಿನಲ್ ಬುಡಕಟ್ಟು ಹಿನ್ನಲೆಯುಳ್ಳ ಈ ಗುಂಪು ಎಲ್ಲರಂತೆ ಆತ್ಮಗೌರವ ಮತ್ತು ಸ್ವಾಭಿಮಾನದಿಂದ ಬದುಕಲು ಸಂವಿಧಾನ ದತ್ತವಾದ ನಾಗರಿಕ ಸೌಲಭ್ಯಗಳನ್ನು ಹೊಂದಲಾಗಿಲ್ಲ.
ಹೀಗಿರುವಾಗ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕಾಗಿದೆ. ಈ ಸಮುದಾಯದ ಸಬಲೀಕರಣದ ದೃಷ್ಟಿಯಿಂದ ಎಚ್.ಆರ್.ಸ್ವಾಮಿಯವರು ಸಂಶೋಧನೆ ಕೈಗೊಂಡು ರೂಪಿಸಿರುವ “ಕರ್ನಾಟಕದ ಕೊರಚರು” ಕೃತಿ, ಸಮುದಾಯ ಸಬಲೀಕರಣದ ಯೋಜನೆಗಳನ್ನು ರೂಪಿಸುವ ಸರ್ಕಾರಕ್ಕೆ ಬಹುಮುಖ್ಯ ಸಲಹೆಗಳನ್ನೂ ನೀಡಿದೆ.

ಕೊರಚ ಮತ್ತು ಕೊರಮ ಸಮುದಾಯಗಳು ಕುಳುವ ಎಂಬ ಒಂದೇ ಮರುಗು ಭಾಷೆಯಲ್ಲಿ ವ್ಯವಹರಿಸುತ್ತಾ ಹೆಚ್ಚೂಕಮ್ಮಿ ಸಮಾನ ಸಾಂಸ್ಕೃತಿಕ ಅಂಶಗಳನ್ನು ಹಂಚಿಕೊಂಡಿದ್ದಾರೆ. ಬೆಡಗು (ಗೋತ್ರ) ಮತ್ತು ಕೆಲವು ಆಚರಣೆಗಳಿಂದ ಎರಡೂ ಸಮುದಾಯಗಳು ಬೇರೆ ಬೇರೆ ಹೇಗೆಂಬ ತೆಳುವಾದ ಗೆರೆಗಳನ್ನು ಎಚ್.ಆರ್.ಸ್ವಾಮಿಯವರು ಜಾಣ್ಮೆಯಿಂದ ಗುರುತಿಸಿದ್ದಾರೆ. ಇದು ಅವರ ಅಧ್ಯಯನದ ಸೂಕ್ಷತೆಯನ್ನು ಮನಗಾಣಿಸುತ್ತದೆ. ಕೊರಚ ಸಮುದಾಯದ ಸೃಷ್ಟಿ ಕಥನಗಳು ಬಹುತೇಕ ತಳ ಸಮುದಾಯಗಳ ಸೃಷ್ಟಿಯ ಕಥನಗಳಂತೆಯೇ ಮೌಖಿಕರ ಪುರಾಣ ಮತ್ತು ಐತಿಹ್ಯಗಳ ಫ್ಯಾಂಟಸಿ ನಿರೂಪಣೆಗಳೇ ಆಗಿರುತ್ತವೆ.

ಕೊರಚ ಸಮುದಾಯ ಭಾರತದ ಹಿಂದೂ ಧಾರ್ಮಿಕ ಪರಂಪರೆಯ ಯಾವುದೇ ವೈದಿಕ ವಿಧಿ ವಿಧಾನ ಆಚರಣೆಗಳನ್ನು ಅನುಸರಿಸದೆ ತಮ್ಮದೇ ಬುಡಕಟ್ಟು ನಿಷ್ಠ ಸಂಸ್ಕೃತಿಯ ವೈಶಿಷ್ಟ್ಯತೆಗಳನ್ನು ಇಂದಿಗೂ ಉಳಿಸಿಕೊಂಡಿರುತ್ತದೆ. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ಅಲೆಮಾರಿಗಳಾದ ಕೊರಚರು ಹೆಚ್ಚಾಗಿ ಸ್ತ್ರೀದೇವತೆಗಳನ್ನು ಆರಾಧಿಸುತ್ತಾರೆ. ಇವೆಲ್ಲವೂ ಭವ್ಯ ದೇವಸ್ಥಾನಗಳಾಗಿರದೆ ಪ್ರಕೃತಿಯ ನಡುವೆ ಮರ-ಗಿಡ-ಕೆರೆ-ತೊರೆ-ಬೆಟ್ಟ ಅಥವಾ ಮರದ ಬುಡದಲ್ಲಿ ನೆಲೆಸಿರುವ ಸಾಧಾರಣ ಕಲ್ಲಿನ ರೂಪಗಳಲ್ಲಿವೆ. ಕೊರಚರ ಆಚಾರ, ವಿಚಾರ ಸಂಪ್ರದಾಯಗಳು ನಿಸರ್ಗ ಕೇಂದ್ರಿತ ಧಾತುಗಳೊಂದಿಗೆ ಬೆಸೆದುಕೊಂಡಿವೆ. ಕೊರಚ ಎಂಬ ಶಬ್ದವೇ ನಿಸರ್ಗಸೂಚಿ ಕುರುಚ(ಲ) ಕಾಡಿನ ಮೂಲವನ್ನು ಸಂಕೇತಿಸುತ್ತದೆ. ಜನನ, ಮರಣ, ಮದುವೆ, ಸೀಮಂತ, ಶವ ಸಂಸ್ಕಾರ, ತಿಥಿ, ಹಬ್ಬ, ಜಾತ್ರೆ, ಗೃಹಪ್ರವೇಶ ಮುಂತಾದ ಯಾವುದೇ ಆಚರಣೆಗಳಲ್ಲಿ ವೈದಿಕರನ್ನು ಒಳಗೊಳ್ಳದೆ ತಮ್ಮದೇ ಆದ ಆದಿಮ ಮೂಲದ ಸಾಂಸ್ಕೃತಿಕ ತಾಯಿಬೇರುಗಳನ್ನು ಈಗಲೂ ಉಳಿಸಿಕೊಂಡಿರುವುದು ವಿಸ್ಮಯ ಹುಟ್ಟಿಸುವ ಸಂಗತಿ. ಹಾಗೆಂದು ಇವರ ಮೇಲೆ ಅನ್ಯ ಧರ್ಮಗಳ ಪ್ರಭಾವ ಸಂಪೂರ್ಣವಾಗಿ ಇಲ್ಲವೆಂದಲ್ಲ. ಮೊಹರಂ ಹಬ್ಬದ (ಬಾಬಯ್ಯನ ಜಲ್ದಿ, ಪೀರಲ ಪಂಡಗ) ಅಲ್ಲಾವಿ ಆಚರಣೆಗಳಲ್ಲಿ, ಕ್ರಿಶ್ಚಿಯನ್ನರ ಕ್ರಿಸ್ಮಸ್ ಹಬ್ಬದಲ್ಲಿ ಪಾಲ್ಗೊಳ್ಳುವ ಧಾರ್ಮಿಕ ಸೌಹಾರ್ದತೆ ಇವರಲ್ಲಿದೆ.‌ ಮುಸ್ಲಿಂ ಮತ್ತು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಹಿಂದೂ ಧರ್ಮದ ಸಾಮಾಜಿಕ ಶೋಷಣೆಯಿಂದ ಬಿಡುಗಡೆಗೊಳ್ಳಲು ಹಾಗೂ ಆರೋಗ್ಯ ಸೇವೆ ಮತ್ತು ಅನ್ನ – ಅಕ್ಷರ ಪಡೆದುಕೊಳ್ಳಲು ಈ ಧರ್ಮಗಳ ಪ್ರಭಾವಕ್ಕೆ ಸಹಜವಾಗಿ ಒಳಗಾಗಿದ್ದಾರೆ. ಇಂತಹ ಪ್ರಕ್ರಿಯೆಗಳಿಂದ ಭಾರತದ ಯಾವುದೇ ಸಮುದಾಯ ಹೊರತಾಗಿ ಉಳಿದಿಲ್ಲ. ಇಷ್ಟಾಗಿಯೂ ಕೊರಚ ಸಮುದಾಯದ ಮೂಲ ರಚನೆಗಳು ಆಮೂಲಾಗ್ರ ಬದಲಾವಣೆಯನ್ನು ಕಾಣದೆ ಜಿಗುಟಾಗಿರುವುದು ಕೊರಚರ ಸಾಂಸ್ಕೃತಿಕ ಅಸ್ಮಿತೆಯ ಗಟ್ಟಿತನವನ್ನು ತೋರಿಸುತ್ತದೆ.

ಐದು ಅಧ್ಯಾಯಗಳಿರುವ “ಕರ್ನಾಟಕದ ಕೊರಚರು” ಕೃತಿಯು ಮೂಲತಃ ಎಚ್.ಆರ್.ಸ್ವಾಮಿಯವರು ಮೈಸೂರು ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಪಿಎಚ್.ಡಿ‌ ಸಂಶೋಧನಾ ಮಹಾಪ್ರಬಂಧವಾಗಿರುತ್ತದೆ. ಆದುದರಿಂದ ಇದಕ್ಕೊಂದು ಅಧ್ಯಯನದ ಶಿಸ್ತು ಮತ್ತು ಚೌಕಟ್ಟು ಒದಗಿಬಂದಿದೆ. ಅಲೆಮಾರಿಗಳಾದ ಕೊರಚರ ಹಿನ್ನೆಲೆ ಮತ್ತು ಮೂಲ, ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆ, ಆಚರಣೆಗಳು ಮತ್ತು ಸಂಪ್ರದಾಯಗಳು, ಭಾಷೆ ಮತ್ತು ಸಾಹಿತ್ಯ, ಆಧುನಿಕ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಕೊರಚರ ಬದುಕನ್ನು ಕುರಿತು ಸ್ವಾಮಿಯವರು ಸಂಗ್ರಹಿಸಿರುವ ಮಾಹಿತಿಗಳು ಅವರ ಅಗಾಧವಾದ ಓದು ಮತ್ತು ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಅನಾವರಣಗೊಳಿಸಿವೆ. ಚರಿತ್ರೆಕಾರರು ನಿರ್ಲಕ್ಷಿಸಿದ್ದ, ಮುಖ್ಯ ವಾಹಿನಿಯ ಜನರಿಂದ ಅಪಮಾನ ಮತ್ತು ಗುಮಾನಿಗೆ ಗುರಿಯಾದ ಕೊರಚ ಸಮುದಾಯದ ಸಾಂಸ್ಕೃತಿಕ ಅನ್ವೇಷಣೆ ಮತ್ತು ವಿಶ್ಲೇಷಣೆಯನ್ನು ಸ್ವಾಮಿಯವರು ಶ್ರದ್ದೆಯಿಂದ ಮತ್ತು ಅಷ್ಟೇ ಶಕ್ತವಾಗಿ ನಿರ್ವಹಿಸಿದ್ದಾರೆ.

ಮುಂದುವರೆಯುತ್ತದೆ….


  •  ಡಾ.ವಡ್ಡಗೆರೆ ನಾಗರಾಜಯ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW