‘ಚೈತ್ರನಿಗೊಂದು ಪತ್ರ’ ಕವನ

ನಮ್ಮ ಬದುಕುಗಳೂ ಸಹ ಹೈರಾಣಾಗಿವೆ, ನದಿ ಕೆರೆ ಹೊಳ್ಳಗಳು ಬತ್ತಿದಂತೆ ಬತ್ತಿ ಬರಿದಾಗಿವೆ ನಮ್ಮೆದೆಗಳೂ ಸಹ…ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಯ್ಯಾ ಚೈತ್ರ
ಇಗೋ ನಿನಗೊಂದು ಪತ್ರ
ಓದಿಕೋ

ಅಲ್ಲಯ್ಯ ಋತುಗಳ ರಾಜ
ಇನ್ನೆಷ್ಟು ದಿನ ನೀ ಬರದೆ ಹೀಗೆ
ಕಾಡಿಸುವೆ!?

ನಮ್ಮೊಡಲ ದಾಹ ಇಂಗಿಸದೆ
ಸತಾಯಿಸಿ ಜೀವ ಹಿಂಡುವೆ!?
ನಾವಿನ್ನೂ ನಿನ್ನ ಪಾಲಿಗೆ ಸತ್ತಿಲ್ಲ ಕಣಯ್ಯಾ!

ವರುಷದಿಂದ ಬಕ ಪಕ್ಷಿಯಂತೆ
ನಿನ್ನ ನಿರೀಕ್ಷೆಯ ದಾರಿ ಕಾದು ಕುಳಿತ್ತಿದ್ದೇವೆ
ಇಲ್ಲಿ ಗಿಡ ಮರ ಬಳ್ಳಿಗಳೊಣಗಿವೆ

ನಮ್ಮ ಬದುಕುಗಳೂ ಸಹ ಹೈರಾಣಾಗಿವೆ
ನದಿ ಕೆರೆ ಹೊಳ್ಳಗಳು ಬತ್ತಿದಂತೆ ಬತ್ತಿ
ಬರಿದಾಗಿವೆ ನಮ್ಮೆದೆಗಳೂ ಸಹ

ಹಸಿರ ಉಸಿರಿಲ್ಲದೆ ಹಸು ಕರು ಕಂದಗಳು
ಕಂಗೆಟ್ಟು ನಿನ್ನ ಕನವರಿಕೆಯಲಿ ನರಳಿವೆ
ಬೋಳಾದ ಬಯಲು, ಬೆಟ್ಟ ಗುಡ್ಡಗಳು

ಶೋಕ ರಾಗ ಪಠಿಸಿದೆ
ದೂರದಲಿ ಒಣಗಿ ಬೆಂಡಾದ ಒಂಟಿ ಮರ
ನೀರಸ ದನಿಯಲಿ ಕೂಗಿದೆ ಮರ ಕುಟುಕ….

ದುಃಖ ಉಕ್ಕಿ ದಿಕ್ಕೆಟ್ಟು ಹಾರಿದೆ ಕಾಡುಹಕ್ಕಿ…..
ನೀ ಬರದೆ ಇಲ್ಲಿ ಆವರಿಸಿದೆ
ಸಂಪೂರ್ಣ ಕ್ಷಾಮ

ಇನ್ನೆಷ್ಟು ದುಃಖ ತೋಡಿಕೊಳ್ಳಬೇಕು ನಿನಗೆ
ಹೇಳು ನೀನು?
ಕರುಣೆ ಹೊತ್ತು ಹೊರೆಟು ಬಾ ಈ ಕೂಡಲೆ

ನಿನ್ನ ನಂಬಿಕೊಂಡವರ ಹೆಣ
ನೆಲ ಕಾಣುವ ಮೊದಲೆ!


  • ಹೆಚ್. ಪಿ. ಕೃಷ್ಣಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading