ಮನಸ್ಸಿನ ಪಿಸುಮಾತು – (ಭಾಗ-೯)

ನಾವು ಕಾಣುವ ಕನಸೇ ಒಂದಾದರೆ, ವಾಸ್ತವದಲ್ಲಿ ನಮಗೆ ನನಸಾಗಿ ಎದುರಾಗುವ ಸತ್ಯವೇ ಒಂದು. ನಮ್ಮ ಪ್ರಯತ್ನವೇ ಒಂದಾದರೆ ಸಿಗುವ ಪ್ರತಿಫಲವೇ ಒಂದು. ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…

ಎಲ್ಲರ ಹಾಗೆ ಸುಖ – ಸಂತೋಷದಿಂದ ಜೀವನ ಸಾಗಿಸಬೇಕು ಅಂತ ಎಲ್ಲರೂ ಬಯಸುವಂತೆ ಎಲ್ಲರ ಹಾಗೆ ಪ್ರತಿದಿನವೂ ಸಂತೋಷವಾಗಿ, ಜೀವನದಲ್ಲಿ ಯಾವುದೇ ಕೊರತೆಯೇ ಇಲ್ಲದ ಹಾಗೆ ಎಲ್ಲರೊಂದಿಗೆ ಕಾಲ ಕಳೆಯುತ್ತಾ ದಿನಗಳನ್ನು ಕಳೆಯಬೇಕೆಂಬ ಆಸೆ, ಕನಸು ಹೊತ್ತು ಸಾಗುವುದು ಕೆಲವರ ಜೀವನದಲ್ಲಿ ಬರೀ ಕನಸಾಗಿಯೇ ಉಳಿಯುವಂತದ್ದು.

ಹೇಳಿಕೊಳ್ಳಲಾರದ ಅನೇಕ ಆಸೆ – ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೂ ಅದನ್ನು ಪ್ರತಿದಿನದ ಕನಸಿನಲ್ಲಿ ಕಾಣುತ್ತಲಿದ್ದರೂ ವಿಧಿಯಾಟದ ಬಲೆಗೆ ಸಿಲುಕಿ, ಕಂಡ ಕನಸುಗಳು, ನನಸಾಗದ ಆಸೆ – ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿ ಪ್ರತಿದಿನ ಸಾಯುತ್ತಾ ಬದುಕುವ ಬದುಕು ಯಾರಿಗೂ ಅರ್ಥವಾಗದ್ದು.

ನಮ್ಮ ದುಡಿಮೆ ಹಾಗು ಸಿರಿತನದ ಲೆಕ್ಕಾಚಾರ ಹಾಗು ನಾವು ಬದುಕುವ ವಿಧಾನವನ್ನು ನೋಡಿ ನಮ್ಮನ್ನು ಲೆಕ್ಕಾಚಾರ ಮಾಡಿ ಸಾಗುವ ಪ್ರತಿಯೊಂದು ಸಂಬಂಧಗಳ ಮಧ್ಯೆ ಮನಸ್ಸು ಸದಾ ಗೊಂದಲದಲ್ಲಿಯೇ ಇದ್ದು, ಪ್ರತಿಯೊಂದರಲ್ಲೂ ಗೊಂದಲಕ್ಕೀಡಾಗಿ, ನಮ್ಮ ಜೀವನದಲ್ಲಿ ಏನಾಗುತ್ತಿದೆ, ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನುವುದೇ ಅರ್ಥವಾಗದ ಪರಿಸ್ಥಿತಿಯಲ್ಲಿ ಹೇಗೆ ನಮ್ಮನ್ನು ನಾವು ನಿಭಾಯಿಸಿಕೊಂಡು ಬದುಕಬೇಕೋ? ನಮ್ಮನ್ನು ನಾವು ಹೇಗೆ ಸಮಾಧಾನ ಪಡಿಸಿಕೊಂಡು ಬದುಕಬೇಕೋ ತಿಳಿಯುವುದಿಲ್ಲ.

ಎಲ್ಲವೂ ಒಂದಲ್ಲಾ ಒಂದು ದಿನ ಅಂತ್ಯವಾಗುತ್ತೆ ಅಂತ ಗೊತ್ತಿದ್ದರೂ ಆಸೆ ಪಡುವ, ಯಾವುದೂ ಶಾಶ್ವತವಲ್ಲ ಅಂತ ಗೊತ್ತಿದ್ದರೂ ಹಂಬಲಿಸುವ ಮನಸ್ಸನ್ನು ಹೇಗೆ ನಿಯಂತ್ರಿಸಿಕೊಂಡು ಬದುಕಬೇಕೋ ತಿಳಿಯದೆ ಗೊಂದಲದಲ್ಲಿ ಸುರಿಸುವ ಕಣ್ಣೀರಿನ ಕಣ್ಣುಗಳು ಯಾರಿಗೂ ಕಾಣಿಸದು. ಸ್ಪಷ್ಟತೆ ಸಿಗದ ಬದುಕಿನ ಪ್ರಶ್ನೆಗಳಿಗೆ ಉತ್ತರ ಹೇಗೆ ಕಂಡುಕೊಳ್ಳಬೇಕೋ? ಉತ್ತರವನ್ನು ಹೇಗೆ? ಎಲ್ಲಿ ಹುಡುಕಬೇಕೋ ತಿಳಿಯದೆ ನಿದ್ರಿಸದ ರಾತ್ರಿಗಳಿಗೆ ಪ್ರಶಾಂತಂತೆಯ ಅಂತ್ಯ ಎಲ್ಲಿರುವುದೋ ತಿಳಿಯದು.

ಫೋಟೋ ಕೃಪೆ : google

ನಾವು ಕಾಣುವ ಕನಸೇ ಒಂದಾದರೆ, ವಾಸ್ತವದಲ್ಲಿ ನಮಗೆ ನನಸಾಗಿ ಎದುರಾಗುವ ಸತ್ಯವೇ ಒಂದು. ನಮ್ಮ ಪ್ರಯತ್ನವೇ ಒಂದಾದರೆ ಸಿಗುವ ಪ್ರತಿಫಲವೇ ಒಂದು. ನಮ್ಮ ಮನಸಿನ ಭಾವನೆ ಒಂದಾದರೆ ಅದನ್ನು ಅರ್ಥ ಮಾಡಿಕೊಳ್ಳುವವರ ಮನಸ್ಸಿನ ಭಾವನೆಯೇ ಬೇರೊಂದು. ಕಣ್ಣಿಗೆ ಕಾಣಿಸುವುದು ಒಂದಾದರೆ ವಾಸ್ತವದಲ್ಲಿ ಇರುವುದೇ ಬೇರೊಂದು. ಯಾವುದು ಸತ್ಯ ಯಾವುದು ಮಿತ್ಯ!

ತಿಳಿಯಬೇಕಾದುದನ್ನು ತಿಳಿಯಲಾರದೆ, ತಿಳಿದುಕೊಳ್ಳುವ ಪ್ರಯತ್ನದಲ್ಲಿ ಸದಾ ಗೊಂದಲಕೀಡಾಗುವ ಮನಸ್ಸಿನ ಗೊಂದಲಕ್ಕೆ ಅಂತ್ಯ ಎಲ್ಲಿದೆ. ಕಷ್ಟವನ್ನು ನೋಡುವ ಕಣ್ಣುಗಳು, ಅರಿಯುವ ಮನಸ್ಸು ಇದ್ದರೆ ಅರ್ಥವಾಗದು. ಅದನ್ನು ಅನುಭವಿಸುವವರ ಸ್ಥಾನದಲ್ಲಿದ್ದು ಆಲೋಚಿಸಿ ನೋಡುವ ಮನಸ್ಸು ಇರಬೇಕು. ಅಂತಹ ತಾಳ್ಮೆಯುತ ಮನಸ್ಸು ಯಾರಲ್ಲಿ ಇರುತ್ತೆ. ತಮ್ಮ ಜೀವನದಲ್ಲಿನ ಜಂಜಾಟದ ಮಧ್ಯೆ ಅಷ್ಟೊಂದು ತಾಳ್ಮೆ ಯಾರಿಗಿರುತ್ತೆ? ಖಂಡಿತ ಯಾರಲ್ಲಿಯೂ ಇರಲ್ಲ. ಆದ್ದರಿಂದಲೇ ನೊಂದ ಮನಸ್ಸುಗಳು, ಗೊಂದಲಯುಕ್ತ ಮನಸ್ಸುಗಳು ತಮ್ಮ ಮನಸ್ಸಿನ ಗೊಂದಲಯುಕ್ತ ಭಾವನೆಗಳನ್ನು ಹಂಚಿಕೊಳ್ಳಲಾರದೆ, ಗೊಂದಲಗಳನ್ನು ಪರಿಹಾರಿಸಿಕೊಳ್ಳಲಾರದೆ ಸದಾ ಮೌನವಾಗಿ, ಏಕಾಂತವಾಗಿ ಬದುಕುವಂತಾಗಿದೆ.

ನನಸಾಗದ ಕನಸುಗಳ ಮಧ್ಯೆ ಕಣ್ಣೀರ ಧಾರೆ ಸದಾ ಹರಿಯುವ ನದಿಯಂತೆ ತುಂಬಿರುವ ಕಣ್ಣುಗಳ ನೀರಿಗೆ ಆಣೆಕಟ್ಟು ನಿರ್ಮಿಸಿ, ಸಂತೋಷದ ಕಾರಂಜಿಯನ್ನು ಸೃಷ್ಟಿಸುವ ಅವಕಾಶ, ಸಂಧರ್ಭ ಯಾರ ಜೀವನದಲ್ಲಿಯೂ ಸಿಗಲ್ಲ. ಕಣ್ಣೀರು ಕಣ್ಣೀರಾಗಿಯೇ ಉಳಿಯುತ್ತೆ ಕೆಲವರ ಜೀವನದಲ್ಲಿ ಅಂತ್ಯವಾಗುವವರೆಗೂ.

ಹಿಂದಿನ ಸಂಚಿಕೆಗಳು :


  • ಚಂದನ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading