ಚಂದ್ರಾವಳಿ ವಿಲಾಸ – ಒಂದು ಇಣುಕು ನೋಟ

ಚಂದ್ರಾವಳಿ ತವರು ಮನೆ ಗೋಕುಲೆಗೆ ಬರುತ್ತಾಳೆ.ಮನದ ಬೇಸರವನ್ನು ಕಳೆಯಲು ಸಖಿಯರೊಡಗೂಡಿ ವನವಿಹಾರಕ್ಕೆ ಬಂದ ಚಂದ್ರಾವಳಿಯನ್ನು ಕೃಷ್ಣ ಕಾಣುತ್ತಾನೆ. ಮುಂದೆ ಏನಾಯಿತು ತಪ್ಪದೆ ಓದಿ….

ಕ್ರಿಸ್ತ ಶಕ 17ನೇ ಶತಮಾನದಲ್ಲಿ ಬಾಳಿ ಬದುಕಿದ ಧ್ವಜಪುರದ ನಾಗಪ್ಪಯ್ಯ ಎಂಬ ಕವಿ ರಚಿಸಿದ ಚಂದ್ರಾವಳಿ ವಿಲಾಸ ಎಂಬ ಯಕ್ಷಗಾನ ಪ್ರಸಂಗವನ್ನು ಓದಿ ಮುಗಿಸಿದೆ.

ಈ ಲೇಖನ ಓದಬಹುದಾದ ಯಕ್ಷಗಾನೇತರ ಓದುಗರಿಗಾಗಿ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಗೋಕುಲದಲ್ಲಿ ಕುಲವತಿ ಎಂಬ ಮಹಿಳೆಯ ಹಿರಿಯ ಮಗಳಾದ ರಾಧೆಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಕಿರಿಯವಳಾದ ಚಂದ್ರಾವಳಿಯನ್ನು ಸಿಂಧು ಗ್ರಾಮದ ಚಂದಗೋಪನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಒಂದು ದಿನ ಕೃಷ್ಣನಿಗೆ ಆತನ ಮಿತ್ರರು, ಸುಂದರಳಾದ ರಾಧೆ ತನ್ನ ಹೆಂಡತಿ ಎಂಬ ಸೊಕ್ಕು ನಿನಗೆ, ಆದರೆ ಆಕೆಗಿಂತ ಆಕೆಯ ತಂಗಿ ಚಂದ್ರಾವಳಿ ಮತ್ತಷ್ಟು ಚೆಲುವೆ. ನೀನು ಜಾರ, ಚೋರನೆಂದು ಹೆದರಿ ನಿನಗಿನ್ನೂ ಅವಳು ಕಾಣದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳುತ್ತಾರೆ.


ಫೋಟೋ ಕೃಪೆ :omkar

ಇದೇ ಸಮಯದಲ್ಲಿ ಚಂದ್ರಾವಳಿ ತವರು ಮನೆ ಗೋಕುಲೆಗೆ ಬರುತ್ತಾಳೆ. ಮನದ ಬೇಸರವನ್ನು ಕಳೆಯಲು ಸಖಿಯರೊಡಗೂಡಿ ವನವಿಹಾರಕ್ಕೆ ಬಂದ ಚಂದ್ರಾವಳಿಯನ್ನು ಕೃಷ್ಣ ಕಾಣುತ್ತಾನೆ. ಈಕೆಯೇ ಚಂದ್ರಾವಳಿ ಎಂಬುದನ್ನರಿತ ಕೃಷ್ಣ, ಚಂದ್ರಾವಳಿಯನ್ನು ವಶಪಡಿಸಿಕೊಳ್ಳದಿದ್ದರೆ ನಿಮ್ಮ ಸಖ ನಾನಲ್ಲ ಎಂದು ಗೆಳೆಯರಲ್ಲಿ ಕೃಷ್ಣ, ಪಂಥ ಕಟ್ಟುತ್ತಾನೆ. ನೇರವಾಗಿ ಚಂದ್ರಾವಳಿಯನ್ನು ಮಾತಾಡಿಸಿ ದಾರಿಗಡ್ಡ ಕಟ್ಟುತ್ತಾನೆ. ಚಂದ್ರಾವಳಿ ಹಾಗೂ ಆಕೆಯ ಸಖಿಯರು ಕೃಷ್ಣನಿಗೆ ಅವಮಾನ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ಇವರಿಗೆ ಬುದ್ಧಿ ಕಲಿಸುತ್ತೇನೆಂದು ನಿರ್ಧರಿಸಿ ಮನೆಗೆ ಹಿಂದಿರುಗುತ್ತಾನೆ. ಊರಿಗೆ ಮರಳಿದ ಚಂದ್ರಾವಳಿ, ತನ್ನಕ್ಕ ರಾಧೆಯನ್ನು ಕಾಣುವ ಹಂಬಲವನ್ನು ಹೊಂದಿರುತ್ತಾಳೆ. ಮನೆಗೆ ಬಂದ ವಿಪ್ರರ ಮೂಲಕ ರಾಧೆಗೆ ತನ್ನ ಮನೆಗೆ ಬರಲು ಆಹ್ವಾನ ಕಳುಹಿಸುತ್ತಾಳೆ. ವಿಪ್ರರನ್ನು ಕೃಷ್ಣ ಮಾತಾಡಿಸಿ, ವಿಷಯ ತಿಳಿದು, ರಾಧೆಗೆ ವಿಷಯ ಮುಟ್ಟಿಸುತ್ತೇನೆಂದು ಹೇಳಿ, ವಿಪ್ರರನ್ನು ಸಾಗಹಾಕುತ್ತಾನೆ. ಆಮೇಲೆ ರಾಧೆಯಂತೆ ವೇಷವ ಧರಿಸಿ, ಸಿಂಧುಗ್ರಾಮಕ್ಕೆ ಬರುತ್ತಾನೆ. ಚಂದಗೋಪ ಮತ್ತು ಆತನ ತಾಯಿ, ರಾಧೆಯನ್ನು(ಕೃಷ್ಣ) ಎದುರ್ಗೊಳ್ಳುತ್ತಾರೆ. ತಂಗಿಯನ್ನು ಕಂಡ ಬಳಿಕ, ಮನೆಗೆ ಹಿಂದಿರುಗುವ ಧಾವಂತವನ್ನು ರಾಧೆ ವ್ಯಕ್ತಪಡಿಸುತ್ತಾಳೆ. ಆಗ ಚಂದಗೋಪ, ಕೃಷ್ಣನನ್ನು ಬಿಟ್ಟಿರಲಾರೆ ಎಂದ ರಾಧೆಗೆ, ನಾನೇ ಒಂದು ದಿನದ ಮಟ್ಟಿಗೆ ನಿನ್ನ ಪ್ರಿಯಕರನಾಗಿರುತ್ತೇನೆ ಎನ್ನುತ್ತಾನೆ. ಕುಪಿತಳಾದ ರಾಧೆಯನ್ನು, ಚಂದ್ರಾವಳಿ ಮತ್ತು ಆಕೆಯ ಅತ್ತೆ ಸಂಭಾಳಿಸುತ್ತಾರೆ. ರಾತ್ರಿ ಹೊತ್ತು ರಾಧೆ ಮತ್ತು ಚಂದ್ರಾವಳಿ ಇಬ್ಬರು ಮಾತ್ರ ಮನೆಯ ಒಳಗಡೆ ಮಲುಗುವುದೆಂದು, ಚಂದಗೋಪ ಮತ್ತು ಆತನ ತಾಯಿ ಹೊರಗಡೆ ಮಲುಗುವುದೆಂದು ನಿರ್ಧರಿತವಾಗುತ್ತದೆ. ಕೋಣೆಯೊಳಗೆ ಮಲಗಿದ ರಾಧಾ ರೂಪಿ ಕೃಷ್ಣ, ಕೃಷ್ಣನ ದೈವೀಕತೆಯ ವರ್ಣನೆ ಮಾಡಿ, ಚಂದ್ರಾವಳಿಯನ್ನು ವಶಪಡಿಸಿಕೊಂಡು, ಆಕೆಯ ಕೋರಿಕೆಯ ಮೇರೆಗೆ, ತನ್ನ ಸುದರ್ಶನ ಚಕ್ರದಿಂದ ಐದು ದಿನಗಳವರೆಗೆ ಆ ರಾತ್ರಿಯನ್ನು ಮುಂದುವರಿಯುವಂತೆ ಮಾಡಿ, ಅವಳೊಂದಿಗೆ ಸಂತೋಷದಿಂದ ಇರುತ್ತಾನೆ.

ನಾರದರ ಮುಖಾಂತರ ಕೃಷ್ಣನ ಈ ರಾಸಲೀಲೆಯನ್ನು ತಿಳಿದ ನಂದಗೋಪ, ಕ್ರುದ್ಧನಾಗಿ, ದೂತರೊಂದಿಗೆ ನಿಜ ರಾಧೆಯನ್ನು ಸಿಂಧುಗ್ರಾಮಕ್ಕೆ ಕಳುಹಿಸುತ್ತಾನೆ. ಕೋಣೆಯಲ್ಲಿ ಚಂದ್ರಾವಳಿಯೊಟ್ಟಿಗೆ ಇರುವುದು ರಾಧೆಯಲ್ಲ ಎಂದು ತಿಳಿದ ಚಂದಗೋಪ, ಚಂದ್ರಾವಳಿಯನ್ನು ಹೊಡೆಯುತ್ತಾ, ಬೈಯ್ಯುತ್ತಾ, ಆಕೆಯನ್ನು ಕೊಲ್ಲಲು, ಖಡ್ಗವನ್ನೆತ್ತುತ್ತಾನೆ. ನಿಜ ರಾಧೆ ಇದನ್ನು ತಡೆದಾಗ, ಸಿಟ್ಟುಗೊಂಡ ಚಂದಗೋಪ, ಕಟ್ಟಿಗೆಗಳನ್ನು ಒಂದುಗೂಡಿಸಿ, ಅದಕ್ಕೆ ಬೆಂಕಿಹಚ್ಚಿ, ಚಂದ್ರಾವಳಿಯನ್ನು ಬೆಂಕಿಗೆ ಎಸೆಯುತ್ತಾನೆ. ದುಃಖತಪ್ತಳಾದ ರಾಧೆಯೂ ಸಹ ಬೆಂಕಿಗೆ ಹಾರುತ್ತಾಳೆ. ಆಗ ಶಂಖಚಕ್ರಧಾರಿಯಾದ ಕೃಷ್ಣನು ಎಡಬಲಗಳಲ್ಲಿ ರಾಧೆ ಮತ್ತು ಚಂದ್ರಾವಳಿಯರೊಟ್ಟಿಗೆ ಪ್ರತ್ಯಕ್ಷನಾಗುವನು. ಚಂದಗೋಪನಿಗೆ ಪರಮಾತ್ಮನ ದರ್ಶನವಾಗಿ ಪ್ರಕರಣ ಸುಖಾಂತ್ಯಗೊಳ್ಳುತ್ತದೆ. ಇದಿಷ್ಟು ರಂಗಸ್ಥಳದಲ್ಲಿ ಅಭಿವ್ಯಕ್ತಿಗೊಳ್ಳುವ ಕಥೆ.

ಆದರೆ ಪ್ರಸಂಗ ಸಾಹಿತ್ಯದಲ್ಲಿ, ಕೃಷ್ಣನನ್ನು ಸಿಂಧುಗ್ರಾಮದಲ್ಲಿ ನೋಡಿಲ್ಲವೆಂದ ದೂತರ ಮಾತುಕೇಳಿ ಸಿಟ್ಟುಗೊಂಡ ನಂದಗೋಪನಿಗೆ ಕೃಷ್ಣ ತನ್ನ ವಿರಾಟ್ ವಿಶ್ವರೂಪವನ್ನು ತೋರುವುದರೊಂದಿಗೆ ಕಥೆ ಸುಖಾಂತ್ಯಗೊಳ್ಳುತ್ತದೆ.

ಈ ಕಥೆ ಭಕ್ತಿ ಪಂಥ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಬರೆಯಲ್ಪಟ್ಟ ಕಥೆ. ಭಕ್ತಿ ಪ್ರಧಾನ ಕಥೆಗಳು, ವೀರರಸದ ಮೂಲಕ ಆತ್ಮ ಸಮರ್ಪಣ ಭಾವದಿಂದಲೋ (ಸುಧನ್ವ ಕಾಳಗದ ಹಾಗೆ), ಅಥವಾ, ಅಕ್ರೂರ, ವಿದುರರಂಥ ಪಾತ್ರಗಳು ಕೃಷ್ಣ ದರ್ಶನದಿಂದ ಆನಂದಭಾಷ್ಪ ಸುರಿಸುವ ಭಕ್ತಿ ಭಾವದಿಂದಲೋ ವ್ಯಕ್ತಗೊಳ್ಳುವುದು ಸಹಜ. ಚಂದ್ರಾವಳಿ ವಿಲಾಸದಲ್ಲಿ ಶೃಂಗಾರವೇ ಪ್ರಧಾನವಾಗಿ ಹೇಳಲ್ಪಟ್ಟಿದೆ.

ಇಂದು ರಂಗಸ್ಥಳದಲ್ಲಿ ಹಾಸ್ಯವೇ ಪ್ರಧಾನವಾದ ಚಂದ್ರಾವಳಿ ವಿಲಾಸ ಪ್ರಸ್ತುತಗೊಳ್ಳುತ್ತಿದೆ. ರಂಗಸ್ಥಳದಲ್ಲಿ ಬಳಸದ ಸನ್ನಿವೇಶವಿದೆ. ಅಲ್ಲಿ, ಕೋಣೆ ಸೇರಿದ ರಾಧೆಯ ರೂಪಿನ ಕೃಷ್ಣ ಮತ್ತು ಚಂದ್ರಾವಳಿಯರ ಸಂಭಾಷಣೆ ಇದೆ. ಇಲ್ಲಿ ಭಕ್ತಿ ಪ್ರಧಾನವಾದ ವರ್ಣನೆಯಿದೆ. ತನ್ನ ಹೆಂಡತಿಯ ತಂಗಿಯೊಡನೆ ಐದು ರಾತ್ರಿ ಸುಖವಾಗಿ ಕಳೆಯುವ ಕೃಷ್ಣ ಕಥೆ, ಹಾಸ್ಯ ಪ್ರಧಾನವಾಗುವುದರಲ್ಲಿ ನನಗೇನೂ ಬೇಸರವಿಲ್ಲ.


ಫೋಟೋ ಕೃಪೆ : google

ಆದರೆ ನಾವು ದೇವರೆಂದು ಪೂಜಿಸುವ ಕಾವ್ಯಪುರುಷನ ಕಥೆಯಲ್ಲಿ, ಆತನನ್ನು ಮಡಿವಂತ ಸಮಾಜದ ಚೌಕಟ್ಟನ್ನು ಸಡಿಲಿಸಿ ಹೇಳಲ್ಪಟ್ಟಾಗ, ಒಂದು ಎಚ್ಚರದಲ್ಲಿಯೇ ಹೇಳಬೇಕಾದ ಅವಶ್ಯಕತೆ ಇದೆ. ಉದಾಹರಣೆಗೆ, ಕೃಷ್ಣ, ಚಂದ್ರಾವಳಿಯಿಂದ ಅಪಮಾನಿತನಾದಾಗ, ಭಾಮಿನಿ ಇದೆ. ‘ಮೀರಿದರೆ ಅಪಕೀರ್ತಿ ಬರುವುದು’. ಅಂದರೆ ಕೃಷ್ಣ ಸಜ್ಜನಿಕೆಯ ಗೆರೆಯನ್ನು ಮೀರಲಿಲ್ಲ ಎಂದೇ ಅರ್ಥ. ಹಾಗೆಯೇ ಕೃಷ್ಣ, ಚಂದ್ರಾವಳಿಯ ಜೊತೆ ಮಾತಾಡುವಾಗಲೇ ದೈವಿಕ ಲೀಲೆ ಆಡುವ ಮನಸ್ಸಿನಲ್ಲಿ ವ್ಯವಹರಿಸಿದ ಎನ್ನುವುದು ಸಹ ಸರಿಯಲ್ಲ. ಯಾಕೆಂದರೆ ಚಂದ್ರಾವಳಿಯಿಂದ ಅವಮಾನಿತನಾದ ಮೇಲೆಯೇ ಕೃಷ್ಣ ಸಮಗ್ರವಾಗಿ ಘಟನೆಗಳನ್ನು ಮತ್ತು ವ್ಯಕ್ತಿಗಳನ್ನು ಅವಲೋಕಿಸಿ ಸಜ್ಜನಿಕೆಯನ್ನು ಮೀರಬಾರದೆಂದು ಗ್ರಹಿಸುವುದು.

ಇಂದು ಪ್ರಚಲಿತದಲ್ಲಿರುವ ಚಂದ್ರಾವಳಿ ವಿಲಾಸದ ರಂಗನಡೆ ಹಲವು ಸಂಭಾಷಣೆಗಳಿಂದ ಜನರನ್ನು ರಂಜಿಸುತ್ತಾ ಬಂದಿದೆ. ಚಂದಗೋಪ ಮತ್ತು ಆತನ ತಾಯಿಯ ಒಂದು ಜನಪ್ರಿಯ ಸಂಭಾಷಣೆಯನ್ನು ಗಮನಿಸಿ. ಚಂದಗೋಪ – ಮನೆಯ ಯಜಮಾನ ನಾನು. ಅತ್ತೆ – ಬೀಗದಕೈ ನನ್ನ ಹತ್ತಿರ ಉಂಟು.
ಕೊನೆಯಲ್ಲಿ ಪ್ರಕರಣದ ಸುಖಾಂತ್ಯಕ್ಕೆ ಚಂದಗೋಪ ತನ್ನ ಹೆಂಡತಿಯನ್ನು ಪುನಃ ಸ್ವೀಕರಿಸುತ್ತೇನೆಂದು ಹೇಳಲು ‘ದೇವರ ಮುಡಿಗೇರಿದ ಹೂವು’ ಎನ್ನುವ ಮಾತು ಮನೋಜ್ಞವಾಗಿದೆ.

ಆದರೆ ಇಂದು ಹಾಸ್ಯದ ಹೆಸರಿನಲ್ಲಿ ಅಪಸವ್ಯಗಳೂ ಇದೆ. ರಾಧೆ ಮತ್ತು ಚಂದ್ರಾವಳಿಯರು ಆತ್ಮೀಯ ಭಾವ ಪ್ರದರ್ಶಿಸುವಾಗ, ಚಂದಗೋಪ ಮತ್ತು ಆತನ ತಾಯಿಯನ್ನು(ಅತ್ತೆ ಅಥವಾ ಅಜ್ಜಿ ಎಂದು ಈ ಪಾತ್ರವನ್ನು ಕರೆಯುವ ವಾಡಿಕೆ ಇದೆ) ತೋರಿಸುವ ರೀತಿ, ಲಕ್ಷ್ಮಣ ರೇಖೆ ಹೇಗೆ ಉಸ್ಮಾನ್ ರೇಖೆ ಆಗುತ್ತದೋ ಆ ದೇವರೇ ಬಲ್ಲ. ಚಂದಗೋಪನ ಅತಿಯಾದ ಕಪಿಚೇಷ್ಟೆಗಳು. ಕೃಷ್ಣನನ್ನು ತೆಗೆಳುವ ಅದೇ ಹಳಸಲು ಪೀಠಿಕೆ. ತಾಯಿಗೆ ರಾಧೆಯನ್ನು ತೋರಿಸುವಾಗ ಉಗುರು ನೋಡು, ಉಗುರಿನ ತುದಿ ನೋಡು ಎನ್ನುವ ಕ್ರಮ, ಕನಿಷ್ಠ ಒಮ್ಮೆಯೂ ಸಹ ಕೃಷ್ಣ ಮತ್ತು ಚಂದ್ರಾವಳಿ ಹಾಗೂ ಕೃಷ್ಣ ಮತ್ತು ಚಂದಗೋಪ ತಮ್ಮೊಳಗಿನ ಸಂಬಂಧವೇನೆಂದೇ ಹೇಳದಿರುವುದು, ಇವೆಲ್ಲಾ ಬದಲಿಸಬೇಕಾದ ಸಂಗತಿಗಳು.

ಈ ಪ್ರಸಂಗವನ್ನು ಹಲವು ಹಿರಿಯ ಕಲಾವಿದರು ನಿರ್ವಹಿಸಿ ಗೆದ್ದಿದ್ದಾರೆ. ವೀರರಸದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಕೆರೆಮನೆ ಮಹಾಬಲ ಹೆಗಡೆಯವರ ಶೃಂಗಾರ ಪಾತ್ರಗಳು ಗೆದ್ದಿದ್ದಿಲ್ಲ. ಈ ಮಾತಿಗೆ ಅಪವಾದವಾಗಿ ಅವರ ಚಂದ್ರಾವಳಿ ವಿಲಾಸದ ಕೃಷ್ಣ ಅತ್ಯಂತ ಪ್ರಸಿದ್ಧಿ ಪಡೆದಿತ್ತು. ಚಿಟ್ಟಾಣಿಯವರು, ಬಳ್ಕೂರು ಕೃಷ್ಣ ಯಾಜಿಯವರು, ಕಣ್ಣಿಮನೆ, ತೋಟಿಮನೆಯವರೂ ಸಹ ಈ ಪಾತ್ರ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಹೀಗೆ ಪುಂಡು ವೇಷಧಾರಿಗಳ ಕನಸಿನ ಪಾತ್ರಗಳಲ್ಲಿ ಚಂದ್ರಾವಳಿ ವಿಲಾಸದ ಕೃಷ್ಣನೂ ಒಂದು. ಮರವಂತೆ ದಾಸ ಭಾಗವತರ ಈ ಪ್ರಸಂಗದ ಪದ್ಯ ಕೇಳಿಯೇ ನನ್ನ ದೊಡ್ಡಪ್ಪ ಕಪ್ಪೆಕೆರೆ ಸುಬ್ರಾಯ ಭಾಗವತರು ಭಾಗವತಿಕೆ ಕಲಿಯಲು ಪ್ರೇರಣೆ ಪಡೆದದ್ದು. ಕೆರಮನೆ ಮಹಾಬಲರ ಕೃಷ್ಣನಿಂದ ಪ್ರಾರಂಭಿಸಿ, ಇಂದಿನ ಪುಂಡುವೇಷಧಾರಿಗಳವರೆಗೆ ಕುಣಿಸಿದ ಹೆಗ್ಗಳಿಕೆ ಕಪ್ಪೆಕೆರೆ ಭಾಗವತರದ್ದು.

ತೆಂಕುತಿಟ್ಟಿನ ಶೇಣಿ ಗೋಪಾಲಕೃಷ್ಣರ ಚಂದಗೋಪ ಇಂದಿಗೂ ಮಾಸ್ಟರ್ ಪೀಸ್ ಆಗಿ ಉಳಿದಿದೆ. ತೆಕ್ಕಟ್ಟೆ ಆನಂದ ಮಾಸ್ಟರ್ ಮತ್ತು ಕುಂಜಾಲ ರಾಮಕೃಷ್ಣ ನಾಯಕರ ಚಂದಗೋಪ ಮತ್ತು ಅತ್ತೆಯ ಬಹು ಪ್ರಸಿದ್ಧ ಜೋಡಿ ವೇಷವನ್ನು ನೋಡಿದ ನೆನಪು ನನಗೆ ಈಗಲೂ ಇದೆ.

ಕಾಮ ತನ್ನ ಚೌಕಟ್ಟನ್ನು ಸಡಿಲಿಸುವ ಈ ಕಥೆ, ನಮ್ಮ ಸಂಸ್ಕೃತಿಯ ಬೇರುಗಳನ್ನು ಹುಡುಕುತ್ತಾ, ಆ ಕುರಿತಾಗಿ ಗಂಭೀರವಾಗಿ ಯೋಚಿಸುತ್ತಾ, ಮಾತನಾಡಬಹುದಾದ ಕಥೆ. ನಮ್ಮ ಸಮಾಜದ ಓರೆಕೋರೆಗಳನ್ನು ವಿಡಂಬಿಸಲು ಬಳಸಬಹುದಾದ ಕಥೆ. ಪೂರ್ವಸೂರಿಗಳು ಹಾಕಿಕೊಟ್ಟ, ರೂಪಕಗಳೇ ಪ್ರಧಾನವಾದ ಮಾದರಿಯಲ್ಲಿಯೇ ನಾವು ಹೊಸ ಸಂಭಾಷಣೆ ತರಬೇಕು. ಮತ್ತು ಅದೇ ಸಮಯದಲ್ಲಿ ಜನರನ್ನೂ ಸಹ ಆ ಸಂಭಾಷಣೆಗಳು ರಂಜಿಸಬೇಕು. ಉದಾಹರಣೆಗೆ, ಚಂದಗೋಪ ಮತ್ತು ಆತನ ತಾಯಿ, ಒಬ್ಬರನ್ನೊಬ್ಬರು ಪ್ರಶ್ನಿಸುವ ರೀತಿಯನ್ನು ಆಧುನಿಕತೆ ಮತ್ತು ಪ್ರಾಚೀನತೆಯ ತಿಕ್ಕಾಟವಾಗಿ ರೂಪಿಸಬಹುದಾದ ರೂಪಕವಾಗಿ ನನಗೆ ಕಾಣಿಸುತ್ತದೆ. ಈಗಿರುವ ಬಹಳಷ್ಟು ಸಂಭಾಷಣೆಗಳನ್ನು ಉಳಿಸಿಕೊಂಡೇ ಈ ಪ್ರಸಂಗವನ್ನು ಇನ್ನಷ್ಟು ಅರ್ಥಪೂರ್ಣ ಸಂಭಾಷಣೆಗಳ ಮೂಲಕ ತೆರೆದಿಡಬೇಕಾದ ಆವಶ್ಯಕತೆ ಇದೆ.


  • ಗಣಪತಿ ಹೆಗಡೆ ಕಪ್ಪೆಕೆರೆ – ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW