ಅವಳ ಜೀವನದ ದುರಂತ ಕತೆ. ಬದುಕಿದ್ದಾಗ ಯಾವ ಸುಖ ಕಾಣಲಿಲ್ಲ. ಸತ್ತಾಗ ಅವಳ ಆಸೆಯಂತೆ ಅಂಗಾಂಗಗಳನ್ನು ಕೂಡಾ ದಾನ ಮಾಡಲು ಸಾಧ್ಯವಾಗಲಿಲ್ಲ. ವಿಧಿಯಾಟದ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ, ಒಂದು ಸಣ್ಣ ಕತೆ ತಪ್ಪದೆ ಓದಿ…
ಎಂಟು ವರ್ಷಗಳ ಹಿಂದೆ ಮಗನಿಗೆ ತನ್ನದೇ ಕಿಡ್ನಿ ಕೊಟ್ಟಿ ತ್ಯಾಗಮಯಿ ತಾಯಿಯಾದಳು. ಕಿಡ್ನಿ ಕೊಟ್ಟಿ ಎರಡೇ ವರ್ಷಕ್ಕೆ ಮಗ ಅಮ್ಮನಿಗೆ ಟಾಟಾ ಮಾಡಿ ಪ್ರಪಂಚವನ್ನೇ ಬಿಟ್ಟಿ ಹೋದ. ಉಳಿದಿದ್ದು ವಯಸ್ಸಾದ ಗಂಡಾ ಗುಂಡಿ. ಹೇಗೋ ಜೀವನ ತಳ್ಳುತ್ತಿದ್ದರು, ಆದರೆ ಯಾವಾಗ ಮಹಾಮಾರಿ ಕೋವಿಡ್ ಬಂದಿತೋ ಗಂಡನೂ ನಲುಗಿ ಹೋದ. ಕೋವಿಡ್ ಹೊಡೆತಕ್ಕೆ ಇಹಲೋಕ ತ್ಯೆಜಿಸಿ ಹೊರಟು ಹೋದ. ಉಳಿದಿದ್ದು ಒಂಟಿ ಆ ಹೆಣ್ಣು. ವಯಸ್ಸಾದ ಶುಗರ್, ಬಿಪಿ ನೆಂಟರಾದರು. ಬಂದವರು ವಾಪಾಸ್ ಹೋಗದೆ ಆ ಹೆಣ್ಣುಮಗಳು ಜೀವನದಲ್ಲಿ ಜಾoಡಾ ಉರಿದರು. ಆದರೆ ಆ ಹೆಣ್ಣುಮಗಳು ಛಲಗಾರ್ತಿ. ಒಂಟಿಯಾಗಿ ಜೀವನ ಎದುರಿಸಲು ಸಿದ್ದಳಾಗಿ ನಿಂತಿದ್ದಳು. ವಿಧಿಗೆ ಸವಾಲು ಹಾಕಿ ಬಂದ ಕಷ್ಟವನ್ನು ಎದುರಿಸಿ ಬದುಕುತ್ತಿದ್ದಳು. ಸುಂದರ ಬದುಕನ್ನು ಅನುಭವಿಸದಿದ್ದರೂ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕು ಎನ್ನುವ ಹಂಬಲ ಅವಳಲ್ಲಿ ಯಾವಾಗಲೂ ತುಡಿಯುತ್ತಿತ್ತು. ಹಾಗಾಗಿ ತನ್ನ ಕೈಲಾದ ಸಮಾಜಸೇವೆ ಮಾಡುತ್ತಾ ದಿನ ದೂಡುತ್ತಿದ್ದಳು.
ಒಂದು ದಿನ ಮಗನ ಹುಟ್ಟು ಹಬ್ಬ ಬಂತು, ಮಗ ಇಲ್ಲವೆಂದ ಮಾತ್ರಕ್ಕೆ ಮಗ ಹುಟ್ಟಿದ ದಿನ ಅಳಸಿ ಹೋಗುವುದಿಲ್ಲ ನೋಡಿ. ಆ ದಿನ ಆಕೆ ಅಂಗಡಿಯಿಂದ ಕೇಕ್ ತಗೆದುಕೊಂಡು ಅನಾಥ ಮಕ್ಕಳಿಗೆ ಹಂಚಲು ಅತಿ ಸಂತೋಷದಿಂದ ರಸ್ತೆ ದಾಟುತ್ತಿದ್ದಳು. ಯಮರಾಯ ಆಟೋ ರಿಕ್ಷಾ ರೂಪದಲ್ಲಿ ಎಲ್ಲಿಂದ ಬಂದನೋ, ಅವನ ಹೊಡೆತಕ್ಕೆ ಕೈಯಲ್ಲಿದ್ದ ಕೇಕ್ ಹಾರಿ ಎಲ್ಲೋ ದೂರದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದರೆ, ಇನ್ನೊಂದು ಕಡೆ ಆಕೆ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ಹೋಗಿ ತಲೆಕೊಟ್ಟಳು. ಪ್ರಜ್ಞೆ ಹಾಗೆ ತಪ್ಪಿ ಹೋಯಿತು.
ಮುಂದೆ ಆಸ್ಪತ್ರೆ, ಡಾಕ್ಟರ್, ರಕ್ತ, ಅದು ಇದು ಮಣ್ಣು ಮಸ್ಸಿ ಕತೆಗಳು ಶುರುವಾಯಿತು. ಏನೇ ಮಾಡಿದರು ಡಾಕ್ಟರ್ ಕೆಲವೊಮ್ಮೆ ದೇವರಾಗೋದಿಲ್ಲ. ಹಾಗಾಗಿ ಮಲಗಿದ ಆಕೆ ಮತ್ತೆ ಎದ್ದೇಳಲೇ ಇಲ್ಲಾ. ಶಾಶ್ವತ ನಿದ್ದೆಗೆ ಜಾರಿದಳು. ಬಹುಶಃ ಆಕೆಯ ಒಂಟಿ ಬದುಕಿನ ಹೋರಾಟ ಆ ದೇವರಿಗೂ ಇಷ್ಟಾವಾಗಲಿಲ್ಲವೋ, ಏನೋ… ಅವಳಿಗೆ ಶಾಶ್ವತ ನೆಮ್ಮದಿ ನೀಡಲು ತನ್ನೆಡೆಗೆ ಕರೆಸಿಕೊಂಡ. ಅಲ್ಲಿಗೆ ಅವಳ ನೋವಿನ ಬದುಕು ಅಂತ್ಯವಾಯಿತು.
ಅವಳು ಬದುಕಿದ್ದಾಗ ಯಾವಾಗಲೂ ತನ್ನ ದೇಹವನ್ನು ದಾನ ಮಾಡಬೇಕು ಎಂದು ಆಸೆ ಪಡುತ್ತಿದ್ದಳು. ಅವಳ ಆಸೆಯಂತೆ ಅಂಗಾಂಗ ದಾನ ಮಾಡಲು ಅವರ ಸಂಬಂಧಿಗಳು ನಿರ್ಧಾರ ಮಾಡಿ ಮುಂದೆ ಬಂದರು. ಆದರೆ ಆಕೆಯ ಬಿಪಿ ಹೆಚ್ಚಾಗುತ್ತಿದ್ದ ಪರಿಣಾಮ ಅವಳ ಅಂಗಾಂಗವನ್ನು ಡಾಕ್ಟರ್ ಗಳು ಎರಡು ದಿನ ಆಸ್ಪತ್ರೆಯಲ್ಲಿಯೇ ಇಟ್ಟು ತಗೆದುಕೊಳ್ಳಲು ಪ್ರಯತ್ನಿಸಿದರು ಅದು ಸಾಧ್ಯವಾಗಲಿಲ್ಲ. ಬಹುಶಃ ಅವಳು ಬದುಕಿದ್ದಾಗ ಪಟ್ಟ ಕಷ್ಟಗಳಿಗೆ ದೇವರು ಕೂಡಾ ಕರಗಿರಬೇಕು, ಹಾಗಾಗಿ ಇನ್ನಷ್ಟು ಅವಳಿಂದ ಕಿತ್ತುಕೊಳ್ಳಲು ಮನಸ್ಸಾಗದೆ ಅವಳ ಅಂಗಾಂಗ ಅವಳಿಗೆ ಇರಲಿ ಎಂದು ದೊಡ್ಡ ಮನಸ್ಸು ಮಾಡಿದ ಅಂತ ಕಾಣಿಸುತ್ತದೆ. ಇಷ್ಟೇ ಬದುಕು.ಇದನ್ನೇ ಹೇಳುವುದು ವಿಧಿಯಾಟ ಅಂತ.
****
ಅಂಗಾಂಗ ದಾನ ಮಾಡುವ ಮನಸ್ಥಿತಿ ಬರುವುದು ಅತಿ ಅಪರೂಪ. ದಾನ ಮಾಡಲು ಮನಸ್ಸಿದ್ದ ಮಾತ್ರಕ್ಕೆ ಅದು ಸಾಧ್ಯವಾಗುತ್ತದೆ ಅನ್ನುವುದು ಕಷ್ಟ, ಅದಕ್ಕೆ ಸತ್ತವರ ದೇಹ ಸ್ಪಂದಿಸಬೇಕು. ಸ್ಪಂದಿಸದಿದ್ದರೆ ಅದು ಸಾಧ್ಯವಾಗುವುದಿಲ್ಲ.. ನಾವೊಂದು ಬಯಸಿದರೆ ದೇವನೊಂದು ಬಯಸುವನು. ಕೊಡಬೇಕು ಎನ್ನುವ ದೊಡ್ಡ ಮನಸ್ಸು ನಿಮ್ಮಲ್ಲಿ ಇದ್ದರೇ ಅದೇ ಮಹಾದಾನ,ಯಾವುದಕ್ಕೂ ನೊಂದುಕೊಳ್ಳಬೇಡಿ…
- ಶಾಲಿನಿ ಹೂಲಿ ಪ್ರದೀಪ್