ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರು ಬೆನ್ನಿಗೆ ಕ್ಯಾಮೆರಾ ಹಾಕಿಕೊಂಡು ಹೊರಟರೆ ಸುಂದರ ಚಿತ್ರಗಳು ಸೆರೆಯಾಗುತ್ತವೆ, ಈಗ ಅವರ ಕ್ಯಾಮೆರಾ ಕಣ್ಣು ಸೆರೆ ಹಿಡಿದದ್ದು ಬಂಕಾಪುರದ ನವಿಲುಧಾಮದಲ್ಲಿ, ಅಲ್ಲಿ ಕಂಡು ಬಂದ ಹುಂಡುಕೋಳಿಯ ಚಿತ್ರವನ್ನು ತಪ್ಪದೆ ನೋಡಿ ಆನಂದಿಸಿ…
ಭಾನುವಾರ ಕ್ಯಾಮರಾದೊಂದಿಗೆ ಬಂಕಾಪುರದ ನವಿಲುಧಾಮದ ಕಡೆಗೆ ನನ್ನ ಬೈಕ್ ಸವಾರಿ ನಡೆಯಿತು. “ನವಿಲುಗಳಿಲ್ಲದೇ ನವಿಲುಧಾಮ ಕಾಲಿ… ಕಾಲಿ.. ಎನಿಸಿತು”. “ಕೆಲವೇ ವರ್ಷಗಳ ಹಿಂದೆ ಇಲ್ಲಿ ನೂರಾರು ಸಂಖ್ಯೆಯಲ್ಲಿದ್ದ ನವಿಲುಗಳ ಸಂತತಿ ಇದೀಗ ಕೇವಲ ಹತ್ತಾರು ಸಂಖ್ಯೆಗೆ ಕುಸಿದಿರುವುದು ತೀರಾಕಳವಳಕಾರಿಯಾದ ಸಂಗತಿಯಾಗಿದೆ”. ಹೀಗೆ ನವಿಲು ಧಾಮದ ಸುತ್ತಾಟದ ವೇಳೆ ಬಂಕಾಪುರ ಕೋಟೆ ಪ್ರದೇಶದಲ್ಲಿ ಕಲವು ಅಪರೂಪದ ಪಕ್ಷಿಗಳು ಕಂಡು ಬಂದವು. ಅದರಲ್ಲಿ ಪ್ರಮುಖವಾಗಿ ಹುಂಡುಕೋಳಿ ಮತ್ತು ನೆಲಕುಟುಕ ಪ್ರಮುಖವಾದವುಗಳು.
ಹುಂಡುಕೋಳಿ ಸಾಮಾನ್ಯವಾಗಿ ಈಜಾಡುವ ಹಕ್ಕಿಯಲ್ಲ. ಆದರೆ ಇದು ನೀರಿನ ಹತ್ತಿರ ಆಹಾರಾನ್ವೇಷಣೆಗೆ ಓಡುವುದನ್ನು ಕಾಣಬಹುದು. ನೀರಾವರಿ ಪ್ರದೇಶದಲ್ಲಿ, ಜೌಗುಗಟ್ಟಿ ನಿಂತ ನೀರಿನ ಗುಂಡಿಗಳಲ್ಲಿಯು ಆಹಾರ ಅರಸುತ್ತದೆ. ಹೆಚ್ಚಾಗಿ ಸಂಜೆ ಹೊತ್ತಿನಲ್ಲಿ ಮೊದೆಗಳೊಳಗೆ ಕುಳಿತು ಕೊರೊ ಕೊಕ್ ಕೊಕ್ ಎಂದು ಅವಿರತವಾಗಿ ಕೂಗುತ್ತದೆ.
“ಜೂನ್‌ನಿಂದ ಅಕ್ಟೋಬರ್‌ವರೆಗೆ ಕೆರೆದಡದ ಪೊದೆಗಳಲ್ಲಿ, ಜೊಂಡಿನಲ್ಲಿ ಗೂಡು ಮಾಡುತ್ತದೆ. ಕಾಗೆಗಿಂತ ಕೊಂಚ ದೊಡ್ಡದಾದ ಕೋಳಿಗಿಂತ ಚಿಕ್ಕದಾದ ನೀರಿನ ಕೋಳಿ, ರೆಕ್ಕೆ, ಬೆನ್ನು, ಬಾಲದ ಮೇಲ್ಬಾಗ, ಎಲ್ಲ ಕಂದು ಕಪ್ಪು ಬಣ್ಣ. ಕೊಕ್ಕರೆಗಳಿಗಿರುವಂತೆ ಉದ್ದವಾದ ಕಾಲುಗಳು ನೀಲಿಕಪ್ಪು ಬಣ್ಣಕ್ಕಿವೆ. ಚೋಟು ಬಾಲವನ್ನು ನಡೆಯುತ್ತಾ ಮೇಲೆ ಕೆಳಗೆ ಆಡಿಸುವಾಗ ಬಾಲದ ಕೆಳಗಿನ ಕೆಂಪು ಬಣ್ಣ ಪ್ರಧಾನವಾಗಿ ಕಾಣುತ್ತದೆ. ಕೊಕ್ಕು ನೀಲಿಕಷ್ಟು, ಕುತ್ತಿಗೆಯ ಮುಂಭಾಗ, ಎದೆ, ಹೊಟ್ಟೆ ಅಚ್ಚ ಬಿಳಿಯ ಬಣ್ಣ, ಚೌಗು ಪ್ರದೇಶದ ಸುತ್ತಮುತ್ತಲಿನ ಪೊದೆಗಳೆಡೆಯಲ್ಲಿ ಮತ್ತು ಜೊಂಡಿನ ಸಂದುಗೊಂದುಗಳಲ್ಲಿ ಹಗುರ ಹೆಜ್ಜೆಗಳನ್ನಿಡುತ್ತಾ ನಡೆದಾಡುವ ಚುರುಕಾದ ಪಕ್ಷಿ ಇದಾಗಿದೆ”. ಇದು ಬಂಕಾಪುರ ಕೋಟೆ ಪ್ರದೇಶದಲ್ಲಿ ಆಹಾರ ಅರಸುತ್ತಿದ್ದ ವೇಳೆ ನನ್ನ ಕ್ಯಾಮರಾಕಣ್ಣಿಗೆ ಸೆರೆಯಾಯಿತು.
“ನವಿಲುಗಳ ಪೋಟೋಗಳನ್ನು ಚಿತ್ರಿಸಲು ಒಡಾಡುತ್ತಿದ್ದ ವೇಳೆ ಆಹಾರ ಅರಸುತ್ತಿದ್ದ ನೆಲಕುಟುಕ ಮನ ಸೆಳೆಯಿತು”. “ಕೀಟದ ಭಕ್ಷಣೆಯಲ್ಲಿ ತೊಡಗಿದ್ದ ನೆಲ ಕುಟುಕ ನೋಡಲು ಅತ್ಯಾಕರ್ಷಕವಾಗಿ ಕಾಣುವ ಹಕ್ಕಿಯಾಗಿದೆ. ಈ ಹಕ್ಕಿಯ ಮೈಮೇಲೆಲ್ಲ ಜೀಬ್ರಾ ಪಟ್ಟೆಗಳಂತೆ ಕಪ್ಪು ಬಿಳಿ ಪಟ್ಟೆಗಳಿವೆ. ಕುತ್ತಿಗೆ, ಎದೆ ಕಿತ್ತಳೆ ಬಣ್ಣ. ತಲೆಯ ಮೇಲೆ ನವಿಲಿಗಿರುವಂತೆ ಬೀಸಣಿಗೆ ಚೊಟ್ಟಿ ಇದೆ. ಚೊಟ್ಟಿಯ ತುದಿಯಲ್ಲಿ ಕಪ್ಪು ಮಚ್ಚೆಗಳಿವೆ. ಚೊಟ್ಟಿಯನ್ನು ಇದು ಮಡಚಿಕೊಂಡಾಗ ಹಿಮ್ಮುಖನಾಗಿರುವ ಇನ್ನೊಂದು ಕೊಕ್ಕಿನಂತೆ ಕಾಣುತ್ತದೆ. ಒಂಟಿಯಾಗಿ ಯಾವಾಗಲೂ ನೆಲ ಕೆದಕುತ್ತಾ ಇರುತ್ತದೆ”. ಹುಲ್ಲು ಮೈದಾನಗಳಲ್ಲಿ, ತೋಟ-ಪಟ್ಟಿಗಳಲ್ಲಿ, ನೀರಾವರಿ ಪ್ರದೇಶದ ಹೊಲಗಳಲ್ಲಿ, ಇವು ಇರುವುದು ಹೆಚ್ಚು. ನೆಲ ಕೆದಕಿ ಹುಳುಗಳನ್ನು ಹಿಡಿದು ತಿನ್ನುತ್ತವೆ. ಫೆಬ್ರವರಿಯಿಂದ ಮೇ ವರೆಗೆ ಕಟ್ಟಡಗಳ ಸಂದುಗಳಲ್ಲಿ, ಮರದ ಪೊಟರೆಗಳಲ್ಲಿ ಹುಲ್ಲಿನ ಗೂಡು ನಿರ್ಮಿಸಿಕೊಂಡು ಇವು ಸಂತಾನಾಭಿವೃದ್ಧಿ ಮಾಡುತ್ತವೆ. ಹೀಗೇ ನವಿಲುಧಾಮದ ಸುತ್ತಾಟದಲ್ಲಿ ಹಲವು ನವಿಲುಗಳ ಚಿತ್ರಗಳ ಜೊತೆಗೆ ಇತರೇ ಪಕ್ಷಿಗಳು ಸಹ ಕ್ಯಾಮರಾ ಕಣ್ಣಿಗೆ ಬಿದ್ದವು, ಅವುಗಳ ಬಗ್ಗೆ ಪುಟ್ಟ ವಿವರಣೆ ಹಾಗೂ ಛಾಯಾಚಿತ್ರಳಿವು.
- ಚಿತ್ರಗಳು/ಲೇಖನ: ಮಾಲತೇಶ ಅಂಗೂರ, ಹಾವೇರಿ.