ಚಪ್ಪಲಿ ಪುರಾಣ – ರಘುರಾಂ



ಲಾಕಾಡೌನ್ ನಲ್ಲಿ ಮನೆ ಮೂಲೆಯಲ್ಲಿ ನಾನು ಟಿ.ವಿ. ನೋಡುತ್ತಾ ಕೂತಾಗ ಒಂದು ಟಿ.ವಿ ಚಾನಲ್ ನಲ್ಲಿ ಚಪ್ಪಲಿಗಳು ಮಾತನಾಡಿಕೊಳ್ಳುತ್ತಾ ಮನೆಯಲ್ಲೇ ಇರಿ ಎಂದು ಸಂದೇಶಕೊಡುವ ಜಾಹೀರಾತು ಬಂತು. ಇದು ಏನೋ ಹೇಳುವ “ಚಪ್ಪಲಿ ಪುರಾಣ”ಆಗಿರದೆ ಮನೆಯಲ್ಲಿ ಇರುವುದು “ಕ್ಷೇಮ” ಎಂದು ಹೇಳುವ  “ಪುರಾಣ” ವೇ ಆಗಿತ್ತು. ಮುಂದೆ ಓದಿ …

ಇದೇನಿದು ಹೊಸ ಪುರಾಣ ಎಂದು ಕೇಳುತ್ತಿದ್ದೀರಾ? ಮೊದಲೆಲ್ಲ ಸುಮ್ಮನೆ ಏನೇನೋ ಯಾರಿಗೂ ಬೇಡದ ವಿಷಯ ಮಾತನಾಡುತ್ತಿದ್ದರೆ “ಪುರಾಣ ” ಹೇಳುತ್ತಾನೆ ಎನ್ನುವುದು ಇತ್ತು. ಇದು ಪುರಾಣ ಅಲ್ಲ ಬಿಡಿ. ಮೊನ್ನೆಯ ಲಾಕಾಡೌನ್ ನಲ್ಲಿ ಮನೆ ಮೂಲೆಯಲ್ಲಿ ನಾನು ಟಿ.ವಿ. ನೋಡುತ್ತಾ ಕೂತಾಗ ಒಂದು ಟಿ.ವಿ ಚಾನಲ್ ನಲ್ಲಿ ಚಪ್ಪಲಿಗಳು ಮಾತನಾಡಿಕೊಳ್ಳುತ್ತಾ ಮನೆಯಲ್ಲೇ ಇರಿ ಎಂದು ಸಂದೇಶಕೊಡುವ ಜಾಹೀರಾತು ಬಂತು. ಇದು ಏನೋ ಹೇಳುವ “ಚಪ್ಪಲಿ ಪುರಾಣ”ಆಗಿರದೆ ಮನೆಯಲ್ಲಿ ಇರುವುದು “ಕ್ಷೇಮ” ಎಂದು ಹೇಳುವ  “ಪುರಾಣ” ವೇ ಆಗಿತ್ತು.

ಎಲ್ಲರ ಮನೆಯಲ್ಲಿ ಇರುವ ಹಾಗೆ ನಮ್ಮ ಮನೆಯ ಬಾಗಿಲ ಮೂಲೆಯಲ್ಲಿ ಕೂಡ ಈ ಚಪ್ಪಲಿಗೂಡು ಇದೆ. ಸಧ್ಯಕ್ಕೆ ಅಗ್ನಿ ಮೂಲೆ, ದೇವರ ಮೂಲೆ ಇತ್ಯಾದಿ ಎಲ್ಲಾ ವಾಸ್ತು ಹೇಳುವ ಟಿ.ವಿ. ಶಾಸ್ತ್ರಜ್ಞನರು ಚಪ್ಪಲಿ ಮೂಲೆಯ ಬಗ್ಗೆ ಹೇಳಿದ ನೆನಪಿಲ್ಲ ನನಗೆ. ಹಾಗಾಗಿ ಎಲ್ಲರ ಮನೆ ಮುಂದೆ ಇರುವ ಹಾಗೆ ನಮ್ಮ ಮನೆಯಲ್ಲೂ ಬಾಗಿಲ ಬಳಿಯೇ ಚಪ್ಪಲಿ ಬಿಡುವುದು.  ಲಾಕಾ ಡೌನ್ ವೇಳೆಯಲ್ಲಿ  ಐರನ್ ಮಾಡಿದ ಪ್ಯಾಂಟ್ ಮತ್ತು ಶರ್ಟ್ ಗಳು ಬೀರುವಿನಲ್ಲಿ ಅಳುತ್ತಿವೆ ಎಂದು ವ್ಯಾಟ್ಸಪ್ ಜೋಕುಗಳು ಕಡಿಮೆ ಎಂದರೆ ಒಂದು ಡಜನ್ ಸಾರಿಯಾದರೂ ಬೇರೆ, ಬೇರೆ ಸಮೂಹದಿಂದ ಬಂದಿದೆ. ನಾನು ಅದನ್ನು ‘ಫಾರ್ವರ್ಡ್’  ಮಾಡಬಾರದು ಅಂದುಕೊಂಡರು, ಅಭ್ಯಾಸ ಬಲದ ಮೇಲೆ ಕಡಿಮೆ ಎಂದರೆ ಒಂದು ಅರ್ಧ ಡಜನ್ ಸಮೂಹಕ್ಕೆ ” ಫಾರ್ವರ್ಡ್ ”  ಮಾಡಿದ್ದೇನೆ. ಹಾಗಾಗಿ, ನಿಮಗೂ ಅದು ಬಂದಿರುತ್ತೆ ಬಿಡಿ!

ಪ್ಯಾಂಟು, ಶರ್ಟ್ ಅತ್ತ ಮೇಲೆ, ಚಪ್ಪಲಿಗಳು ಕೂಡ, ಅಳದಿದ್ದರೂ ಬೇಜಾರು ಮಾಡಿಕೊಂಡಿರಬಹುದೇ ಎಂದು ಕುತೂಹಲ ಬಂತು. ಮನೆಯಿಂದ ಹೊಸಲೇ ದಾಟಿಲ್ಲ ಒಂದು ತಿಂಗಳಿಂದ. ಹಾಗಾಗಿ ಚಪ್ಪಲಿಗಳಿಗೂ ಲಾಕಾಡೌನ್ ಆಗಿದೆ! ಚಳಿಗಾಲ ಆಗಿದ್ದರೆ ಚಪ್ಪಲಿಗಳು ಬೆಚ್ಚಗೆ ಕೂತಿವೆ ಗೂಡಿನಲ್ಲಿ ಎಂದು ಕೊಳ್ಳಬಹುದಿತ್ತು. ಈಗ ಬೇಸಿಗೆ ಬೇರೆ, ಹಾಗಾಗಿ ತಣ್ಣಗೆ ಇವೆ ಎಂದು ಕೊಳ್ಳಬೇಕು ಅಷ್ಟೇ!

ಏನಾದರೂ ಮಾಡಲು ಕೆಲಸ ಬೇಕಲ್ಲ, ಎಸ್ಟು ಹೊತ್ತು ಟಿ.ವಿ.ನೋಡುವುದು! ಯಾಕೆ ಚಪ್ಪಲಿ ಸ್ಟಾಂಡ್ ಒರೆಸಬಾರದು ಎಂದು ಕೊಂಡೆ. ಅಂದಕ್ಷಣ ಮಾಡುವ ಜಾಯಮಾನ ನನ್ನದಲ್ಲ ಬಿಡಿ. ನಾಳೆ, ನಾಳೆ ಎನ್ನುತ್ತಾ ಕೂತಿದ್ದಾಗ, ಇನ್ನೂ ಹದಿನೈದು ದಿನ ಲಾಕಾಡೌನ್ ಎಂದು ಸುದ್ದಿ! ಈಗ ಲಾಕ್ ಡೌನ್  ಸುದ್ಧಿಯೇ ಅಲ್ಲ ಬಿಡಿ. ಈಗ ಲಾಕಾಡೌನ್ ತೆಗೆದರೆ ಮಾತ್ರ ಅದು ಸುದ್ದಿ! ಬಾಗಿಲ ಹೊರಗಡೆ ಇರುವ ಈ ಚಪ್ಪಲಿ ಸ್ಟಾಂಡ್, ಬೆಳಿಗ್ಗೆ ಬಾಗಿಲಿಗೆ ಕಟ್ಟಿದ ಹಾಲಿನ ಚೀಲದಿಂದ ಹಾಲು ತೆಗೆದು ಇಡುವಾಗ ಮಾತ್ರ ಕಾಣುತ್ತಿದ್ದು, ಮತ್ತೆ ಮರುದಿನ ಬೆಳಿಗ್ಗೆ ಯೇ ಕಣ್ಣಿಗೆ ಬೀಳುತ್ತಿದ್ದುದು. ಹಾಗಾಗಿ ಮರೆಯಲು ಒಳ್ಳೆಯ ಕಾರಣವೇ ಇದೆ ಬಿಡಿ!

ಆದರೂ ಈ ಚಪ್ಪಲಿ ಸ್ಟಾಂಡ್ ಓರೆಸುವ ದಿನ ಬಂದೇ ಬಿಟ್ಟಿತು. ಬೆಳಿಗ್ಗೆ ಹಾಲು ತೆಗೆದು ಇಡುವಾಗ ಈ ಸ್ಟಾಂಡ್ ನ ಹತ್ತಿರ ಇದ್ದ ಹಲ್ಲಿ ಇದಕ್ಕೆ ಕಾರಣ!

ಒಂದು ತಿಂಗಳಿಂದ ಆನಾಥವಾಗಿ ಬಿದ್ದಿವೆ ಈ ಚಪ್ಪಲಿ, ಶೂಗಳು. ಎಷ್ಟೆಲ್ಲಾ ವಿಧಗಳು ಈ ಕಾಲಿಗೆ ಹಾಕಿಕೊಂಡು, ಎಲ್ಲವನ್ನೂ ಕೆಲವು ಸಾರಿ ತುಳಿದು ಕೊಂಡು ಒಡಾಡುವ ಈ ಚಪ್ಪಲಿಗಳಲ್ಲಿ! “ಮುಖ ನೋಡಿ ಮಣೆ ಹಾಕು” ಅಂತ ಗಾದೆ ಇದೆ. ಆದರೆ “ಚಪ್ಪಲಿ ನೋಡಿ ಖುರ್ಚಿ ಕೊಡು” ಎಂದು ಗಾದೆಯಿಲ್ಲ! ಬಾತ್ ರೂಮ್ ಬಾಯ್ ಹವಾಯಿ ಚಪ್ಪಲಿಯಿಂದ ಹಿಡಿದು, ಮದುವೆ ಆರತಕ್ಷತೆಯಲ್ಲಿ ಹಾಕುವ “ಶೂಷ್”ವರೆಗೆ ಕೊನೆಯಲ್ಲಿ ಈ ಸ್ಟಾಂಡ್ಗೆ ಬಂದು ಬೀಳುವುದು!

ನಾನು ಹಾಕಿರುವ ಪ್ರಥಮ ಶೂ  ಬಹುಶಃ ನಾನು 3ವರ್ಷ ಇದ್ದಾಗ! ಅದನ್ನು ಬಹುಶಃ ಮನೆಯೊಳಗೆ ಮಾತ್ರ ಹಾಕಿರಬಹುದು. ಆ ಶೂ ಹಾಕಿಕೊಂಡು ಹೊರಗಡೆ ನಡೆದಾಡಿರುವುದು ಇರಲಿಕ್ಕಿಲ್ಲ, ಏಕೆಂದರೆ ಸಣ್ಣ ಮಕ್ಕಳನ್ನು ಎಲ್ಲಿ ನಡೆಸುತ್ತಾರೆ!  ಎಲ್ಲರೂ ಎತ್ತಿಕೊಂಡು ತಾನೆ ತಿರುಗುವುದು. ನನ್ನನ್ನು  ನನ್ನ  ಅಕ್ಕ ಎತ್ತಿಕೊಂಡು ತಿರುಗಿಸುತ್ತಿದ್ದಳಂತೆ! ನನಗೇನು ಆ ಶೂ ನೆನಪಿಲ್ಲ ಬಿಡಿ! ಅದು ಹಾಕಿ ತೆಗೆದಿರುವ ಒಂದು ಫೋಟೋ ಇದೆಯಲ್ಲ, ಹಾಗಾಗಿ ಗೊತ್ತು ಅಷ್ಟೇ!

ನಮ್ಮ ಮನೆಯ ಚಪ್ಪಲಿ ಸ್ಟಾಂಡ್ ಹೇಳಿ ಕೊಳ್ಳುವ ಹಾಗೆ ಏನೂ ಇರಲಿಲ್ಲ ಬಿಡಿ.  ಸಾಧಾರಣ ಮರದ್ದು! ಅದಕ್ಕೆ ಒಂದಿಷ್ಟು ಕರಿಬಣ್ಣ ಹಚ್ಚಿ ರಸ್ತೆ ಬದಿಯಲ್ಲಿ ಮಾರುತ್ತಿದ್ದವರ  ಕೈಲಿ ತೆಗೆದುಕೊಂಡು ಬಂದಿರುವುದು.   ಈಗ ಹತ್ತು ವರ್ಷವೇ ಕಳೆಯಿತು ಬಿಡಿ.  ಇನ್ನೂ ತುಂಬಿದೆಲ್ಲಾ ತುಂಬಿಸಿಕೊಂಡು ಮೂಲೆಯಲ್ಲಿ ಕೂತಿದೆ. ಆ ಗೂಡು ಕೂಡ ಅದನ್ನು ಮಾಡುವವರ ತರಹ  ಗಟ್ಟಿಯಾಗಿ ಇದೆ.  ಅಷ್ಟೇ ಅಲ್ಲ ಅದರ ವಾಸ ಸ್ಥಾನ  ಕೂಡ ಆ ಗೂಡು, ಅದನ್ನು ಮಾಡುವವರ ತರಹ, ಮನೆಯ ಹೊರಗಡೆಯೇ ತನ್ನ ಜೀವನ ಕಳೆಯುತಿದೆ!

ಫೋಟೋ ಕೃಪೆ : alternativesjournal

ನಿಧಾನವಾಗಿ ಒಂದೊಂದೇ ಚಪ್ಪಲಿ   ಹೊರಗೆ  ತೆಗೆಯಲು ಪ್ರಾರಂಭ ಮಾಡಿದೆ. ಎಡಗೈಯಲ್ಲಿ ಚಪ್ಪಲಿ ಹಿಡಿದು ಕೊಂಡು ಬಲಗೈಯಲ್ಲಿ ಇರುವ ಬಟ್ಟೆಯಿಂದ ಗಟ್ಟಿಯಾಗಿ ಒರೆಸಿದರೆ ನೋಡಿ ಆದು ಯಾರದ್ದು  ಎಂದು ಗೊತ್ತಾಗುತ್ತದೆ!  ಸಂಬಂಧಗಳು ಕೂಡ ಹಾಗೆ ಅಲ್ಲವೇ?  ಕೆಲವರ ಧ್ವನಿ  ಕೇಳಿದ ತಕ್ಷಣ  “ಏನೋ ಹೇಗಿದ್ದೀಯಾ ” ಎಂದು ಮುಖ ಅಗಲಮಾಡಿಕೊಂಡು  ಮಾತಾಡುತ್ತೇವೆ ಅಲ್ಲವೇ?  ಆದರೆ ಕೆಲವರು  ಸ್ವಲ್ಪ ದಿವಸ ಮಾತನಾಡದೆ ಇದ್ದರೆ ಸಾಕು  ಅವರ ಧ್ವನಿ ಫೋನಿನಲ್ಲಿ ಕೂಡ  ಗೊತ್ತಾಗುವುದಿಲ್ಲ!  ಕಷ್ಟಪಟ್ಟು ನೆನಪಿಸಿಕೊಂಡರೆ  ಓ ಅವನು  ಪಕ್ಕದ ಮನೆಯವನೇ  ಆಗಿರುತ್ತಾನೆ!  ಚಪ್ಪಲಿ ಮೇಲಿನ ಧೂಳು ತಿಕ್ಕಿ ತಿಕ್ಕಿ ಒರೆಸಿದ  ಮೇಲೆ ಇದು ನನ್ನದೇ ಚಪ್ಪಲಿ  ಎಂದು  ಕೊಳ್ಳುತ್ತೇವಲ್ಲ!  ಹಾಗೇನೇ!.

ನನ್ನದೂ ಕೂಡ  ಐನೂರು ರೂಪಾಯಿಗೆ  ಐದು ರೂಪಾಯಿ ಐದು ಪೈಸೆ ಕಡಿಮೆ ಬೆಲೆ ಇಟ್ಟು  ಮಾರುವ ಕಂಪನಿಯದು. ಕಾಲಿಗೆ  ಹಾಕುವ  ವಸ್ತುವಿಗೆ  ಬೆಲೆ ಸ್ವಲ್ಪ ಕಡಿಮೆಯೇ. ಸಂಬಂಧಿಗಳು ಹೇಳುವ ಮಾತನ್ನು ನಾವು  ಎಲ್ಲದನ್ನೂ ಎಲ್ಲಿ ಕೇಳುತ್ತೇವೆ  ಹೇಳಿ. ಅವರ ಮಾತಿನಿಂದ ಎಷ್ಟೇ ಅನುಕೂಲ ಆದರೂ ಅದನ್ನು, ಸ್ವಲ್ಪ ಚಪ್ಪಲಿ ಬೆಲೆ ತರಹ,  ಹೇಳುವಾಗ ಗೌಣವಾಗಿ  ಹೇಳುತ್ತೇವಲ್ಲ!

ಈ ಚಪ್ಪಲಿ ನೋಡಿ!  ಚಪ್ಪಲಿಯ  ಮುಂದುಗಡೆ  ಬೆರಳುಗಳ  ಮಾರ್ಕ ಬಿದ್ದು  ಸವೆದಿದೆ.  ಹಿಂದುಗಡೆ ಎಲ್ಲಾ ಚೆನ್ನಾಗಿದೆ!  ಹಾಗಾದರೆ ಇದು ನನ್ನ ಚಪ್ಪಲಿ ಎಂದು ಅರ್ಥ. ನನ್ನ  ಮುಂದಿರುವವರನ್ನು  ಹಿಡಿಯುವ  ಪ್ರಯತ್ನದಲ್ಲಿ  ನಡೆಯುವ ಬದಲು ಸ್ವಲ್ಪ ಓಡುವುದೇ ಜಾಸ್ತಿ.  ಒಡುವಾಗ ಮುಂದೆ ಬಗ್ಗೆಲೇ ಬೇಕಲ್ಲ. ಸಮಾಜವಾದದ ವಿಷಯ ಮಾತನಾಡುವ ರಾಮಣ್ಣ  ಇದನ್ನು ಜಾಗತೀಕರಣಕ್ಕೆ ಬೈದರೆ, ನನ್ನ ಸ್ನೇಹಿತ  ರಾಘಣ್ಣ ಮಾತ್ರ ಇದು  ಮನೆಯವರ ಮುಂದೆ ಬಗ್ಗಿ ಬಗ್ಗಿ ಅಭ್ಯಾಸ ಆಗಿ ಈಗ ನಡೆಯುವಾಗ ಕೂಡ ಮುಂದಕ್ಕೆ ಬಗ್ಗಿ ನಡೆದು ಹೀಗೆ ಮುಂದುಗಡೆ ಮಾತ್ರ  ಸವೆದಿದೆ  ಎಂದು  ಹೇಳುತ್ತಾನೆ. ನಾನೇನು ಅವನ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ ಬಿಡಿ.ಯಾಕೆಂದರೆ ಅವನ ಚಪ್ಪಲಿನೂ  ಮುಂದುಗಡೆ ನನ್ನ ಚಪ್ಪಲಿಗಿಂತ  ಜಾಸ್ತಿಯೇ ಸವೆದಿದೆ.

ಫೋಟೋ ಕೃಪೆ : markzak

ಅದೇ ನನ್ನ  ಈ ಶೂ ನೋಡಿ!  ಹಿಂದುಗಡೆ ಮಾತ್ರ ಸವೆದಿದೆ. ಕಾರಣ ಇಷ್ಟೇ ಸ್ವಾಮಿ…ಕಛೇರಿಗೆ ತಾನೇ  ಶೂ ಹಾಕಿಕೊಂಡು ಹೋಗುವುದು. ಹೊಸ್ತಲು ದಾಟಿ ಮನೆಯಿಂದ ಕಾಲಿಟ್ಟರೆ   ದ್ವಿಚಕ್ರ  ವಾಹನ ಹತ್ತುತ್ತೇವೆ.  ಕಛೇರಿಯಲ್ಲಿ ನಮ್ಮದು ಬಿಳಿಕಾಲರ್ ಕೆಲಸತ್ತಾನೆ. ಇನ್ನು ಅದು ಸವೆಯುವುದು ಯಾವಾಗ?. ಅದೇ ಸ್ವಾಮಿ… ಎಷ್ಟೇ ಕೆಲಸ ಮಾಡಿದರೂ  ಕಛೇರಿ ಬಾಸ್ ಎಂದರು.  ಟಕ್… ಟಕ್… ಎಂದು ಶಬ್ದ ಮಾಡಿಕೊಂಡು ಓಡಾಡಲು  ಆಗುತ್ತದೆಯೇ? ಹೆಜ್ಜೆಯನ್ನು ಹಿಂಬದಿಯಲ್ಲಿ ಗಟ್ಟಿಯಾಗಿ ಊರಿಕೊಂಡು ನಡೆದು  ಅದು ಹಿಂಬದಿಯಲ್ಲಿ ಸವೆದಿದ್ದರೆ ನಾನು ಹೊಣೆಯೇ? ನೀವೆ ಹೇಳಿ…ಆದರೆ ರಾಘಣ್ಣ ಹೇಳುವುದೇ ಬೇರೆ. ಕಛೇರಿಯಲ್ಲಿ ಬಾಸ್ ಜೊತೆ ಓಡಾಡುವಾಗ ಅವರ ಹಿಂದೆ ನಿಲ್ಲುವ ಅಭ್ಯಾಸ ಮಾಡುವಾಗ ಹಿಂಬದಿ ಸವೆದಿದೆ ಎನ್ನುತ್ತಾನೆ.

ಆದರೂ ನನ್ನ ಶೂ ಮೂತಿ ನೋಡಿ! ಎಷ್ಟು ವಿಶಾಲವಾಗಿದೆ!  ನನ್ನ ಮನಸ್ಸಿನಂತೆ!.  ಆದರೆ ರಾಘಣ್ಣನ  ಹಾಕುವುದು   ಮೂಲಂಗಿ ಮೂತಿಯ  ಶೂ. ರಾಘಣ್ಣ   ಸರಿಯಾಗಿ ಒಂದು ಪಾಯಿಂಟ್ ಹಾಕಿಯೇ ಮಾತನಾಡುವುದು!  ಮೂತಿಗೆ ಯಾವುದಾದರೆ ಏನು? ನಾವೆಲ್ಲ  ಹಳೇಕಾಲದವರು ಎಂದು ಕಪ್ಪು ಶೂ ನೋಡಿದ ತಕ್ಷಣ ಹೇಳಬಹುದು ಬಿಡಿ!  ಈಗ ಶೂ ಮೇಲೆ ಎನೆಲ್ಲ ಚಿತ್ತಾರ ಬಂದಿಲ್ಲ ಹೇಳಿ. ಮೊದಲೆಲ್ಲಾ ಕಛೇರಿಗೆ ಹೋಗುವಾಗ ಮಾತ್ರ ಶೂ ಇರುತ್ತಿತ್ತು. ಈಗ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಲು ಒಂದು ಶೂ,  ಸಂಜೆ ಕ್ಲಬ್ಗೆ ಟೆನ್ನಿಸ್ ಹೆಸರಿನಲ್ಲಿ  ಹೋಗಲು ಇನ್ನೊಂದು ಶೂ. ಅದರ ಬೆಲೆ ಕೇಳಿದರೆ  ತಲೆ ತಿರುಗತ್ತದೆ ಬಿಡಿ!  ಅದೆಲ್ಲ ‘ಬಿಳಿ ಹೆಂಡ್ತಿ ‘ ಕಟ್ಟಿಕೊಳ್ಳುವ ಹಾಗೆ!  ಹಾಗೆ ಹೇಳಲು ಧೈರ್ಯ ವಿಲ್ಲದಿದ್ದರೆ ಅದೆಲ್ಲ  ಬಿಳಿ ಆನೆ ವ್ಯಾಪಾರದ  ವಿಷಯ ಎಂದು ಹೇಳಿ ಕೈತೊಳೆದು ಕೊಳ್ಳಬಹುದು. ತಂದ ನಾಲ್ಕು ದಿನ ಎಲ್ಲರ ಮುಂದೆ ನಿಂತು ಬಗ್ಗಿ  ನೋಡಿಕೊಳ್ಳುತ್ತಾ  ಅದರ ಬೆಲೆಯನ್ನು ಕೇಳದಿದ್ದರೂ ಹೇಳುತ್ತಾ ಒಡಾಡುವ ನಾವು, ನಂತರ ಅದು ಸವೆದು ಹೋಗಬಾರದು ಎಂದು  ಜೋಪಾನವಾಗಿ ಎತ್ತಿಟ್ಟು ನಮ್ಮ ಹಳೇ ಚಪ್ಪಲಿಯನ್ನೇ ಸಿಕ್ಕಿಸಿಕೊಂಡೆ ಓಡಾಡುತ್ತೇವೆ.



ದೊಡ್ಡ ನೆಂಟರೊಬ್ಬರು ಸಿಕ್ಕಿದರೆ ಅವರ ಜೊತೆ  ಎರಡು ದಿನ ಮೆರೆದು, ಅವರಿಂದ ಏನೂ ಉಪಯೋಗವಾಗದಿದ್ದರೆ, ಮತ್ತೆ  ಮನೆಯವರ ಜೊತೆಯಲ್ಲಿ ಓಡಾಡುತ್ತೇವಲ್ಲ,  ಹಾಗೆಯೆ!  ಆದರೆ ದೊಡ್ಡ ಶೂ ಕಂಪನಿಯ ಜಾಹೀರಾತುಗಳು  ಬಹಳ ಚೆನ್ನಾಗಿ ಇರುತ್ತದೆ.  ಅದರಲ್ಲೂ ಒಲಂಪಿಕ್ಸ್  ಆಟಗಾರನೊಬ್ಬನ   ಶೂ ಒಳಗೆ  ಗಾಳಿ ತೂರಿಕೊಂಡು ಹೋಗಿ ಕಾಲು ತಣ್ಣಗೆ ಆಗುತ್ತಾ ಇರುತ್ತದೆ. ಆತ ಗುರಿ ಮುಟ್ಟಿದಾಗ  ರೂಪದರ್ಶಿ ಒಬ್ಬಳು  ಪ್ರೇಕ್ಷಕರ ಗ್ಯಾಲರಿಯಲ್ಲಿ  ಅವನಿಗೆ ಕೈಬೀಸಿದಾಗ ಟಿ.ವಿ. ನೋಡುತ್ತಿರುವ ನಾವು ಅದು ನಮಗೇ  ಕೈ ಬೀಸಿರುವುದು ಅಂದು ಕೊಂಡು  ಮನಸ್ಸಿನಲ್ಲಿ ಮಂಡಿಗೆ ತಿನ್ನುವುದಿಲ್ಲವೇ? ಆದರೆ ಈ ತರಹ ಶೂ ನಾವು ಹಾಕಿದಾಗ  ಬರುವ ‘ಗಾಳಿಮಾತು’ಗಳು ಮನವನ್ನು ಬಿಸಿ ಮಾಡುವುದು ಖಂಡಿತ!  ಅಯ್ಯೋ, ಯಾಕೆ ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಕು.  ತಾವು ಅವರ ಕಾಲು ನೋಡಿ!  ನಾವು  ಶೂ ಲೇಸ್ ಕಟ್ಟುವ ತರಹ ಸಂಬಂಧಗಳನ್ನು ಅನ್ನೋನ್ಯವಾಗಿ ಬೆಸೆದರೆ ಅವರು  “ವೆಲ್ ಕ್ರೂ” ಹಾಕಿದ ಸ್ಟ್ರಾಪ್ ಇರುವ ಶೂ ಹಾಕುವ ಜನ.  ಈ ಜನದ ಮಾತುಗಳಿಗೆ ಯಾಕೆ ಬೆಲೆ ಕೊಡಬೇಕು!.  ಗಮ್ ಹಾಕಿ ಸಂಬಂಧಗಳನ್ನು ಇವರ ರೀತಿ ಬೆಸೆಯಿಸಲು ಸಾಧ್ಯವೇ?  ಇನ್ನು ಸ್ವಲ್ಪ ಬಗ್ಗಿ ನೋಡಿ, ಅವರ ಶೂ ನಲ್ಲಿ  ಸ್ಟೀಲ್ ರಿಂಗ್ ಗಳ   ಚಿತ್ತಾರ ಕೂಡ  ಇರುತ್ತದೆ. ಅದು ಅವರು  ಮನಸ್ಸಿನಲ್ಲಿ ಹಾಕಿಕೊಂಡಿರುವ  ಶೃಂಕೋಲೆಗಳನ್ನು  ತೋರಿಸುತ್ತದೆ ಅಷ್ಟೇ.  ಅದೆಲ್ಲಾ ಬಿಡಿಸಿಕೊಂಡು  ಹೊರ ಬರದಿದ್ದರೆ ಸಂಕುಚಿತ ಜನರಾಗೇ ಉಳಿಯುವುದಿಲ್ಲವೇ?

ಫೋಟೋ ಕೃಪೆ : siasat

ಹೋಗಲಿ ಬಿಡಿ! ಈ ಚಪ್ಪಲಿ ನೋಡಿ. ಇಡೀ ಪಾದದ ಗುರುತು ಇದರಲ್ಲಿ  ಮೂಡಿದೆ.  ಎಲ್ಲ ಕಡೆ ಸವೆದಿದೆ. ಆದರೂ ಹೊಸ  ಚಪ್ಪಲಿ  ತರಲು ಮನಸು  ಮಾಡುವುದಿಲ್ಲ!   ಇನ್ನು ಹಾಕಲು ಆಗುವುದೇ ಇಲ್ಲ  ಎಂದು ಆದ ಮೇಲೆ  ಹೊಸ ಚಪ್ಪಲಿ ಬರುತ್ತದೆ.  ನಿಮ್ಮ ಊಹೆ ಸರಿಯಾಗಿ ಇದೆ. ಇದು ನಮ್ಮ ಮನೆಯವರದು.   ನೆಲಕ್ಕೆ ಎಳೆದುಕೊಂಡು  ನಡೆಯುತ್ತಾಳೆ  ಎಂದು ನಾನು ಹೇಳಿದರೆ ರಾಘಣ್ಣ ಹೇಳುವುದೇ ಬೇರೆ.  ನೀನು ಈ ತರಹ ಏನೇನೋ ಪುರಾಣ ಬರೆದುಕೊಂಡು ಕೂತಿರುತ್ತೀಯ.  ಸಂಸಾರ ನಡೆಸುತ್ತಿರುವವರು ಯಾರು? ಸಂಸಾರ ಎಲ್ಲಾ ತಲೆ ಮೇಲೆ ಹೊತ್ತು ಕೊಂಡು ನಡೆಸುವಾಗ  ಅವರು ಸವೆಯುತಿರುವುದು ನಿನಗೆ  ಕಾಣುವುದಿಲ್ಲ,  ಚಪ್ಪಲಿ ಸವೆದಿದ್ದು ಮಾತ್ರ ಕಾಣುತ್ತಿದೆ”.  ರಾಘಣ್ಣ ಯಾವತ್ತಿಗೂ ಸುಳ್ಳು ಹೇಳುವುದಿಲ್ಲ!

“ರೀ  ಇಲ್ಲೀದ್ದೀರಾ?  ನಾನು ಎಲ್ಲ ಕಡೆ ಹುಡುಕಿಕೊಂಡು ಬಂದೆ. ಬನ್ನಿ ಸಾಕು  ಕನಸು ಕಂಡಿದ್ದು!   ಕಾಫಿ ಕುಡಿಯುವ ಸಮಯ ಆಯಿತು.  ನಾಳೆಯಿಂದ  ಮತ್ತೆ  ಕಛೇರಿಗೆ ಹೋಗಬೇಕಂತೆ” ಎನ್ನುತ್ತಾ ಮನದನ್ನೆ  ಬಂದು ಹೇಳಿದಳು.  ಕಾಫೀ ಎಂದ ತಕ್ಷಣ  ಮನಸ್ಸಿನಲ್ಲಿ ಏನೋ ಒಂದು ಉತ್ಸಾಹ.  ಎಲ್ಲವನ್ನು ಮತ್ತೆ  ಸ್ಟಾಂಡ್ ನಲ್ಲಿ  ತುರುಕಿ  ಕಾಫೀ ಕುಡಿಯಲು ಹೊರಟೆ.   ಚಪ್ಪಲಿ ಒರೆಸಿ ಆಯಿತಲ್ಲ! ನಾಳೆಯೇ ಮನೆಯವರಿಗೆ  ನಾನೇ ಒಂದು ಒಳ್ಳೆಯ ಚಪ್ಪಲಿ  ತರುತ್ತೇನೆ!  ತಾವು?

  • ರಘುರಾಂ (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW