‘ಚಾರ್ವಕ’ ಕೃತಿ ಪರಿಚಯ

ಲೇಖಕರಾದ  ಸುರೇಶ ದ್ವಾದ ಶಿವಾರ ಅವರ ಮರಾಠಿ ಮೂಲದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಚಂದ್ರಕಾಂತ ಪೋಕಳೆ ಅವರು. ಅದೇ ಚಾರ್ವಾಕ. ಈ ಕೃತಿಯ ಕುರಿತು ಓಂಕಾರ ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ :ಚಾರ್ವಾಕ
ಮರಾಠಿ ಮೂಲ: ಸುರೇಶ ದ್ವಾದ ಶಿವಾರ.
ಕನ್ನಡಕ್ಕೆ ಅನುವಾದ : ಚಂದ್ರಕಾಂತ ಪೋಕಳೆ,
ಪ್ರಕಾಶಕರು : ನವ ಕರ್ನಾಟಕ ಪಬ್ಲಿಕೇಶನ ಬೆಂಗಳೂರು.
ಬೆಲೆ : ೧೯0 ರೂಪಾಯಿ ಮಾತ್ರ.

ಚಾರ್ವಾಕ ಕೃತಿಯ ಮೂಲ ಲೇಖಕರು ಮರಾಠಿ ಲೇಖಕರಾದ ಸುರೇಶ ದ್ವಾದ ಶಿವಾರ ಅವರು, ಇವರು ವೃತ್ತಿಯಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಪಕರಾದ ಇವರು ಅಗ್ರಮಾನ್ಯ ಲೇಖಕರಾಗಿ ಸುಮಾರು ೧೭ ವರುಷ ರಾಜ್ಯ ಮರಾಠ ಸಾಹಿತ್ಯ ಸಂಘದ ಅಧ್ಯಕ್ಷರಾಗಿ, ೫ ವರುಷ ಅಖಿಲ ಭಾರತ ಮರಾಠಿ ಸಾಹಿತ್ಯ ಮಹಾಮಂಡಲ ಅಧ್ಯಕ್ಷರಾಗಿ, ೧ ವರುಷ ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಸಂಸ್ಕೃತಿ ಮಂಡಲದ ಅಧ್ಯಕ್ಷರಾಗಿ, ಲೋಕಮತ ದಿನಪತ್ರಿಕೆ ಸಂಪಾದಕರಾಗಿ, ತರುಣ ಭಾರತ ಪತ್ರಿಕೆಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ, ಲಲಿತ ಪ್ರಭಂದ, ಕಾದಂಬರಿ, ವ್ಯಕ್ತಿ ಚಿತ್ರ ಆತ್ಮಕಥೆ, ವೈಚಾರಿಕ, ರಾಜಕೀಯ ಬರಹಗಳ ಮೂಲಕ ಇವರು ಖ್ಯಾತನಾಮರಾಗಿದ್ದಾರೆ.

ಮರಾಠಿ ಮೂಲದ ಚಾರ್ವಾಕ ಕೃತಿಯ ಕನ್ನಡ ಅನುವಾದಕರು ಶ್ರೀ ಚಂದ್ರಕಾಂತ ಪೋಕಳೆ ಅವರು ಧಾರವಾಡ ವಿ. ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಸುಮಾರು ೩೫ ವರುಷಗಳ ಕಾಲ ಕನ್ನಡ ಪ್ರಾದ್ಯಪಕರಾಗಿ ಸೇವೆ ಸಲ್ಲಿಸಿರುವ ಇವರು ಚಾರ್ವಾಕ ಕೃತಿ ಸೇರಿದಂತೆ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದ ಮಾಡಿ ಖ್ಯಾತ ಅನುವಾದಕರಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವರು.

ಚಾರ್ವಾಕ ತತ್ವಶಾಸ್ತ್ರವು ಭಾರತೀಯ ಇತಿಹಾಸದಲ್ಲಿ ಶಾಶ್ವತವಾದ ಮುದ್ರೆಯನ್ನು ಬಿಟ್ಟಿರುವ ತತ್ವಶಾಸ್ತ್ರದ ಒಂದು ನಿರ್ಣಾಯಕ ವಿಷಯದಿಂದ ಕೂಡಿದ್ದು ಈ ಕೃತಿಯಲ್ಲಿ ಒಟ್ಟು ೧೫ ಲೇಖನಗಳಿವೆ. ಇಲ್ಲಿ ಜಗತ್ತು ಮತ್ತು ಚಾರ್ವಾಕ’, ‘ಧರ್ಮಗಳ ಜನ್ಮಕಥೆ ಮತ್ತು ಚಾರ್ವಾಕ’, ‘ಬುದ್ಧ ಮತ್ತು ಚಾರ್ವಾಕ’, ಹಾಗೂ ‘ಮಹಿಳೆಯರ ವರ್ಗ ಮತ್ತು ಚಾರ್ವಾಕ’ ಎಂಬ ವಿಭಿನ್ನ ನೆಲೆಗಳಲ್ಲಿ ಚಾರ್ವಾಕನ ನಿಲುವುಗಳನ್ನು ವಿಶ್ಲೇಷಿಸಿದ್ದಾರೆ.

ಪಾಂಡವರ ಕಾಲದಲ್ಲೂ ಆದರಣೀಯವಾಗಿದ್ದ, ತನ್ನದೇ ಆದ ಪುರೋಹಿತರು ಹಾಗೂ ಗ್ರಂಥಗಳನ್ನು ಹೊಂದಿದ್ದ ಚಾರ್ವಾಕ ಪಂಥದ ಒಂದೂ ಮೂಲ ಗ್ರಂಥ ಇಂದು ಇತಿಹಾಸದಲ್ಲಿ ಉಳಿದಿಲ್ಲ ಕಾರಣ ಧರ್ಮ ಮತ್ತು ಪ್ರಭುತ್ವವನ್ನು ನೇರವಾಗಿ ಪ್ರಶ್ನಿಸಿದ ಕಾರಣಕ್ಕೆ ಈ ಪರಂಪರೆಯನ್ನು ಹೇಗೆ ವ್ಯವಸ್ಥಿತವಾಗಿ ನಾಶಮಾಡಲಾಯಿತು ಎಂಬ ಕಟು ಸತ್ಯವನ್ನು ಈ ಕೃತಿಯು ಸಂಶೋಧನಾತ್ಮಕವಾಗಿ ವಿಶ್ಲೇಷಣೆ ಮಾಡಲಾಗಿದೆ.

ಕೃತಿಯ ಲೇಖಕರು ಚಾರ್ವಾಕರ ವಿಚಾರಧಾರೆಯನ್ನು ಚರ್ಚಿಸುವಾಗ ಪಾಶ್ಚಾತ್ಯ ದಾರ್ಶನಿಕರಾದ ಪ್ಲೇಟೊ ಮತ್ತು ಹಾಬ್ಸ್ ಸೇರಿದಂತೆ ಜಗತ್ತಿನ ಪ್ರಸಿದ್ಧ ಚಿಂತಕರ ವಿಚಾರಗಳನ್ನು ಮುಖಾಮುಖಿ ನಡೆಸುತ್ತಾರೆ. ಈ ಹೋಲಿಕೆಯ ಮೂಲಕ ಚಾರ್ವಾಕನ ‘ಲೋಕಾಯತ ದರ್ಶನ’ (ಜನರ ಸ್ವಂತ ಅನುಭವದ ಜ್ಞಾನ) ಹೇಗೆ ಭಿನ್ನವಾಗಿತ್ತು ಮತ್ತು ಇಂದಿನ ಆಧುನಿಕ ಪ್ರಪಂಚಕ್ಕೆ ಅದು ಏಕೆ ಅತ್ಯಗತ್ಯ ಎಂಬುದನ್ನು ಮನದಟ್ಟು ಮಾಡಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ ಅನ್ನಬಹುದು.

ಅದೇ ರೀತಿ ಸುಖ ಮತ್ತು ದೇವರ ಕಲ್ಪನೆಯ ಮರು ಚಿಂತನೆ ಕಾಲಕ್ಕೆ ತಕ್ಕಂತೆ ದೇವರ ಪರಿಕಲ್ಪನೆ ಹೇಗೆ ಬದಲಾಗುತ್ತಾ ಬಂತು ಮತ್ತು ಚಾರ್ವಾಕರು ಹೇಳಿದ ಸುಖಪ್ರಾಪ್ತಿಯ ವಿಚಾರ ಕೇವಲ ಭೋಗವಾದವಾಗಿರದೆ, ಅದೊಂದು ಲೌಕಿಕ ಜ್ಞಾನದ ಅಧ್ಯಯನವಾಗಿತ್ತು ಎಂಬುದನ್ನು ಕೃತಿ ಸ್ಪಷ್ಟಪಡಿಸುತ್ತದೆ.

ಚಂದ್ರಕಾಂತ ಪೋಕಳೆ ಅವರ ಲೇಖನಿಯಿಂದ ಕನ್ನಡಕ್ಕೆ ಅನುವಾದ ಗೊಂಡ ಈ ಕೃತಿಯು ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧ ತರ್ಕಬದ್ದವಾಗಿ ಯೋಚಿಸಲು ಓದುಗನನ್ನು ಪ್ರೇರಣೆ ನೀಡುವ ಅತ್ಯಂತ ನಿರರ್ಗಳವಾದ ಗಹನವಾದ ದಾರ್ಶನಿಕ ವಿಷಯವನ್ನೂ ಸಾಮಾನ್ಯ ಓದುಗನಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಅನ್ನಬಹುದು.

ಒಟ್ಟಾರೆಯಾಗಿ ಹೇಳುವದಾದರೆ ಪ್ರಸ್ತುತ ಕಾಲಘಟ್ಟದಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಮುಕ್ತ ಚಿಂತನೆಗೆ ಚಾರ್ವಾಕ ಪುಸ್ತಕ ದಾರಿದೀಪದಂತಿದೆ. ಕೃತಿಯು ಕೇವಲ ಇತಿಹಾಸದ ಓದಲ್ಲ, ಅದು ಇಂದಿನ ಸಮಾಜಕ್ಕೆ ಅಗತ್ಯವಿರುವ ಬೌದ್ಧಿಕ ಜಾಗೃತಿ. ಸಾಂಪ್ರದಾಯಿಕ ನಂಬಿಕೆಗಳ ಆಚೆ ನಿಂತು ಜಗತ್ತನ್ನು ಪ್ರತ್ಯಕ್ಷ ಪ್ರಮಾಣದ ಕಣ್ಣುಗಳಿಂದ ನೋಡಬಯಸುವ ಪ್ರತಿಯೊಬ್ಬ ಪ್ರಜ್ಞಾವಂತ ಓದುಗನೂ ಓದಲೇಬೇಕಾದ ಉತ್ತಮ ಕೃತಿಯಾಗಿದೆ.


  • ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading