‘ನಾವಲ್ಲ’ ಕೃತಿ ಪರಿಚಯ

ರಂಗಭೂಮಿ, ನಟನೆ, ದೂರದರ್ಶನ ಧಾರಾವಾಹಿಗಳ ನಿರ್ದೇಶನದಲ್ಲಿ ಹೆಸರು ಮಾಡಿರುವ ಲೇಖಕರಾದ ಸೇತುರಾಂ ಅವರ ಆರು ಕಥೆಗಳ ಸಂಕಲನವೇ ‘ನಾವಲ್ಲ’. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ನಾವಲ್ಲ
ಲೇಖಕರು: ಸೇತುರಾಂ.
ಎಸ್. ಎಲ್ . ಎನ್.ಪಬ್ಲಿಕೇಶನ್ ಬೆಂಗಳೂರು.
ಮುದ್ರಣದ ವರ್ಷ: ೨೦೧೭ (೯ ಮುದ್ರಣ)
ಪುಟಗಳು : ೧೨೨.
ಬೆಲೆ : ೧೦೦.

ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅವರು ಇಂದಿನ ಹದಗೆಟ್ಟ ಸಮಾಜದ ಎಲ್ಲ ರಂಗಗಳ ಬಗ್ಗೆ ಅನುಭವಗತ ಮಾಡಿಕೊಂಡಿರುವ ಸೂಕ್ಷ್ಮ ಸಂವೇದನೆಯುಳ್ಳವರು. ಪ್ರಸ್ತುತ ಈ ಪುಸ್ತಕ ೨೦೧೮ ರ ‘ಮಾಸ್ತಿ ಕಥಾಪುರಸ್ಕಾರ ‘ಪಡೆದುಕೊಂಡಿದೆ.

ಸ್ತ್ರೀಯರ ಸಾತ್ವಿಕ ಆಕ್ರೋಶದ ನೆಲೆಯ ಅಭಿವ್ಯಕ್ತಿಯನ್ನು ಬಿಂಬಿಸುವ ಇವರ ಕತ್ತಿಯಲುಗಿನಂಥ ಭಾಷೆಯೇ ಅವರ ಕಥೆಯ ಅಪೂರ್ವ ಶಕ್ತಿ. ಕೌಟುಂಬಿಕ, ಧಾರ್ಮಿಕ, ರಾಜಕೀಯ ಈ ಎಲ್ಲಾ ವ್ಯವಸ್ಥೆಯಲ್ಲಿ ರೂಪಿಸಲ್ಪಟ್ಟಿರುವ ಕಥೆಗಳು ಇಲ್ಲಿವೆ. ಕೆಲವು ಕಥೆಗಳ ಸಂಕ್ಷಿಪ್ತ ನೋಟ.

ಮೋಕ್ಷ :

ಇದು ಮಠದ ಸ್ವಾಮೀಜಿಯೊಬ್ಬರ ಹಿಂದಿನ ಬದುಕಿನ ಕಥೆ. ಸ್ವಾಮೀಜಿಯವರ ಪಾದಪೂಜೆಯೆ ಹಿಂದಿನ ಉದ್ದೇಶ,ಅವರ ವಯೋಸಹಜ ಅನಾರೋಗ್ಯ, ಜನರ ಧಾರ್ಮಿಕ ನಂಬಿಕೆ,ಟ್ರಸ್ಟಿಗಳ ರಾಜಕೀಯ,ವದಂತಿಗಳು, ಮಠದ ಆಸ್ತಿಯಕುರಿತು ಆದಾಯ ತೆರಿಗೆ ಲೆಕ್ಕಾಚಾರ, ಸ್ವಾಮಿಗಳ ಸೇವೆಗೆ ಕೇಂದ್ರ ಸರ್ಕಾರ ನೀಡಿದ ಮರಣೋತ್ತರ ಪ್ರಶಸ್ತಿ ಇವೆಲ್ಲವೂ ಮನೋಜ್ಞವಾಗಿದೆ. ವಿಹ್ವಲರಾದ ಸ್ವಾಮೀಜಿ ಕೊನೆಯಲ್ಲಿ ಪೀಠತ್ಯಾಗ ಮಾಡಿ ಮೋಕ್ಷ ಹೊಂದಿದ್ದು ಹೇಗೆಂಬುದು ಮಾತ್ರ ಬಹಳ ಕುತೂಹಲ ಮೂಡಿಸುತ್ತದೆ. ಲೇಖಕರು ಹೇಳಿದ ಕೊನೆಯ ವಾಕ್ಯ ನೋಡಿ…” ಹೊರಗಿಂದೆಲ್ಲಿ ಶಿಕ್ಷೆ?.. ಒಳಗಿಂದೇ . ಬಾಹ್ಯಕ್ಕೆ ಬಿರುದು, ಶಿಕ್ಷೆ ಆಂತರ್ಯದ್ದಲ್ವಾ?.


ಸ್ಮಾರಕ ಕಥೆಯಲ್ಲಿ ಯಾವುದೇ ಜವಾಬ್ದಾರಿಯನ್ನು ಹೊರದೇ ಸತ್ತ ಅಪ್ಪನನ್ನೇ ಪ್ರೀತಿಸುವ ಮಗಳು ಈಗ ಅಮೆರಿಕಾದಲ್ಲಿ ನೆಲೆಸಿದ್ದಾಳೆ. ಅಲ್ಲಿ ಸ್ವಂತ ಮನೆಯೊಂದನ್ನು ಖರೀದಿಸುವ ಆಸೆ ಹೊತ್ತು ಹಣಕ್ಕಾಗಿ ಹಿಂದೆ ಬೆಂಗಳೂರಲ್ಲಿ ಕೊಂಡಿದ್ದ ನಿವೇಶನವನ್ನು ಮಾರಲು ಬಯಸಿ ಸೋದರ ಮಾವನಿಗೆ ಫೋನ್ ಮಾಡುತ್ತಾಳೆ. ಬ್ಯಾಂಕೊಂದರಲ್ಲಿ ನೌಕರಿ ಮಾಡಿ ಸದ್ಯ ನಿವೃತ್ತಳಾಗಿದ್ದ ತಾಯಿಯನ್ನು ಸ್ವಾರ್ಥಿಯೆಂದು ಮಗಳು ಮಾವನಲ್ಲಿ ದೂರುತ್ತಾಳೆ. ಕಥೆಯು ಪೂರ್ತಿಯಾಗಿ ಸೋದರ ಮಾವನ ದೃಷ್ಟಿಯಲ್ಲಿ ಅವನ ತಂಗಿ, ಅವಳ ಗಂಡ ಹಾಗೂ ಅವಳ ಮಗಳು, ಕಾಣುವ ವೈವಿಧ್ಯಮಯ ಪಾತ್ರಗಳಾಗಿ ಓದುಗರಿಗೆ ಕಾಣುತ್ತಾರೆ.

ಕೊನೆಗಾಲದಲ್ಲಿ ರೋಗಿಯಾದ ತನ್ನ ಅಪ್ಪನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದು ಆರೋಪಿಸಿ, ತನ್ನನ್ನು ದ್ವೇಷಿಸುವ ಮಗಳ ವ್ಯಾವಹಾರಿಕ ಚಾಣಾಕ್ಷತೆಯನ್ನು ಅರಿತರೂ, ಸ್ವಂತಕ್ಕಾಗಿದ್ದ ಮನೆಯನ್ನು ಮಾರಿ ತಾನು ಹಣ ಹೊಂದಿಸಿದ ನಿಜವನ್ನು ಬಚ್ಚಿಟ್ಟು , ನಿವೇಶನವನ್ನೂ ಗಂಡನ ಹೆಸರಲ್ಲಿ ದಾನ ಮಾಡಿ, ಶಾಶ್ವತವಾಗಿ ಆತನ ಹೆಸರಿನ ಸ್ಮಾರಕವನ್ನಾಗಿಸುತ್ತಾಳೆ. ಸತ್ಯ ಹೇಳಿದರೆ ದೋಷ ಮುಕ್ತಳಾಗುತ್ತೇನೆ ಎಂದು ಗೊತ್ತಿದ್ದರೂ, ಹೇಳದೇ ‘ಅಪ್ಪ ಎಷ್ಟೇ ಅಯೋಗ್ಯ ಆದ್ರೂ ಅಪ್ಪ ಅಪ್ಪನೇ! ಅಮ್ಮ ಬರೀ ಅಮ್ಮ ಅಷ್ಟೇ!! ಎನ್ನುತ್ತಾ, ತ್ಯಾಗದಿಂದ ತನ್ನ ಮಾತೃತ್ವದ ಉದಾರತೆಗೆ ತಾಯಿಯೊಬ್ಬಳು ಸಾಕ್ಷಿಯಾಗುವುದು ಓದುಗನ ಮನದಲ್ಲಿ ಆದ್ರ೯ತೆ ದಕ್ಕಿಸಿಕೊಳ್ಳುತ್ತದೆ.

  • ಗಂಡನ ತಪ್ಪೇ ಬಹಳ ಇದ್ದರೂ ಮಗುವನ್ನು ಹೆರದ ಹೆಣ್ಣು* ಮೌನಿ* ಕಥೆಯ ನಾಯಕಿ ಮಂದಾಕಿನಿ.ಆಕೆ ಮದ್ಯಮ ವರ್ಗದಲ್ಲಿ ಹುಟ್ಟಿದ್ದರೂ, ಬುದ್ಧಿವಂತೆ ರೂಪವತಿ.ಪ್ರೀತಿಸಿದ ಹುಡುಗನೊಂದಿಗೆ ಹಿರಿಯರ ಒಪ್ಪಿಗೆಯ ಮೇಲೆ ಮದುವೆಯೂ ಆಗಿತ್ತು. ವಯಸ್ಸು ೩೪ ದಾಟಿದರೂ ಮಕ್ಕಳಿಲ್ಲವೆಂದು ಪೂಜೆ, ಡಾಕ್ಟರು ಎಲ್ಲಾ ಮುಗಿದು, ಮನೆಯಲ್ಲಿ ಅತ್ತೆ ಮಾವ, ಹೆತ್ತವರು ಎಲ್ಲರೂ’ ಮಗು ಮಗು ‘ಎಂದು ವರಾತ ಹಚ್ಚ ತೊಡಗಿದಾಗ, ಕೊನೆಗೂ ಕೃತಕ ಗರ್ಭಧಾರಣೆಯ ನೋವು ಸಂಕಟದಲ್ಲಿ ನರಳಿ ಬಸುರಾಗಿದ್ದಳು.

ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಕುಣಿದಾಡಿದರು. ಸೀಮಂತ ಮುಗಿದ ನಂತರ ತವರಿಗೆ ಹೆರಿಗೆಗೆ ಕಳಿಸಲು ಅತ್ತೆ ಒಪ್ಪಿರಲಿಲ್ಲ. ಇಲ್ಲೇ ದೊಡ್ಡ ಡಾಕ್ಟ್ರು ಇದ್ದಾರೆ. ನಂಗೂ ಹೆಣ್ಣುಮಕ್ಕಳಿಲ್ಲ. ಅವಳಿಲ್ಲೇ ಇರಲಿ ಎಂದಿದ್ದರು. ಕೊನೆಗೆ ಇಬ್ಬರೂ ಇದ್ದು ಬಾಣಂತನ ಮಾಡೋದು.. ಎನ್ನೋ ಟರಾವಲ್ಲಿ ಜುಗಲ್ ಬಂಧಿ ಮುಗಿದಿತ್ತು.

ಆದರೆ ಆರು ತಿಂಗಳಿಗೆ ಹುಟ್ಟಿದ ಮಗು ಸತ್ತಿತ್ತು.! ಅಲ್ಲಿಂದ ಇವಳನ್ನು ಕೊಲೆಗಾರ್ತಿಯಂತೆ ಬಿಂಬಿಸಿದ ಮನೆಯವರ ದೂಷಣೆಗೆ ಅವಳು ಮೌನಕ್ಕೆ ಜಾರಿದ್ದಳು.ಮನೆಯಲ್ಲಿ ಸೂತಕದ ಛಾಯೆ. ಅದು ಬಹಳ ದಿನ ಅವಳಿಗೆ ಒಗ್ಗಲಿಲ್ಲ.ಅವಳಿಗೆ ಮುದ, ಮಾತು ಎಲ್ಲವೂ ಬೇಕಿತ್ತು. ಸತ್ತದ್ದು ಮಗುವೇ ಹೊರತು ಅಮ್ಮ ಅಲ್ಲ. ಇಲ್ಲಿ ತನ್ನದೇನು ತಪ್ಪು?.. ಅನ್ನಿಸತೊಡಗಿತ್ತು.

“ವಿದ್ಯೆಯ ಸರಸ್ವತಿಗೆ ಮಕ್ಳಿಲ್ಲ. ಸುಖದ ಲಕ್ಷ್ಮಿಗೆ ಮಕ್ಳಿಲ್ಲ. ಹಸಿವು ನೀಗುವ ಅನ್ನಪೂರ್ಣೇಶ್ವರಿಗೆ ಸಂತಾನವೇ ಇಲ್ಲ. ಕಾಯೋ ದೇವಿ ದುರ್ಗೆನೂ ಬಂಜೆನೇ. ಹೆರೋರು ತಾಯಿ ಆದ್ರು. ಹೆರದೋರು ದೇವರಾದ್ರು. ತಾಯಾಗ್ಲಿಲ್ಲ ಬಿಡು. ದೇವಿ ಆಗ್ತೀನಿ.”… ಎನ್ನುತ್ತಾ..ತಾನೇ ಈಗ ಸಂಸಾರ ಸರಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ ಮಂದಾಕಿನಿ ಅವರನ್ನೆಲ್ಲಾ ಮನುಷ್ಯರನ್ನಾಗಿಸಲು ಮಾಡಿದ್ದೇನು?….. ಮುಂದೆ ಓದಿ…..

ಕಾತ್ಯಾಯಿನಿ ಜೀವನದ ಕರಾಳ ಮುಖವನ್ನು ಹಿಡಿದು ತೋರಿಸುವ ಬಡ ಅಡಿಗೆಯವಳ ಮಗಳು. ತಾನು ಪ್ರೀತಿಸಿದ ವ್ಯಕ್ತಿಗೆ ತನ್ನ ಮನದಮಾತನ್ನು ಹೇಳಲಾಗದೇ ಪರಿಸ್ಥಿತಿಗೆ ತಲೆಬಾಗಿ ಮನೆಯವರೊಪ್ಪಿದ ಗಂಡಿನ ಕೈ ಹಿಡಿದು ದೂರದ ಬಾಂಬೆಗೆ ನಡೆದಳು. ಮೇಲ್ನೋಟಕ್ಕೆ ಎಲ್ಲಾ ಅನುಕೂಲವಿದ್ದರೂ, ಇವಳಲ್ಲಿ ಆಸಕ್ತಿ ಇಲ್ಲದ ಸಲಿಂಗಕಾಮಿ ಒಲ್ಲದ ಗಂಡನಿಗೆ ನಿಷ್ಠಳಾಗಿದ್ದಳು . ಈ ನಡುವೆ ಬುದ್ಧಿಮಾಂದ್ಯ ಮಗನ ತಾಯಾಗಿ ಸಾಕಷ್ಟು ಅವಸ್ಥೆ ಪಟ್ಟಳು.

ಇಪ್ಪತ್ತು ವರ್ಷಗಳ ನಂತರ ಅವಳು ಬೆಂಗಳೂರಿಗೆ ಬಂದಿದ್ದಳು. ಹಿಂದೆ ತಾನು ಪ್ರೀತಿಸಿದ್ದ ಹುಡುಗ ಈಗ ಪ್ರಸಿದ್ಧ ಕ್ರಿಮಿನಲ್ ಲಾಯರ್ ಆಗಿದ್ದನ್ನು ತಿಳಿದು ಸಲಿಂಗಕಾಮಿ, ಭ್ರಷ್ಟಗಂಡನನ್ನು ಕಾಪಾಡುವ ಹೊಣೆ ಹೊತ್ತ ಪತಿವ್ರತೆ ಕಾತ್ಯಾಯಿನಿಯ ಮಾನವೀಯತೆ ನಮ್ಮನ್ನು ಬೆರಗಾಗುವಂತೆ ಮಾಡುತ್ತದೆ. ಕೋರ್ಟ್ ಕೇಸ್ ಪ್ರಯುಕ್ತ ಆಗಾಗ ಗೆಳೆಯ ಲಾಯರ್ ಬಳಿ ಬರುತ್ತಿದ್ದ ಕಾತ್ಯಾಯಿನಿ ಆತನಿಗೆ ಹೇಳಿದ ವ್ಯಥೆಯ ಕಥೆಯೇನು?… ಗಂಡನಿಗಾಗಿ ಹೋರಾಡಿದ ಅವಳಿಗೆ ನ್ಯಾಯ ಕೊಡಿಸುವಲ್ಲಿ ಲಾಯರ್ ಸಫಲನಾದನೇ ?
ಮತ್ತೆ ಕೆಲವು ವರ್ಷಗಳ ಬಳಿಕ ಅವಳು ಡೈವೋರ್ಸ್ ಬೇಕೆಂದು ಬಂದವಳು ‘ಮನುಷ್ಯತ್ವ ಇಲ್ಲದ ಮನುಷ್ಯನನ್ನು ಉಳಿಸಿ ತಪ್ಪು ಮಾಡಿದೆ ‘ ಅಂದಿದ್ದಳು.

ತನ್ನನ್ನು ಗಂಗೆಗೆ ಹೋಲಿಸಿಕೊಳ್ಳುವ ಕಾತ್ಯಾಯಿನಿ ಈಗ ಜೀವನಕ್ಕೆ ಸಾಕಷ್ಟು ಹಣವಿದ್ದರೂ, ಪ್ಯಾರಲೈಸಿಸ್ ಗಂಡನ ಅಸಹಾಯಕತೆ ನೋಡಿ , ಮರುಗಿ ಅವನಿಗೆ ಸಹಾಯ ಮಾಡುವ ಆಸೆ ಹೊತ್ತು , ಡೈವೋರ್ಸ್ ಕ್ಯಾನ್ಸಲ್ ಮಾಡಿಸಲು ಸಾಧ್ಯಾನಾ?.. ಎಂದು ಲಾಯರಲ್ಲಿ ಕೇಳುವುದು ವಿಸ್ಮಯವೆನ್ನಿಸುತ್ತದೆ.

  • ತನ್ನದೇನೂ ತಪ್ಪಿಲ್ಲದಿದ್ದರೂ, ತಿರುಗಿದ್ಲು, ನೋಡಿದ್ಲು, ಕುಸುದ್ಲು , ಕೈ ಮುಗುದ್ಲು. ಎಂಬ ಲೇಖಕರ ವಾಕ್ಯಗಳು ಬಹಳಷ್ಟು ಹೇಳುತ್ತವೆ. ಪ್ರಪಂಚದ ಸುಖ ತ್ಯಜಿಸಿ ವಿರಕ್ತೀಲಿ ಕೂತೋಳನ್ನ *ಅಕ್ಕ ಅಂದ್ವಿ .ಇವಳು ಬದುಕಿಗಂಟಿಕೊಂಡು ತನ್ನನ್ನ ತಾನು ತ್ಯಜಿಸಿ ನಿಂತಿದ್ದಾಳೆ. ಏನನ್ನಲಿ ಇವಳನ್ನ? ಅಕ್ಕನ ಅಕ್ಕ ಅನ್ನಲಾ?.
  • ಅವಳ ಕೆನ್ನೆಯ ಮೇಲೆ ನೀರಿತ್ತು. ಮುಖದಲ್ಲಿ ನಗುವಿತ್ತು.ಭಾವದಲ್ಲಿ ಸಾವಿತ್ತು.ಸಂಬಂಧ ಸತ್ತಿತ್ತು. ಇಂತಹ ಸಾಲುಗಳು ಮನ ಸೆಳೆಯುತ್ತವೆ.

ಹೆಣ್ಣುಮಕ್ಕಳ ಸ್ವಾಭಿಮಾನ ಹಾಗೂ ಅಸ್ಥಿತ್ವಕ್ಕಾಗಿ ಹೋರಾಟ ಇಲ್ಲಿನ ಪ್ರಭಲ ಹಾಗೂ ಧನಾತ್ಮಕ ಅಂಶವಾಗಿ ನಿರೂಪಿಸಲ್ಪಟ್ಟಿದೆ. ತಡವಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟರೂ ಅಂತರಾಳಕ್ಕೆ ಕನ್ನಡಿ ಹಿಡಿಯುವಂತಾ ಸತ್ವಯುತ ಕಥೆಗಳನ್ನು ಸೇತುರಾಮ್ ಅವರು ಕಟ್ಟಿ ಕೊಟ್ಟಿದ್ದಾರೆ ಎಂಬುದಾಗಿ ಖ್ಯಾತ ಸಾಹಿತಿ ಸಿ. ಎನ್. ರಾಮಚಂದ್ರನ್ ಅವರು ಬೆನ್ನುಡಿಯಲ್ಲಿ ಹೇಳಿದ ಮಾತುಗಳು ಸತ್ಯ. ಇನ್ನುಳಿದ ತುಂಬಾ ಸೊಗಸಾದ ಕಥೆಗಳನ್ನು ನೀವೂ ಓದಿರಿ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading