ಪೈಸೆ ಪೈಸೆಯನ್ನೂ ಮಾಡಬಾರದು ವ್ಯರ್ಥ, ದುಡಿಮೆಯಿಂದಲೇ ಸಿಗುವುದು ಬದುಕಿಗೆ ಅರ್ಥ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಮಾಡಬೇಕು ನಾವು ನಿತ್ಯವೂ ದುಡಿಮೆ
ಮಾಡಬೇಕು ನಾವು ಖರ್ಚು ಆದಷ್ಟು ಕಡಿಮೆ
ನಿತ್ಯ ಕಾಯಕದಿ ಇರಲಿ ನಮ್ಮ ಒಲುಮೆ
ಚಿಮ್ಮಲಿ ಬಾಳಲ್ಲಿ ನೆಮ್ಮದಿಯ ಚಿಲುಮೆ
ನಾವು ಎಷ್ಟು ದುಡಿದರೂ ಸಾಲದು ಇಂದು
ಮಿತವ್ಯಯ ರೂಪಿಸಿಕೊಳ್ಳಬೇಕು ಎಂದೆಂದೂ
ಪೈಸೆ ಪೈಸೆಯನ್ನೂ ಮಾಡಬಾರದು ವ್ಯರ್ಥ
ದುಡಿಮೆಯಿಂದಲೇ ಸಿಗುವುದು ಬದುಕಿಗೆ ಅರ್ಥ
ದುಡಿಮೆಯಿಂದಲೇ ಸರ್ವತೋಮುಖ ಏಳಿಗೆ
ಶಾಂತಿ ನೆಮ್ಮದಿ ದೊರೆಯುವುದು ನಮ್ಮ ಬಾಳಿಗೆ
ದುಡಿತದ ಒಂದು ಭಾಗವನ್ನು ಉಳಿಸಬೇಕು
ಆಡಂಬರದ ಶೋಕಿತನವನ್ನ ದೂರವಿಡಬೇಕು
ದುಂದುವೆಚ್ಚ ಆಗುವುದು ಬದುಕಿಗೆ ದುಬಾರಿ
ಸರಳ ಸಜ್ಜನಿಕೆಯ ಜೀವನ ಮೌಲ್ಯ ಅರಿಯಿರಿ
ಇದುವೇ ಜಗದಿ ಯಶಸ್ವಿ ಬದುಕಿಗೆ ರಹದಾರಿ
ನಾಳೆಯ ಭವ್ಯ ಭವಿಷ್ಯ ರೂಪಿಸಲು ಸಹಕಾರಿ
- ನಾಗರಾಜ ಜಿ. ಎನ್. ಬಾಡ, ಕುಮಟ
