ನಾ ನೋಡಿದ ಇಂಗ್ಲಿಷ್ ಸಿನಿಮಾ “ಒಡಿಸ್ಸಿ”

“ಒಡಿಸ್ಸಿ” ಸಿನಿಮಾ ಇಂದಿನ ಜಗತ್ತಿಗೂ ಪ್ರಸ್ತುತವಾಗಿರುವ ಅಮರ ಯಾನ.  ಯುದ್ಧದ ನಾಯಕನಾಗಿದ್ದ ಒಡಿಸ್ಸಿಯಸ್ ಕಾಣೆಯಾಗಿದ್ದಾನೆ. ಅವನು ಬದುಕಿದ್ದಾನೋ, ಸತ್ತಿದ್ದಾನೋ ಎಂಬುದು ಯಾರಿಗೂ ತಿಳಿದಿಲ್ಲ. ಇತ್ತ ‘ಇಥಾಕಾ’ದಲ್ಲಿ ಅವನ ಪತ್ನಿ ಪೆನೆಲೋಪೆ ವರಗಳಿಂದ (Suitors) ಮರು ಮದುವೆಯ ಒತ್ತಡವನ್ನು ಎದುರಿಸುತ್ತಿದ್ದಾಳೆ. ಎನ್.ವಿ.ರಘುರಾಂ ಅವರು “ಒಡಿಸ್ಸಿ” ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಹೋಮರ್ ರಚಿಸಿದ ಗ್ರೀಕರ ಮಹಾಕಾವ್ಯಗಳಲ್ಲಿ ಒಂದಾಗಿರುವ “ಒಡಿಸ್ಸಿ” ಈಗ ಸಿನಿಮಾ ರೂಪದಲ್ಲಿ ಬಂದಿದೆ ಎಂದು ತಿಳಿದಾಗ ಕುತೂಹಲ ಮೂಡುವುದು ಸಹಜ. ಸಿನಿಮಾ ನೋಡಿದ ಮೇಲೆ ಈ ಕಥೆ ಈಗಲೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲವೆಂದು ತಿಳಿದರೆ ಆಶ್ಚರ್ಯವಿಲ್ಲ.

ಆರಂಭದ ದೃಶ್ಯವೇ ಚಿತ್ರದ ಇಡೀ ಆಶಯವನ್ನು ಸೂಚಿಸುವಂತಿದೆ. ಟ್ರೋಜನ್ ಯುದ್ಧ ಮುಗಿದು ಹಲವು ವರ್ಷಗಳು ಕಳೆದಿವೆ. ಆದರೆ ಯುದ್ಧದ ನಾಯಕನಾಗಿದ್ದ ಒಡಿಸ್ಸಿಯಸ್ ಕಾಣೆಯಾಗಿದ್ದಾನೆ. ಅವನು ಬದುಕಿದ್ದಾನೋ, ಸತ್ತಿದ್ದಾನೋ ಎಂಬುದು ಯಾರಿಗೂ ತಿಳಿದಿಲ್ಲ. ಇತ್ತ ‘ಇಥಾಕಾ’ದಲ್ಲಿ ಅವನ ಪತ್ನಿ ಪೆನೆಲೋಪೆ ವರಗಳಿಂದ (Suitors) ಮರು ಮದುವೆಯ ಒತ್ತಡವನ್ನು ಎದುರಿಸುತ್ತಿದ್ದಾಳೆ. ತಂದೆಯ ಮುಖವನ್ನೇ ಕಾಣದೆ ಬೆಳೆದ ಮಗ ಟೆಲೆಮಾಕಸ್ ತನ್ನ ತಂದೆಯ ಸುಳಿವಿಗಾಗಿ ಹುಡುಕಾಟ ಆರಂಭಿಸುತ್ತಾನೆ. ಇಲ್ಲಿಂದಲೇ ಒಡಿಸ್ಸಿಯಸ್ ತನ್ನ ಮನೆಗೆ ಮರಳುತ್ತಾನೆಯೇ ಎಂಬ ಚಿತ್ರದ ಕೇಂದ್ರ ಪ್ರಶ್ನೆ ಎದುರಾಗುತ್ತದೆ.

ಅಲ್ಲಿಂದ ಕಥೆ ಟ್ರೋಜನ್ ಕುದುರೆಯ ಪ್ರಸಂಗಕ್ಕೆ ಸಾಗುತ್ತದೆ. ಯುದ್ಧದ ರಣರಂಗವನ್ನು ಅಥವಾ ರಕ್ತಪಾತವನ್ನು ವೈಭವೀಕರಿಸುವ ಬದಲು, ಮರದ ಕುದುರೆಯೊಳಗೆ ಮೌನವಾಗಿ ಕುಳಿತಿರುವ ಗ್ರೀಕ್ ಯೋಧರ ಉದ್ವಿಗ್ನ ಕ್ಷಣಗಳನ್ನು ನಿರ್ದೇಶಕರು ಕಟ್ಟಿಕೊಡುತ್ತಾರೆ. ಆ ಯೋಜನೆಯ ಹಿಂದಿರುವುದು ಒಡಿಸ್ಸಿಯಸ್‌ನ ಬುದ್ಧಿವಂತಿಕೆ, ತಾಳ್ಮೆ ಮತ್ತು ಸಮಯಪ್ರಜ್ಞೆ. ಈ ಒಂದು ದೃಶ್ಯವೇ ಅವನ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.

ಈ ಚಿತ್ರದಲ್ಲಿ ಕೇಳಿಬರುವ “ಎದುರಾಳಿಗಿಂತ ಶಕ್ತಿಶಾಲಿಯಾಗಿರ ಬೇಕಿಲ್ಲ, ಆದರೆ ಬುದ್ಧಿವಂತನಾಗಿರ ಬೇಕು” ಎಂಬ ಸಂಭಾಷಣೆ ಇಡೀ ಕಥೆಯ ಸಾರವನ್ನು ಹೇಳುತ್ತದೆ. ಒಡಿಸ್ಸಿಯಸ್ ಗೆಲ್ಲುವುದು ಕತ್ತಿಯ ಬಲದಿಂದ ಮಾತ್ರವಲ್ಲ, ತನ್ನ ವಿವೇಕ, ಚಾತುರ್ಯ ಮತ್ತು ಸೂಕ್ತ ನಿರ್ಧಾರಗಳಿಂದ. ಆದ್ದರಿಂದಲೇ ಅವನು ಇತರ ಯೋಧರಿಂದ ಭಿನ್ನವಾಗಿ ನಿಲ್ಲುತ್ತಾನೆ.
ಚಿತ್ರದ ಆರಂಭವೇ ಇನ್ನೊಂದು ಮಹತ್ವದ ಸತ್ಯವನ್ನು ತಿಳಿಸುತ್ತದೆ. ಯುದ್ಧದಲ್ಲಿ ಗೆಲುವು ಸಾಧಿಸುವುದೇ ಅಂತಿಮ ವಿಜಯವಲ್ಲ. ಪ್ರತಿಯೊಂದು ಗೆಲುವಿಗೂ ಒಂದು ಬೆಲೆ ಇರುತ್ತದೆ. ಟ್ರಾಯ್ ಗೆದ್ದ ನಂತರವೇ ಒಡಿಸ್ಸಿಯಸ್‌ನ ನಿಜವಾದ ಹೋರಾಟ ಆರಂಭವಾಗುತ್ತದೆ. ತನ್ನ ಮನೆ, ತನ್ನ ಕುಟುಂಬವನ್ನು ಮತ್ತೆ ತಲುಪುವ ಆ ದೀರ್ಘ ಪ್ರಯಾಣವೇ ಚಿತ್ರದ ನಿಜವಾದ ಕಥೆ.

ಹೀಗಾಗಿ ಒಡಿಸ್ಸಿಯ ಮೊದಲ ದೃಶ್ಯಗಳಿಂದಲೇ ನಿರ್ದೇಶಕರು ಒಂದು ಶಾಶ್ವತ ಸತ್ಯವನ್ನು ಹೇಳುತ್ತಾರೆ: ನಿಜವಾದ ನಾಯಕ ಎಂದರೆ ಕೇವಲ ಬಲಶಾಲಿಯಾದ ಯೋಧನಲ್ಲ; ಧೈರ್ಯದ ಜೊತೆಗೆ ವಿವೇಕ, ಶಕ್ತಿಯ ಜೊತೆಗೆ ಸಂಯಮ ಮತ್ತು ವಿಜಯದ ಜೊತೆಗೆ ವಿನಯವನ್ನು ಹೊಂದಿರುವ ಮನುಷ್ಯ. ಅದಕ್ಕಾಗಿಯೇ ಹೋಮರ್‌ನ ಈ ಮಹಾಕಾವ್ಯ ಸುಮಾರು ಮೂರು ಸಾವಿರ ವರ್ಷಗಳಾದರೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ.

ಮುಖ್ಯ ಪಾತ್ರದಲ್ಲಿ ಮ್ಯಾಟ್ ಡೇಮನ್ ಒಡಿಸ್ಸಿಯಸ್‌ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೇವಲ ಅಜೇಯ ಯೋಧನಾಗಿ ಅಲ್ಲದೇ, ಯುದ್ಧದ ಗಾಯಗಳನ್ನು ಹೊತ್ತಿರುವ, ನೆನಪುಗಳ ಭಾರದಿಂದ ಬಳಲುತ್ತಿರುವ ಮತ್ತು ತನ್ನ ಕುಟುಂಬವನ್ನು ಸೇರುವ ಏಕೈಕ ಕನಸಿನೊಂದಿಗೆ ಬದುಕುತ್ತಿರುವ ಮನುಷ್ಯನಾಗಿ ಮ್ಯಾಟ್ ಡೇಮನ್ ಪಾತ್ರದಲ್ಲಿ ಜೀವಿಸಿದ್ದಾರೆ. ಅವರ ಅಭಿನಯದಲ್ಲಿ ಶಕ್ತಿ ಮತ್ತು ಸೂಕ್ಷ್ಮ ಭಾವನೆಗಳು ಸಮಾನವಾಗಿ ಬೆರೆತಿವೆ.

ಪೆನೆಲೋಪೆಯ ಪಾತ್ರದಲ್ಲಿ ಆನ್ ಹ್ಯಾಥವೇ ಅವರ ಅಭಿನಯ ಮನಮುಟ್ಟುತ್ತದೆ. ಅವರು ಕೇವಲ ಕಾಯುತ್ತಿರುವ ಪತ್ನಿಯಾಗಿ ಮಾತ್ರವಲ್ಲದೇ ಆಶೆ, ತಾಳ್ಮೆ ಮತ್ತು ಆತ್ಮಗೌರವದ ಪ್ರತೀಕವಾಗಿ ಮೂಡಿ ಬರುತ್ತಾರೆ. ಟೆಲೆಮಾಕಸ್ ಪಾತ್ರದಲ್ಲಿ ಟಾಮ್ ಹಾಲೆಂಡ್ ಯುವಕನ ಆತಂಕ, ಕುತೂಹಲ ಮತ್ತು ದೃಢತೆಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ರಾಬರ್ಟ್ ಪ್ಯಾಟಿನ್ಸನ್ ಸೇರಿದಂತೆ ಇತರ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮತ್ತೊಮ್ಮೆ ತಮ್ಮ ಅದ್ಭುತ ನಿರ್ದೇಶನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ವಿಶಾಲವಾದ ಸಮುದ್ರ, ನಿಸರ್ಗದ ವೈಭವ, ಕಣ್ಣಿಗೆ ಹಬ್ಬವಾಗುವ ಛಾಯಾಗ್ರಹಣ, ಪರಿಣಾಮಕಾರಿ ದೃಶ್ಯ ವೈಭವ ಮತ್ತು ಮನಸ್ಸನ್ನು ಆವರಿಸಿಕೊಳ್ಳುವ ಹಿನ್ನೆಲೆ ಸಂಗೀತವೆಲ್ಲವೂ ಸೇರಿ ಪ್ರೇಕ್ಷಕರನ್ನು ಒಡಿಸ್ಸಿಯಸ್‌ನ ದೀರ್ಘ ಯಾತ್ರೆಯ ಭಾಗವಾಗಿಸುತ್ತವೆ. ಈ ಚಿತ್ರವನ್ನು ಕೇವಲ ಪೌರಾಣಿಕ ಸಾಹಸ ಕಥೆಯಾಗಿ ರೂಪಿಸದೆ, ಯುದ್ಧದ ಪರಿಣಾಮಗಳು, ನಾಯಕತ್ವದ ಹೊಣೆಗಾರಿಕೆ ಮತ್ತು ‘ಮನೆ’ ಎಂಬ ಪದದ ನಿಜವಾದ ಅರ್ಥವನ್ನು ಅನ್ವೇಷಿಸುವ ಮಾನವೀಯ ಕೃತಿಯನ್ನಾಗಿ ನೋಲನ್ ರೂಪಿಸಿದ್ದಾರೆ.

“ಗೆಲುವು ಎಂದರೇನು?”, “ಯುದ್ಧ ಗೆದ್ದವನು ನಿಜಕ್ಕೂ ಅದೇ ವ್ಯಕ್ತಿಯಾಗಿ ಮನೆಗೆ ಮರಳುತ್ತಾನೆಯೇ?” ಎಂಬ ಪ್ರಶ್ನೆಗಳನ್ನು ನಮ್ಮ ಮನದಲ್ಲಿ ಸಿನಿಮಾ ಮೂಡಿಸುತ್ತದೆ.
ಈ ಚಿತ್ರದ ಅತ್ಯಂತ ದೊಡ್ಡ ಶಕ್ತಿ ಅದು ಪ್ರತಿಪಾದಿಸುವ ಮಾನವೀಯತೆ. ರಾಕ್ಷಸರು, ದೇವತೆಗಳು ಮತ್ತು ಅದ್ಭುತ ದ್ವೀಪಗಳು ಕಥೆಯ ಹೊರಗಿನ ಪ್ರಪಂಚ ಮಾತ್ರ. ನಿಜವಾದ ಸಂಘರ್ಷ ನಡೆಯುವುದು ಒಡಿಸ್ಸಿಯಸ್ ಅಂತರಂಗದಲ್ಲಿ. ಪ್ರತಿಯೊಂದು ಪ್ರಲೋಭನೆ, ಪ್ರತಿಯೊಂದು ಸೋಲು, ಪ್ರತಿಯೊಂದು ನಿರ್ಧಾರವೂ ಒಡಿಸ್ಸಿಯಸ್‌ನ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋಗುತ್ತದೆ. ಕೊನೆಗೆ ಅವನು ತಲುಪುವುದು ಕೇವಲ ತನ್ನ ರಾಜ್ಯವನ್ನಲ್ಲ; ತನ್ನ ನಿಜವಾದ ಆತ್ಮವೇ ಆಗಿದೆ.

ಗ್ರೀಕ್ ಮಹಾಕಾವ್ಯದ ಭಾಗವಾಗಿ ಬಂದಿರುವ ಈ ಸಿನಿಮಾದಲ್ಲಿರುವ ಅನೇಕ ಘಟನೆಗಳು ಮತ್ತು ಸಂಗತಿಗಳು ನಮ್ಮ ಭಾರತದ ಮಹಾಕಾವ್ಯಗಳ ಘಟನೆಗಳನ್ನು ನೆನಪಿಸುತ್ತಾ ಸಾಗುತ್ತದೆ. ಉದಾಹರಣೆಗೆ ಚಿತ್ರದ ಕೊನೆಯ ಹಂತದಲ್ಲಿ ಬರುವ ವರಗಳ ಕೌಶಲ ಪರೀಕ್ಷೆ ಏಕ ಕಾಲಕ್ಕೆ ಶ್ರೀ ರಾಮ ಮಿಥಿಲೆಯಲ್ಲಿ ಶಿವ ಧನುಸ್ಸನ್ನು ಎತ್ತಿರುವುದನ್ನು ಮತ್ತು ಅರ್ಜುನ ನೀರಿನ ಪ್ರತಿಬಿಂಬ ನೋಡಿ ಮೀನಿನ ಕಣ್ಣಿಗೆ ಬಾಣ ಬಿಟ್ಟಿರುವ ಘಟನೆಗಳನ್ನು ನೆನಪಿಸುತ್ತದೆ. ಈ ರೀತಿ ಚಿತ್ರದಲ್ಲಿರುವ ಅನೇಕ ವಿಷಯಗಳು ನಮ್ಮನ್ನು ಕಥೆಗೆ ಇನ್ನಷ್ಟು ಹತ್ತಿರ ಮಾಡುತ್ತವೆ.

ಚಿತ್ರದ ಉದ್ದಕ್ಕೂ ಮತ್ತೆ ಮತ್ತೆ ಕೇಳಿಬರುವ ಒಂದು ಮಹತ್ವದ ಪರಿಕಲ್ಪನೆ ‘ಜೀಯಸ್‌ನ ನಿಯಮ’ (Zeus’ Law). ಇದು ಪ್ರಾಚೀನ ಗ್ರೀಕ್ ಸಂಸ್ಕೃತಿಯಲ್ಲಿ ‘ಕ್ಸೇನಿಯಾ’ (Xenia) ಎಂದು ಕರೆಯಲ್ಪಡುವ ಆತಿಥ್ಯದ ಪವಿತ್ರ ಧರ್ಮ. ಅಪರಿಚಿತ ಅತಿಥಿಯನ್ನು ಗೌರವದಿಂದ ಸ್ವಾಗತಿಸುವುದು, ಅವನಿಗೆ ಆಹಾರ, ಆಶ್ರಯ ಮತ್ತು ರಕ್ಷಣೆ ನೀಡುವುದು ಆತಿಥೇಯನ ಕರ್ತವ್ಯ. ಅದೇ ರೀತಿ ಅತಿಥಿಯೂ ಆತಿಥೇಯನ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳದೆ ಗೌರವದಿಂದ ನಡೆದುಕೊಳ್ಳಬೇಕು. ಈ ನಿಯಮವನ್ನು ಪಾಲಿಸದವರಿಗೆ ಜೀಯಸ್ ದೇವರು ಶಿಕ್ಷೆ ಕೊಡುತ್ತಾನೆ ಎಂದು ಗ್ರೀಕರು ನಂಬುತ್ತಿದ್ದರು.

ಸಮುದ್ರಯಾನದ ದಾರಿಯಲ್ಲಿ ಎದುರಾದ ಒಕ್ಕಣ್ಣಿರುವ ದೈತ್ಯ ಯಾರು? ಸಮುದ್ರಯಾನ ಮಾಡುವಾಗ ಸಮುದ್ರ ದೇವರು ಮುನಿಸಿಕೊಂಡು ತೊಂದರೆ ಕೊಟ್ಟನೆ? ಸೂರ್ಯ ದೇವನ ದ್ವೀಪದಲ್ಲಿ ಏನಾಯಿತು? ಕಿವಿಗೆ ಮೇಣ ಏಕೆ ಇಟ್ಟುಕೊಂಡರು? ಈ ಎಲ್ಲಾ ಘಟನೆಗಳಲ್ಲಿ ಜೀಯಸ್ ನಿಯಮವನ್ನು ಮುರಿದವರು ಯಾರು? ಅವರಿಗೆ ಏನಾಯಿತು? ಇನ್ನೂ ಅನೇಕ ವಿಷಯಗಳನ್ನು ತಿಳಿಯಲು ಸಿನಿಮಾ ನೋಡಬೇಕು.

ಒಡಿಸ್ಸಿ ಕೇವಲ ಒಂದು ಪ್ರಾಚೀನ ಗ್ರೀಕ್ ಮಹಾಕಾವ್ಯದ ಚಲನಚಿತ್ರ ರೂಪಾಂತರವಲ್ಲ. ಅದು ಮಾನವನ ಬದುಕಿನ ಹೋರಾಟ, ಪ್ರೀತಿ, ನೆನಪು, ಭರವಸೆ ಮತ್ತು ಮನೆಗೆ ಮರಳುವ ಹಂಬಲದ ಸಾರ್ವಕಾಲಿಕ ಕಥೆಯಾಗಿದೆ. ಸಾಹಿತ್ಯಪ್ರಿಯರಿಗೆ, ಪುರಾಣಾಸಕ್ತರಿಗೆ ಅಥವಾ ಸಿನಿಮಾ ಪ್ರೇಮಿಗಳಿಗೆ ಈ ಚಿತ್ರ ಆಳವಾದ ಅನುಭವವನ್ನು ನೀಡುತ್ತದೆ. ಅಶಾಂತಿಯಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ಇದು ನಮಗೆ ಒಂದು ಮಹತ್ವದ ಸತ್ಯವನ್ನು ನೆನಪಿಸುತ್ತದೆ: ಸಮುದ್ರಗಳನ್ನಲ್ಲ, ತನ್ನ ಅಂತರಂಗವನ್ನೇ ಜಯಿಸಿದವನಿಗೆ ಮಾತ್ರ ನಿಜವಾದ ಮನೆಗೆ ಮರಳುವ ಭಾಗ್ಯ ದೊರೆಯುತ್ತದೆ. ಅದಕ್ಕಾಗಿಯೇ ‘ಒಡಿಸ್ಸಿ’ ಒಬ್ಬ ಯೋಧನ ಸಾಹಸಯಾತ್ರೆಯ ಕಥೆಯಾಗಿ ಮಾತ್ರ ಉಳಿಯದೆ, ಪ್ರತಿಯೊಬ್ಬ ಮನುಷ್ಯನ ಜೀವನಯಾನದ ರೂಪಕವಾಗುತ್ತದೆ.

ಇಂದಿನ ಜಗತ್ತಿನಲ್ಲಿಯೂ ಬಲಕ್ಕಿಂತ ಬುದ್ಧಿ, ದ್ವೇಷಕ್ಕಿಂತ ಕರುಣೆ, ಅಧಿಕಾರಕ್ಕಿಂತ ಮೌಲ್ಯಗಳೇ ಮನುಷ್ಯನನ್ನು ಅಂತಿಮವಾಗಿ ಮನೆಗೆ ತಲುಪಿಸುತ್ತವೆ ಎಂಬುದನ್ನು ‘ಒಡಿಸ್ಸಿ’ ಮನೋಜ್ಞವಾಗಿ ಸಾರುತ್ತದೆ.

ಉತ್ತಮ ಸಿನಿಮಾ. ಸಾಧ್ಯವಾದರೆ ನೋಡಿ. ಸುಮಾರು ಮೂರು ಗಂಟೆಗಳ ಸಿನಿಮವಾದರೂ ಸಮಯ ಹೋಗಿದ್ದು ತಿಳಿಯುವುದಿಲ್ಲ.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading