ಈ ಪದ್ಯದಲ್ಲಿ ಸೂರ್ಯನು ತನ್ನ ಕಿರಣಗಳಿಂದ ಸಕಲ ಚರಾಚರಗಳನ್ನು ಅವರಿಸಿಕೊಳ್ಳುವುದರ ಬಗ್ಗೆ ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ ಕವಿತೆಯ ಅರ್ಥವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ,
ನೋಡು, ಸುಲ್ತಾನನರಮನೆಯ ಗೋಪುರಕೆ
ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ
ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ
ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ,
ಅತ್ತಣ – ಆ ಕಡೆಯಲ್ಲಿ, ಮೂಡಲ್ = ಮೂಡಿದ,
ಬೇಡನ್ = ಬೇಡರವನು ಬೇಟೆಗಾರನು.
ದುಡುಕಿ = ಅವಸರಿಸಿ,
ಪೂರ್ವದ ಆ ಕಡೆಯಲ್ಲಿ ಬೇಡರವನು ಅವಸರಿಸಿ ಬಂದು ಈಗ,
ನೋಡು, ಸುಲ್ತಾನನರಮನೆಯ ಗೋಪುರಕೆ
ಸುಲ್ತಾನರ ಅರಮನೆಯ ಗೋಪುರಕ್ಕೆ,
ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ
ಹೂಡು = ಆರಂಭಿಸು, ಉಪಕ್ರಮಿಸು,
ಬೀರಿ = ಎಸೆದು.
ತನ್ನ ಹಗ್ಗದ ಕುಣಿಕೆಯನ್ನು ಎಸೆದು ಉಪಕ್ರಮಿಸುತ್ತಿದ್ದಾನೆ,
ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ
ಓ ಮುಗ್ಧೆಯೇ, ನೀನದನ್ನು ನೋಡು ಬಾ, ಹಾಗೆಯೇ ನಿನ್ನ ಪ್ರೀತಿಯನ್ನು ಕೊಡುವವಳಾಗು. ಪರ್ಸಿಯಾ ದೇಶದ ಮರಳುಗಾಡುಗಳಲ್ಲಿ ಸೂರ್ಯನನ್ನು ಪೂರ್ವ ದಿಕ್ಕಿನ ಬೇಟೆಗಾರನೆಂದು ಪರಿಗಣಿಸುತ್ತಾರೆ.
ಹಿಂದಿನ ಪದ್ಯದಲ್ಲಿ ಸೂರ್ಯೋದಯದ ವರ್ಣನೆಯನ್ನು ಮಾಡಿದ ಕವಿ ಈ ಪದ್ಯದಲ್ಲಿ ಸೂರ್ಯನು ತನ್ನ ಕಿರಣಗಳಿಂದ ಸಕಲ ಚರಾಚರಗಳನ್ನು ಅವರಿಸಿಕೊಳ್ಳುವುದನ್ನು ಬೇಡನೊಬ್ಬನು ತನ್ನ ಹಗ್ಗದ ಕುಣಿಕೆಯನ್ನು ಅಥವಾ ಬಳೆಯನ್ನು ಎಸೆಯುವುದಕ್ಕೆ ಹೋಲಿಸುತ್ತಿದ್ದಾನೆ.
ಆ ಮೂಡಣದ ಬೇಡರವನು ಎಸೆದ ಹಗ್ಗದ ಬಲೆಯು ಸುಲ್ತಾನನಅರಮನೆಯ ಗೋಪುರವನ್ನು ಉಪಕ್ರಮಿಸಿದೆ ಎನ್ನುತ್ತಾನೆ ಕವಿ ಉಮರ್. ಬೇಡನು ಸುಲ್ತಾನನ ಅರಮನೆಗೆ ಬಲೆಬೀಸಿದನೆಂಬುದು ಅಸಹಜವೆನಿಸುತ್ತದೆ. ಇಲ್ಲಿ ಕವಿ ಸುಲ್ತಾನನ ಶ್ರೀಮಂತಿಕೆ, ಅರಮನೆಯ ಸೌಭಾಗ್ಯವಾದ ಲೌಕಿಕವಾದ ಸುಖೋಪಭೋಗ ಕುರಿತು ಹೇಳಿದಂತಿದೆ. ಇದನ್ನು ಕಾಣದ ಕೈಯೆನಿಸಿದ ವಿಧಿಯು ಸೂರೆಗೊಳ್ಳುತ್ತದೆ ಎಂಬ ಅಧ್ಯಾತ್ಮದ ಧ್ವನಿಯನ್ನೂ ಈ ಪದ್ಯ ಸಂಕೇತಿಸುತ್ತದೆ.
“ಮೂಡಣದ ಬೇಟೆಗಾರನು ಅರಮನೆಯ ಸುಖೋಪಭೋಗಗಳನ್ನು ಸೂರೆಗೊಳ್ಳಲು ಅರಮನೆಯ ಗೋಪುರಕ್ಕೆ ತನ್ನ ಕುಣಿಕೆಯನ್ನೆಸೆದು ಸಿದ್ಧನಾಗುತ್ತಿದ್ದಾನೆ.
ಓ ನನ್ನ ಪ್ರಿಯತಮೆಯೇ ಇಲ್ಲಿ ಜೀವನದ ಸುಖವನ್ನು, ಸಾರ ಸರ್ವಸ್ವವನ್ನೂ ನಿನ್ನೊಡನೆ ಸೇರಿ ಸೂರೆ ಮಾಡಲು , ನಾನೂ ನಿನ್ನನ್ನು ಎಚ್ಚರಿಸುತ್ತಿದ್ದೇನೆ.
ಏಳೆನ್ನ ಪ್ರಿಯತಮೆಯೇ ಏಳು… ಎದ್ದು ನಿನ್ನ ಒಲವನ್ನು ನೀಡು ಎಂದು ಕೋರುತ್ತಿದ್ದಾನೆ. ”
ಓ ನನ್ನ ಮುಗ್ಧ ಹೆಣ್ಣೇ, ಈಗಲೇ ಹೊತ್ತಾಗಿದೆ. ಇನ್ನು ತಡ ಮಾಡದೇ ನಿನ್ನ ಪ್ರೀತಿಯನ್ನು ನನಗೆ ನೀಡು ಎಂದು ಪ್ರೇಮವನ್ನು ಕೋರುವ ಭಾವ, ಈ ಪದ್ಯದ್ದು.
ಇಲ್ಲಿಯೂ ಸಹ ಕವಿ ಉಮರನು ಪ್ರಿಯತಮೆಯನ್ನು ಓಲೈಸುವುದರ ಮೂಲಕ ಬುದ್ದಿಯನ್ನು ಪ್ರಚೋದಿಸಿ ಜೀವನವನ್ನು ಸುಂದರಗೊಳಿಸಲು ಒಲಿದು ಸಹಕರಿಸು ಎಂದು ಪ್ರಾರ್ಥಿಸುತ್ತಿದ್ದಾನೆ.
ಮುಂದುವರೆಯುವುದು.
ಹಿಂದಿನ ಸಂಚಿಕೆಗಳು :
- ರವೀಂದ್ರ ಕುಮಾರ್ ಎಲ್ವಿ – ಮೈಸೂರು.
