ವಯಸ್ಸನ್ನು ನಿಭಾಯಿಸಲು ಬೇಕಾಗಿರುವುದು ಸಣ್ಣ ಸಣ್ಣ ಸಂತೋಷಗಳೇ ಹೊರತು, ದೊಡ್ಡ ಸಾಧನೆಗಳೇನಲ್ಲ.ಕಥಾ ಪ್ರಸಂಗದಲ್ಲಿ ಬರುವ ಕಥೆಗಳಲ್ಲಿ ಈ ಸಂತೋಷಗಳ ಬಗ್ಗೆ ಬಹಳಷ್ಟು ವ್ಯಾಖ್ಯಾನಗಳಿವೆ. ನನಗೆ ಬಹಳ ಇಷ್ಟವಾಗಿದ್ದು ʻತೇರೆ ಮನ್ ಕಿ ಜಮುನಾʼ ಕಥೆಯನ್ನು ಬರೆದ ರೀತಿ. ನಮ್ಮ ವೃದ್ದಾಪ್ಯದಲ್ಲಿ ಎಲ್ಲರಿಂದ ತಿರಸ್ಕೃತರಾಗಿ, ಅಥವಾ ಇನ್ನೊಬ್ಬರ ಅನುಕೂಲಕ್ಕೆ ತಕ್ಕಂತೆ ಬದುಕುವ ಮನಸ್ಥಿತಿಗೆ ತಲುಪಲೇ ಬೇಕಾದ ಅನಿವಾರ್ಯತೆ ನಮಗೆ ಎದುರಾಗುತ್ತದೆ ಎನ್ನುವುದು ಸತ್ಯ. – ಮಾಕೋನಹಳ್ಳಿ ವಿನಯ್ ಮಾಧವ್, ತಪ್ಪದೆ ಮುಂದೆ ಓದಿ …
ಪುಸ್ತಕ : ಚಿಯರ್ಸ್
ಲೇಖಕರು : ಜೋಗಿ
ಪ್ರಕಾಶನ: ಸಾವಣ್ಣಾ ಪ್ರಕಾಶನ
ಪುಟಗಳು:192
ಬೆಲೆ: 150/-
ಹೋದ ವಾರ ಊರಿಗೆ ಹೊರಟಾಗ, ಹಾಸನದಲ್ಲಿ ನನ್ನ ಮಗಳಿಗೆ ತಿನ್ನಲು ಏನಾದರೂ ಕೊಡಿಸೋಣ ಎಂದು ಹೋಟೆಲ್ ಗೆ ನುಗ್ಗಿದಾಗ, ಮೂಲೆಯಿಂದ ಚರಣ್ ಕೈ ಎತ್ತಿ ವಿಷ್ ಮಾಡಿದ. ಅವನು ಬೆಂಗಳೂರಿಗೆ ಹೊರಟಿದ್ದನಂತೆ. ಚರಣ್ ತಂದೆ ನಂದೀಪುರ ಜಯರಾಮಣ್ಣ ಮತ್ತು ಅಣ್ಣ (ಅಪ್ಪ) ಚಿಕ್ಕಂದಿನಿಂದ ಒಳ್ಳೆಯ ಗೆಳೆಯರು. ಹೆಚ್ಚು ಕಡಿಮೆ ಒಂದೇ ವಯಸ್ಸಿನವರು.
ನಾನೂ ಮತ್ತು ಚರಣ್ ಅವರಿಬ್ಬರಷ್ಟು ಆತ್ಮೀಯರೇನೂ ಅಲ್ಲ. ಆದರೂ, ಶ್ರೀಮಂತಿಕೆಯಲ್ಲಿ ಬೆಳೆದರೂ, ಸ್ವಲ್ಪವೂ ಅಹಂಕಾರ ಬೆಳೆಸಿಕೊಳ್ಳದ ಚರಣ್ ಸಿಕ್ಕಾಗ ಚೆನ್ನಾಗಿಯೇ ಮಾತನಾಡುತ್ತೇವೆ. ಒಂದೆರೆಡು ನಿಮಿಷ ಮಾತನಾಡಿ ಅಲ್ಲಿಂದ ಹೊರಟಾಗ ಅಂತಹ ವಿಶೇಷವೇನೂ ಇರಲಿಲ್ಲ.
ಮಾರನೇಯ ದಿನ ಮದ್ಯಾಹ್ನ ನಾನು ಆ ಒಂದು ಫೋಟೋವನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ ತಕ್ಷಣ ಚರಣ್ ಎಮೋಷನಲ್ ಆಗಿ, ʻವಿನಯ್, ನಿನಗೆ ಹೇಗೆ ಥ್ಯಾಂಕ್ಸ್ ಹೇಳಬೇಕು ಅಂತ ಗೊತ್ತಿಲ್ಲ. ಮುಂದಿನ ಸಲ ನೀನು ಊರಿಗೆ ಬಂದಾಗ ಒಂದು ಡ್ರಿಂಕ್ ಗೆ ಸಿಗಲೇ ಬೇಕು,ʼ ಎಂದು ಮೆಸೆಜ್ ಹಾಕಿದ.
ಆಗಿದ್ದಿಷ್ಟು. ನಾನು ಊರಿಗೆ ಹೋದ ಮಾರನೇ ದಿನ ಬೆಳಗ್ಗೆ, ಅಲ್ಲಿಗೆ ಎರಡು ದಿನ ಮುಂಚೆಯೇ ಬಂದಿದ್ದ ನನ್ನ ಅಣ್ಣ ವೆಂಕಟೇಶ್ ಬೆಂಗಳೂರಿಗೆ ಹೊರಟಿದ್ದ. ಹೊರಡುವ ಮುನ್ನ, ʻಅಣ್ಣ (ಅಪ್ಪ), ಪುಟ್ಟಣ್ಣನನ್ನು ನೋಡಬೇಕು ಅಂತಿದ್ದಲ್ಲ. ವಿನಯ್ ಜೊತೆ ಹೋಗು,ʼ ಎಂದು ಹೇಳಿದ.
ಅಣ್ಣ ಸಂಕೋಚದಿಂದ, ʻನಿನಗೆ ಏನಾದರೂ ಕೆಲಸ ಇದೆಯೋ ಏನೋ?ʼ ಎಂದು ನನ್ನ ಕಡೆಗೆ ನೋಡಿದರು. ʻನನಗೇನು ಕೆಲಸ. ಕರ್ಕೊಂಡು ಹೋಗ್ತೀನಿ ಬಿಡಿ,ʼ ಎಂದೆ.
ಡಿ ಎಂ ಪುಟ್ಟಣ್ಣ ಮತ್ತು ಅಣ್ಣ ಸಹ, ದಾಯಾದಿಗಳು ಎನ್ನುವುದಕ್ಕಿಂತ, ಚಿಕ್ಕಂದಿನಿಂದ ಸ್ನೇಹಿತರು ಎಂದೇ ಹೇಳಬಹುದು. ಅಣ್ಣನಿಗಿಂತ ಎರಡು ವರ್ಷ ಚಿಕ್ಕವರು ಎಂದರೆ ಅವರಿಗೆ ಈಗ ಎಂಬತ್ತ ಒಂಬತ್ತು ವರ್ಷ. ಆ ಸಮಕಾಲೀನರಲ್ಲಿ, ನನ್ನ ಕುಟುಂಬದಲ್ಲಿ ಉಳಿದಿರುವುದು ಅಣ್ಣ ಮತ್ತು ಪುಟ್ಟಣ್ಣನನ್ನು ಸೇರಿಸಿದರೆ ನಾಲ್ಕೇ ಜನ.
ಹಿಂದಿನ ದಿನದ ಕುಟುಂಬದ ಒಂದು ಸಮಾರಂಭಕ್ಕೆ, ಪುಟ್ಟಣ್ಣ ಹುಷಾರಿಲ್ಲ ಅಂತ ಬಂದಿರಲಿಲ್ಲ. ಹಾಗಾಗಿ, ಅವರನ್ನು ನೋಡಬೇಕು ಅಂತ ಅಣ್ಣನಿಗೆ ಅನ್ನಿಸಿತ್ತು ಅಂತ ಕಾಣುತ್ತೆ.
ಪುಟ್ಟಣ್ಣ ಚಿಕ್ಕಯ್ಯನ ಮನೆಗೆ ಹೊರಟಾಗ ದಾರಿಯಲ್ಲಿ ಅಣ್ಣ ಮೆಲ್ಲಗೆ ಹೇಳಿದರು: ʻವಿಜು (ಅಮ್ಮ) ಹೇಳಿದಳು, ಹಾಗೆಯೇ ನಂದಿಪುರ ಜಯರಾಮನನ್ನೂ ನೋಡಿಕೊಂಡು ಬರಬಹುದಲ್ಲ ಅಂತ.ʼ
ʻಸರಿ ಬಿಡಿ, ಪುಟ್ಟಣ್ಣ ಚಿಕ್ಕಯ್ಯನ ಮನೆಯಿಂದ ಅಲ್ಲಿಗೂ ಹೋಗಿ ಬಂದರೆ ಆಯಿತು. ಅದರಲ್ಲೇನಿದೆ? ಮೊನ್ನೆ ಚರಣ್ ಹಾಸನದಲ್ಲಿ ಸಿಕ್ಕಿದ್ದ. ಬೆಂಗಳೂರಿಗೆ ಹೋಗಿದ್ದಾನೆʼ ಎಂದು ಹೇಳಿದೆ. ಅಣ್ಣ ತಲೆ ಅಲ್ಲಾಡಿಸಿದರು.
ಎರಡು ಬಾರಿ ಎಂ ಪಿ ಆಗಿ, ಒಂದು ಬಾರಿ ಎಂ ಎಲ್ ಸಿ ಸಹ ಆಗಿದ್ದ ಪುಟ್ಟಣ್ಣ ಚಿಕ್ಕಯ್ಯನಿಗೆ ಇತ್ತೀಚೆಗೆ ಸ್ವಲ್ಪ ಸುಸ್ತು ಜಾಸ್ತಿ. ಆದರೂ, ಊರಿನ ಹೊಸ ಸ್ಮಶಾಣ, ದೇವಸ್ಥಾನದ ಭಟ್ಟರಿಗೆ ಇರಲು ಮನೆ, ಊರಿನ ಹಬ್ಬಗಳು, ಮಾಕೋನಹಳ್ಳಿ ಸರ್ಕಾರಿ ಶಾಲೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ನಮ್ಮ ಕುಟುಂಬದ ಎಲ್ಲರಿಗೂ ಫೋನ್ ಮಾಡಿ ತಿಳಿದುಕೊಂಡು, ಅದನ್ನು ಹೇಗೆ ನಡೆಸಬೇಕು ಎನ್ನುವುದರ ಬಗ್ಗೆಯೂ ಎಲ್ಲರಿಗೂ ಹೇಳುತ್ತಿರುತ್ತಾರೆ. ಹಾಗೆಯೇ, ತಮ್ಮ ಐಪ್ಯಾಡಿನಲ್ಲಿ, ಪ್ರಪಂಚದಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಗೂಗಲ್ ಸರ್ಚ್ ಸಹ ಮಾಡುತ್ತಿರುತ್ತಾರೆ.
ಅವರ ಇಬ್ಬರು ಮೊಮ್ಮಕ್ಕಳು ಸಹ ಮನೆಯಲ್ಲಿಯೇ ಇದ್ದರು. ಮೊದಲನೆಯವನು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಕೋವಿಡ್ ಸಮಯದಲ್ಲಿ ʻವರ್ಕ್ ಫ್ರಮ್ ಹೋಂʼ ಆರಂಭವಾದಾಗ ಊರಿಗೆ ಬಂದವನು, ಇನ್ನೂ ಹೋಗಿಲ್ಲ. ʻಇನ್ನೂ ಆರು ತಿಂಗಳು ವರ್ಕ್ ಫ್ರಂ ಹೋಂʼ ಅಂತ ಯೋಚಿಸಿದ್ದೇನೆ. ಅಲ್ಲಿ ಆಫೀಸಿಗೆ ಹೋಗಲೇಬೇಕು ಎಂದು ಹೇಳಿದಾಗ ಹೋಗುತ್ತೇನೆ. ಇಲ್ಲೇ ಖುಷಿಯಾಗಿದ್ದೇನೆ,ʼ ಎಂದು ನಕ್ಕ. ಎರಡನೆಯವನು ಮುಂದಿನ ತಿಂಗಳು ಎಂ ಎಸ್ ಮಾಡಲು ಅಮೆರಿಕಾಗೆ ಹೊರಟಿದ್ದಾನೆ. ನಮಗೆ ಕಾಫಿ, ತಿಂಡಿ ಕೊಡುವ ಕೆಲಸವನ್ನು ಆ ಎರಡು ಮಕ್ಕಳೇ ಮಾಡಿದವು.
ಅಣ್ಣ ಮತ್ತು ಪುಟ್ಟಣ್ಣ ಮಾತನಾಡಲು ಶುರು ಮಾಡಿದಾಗ, ನಾನು ಆ ಎರಡು ಮಕ್ಕಳ ಜೊತೆ ಹೊರಗೆ ಬಂದೆ. ಏಕೋ ಖುಷಿಯಾಯಿತು. ಪುಟ್ಟಣ್ಣ ಚಿಕ್ಕಯ್ಯನ ಮಗ ಮನು ಅಣ್ಣ ತೋಟಕ್ಕೆ ಹೋಗಿದ್ದ. ಈ ವಯಸ್ಸಿನಲ್ಲಿ ಹೆಂಡತಿ, ಮಗ, ಸೊಸೆ ಮತ್ತು ಮೊಮ್ಮಕ್ಕಳ ಜೊತೆ ಒಂದು ಎಸ್ಟೇಟಿನಲ್ಲಿ ಇರುವ ಭಾಗ್ಯ ಎಷ್ಟು ಜನರಿಗಿದೆ?
ವೆಂಕಟೇಶಣ್ಣ ತಿಂಗಳಿಗೆ ಎರಡು-ಮೂರು ಸಲ ಊರಿಗೆ ಹೋದಾಗ ಬಿಟ್ಟರೆ, ಬಹುತೇಕ ಸಮಯ ನಮ್ಮ ಮನೆಯಲ್ಲೂ ಅಮ್ಮ ಮತ್ತು ಅಣ್ಣ ಇಬ್ಬರೇ. ನನ್ನ ಕುಟುಂಬದ ಬಹುತೇಕ ಮನೆಗಳು ವೃದ್ದಾಶ್ರಮಗಳೇ. ಮೊದಲೆಲ್ಲ ಓದು ಮುಗಿಸಿ ಹೊರಗಡೆ ಕೆಲಸಕ್ಕೆ ಹೋಗುವವರನ್ನು ನೋಡಿದಾಗ ಹೆಮ್ಮೆಯಾಗುತ್ತಿತ್ತು. ಈಗ, ಓದು ಮುಗಿಸಿ ಊರಿಗೆ ಬರುತ್ತೇವೆ ಎನ್ನುವ ಹುಡುಗರನ್ನು ನೋಡಿದರೆ ನನಗೆ ಗೌರವ ಮೂಡುತ್ತದೆ. ನನ್ನ ಊರಿನ ಇತ್ತೀಚಿನ ಪೀಳಿಗೆಯಲ್ಲಿ, ಅಭಿ, ಕಿರಣ್, ಕೌಶಿಕ್, ಹೃಷಿಕೇಶ್, ಕುಲದೀಪ್ ಮುಂತಾದವರು ಹಿಂದುರುಗಿ ಬಂದಿದ್ದಾರೆ. ಅಂತಹ ಹತ್ತಾರು ಹುಡುಗರಿಂದಲೇ ನನ್ನ ಕುಟುಂಬ ಇನ್ನೂ ಉಸಿರಾಡುತ್ತಿದೆ ಎಂದೆನಿಸುತ್ತಿದೆ.
ಇದರ ಮಧ್ಯೆ ಪುಟ್ಟಣ್ಣ ಚಿಕ್ಕಯ್ಯ ಮತ್ತು ಅಣ್ಣನ ಮಾತು ನಡೆದೇ ಇತ್ತು. ಊರಿನ ಪರಿಸ್ಥಿತಿ, ಮೊದಲು ಹೇಗಿತ್ತು ಎನ್ನುವುದರಿಂದ ಆರಂಭವಾಗಿ, ಆರೋಗ್ಯದ ವಿಷಯದಲ್ಲಿ ಎಷ್ಟು ಸಂಶೋಧನೆಗಳಾಗಿವೆ ಎನ್ನುವುದನ್ನು ಗೂಗಲ್ ಮೂಲಕ ಅಧ್ಯಯನ ಮಾಡಿರುವ ಇಂಜಿನೀಯರ್ ಪುಟ್ಟಣ್ಣ ಚಿಕ್ಕಯ್ಯ, ಸ್ವತಃ ವೈದ್ಯರಾದ ಅಣ್ಣನಿಗೆ ಹೇಳಿ ಕೊಡುತ್ತಿದ್ದರು. ಸಮಯ ನೋಡಿದರೆ, ಅವರಿಬ್ಬರೂ ಮಾತು ಆರಂಭಿಸಿ ಒಂದೂವರೆ ಘಂಟೆ ದಾಟಿತ್ತು. ಹೀಗೆ ಇವರನ್ನು ಬಿಟ್ಟರೆ, ನಂದೀಪುರ ಜಯರಾಮಣ್ಣ ನಿದ್ರೆ ಮಾಡಿರುತ್ತಾರೆ ಅಂತ ಅನ್ನಿಸಿ, ಅಣ್ಣನನ್ನು ಎಬ್ಬಿಸಿಕೊಂಡು ನಂದೀಪುರದ ಕಡೆಗೆ ಹೊರಟೆ.
ನನ್ನ ಎಣಿಕೆ ತಪ್ಪಾಗಿರಲಿಲ್ಲ. ಜಯರಾಮಣ್ಣ ಮಲಗಿದ್ದರು. ಚರಣ್ ಬೆಂಗಳೂರಿಗೆ ಹೋಗಿದ್ದ ಪ್ರಯುಕ್ತ, ಅವರನ್ನು ನೋಡಿಕೊಳ್ಳಲು ಇದ್ದ ಒಬ್ಬ ನರ್ಸ್ ಮತ್ತು ಒಂದು ಕೆಲಸದ ಹೆಂಗಸನ್ನು ಬಿಟ್ಟರೆ ಮನೆಯಲ್ಲಿ ಯಾರೂ ಇರಲಿಲ್ಲ. ಕೆಲಸದ ಹೆಂಗಸು ಒಳಗೆ ಹೋಗಿ ಡಾ ಮಾಧವ ಗೌಡರು ಬಂದಿದ್ದಾರೆ ಎಂದ ತಕ್ಷಣವೇ ಎದ್ದು ಹೊರಗೆ ಬಂದವರೇ, ʻನೀನು ಬಂದಿದ್ದು ಒಳ್ಳೆಯದಾಯ್ತು ಮಾರಾಯ. ಹತ್ತು ನಿಮಿಷ ಬೇಗ ಬರೋದಲ್ವಾ? ತನೂಡಿ ಜಗದೀಶ್ ಹೆಗಡೆ ಬಂದಿದ್ದ. ನೀವಿಬ್ಬರೂ ಕ್ಲೋಸ್ ಫ್ರೆಂಡ್ಸ್ ಅಲ್ವಾ? ನಿನಗೂ ಸಿಕ್ಕುತ್ತಿದ್ದ. ರಾಜೀವನ ಮನೆಗೆ ಊಟಕ್ಕೆ ಕರೆದಿದ್ದಾರೆ ಅಂತ ಹೋದ,ʼ ಎಂದರು.
ʻಅಯ್ಯೋ ರಾಮಾ… ಪುಟ್ಟಣ್ಣನ ಮನೆಗೆ ಹೋಗಿದ್ದೆ. ಅವನ ಜೊತೆ ಮಾತಾಡ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಇವನು ಹೇಳದೇ ಹೋಗಿದ್ದರೆ, ಇನ್ನೂ ಹೊತ್ತಾಗ್ತಾ ಇತ್ತು. ಜಗದೀಶ ಸಿಕ್ಕಿ ಬಹಳ ದಿನ ಆಯ್ತು. ಇವತ್ತೂ ಸಿಗಲಿಲ್ಲ,ʼ ಅಂತ ಅಣ್ಣ ಪೇಚಾಡಿಕೊಂಡರು.
ಗುಂಡು, ಸಿಗರೇಟ್ ಗಳಿಂದ ದೂರವೇ ಇದ್ದ ಅಣ್ಣ ಮತ್ತು ಪುಟ್ಟಣ್ಣ ಚಿಕ್ಕಯ್ಯನ ಮಾತು ಒಂದು ದಾರಿಯಲ್ಲಿ ಸಾಗಿದರೆ, ಗುಂಡು ಮತ್ತು ಶಿಕಾರಿ ಪ್ರಿಯರಾಗಿದ್ದ ಜಯರಾಮಣ್ಣನ ಮಾತಿನ ಲಹರಿಯೇ ಬೇರೆ ಇತ್ತು. ʻಯಾಕೋ ಇತ್ತೀಚೆಗೆ ಆಗಲ್ಲ ಕಣೋ ಮಾಧು. ಮೊದಲೆಲ್ಲ ನೋಡು. ಮಾಕೋನ ಹಳ್ಳಿ ರಾಮ ಮಂದಿರಕ್ಕೆ ಯಾವಾಗಲೂ ಬರುತ್ತಿದ್ದೆ. ಹುಚ್ಚು ಮಾವನ ಹತ್ತಿರ (ಎಂ ಪಿ ಆಗಿದ್ದ ದಿ ಮಾಕೋನ ಹಳ್ಳಿ ಹುಚ್ಚೇ ಗೌಡರು) ಮಿಲಿಟರಿ ಬ್ರಾಂಡಿ ಪರ್ಮಿಟ್ ಇತ್ತು. ಯಾವಾಗಲೂ ಶಿಕಾರಿ ಮತ್ತೆ ಮಿಲಿಟರಿ ಬ್ರಾಂಡಿ ಪಾರ್ಟಿಗಳು ಎಷ್ಟು ಚೆನ್ನಾಗಿರುತ್ತಿತ್ತು. ಈಗ ಶಿಕಾರಿ ನಿಂತೇ ಹೋಗಿದೆ ನೋಡು,ʼ ಎನ್ನುತ್ತಾ ತಮ್ಮ ಗತಕಾಲದ ವೈಭವದತ್ತ ಜಾರಿದರು.
ಈ ಮಾತುಗಳ ಮಧ್ಯೆ ನಾನು ಒಂದೆರೆಡು ಫೋಟೋ ಕ್ಲಿಕ್ಕಿಸಿ, ಅದನ್ನು ಚರಣ್ ಗೆ ರವಾನಿಸಿದ್ದೆ. ಮನೆಯಲ್ಲಿ ಅಪ್ಪ ಒಬ್ಬರೇ ಇದ್ದಾರೆ ಎನ್ನುವ ಯೋಚನೆಯಲ್ಲಿದ್ದ ಚರಣ್, ಅವರನ್ನು ನೋಡಲು ಅವರಷ್ಟೇ ವಯಸ್ಸಿನ ಅಣ್ಣ ಬಂದದ್ದು ಗೊತ್ತಾಗಿ ಎಮೋಷನಲ್ ಆಗಿದ್ದ. ಅಮ್ಮ, ಅಣ್ಣನನ್ನು ನೋಡಿಕೊಳ್ಳಲಾಗದಿದ್ದರೂ, ಅವರ ಗೆಳೆಯರ ಬಳಿ ಕರೆದುಕೊಂಡು ಹೋಗಿ, ಇಂತಹ ಸಣ್ಣ ಸಂತೋಷವನ್ನು ನೀಡಿದಕ್ಕೆ ನನಗೆ ತೃಪ್ತಿಯಾಗಿತ್ತು.
ಇಂತಹ ಸಣ್ಣ ಘಟನೆಗೆ ಒಂದು ಅರ್ಥ ಬಂದಿದ್ದು ಜೋಗಿ ಬರೆದ ಚಿಯರ್ಸ್ ಪುಸ್ತಕ ಓದಿದಾಗ. ಅದರ ಮೊದಲ ಅಧ್ಯಾಯವಾದ ʻತೊಂಬತ್ತರ ತಾರುಣ್ಯದಲ್ಲಿ ಸಾಯೋಣʼ, ʻrat raceʼ ನಲ್ಲಿ ಬಿದ್ದಂತೆ, ಬೆಳವಣಿಗೆ ಮತ್ತು ಆರ್ಥಿಕತೆಯ ಗುಂಗಿನಲ್ಲಿ ಓಡುತ್ತಿರುವವರಿಗೆ, ಒಮ್ಮೆಲೆ ಬ್ರೇಕ್ ಹಾಕಿದ ಅನುಭವ ಕೊಡುತ್ತದೆ. ಆದರೆ, ಬ್ರೇಕ್ ಹಾಕುವಂತಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುತ್ತದೆ.
ಏಕೆಂದರೆ, ʻಒಳ್ಳೆಯ ಬದಕುʼ ಕಟ್ಟಿಕೊಳ್ಳುವ ಕನಸಿನಲ್ಲಿ ತಮ್ಮ ಊರನ್ನು ಬಿಟ್ಟವರದು ಒನ್ ವೇ ರಸ್ತೆಯ ಪಯಣ. ಮುಂದೆ ʻu̲-turnʼ ಇರುವ ಸಿಗ್ನಲ್ ಬರುವ ವರೆಗೆ ಹಿಂದುರುಗಿ ಹೋಗುವಂತಿಲ್ಲ. ಅಂತಹ ಸಿಗ್ನಲ್ ಬರುತ್ತೆ ಅನ್ನುವ ಗ್ಯಾರಂಟಿಯೂ ನಮಗಿಲ್ಲ. ಇದರ ಮಧ್ಯೆ, ನಮ್ಮ ಕನಸುಗಳೆಲ್ಲ ಮರೀಚಿಕೆಗಳೆಂಬ ಸತ್ಯವೂ ಅರಿವಾಗುತ್ತದೆ. ನಾವು ನುಣುಚಿಕೊಂಡ ಜವಾಬ್ದಾರಿಗಳಿಂದ ಒಂದೆಡೆ ಪಾಪ ಪ್ರಜ್ಞೆ ಕಾಡಿದರೆ, ಇನ್ನೊಂದೆಡೆ, ಅದೇ ಸಂದಿಗ್ಧ ಪರಿಸ್ಥಿತಿ ನಮಗೆ ಕಾಯುತ್ತಿದೆ ಎನ್ನುವ ಸತ್ಯದ ಅರಿವೂ ಆಗಲು ಆರಂಭವಾಗುತ್ತದೆ. ಎಪ್ಪತ್ತರ ನಂತರದ ಭಯಾನಕ ಚಿತ್ರ ನಮ್ಮನ್ನು ಕಂಗಾಲುಗೊಳಿಸುತ್ತದೆ.
ಆದರೆ, ಈ ವಯಸ್ಸನ್ನು ನಿಭಾಯಿಸಲು ಬೇಕಾಗಿರುವುದು ಸಣ್ಣ ಸಣ್ಣ ಸಂತೋಷಗಳೇ ಹೊರತು, ದೊಡ್ಡ ಸಾಧನೆಗಳೇನಲ್ಲ. ಕಥಾ ಪ್ರಸಂಗದಲ್ಲಿ ಬರುವ ಕಥೆಗಳಲ್ಲಿ ಈ ಸಂತೋಷಗಳ ಬಗ್ಗೆ ಬಹಳಷ್ಟು ವ್ಯಾಖ್ಯಾನಗಳಿವೆ. ನನಗೆ ಬಹಳ ಇಷ್ಟವಾಗಿದ್ದು ʻತೇರೆ ಮನ್ ಕಿ ಜಮುನಾʼ ಕಥೆಯನ್ನು ಬರೆದ ರೀತಿ. ನಮ್ಮ ವೃದ್ದಾಪ್ಯದಲ್ಲಿ ಎಲ್ಲರಿಂದ ತಿರಸ್ಕೃತರಾಗಿ, ಅಥವಾ ಇನ್ನೊಬ್ಬರ ಅನುಕೂಲಕ್ಕೆ ತಕ್ಕಂತೆ ಬದುಕುವ ಮನಸ್ಥಿತಿಗೆ ತಲುಪಲೇ ಬೇಕಾದ ಅನಿವಾರ್ಯತೆ ನಮಗೆ ಎದುರಾಗುತ್ತದೆ ಎನ್ನುವುದು ಸತ್ಯ. ಆದರೆ, ಆ ಪರಿಸ್ಥಿತಿಯನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಬಾಲುವಿನ ವ್ಯಕ್ತಿತ್ವ ನನಗೆ ಬಹುಕಾಲ ಮನಸ್ಸಿನಲ್ಲಿ ಉಳಿಯುವುದಂತೂ ಗ್ಯಾರಂಟಿ.
ಕೆಲವು ವರ್ಷಗಳ ಕೆಳಗೆ ʻತಾಲ್ʼ ಎನ್ನುವು ಚಲನಚಿತ್ರದಲ್ಲಿ, ಅನಿಲ್ ಕಪೂರ್ ತನ್ನ ಜೀವನದಲ್ಲಿ ತಾನು ಬೇಕಾದುದನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆ ಎಂದು ನಂಬಿರುತ್ತಾನೆ. ಅದರಂತೆಯೇ, ಅವನು ಐಶ್ವರ್ಯ ರೈ ಅನ್ನು ಮದುವೆಯಾಗಲು ಸಿದ್ದನಾಗುತ್ತಾನೆ. ಆದರೆ, ಐಶ್ವರ್ಯ ರೈ ಮೊದಲು ಅಕ್ಷಯ್ ಖನ್ನಾನನ್ನು ಪ್ರೀತಿಸಿರುವ ವಿಷಯ ತಿಳಿದಿರುತ್ತದೆ. ಆದರೆ, ಬೇಕಾದುದನ್ನು ಪಡೆಯಲೇ ಬೇಕು ಎನ್ನುವ ಹಠದಲ್ಲಿ ಮದುವೆಗೆ ಸಿದ್ದನಾಗುತ್ತಾನೆ. ಮದುವೆಯ ದಿನ ಆತನಿಗೆ ಐಶ್ವರ್ಯ ತನ್ನನ್ನು ಯಾವುದೇ ಕಾರಣಕ್ಕೂ ಪ್ರೀತಿಸಲಾರಳು ಎನ್ನುವ ಸತ್ಯ ಗೊತ್ತಾಗಿ, ಆಕೆಯನ್ನು ಅಕ್ಷಯ್ ಖನ್ನನಿಗೆ ಬಿಟ್ಟುಬಿಡುತ್ತಾನೆ. ತನ್ನ ಪ್ರೀತಿಯನ್ನು ಬಿಟ್ಟು ಕೊಟ್ಟಾಗ ಸಿಕ್ಕಾಗ ಸಣ್ಣ ಸಂತೋಷ, ತಾನು ಆಕೆಯನ್ನು ಹಠದಿಂದ ಮದುವೆಯಾಗಿದ್ದರೆ ಸಿಗುವ ದೊಡ್ಡ ಸಂತೋಷಕ್ಕಿಂತ ಎಷ್ಟೋ ಪಟ್ಟು ಮೇಲಿದೆ ಎನ್ನುವುದು ಅವನಿಗೆ ಅರ್ಥವಾಗಿರುತ್ತದೆ.
ಸ್ವಪ್ನ ದೋಷ ಎನ್ನುವ ಕಥೆಯ ನಾಯಕ ಸುಧಾಮ ಈ ಸತ್ಯವನ್ನು ಅರ್ಥ ಮಾಡಿಕೊಂಡಿರುವುದೇ ಇಲ್ಲ. ಹಾಗೆಯೇ, ಕೈವಲ್ಯ ಪ್ರಭು @ ನಿಕ್ಕೀಸ್ ಬಾರ್, ಅಮರ್, ಅಂಟೋನಿ ಮತ್ತು ಕಾರಣ ಕಥೆಗಳೂ, ನಮ್ಮ ಒಂದೊಂದು ಮನಸ್ಥಿತಿಗೆ ಹಿಡಿದ ಕನ್ನಡಿಗಳಂತೆ ಕಾಣುತ್ತದೆ.
ಈ ಪುಸ್ತಕದ ಒಂದೊಂದು ಅಧ್ಯಾಯ ಓದುತ್ತಾ ಹೋದಂತೆ ಬದುಕಿನ ಬಗ್ಗೆ ಆತಂಕ, ಕಿರುನಗೆ ಮತ್ತು ಜೀವನೋತ್ಸಾಹ ಒಂದರ ಹಿಂದೊಂದಂತೆ ಇನ್ನೊಂದು ಬರುತ್ತದೆ. ಯಾವಾಗಲೂ ಸಮಾಜ, ಸಂಸಾರ, ಜೀವನ, ಸಾಧನೆ, ಪ್ರೀತಿ, ಪ್ರಣಯ, ವಿಜ್ಞಾನ ಮುಂತಾದ ಗುಂಗಿನಲ್ಲೇ ಬದುಕುವ ನಮಗೆ, ವೃದ್ದಾಪ್ಯ, ಅದಕ್ಕೆ ಬೇಕಾದ ತಯಾರಿ, ಅದನ್ನು ಸಂತೋಷವಾಗಿ ಸ್ವೀಕರಿಸಲು ಇರಬೇಕಾದ ಮನಸ್ಥಿತಿಯ ಬಗ್ಗೆ ಬಂದ ಮೊದಲ ಪುಸ್ತಕ ಎನ್ನಬಹುದು.
ಇದು ಜೋಗಿಯವರ ಲೈಫ್ ಇಸ್ ಬ್ಯೂಟಿಫುಲ್ ಸರಣಿಯ ಕೊನೆಯ ಪುಸ್ತಕ ಎಂದು ಅವರೇ ಇಂದು ಹೇಳಿದರು. ಈ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಎಲ್ಲರಿಗೂ ಬೋರಾಗುವ ಮೊದಲೇ ಮುಗಿಸಬೇಕೆಂದರೂ, ಒಂದು ಘಟನೆಯನು ಮತ್ತು ಒಂದು ವಿಷಯವನ್ನಂತೂ ಹೇಳಲೇ ಬೇಕು.
ʻಅಧಿಕ ಪ್ರಸಂಗʼ ಅಡಿಬರಹದ ಲೇಖನ ಒಂದರಲ್ಲಿ ಜೋಗಿ, ಶಿಸ್ತಿನ ಬಗ್ಗೆ ಪ್ರಸ್ತಾವಿಸುತ್ತಾ, ʻಈಗ ನಾವು ಮನಸ್ಸಿನ ಮಾತು ಕೇಳಬೇಕೋ ಅಥವಾ ಬುದ್ದಿಯ ಮಾತೋ ಎಂಬ ಪ್ರಶ್ನೆ ಎದುರಾಗುತ್ತದೆ. ಮನಸ್ಸಿನ ಮಾತು ಕೇಳಿದವರು ಸುಖವಾಗಿರುತ್ತಾರೋ ಅಂತ ಕೇಳಿದರೆ, ಖುಷ್ವಂತ್ ಸಿಂಗ್ ಹೇಳಿದ ಮಾತು ನೆನಪಾಗುತ್ತದೆ. ಅವರು ಹಣ ಸಂಪಾದಿಸು. ಕೊನೆಗಾಲದಲ್ಲಿ ನಿನ್ನನ್ನು ಸುಖವಾಗಿಡುವುದು ಅದೊಂದೇ. ನೀನು ಸೋಮಾರಿಯಾಗಿ ಕಾಲ ಕಳೆದರೆ, ಕೈಯಲ್ಲಿ ಬಿಡಿಗಾಸೂ ಇಲ್ಲದೆ ವೃದ್ದಾಪ್ಯ ನಿನಗೆ ಎದುರಾಗುತ್ತದೆ. ಅದರಷ್ಟು ಅಪಾಯಕಾರಿ ಮತ್ತೊಂದಿಲ್ಲ ಎನ್ನುತ್ತಿದ್ದರು.ʼ
ಈ ವಾಕ್ಯವನ್ನು ಕೇಳಿದಾಗ, ಹಿರಿಯ ಪೋಲಿಸ್ ಅಧಿಕಾರಿಯೊಬ್ಬರ ಜೊತೆ ನಡೆದ ಸಂಭಾಷಣೆ ನೆನಪಾಯಿತು. ಬಹಳ ಸಲುಗೆ ಇದ್ದ ಅವರ ಕಛೇರಿಗೆ ಹೇಳದೆ, ಕೇಳದೆ ನುಗ್ಗುವುದು ನನ್ನ ಅಭ್ಯಾಸವಾಗಿತ್ತು. ಒಮ್ಮೆ ಅವರ ಕಛೇರಿಗೆ ಹಾಗೆ ನುಗ್ಗಿದಾಗ, ಎರಡು ಬ್ಯಾಂಕ್ ಪಾಸ್ ಬುಕ್ ಗಳನ್ನು ಇಟ್ಟುಕೊಂಡು, ಏನೋ ಬರೆಯುತ್ತಿದ್ದರು.
ನಾನು ನಗುತ್ತಾ, ʻಏನ್ಸಾರ್? ತುಂಬಾ ದುಡ್ಡು ಮಾಡಿರೋ ಹಾಗಿದೆ. ಎರಡು ಪಾಸ್ ಬುಕ್ ಇಟ್ಟುಕೊಂಡಿದ್ದೀರಾ?ʼ ಎಂದೆ.
ʻಇನ್ನೂ ಎರಡು ಇದ್ದಿದ್ದರೆ ಚೆನ್ನಾಗಿತ್ತು ಕಣಯ್ಯಾ… ಒಂದು ನನ್ನ ಸಂಬಳದ ಹಣ ಬರೋ ಪಾಸ್ ಬುಕ್, ಇನ್ನೊಂದು ನನ್ನ ಮನೆಯ ಸಾಲದ ಪಾಸ್ ಬುಕ್. ಈಗ ಕ್ವಾಟ್ರಸ್ ನಲ್ಲಿ ಇರೋದ್ರಿಂದ ಅದನ್ನ ಬಾಡಿಗೆಗೆ ಕೊಟ್ಟಿದ್ದೇನೆ. ಮುಂದಿನ ವರ್ಷ ರಿಟೈರ್ ಆದ ಮೇಲೆ ಆ ಮನೆಗೆ ಹೋಗಬೇಕಾಗುತ್ತೆ. ಸಾಲ ತೀರಿಸೋದು, ಆಮೇಲೆ ನನ್ನ ಎರಡು ಹೆಣ್ಣು ಮಕ್ಕಳ ಮದುವೆ ಎಲ್ಲಾದಕ್ಕೂ ಹೇಗೆ ಎನ್ನುವುದನ್ನ ಲೆಖ್ಖ ಹಾಕುತ್ತಿದ್ದೇನೆ,ʼ ಎಂದರು.
ನಾನು ಮೌನವಾಗಿ ಕುಳಿತೆ. ಅವರೇ ಮುಂದುವರೆಸಿದರು. ʻನೋಡು ವಿನಯ… ನಾನು ಪೋಲಿಸ್ ಆಫೀಸರ್ ಆಗುವ ಮುಂಚೆ, ಶಾಲೆಯಲ್ಲಿ ಮೇಷ್ಟ್ರಾಗಿದ್ದೆ. ನಾನು ಕೆಲಸಕ್ಕೆ ಸೇರಿದಾಗ ಎಲ್ಲರೂ, ಮೇಷ್ಟ್ರು ಒಳ್ಳೆಯವರು, ದುಡ್ಡು ತಗೊಳ್ಳೋದಿಲ್ಲ ಎಂದರು. ನನಗೂ ವಯಸ್ಸಿತ್ತು and it suited me. ನಾನು ಸುಮ್ಮನಾದೆ. ಮುಂದೆ ಇಡೀ ಡಿಪಾರ್ಟ್ ಮೆಂಟಿನಲ್ಲಿ ನನಗೆ ಪ್ರಾಮಾಣಿಕ ಅಂತ ಬಿರುದು ಕೊಟ್ಟರು. ನಾನು ದುಡ್ಡು ತೆಗೆದುಕೊಳ್ಳದಿದ್ದರೆ, ಆ ದುಡ್ಡನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ ಅಂತ ನನಗೆ ಗೊತ್ತಿತ್ತು. ನಾನು ಸುಮ್ಮನಿದ್ದೆ. ಈಗ ನನಗೆ ದುಡ್ಡು ಬೇಕು. ಹೇಗೆ ಮತ್ತೆ ಯಾರನ್ನು ಕೇಳೋದು ಅಂತ ಗೊತ್ತಿಲ್ಲ. ಎಲ್ಲಾದರೂ ಕೇಳಿ, ಅದು ಪ್ರಚಾರವಾದರೆ, ಇಷ್ಟು ವರ್ಷ ನಾನು ಉಳಿಸಿಕೊಂಡಿರುವ ಮರ್ಯಾದೆ ಕಥೆ ಏನು? ಎನ್ನುವ ಜಿಜ್ಞಾಸೆ ಬೇರೆ. ಹಾಗಾಗಿ, ಮುಂದೆ ನಿವೃತ್ತಿ ಹೊಂದಿದ ಮೇಲೆ ಎಷ್ಟು ದುಡ್ಡು ಬರಬಹುದು ಮತ್ತು ಅದರಲ್ಲಿ ಹೇಗೆ ನಿಭಾಯಿಸಬೇಕು ಎನ್ನುವುದನ್ನು ಲೆಖ್ಖ ಹಾಕ್ತಾ ಇದ್ದೇನೆ,ʼ ಎಂದು ತಣ್ಣಗೆ ಹೇಳಿದರು.
ಮುಂದಿನ ವರ್ಷ ನಿವೃತ್ತಿಯಾದ ಮೇಲೆ, ಆ ಅಧಿಕಾರಿ ಮುಂದಿನ ಹತ್ತು ವರ್ಷಗಳ ಕಾಲ, ಒಂದೆರೆಡು ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದರು. ನನ್ನ ಅಪರಾಧ ವರದಿ ಕಾಲದಲ್ಲಿ ನಾವು ನೋಡಿದ ದಕ್ಷ ಅಧಿಕಾರಿಗಳಲ್ಲಿ ಬಹಳಷ್ಟು ಜನ ತಮ್ಮ ನಿವೃತ್ತಿಯ ನಂತರ ದೊಡ್ಡ ದೊಡ್ಡ ಕಂಪನಿಗಳಲ್ಲಿ ಭದ್ರತಾ ಆಧಿಕಾರಿಗಳಾಗಿ ಕೆಲಸ ಮಾಡುವುದನ್ನು ನಾನು ಕಂಡೆ. ಆದರೆ, ತಾವು ಬಹಳ ದಕ್ಷರು ಎಂದು ಪತ್ರಕರ್ತರ ಮುಂದೆ ಪೋಸು ಕೊಟ್ಟು, ತಮ್ಮ ಫೋಟೋಗಳು ಆಗಾಗ ಪತ್ರಿಕೆಗಳಲ್ಲಿ ಬರುವಂತೆ ನೋಡಿಕೊಂಡ ಅಧಿಕಾರಿಗಳು, ನಿವೃತ್ತಿಯಾದ ಮೇಲೆ ದೊಡ್ಡ ದೊಡ್ದ ಕಾರುಗಳಲ್ಲಿ ಓಡಾಡುವುದನ್ನೂ ನೋಡಿದೆ.
ನನಗೆ ಕಾಡಿದ ಅತಿ ದೊಡ್ಡ ಜಿಜ್ಞಾಸೆ ಎಂದರೆ, ತಮ್ಮ ಸೇವಾವಧಿಯಲ್ಲಿ ದುಡ್ಡು ಮಾಡದೆ, ನಿವೃತ್ತಿಯಾದ ಮೇಲೂ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಂಡದ್ದು, ತಪ್ಪೇ ಅಥವಾ ಸರಿಯೇ?
ನನಗೆ ಮುಗುಳ್ನಗೆ ತಂದದ್ದು ಕೊನೆಯ ಅಧ್ಯಾಯವಾದ ವಿಜ್ಞಾನದ ಅನಾಹುತ. ತಾವು ಕಾಡು ಮತ್ತು ಪ್ರಾಣಿಗಳ ಬಗ್ಗೆ ಒಂದು ಪುಸ್ತಕ ಬರೆಯಬೇಕು ಎಂದು ಜೋಗಿ ನನ್ನ ಬಳಿ ಒಂದೆರೆಡು ಬಾರಿ ಹೇಳಿದ್ದರು. ಈ ಕೊನೆಯ ಅಧ್ಯಾಯ, ಅದರ ಮುನ್ನುಡಿಯಂತೆ ಭಾಸವಾಯಿತು.
ಲೈಫ್ ಇಸ್ ಬ್ಯೂಟಿಫುಲ್ ಸೀರೀಸ್ ನಿಂದ, ಕಾಡು ಇಸ್ ಬ್ಯೂಟಿಫುಲ್ ಸೀರೀಸ್ ಕಡೆಗೆ ಹೊರಟಿರುವ ಜೋಗಿಗೆ, ಆಲ್ ದಿ ಬೆಸ್ಟ್… ಇದಕ್ಕೆ ಕಾಯುತ್ತಿರುತ್ತೇನೆ.
- ಮಾಕೋನಹಳ್ಳಿ ವಿನಯ್ ಮಾಧವ್