ನಾನು ಅವನನ್ನು ಬಿಟ್ಟಿ ನನ್ನ ಮನೆ ಸೇರುವ ಹೊತ್ತಿಗೆ ರಾತ್ರಿ ಹತ್ತೂವರೆಯಾಗಿತ್ತು. ಮನದಲ್ಲಿ ಏನೇನೋ ಯೋಚನೆಗಳು ಕಾಡುತ್ತಿದ್ದವು. ನಾನು ಮಾಡಿದ್ದು ಸರೀನಾ ತಪ್ಪಾ.. ಅವನು ನನ್ನನ್ನು ಮೋಸಗೊಳಿಸಿಲ್ಲಾ ತಾನೇ ಈ ಪ್ರಶ್ನೆ ಎಚ್.ವೀ. ಶಿವರುದ್ರಪ್ಪ ಅವರ ಮನದಲ್ಲಿ ಬರಲು ಕಾರಣವೇನು?…ತಪ್ಪದೆ ಈ ಲೇಖನವನ್ನು ಮುಂದೆ ಓದಿ…
ಪ್ರಿಯ ಮಿತ್ರರೇ, ಬೆಂಗಳೂರು ದೇಶದಲ್ಲೇ ಅತೀ ಶೀಘ್ರವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದು. ಇಂತಹಾ ನಗರದಲ್ಲಿ ವಾಸಿಸುತ್ತಿರುವ ಸಾಮಾನ್ಯ ಜನರಿಗೆ ಕಾಣಬರುವ ಮತ್ತು ಅನುಭವಕ್ಕೆ ಬಂದಿರುವ ಹಲವಾರು ಘಟನೆಗಳು ದಿನ ನಿತ್ಯ ನಡೆಯುತ್ತಿರುತ್ತವೆ. ಅಂತಹದೇ ಒಂದು ಘಟನೆಯನ್ನು ಹಂಚಿಕೊಳ್ಳುತ್ತಿದ್ದೇನೆ.
ಇದೇ ಹೋದ ಜನವರಿ ತಿಂಗಳು ನಡೆದ ಘಟನೆ ಇದು. ನಾನು ಕನಕಪುರದಿಂದ ಬರುತ್ತಾ ಕಲಾಶಿಪಾಳ್ಯಮ್ ಕೋಟೆ ಬಳಿ ಬಸ್ ನಿಲ್ದಾಣದಲ್ಲಿ ಇಳಿಯುವವನಿದ್ದೆ ಅದೇ ಮತ್ತೊಂದು ಪಕ್ಕದ ಸೀಟಿನಲ್ಲಿದ್ದ ಸುಮಾರು ೪೦-೪೫ ವಯಸ್ಸಿನ ವ್ಯಕ್ತಿಯೊಬ್ಬ ಸಾರ್… ನನ್ನನ್ನು ಇಳಿಸಿ ಸ್ವಲ್ಪಾ ಇಂದಿರಾ ನಗರಕ್ಕೆ ಹೋಗೋ ಸಿಟಿ ಬಸ್ ಸ್ಟಾಪ್ ಹತ್ರ ಕರ್ಕೊಂಡ್ ಹೋಗಿ ಬಿಟ್ಟುಬಿಡಿ ಪ್ಲೀಸ್… ಎಂದ. ಅವನನ್ನು ನಾ ಒಮ್ಮೆ ದಿಟ್ಟಿಸಿ ನೋಡಿದೆ. ಕಣ್ಣುಗಳು ಸಣ್ಣ ಸಣ್ಣವಾಗಿದ್ದು ಹುಡುಕಾಡುತ್ತಾ ತಡಕಾಡುತ್ತಾ ಎದ್ದು ನಿಲ್ಲುತಿದ್ದ ಅವನ ಹಾವ ಭಾವಗಳನ್ನು ನೋಡಿ ಪಾಪ ಕಣ್ಣು ಕಾಣಿಸದ ಅಂಧ ಎಂದುಕೊಂಡು ಸಹಾನುಭೂತಿ ಮೂಡಿ ಅವನನ್ನು ಬುಜದಮೇಲೆ ಕೈಯ್ಯಿರಿಸಿಕೊಂಡು ಸಿಟಿ ಬಸ್ ಸ್ಟ್ಯಾಂಡಿನವರೆಗೂ ಕರೆತಂದು ಹಲಸೂರು ಕಡೆ ಹೋಗುವ ಬಸ್ ತೋರಿಸಿ ಹತ್ತಲು ತಿಳಿಸಿದಾಗ.. ನಮ್ದು ಒಂದ್ ರಿಕ್ವೆಸ್ಟ್ ಇದೆ ಸಾರ್.. ಬೆಳ್ಗಿಂದಾ ಊಟ ಮಾಡಿಲ್ಲ ದಯವಿಟ್ಟು ಸ್ವಲ್ಪ ಬಿಸ್ಕೆಟ್ ಅಥವಾ ಬನ್ ತಗೋಬೇಕು ಇಲ್ಲೇ ಪಕ್ಕ ಬೇಕರಿ ಏನಾದ್ರೂ ಇದ್ರೆ ಕರ್ಕೊಂಡ್ ಹೋಗ್ತೀರಾ ಎಂದ ಅಲ್ಲಿಗೂ ಕರೆದೊಯ್ದು ಆಯ್ತು ತಗೊಳ್ಳಿ ಎಂದೆ.
ಫೋಟೋ ಕೃಪೆ : google
ಅವನು ಎರಡು ದಿಲ್ ಪಸಂದ್, ಖಾರಾ ಬಿಸ್ಕೆಟ್ ಮತ್ತು ಸ್ವಲ್ಪ ಖಾರಾ ಎಲ್ಲಾ ಕಟ್ಟಿಸಿಕೊಂಡ. ನಂತರ ಬೇಕರಿಯವ ೩೬ ರೂ ಆಯ್ತು ಕೊಡಿ ಎಂದಾಗ ಅವನು ನನ್ನನ್ನುದ್ದೇಶಿಸಿ ಸಾರ್ ನೀವೇ ಸ್ವಲ್ಪಾ ಹೆಲ್ಪ್ ಮಾಡ್ಬೇಕೂ… ನಮ್ದೂ ಹತ್ರಾ ಹಣಾ ಇಲ್ಲಾ… ಹಿಹ್ಹಿಹ್ಹೀ… ಎನ್ನುತ್ತಾ ಹಲ್ಕಿರಿದು ನಿಂತ. ಸಹಾಯ ಮಾಡಲು ಹೋಗಿ ಕಾಸೂ ಕೇಡು ತಲೇನೂ ಬೋಳು ಅಂತಾರಲ್ಲಾ ಹಾಗಾಗಿ ಹಿಂಗು ತಿಂದ ಮಂಗನಂತಾಗಿತ್ತು ನನ್ನ ಪರಿಸ್ಥಿತಿ. ಮಾತಾಡದೇ ನಾನೇ ದುಡ್ಡು ಕೊಟ್ಟು ಅವನನ್ನು ಮತ್ತೆ ಬಸ್ ಹತ್ತಿರ ಕರೆತಂದು ಅದರಲ್ಲಿ ಕೂರಿಸಿದೆ. ತುಂಬಾ ಥ್ಯಾಂಕ್ಸ್ ಸಾರ್ ನಿಮ್ಮದೂ ಮಕ್ಳೂ ಮನೆವ್ರೂ ಎಲ್ರುಗೂ ಆ ಅಲ್ಲಾ ಒಳ್ಳೇದ್ಮಾಡ್ತಾನೇ…. ಅಂತ ಹೇಳುತ್ತಿರಲು ಬಸ್ ಹೊರಟೇಬಿಟ್ಟಿತು.
ನಾನು ನನ್ನ ಮನೆ ಕಡೆ ಬಸ್ ಹಿಡಿದು ಸೇರುವ ಹೊತ್ತಿಗೆ ರಾತ್ರಿ ಹತ್ತೂವರೆಯಾಗಿತ್ತು. ಮನದಲ್ಲಿ ಏನೇನೋ ಯೋಚನೆಗಳು ಕಾಡುತ್ತಿದ್ದವು. ನಾನು ಮಾಡಿದ್ದು ಸರೀನಾ ತಪ್ಪಾ.. ಅವನು ನನ್ನನ್ನು ಮೋಸಗೊಳಿಸಿಲ್ಲಾ ತಾನೇ.. ಎಂದು. ನಾನು ಮೋಸಹೋದ ಬಗ್ಗೆ ಹೆಂಡತಿಗೂ ತಿಳಿಸಿದೆ. ಅವಳು ಹೋಗ್ಲೀ ಬಿಡ್ರೀ ಪಾಪಾ ನಿಜ್ವಾಗ್ಲೂ ಊಟ ಮಾಡಿರ್ಲಿಲ್ವೇನೋ… ಹಸಿದವರಿಗೆ ಒಂದು ಹೊತ್ತು ಊಟ ಹಾಕಿದ್ರೆ ನಮಗೇನೂ ಕಡಿಮೆ ಆಗೊಲ್ಲಾ… ಎಂದು ಸುಮ್ಮನಾದಳು. ಅದೇನೋ ಸರೀ ಆದ್ರೆ ಹಾಗಿದ್ದಲ್ಲಿ ಮೊದಲೇ ಹೇಳಬಹುದಿತ್ತಲ್ವಾ ನನ್ನ ಹತ್ರಾ ದುಡ್ಡಿಲ್ಲ ಊಟ ಕೊಡ್ಸೀ ಅಂದಿದ್ರೆ ನಾನೇ ಪಕ್ಕದ ಹೋಟೆಲ್ ನಲ್ಲಿ ಊಟ ಕೊಡಿಸಿ ಕಳಿಸ್ತಿದ್ದೆನಲ್ಲಾ… ಅದು ಬಿಟ್ಟು ಮೊದಲು ಏನೂ ಹೇಳದೇ ಎಲ್ಲಾ ಕಟ್ಟಿಸಿಕೊಂಡು ನಂತರ ಹೀಗೆ ಮಾಡಿದನಲ್ಲಾ… ಎನ್ನುತ್ತಾ ನಿದ್ರೆಹೋಗಿದ್ದೆ.

ನಂತರ…. ನಾಳೆ ಬೆಳಿಗ್ಗೆ ಎದ್ದು ದೆಹಲಿಯತ್ತ ಪ್ರಯಾಣಕ್ಕೆ ಏರ್ಪೋರ್ಟ್ ಗೆ ಹೋಗಬೇಕಿತ್ತು. ರಸ್ತೆ ಪಕ್ಕ ಬಂದು ನಿಂತು ಆಕಡೆ ಹೋಗುತ್ತಿರೋ ಖಾಲೀ ಟ್ಯಾಕ್ಸೀಗಾಗಿ ಕಾದು ನಿಂತಿದ್ದೆ. ಯಾಕಂದ್ರೆ ಆ ನೇರ ಬಸ್ ನಲ್ಲಿ ೧೪೫ ರೂ ಟಿಕೆಟ್ ಆದರೆ ಟ್ಯಾಕ್ಸಿಯವರು ೧೦೦ ರೂ ತೆಗೆದುಕೊಳ್ಳುತ್ತಾರೆ. ಹಾಗಾಗಿ ೪೫ ರೂ ಉಳಿಸಬಹುದಿತ್ತು. ಹಾಗೆನೇ ಒಂದು ಟ್ಯಾಕ್ಸೀ ಬಂತು ಅದರಲ್ಲಿ ಆಗಲೇ ಒಬ್ಬ ಪ್ರಯಾಣಿಕ ಕುಳಿತಿದ್ದ, ನಾನು ಮುಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಿದೆ. ಏರ್ ಪೋರ್ಟ್ ಸೇರಿದಾಗ ಆ ವ್ಯಕ್ತಿ ಅವನಿಗೆ ನೂರು ರೂ ಕೊಟ್ಟು ಹೊರಟುಹೋದ, ನಾನು ಎಷ್ಟು ಕೊಡಬೇಕೆಂದು ಕೇಳಲು… ಅವನು ನಿಮ್ಮ ಖುಶೀ ಸಾಬ್.. ಕೊಡೀ… ಎಂದ ಅವನೂ ದಾಡಿ ಬಿಟ್ಟಿದ್ದ… ಪರ್ಸ್ ತೆಗೆದು ನೋಡಿದೆ. ಬರೀ ಐನೂರರ ಮತ್ತು ನೂರರ ಹಾಗೂ ಒಂದು ಐವತ್ತರ ನೋಟುಗಳು ಇದ್ದವು. ಅದರಲ್ಲಿ ಐವತ್ತರ ನೋಟನ್ನು ತೆಗೆದು ಅವನ ಕೈಗಿತ್ತೆ. ಅವನು ಅದನ್ನು ತನ್ನ ಕಣ್ಣುಗಳಿಗೆ ಒತ್ತಿಕೊಳ್ಳುತ್ತಾ ಶುಕ್ರಿಯಾ ಸಾಬ್.. ಎನ್ನುತ್ತಾ ನಸುನಗುತ್ತಲೇ ಸ್ವೀಕರಿಸಿ ಹೊರಟುಹೋದ…!
ನನ್ನ ಪತ್ನಿ ರಾತ್ರಿ ಹೇಳಿದ್ದನ್ನು ನೆನೆಸಿಕೊಂಡೆ… ನಾವು ಯಾರಿಗೋ ಮನಃಪೂರ್ತಿ ಸಹಾಯ ಮಾಡಿದ್ದಲ್ಲಿ ಎಂದಾದರೊಮ್ಮೆ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆಂದು, ಆದರೆ ರಾತ್ರಿ ನಾನು ಕಳೆದು ಕೊಂಡಿದ್ದೆನೆಂದು ಚಿಂತಿಸುತ್ತಿದ್ದ ನನಗೆ ಅದಕ್ಕಿಂತಾ ಎರಡರಷ್ಟು ಹಣ ಬರೇ ೧೨ ಘಂಟೆಯೊಳಗೆ ಅಲ್ಲಾನ ಕಡೆಯವರಿಂದಲೇ ಉಳಿತಾಯವಾಗಿತ್ತು….! ನನ್ನ ಮನದಲ್ಲಿ ಈಗಲೂ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ ನಾನು ಮಾಡಿದ್ದು ಸರಿಯೋ ತಪ್ಪೋ ಅಥವಾ ಆ ವ್ಯಕ್ತಿ ಮಾಡಿದ್ದು ಸರಿಯೋ ತಪ್ಪೋ ಎಂದು…!
ಹೀಗೇ ಹಿಂದೊಮ್ಮೆ ರೂ. ೩೦೦೦ ಕೂಡಾ ಕಳೆದುಕೊಂಡಿದ್ದೇನೆ. ಅದೂ ಬಾಲ್ಯದಲ್ಲಿ ಮಿತ್ರನಾಗಿದ್ದ ಒಬ್ಬ ವ್ಯಕ್ತಿಯ ಕಷ್ಟಕಾಲದ ಕಣ್ಣೀರಿಗೆ ಕರಗಿ….! ನಂತರ ನನಗೆ ತಿಳಿಯಿತು ಅವನು ದುಶ್ಚಟಗಳಿಗೆ ಬಿದ್ದು ಹೀಗೇ ಎಲ್ಲರ ಬಳಿಯೂ ಮಾಡಿದ್ದಾನೆಂದು. ಆಗ ಅರಿವಾಯ್ತು ನಾನು ಮಾಡಿದ್ದು ತಪ್ಪೆಂದು. ಇನ್ನೆಂದೂ ಆ ತಪ್ಪು ಮಾಡುವುದಿಲ್ಲ ಎಂದುಕೊಂಡಿದ್ದೇನೆ ನೋಡೋಣಾ…!
- ಎಚ್.ವೀ. ಶಿವರುದ್ರಪ್ಪ