ತಾಯಿಗೆ ಕಳಕೊಂಡಾಗ ಚಿಕ್ಕಣ್ಣನಿಗೆ ಅತೀವ ದುಃಖವಾಯಿತು. ಸುಮಾರು ದಿನ ಊಟ ತಿಂಡಿ ಕೆಲಸಾ ಬಿಟ್ಟು ಚಿಂತೆ ಮಾಡತೊಡಗಿದ. ಶರಣಗೌಡ ಬಿ.ಪಾಟೀಲ ತಿಳಗೂಳ ಅವರ ‘ಚಿಕ್ಕಣ್ಣನ ಚಿಂತೆ’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಚಿಕ್ಕಣ್ಣ ಸದ್ಯ ಊರಿಗೇ ಸಿರಿವಂತ. ತನ್ನ ಹಳೆ ಮನೆ ಕೆಡವಿ ಮೂರಂತಿಸ್ತಿನ ಹೊಸ ಮನೆ ಕಟ್ಟಿಸಿಕೊಂಡಿದ್ದ ಇಪ್ಪತ್ತು ಎಕರೆ ಹೊಲ, ತೋಟ ಗದ್ದೆ ಖರೀದಿಸಿದ. ಹಣ -ಚಿನ್ನ- ಒಡವೆ- ವಸ್ತ್ರ ಯಾವದಕ್ಕೂ ಕೊರತೆ ಇರಲಿಲ್ಲ, ಸಿರಿತನ ಬಂದ ಮೇಲೆ ಮನೆಗೆ ಬರುವವರು, ಹೋಗುವವರ, ಸಂಖ್ಯೆಯೂ ಹೆಚ್ಚಾಯಿತು. ಹಣ ಕಾಸು ಬೇಕಾದವರು ಇವನ ಬಳಿ ಬಂದು ಪರಿಹಾರ ಕಂಡುಕೊಳ್ಳುತ್ತಿದ್ದರು. ಸುಮಾರು ನಾಲ್ಕೈದು ವರ್ಷದಲ್ಲೇ ಚಿಕ್ಕಣ್ಣನ ಮನೆತನ ಈ ರೀತಿ ಬದಲಾಗುವದೆಂದು ಯಾರೂ ಉಹಿಸಿರಲಿಲ್ಲ. ದಿನದಿಂದ ದಿನಕ್ಕೆ ಸಿರಿತನ ಏರಿಕೆಯಾಗುತ್ತಲೇ ಹೋದಾಗ ಜನ ಇವನಿಗೆ ಚಿಕ್ಕಣ್ಣ ಅಂತ ಕರೆಯುವ ಬದಲು ಸಾಹುಕಾರ ಚಿಕ್ಕಣ್ಣ ಅಂತ ಕರೆಯಲು ಆರಂಭಿಸಿದರು. ನಮಗ ಮತ್ತೊಬ್ಬ ಹೊಸ ಸಾಹುಕಾರ ಸಿಕ್ಕ ಅಂತ ಅನೇಕ ಜನ ಖುಷಿಯಾದರು. ಊರ ಸಾಹುಕಾರ ಎನಿಸಿಕೊಂಡ ಸಂಗಪ್ಪನ ಮಹತ್ವ ಕಡಿಮೆಯಾಯಿತು. ಮೊದಲೆಲ್ಲ ಆತನ ಹತ್ರಾನೇ ಜನ ಸಾಲಾ ಪಡೆಯುತಿದ್ದರು. ಈಗ ಚಿಕ್ಕಣ್ಣ ಸಿರಿವಂತನಾದ ಮೇಲೆ ಇವನ ಹತ್ತಿರ ಸಾಲ ಪಡೆಯತೊಡಗಿದರು. ಚಿಕ್ಕಣ್ಣ ಸಾಹುಕಾರನಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲಾ ಕೊಡತೊಡಗಿದ. ಇವನ ಹತ್ತಿರ ಸಾಲಾ ಪಡೆದು ಸಂಗಪ್ಪನ ಸಾಲಾ ಚುಕ್ತಾ ಮಾಡಿ ನಿಟ್ಟುಸಿರುಬಿಟ್ಟರು.
ಚಿಕ್ಕಣ್ಣ ಮುಂಜಾನೆ ಸ್ನಾನ ಮುಗಿಸಿ ಶುಭ್ರ ಬಟ್ಟೆ ಧರಿಸಿ ಹಣೆಗೆ ಮೂರು ಎಳೆ ವೀಭೂತಿ ಹಚ್ಚಿ ಸ್ಮಾರ್ಟ ಫೋನ ಕೈಯಲ್ಲಿ ಹಿಡಿದು ಮನೆಯಿಂದ ಹೊರಟರೆ ಹೋಟಲು ಕಿರಾಣಿ ಅಂಗಡಿ ಗುಡಿ ಗುಂಡಾರದ ಮುಂದೆ ಕುಳಿತವರು ಇವನಿಗೆ ನೋಡಿ ನಮಸ್ಕಾರ ಮಾಡಿ ಗೌರವ ಕೊಡುತಿದ್ದರು. ದಿನಾ ಕೂಡುವ ಅದೇ ದೊಡ್ಡ ಬೇವಿನ ಕಟ್ಟೆಗೆ ಹೋಗಿ ಕೂಡುತಿದ್ದ . ಅಲ್ಲಿ ಸುಮಾರು ಜನ ಕುಳಿತು ಊರು ಕೇರಿ ದೇಶಾವರಿ ಚರ್ಚೆ ಮಾಡುತ್ತಿದ್ದರು. ಅವರ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದು ಪಕ್ಕದ ನಿಜಲಿಂಗನ ಹೋಟಲಿನಿಂದ ಚಹಾ ತರಿಸಿ ತಾನೂ ಕುಡಿದು ಅವರಿಗೂ ಕುಡಿಸುತಿದ್ದ. ಶಂಕ್ರೂನ ಡಬ್ಡಾದಿಂದ ಎಲೆ ಅಡಿಕೆ ಮೆಲೆಯುತ್ತಾ ತೋಟ, ಹೊಲಗದ್ದೆ ಅಂತ ಹೊರಟು ಹೋಗುತ್ತಿದ್ದ.
ಚಿಕ್ಕಣ್ಣನಿಗೆ ರೊಕ್ಕದಲ್ಲಿ ಮೀರಿಸುವವರೇ ಯಾರೂ ಇರಲಿಲ್ಲ. ಇನ್ನೂ ಸ್ವಲ್ಪ ದಿನದಲ್ಲಿ ಸುತ್ತ ಮುತ್ತ ಊರಿಗೂ ಇವನೇ ಸಿರಿವಂತ ಅನಿಕೊಳ್ಳತಾನೆ ಅಂತ ಜನ ಮಾತಾಡುತಿದ್ದರು. ಸಾಹುಕಾರ ಅಂತ ಕರೆದಾಗ ಚಿಕ್ಕಣ್ಣನಿಗೆ ಅದೇನೋ ಒಂದು ರೀತಿಯ ಖುಷಿಯಾಗುತಿತ್ತು. ತನ್ನ ಹಿಂದಿನ ಜೀವನ ನೆನಪಿಕೊಂಡು ಯೋಚನೆಯಲ್ಲಿ ಮುಳುಗುತಿದ್ದ.
ಅವತ್ತು ಆಕಸ್ಮಿಕವಾಗಿ ಬಂದ ಫೋನ ಕರೆ ಇವನಿಗೆ ಬರ ಸಿಡಿಲಿನಂತೆ ಅಪ್ಪಳಿಸಿ ಚಿಂತೆಗೀಡು ಮಾಡಿತು. ಅಂದಿನಿಂದ ಚಿಕ್ಕಣ್ಣನ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಯಿತು. ಯಾರ ಮುಂದೆಯೂ ಹೇಳಲಾಗದ ಅಸಹಾಯಕ ಸ್ಥಿತಿ ಎದುರಿಸಿದ. ಊಟ ತಿಂಡಿ ಸರಿಯಾಗಿ ಮಾಡದೆ ಹೋದಾಗ ಮುಖದ ಲವಲವಿಕೆಯೂ ಕಡಿಮೆಯಾಯಿತು. ಹೊಲ ಗದ್ದೆ ತೋಟದ ಕಡೆ ಹೋಗಲು ಕೂಡ ಮನಸ್ಸಾಗದೆ. ಮನೆಯಲ್ಲಿ ಸುಸ್ತಾಗಿ ಕೂಡತೊಡಗಿದ ಹೆಂಡತಿಯ ಮುಂದೆ ವಿಷಯ ಹೇಳದೆ ಹಾಗೇ ಮುಚ್ಚಿಟ್ಟ.
ಚಿಕ್ಕಣ್ಣ ಹೊರಗೆ ಹೋದಾಗಲೂ ಯಾರ ಜೊತೆ ಬೆರೆಯದೆ ಯಾರ ಜೊತೆ ಮಾತಾಡದೆ ಬೇವಿನ ಕಟ್ಟೆಗೆ ಒಬ್ಬನೇ ಶೂನ್ಯ ದಿಟ್ಟಿಸುತ್ತಾ ಯೋಚನೆಯಲ್ಲಿ ಮುಳುಗಿರುತಿದ್ದ ಜನ ಹೊಲ ಮನೆ ಸಂಸಾರ ದೇಶಾವರಿ ಸುದ್ದಿಯ ಬಗ್ಗೆ ಮಾತಾಡಿದರೆ ಇವನು ಮಾತ್ರ ತಾನಾಯಿತು ತನ್ನ ಚಿಂತೆಯಾಯಿತು ಅಂತ ಇದ್ದಾಗ ಚಿಕ್ಕಣ್ಣನ ವರ್ತನೆ ಅವರಿಗೂ ಗಾಬರಿ ತರಿಸಿತು.
ಚಿಕ್ಕಣ್ಣನ ಸಮವಯಸ್ಸಿನ ಗೆಳೆಯರು ದಿನಾಲೂ ಊಟ ತಿಂಡಿ ಕೆಲಸ ಕಾರ್ಯದ ಬಗ್ಗೆ ವಿಚಾರಿಸುತಿದ್ದರು. ಅವರಿಗೂ ಸರಿಯಾಗಿ ಉತ್ತರ ಕೊಡದೆ, ಹೆಚ್ಚಿನ ಮಾತು ಬೆಳಿಸದೆ ಬರೀ ಹ್ಞೂಂ ಹ್ಞಾಂ ಅಂತ ಒಂದೋ ಎರಡೋ ಮಾತಾಡಿ ಮುಖ ತಿರುವುತ್ತಿದ್ದ.
” ಚಿಕ್ಕಣ್ಣ ಮೂದಲು ಸರಿಯಾಗೇ ಇದ್ದ ನಮ್ಮ ಜೊತೆ ಮನ ಬಿಚ್ಚಿ ಮಾತಾಡುತಿದ್ದ ನಕ್ಕು ನಗಿಸುತಿದ್ದ. ನಮಗೆಲ್ಲ ಸಲಹೆ ಸೂಚನೆ ಕೊಡುತಿದ್ಧ ಈಗ ಯಾಕೆ ಹಿಂಗಾದ? ಯಾರ ಮುಂದೆ ಹೇಳದಿದ್ದರು ನಮ್ಮ ಮುಂದಾದರು ಹೇಳಬಾರದಾ ? ನಾವೆಲ್ಲ ಅವನ ಗೆಳೆಯರು. ಹೇಳಲಾರದ ಅಂಥಹ ವಿಷಯ ಏನಿದೆ ಅಂತ ಅನೇಕರು ಯೋಚಿಸಿದರು.
“ಚಿಕ್ಕಣ್ಣ ಇತ್ತೀಚಿಗೆ ಸಿರಿವಂತನಾಗಿದ್ದಾನೆ, ಅಹಂಕಾರ ಬಂದಿರಬೇಕು ಯಾರ ಜೊತೆಗೂ ಮಾತಾಡ್ತಿಲ್ಲ ನಾವೆಲ್ಲ ಆತನ ಕಣ್ಣಿನಲ್ಲಿ ಸಣ್ಣವರಾಗಿ ಕಾಣ್ತಿರಬೇಕು ಅದಕ್ಕೆ ಮಾತಾಡ್ತಿಲ್ಲ ಅಂತ ತೋಟದ ಮನಿ ಸಿದ್ರಾಮ ನಾಲ್ಕು ಜನರ ಮುಂದೆ ಉಹೆ ಮಾಡಿ ಅಭಿಪ್ರಾಯ ಹೊರ ಹಾಕಿದ.
“ಹಾಗೇನಿಲ್ಲ ಚಿಕ್ಕಣ್ಣನಿಗೆ ಅಹಂಕಾರ ಬರಲು ಸಾಧ್ಯವೇ ಇಲ್ಲ ಇವನ ಗುಣ ಸ್ವಭಾವ ನಮಗೆಲ್ಲ ಸರಿಯಾಗಿ ಗೊತ್ತು ನಾವೆಲ್ಲ ಜೊತೆ ಬೆಳೆದವರು ನಮ್ಮಂತೆ ಇವನೂ ಬಡತನದಲ್ಲಿ ಬೆಳೆದವನು. ಸಿರಿವಂತನಾದಮೇಲೂ ನಮ್ಮ ಜೊತೆ ಸರಿಯಾಗೇ ಮಾತಾಡ್ತಿದ್ದ ಇತ್ತೀಚೆಗೆ ಯಾಕೋ ಹಿಂಗಾಗಿದ್ದಾನೆ ಚಿಂತೆಗೆ ಏನೋ ಬಲವಾದ ಕಾರಣವಿರಬೇಕು ” ಅಂತ ರುದ್ರಪ್ಪ ಸಮರ್ಥಿಸಿದ.
“ವಿಷಯ ಹೇಳದಿದ್ದರೆ ನಮಗ ಹ್ಯಾಂಗ ಗೊತ್ತಾಗಬೇಕು? ಮನ ಬಿಚ್ಚಿ ಹೇಳಿದಾಗಲೇ ನಾವೆಲ್ಲ ಸೇರಿ ಅದಕ್ಕೊಂದು ಪರಿಹಾರ ಹುಡುಕಬಹುದು ನಮ್ಮ ಮುಂದೆ ಯಾಕೆ ಮುಚ್ಚಿಡಬೇಕು ಅಂತ ನಾಗಣ್ಣನೂ ಪ್ರಶ್ನಿಸಿದ.
“ಇವನ ಮನಸ್ಸಿನ್ಯಾಗ ಅದ್ಯಾವ ಚಿಂತೆ ಬೇರೂರಿದೆಯೋ ಏನೋ ಯಾರಿಗೆ ಗೊತ್ತು? ನಮ್ಮಲ್ಲಿ ಬರೀ ಪ್ರಶ್ನೆಗಳಿವೆ ಆದರೆ ಉತ್ತರ ಮಾತ್ರ ಅವನಲ್ಲೇ ಇದೆ” ಅಂತ ದೇವಣ್ಣ ಸಮಜಾಯಿಸಿ ನೀಡಿದಾಗ
“ಚಿಕ್ಕಣ್ಣನಿಗೆ ಮೊದಲು ಹತ್ತಾರು ಸಮಸ್ಯೆಗಳಿದ್ದವು. ಆಗಲೇ ಚಿಂತೆ ಮಾಡಿರಲಿಲ್ಲ, ಎಲ್ಲವೂ ಧೈರ್ಯದಿಂದ ಎದುರಿಸುತಿದ್ದ. ಈಗ ಇವನಿಗೆ ಯಾವ ಸಮಸ್ಯೆಯೂ ಇಲ್ಲ ರೊಕ್ಕ ರೂಪಾಯಿಗೂ ಕೊರತೆ ಇಲ್ಲ. ನಮಗಾದರೆ ನಿತ್ಯ ಹತ್ತಾರು ಸಮಸ್ಯೆ ಕಾಡ್ತಿವೆಯೇ? ನಾವು ಚಿಂತೆ ಮಾಡಬೇಕೇ ಹೊರತು ಅವನಲ್ಲ” ಅಂತ ಗುರುಶಾಂತ ಕೂಡ ಧನಿಗೂಡಿಸಿದ. ಚಿಕ್ಕಣ್ಣನಿಗೆ ಮೊದಲು ಬಡತನ ಅನ್ನುವದು ಬೆನ್ನು ಬಿಡದ ಬೇತಾಳನಂತೆ ಕಾಡಿ ಉಣಲು ಉಡಲು ಅಭಾವ ಸೃಷ್ಟಿಸಿತ್ತು ಸಣ್ಣ ವಯಸ್ಸಿನಲ್ಲೇ ಕೂಲೀ ಕೆಲಸಾ ಶುರು ಮಾಡಿದ. ಎಂಥಹ ಕಷ್ಟದ ಕೆಲಸವಿದ್ದರು ಬೇಸರ ಪಡದೆ ಯಾರೇ ಕರೆದರು ಒಲ್ಲೆ ಅನ್ನದೆ ಮಾಡಿ ಮುಗಿಸುತ್ತಿದ್ದ. ಇವನ ಕೆಲಸಾ ನೋಡಿ ಊರ ಜನಾನೇ ತಾರೀಫ ಮಾಡಿ ಚಿಕ್ಕಣ್ಣನಂಗ ಕೆಲಸಾ ಮಾಡೋರು ಯಾರೂ ಇಲ್ಲ ಅಂತ ಹೇಳುತಿದ್ದರು. ಸಾಕಷ್ಟು ದುಡಿದರು ಅಂಟಿಕೊಂಡು ಬಂದ ಬಡತನ ದೂರಾಗಿರಲಿಲ್ಲ. ಇವನ ಅಜ್ಜ ಮುತ್ತಾತರು ಕೂಡ ಬಡತನ ಅನುಭವಿಸೇ ಕಣ್ಮುಚ್ಚಿದ್ದರು.
ಅದೇ ಬಡತನ ವಂಶಪರಂಪರೆವಾಗಿ ಇವನ ತಂದೆ ಗದಿಗೆಪ್ಪನಿಗೂ ಮುಂದುವರೆದಿತ್ತು. ಕೇವಲ ಎರಡೆಕರೆ ಜಮೀನಲ್ಲಿ ಅಲ್ಪಸ್ವಲ್ಪ ಆದಾಯ ಬರ್ತಿತ್ತು ಆದರೆ ಅದು ಯಾವದಕ್ಕೂ ಸಾಕಾಗುತ್ತಿರಲಿಲ್ಲ. ಸಾಹುಕಾರ ಹತ್ತಿರ ಮಾಡಿದ ಹಳೆಯ ಸಾಲ ತೀರಿಸಲು ಆಗದೆ ಸಂಕಟ ಪಡಬೇಕಾಗಿತ್ತು. ಸಾಹುಕಾರನಿಗೆ ಅಸಲಿಗಿಂತ ಬಡ್ಡಿ ಮೇಲೆಯೇ ಹೆಚ್ಚಿನ ಆಸೆಯಿತ್ತು. ಸಮಯಕ್ಕೆ ಸರಿಯಾಗಿ ಬಡ್ಡಿ ಕೊಡದಿದ್ದರೆ ಮಾನ ಮರ್ಯಾದೆ ಹರಾಜ ಹಾಕುತಿದ್ದ. ಇದೇ ವಿಷಯವಾಗಿ ಗದಿಗೆಪ್ಪನ ಜೊತೆಗೂ ಅನೇಕ ಸಲ ಜಗಳವಾಡಿದ್ದ.
ಸಾಹುಕಾರ ಸಾಲಾ ಮುಟ್ಟಿಸಲು ಅಪ್ಪನಂತೆ ಚಿಕ್ಕಣ್ಣ ತಡಾ ಮಾಡ್ತಿರಲಿಲ್ಲ. ಪೂರ್ತಿ ತೀರಿಸಲಾಗದಿದ್ದರು ಪ್ರತಿವರ್ಷ ಬಡ್ಡಿ ಕೊಡುತ್ತಿದ್ಧ. ಸಾಹುಕಾರ ತಮ್ಮ ಮನೆ ಬಾಗಿಲು ಬಡಿಯುವ ಮೊದಲೇ ಇವನೇ ಹೋಗಿ, ‘ಸಾಹುಕಾರೇ ಈ ವರ್ಷ ಅಸಲು ಕೊಡೋದು ಆಗೋದಿಲ್ಲ ಬಡ್ಡಿ ತೊಗೊಳ್ರಿ ಮುಂದಿನ ವರ್ಷ ಕೊಡತೀನಿ ಅಂತ ಹೇಳುತ್ತಿದ್ದ ಆಗ ಸಾಹುಕಾರ’ ಆಯಿತು ನಿನ್ನ ಹತ್ರ ಸಾಲಾ ಇದ್ರ ಎಲ್ಲಿಗೂ ಹೋಗೋದಿಲ್ಲ ನಿನ್ನ ಮೇಲೆ ನನಗೆ ಭರವಸೆ ಇದೆ ಅಂತ ಹೇಳಿದಾಗ ಚಿಕ್ಕಣ್ಣನಿಗೆ ಸಮಾಧಾನವಾಗುತಿತ್ತು.
ಚಿಕ್ಕಣ್ಣ ಸಣ್ಣವನಿದ್ದಾಗಲೇ ತಾಯಿ ಶಂಕವ್ವ ತೀರಿ ಹೋಗಿದ್ದಳು. ಅವಳಿಗೆ ಇವನೊಬ್ಬನೇ ಮಗ ನಂತರ ಮಕ್ಕಳೇ ಆಗಲಿಲ್ಲ. ಮಕ್ಕಳಾಗದಿದ್ದರು ಅವಳು ಚಿಂತೆ ಮಾಡದೇ ಚಿಕ್ಕಣ್ಣ ಒಬ್ಬನೇ ಸಾಕು ಅವನಿಗೇ ಛೊಲೋ ಸಾಲೀ ಕಲಿಸಿ ದೊಡ್ಡ ವ್ಯಕ್ತಿ ಮಾಡಬೇಕು, ಮದುವೆ ಮಾಡಿ ಚಂದದ ಸೊಸೆ ಮನೆಗೆ ತರಬೇಕು, ಅವಳಿಂದ ಅಂದದ ಮಕ್ಕಳು ಹುಟ್ಟಬೇಕು. ಒಬ್ಬನಿಂದ ಇಬ್ಬರು ಇಬ್ಬರಿಂದ ನಾಲ್ಕು ಜನ ಆಗಿ ಮನ್ಯಾಗ ಖುಷಿ ತೇಲಾಡಬೇಕು. ಅವರಿಂದಲೇ ಎಲ್ಲಾ ಸಂಭ್ರಮ ಕಾಣಬೇಕು, ನಾವು ಅನುಭವಿಸಿದ ಬಡತನ ನಮ್ಮ ಮಗ ಸೊಸೆ ಮೊಮ್ಮಕ್ಕಳು ಅನುಭವಿಸಬಾರದು ಅಂತ ಕನಸು ಕಂಡಿದ್ದಳು. ಆದರೆ ಅವಳ ಕನಸು ನನಸಾಗದೆ ಕಣ್ಮುಚ್ಚಿದಳು.
ತಾಯಿಗೆ ಕಳಕೊಂಡಾಗ ಚಿಕ್ಕಣ್ಣನಿಗೆ ಅತೀವ ದುಃಖವಾಯಿತು. ಸುಮಾರು ದಿನ ಊಟ ತಿಂಡಿ ಕೆಲಸಾ ಬಿಟ್ಟು ಚಿಂತೆ ಮಾಡತೊಡಗಿದ. ಸಣ್ಣ ವಯಸ್ಸಿನ್ಯಾಗ ಚಿಕ್ಕಣ್ಣ ತಾಯಿನ ಕಳಕೊಬಾರದಿತ್ತು ಅವಳು ಇವನ ಬಗ್ಗೆ ಏನೇನೋ ಕನಸು ಕಟ್ಕೊಂಡಿದ್ದಳು ಒಬ್ಬನೇ ಮಗ ಅಂತ ಕಣ್ಣಾಗ ಕಣ್ಣಿಟ್ಟು ಸಾಕಿದ್ದಳು ಅಂತ ಊರು ಕೇರಿಯ ಜನ ವ್ಯಥೆ ಪಟ್ಟು ಕನಿಕರ ಹೊರ ಹಾಕಿದ್ದರು.
ಅವ್ವನ ಆಸೆ ಪೂರೈಸಬೇಕು,ನಾನು ಸಾಲೀ ಕಲೀತು ದೊಡ್ಡ ವ್ಯಕ್ತಿ ಆಗಬೇಕು ನಮ್ಮ ಮನೆತನಕ್ಕೆ ಅಂಟಿಕೊಂಡ ಬಡತನ ದೂರ ಮಾಡಬೇಕು ಅಂತ ನಿರ್ಧಾರ ಮಾಡಿದ ಆದರೆ ಅಪ್ಪ ಇವನ ನಿರ್ಧಾರಕ್ಕೆ ಸಮ್ಮತಿ ಕೊಡಲಿಲ್ಲ. ಈ ಸಾಲೀ ಗೀಲಿ ನಮಗ್ಯಾಕೆ ಬೇಕು? ನಾವು ದುಡಿದು ತಿನ್ನೋರು ದಿನಾ ದುಡಿಯದಿದ್ದರೆ ಹೊಟ್ಟಿ ತುಂಬೋದಿಲ್ಲ ರೊಕ್ಕಾ ಇದ್ದೋರಿಗಿ ಅದೆಲ್ಲ ಅಂತ ಇವನಾಸೆಗೆ ತಣ್ಣೀರೆರೆಚಿದ.
ಚಿಕ್ಕಣ್ಣ ಓದಿಗೆ ವಿದಾಯ ಹೇಳಿ , ಕೂಲಿ ಕೆಲಸಕ್ಕೆ ಸೇರಬೇಕಾಯಿತು. ಅಪ್ಪನಿಗೂ ವಯಸ್ಸಾಗ್ತಾ ಬಂದಿತು ದಮ್ಮು ಕೆಮ್ಮು ಕೂಡ ಜಾಸ್ತೀ ಆಯಿತು ಆತನ ಆರೋಗ್ಯದ ಕಡೆಗೆ ಗಮನ ಕೊಡಬೇಕು ನನಗ ಬಿಟ್ಟು ಆತನಿಗ್ಯಾರಿದ್ದಾರೆ ? ಅಂತ ಚಿಕ್ಕಣ್ಣ ಯೋಚಿಸಿ ಆತನ ಕಡೆ ನಿಗಾ ವಹಿಸತೊಡಗಿದ. ಅಪ್ಪನಿಗೆ ಸರಿಯಾದ ಚಿಕಿತ್ಸೆ ಕೊಡಿಸಿ ಬೇಗ ಆರಾಮ ಮಾಡಿಸಬೇಕು ಅವ್ವನ ಕಳಕೊಂಡಂಗ ಇವನಿಗೆ ಕಳಕೋಬಾರದು ಹಣ ಖರ್ಚಾದರು ಪರವಾಗಿಲ್ಲ ಸಾಲಾ ಆದ್ರು ಆಗಲಿ, ನನ್ನ ರಟ್ಯಾಗ ಶಕ್ತಿ ಇದೆ ದುಡಿದು ಮುಟ್ಟಸ್ತೀನಿ ಅನ್ನುವ ಭರವಸೆಯ ಮೇಲೆ ದೊಡ್ಡ ಡಾಕ್ಟರ ಹತ್ತಿರ ಚಿಕಿತ್ಸೆ ಕೊಡಿಸಿದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಒಂದಿನ ಆತ ಕೂಡ ಕೊನೆಯುಸಿರೆಳೆದ.
ತಂದೆ, ತಾಯಿ ಇಬ್ಬರನ್ನು ಕಳೆದುಕೊಂಡ ಚಿಕ್ಕಣ್ಣನಿಗೆ ಅನಾಥ ಪ್ರಜ್ಞೆ ಕಾಡತೊಡಗಿತು. ಅವರ ನೆನಪು ಬಂದಾಗ ಕಣ್ಣಿಂದ ಪಳ ಪಳನೆ ಕಣ್ಣೀರುದುರುತಿದ್ದವು. ಹಾಗೋ ಹೀಗೋ ಮನಸ್ಸಿಗೆ ಸಮಾಧಾನ ತಂದುಕೊಂಡು ಕೂಲಿ ಕೆಲಸ ಮುಂದುವರೆಸಿದ.
ಚಿಕ್ಕಣ್ಣನ ತಂದೆ ತಾಯಿ ಬದುಕಿದ್ದರೆ ಇಷ್ಟು ಹೊತ್ತಿಗೆ ಇವನ ಮದುವೆ ಮಾಡಿ ಖುಷಿ ಪಡುತ್ತಿದ್ದರು ಈಗ ಯಾರೂ ದಿಕ್ಕಿಲ್ಲದಂತಾಯಿತು ಪಾಪ. ನಾವೇ ಎಲ್ಲರೂ ಸೇರಿ ಇವನ ಮದುವೆ ಮಾಡೋಣ ಅಂತ ಕೇರಿಯ ಜನ ಪರಸ್ಪರ ಮಾತಾಡಿಕೊಂಡರು. ನಮ್ಮ ನೆಂಟರ ಊರಾಗ ಚಿಕ್ಕಣ್ಣನಿಗೆ ತಕ್ಕ ಹುಡುಗಿ ಇದ್ದಾಳೆ ಅವಳ ಜೊತೆ ಮದುವೆ ಮಾಡಿಸಿದರೆ ಛೊಲೋ ಆಗ್ತಾದೆ ಅಂತ ಅಂಗಡಿ ದುಂಡಪ್ಪ ಸಲಹೆ ನೀಡಿದಾಗ ಆತನ ಮಾತಿಗೆ ಎಲ್ಲರೂ ಸಮ್ಮತಿಸಿ ಚಿಕ್ಕಣ್ಣನಿಗೆ ಮದುವೆಗೆ ಒಪ್ಪಿಸಿದರು.
ಒಂದಿನ ಊರಿನ ದೊಡ್ಡ ಬಸವಣ್ಣನ ಗುಡಿಯ ಮುಂದೆ ಟೆಂಟ್ ಹಾಕಿಸಿ ಚಿಕ್ಕಣ್ಣನ ಮದುವೆ ಚಿನ್ನವ್ವಳ ಜೊತೆ ಮಾಡಿ ಊರವರು ಅಕ್ಷತೆ ಹಾಕಿದರು. ಇಬ್ಬರ ಜೋಡಿ ಭಲೆ ಜೋಡಿ ಅಂತ ಊರು ಕೇರಿಯ ಜನ ಹೊಗಳಿದರು.
ಚಿನ್ನವ್ವ ಕೂಡ ಸಂಸಾರದಲ್ಲಿ ಶ್ಯಾಣೆಕ್ಕಿ ಆಗಿದ್ದಳು ಇದ್ದದರಲ್ಲೇ ಸಂಸಾರ ಸಾಗಿಸತೊಡಗಿದಳು. ಗಂಡ ಹೆಂಡತಿ ಇಬ್ಬರು ಜೋಡೆತ್ತಿನಂಗ ಕೆಲಸಾ ಮಾಡುತಿದ್ದರು. ಎರ್ಡೂರು ವರ್ಷ ಕಳೆಯುತ್ತಿದ್ದಂತೆ ಇವರಿಗೆ ಮಗ ಹುಟ್ಟಿದ ಆಗ ಇವರ ಖುಷಿಗೆ ಪಾರವೇ ಇಲ್ಲದಂತಾಯಿತು ಆತ ಬೆಳೆದು ದೊಡ್ಡವನಾದ. ದಿನಗಳು ಉರುಳತೊಡಗಿದವು.
ನಾನು ಸಾಲೀ ಕಲೀಲಿಲ್ಲ. ನಮ್ಮ ಮಗ ನನ್ನಂಗ ಆಗಬಾರದು ಸರಿಯಾಗಿ ಓದಿಸಿ ದೊಡ್ಡ ವ್ಯಕ್ತಿ ಮಾಡಬೇಕು. ನನ್ನಿಂದ ಈಡೇರದ ಅವ್ವನ ಆಸೆ ಮೊಮ್ಮಗನಿಂದಾದರು ಈಡೇರಲಿ ಅಂತ ಚಿಕ್ಕಣ್ಣ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಯಾವುದೇ ಕೊರತೆ ಆಗದಂತೆ ನೋಡಿಕೊಂಡ. ಮಗ ಆನಂದ ಕೂಡ ನಿರೀಕ್ಷೆಗೂ ಮೀರಿ ಓದಿನಲ್ಲಿ ಯಶಸ್ವಿಯಾದ ಓದು ಮುಗಿಯುತಿದ್ದಂತೆ ಆತನ ಬುದ್ದಿವಂತಿಕೆಗೆ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ದೊಡ್ಡ ಕೆಲಸವೂ ಸಿಕ್ಕಿತು. ಮಾಸಿಕವಾಗಿ ಲಕ್ಷಗಟ್ಟಲೇ ಹಣ ಸಂಪಾದಿಸತೊಡಗಿದ. ನಮ್ಮ ಪ್ರಯತ್ನ ಫಲ ಕೊಟ್ಟಿತು ಅಂತ ಮಗನ ಯಶಸ್ವು ನೋಡಿ ಚಿಕ್ಕಣ್ಣ ಖುಷಿಯಲ್ಲಿ ತೇಲಾಡಿದ.
ಪ್ರತಿ ತಿಂಗಳು ಮಗನಿಂದ ಚಿಕ್ಕಣ್ಣನ ಬ್ಯಾಂಕ ಖಾತೆಗೆ ಹಣ ಜಮೆಯಾಗುತಿತ್ತು. ಆ ಹಣವನ್ನ ಹಾಗೇ ಜಮಾಯಿಸಿ ಚಿಕ್ಕಣ್ಣ ಹೊಲ ಗದ್ದೆ ಆಸ್ತಿ ಪಾಸ್ತಿ ಖರೀದಿಸಿದ ಬಡತನ ದೂರಾಗಿ ಬಹುಬೇಗ ಸಿರಿವಂತನಾದ. ಯಾರೇ ಹಣಕಾಸಿನ ನೆರವು ಕೇಳಿದರು ಇಲ್ಲ ಅನ್ನುತ್ತಿರಲಿಲ್ಲ.
ಈ ಸಲ ಮಗ ಹಬ್ಬಕ್ಕೆ ಬರ್ತಾನೆ, ಆತ ಬಂದಾಗ ಅವನಿಗೊಂದು ಕನ್ಯಾ ಹುಡುಕಿ ಮದುವೆ ಮಾಡೋಣ ನಮಗೀಗ ಯಾವ ಕೊರತೆಯೂ ಇಲ್ಲ ನಮಗೆಲ್ಲ ಒಳ್ಳೆಯದೇ ಆಗಿದೆ ಅಂತ ಹೆಂಡತಿಯ ಮುಂದೆ ಹೇಳಿದಾಗ ಅವಳು ಒಪ್ಪಿಗೆ ಸೂಚಿಸಿ ಮುಗ್ಳನಗೆ ಬೀರಿದಳು.
ಅವತ್ತು ಚಿಕ್ಕಣ್ಣ ಎಂದಿನಂತೆ ಊಟ ಮುಗಿಸಿ ಮನೆಯಿಂದ ಹೊರ ಬರುವಾಗ ಫೋನ ಕರೆ ಬಂದಿತು “ಹಲೋ ಯಾರು ಅಂತ ಮಾತು ಆರಂಭಿಸಿದ “ಚನ್ನಾಗಿದ್ದೀರಾ ಅಂಕಲ್ ನಾನು ಆನಂದನ ಫ್ರೆಂಡ್ ಅಂಬರೀಷ್ ಎಂದಾಗ ‘ಹ್ಞಾಂ ಹ್ಞಾಂ” ಈಗ ಗೊತ್ತಾಯ್ತು ಹೇಳಪ್ಪ ಏನ ಸಮಾಚಾರ ಚನ್ನಾಗಿದ್ದಿಯಾ ? ಡ್ಯೂಟೀ ಹ್ಯಾಂಗ ನಡದಿದೆ ಅಂತ ಪ್ರಶ್ನಿಸಿದ.
ಚನ್ನಾಗಿದ್ದೀನಿ ಅಂಕಲ್ ನಿಮಗೊಂದು ಮುಖ್ಯವಾದ ವಿಷಯ ಹೇಳಬೇಕಾಗಿದೆ ಮನಸ್ಸು ಗಟ್ಟಿಮಾಡಿಕೊಳ್ಳಿ ಎಂದಾಗ ಆತನ ಮಾತಿಗೆ ಚಿಕ್ಕಣ್ಣ ಗಾಬರಿಯಾಗಿ ಅದೇನು ಹೇಳು ಅಂತ ತಡಬಡಿಸಿದ.
“ಆನಂದ ನಮ್ಮ ಕಂಪನಿಯಲ್ಲಿ ಕೆಲಸಾ ಮಾಡುತಿದ್ದ ರೂಪಾಳ ಜೊತೆ ನಿನ್ನೆ ಮದುವೆಯಾಗಿದ್ದಾನೆ ಆತನ ಮದುವೆ ಸ್ವಲ್ಪ ಅರ್ಜಂಟಿನಲ್ಲಿ ಆಗಿ ಹೋಯಿತು, ಹೀಗಾಗುತ್ತದೆ ಅಂತ ನನಗೂ ಗೊತ್ತಿರಲಿಲ್ಲ. ಏನು ಮಾಡೋದು? ಈ ವಿಷಯ ತಿಳಿಸುವ ಸಲುವಾಗೇ ನಿಮಗೆ ಫೋನ ಮಾಡಿದೆ” ಅಂತ ಹೇಳಿ ಕರೆ ಕಟ್ ಮಾಡಿದ. ಆಗ ಚಿಕ್ಕಣ್ಣನ ತಲೆಯಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು ಇವನ ಕೈಕಾಲು ಶಕ್ತಿಹೀನವಾದವು ಬಾಯಿಂದ ಮಾತೇ ಹೊರಡಲಿಲ್ಲ ಯಾರ ಮುಂದೆಯೂ ಹೇಳದ ಸ್ಥಿತಿ ಎದುರಾಗಿ ಮನಸ್ಸಲ್ಲೇ ಕೊರಗತೊಡಗಿದ.
ಕ್ರಮೇಣ ಊರ ಜನರಿಗೂ ವಿಷಯ ಗೊತ್ತಾಯಿತು. ನಾವೆಲ್ಲ ಚಿಕ್ಕಣ್ಣನ ಚಿಂತೆಗೆ ಕಾರಣ ಹುಡುಕುತಿದ್ದೇವು. ಅಸಲಿ ಕಾರಣ ಈಗ ಗೊತ್ತಾಯಿತು. ಬದುಕಿಗೆ ಇದ್ದರು ಚಿಂತೆ ಇಲ್ಲದಿದ್ದರು ಚಿಂತೆ, ಈ ಚಿಂತೆಗೆ ಕೊನೆಯೇ ಇಲ್ಲ, ಚಿಂತೆ ಅನ್ನುವದು
ಚಿರಂಜೀವಿ ಅಂತ ಜನ ಪರಸ್ಪರ ಮಾತಾಡಿಕೊಂಡು ನಿಟ್ಟುಸಿರುಬಿಟ್ಟರು. !!
- ಶರಣಗೌಡ ಬಿ.ಪಾಟೀಲ ತಿಳಗೂಳ
