‘ಬರಿದಾಗುತ್ತಿದೆ ಬೆಟ್ಟಗುಡ್ಡ… ಮತಿಗೇಡಿ ಮನುಜನಾಗಿಹನು ದಡ್ಡ’… ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬತ್ತಿ ಹೋದ ಜಲ
ಹೊತ್ತಿ ಉರಿಯುತ್ತಿರುವ ನೆಲ
ಉಡುಗಿ ಹೋಯಿತು ಜಂಗಾಬಲ.
ಬೆಳೆ ಬೆಳೆಯದ ಹೊಲ
ಬಿರಿದ ನೆಲದಲ್ಲಿ ಇಲಿಯ ಬಿಲ
ಬಾಯಾರಿ ಅಂಗಾಲು ನೆಕ್ಕುವ ಮೊಲ.
ಬಾಡಿ ಬಸವಳಿದ ಕಾಡು
ಕಷ್ಟಗಳೆಡೆಗೆ ಸಾಗುತ್ತಿದೆ ನಾಡು
ಬೆವರು ಸುರಿದರು ಹಸಿವು ಬಿಟ್ಟಿದೆ ಬೀಡು.
ಒಣಗಿ ಮೈತೆರೆದ ಗುಡ್ಡಗಾಡು
ಬಸಿರು ಬಗೆದ ಭುವಿಯ ನೋಡು
ಎಗ್ಗಿಲ್ಲದೆ ಕರಗುತ್ತಿರುವ ಕಾಡುಮೇಡು.
ಬರಿದಾಗುತ್ತಿದೆ ಬೆಟ್ಟಗುಡ್ಡ
ಮತಿಗೇಡಿ ಮನುಜನಾಗಿಹನು ದಡ್ಡ
ಬಗೆದು ಬಾಚಿಕೊಳ್ಳುತಿಹನು ಕೈತುಂಬ ದುಡ್ಡ.
ಗಗನ ಚುಂಬಿ ಗುಡ್ಡಬೆಟ್ಟ
ಮನದ ದುರಾಸೆಗಾಯಿತು ಸಮತಟ್ಟ
ಆದರೂ ಮೇಲೇರಲಿಲ್ಲ ಬದುಕಿನ ಗುಣಮಟ್ಟ.
ಮನುಜ ದುಡುಕಿ ಕೆಟ್ಟ
ಮೋಸ ಮಾಡುವ ಪಣವ ತೊಟ್ಟ
ಘಾತುಕನಾಗಿ ಸಮಾಜದಲ್ಲಿ ಬೇರುಬಿಟ್ಟ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
