ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)

ಮಧ್ಯಪ್ರದೇಶದ “ಧಾರ” ಜಿಲ್ಲೆಯ “ಡಹಿ” ತಾಲೂಕು ಪ್ರದೇಶವೂ ಹೌದು. ಇಲ್ಲಿ ವಿಶಾಲವಾದ ಪ್ರಾಂಗಣ ಹೊಂದಿದ” ಶ್ರೀ 1008 ಕಮಲದಾಸಜೀ ಮಹಾರಾಜ ಆಶ್ರಮ”ವಿದೆ‌.‌ ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಮಣಿನಾಗೇಶ್ವರ ಆಶ್ರಮ, ತಿಲಕವಾಡದಿಂದ ಹೊರಟು.. ಮಧ್ಯಾಹ್ನದ ಹೊತ್ತಿಗೆ ತಲುಪಿದ್ದು.. ಗರುಡೇಶ್ವರ. ಗರುಡೇಶ್ವರದಲ್ಲಿ ವಾಸುದೇವಾನಂದ ಸರಸ್ವತಿ(ಟೆಂಬೆ ಸ್ವಾಮಿ) ಸ್ವಾಮಿಗಳಿಂದ ಪ್ರತಿಷ್ಠಾಪಿಸಸ್ಪಟ್ಟ “ದತ್ತ ಮಂದಿರ” ಇದೆ. ಈ ದತ್ತ ಮಂದಿರ ನರೋಸಬವಾಡಿ ಮತ್ತು ಗಾಣಗಾಪುರ ತರಹವೇ ಪ್ರಾಮುಖ್ಯತೆ ಪಡೆದಿದೆ. ಖುದ್ದು ಭಗವಾನ್ ದತ್ತ’ರೇ ಇಷ್ಟಪಟ್ಟು “ಇಲ್ಲಿಯೇ ನನ್ನ ಪ್ರತಿಷ್ಠಾಪಿಸಿ” ಎಂದು ಸ್ವಪ್ನದಲ್ಲಿ ಹೇಳಿದ್ದರಂತೆ.

ಹಾಗೆಯೇ… ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮಿಗಳ (ಟೆಂಬೆ ಸ್ವಾಮಿ) ಪೂಜ್ಯ ಸಮಾಧಿ ಮಂದಿರವೂ ನರ್ಮದಾ ನದಿಯ ದಂಡೆಗೆ ಒತ್ತಿಕೊಂಡು ಇದೆ. ಗರುಡೇಶ್ವರದಲ್ಲಿ ಮಧ್ಯಾಹ್ನದ ಊಟ ಮುಗಿಸಿಕೊಂಡು ಹೋಗಿದ್ದು.

“ನಾನಿ ಅಂಬಾಜಿ” ಮಂದಿರ, ಇದು ಕಚ್ಚಾ ರೋಡು, ರಸ್ತೆ ಮಣ್ಣು, ಕಲ್ಲುಗಳಿಂದ ಸಂಪದ್ಭರಿತ. ಎದೆಯತ್ತರದ ಏರಿ ಇಳಿತದ ಹೆಬ್ಬಾವಿನ ತರಹದ ರಸ್ತೆ. ಅಂಬಾಜಿ”ದೇವಿಯ ದರ್ಶನ ಮಾಡಿ, ಮತ್ತದೆ ಹೊಲಗಳ ನಡುವಿನ ಮಣ್ಣಿನ ರೋಡಿನಲ್ಲಿ ದೂರಕ್ಕೆ ಕ್ರಮಿಸಿ, ಛೋಟಾ ಉದಯಪುರ ಜಿಲ್ಲೆಯ ಗುಜರಾತಿನ “ವಾಗಾಚ್”ಎಂಬ ಗ್ರಾಮಕ್ಕೆ ಬಂದೆ. ಇಲ್ಲಿಯ ವಾಗೇಶ್ವರ ಮಹಾದೇವ ಮಂದಿರದ ಆಶ್ರಮದಲ್ಲಿ ಉಳಿದುಕೊಂಡಿರುವೆ.

ಗುಜರಾತಿನ “ವಾಗಾಚ್” ಗ್ರಾಮದ ” ವಾಗೇಶ್ವರ ಆಶ್ರಮದಿಂದ” ಬೆಳಿಗ್ಗೆ 9 ಕ್ಕೆ ಹೊರಟು ನಿಂತೆ. ಕೇವಲ ಲಂಗೋಟಿಯಲ್ಲಿರುವ ನಿರಾಹಾರ ಸಂತ “ದಾದಾಗುರು” ಇದೇ ಆಶ್ರಮದಲ್ಲಿ ಉಳಿದುಕೊಂಡಿದ್ದರು, ಅವರು “ನರ್ಮದಾ ಪರಿಕ್ರಮ”ದಲ್ಲಿ ಇದ್ದಾರೆ, ಇವರ ಜೊತೆ ಸಾವಿರಕ್ಕೂ ಹೆಚ್ಚು ಜನ ಪರಿಕ್ರಮದಲ್ಲಿ ಇದ್ದಾರೆ. ಈ ಸಂತ 1100 ದಿನಗಳಿಂದ ಆಹಾರ ಸೇವಿಸಿಲ್ಲ, ಕೇವಲ ಜಲ ಸೇವನೆಯಲ್ಲಿದ್ದಾರೆ.

6 ಬಾರಿ ಕೇವಲ ಜಲ ಸೇವನೆಯಲ್ಲಿಅಖಂಡ 3, 200 ಕಿ. ಮೀ ಉದ್ದದ ನರ್ಮದಾ ಪರಿಕ್ರಮ ಮಾಡಿದ್ದಾರೆ. ಇವಾಗ 7 ನೇ ಸಾರೇ ಮತ್ತೆ ಪರಿಕ್ರಮಕ್ಕೆ ಬಂದಿದ್ದಾರೆ, ಈ ಸಾರೆ ಅವರು ಜಲವನ್ನೂ ಬಿಟ್ಟು ನಡೆಯುತ್ತಿದ್ದಾರೆ. ಈ ಹೆಪ್ಪುಗಟ್ಟುವ ಚಳಿಯಲ್ಲಿ ಕೇವಲ ಲಂಗೋಟಿಯಲ್ಲಿ ನಡೆಯುತ್ತಿದ್ದಾರೆ. (ಇವರ ಬಗ್ಗೆ ಸಂಪೂರ್ಣವಾಗಿ ಬರೆಯುವೆ) ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ “ದಾದಾಗುರು” ಅವರ ದರ್ಶನ, ಸತ್ಸಂಗ ದೊರಕಿದ್ದು ಪುಣ್ಯ. ಅದಕ್ಕೆ ರಾತ್ರಿ ಮಲಗುವುದು ತಡವಾಯಿತು, ಬೆಳಿಗ್ಗೆ ಹೊರಟು ನಿಂತಿದ್ದು ತಡವೇ.

ವಾಗಾಚ್ ಗ್ರಾಮದಿಂದ 25 ಕಿ. ಮೀ ದೂರದ “ಕವಾಂಟ್” ಊರಿಗೆ ಮದ್ಯಾಹ್ನದ ಸಮಯಕ್ಕೆ ಬಂದೆ. “ನೀಲಕಂಠ ಮಹಾದೇವ ಮಂದಿರ”ದಲ್ಲಿ ಮದ್ಯಾಹ್ನ ಭೋಜನ ಮತ್ತು ವಿಶ್ರಾಂತಿ‌.
ನರ್ಮದಾ ನದಿಯ ಉತ್ತರ ತಟದ “ಶೂಲಪಾಣಿ ಕಾಡು”(ಲಕ್ಕಡಕೋಟ್ ಜಂಗಲ್) ಕೇವಲ ಕಾಲುದಾರಿಯಾಗಿದ್ದರಿಂದ “ನಂದಿ”ಯನ್ನು ಅಲ್ಲಿ ನಡೆಸಲು ಆಗುವುದಿಲ್ಲ. ಆದ್ದರಿಂದ… ಬೆಟ್ಟಗಳ ತೊಪ್ಪಲು ಪ್ರದೇಶಗಳ ಊರಿನಲ್ಲಿ ಸುತ್ತು ಬಳಸಿ, ನಂದಿಯ ಜೊತೆ ಹೊರಟೆ. ಈ ಹಳ್ಳಿಗಳು ಗುಜರಾತಿನ ಗಡಿ ಊರುಗಳು, ರಸ್ತೆಗಳಲ್ಲಿ “ಟಾರನ್ನು” ಹುಡುಕುಬೇಕು ಅಷ್ಟು ಹಾಳಾಗಿವೆ. ಈ ಹಾಳಾದ ರಸ್ತೆಗಳು ಮತ್ತು ಅದರಲ್ಲಿ ಬೆಟ್ಟಗಳ ಎದೆಯತ್ತರದ ಏರುಗಳು, ಮೈ ನುಗ್ಗೆಬ್ಬಿಸಿದವು.

ಗುಜರಾತಿನ “ಕವಾಂಟ್” ಊರಿನಿಂದ ಕೇವಲ 15 ಕಿ.ಮೀ ದೂರಕ್ಕಿರುವ “ವಗತ್ಗಢ/ಭಗತಗಡ್* ದಿಂದ ಗುಜರಾತ್ ಮುಗಿದು, ಮಧ್ಯಪ್ರದೇಶ ಸರಹದ್ದು ಪ್ರಾರಂಭವಾಗುತ್ತೆ.
ನರ್ಮದಾ ನದಿಯ ಎರಡೂ ತಟಕ್ಕೆ ಇರುವ ಗುಜರಾತಿನ ಊರುಗಳನ್ನು ಸುತ್ತಿ “ಮಧ್ಯಪ್ರದೇಶಕ್ಕೆ”ಬಂದೆ. ಇಲ್ಲಿಂದ ನಡೆದ ಅಷ್ಟೂ ದಾರಿ ಕೇವಲ ಬೆಟ್ಟಗಳ ಹಾದಿ, ತಿರುವುಗಳು ಮತ್ತು ಭಾರಿ ಏರಿಳಿತಗಳು, ಸುತ್ತಲೂ ದಿಟ್ಟಿಸುವ ಬೃಹತ್ ಬೆಟ್ಟಗಳು. ಕೆಲವು ಬೋಳು ಬೋಳು, ಕೆಲವುಗಳು ಕುರುಚಲು ಕಾಡುಗಳು.

ಬೈತಲೆಯಂತೆ ಕಾಣುವ “ರಸ್ತೆ”ಗಳು. ಕೊನೆಗೆ ಬಂದು ತಲುಪಿದ್ಧು ಮಧ್ಯಪ್ರದೇಶದ “ಕಸಾರಿಯಾ” ಎಂಬ ಗ್ರಾಮದ “ನರ್ಮದಾ ಆಶ್ರಮ”ಕ್ಕೆ. ಇಲ್ಲಿ ಸುತ್ತಲೂ ಬೃಹದಾಕಾರದ ಬೆಟ್ಟಗಳೆ, ನಡುವೆ ಹಾಯ್ದು ಹೋದ ರಸ್ತೆ, ರಸ್ತೆಗೆ ಅಂಟಿಕೊಂಡ ಆಶ್ರಮ. “ನರ್ಮದಾ ದೇವಿ”ಯ ಚಿಕ್ಕ ದೇವಸ್ಥಾನವಿದ್ದು, ಎದುರು ನೆರಳಿಗೆ ಅಂತಲೇ “ಟಾರ್ಪಾಲ್” ಕಟ್ಟಿದ್ದಾರೆ. ನಾನು ದೇವಸ್ಥಾನದ ಎದುರಿಗೆ ಮಲಗಿರುವೆ, ಚಳಿಗಾಳಿ ಭೋರ್ಗರೆಯುತ್ತಿದೆ. ಚಳಿಯಿಂದ ಸಣ್ಣಗೆ ಮೈಯಲ್ಲಿ ನಡುಕ.

ನಾನು ತಂಗಿದ ಸ್ಥಳ :”ಕೋಸರಾಲ್” “ಬೆಟ್ಟದ ಮೇಲೆ” ಇರುವುದರಿಂದ., ತನ್ನ ಸುತ್ತಲೂ ಇನ್ನಷ್ಟು ಬೆಟ್ಟಗಳನ್ನು ಗುಡ್ಡೆ ಹಾಕಿಕೊಂಡಿದೆ. ಎದ್ದಾಗ ಸಮಯ 6 ಆದರೂ.. ಇಬ್ಬನಿ ಸುಳಿವಿಲ್ಲಾ. ಮಬ್ಬು ಕವಿದ ವಾತಾವರಣ ಬರುಬರುತ್ತಾ ಮೋಡ ಕವಿದ ರೀತಿಯೆ ಇತ್ತು, ತಣ್ಣನೆಯ ಗಾಳಿ ಬೀಸುವ ರಭಸಕ್ಕೆ ಮೈ ರೋಮಗಳು ಸೆಟೆದು ನಿಲ್ಲುತ್ತಿದ್ದವು.
ಬೆಟ್ಟದ ತೊಪ್ಪಲು ಪ್ರದೇಶಗಳ ಹಳ್ಳಿಗಳಲ್ಲಿ ರಸ್ತೆ ಚೆನ್ನಾಗಿದ್ದವಾದರೂ, ಪದೇ ಪದೇ ಬರುವ ಎದೆಯೆತ್ತರದ ಏರುಗಳು, ಓಡಲು ಬಿಡದೆ ಎದೆಗೆ ಕೈ ಹಾಕಿ ಹಿಂದೇ ತಳ್ಳುವ ರಭಸದ ಗಾಳಿ.
ನಂದಿ ಏರಿ ಸಾಗಲಾಗದೇ ಕಿಲೋಮೀಟರ್’ಗಟ್ಟಲೆ ನಡೆದು ಬಂದೆ. ಇಳಿಜಾರು ಬಂದಾಗ ವೇಗ ಅಷ್ಟಕಷ್ಟೇ…

ಅಂತೂ ಇಂತೂ.. 25 ಕಿ. ಮೀ ಸಾಗಿ ‘ಸೋಂಡವಾ” ಎನ್ನುವ ಊರಿಗೆ ಬಂದು, ಸ್ವಲ್ಪ ಹೊತ್ತು ಕೂತು ಚಹಾ ಕುಡಿದಾಗ ಕೈ..ಕಾಲಲ್ಲಿ ಜೀವ ಸಂಚಾರವಾದಂತಾಯಿತು.
ಮತ್ತೆ ಪ್ರಯಾಣ‌ ಮುಂದುವರೆಸಿದೆ, “ಕುಲವಟ” ಊರಿನಲ್ಲಿ ನರ್ಮದಾ ನದಿಗೆ ಒಂದಾಗಲು ಓಡುತ್ತಿದ್ದ “ಹಾತಿನಿ” ನದಿಗೆ ಅಡ್ಡಲಾಗಿ ಕಟ್ಟಿದ್ದ “ಬ್ರಿಡ್ಜ್” ದಾಟಿದಾಗ, ಎತ್ತರದ ಗುಡ್ಡದ ಮೇಲಿನ ಆಂಜನೇಯ ದೇವಸ್ಥಾನದ ಸನ್ಯಾನಿ, ಕೂಗಿ ಬರುವಂತೆ ಸನ್ನೆ ಮಾಡಿದರು. ಸರಿ..

ನಂದಿಯನ್ನು ತಳ್ಳಿಕೊಂಡು “ಸಂಕಟ ಮೋಚನ ಆಂಜನೇಯ ದೇವಸ್ಥಾನಕ್ಕೆ” ಹೋದೆ, ಅಲ್ಲಿನ ಸನ್ಯಾಸಿ, ನನ್ನ ಜೊತೆ ಸ್ವಲ್ಪ ಹೊತ್ತು ಮಾತಿಗೆ ಕೂತರು. ಕೊನೆಗೆ ಗೋದಿ ರೊಟ್ಟಿ, ಅನ್ನ ಊಟ ಮಾಡಿಸಿ ಆಶೀರ್ವದಿಸಿ ಬೀಳ್ಕೊಟ್ಟರು. ಮಧ್ಯಾಹ್ನವಾದ್ದರಿಂದ ಸಂಜೆಯೊಳಗೆ “ಡಹಿ” ಊರು ತಲುಪಬೇಕಿತ್ತು. ನಂದಿಯನ್ನು ಓಡಿಸತೊಡಗಿದೆ, ರಸ್ತೆಯಲ್ಲಿ ಅಷ್ಟೇನೂ ಏರುಗಳಿಲ್ಲವಾದ್ದರಿಂದ, ಬೇಗನೆ ಸಂಜೆ 4 ಗಂಟೆಗೆ ‘ಡಹಿ” ಊರನ್ನು ತಲುಪಿದೆ.

ಮಧ್ಯಪ್ರದೇಶದ “ಧಾರ” ಜಿಲ್ಲೆಯ “ಡಹಿ” ತಾಲೂಕು ಪ್ರದೇಶವೂ ಹೌದು. ಇಲ್ಲಿ ವಿಶಾಲವಾದ ಪ್ರಾಂಗಣ ಹೊಂದಿದ” ಶ್ರೀ 1008 ಕಮಲದಾಸಜೀ ಮಹಾರಾಜ ಆಶ್ರಮ”ವಿದೆ‌.‌ ನರ್ಮದಾ ಪರಿಕ್ರಮ ಭಕ್ತರಿಗೆ ಸೇವೆ ಮಾಡುವ ಕೇಂದ್ರವಿದು. ಊರಿನ ಹಲವರು ತಮ್ಮ ದಾನಗಳಿಂದ ಈ ಸೇವೆ ನಡೆಸುತ್ತಿದ್ದಾರೆ. ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ, ವೈದ್ಯರ ಸೇವೆಯು ಇಲ್ಲಿ ಲಭ್ಯ. ಉಚಿತ ಊಟ, ವಸತಿ ವ್ಯವಸ್ಥೆ ಸಹ ಇದೆ.

ನಾನು ಇಲ್ಲಿಯೇ ತಂಗಿರುವೆ. ಬಟ್ಟೆ ತೊಳೆಯುವುದು ಬಾಕಿ ಇದೆ, ನಾಳೆ ಇದೇ ಆಶ್ರಮದಲ್ಲಿ ಉಳಿದುಕೊಳ್ಳುವೆ.

ನರ್ಮದೇ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ –  ವೈದ್ಯರು, ಲೇಖಕರು, ಕಾಗಿನೆಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading