‘ಪುನರ್ನವ’ ಕೃತಿ ಪರಿಚಯ – ರಶ್ಮಿ ಉಳಿಯಾರು

ಸಚಿನ್ ನಾಯಕ್ ಅವರ ‘ಪುನರ್ನವ’ ಕಾದಂಬರಿ, ಕಾಶಿಯ ರಾಜಕುಮಾರಿಯ ಪ್ರೇಮ ಕಥೆಯಾಗಿದೆ. ಕೃತಿ ಕುರಿತು ರಶ್ಮಿ ಉಳಿಯಾರು ಕೃತಿ ಪರಿಚಯ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪುನರ್ನವ
ಲೇಖಕರು : ಸಚಿನ್ ನಾಯಕ್ 
ಪ್ರಕಾಶನ :  ಬಿಎಫ್ಸಿ ಪಬ್ಲಿಕೇಶನ್ಸ್
ಪುಟಗಳು : ೧೭೪ 
ಬೆಲೆ : ೧೯೮.00
ಖರೀದಿಗಾಗಿ : ಅಮೇಜಾನ್’ನ ಲ್ಲಿ ಲಭ್ಯ

ಇದೇ ಬಳಗದಿಂದ ಪರಿಚಿತವಾದ ಪುಸ್ತಕವಿದು. ಮೊದಲ ಕೆಲವು ಪುಟಗಳಲ್ಲೇ ಕಥಾ ನಾಯಕಿಯ ಬಗ್ಗೆ ತಿಳಿಯುತ್ತದೆ. ಈ ಪಾತ್ರ ಅದು ಹೇಗೆ ಮಹಾಭಾರತದಲ್ಲಿ ಅಜ್ಞಾತವಾಗಿ ಉಳಿಯಿತು ಮತ್ತು ಲೇಖಕರಿಗೆ ಕಾಣ ಸಿಕ್ಕಿತು ಎಂಬ ಅಚ್ಚರಿ ಕಾಡತೊಡಗುತ್ತದೆ. ಓದುತ್ತಾ ಹೋದಂತೆ ಆಕೆ ತನ್ನ ಅಂತರಂಗವನ್ನು ಬಿಚ್ಚಿಡಲು ಹಾಗೂ ಅಜ್ಞಾತ ವಾಸದಿಂದ ಹೊರ ಬರಲು ತವಕಿಸುತ್ತಿದ್ದಳೇನೋ… ಲೇಖಕರು ಅದಕ್ಕೆ ಮಾಧ್ಯಮವಾದರೇನೋ ಎಂಬ ಭಾವ ಹುಟ್ಟಿತು. ಅಪರೂಪದ ಪುರಾಣ ಕಥೆಗಳ ಸ್ವಗತ ಓದುವಾಗಲೆಲ್ಲ ನನ್ನ ಭಾವವಿದು.

ಭೀಮನಿಗೆ ಹಿಡಿಂಬೆ ಮತ್ತು ದ್ರೌಪದಿ ಎಂಬ ಎರಡು ಪತ್ನಿಯರು ಹಾಗೂ ಅವರಿಂದ ಎರಡು ಗಂಡು ಮಕ್ಕಳು: ಘಟೋತ್ಕಚ ಮತ್ತು ಸುತಸೋಮ ಇದ್ದರು ಎಂಬ ವಿಷಯ ಜನಜನಿತ. ಆದರೆ ಅವನಿಗೆ ಮೂರನೇ ಪತ್ನಿಯೂ ಮತ್ತು ಮಗನೂ ಇದ್ದದ್ದು ಗೊತ್ತೇ…!! ಆಕೆಯೇ ಕಾಶಿಯ ರಾಜಕುಮಾರಿ, ಮುಂದೆ ಕಾಶಿಯ ಮಹಾರಾಜ್ಞಿ. ಮಹಾಭಾರತದ ಅಸಂಖ್ಯಾತ ಪಾತ್ರಗಳಲ್ಲಿ ಈ ಪಾತ್ರವು ತೆರೆಮರೆಗೆ ಸರಿದೇ ಹೋಗಿದೆ. ಅಂತಹ ಅಪರೂಪದ ಮುತ್ತೊಂದು ಹೆಕ್ಕಿ ತಂದು ತಮ್ಮ ಕಲ್ಪನೆಯ ಮೂಲಕ ವಿಸ್ತರಿಸಿ ಓದುಗರೆದುರು ಲೇಖಕರು ಇಟ್ಟಿದ್ದಾರೆ. ದೂರದರ್ಶನದಲ್ಲಿ ನೋಡುವ ಕನ್ನಡದ ಮಹಾಭಾರತ, ಮಗುವಿಗೆ ಹೇಳಿ ಕೊಡುವ ಭಗವದ್ಗೀತೆಯ ಶ್ಲೋಕಗಳ ಪ್ರಭಾವವೇನೋ ತಿಳಿಯದು, ಮಹಾಭಾರತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ‌ ರುಚಿ ಹೆಚ್ಚಿದೆ. ಓದುತ್ತಾ ಅದೇ ಗುಂಗು ಕಾಡಿತು. ಇದು ಭೀಮನ ಮೂರನೇ ಪತ್ನಿಯ ದೃಷ್ಟಿಯಿಂದ ಮಹಾಭಾರತದ ಮುಖ್ಯ ಘಟನೆಗಳ ಅನಾವರಣ. ನಾಯಕಿಯ ಸ್ವಗತದಲ್ಲಿ ಆಪ್ತವಾಗಿ, ಭಾವುಕವಾಗಿ ಮೂಡಿ ಬಂದಿರುವ ಇದರ ನಾಯಕ ಭೀಮ ಹಾಗೂ ಮತ್ತೊಂದು ಪ್ರಮುಖ ಪಾತ್ರದಲ್ಲಿ ಭೀಮನ ಸಾರಥಿ ವಿಶೋಕನಿದ್ದಾನೆ. ಈ ವಿಶೋಕನೇ ಒಂದು ರೀತಿಯಲ್ಲಿ ಎಲ್ಲ ಘಟನೆಗಳ ಆಗು ಹೋಗುಗಳನ್ನು ವಿವರಿಸುವಾಗ ಆಕೆಗೆ ಸಂಜಯನಿದ್ದಂತೆ.

ಇದು ಕಾಶಿಯ ರಾಜಕುಮಾರಿಯ ಪ್ರೇಮ ಕಥೆ. ಅಷ್ಟೇ ಅಲ್ಲ, ವಿರಹದ ವ್ಯಥೆ ಸಹ ಹೌದು. ಕಾಶಿಯಲ್ಲಿ ಹರಿಯುವ ಗಂಗೆಯ ದಡದಲ್ಲಿ ತನ್ನ ಇಳಿಗಾಲದಲ್ಲಿ ಕುಳಿತು ಕಳೆದು ಹೋದ ಬದುಕಿನ ಸಿಂಹಾವಲೋಕನ ಮಾಡುವ ಅವಳ ಎದೆಗುದಿ, ನಿಟ್ಟುಸಿರು, ನೋವು, ನಲಿವುಗಳ ಕನವರಿಕೆ ಓದುಗರ ಹೃದಯವನ್ನೂ ಹಸಿಯಾಗಿಸುತ್ತದೆ. ಆಕೆ ತನ್ನ ಪಯಣದಲ್ಲಿ ನಮ್ಮನ್ನೂ ಕರೆದೊಯ್ಯುತ್ತಾಳೆ. ಅವಳ ಸಖಿಯರಾದ ಚಿತ್ರಾಕ್ಷಿ ಮತ್ತು ಗೌರಾಂಗಿಯರಂತೆಯೇ…! ಅಪರಿಚಿತ ಪಾತ್ರದೊಳಗೆ ತಾದಾತ್ಮ್ಯ ಭಾವದಲ್ಲಿ ಇಳಿದು ಆಕೆಯೊಳಗೆ ಮಡುಗಟ್ಟಿದ್ದ ಸಾಂದ್ರ ಭಾವಗಳನ್ನು ನಮ್ಮೆದುರು ಹರವಿಟ್ಟ ಲೇಖಕರ ಕಲ್ಪನಾ ಶಕ್ತಿ ಬೆರಗು ಮೂಡಿಸಿತು. ಕಲ್ಪನೆಯ ಮೂಸೆಯಲ್ಲಿ ಹೊಮ್ಮಿದ ನವನೀತದಂತಿದು!

ಇಲ್ಲಿ ಧರ್ಮರಾಜ ಯುಧಿಷ್ಠಿರ ಪಗಡೆಯಾಟದ ವ್ಯಸನಿಯಂತೆ ಅವಳ ಕಣ್ಣಿಗೆ ಕಾಣುತ್ತಾನೆ. ಅಗ್ರಜ ಎನ್ನುವುದು ಬಿಟ್ಟರೆ ಅವನಿಗಿಂತ ಅರ್ಜುನ, ಭೀಮ ಅಥವಾ ಸಹದೇವರಲ್ಲಿ ಸಾಮ್ರಾಟನಾಗಲು ಹೆಚ್ಚಿನ ಯೋಗ್ಯತೆ ಇದೆ ಎನ್ನುವುದು ಅವಳ ಭಾವನೆ. ಗಂಡನ ಮನೆಯಲ್ಲಿ ಅವಳೊಂದಿಗೆ ಸೌಹಾರ್ದಯುವಾಗಿ ನಡೆದುಕೊಳ್ಳುವ ಸಹದೇವನೂ ಅವಳಿಗೆ ಪ್ರಿಯ. ಅಲ್ಲದೇ ಶ್ರೀಕೃಷ್ಣನ ಹಲವು ನಿರ್ಧಾರಗಳು, ಮಾತುಗಳನ್ನು ಆಕೆ ಅಳೆದು ತೂಗುತ್ತಾಳೆ. ತನ್ನದೇ ನ್ಯಾಯ ನಿರ್ಣಯ ಮಾಡುತ್ತಾಳೆ. ಕುಂತಿಯ ಹಾರ್ದಿಕ ಆಪ್ತತೆ ಅವಳಿಗೆ ಸಂತೋಷ ನೀಡಿದರೆ, ಸಾಮ್ರಾಜ್ಞಿಯಾಗಲೆಂದೇ ಹುಟ್ಟಿದ ದ್ರೌಪದಿ ಅವಳ ಪಾಲಿಗೊಂದು ನಿಗೂಢ. ಗಂಡ ಭೀಮನ ಬಗ್ಗೆ ಹೆಮ್ಮೆ ಇದೆ. ಇಡೀ ಪಾಂಡವ ಕುಟುಂಬವನ್ನು ಯಾವುದೇ ಸಮಯದಲ್ಲಿ ರಕ್ಷಿಸುವ ಹೊಣೆ ಹೊತ್ತ ಸರಳ ಜೀವಿಯ ಬಗ್ಗೆ ಅಪಾರ ಪ್ರೀತಿ, ಅಂತಃಕರಣ ಮತ್ತು ಅಭಿಮಾನ ಸಹ. ಅನೇಕ ಕಾರಣಗಳಿಂದ ಅವನ ಸಾಹಚರ್ಯ ಮಾತ್ರ ದೀರ್ಘ ಕಾಲ‌ ಲಭಿಸದೇ ಹೋದ ಬಗ್ಗೆ ನೋವಿದೆ ಅವಳಲ್ಲಿ. ಮೂವರು ಪತ್ನಿಯರು, ಮೂವರು ಮಕ್ಕಳಿದ್ದರೂ ಅವರ ಬೆಳವಣಿಗೆ ನೋಡುವ ಭಾಗ್ಯ ಭೀಮನಿಗೆ ದಕ್ಕದೇ ಹೋದ ಬಗ್ಗೆ ಬೇಸರ ಇದೆ. ಎಲ್ಲ ನೋವುಗಳನ್ನು ತನ್ನೊಳಗೇ ನುಂಗಿ ಕಣ್ಣೆದುರು ಬೆಳೆಯುವ ಬದುಕಿನತ್ತ ನೋಡುವ ವಿಶಾಲ ಮನಸ್ಸೂ ಸಹ ಇದೆ. ಆಕೆಯ ಇಡೀ ಬದುಕಿಗೆ ಹಿಡಿದ ಕೈಗನ್ನಡಿ ಈ ಕಾದಂಬರಿ. ಹುಟ್ಟಿನಿಂದ ಸಾವಿನವರೆಗೂ!

ಕಾದಂಬರಿಯಲ್ಲಿ ಅಲ್ಲಲ್ಲಿ ಲೇಖಕರು ಸನ್ನಿವೇಶಗಳಿಗೆ ಪೂರಕವಾಗಿ ಬಿಡಿಸಿದ ರೇಖಾಚಿತ್ರಗಳು ಒಂದು ಸೊಬಗು ನೀಡಿವೆ. ಆಶೀರ್ವಚನ ಬರೆದ ಸಚಿನ್ ಅವರ ತಂದೆ ವಿ. ಎಚ್. ನಾಯಕ್ ಹಾಗೂ ಮುನ್ನುಡಿ ಬರೆದ ಸಹನಾ ಹೆಗಡೆಯವರ ಮಾತುಗಳು ತೂಕ ಹೆಚ್ಚಿಸಿವೆ. ಒಂದು ಪುಟ್ಟ ಪಾತ್ರವನ್ನು ಕಾದಂಬರಿಯ ಮಟ್ಟಕ್ಕೆ ಬೆಳೆಸಿದ್ದು ಖುಷಿಕೊಟ್ಟಿತು. ಇಂತಹ ಪುಸ್ತಕಗಳು ಮತ್ತಷ್ಟು ಹೆಚ್ಚು ಜನರಿಗೆ ತಲುಪಬೇಕು.

ಒಟ್ಟಿನಲ್ಲಿ ಈ ಓದು, ಅದರ ಹೆಣಿಗೆ, ಲೇಖಕರ ಪದ ಲಾಲಿತ್ಯ, ಭಾಷೆಯ ಮೇಲಣ ಹಿಡಿತ, ದೃಶ್ಯಗಳನ್ನು ಕಟ್ಟಿ ಕೊಟ್ಟ ರೀತಿಯಿಂದ ಅಂದಿನ ಕಾಶಿ, ಇಂದ್ರಪ್ರಸ್ಥ, ಕುರುಕ್ಷೇತ್ರ ಯುದ್ಧಭೂಮಿ… ಎಲ್ಲವೂ ಕಣ್ಣೆದುರು ಹಾದು ಹೋಗುತ್ತವೆ.‌ ಪುಸ್ತಕದ ಮುದ್ರಿತ ಅಕ್ಷರಗಳ ಗಾತ್ರವನ್ನು ಒಂದಿಷ್ಟು ಕಡಿಮೆಯಾಗಿಸಿದರೆ ಚೆನ್ನಾಗಿರುತ್ತದೆ ಅನ್ನಿಸಿತು. ಉತ್ತಮ ಓದಿನ ಅನುಭವಕ್ಕಾಗಿ ಧನ್ಯವಾದಗಳು.

ಅಂದಹಾಗೆ ಈ ಪುಸ್ತಕದ ಕಥಾನಾಯಕಿಯ ಹೆಸರನ್ನೇ ನಾನು ಹೇಳಲಿಲ್ಲ ಅಲ್ಲವೇ…! ಕುತೂಹಲ ಹಾಗೇ ಇರಲಿ, ನೀವೇ ಓದಿ ನೋಡಿ!!


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW