ಪಶ್ಚಾತ್ತಾಪ – ಚಂದನ ಚಂದು

ತಿಳಿದೋ ಅಥವಾ ತಿಳಿಯದೆಯೋ ನಮ್ಮಿಂದ ಕೆಲವೊಮ್ಮೆ ಮಾಡಿದ ತಪ್ಪು ಜೀವನ ಪರ್ಯಂತ ನೆನಪುಗಳಲ್ಲಿ ಕಾಡುತ್ತಲೇ ಇರುತ್ತದೆ. ಚಂದನ ಚಂದು ಅವರ ಲೇಖನಿಯಲ್ಲಿ ಪಶ್ಚಾತ್ತಾಪ. ತಪ್ಪದೆ ಮುಂದೆ ಓದಿ…

ತಿಳಿದೋ ಅಥವಾ ತಿಳಿಯದೆಯೋ, ನಮ್ಮಿಂದ ಅಥವಾ ನಾವು ಮಾಡುವ ತಪ್ಪುಗಳಿಂದ ಇತರರಿಗೆ ನೋವು, ಕಷ್ಟ, ದುಃಖಗಳು ಎದುರಾಗುತ್ತವೆ ಅಂತ ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುತ್ತೇವೆ ಹಾಗು ತಿಳಿದುಕೊಳ್ಳುತ್ತೇವೆ. ಅದು ಸಹಜವಾದರೂ ಒಂದು ಲೆಕ್ಕಾಚಾರದಲ್ಲಿ ನಿಜವೂ ಹೌದು.

ಆದರೆ, ತಿಳಿದೋ ಅಥವಾ ತಿಳಿಯದೆಯೋ ನಮ್ಮಿಂದ ಅಥವಾ ನಾವು ಮಾಡುವ ತಪ್ಪುಗಳಿಂದ ಇತರರಿಗೆ ಆಗುವ ನೋವು, ಕಷ್ಟ, ದುಃಖಗಳಂತೆ ನಮಗೂ ಸಹ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಅಥವಾ ಎದುರಿಸುವ ಪರಿಸ್ಥಿತಿ ಬರುತ್ತದೆ ಅಂತ ಸಾಮಾನ್ಯವಾಗಿ ಯಾರೂ ಅಂದುಕೊಳ್ಳುವುದಿಲ್ಲ.

ನಮ್ಮಿಂದ ಆಗುವ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳೂ ಸಹ ನಮಗೆ ಜೀವನ ಪರ್ಯಂತ ಪಶ್ಚಾತ್ತಾಪ ಪಡುವಂತೆ, ಪಶ್ಚಾತ್ತಾಪ ಪಡುತ್ತಾ ಬದುಕುವಂತೆ ಮಾಡಿ ಬಿಡುತ್ತವೆ. ಅದು ಬೇಕಂತಲೇ ಮಾಡಿರಲಿ ಅಥವಾ ನಮಗೆ ತಿಳಿಯದ ಹಾಗೆಯೇ ನಡೆದಿರಲಿ ಅದರ ಪ್ರತಿಫಲವನ್ನು ಪಶ್ಚಾತ್ತಾಪ ಪಡುತ್ತಲೇ ನಾವು ಅನುಭವಿಸಲೇಬೇಕು. ಅಂತಹ ಪರಿಸ್ಥಿತಿ ನಮ್ಮ ಜೀವನದಲ್ಲಿ ಎದುರಾದಾಗ, ನಮ್ಮ ಜೀವನದಲ್ಲಿ ನಮ್ಮಿಂದ ಆದ ತಪ್ಪಿನ ಅರಿವಾಗಿ ಎಷ್ಟೇ ಕ್ಷಮೆ ಕೇಳಿದರೂ, ಎದುರಿಗಿನ ವ್ಯಕ್ತಿ ಕ್ಷಮಿಸಿದ್ದೇವೆ ಅಂದರೂ ಆ ಕ್ಷಮೆಯನ್ನು ಮನಸ್ಸು ಸ್ವೀಕರಿಸಲಾರದು. ಯಾಕೆಂದರೆ ಆ ತಪ್ಪಿನ ಹೊರೆ ಮನಸ್ಸಿಗೆ ಅಷ್ಟು ಭಾರವಾಗಿ ಭಾಸವಾಗುತ್ತದೆ.

ಮಾಡಿದ ತಪ್ಪು ಕೆಲವೊಮ್ಮೆ ಜೀವನ ಪರ್ಯಂತ ನೆನಪುಗಳಲ್ಲಿ ಕೊಲ್ಲುತ್ತಲೇ ಇರುತ್ತವೆ. ಕ್ಷಮಿಸಲಾರದ ತಪ್ಪು ಮಾಡಿದ್ದೇವೆ ಅಂತ ಮನಸ್ಸಿಗೆ ಅರ್ಥವಾದ ಮೇಲೆ ಮಾಡಿದ ತಪ್ಪನ್ನು ಮರೆಯಲು ಸಾಧ್ಯವೇ ಇರಲ್ಲ. ಎಷ್ಟೇ ಸಮಯ ಕಳೆದರೂ ಆ ಒಂದು ತಪ್ಪು ಪ್ರತಿದಿನ, ಪ್ರತಿಕ್ಷಣ ನೆನಪಾಗಿ ಕಾಡುವಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಜೀವನದಲ್ಲಿ ಆಗುವ ಬದಲಾವಣೆ ಹೀಗೆಯೇ ಇರುತ್ತೆ ಅಂತ ಹೇಳಲಿಕ್ಕಾಗದು. ಆ ಬದಲಾವಣೆ ನಮ್ಮನ್ನು ಯಾವ ಹಂತಕ್ಕೆ, ಯಾವ ದಿಕ್ಕಿಗೆ ಕೊಂಡೋಯುತ್ತದೆ ಅಂತಲೂ ಹೇಳಲಿಕ್ಕಾಗದು. ಬದಲಾವಣೆ ಹಿಂದಿನಂತೆ ಉತ್ಸಾಹದಿಂದ ಕೂಡಿರಲ್ಲ. ನಗುವಿನಿಂದ ಕೂಡಿರಲ್ಲ. ಕುಂತರೂ, ನಿಂತರೂ ನಮ್ಮಿಂದ ಆದ ತಪ್ಪು, ಅದರಿಂದ ಆದ ಪರಿಣಾಮವನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತಿರುತ್ತದೆ.

ಎಷ್ಟೇ ಕಣ್ಣೀರು ಸುರಿಸಿದರೂ, ಎಷ್ಟೇ ಕ್ಷಮೆ ಕೇಳಿದರೂ ಆ ಒಂದು ತಪ್ಪು ಮರೆಯಲು ಅಸಾಧ್ಯ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಜೀವವಿದ್ದರೂ ಜೀವವಿಲ್ಲದ ಹಾಗೆ ಕೊನೆವರೆಗೂ ಪಶ್ಚಾತ್ತಾಪದಲ್ಲಿ  ಬದುಕುವ ಬದುಕು ಶಾಪವಾಗಿ ಜೀವನದಲ್ಲಿ ಕಾಡುತ್ತಲಿರುತ್ತೆ.


  • ಚಂದನ ಚಂದು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading