ನಮ್ಮ ನಡುವೆ ಇರುವ ಬಹುಮುಖಿ ಪ್ರತಿಭೆಯ ವ್ಯಕ್ತಿತ್ವದ ರಹಮತ್ ತರೀಕೆರೆ ಅವರ ‘ಚಿಂತನೆಯ ಪಾಡು’ ಕೃತಿ ಅವರ ವಿಸ್ತಾರವಾದ ಅಧ್ಯಯನ ಮತ್ತು ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ. ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಇದರಲ್ಲಿ ಸೃಜನಶೀಲ ಕೃತಿಗಳಿಂದ ಮೊದಲು ಗೊಂಡು,ವಿದ್ವತ್ ಕೃತಿಗಳವರೆಗೂ ಏಕಪ್ರಕಾರವಾಗಿ ಅವರ ಚಿಂತನೆಯ ಹರವು ಇದೆ. ಕತೆ, ಕಾದಂಬರಿ, ಪ್ರವಾಸ ಕಥನ, ಆತ್ಮಚರಿತ್ರೆಗಳ ಕುರಿತು ಬರೆದಂತೆ, ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ತೀ.ನಂ.ಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆಯಂತಹ ಕೃತಿಗಳ ಕುರಿತು ಸಮಾನ ದಂಡಿಯಲ್ಲಿ ಬರೆಯುತ್ತಾರೆ.ಈ ನೆಲೆಯಲ್ಲಿ ಅವರು ಕುವೆಂಪು ಅವರ ವಾರಸುದಾರ ಎಂದು ಕರೆದರೆ ತಪ್ಪಾಗಲಾರದು.ಏಕೆಂದರೆ ಅವರಂತೆ ಇವರಿಗೆ ಕೂಡ “ಯಾವುದೂ ಮುಖ್ಯವಲ್ಲ ಯಾವುದೂ ಅಮುಖ್ಯವಲ್ಲ”.
ಅಧ್ಯಯನಕ್ಕಾಗಿ ಇದನ್ನು ಮೇಲೆ ಹೇಳಿದಂತೆ ಸೃಜನಶೀಲ ಮತ್ತು ಸೃಜನೇತರ ಎಂಬ ವಿಭಾಗದಡಿಯಲ್ಲಿ ಪರಿಶೀಲನೆ ನಡೆಸಬಹುದು. ಮೊದಲ ಭಾಗಕ್ಕೆ ಕಾದಂಬರಿ, ಕತೆ, ಪ್ರವಾಸ ಕಥನ, ಆತ್ಮಚರಿತ್ರೆ ಸೇರುತ್ತವೆ. ಎರಡನೇ ಭಾಗಕ್ಕೆ ಮೇಲೆ ಉಲ್ಲೇಖಿಸಿದ ಶೆಟ್ಟರ್, ತೀನಂಶ್ರೀ, ಅಂತಯ್ಯ ಮುಂತಾದ ಕೃತಿಗಳು ಸೇರುತ್ತವೆ.
ಭಾಗ೧: ಇದರಲ್ಲಿ ಮತ್ತೆ ಕತೆ, ಕಾದಂಬರಿ, ಪ್ರವಾಸ ಕಥನ, ಆತ್ಮಚರಿತ್ರೆಗಳು ಎಂದು ಮರು ವಿಂಗಡಣೆ ಮಾಡುವ ಅವಕಾಶ ಇದೆ. ಕತೆಗೆ ನಾಗವೇಣಿ ಅವರ ಕಥಾಸಂಕಲನ, ಕಾದಂಬರಿಗಳಿಗೆ ಕುಸುಮಾಕರ ದೇವರ ಗೆಣ್ಣೂರ ಅವರ ಬಯಲು ಬಸಿರು, ಬಾಳಾಸಾಹೇಬ ಲೋಕಾಪುರ ಅವರ ಹುತ್ತ, ಪ್ರವಾಸ ಕಥನಕ್ಕೆ ವಿ.ಸೀ ಅವರ ಪಂಪಾಯಾತ್ರೆ ನೇಮೀಚಂದ್ರ ಅವರ ಪೆರುವಿನ ಕಣಿವೆಯೊಳಗೆ, ಜೀವನ ಚರಿತ್ರೆಗೆ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳ ಯೋಗ್ದಾಗೆಲ್ಲ ಐತೆ, ಆತ್ಮ ಚರಿತ್ರೆಗೆ ವೈದ್ಯನೊಬ್ಬನ ಆತ್ಮ ಚರಿತ್ರೆ, ಸಿ.ಜಿ.ಕೃಷ್ಣಸ್ವಾಮಿ ಅವರ ಕತ್ತಲಾ ಬೆಳದಿಂಗಳೊಳಗೆ ಕೃತಿಗಳು ….. ಸೇರುತ್ತವೆ.

ಇವುಗಳ ಕುರಿತು ಅವರ ಬರಹಗಳ ಸಾಮಾನ್ಯ ಲಕ್ಷಣಗಳು ಎಂದರೆ, ಆಯಾ ಪ್ರಕಾರದ ವೈಶಿಷ್ಟ್ಯಗಳನ್ನು ಗುರುತಿಸಿ, ಆ ಲೇಖಕರ ಇತರ ಕೃತಿಗಳು, ಮತ್ತು ಸಮಕಾಲೀನ ಅಂತಹ ಲೇಖಕರ ಹಿನ್ನೆಲೆಯಲ್ಲಿ ಅವರ ಕೃತಿಯ ಸಾಧನೆ ಮತ್ತು ಮಿತಿಯನ್ನು ಗುರುತಿಸುವುದು. ನಾಗವೇಣಿಯರ ಕಥಾಸಂಕಲನ ಕುರಿತಾಗಲಿ, ಶಂಕರ ಮೊಕಾಶಿ ಪುಣೇಕರ,ಕುಸುಮಾಕರರ ಮತ್ತು ಲೋಕಾಪುರ ಅವರ ಕಾದಂಬರಿಗಳ ಕುರಿತ ವಿಶ್ಲೇಷಣೆ ಹಾಗೂ ನೇಮೀಚಂದ್ರ ಅವರ ಪೆರು ಕಣಿವೆಯೊಳಗೆ ಕುರಿತ ಬರಹಗಳಲ್ಲಾಗಲಿ ಇದನ್ನು ಕಾಣಬಹುದು.
ಮೊದಲಿಗೆ ನಾಗವೇಣಿ ಅವರ ಕಥಾಸಂಕಲನ ‘ಮೀಯುವ ಆಟ’ದ ವೈಶಿಷ್ಟ್ಯ ಕುರಿತ ಬರಹದಲ್ಲಿ, ಅವರ ಇತರ ಕಥಾಸಂಕಲನ ಮತ್ತು ಕಾದಂಬರಿಗೆ ಇರುವ ಸಮಾನ ಲಕ್ಷಣವಾಗಿ, ದಕ್ಷಿಣ ಕನ್ನಡದ ಕೆಳವರ್ಗದ ಸಂಸ್ಕೃತಿ ಅವುಗಳಲ್ಲಿ ಪ್ರಕಟಗೊಂಡ ಬಗೆಯನ್ನು ಗುರುತಿಸುತ್ತಾರೆ.ಅದೇ ಸಂದರ್ಭದಲ್ಲಿ ಅದು ಎಷ್ಟರಮಟ್ಟಿಗೆ ಕಥಾಶರೀರಕ್ಕೆ ಅವಶ್ಯಕ ಅಥವಾ ಅನಾವಶ್ಯಕ ಎಂದು ಸೂಚಿಸುವ ಮೂಲಕ ಅಂತಹ ವಿವರಗಳ ಮಿತಿಯನ್ನು ಕೂಡ ಗುರುತಿಸುವುದು ,ಅವರ ರೂಪನಿಷ್ಠ ವಿಮರ್ಶೆಗೆ ನಿದರ್ಶನ. ಕುಂ.ವೀ ಸಮಗ್ರ ಕತೆಗಳಲ್ಲಿ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿದ ಜನರ ಬವಣೆಗಳು ಕಪ್ಪು ಬಿಳುಪು ಪಡೆದುಕೊಂಡ ಮಿತಿಯನ್ನು ಗುರುತಿಸಿ, ಪ್ರಾಣಿಗಳು ಕೂಡ ಅವರ ಕಥೆಗಳ ಅವಿಭಾಜ್ಯ ಅಂಗವಾಗಿದೆ ಎಂದು ಕುವೆಂಪು ಕಾದಂಬರಿಯ ನಾಯಿಗುತ್ತಿಯನ್ನು ನೆನಪು ಮಾಡಿ ಕೊಂಡು, ಅವರ ಕೆಲವು ಕತೆಗಳು ಮಾತ್ರ, ಅವರ ಸಾಮಾನ್ಯ ಕಪ್ಪು ಬಿಳುಪಿನ ಕತೆಗಳ ಬದಲಾಗಿ, ವಸ್ತುನಿಷ್ಠವಾಗಿ ಚಿತ್ರಣಗೊಂಡಿವೆ ಎಂದು ನಿರೂಪಿಸಿದ್ದಾರೆ.
ಶಂಕರಮೊಕಾಶಿಯವರ ‘ಗಂಗವ್ವ ಗಂಗಾಮಾಯಿ’ ಕಾದಂಬರಿಯಲ್ಲಿ ಅವಳ ವ್ಯಕ್ತಿತ್ವದ ಗಟ್ಟಿತನ ಮತ್ತು ಅವಳ ತಮ್ಮ ರಾಘವನ ಪಾತ್ರಗಳ ವೈಶಿಷ್ಟ್ಯವನ್ನು ಗುರುತಿಸಿ ,ಅವಳ ಜೀವನ್ಮುಖಿ ಧೋರಣೆ ಮತ್ತು ಅವನ ಕ್ರೌರ್ಯದ ಸ್ವರೂಪದ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರ ಮುಂದಿನ ಕಾದಂಬರಿಗಳಾದ ನಟಿನಾರಾಯಣಿ ಮತ್ತು ಅವಧೇಶ್ವರಿಗಳಿಗಿಂತ ಈ ಕಾದಂಬರಿ ಮಹತ್ವದ ಕಾದಂಬರಿ ಎಂಬ ನಿಲುವಿಗೆ ಬಂದಿದ್ದಾರೆ . ಅದಕ್ಕೆ ಅವರು ಸಮರ್ಥವಾಗಿ ಬಳಸಿರುವ ಭಾಷಾ ಶರೀರ ಕೂಡ ಕಾರಣ ಎಂದು ವಿಶ್ಲೇಷಿಸಿದ್ದಾರೆ . ಕುಸುಮಕಾರರ ‘ಬಯಲು ಬಸಿರು’ ಕಾದಂಬರಿಯ ತಾತ್ವಿಕತೆಯನ್ನು, ಅನಂತಮೂರ್ತಿಯವರ ಮತ್ತು ಶಾಂತಿನಾಥ ದೇಸಾಯರ ಕಾದಂಬರಿಗಳ ತಾತ್ವಿಕ ಹಿನ್ನೆಲೆಯಲ್ಲಿ ಇಟ್ಟು ಪರಿಶೀಲಿಸಿದ್ದಾರೆ, ಇದು ಅಂತಾರಾಷ್ಟ್ರೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಯುದ್ಧಮುಖಿ ಅಮೇರಿಕಾದಿಂದ ಬೇಸತ್ತು, ಭಾರತಕ್ಕೆ ಬಂದ ನ್ಯಾರ್ಮನ್, ಇಲ್ಲಿನ ಆಶ್ರಮಗಳ ವ್ಯವಸ್ಥೆಯಿಂದ, ಭ್ರಮನಿರಸನಗೊಂಡ ದುರಂತದ ಅನಾವರಣ ಒಳಗೊಂಡಿದೆ ಎಂದು, ಆದರೆ ಅದಕ್ಕೆ ಬೇಕಾದ ಗಟ್ಟಿಯಾದ ಕಥಾಹಂದರವಿಲ್ಲವೆಂದು ಅದರ, ಮಿತಿಯನ್ನು ಗುರುತಿಸಿದ್ದಾರೆ.
ಕನ್ನಡದ ಜೈನ ಪರಂಪರೆಯ ಕಾದಂಬರಿಗಳ ಹಿನ್ನೆಲೆಯಲ್ಲಿ ಮಿರ್ಜಿ ಅಣ್ಣಾರಾಯ ಅವರ ನಿಸರ್ಗ, ಶಾಂತಿನಾಥ ದೇಸಾಯಿ ಅವರ ಓಂ ಣಮೋ ಕಾದಂಬರಿಗಳ ಹಿನ್ನೆಲೆಯಲ್ಲಿ ಬಾಳಾ ಸಾಹೇಬ ಲೋಕಾಪುರ ಅವರ ‘ಹುತ್ತ’ ಕಾದಂಬರಿಯನ್ನು ವಿಶ್ಲೇಷಣೆ ಮಾಡುತ್ತಾ ಅಲ್ಪಸಂಖ್ಯಾತರಾದ ಕೃಷಿ ನಿರತ ಜೈನ ಸಮುದಾಯ, ಅನ್ಯ ಸಮುದಾಯದ ಜತೆ ಮಾಡಿಕೊಳ್ಳಬೇಕಾದ ಹೊಂದಾಣಿಕೆ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುವ ಬಗೆಯನ್ನು ,ಅನಾವರಣ ಮಾಡುವ ಈ ಕಾದಂಬರಿ ಅನನ್ಯವಾದುದು.
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಅವರು ಮುಕುಂದಸ್ವಾಮಿ ಗಳ ಕುರಿತು ಬರೆದ ‘ಯೇಗ್ ಯೇಗ್ದಾಗೆಲ್ಲ ಐತೆ’ ಕೃತಿಯಲ್ಲಿ,ಅವರ ಅವಧೂತ ವ್ಯಕ್ತಿತ್ವದ ಅನಾವರಣ ಮಾಡಿದ್ದಾರೆ. ಅವರ.ಸರಳತೆ, ಅವರು ಮಾಡಿದ ಪವಾಡಗಳು ಅವರ ಮಾನವೀಯತೆಗೆ ಸಾಕ್ಷಿ ಎನ್ನುವಂತೆ ಚಿತ್ರಿಸಲಾಗಿದೆ. ಅವರ ಕೆಲವು ಮಾತುಗಳನ್ನು ಅವರ ದುಡಿಮೆಯ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ.

ಸಿ.ಜಿ.ಕೃಷ್ಣಸ್ವಾಮಿ ಅವರ “ಕತ್ತಲಾ ಬೆಳದಿಂಗಳೊಳಗೆ’ ಕೃತಿಯನ್ನು ಸಿದ್ದಲಿಂಗಯ್ಯ ಅವರ ‘ಊರುಕೇರಿ’ ಆತ್ಮಚರಿತ್ರೆಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಆವರ ಕೆಳವರ್ಗದ ಮತ್ತು ಅಂಗವೈಕಲ್ಯ ಎರಡೂ ,ಅವರ ರಂಗ ಭೂಮಿಯ ಅನುಭವವನ್ನು ನೇಪಥ್ಯದಲ್ಲಿ ಇರುವ ಕಲಾವಿದರ ಕುರಿತು ಕಾಳಜಿ ವಹಿಸಿ ಬರೆಯಲು ಕಾರಣವಾಗಿದೆ ಎಂದು ಗುರುತಿಸಲಾಗಿದೆ.
ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ಅವರ ಆತ್ಮ ಚರಿತ್ರೆ’ರಸೀದಿ ಚೀಟಿ’ಯಲ್ಲಿ ಅವರ ಅನನ್ಯ ಬಂಡುಕೋರ ವ್ಯಕ್ತಿತ್ವದ ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ .
ವಿ.ಸೀ ಯವರ ಪಂಪಾಯಾತ್ರೆಯಲ್ಲಿ ವ್ಯಕ್ತವಾಗುವ ಅವರ ಜೊತೆಗಾರರ ಮಡಿವಂತಿಕೆ, ವಿರೂಪಾಕ್ಷನಿಗಿಂತ, ಪಂಪಾ ಸರೋವರ ಮತ್ತು ವಿದ್ಯಾರಣ್ಯರ ಕುರಿತ ಭಕ್ತಿಯೇ ಹೆಚ್ಚು. ಅದರ ನಡುವೆ ಕೂಡ ವ್ಯಕ್ತವಾಗುವ ಅವರ ಚೇಷ್ಟೆ ಒಂದು ಬಗೆಯ ಲಹರಿಯನ್ನು ಒದಗಿಸಿದೆ ಎಂದು ಗುರುತಿಸಲಾಗಿದೆ.
ನೇಮೀಚಂದ್ರ ಅವರ ‘ಪೆರು ಕಣಿವೆಯಲ್ಲಿ’ ಪ್ರವಾಸ ಕಥನ ಲ್ಯಾಟಿನ್ ಅಮೆರಿಕ ಅನುಭವವನ್ನು ಅವರ ಅಮೇರಿಕಾದ ಪ್ರವಾಸದ ಹಿನ್ನಲೆಯಲ್ಲಿ ಬರೆದಿರುವುದು, ಅದಕ್ಕೆ ಒಂದು ತುಲನಾತ್ಮಕ ಗುಣಕ್ಕೆ ಕಾರಣವಾಗಿದೆ ಅಮೇರಿಕಾದ ಬಗೆಗೆ ಅವರ ಪೂರ್ವಾಗ್ರಹ, ಪೆರು ಕಣಿವೆಯನ್ನು ಮೆಚ್ಚಲು ಅಮೇರಿಕಾದ ವಿರುದ್ಧದ ಅದರ ಹೋರಾಟವನ್ನು ಬೆಂಬಲಿಸಿ ಬರೆಯಲು ಸಾಧ್ಯವಾಗಿದೆ.ಎಂದು ಸರಿಯಾದ ನಿಲುವು ತಳೆದಿದ್ದಾರೆ. ಕನ್ನಡ ವಿ.ವಿ.ಪ್ರಕಟಿಸಿದ ಕುವೆಂಪು ಸಮಗ್ರ ಗದ್ಯದ ಅವಲೋಕನದಲ್ಲಿ ಕುವೆಂಪು ಮುಂತಾದ ಅವರ ಮನುಜಮತ ವಿಶ್ವಪಥ ಪರಿಕಲ್ಪನೆಯನ್ನು ಮೀರಿ ಅವರು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ನಾಂದಿ ಹಾಡಿದ ಬಗೆಯನ್ನು ಅವರ ಋಷಿ ವಾಣಿಯಿಂದ ಆರಂಭಿಸಿ ‘ನಮಗೆ ಬೇಕಾದ ಇಂಗ್ಲಿಷ್, ‘
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ “ನಿರಂಕುಶಮತಿಗಳಾಗಿ ಆತ್ಮಶ್ರೀಗಾಗಿ” ಕ್ರಾಂತಿ ಕಹಳೆ’ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ” ಇತ್ಯಾದಿಗಳ ಮೂಲಕ ಉಂಟು ಮಾಡಿದ ನವಜಾಗೃತಿಯನ್ನು, ಉಲ್ಲೇಖ ಮಾಡಿ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು ಎಂದು ಕರೆದಿದ್ದಾರೆ. ಅದರೊಂದಿಗೆ ವೇದ ಉಪನಿಷತ್ ಗಳ ಮೂಲಕ ಅವರು ವೈದಿಕತೆಗೆ ಮೊರೆಹೋದ ಮಿತಿಯನ್ನು ಅವರು ಗುರುತಿಸಲು ಹಿಂಜರಿಯುವುದಿಲ್ಲ.
ಪು.ತಿ.ನ ಅವರ ಗದ್ಯದಲ್ಲಿ ಕೆಲವೊಮ್ಮೆ ಅವರ ಸಂಸ್ಕೃತ ಭೂಯಿಷ್ಟ ಭಾಷೆ ಸಂವಹನಕ್ಕೆ ತೊಡಕನ್ನು ಉಂಟು ಮಾಡುತ್ತದೆ ಎಂದು, ಆದರೆ, ಅವರು ದೇಗುಲ ಸಂಸ್ಕೃತಿಯನ್ನು ಕೇಂದ್ರ ಮಾಡಿಕೊಂಡರು, ದೇವರಿಗಿಂತ ಹೊರಗಿನ ಮಾನುಷ ಲೋಕವೇ ಅವರಿಗೆ ಪ್ರಿಯವಾದದ್ದು, ಎಂದು ಸ್ಥಾಪಿಸಲು ಅವರು ಚಿತ್ರಿಸಿದ ದೇಗುಲಕ್ಕೆ ನೀರು ಸರಬರಾಜು ಮಾಡುವ ಕೊಳಂದೆಯ ವ್ಯಕ್ತಿ ಚಿತ್ರ ನಿದರ್ಶನ ನನಗೆ ಕೂಡ ಪ್ರಿಯವಾದದ್ದು.
ಅಂತಯ್ಯನವರ ಕೃತಿ ಪರಿಚಯದಲ್ಲಿ ಶ್ರೀರಂಗಪಟ್ಟಣದಲ್ಲಿ ಕ್ರೈಸ್ತ ಮಿಷನರಿಗಳು ಎದುರಿಸಿದ ಸವಾಲುಗಳನ್ನು ಸಮರ್ಥವಾಗಿ ಬಿಂಬಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.ಅವರನ್ನು ಕಿಟೆಲ್ ಗೆ ಹೋಲಿಸಿ ಬರೆದಿರುವುದು ಉತ್ಪ್ರೇಕ್ಷೆ.
ಮ್ಯಾಡಿಸನ್ ಬರೆದ ಠಕ್ಕರ ಕುರಿತ ಕೃತಿಯಲ್ಲಿ ಭಾರತೀಯ ಬುಡಕಟ್ಟಿಗೆ ಸೇರಿದ ಆ ಜನರ ಚಿತ್ರಣದಲ್ಲಿ,ವಸಾಹತುಶಾಹಿಯ ನೋಟ ಎದ್ದು ಕಾಣುತ್ತದೆ ಎಂದು ಗುರುತಿಸಲಾಗಿದೆ .
ತೀನಂಶ್ರೀ ಅವರ ‘ಭಾರತೀಯ ಕಾವ್ಯ ಮೀಮಾಂಸೆ’ಯ ಕುರಿತು ಬರೆದ ಆಚಾರ್ಯ ಕೃತಿಯ ಭಾರ ಸಂಸ್ಕೃತ ಲಾಕ್ಷಣಿಕರನ್ನು ಅನುಸರಿಸಿ ಬರೆದ ಆ ಕೃತಿಯಲ್ಲಿ, ದ್ರಾವಿಡ ಕಾವ್ಯ ಮೀಮಾಂಸೆಗೆ ಸಿಗಬೇಕಾದ ಪ್ರಾಶಸ್ತ್ಯ ನೀಡಿಲ್ಲ ಎಂದು ,ಅದರ ಪುರುಷಾಧಿಕಾರ ನೆಲೆ ಅವರು ಕೊಡುವ ಲಕ್ಷ್ಯ ಪದ್ಯಗಳು ಸಾಕ್ಷಿಯಾಗಿದೆ ಎಂದು ಅದರ ಸರಿಯಾದ ಮೌಲ್ಯ ಮಾಪನ ಮಾಡಿದ್ದಾರೆ.
‘ಶಂಗಂ ತಮಿಳಗಂ’ ಕೃತಿಯಲ್ಲಿ ಶೆಟ್ಟರ್ ಅವರು ಪ್ರಾಚೀನ ತಮಿಳು ಕೃತಿ ಶಾಸನಗಳಲ್ಲಿ ದೊರೆತ ಆಕರಗಳನ್ನು ಆಧರಿಸಿ, ಕನ್ನಡದ ಪ್ರಾಚೀನತೆಯನ್ನು ಪುನಾರಚನೆ ಮಾಡಿದ್ದಾರೆ ಎಂದು ಅದರ ಮಹತ್ವದ ಅನಾವರಣಗೊಳಿಸಿದ್ದಾರೆ. ಇವರು ತಮ್ಮ ಅಧ್ಯಯನಕ್ಕೆ ಇಂಗ್ಲಿಷ್ ಆಕರಗಳ ಮೊರೆಹೋದ ಮಿತಿಯನ್ನು ಗುರುತಿಸಿ, ಮೊದಲ ಘಟ್ಟದ ನಮ್ಮ ವಿದ್ವಾಂಸರಾದ ಬಿ.ಎಂ.ಶ್ರೀ ಅವರು ತಮಿಳು ಮೂಲದ ಪುರನಾನೂರಿನ ಮೂಲಕ ಪ್ರಾಚೀನ ಕನ್ನಡ ಕನ್ನಡಿಗರ ಅಸ್ತಿತ್ವವನ್ನು ದಾಖಲಿಸಿದ್ದಾರೆ. ಅಲ್ಲದೆ ಎರಡನೇ ಶತಮಾನದ’ ಶಿಲಪ್ಪಧಿಕಾರಂ’ ಬೌದ್ಧ ಕಾವ್ಯದಲ್ಲಿ ಕರ್ನಾಟಕ ಮತ್ತು ಕನ್ನಡಿಗರನ್ನು ‘ಎರುಮೈನಾಡಗರ್” ಎಂದು ಕರೆದಿರುವುದನ್ನು ಕರೆದಿರುವುದನ್ನು ಗುರುತಿಸಿಸಬಹುದು.ಶಂಬಾ ಜೋಶಿಯವರು ಕನ್ನಡಿಗರ ಮೂಲವನ್ನು ಮರಾಠಿಯ ಮೂಲಕ ಪತ್ತೆಮಾಡಿದಂತೆ.
ಈ ಕೃತಿಯ ಸಾಧನೆಗಳು: ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸೇರಿದ ಮಹತ್ವದ ಕೃತಿಗಳನ್ನು ಆರಿಸಿ, ಅವುಗಳನ್ನು ಅವುಗಳ ಪ್ರಕಾರಗಳ ಹಿನ್ನೆಲೆಯಲ್ಲಿ ಅವುಗಳ ಸ್ಥಾನ ನಿರ್ದೇಶನ ಮಾಡಿದ್ದಾರೆ.ಇದರಲ್ಲಿ ಅವರ ವಿದ್ವತ್ತು ಎದ್ದು ಕಾಣುತ್ತದೆ.
ಮಿತಿಗಳು: ಸಾಧಾರವಿಲ್ಲದೆ ಡಿ.ವಿ.ಜಿ , ಮಾಸ್ತಿ, ದೇವುಡು ಅವರಿಗೆ ಸಾಂಪ್ರದಾಯಿಕರೆಂದು ಪಟ್ಟಕಟ್ಟಿರುವುದು.
- ರಘುನಾಥ್ ಕೃಷ್ಣಮಾಚಾರ್
