‘ಚೌಚೌ ಬಾತ್’ ಅಂಕಣ (ಭಾಗ – ೩೭)

ಒಂದೊತ್ತು ಯೋಗಿ, ಎರಡು ಹೊತ್ತು ಭೋಗಿ, ಮೂರು ಹೊತ್ತು ಎತ್ಕೊಂಡು ಹೋಗಿ ಎಂಬ ಗಾದೆ ಮಾತಿನಂತೆ ದಿನಕ್ಕೆ ಒಂದು ಹೊತ್ತು ಊಟ ಮಾಡುವವ ಯೋಗಿ ಆಗಿರುತ್ತಾನೆ. ಅವನಿಗೆ ಯಾವುದೇ ಕಾಯಿಲೆ ಕಸಾಲೆಗಳು ಅಷ್ಟಾಗಿ ಬಾಧಿಸದೆ ನಿರೋಗಿ ಆಗಿರುತ್ತಾನೆಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಬದಲಾದ ಜೀವನಶೈಲಿ’,ತಪ್ಪದೆ ಮುಂದೆ ಓದಿ…
ಇತ್ತೀಚೆಗೆ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಪ್ರತಿದಿನದ ಒಂದೊಂದು ಊಟದಲ್ಲಿಯೂ ಹೆಚ್ಚು ಪ್ರೋಟೀನ್, ವಿಟಮಿನ್, ಮಿನಿರಲ್ಸ್ ಫೈಬರ್ ನ ಸತ್ವ ಇರುವಂತೆ ಜಾಗೃತಿ ವಹಿಸುತ್ತಿದ್ದಾರೆ.  ಹಸಿರು ಸೊಪ್ಪು, ತರಕಾರಿ,ಮೊಳಕೆ ಕಾಳುಗಳ ಬಳಕೆ ಹೆಚ್ಚಾಗಿದೆ. ಈಗ ಎಂದೆಂದಿಗಿಂತಲೂ ಸಿರಿಧಾನ್ಯಗಳು, ರಾಗಿ, ಕೆಂಪಕ್ಕಿ, ಪಾಲಿಶ್ ಮಾಡದ ಅಕ್ಕಿಯ ಬಳಕೆ ಅವ್ಯಾಹತವಾಗಿ ಹೆಚ್ಚಾಗಿದೆ. ಮತ್ತೆ ಮಾನವ ಹಿಂದಿನ ಕಾಲದ ಆಹಾರ ಪದ್ಧತಿಗೆ ಮರಳುತ್ತಿದ್ದಾನೆ. ಓಲ್ಡ್ ಈಸ್ ಗೋಲ್ಡ್ ಎಂಬಂತೆ ಹಳೆಯದು ಅನ್ನೋದು ಈಗ  ಬಂಗಾರಕ್ಕಿಂತಲೂ ಅಧಿಕ ಮೌಲ್ಯಯುತವಾಗಿದೆ. ಹಳೆಯದಕ್ಕೆ ಮರಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇನ್ನೊಂದು ವರ್ಗ ಅಂದರೆ ಇಂದಿನ ಯುವ ಜನಾಂಗ ಫಾಸ್ಟ್ ಫುಡ್ ನತ್ತ ವಾಲುತ್ತಿರುವುದು ನುಂಗಲಾರದ ತುತ್ತಾಗಿದೆ.
ಒಂದು ಕಾಲದಲ್ಲಿ ಮಡಿಕೆ ಕುಡಿಕೆಗಳಲ್ಲಿ ಅಡುಗೆ ಮಾಡಿ ಊಟ ಮಾಡುತ್ತಿದ್ದವರನ್ನು ಆಡಿಕೊಳ್ಳುತ್ತಿದ್ದ ಜನರು ಈಗ ಅದೇ ಮಡಿಕೆ ಕುಡಿಕೆಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಮಣ್ಣಿನಿಂದ ಮಾಡಿದ ಲೋಟವನ್ನು ಮತ್ತೊಮ್ಮೆ ಕೆಂಡದಲ್ಲಿ ಸುಟ್ಟು ಅದರಲ್ಲಿ ಬಿಸಿ ಬಿಸಿ ಟೀ ಹಾಕಿ ಚುರ್ ಎನ್ನಿಸುವ ಖಡಕ್ ಚಾಯ್ ಇಂದಿನ ಟ್ರೆಂಡ್ ಆಗಿದೆ. ಅದರಲ್ಲೂ ಒಲೆಯ ಮೇಲೆ ಮಣ್ಣಿನ ಮಡಿಕೆಯಲ್ಲಿ ಆಹಾರ ಬೇಯಿಸಿ ತಿನ್ನುವುದರಿಂದ ಅಧಿಕ ಆರೋಗ್ಯಕರ ಲಾಭಗಳಿವೆ ಎಂಬುದನ್ನು ಅರಿತಿದ್ದಾರೆ. ದಿನನಿತ್ಯದ ಬದುಕಿನಲ್ಲಿ ಹೈರಾಣದ ಜನರು ವಾರಾಂತ್ಯದ ದಿನಗಳನ್ನು ಕೃತಕವಾಗಿ ನಿರ್ಮಿಸಿರುವ ಹಳ್ಳಿ ರೆಸಾರ್ಟ್ ಗಳಲ್ಲಿ ಕಳೆಯಲು ಬಯಸುತ್ತಿದ್ದಾರೆ. ಒಂದು ದಿನವಾದರೂ ಹಳ್ಳಿಯ ವಾತಾವರಣದಲ್ಲಿ ಕಳೆದು ಅದರ ಅನುಭೂತಿಯನ್ನು ಪಡೆಯಬೇಕೆಂಬ ಹಂಬಲ. ಹಳ್ಳಿಯಂತೆ ನಿರ್ಮಿಸಿರುವ ರೆಸಾರ್ಟ್ ಗಳಲ್ಲಿ ಕೃತಕ ಜಲಪಾತ,ಹಳ್ಳಿ ಮನೆ, ಹೊಲಗದ್ದೆ ತೋಟ ಮುಂತಾದ ನೈಸರ್ಗಿಕ ಪರಿಸರವನ್ನು ಮರು ಸೃಷ್ಟಿಸಿ ಜನರನ್ನು ತಣಿಸಿ ಒಂದು ದಿನದ ಮಟ್ಟಿಗಾದರೂ ಒತ್ತಡ ಮುಕ್ತ ಜೀವನವನ್ನು ಅನುಭವಿಸುವಂತೆ ಮಾಡುವುದು ರೆಸಾರ್ಟ್ ಓನರ್ ಗಳ ಗುರಿಯಾಗಿದೆ. ಜೊತೆಗೆ ಸಾಕಷ್ಟು ಆರ್ಥಿಕ ಲಾಭವೂ ಅವರಿಗಿದೆ. ದಿನವೊಂದಕ್ಕೆ ಐದು ಸಾವಿರದಿಂದ ಹತ್ತು ಸಾವಿರದವರೆಗೂ ಬಿಲ್ ಮಾಡುವ ರೆಸಾರ್ಟ್ ಗಳಿವೆ. ಇನ್ನು ದಿನನಿತ್ಯದ ಆಹಾರದಲ್ಲಿ  ಒಂದು ಹೊತ್ತಾದರೂ ಕೆಂಪಕ್ಕಿ ಅನ್ನ ಉಣ್ಣುವುದು ಹೆಚ್ಚು ಆರೋಗ್ಯಕರ ಎಂಬುದು ವೈದ್ಯರ ಅಭಿಮತ. ಕೆಂಪಕ್ಕಿ ಎಂದ ಕೂಡಲೇ ಮನಸ್ಸು ಮತ್ತದೇ ಬಾಲ್ಯಕ್ಕೆ ಓಡುತ್ತದೆ.
 ನಮ್ಮ ಊರಿನ ಪಕ್ಕದಲ್ಲಿ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ನಮ್ಮ ಅಜ್ಜಿಯ (ಅಮ್ಮನ ಚಿಕ್ಕಮ್ಮ )ಹಳ್ಳಿ. ಶನಿವಾರ ಭಾನುವಾರ ಬಂತೆಂದರೆ ಶಾಲೆಗೆ ರಜೆ, ನಮಗೆ ಆಟ ಆಡಲು ಮಜೆ. ಶನಿವಾರ ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಅಜ್ಜಿಯ ಹಳ್ಳಿಗೆ ಹೊರಟುಬಿಡುತ್ತಿದ್ದೆವು.  ನಾಲ್ಕಾಣೆಯೋ ಎಂಟಾಣೆಯೋ ಬಸ್ ಚಾರ್ಜ್. ದುಡ್ಡಿಗೆ ಏನೂ ಬರವಿರಲಿಲ್ಲ. ಕೇಳಿದಾಗಲೆಲ್ಲ ಅಪ್ಪ ದುಡ್ಡು ಕೊಡುತ್ತಿದ್ದರು.

ಫೋಟೋ ಕೃಪೆ : google
 ಅಜ್ಜಿ ಮನೆಗೆ ಹೋಗಿ ಅಲ್ಲಿ ಸೀದಾ ಹೊಲದ ಕಡೆಗೆ ಹೊರಟು ಬಿಡುತ್ತಿದ್ದೆವು.ಅಲ್ಲಿ ಆಗಲೇ ಅಜ್ಜಿ ತಾತ ಹೊಲದ ಬಳಿ ಕೆಲಸ ಮಾಡುತ್ತಿದ್ದರು.ಅಲ್ಲಿ ಬೆಟ್ಟದ ಬುಡದಲ್ಲೆ ತಾತನ ಹೊಲ. ಮಳೆಗಾಲದಲ್ಲಿ ಬೆಟ್ಟದ ಮೇಲಿಂದ ಬಿದ್ದ ನೀರೆಲ್ಲ ತಾತನ ಹೊಲದಲ್ಲಿ ಹಾಗೂ ಬಾವಿಯಲ್ಲಿ ಶೇಖರವಾಗುತ್ತಿದ್ದವು. ಹೊಲದ ಪಕ್ಕದಲ್ಲಿ ಹಳ್ಳ ಹರಿಯುತ್ತಿತ್ತು. ನಾವೆಲ್ಲಾ ನೀರು ಎರಚಿಕೊಳ್ಳುವ ಆಟ ಆಡುತ್ತಿದ್ದೆವು. ಅಲ್ಲೇ ಹಳ್ಳದ ಪಕ್ಕದಲ್ಲಿ ಒಂದು ಮಾವಿನ ಮರ ಇತ್ತು. ಆ ಮರಕ್ಕೆ ಹಗ್ಗದಿಂದ ಜೋಕಾಲಿ ಹಾಕಿ ಜೀಕುತ್ತಿದ್ದೆವು. ಬೇಸಿಗೆ ಕಾಲದಲ್ಲಾದರೆ ಆ ಮರದ ತುಂಬಾ ಮಾವಿನ ಕಾಯಿಗಳು ಇರುತ್ತಿದ್ದವು. ನಮಗೆ ಆಗಾಗ ತಿನ್ನಲು ಮಾವಿನಕಾಯಿಗಳನ್ನು ಅಣ್ಣ ಮರಕ್ಕೆ ಕಲ್ಲು ಹೊಡೆದು ಬಿಳಿಸಿಕೊಡುತ್ತಿದ್ದ. ಅದೂ ಬೇಸರವಾದರೆ ಅಲ್ಲೇ ಹಳ್ಳದಲ್ಲಿ ಹರಿಯುವ ನೀರಿನಲ್ಲಿ ತೇಲಿ ಬರುತ್ತಿದ್ದ ಏಡಿ ಹಾಗೂ ಸಣ್ಣ ಸಣ್ಣ ಮೀನುಗಳನ್ನು ಹಿಡಿಯುವ ಆಟ ಆಡುತ್ತಿದೆವು. ತಾತ ಹೊಲದಲ್ಲಿ ಭತ್ತ ಹಾಗೂ ರಾಗಿಯನ್ನು ಬೆಳೆಯುತ್ತಿದ್ದರು. ಅವರು ಬೆಳೆಯುತ್ತಿದ್ದದ್ದು ಕೆಂಪಕ್ಕಿಯನ್ನು ಅಂದರೆ ಈಗ ನಾವು ಹೇಳುವ ರೆಡ್ ರೈಸ್. ಕೆಂಪಕ್ಕಿಯನ್ನು ಆಗ ಹಾಲುಬ್ಬಲು ಅಕ್ಕಿ ಎಂದು ಕರೆಯುತ್ತಿದ್ದರು.
ಅದರ ಅನ್ನ ಕೆಂಪಗೆ ತುಂಬಾ ರುಚಿಯಾಗಿರುತ್ತಿತ್ತು.  ಅಜ್ಜಿ ಮಾಡುತ್ತಿದ್ದ ಕೆಂಪಕ್ಕಿ ಅನ್ನ, ಮನೆಯ ಅಂಗಳದಲ್ಲೇ ಇದ್ದ ಬಸಳೆ ಸೊಪ್ಪಿನ ಸಾಂಬಾರು, ಮೇಲೊಂದಿಷ್ಟು ತುಪ್ಪ ಹಾಕಿಕೊಂಡು ಬಾಯಿ ಚಪ್ಪರಿಸಿ ತಿನ್ನುತ್ತಿದ್ದೆವು. ಅಂದು ಅಜ್ಜಿ ಮಾಡುತ್ತಿದ್ದ ಅಡುಗೆ ಕೈ ರುಚಿ ಇಂದು ಬರಲು ಸಾಧ್ಯವೇ ಇಲ್ಲ. ಒಲೆಯಲ್ಲಿ ಅದರಲ್ಲೂ ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ ಕೆಂಪಕ್ಕಿ ಅನ್ನ ತುಂಬಾ ರುಚಿಯಾಗಿರುತ್ತಿತ್ತು. ಎಷ್ಟು ರುಚಿ ಎಂದರೆ ಒಂದೆರಡು ಕಲ್ಲು ಉಪ್ಪು, ಒಂದು ಹಸಿ ಮೆಣಸಿನಕಾಯಿ ಒಂದು ಚಮಚ ತುಪ್ಪ ಹಾಕಿ ಕಲಸಿಕೊಂಡು ತಿನ್ನುತ್ತಿದ್ದರೆ ಸಾಂಬಾರೇ ಬೇಕಾಗಿರಲಿಲ್ಲ. ಪ್ರತಿ ವರ್ಷ ತಾತ ಬೆಳೆಯುತ್ತಿದ್ದ ಭತ್ತದಲ್ಲಿ ನಮಗೂ ಒಂದು ಪಾಲು ಸಿಗುತ್ತಿತ್ತು. ಅಂತಹ ಭತ್ತವನ್ನು ದೊಡ್ಡಕ್ಕಿ ನೆಲ್ಲು ಎಂತಲೂ ಕರೆಯುತ್ತಿದ್ದರು.
ಫೋಟೋ ಕೃಪೆ : google

ಮಗ್ಗಿ ಪುಸ್ತಕದಲ್ಲಿ ಏ – ಏತ ಎಂದು ಓದಿ ಕೊಳ್ಳುತ್ತಿದ್ದ ನಾವು ತಾತನ ಹೊಲದಲ್ಲಿ ಏತವನ್ನು ಪ್ರತ್ಯಕ್ಷವಾಗಿ ಕಂಡಿದ್ದೆವು. ಬೇಸಿಗೆಯಲ್ಲಿ ರಾಗಿ ಹೊಲಕ್ಕೆ, ಭತ್ತದ ಗದ್ದೆಗೆ ನೀರು ಹರಿಸಲು ಬಾವಿಯಿಂದ ನೀರನ್ನು ಏತದ ಮೂಲಕ ಎತ್ತಿ ಕಾಲುವೆಗಳ ಮೂಲಕ ಹೊಲಕ್ಕೆ ಹರಿಸುತ್ತಿದ್ದರು.ಬಾವಿಯ ನೀರನ್ನು ಮೇಲಕ್ಕೆ ಎತ್ತುವ ಏತ ಹೇಗಿತ್ತೆಂದರೆ ಒಂದು ಅಗಲವಾದ ಚರ್ಮದ ಚೀಲವನ್ನು ಬೋಗುಣಿಯಾಕಾರದಲ್ಲಿ   ( ಬೌಲ್ ನಂತೆ) ರೆಡಿ ಮಾಡಿ ಅದನ್ನು ಎರಡು ದೊಡ್ಡ ಕಟ್ಟಿಗೆಗಳಿಗೆ ( ಗಳ) ಸಿಕ್ಕಿಸಿ ಕಟ್ಟಿ ಬಾವಿಯೊಳಕ್ಕೆ ಅದನ್ನು ಇಳಿ ಬಿಟ್ಟು ನೀರು ತುಂಬಿದ ಮೇಲೆ ಮೇಲಕ್ಕೆ ಎತ್ತಿ ಕಾಲುವೆಗಳಿಗೆ ಹರಿಸುತ್ತಿದ್ದರು. ಇದೇನು ಸುಲಭವಾದ ಕೆಲಸವಾಗಿರಲಿಲ್ಲ. ಮಾನವನ ಶ್ರಮ ಬೇಡುವ ಕಷ್ಟದಾಯಕ ಕೆಲಸ.  ಆಗಿನ ಕಾಲದ ಜನರು ದೈಹಿಕ ಶ್ರಮದಿಂದ ಜೀವನ ನಡೆಸುತ್ತಿದ್ದರು. ಅವರಿಗೆ ಯಾವುದೇ ವಾಕಿಂಗ್, ವ್ಯಾಯಾಮ, ಜಿಮ್ ಗಳ ಅವಶ್ಯಕತೆ ಇರಲಿಲ್ಲ.
ಆಗಿನ ಕಾಲದಲ್ಲಿ ಮನೆಯಿಂದ ಹೊಲಕ್ಕೆ ಏನಿಲ್ಲವೆಂದರೂ ಮೂರು ನಾಲ್ಕು ಮೈಲಿ ಅಂತರ ಇರುತ್ತಿತ್ತು. ಬೆಳಿಗ್ಗೆ ಸಂಜೆ ಹೊಲ ಮತ್ತು ಮನೆಗೆ ಒಮ್ಮೆ ಓಡಾಡಿದರೆ ಅದೇ ವ್ಯಾಯಾಮವಾಗುತ್ತಿತ್ತು. ಅಡಿಗೆ ಮಾಡಲು ಸೌದೆ ತರಲು, ಸಾಂಬಾರಿಗೆ ಸೊಪ್ಪು ತರಲು ಹಾಗೂ ಇನ್ನಿತರ ಕಾರ್ಯಗಳಿಗೆ ಪ್ರತಿದಿನ ಮನೆಯಿಂದ ಹೊಲಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಹೊಲದಲ್ಲಿ ಉಳುಮೆ ಮಾಡುವುದು, ಗೇಯುವುದು, ಭತ್ತದ ಪೈರು ನಾಟಿ ಮಾಡುವುದು, ಕಳೆ ಕೀಳುವುದು, ಭತ್ತದ ಹಾಗೂ ರಾಗಿಯ ತೆನೆಗಳ ಹೊರೆಯನ್ನು ಹೊತ್ತು  ಒಯ್ಯುವುದು ಇವೇ ಮೊದಲಾದ ಕೆಲಸ ಕಾರ್ಯಗಳು ಜನರನ್ನು ಸದಾ ಚಟುವಟಿಕೆಯಿಂದ ಇರಿಸುತ್ತಿದ್ದವು. ಇಂತಹ ಶ್ರಮದಾಯಕ ಕೆಲಸಗಳ ಮುಂದೆ ಯಾವ ವ್ಯಾಯಾಮವೂ  ಬೇಕಾಗಿರಲಿಲ್ಲ. ಇನ್ನು ಮನೆಯಲ್ಲಿ ಹೆಂಗಸರು ಭತ್ತ ಕುಟ್ಟುವುದು, ರಾಗಿ ಬೀಸುವುದು, ತೆನೆ ಬಡಿಯುವುದು, ಬಾವಿಯಿಂದ ನೀರು ಸೇದಿ ತರುವುದು, ಬಟ್ಟೆ ಒಗೆಯುವುದು, ಮುಂತಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದರು.
ಆಗ ನಮ್ಮ ತಾತನ ( ಅಪ್ಪನ ಅಪ್ಪ)ಮನೆಯಲ್ಲಿ ಸುಮಾರು ಮೂವತ್ತೈದು ನಲವತ್ತು ಜನರು ಇದ್ದರಂತೆ. ತಾತ ಅಜ್ಜಿಗೆ ಒಟ್ಟು ಹನ್ನೊಂದು ಜನ ಮಕ್ಕಳು, ಅದರಲ್ಲಿ ಮೂವರು ಯಾವುದೋ ಕಾಯಿಲೆಗೆ ತುತ್ತಾಗಿದ್ದರಂತೆ, ಉಳಿದಂತೆ ಎಂಟು ಜನ ಮಕ್ಕಳು, ಅವರ ಮಕ್ಕಳು ಎಲ್ಲಾ ಸೇರಿ ಮೂವತ್ತೈದು ಜನರಿದ್ದ ಅವಿಭಕ್ತ ಕುಟುಂಬ. ಅಷ್ಟು ಜನಕ್ಕೆ ಒಂದು ಹೊತ್ತಿಗೆ ಮುದ್ದೆ ಮಾಡಲು ಎಷ್ಟು ಸೇರು ರಾಗಿ ಬೇಕು ಅಷ್ಟನ್ನೇ ರಾಗಿ ಕಲ್ಲಿನಲ್ಲಿ ಬೀಸುತ್ತಿದ್ದರಂತೆ. ರಾಗಿ ಬೀಸುವ ಕಲ್ಲನ್ನು ಎತ್ತಿಡುವ ಪ್ರಮೇಯವೇ ಇರಲಿಲ್ಲವಂತೆ. ಏಕೆಂದರೆ ಬೆಳಿಗ್ಗೆ ಸಂಜೆ ರಾಗಿ ಕಲ್ಲು ಆಡುತ್ತಲೇ ಇರುತ್ತಿತ್ತು. ರಾಗಿ ಬೀಸಲೆಂದು ಮೂರ್ನಾಲ್ಕು ಹೆಣ್ಣಾಳುಗಳು ಮೀಸಲಾಗಿದ್ದರಂತೆ. ಒಂದು ಹೊತ್ತಿಗೆ ಎಷ್ಟು ಬೇಕೋ ಅಷ್ಟು ಹಿಟ್ಟನ್ನು ಮಾತ್ರ ಮಾಡಿಕೊಳ್ಳುತ್ತಿದ್ದರಂತೆ. ರಾಗಿ ಹಿಟ್ಟು ತಾಜಾ ವಾಗಿಯೂ ಆರೋಗ್ಯಕರವಾಗಿಯೂ ಇರುತ್ತಿತ್ತು. ಇಂತಹ ಶುದ್ಧ ಹಿಟ್ಟಿನಿಂದ ತಯಾರಿಸಿದ ಮುದ್ದೆಯು ಅಷ್ಟೇ ರುಚಿಕರವಾಗಿರುತ್ತಿತ್ತು. ಇದನ್ನೆಲ್ಲಾ ಅಪ್ಪ-ಅಮ್ಮ ಆಗಾಗ ನೆನಪಿಸಿಕೊಳ್ಳುತ್ತಿದ್ದರು.

ಮಸಾಲೆ ಪುಡಿ, ಧನಿಯಾ ಪುಡಿ ಖಾರದಪುಡಿಗಳನ್ನು ಆಗಿಂದಾಗ್ಗೆ ಮಾಡಿಕೊಳ್ಳುತ್ತಿದ್ದರಂತೆ. ಇದ್ದಕ್ಕಿದ್ದಂತೆ ಮನೆಗೆ ಯಾರಾದರೂ ನೆಂಟರು ಬಂದರೆ ಮನೆಯಲ್ಲೇ ಸಾಕಿರುತ್ತಿದ್ದ ಹುಂಜವನ್ನೋ, ಕೋಳಿಯನ್ನೋ ಕಲ್ಲು ಹೊಡೆದು ಕಾಲು ಮುರಿದು ಹಿಡಿದು ತಂದು ಕುಯ್ಯುತ್ತಿದ್ದರಂತೆ. ಏಕೆಂದರೆ ಹಗಲಿನಲ್ಲಿ ಕೋಳಿಗಳು ಮೇಯಲು ಬಯಲಿಗೆ ಹೋಗುತ್ತಿದ್ದವು. ರಾತ್ರಿಯಾದರೆ ಕೋಳಿ ಗೂಡಿನಲ್ಲಿ ಕೈಗೆ ಸುಲಭವಾಗಿ ಸಿಗುತ್ತಿದ್ದವು. ಆಗ ಕೋಳಿ ಸಾಂಬಾರಿಗೆ ಬೇಕಾದ ಮಸಾಲೆ ರುಬ್ಬಲು ಧನಿಯಾವನ್ನು ಆಗಲೇ ಹುರಿದು ಒರಳು ಕಲ್ಲಿಗೆ ಹಾಕಿ ಕುಟ್ಟಿ ಪುಡಿ ಮಾಡಿ ಜರಡಿ ಹಿಡಿದು ಕೊಡುತ್ತಿದ್ದರಂತೆ ನಮ್ಮ ಅಜ್ಜಿ. ಆಗ ತಾನೇ ಹುರಿದು ಪುಡಿ ಮಾಡಿದ ಧನಿಯಾ ಪುಡಿಯಿಂದ ಮಾಡಿದ ಸಾಂಬಾರಿನ ಸ್ವಾದ ಸುತ್ತಮುತ್ತ ಹತ್ತು ಹನ್ನೆರಡು ಮನೆಗಳಿಗೆ ಹಬ್ಬುತ್ತಿತ್ತಂತೆ. ಅಮ್ಮ ಇದನ್ನು ಆಗಾಗ ಮೆಲುಕು ಹಾಕುತ್ತಾರೆ.
ಆದರೆ ಈಗಿನ ಕಾಲದಲ್ಲಿ ಎಲ್ಲವೂ ರೆಡಿಮೇಡ್. ಹಪ್ಪಳ, ಉಪ್ಪಿನಕಾಯಿ, ಸಂಡಿಗೆ, ಸಾಂಬಾರು ಪುಡಿಗಳು, ರಾಗಿ ಹಿಟ್ಟು, ಅಕ್ಕಿ ಹಿಟ್ಟು ,ಜೋಳದ ಹಿಟ್ಟು, ಅಷ್ಟೇ ಏಕೆ ಅವರೆಕಾಳು ಹಿತಕಿ ಬಿಡಿಸಿದ ಬೇಳೆ, ಮೊಳಕೆ ಕಾಳುಗಳು, ಬಿಡಿಸಿದ ಜೋಳದ ಪಾಕೆಟ್ ಗಳು, ಹೆಚ್ಚಿದ ತರಕಾರಿಗಳು ಎಲ್ಲವೂ ಸಿದ್ಧವಾದ ಪಾಕೆಟ್ಗಳಲ್ಲಿ ದೊರೆಯುತ್ತವೆ. ಹಣ ಒಂದಿದ್ದರೆ ಸಾಕು ಎಲ್ಲವನ್ನು ಕೊಂಡುಕೊಳ್ಳಬಹುದು ಎಂಬಷ್ಟರ ಮಟ್ಟಿಗೆ ಬಂದು ತಲುಪಿದ್ದೇವೆ. ಅಲ್ಲದೆ ಮನೆಯಲ್ಲಿ ಈಗ ಎಲ್ಲರೂ ಹೊರಗಡೆ ಹೋಗಿ ದುಡಿಯುವುದು ಅನಿವಾರ್ಯವೂ ಆಗಿದೆ. ಎಲ್ಲರೂ ಬ್ಯುಸಿ, ಎಲ್ಲರಿಗೂ ಧಾವಂತದ ಬದುಕು.
ರೊಟ್ಟಿ, ಶೇಂಗಾ ಪುಡಿ, ಒಬ್ಬಟ್ಟು, ಇಡ್ಲಿ,  ದೋಸೆ ಬ್ಯಾಟರ್, ಪಿಜ್ಜಾ, ಬರ್ಗರ್, ಒತ್ತು ಶಾವಿಗೆ, ನೂಡಲ್ಸ್ ಹೀಗೆ ನಾನಾ ನಮೂನೆಯ ಸಾಂಪ್ರದಾಯಿಕ ಹಾಗೂ ಆಧುನಿಕ ಎಲ್ಲಾ ರೀತಿಯ ಅಡುಗೆಗಳು, ತಿಂಡಿಗಳು ಇಂದು ಕ್ಷಣದಲ್ಲಿ ಲಭ್ಯ. ಅಂತಹ ಫಾಸ್ಟ್ ಫುಡ್ ಗಳು ಹೆಚ್ಚು ಸಂಸ್ಕರಿಸಲ್ಪಟ್ಟು ಅದರಲ್ಲಿ ಯಾವುದೇ ವಿಟಮಿನ್ ಪ್ರೋಟೀನ್ಗಳು ಇಲ್ಲದೆ ಸತ್ವಹೀನವಾಗಿರುತ್ತದೆ. ಆದರೆ ಸದಾ ಕಾಲ ಜನರಿಗೆ ಇಂತಹ ಪದಾರ್ಥಗಳೇ ಹೆಚ್ಚು ಹಿತವೆನಿಸುತ್ತದೆ. ಇಂತಹ ಫಾಸ್ಟ್ ಫುಡ್ ಗಳನ್ನು ಬಳಸುತ್ತಿರುವ ಜನರು ಅಷ್ಟೇ ಫಾಸ್ಟಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬುದು ಕಹಿ ಸತ್ಯ. ಕೇವಲ ಮೂವತ್ತೈದು ನಲವತ್ತು ವರ್ಷಗಳಿಗೆ ಜನರು ಹಲವಾರು ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.
ಆದರೆ ಹಿಂದಿನ ಕಾಲದ ಜನರು ಯಾವತ್ತೂ ಕಾಯಿಲೆ ಎಂದು ಮಲಗಿದವರೇ ಅಲ್ಲ. ನಾನು ಗಮನಿಸಿದಂತೆ ನಮ್ಮ ತಾತ ಅಜ್ಜಿ ಅರವತ್ತು ಎಪ್ಪತ್ತು ವಯಸ್ಸಿನವರಾದರೂ ಬಿ.ಪಿ.ಶುಗರ್ ಎಂದು ಮಾತ್ರೆ ನುಂಗಿದವರಲ್ಲ, ಅವರ ಆಹಾರ ಪದ್ಧತಿಯೇ ಅವರನ್ನು ಆರೋಗ್ಯವಾಗಿ ಇಡುತ್ತಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಒಮ್ಮೆ ಮುದ್ದೆ ಸಾರು ಊಟ ಮಾಡಿದರೆ, ಮತ್ತೆ ರಾತ್ರಿಯೇ ಊಟ ಮಾಡುತ್ತಿದ್ದದ್ದು. ಒಂದೊತ್ತು ಯೋಗಿ, ಎರಡು ಹೊತ್ತು ಭೋಗಿ, ಮೂರು ಹೊತ್ತು ಎತ್ಕೊಂಡು ಹೋಗಿ ಎಂಬ ಗಾದೆ ಮಾತಿನಂತೆ ದಿನಕ್ಕೆ ಒಂದು ಹೊತ್ತು ಊಟ ಮಾಡುವವ ಯೋಗಿ ಆಗಿರುತ್ತಾನೆ. ಅವನಿಗೆ ಯಾವುದೇ ಕಾಯಿಲೆ ಕಸಾಲೆಗಳು ಅಷ್ಟಾಗಿ ಬಾಧಿಸದೆ ನಿರೋಗಿ ಆಗಿರುತ್ತಾನೆ. ದಿನಕ್ಕೆ ಎರಡು ಹೊತ್ತು ಊಟ ಮಾಡುವವನು ಭೋಗಿಸಲು ಸಿದ್ಧವಾಗಿರುತ್ತಾನೆ. (ಕಾಯಿಲೆಯನ್ನು ಲೆಕ್ಕಿಸದವ) ಇನ್ನು ದಿನಕ್ಕೆ ಮೂರು ಹೊತ್ತು ಊಟ ಮಾಡುವವರು ನಮ್ಮಂತವರು. ಇದ್ದಕ್ಕಿದ್ದಂತೆ ಖಾಯಿಲೆಗೆ ತುತ್ತಾಗುವವರು.ಇತ್ತೀಚೆಗಂತೂ ದಿನಕ್ಕೆ ಐದು ಆರು ಬಾರಿ ಲಘು ಆಹಾರ ಸೇವಿಸಿರಿ ಎಂಬುದು ವೈದ್ಯರ ಸಲಹೆ.  ಹೀಗೆ ಹಿಂದಿನ ಕಾಲದ ಹಾಗೂ ಇಂದಿನ  ಜೀವನ ಶೈಲಿಯ ಬಗ್ಗೆ ಮಾತಾಡುತ್ತಾ ಹೋದರೆ ಹಲವಾರು ವಿಷಯಗಳು ಚರ್ಚೆಗೆ ಒಳಗಾಗುತ್ತವೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ – ಶಿಕ್ಷಕಿ, ಗೌರಿಬಿದನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading