ಬಾಣಂತಿ ಸನ್ನಿ ಎನ್ನುವುದು ಬಾಣಂತಿಯರಲ್ಲಿ ಕಾಣಿಸಿಕೊಳ್ಳುವ ಒಂದು ಮಾನಸಿಕ ಕಾಯಿಲೆ ಎಂದು ತಿಳಿದುಬಂದಿತು. ತೀವ್ರ ಖಿನ್ನತೆ,ವಿಚಿತ್ರ ನಡವಳಿಕೆ , ದೈಹಿಕ ಸ್ವಚ್ಛತೆ ಕಡೆ ನಿರ್ಲಕ್ಷ್ಯ ಮುಂತಾದ ಲಕ್ಷಣಗಳಿರುತ್ತವೆ ಎಂದು ತಿಳಿದು ಬಂದಿತು. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ನಂಬಿಕೆಯೋ…. ಮೂಡನಂಬಿಕೆಯೋ….’ ತಪ್ಪದೆ ಮುಂದೆ ಓದಿ…
ನಾವು ಆಚರಿಸುವ ಅದೆಷ್ಟೋ ಆಚರಣೆಗಳು ಇಂದಿಗೂ ನಂಬಿಕೆಗಳಾಗಿ ಉಳಿದಿವೆ. ಆ ನಂಬಿಕೆಗಳು ಅದೆಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಎಂದರೆ ನಮ್ಮ ದೈನಂದಿನ ಜೀವನದಲ್ಲಿ ಆ ನಂಬಿಕೆಗಳು ನಿಜವಾಗಿ ಅವುಗಳನ್ನು ನಾವು ಕೆಲವೊಮ್ಮೆ ನಂಬಲೇ ಬೇಕಾಗುತ್ತದೆ.
ಉದಾಹರಣೆಗೆ ಚಿಕ್ಕ ಮಕ್ಕಳಿಗೆ ಹುಷಾರಿಲ್ಲದಿದ್ದರೆ ಕಪ್ಪು ಗಾಜಿನ ಬಳೆಯನ್ನು ಕಾಯಿಸಿ ಮಗುವಿನ ತಲೆಯ ನೆತ್ತಿ ಸುಳಿಗೆ ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ಚುಟಿಕೆ ಹಾಕಿಸುವುದು, ಕಣ್ಣುಗಳು ನಿಸ್ತೇಜವಾಗಿದ್ದರೆ ಬಾಲಗ್ರಹ ಆಗಿದೆ ಎಂದು ಅಳಲೇಕಾಯಿ ಪಂಡಿತರ ಬಳಿ ಕರೆದೊಯ್ದು ಮಂತ್ರ ಹಾಕಿಸಿ ಹಂತ್ರ ಕಟ್ಟಿಸುವುದು, ಯಾರ ಕೆಟ್ಟ ದೃಷ್ಟಿಯು ತಾಗದಿರಲಿ ಎಂದು ಮಗುವಿನ ಮುಂಗೈ ಹಾಗೂ ಕಾಲುಗಳಿಗೆ ಕಪ್ಪು ದಾರ ಕಟ್ಟುವುದು, ಹಣೆಗೆ ಕಪ್ಪು ಮಸಿಯಿಂದ ನಾಮ ಎಳೆಯುವುದು ಮುಂತಾದವು ಹಳ್ಳಿಯ ಸಂಸ್ಕೃತಿಯಲ್ಲಿ ಇಂದಿಗೂ ಜೀವಂತವಾಗಿವೆ.

ಫೋಟೋ ಕೃಪೆ : google
ನನಗಂತೂ ಇದು ಪ್ರತ್ಯಕ್ಷವಾಗಿ ಅನುಭವವಾಗಿದೆ. ನನ್ನ ಇಬ್ಬರು ಮಕ್ಕಳು ಚಿಕ್ಕವರಾಗಿದ್ದಾಗ ಅವರಿಗೆ ಆರೋಗ್ಯದಲ್ಲಿ ಏನಾದರೂ ಅಲ್ಪ ಸ್ವಲ್ಪ ಏರುಪೇರಾದರೂ ಗಾಬರಿಯಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಎರಡು ಮೂರು ದಿನ ಕಳೆದರೂ ವಾಸಿಯಾಗದಿದ್ದಾಗ ನಮ್ಮ ಅತ್ತೆಯವರು ತಮ್ಮ ಸಾಂಪ್ರದಾಯಿಕ ವೈದ್ಯವನ್ನು ಶುರು ಮಾಡುತ್ತಿದ್ದರು. ಮಗುವಿಗೆ ಕೆಮ್ಮು ನೆಗಡಿ ಜಾಸ್ತಿಯಾದಾಗ ದೊಡ್ಡಪತ್ರೆ, ತುಳಸಿ ಎಲೆಯನ್ನು ಹೆಂಚಿನ ಮೇಲೆ ಹಾಕಿ ಬಾಡಿಸಿ ಅದರ ರಸ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಗುವಿಗೆ ಕುಡಿಸುತ್ತಿದ್ದರು. ಕೆಲವೊಮ್ಮೆ ಮಗುವಿಗೆ ಅಜೀರ್ಣವಾಗಿ ಕುಡಿದ ಹಾಲು ಜೀರ್ಣವಾಗದೆ ವಾಂತಿ ಮಾಡಿಕೊಂಡಾಗ ಆಯುರ್ವೇದದ ಔಷಧಿ ಯಾದ ಬಜೆಯನ್ನು ಮಣೆಯ ಮೇಲೆ ಸ್ವಲ್ಪ ನೀರು ಹಾಕಿ ಅರೆದು ಒಳಲೆಯಲ್ಲಿ ಕುಡಿಸುತ್ತಿದ್ದರು. ಹಾಗೆಯೇ ಓಮ ಕಾಳನ್ನು ನೀರಿನಲ್ಲಿ ಕುದಿಸಿ ಮಾಡಿದ ದ್ರಾವಣವನ್ನು ಕುಡಿಸುತ್ತಿದ್ದರು. ಇದು ಓಮ್ ವಾಟರ್ ಗೆ ಪರ್ಯಾಯವಾಗಿ ಮನೆಯಲ್ಲಿ ಮಾಡುತ್ತಿದ್ದ ಮದ್ದು. ಈ ದ್ರಾವಣವನ್ನು ಕುಡಿಸಿದರೆ ಎಂತಹ ಅಜೀರ್ಣವು ಸುಲಭವಾಗಿ ನಿವಾರಣೆ ಆಗುತ್ತಿತ್ತು. ನಾನು ಮಕ್ಕಳನ್ನು ಅದೆಷ್ಟೇ ಬೇಗನೆ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಮನೆಗೆ ಬಂದ ಮೇಲೆ ಮಗುವಿಗೆ ಚುಟಿಕೆಯ ಶಿಕ್ಷೆ ಇದ್ದೇ ಇರುತ್ತಿತ್ತು. ನನಗಂತೂ ಆಗ ಮಗು ಅನುಭವಿಸುವ ನೋವನ್ನು ನೋಡಲು ಹಿಂಸೆಯಾಗುತ್ತಿತ್ತು. ಸ್ವತಃ ವಿದ್ಯಾವಂತಳಾದರೂ ಇಂತಹ ಮೌಢ್ಯ ಆಚರಣೆಗಳು ಕಣ್ಣೆದುರಿಗೆ ನಡೆಯುತ್ತಿದ್ದರೂ ಏನೂ ಮಾಡಲು ಸಾಧ್ಯವಾಗದ ಅಸಹಾಯಕ ಸ್ಥಿತಿ ನನ್ನದಾಗಿತ್ತು. ಆದರೆ ಕಾಕತಾಳೀಯವೆಂಬಂತೆ ಚುಟಿಕೆ ಬಿದ್ದ ಕೂಡಲೇ ಮಗು ಸ್ವಲ್ಪ ಹೊತ್ತು ಅತ್ತು ಅತ್ತು ನಂತರ ಚಟುವಟಿಕೆಯಿಂದ ಆಟ ಆಡಿಕೊಂಡು ಇರುತ್ತಿತ್ತು. ಇನ್ನು ಮಂತ್ರ ತಂತ್ರದ ಪ್ರಭಾವವು ಅಷ್ಟೇ ಪರಿಣಾಮಕಾರಿಯಾಗಿತ್ತು.
ಒಮ್ಮೆ ಅತ್ತೆ ಊರಿಗೆ ಹೋಗಿದ್ದರು. ನನ್ನ ಮಗನಿಗೆ ಆಗ ಹನ್ನೊಂದು ತಿಂಗಳು. ಒಂದೇ ಸಮನೆ ವಾಂತಿ ಭೇದಿ ಶುರುವಾಯಿತು. ಕುಡಿದ ಹಾಲೆಲ್ಲ ಹಿಂದೆಯೇ ವಾಂತಿ ಮಾಡಿಕೊಳ್ಳುತ್ತಿದ್ದ. ಇದ್ದಕ್ಕಿದ್ದಂತೆ ಈ ರೀತಿಯಾಗಿದ್ದಕ್ಕೆ ನಾನು ತುಂಬಾ ಗಾಬರಿಯಾದೆ. ನಾನು ನಮ್ಮವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಮೂರು ದಿನವಾದರೂ ವಾಂತಿಭೇದಿ ನಿಲ್ಲಲಿಲ್ಲ. ಮಗು ನಿತ್ರಾಣಗೊಂಡಿತು. ನನಗೆ ಕೈ ಕಾಲೇ ಆಡದಂತಾಯಿತು. ಅಷ್ಟರಲ್ಲಿ ಊರಿನಿಂದ ಬಂದ ಅತ್ತೆ ಮಗುವಿನ ಸ್ಥಿತಿ ನೋಡಿ ಬಾಲಗ್ರಹ ಆಗಿದೆ ಎಂದು ಕೂಡಲೇ ಪಂಡಿತರ ಬಳಿ ಹೋಗಿ ಹಂತ್ರ ಕಟ್ಟಿಸಿಕೊಂಡು ಬಂದರು. ಅದೇನೋ ಹೊಟ್ಟೆಗೆ ಹಚ್ಚಲು ಭಸ್ಮ ನೀಡಿದ್ದರು.ಮರುದಿನವೇ ವಾಂತಿ ಭೇದಿ ನಿಂತು ಹೋಗಿ ಮಗು ಗೆಲುವಾಯಿತು.
ಇನ್ನೊಮ್ಮೆ ನಮ್ಮ ಅಕ್ಕನ ಮಗಳು ಮೂರು ತಿಂಗಳ ಮಗುವಾಗಿದ್ದಾಗ ತಲೆಯ ಮೇಲೆ ನೆತ್ತಿಯ ಹಿಂಭಾಗದಲ್ಲಿ ಇದ್ದಕ್ಕಿದ್ದಂತೆ ಗೋಪುರದಂತೆ ಗುಳ್ಳೆಗಳು ಮೂಡತೊಡಗಿದವು.ಆಸ್ಪತ್ರೆಗೆ ತೋರಿಸಿದಾಗ ಆಯಿಂಟ್ ಮೆಂಟ್ ಕೊಟ್ಟಿದ್ದರು. ಆಯಿಂಟ್ಮೆಂಟ್ ಹಚ್ಚಿದ ಮೇಲೆ ಆ ಗುಳ್ಳೆ ಒಣಗಿ ಪಕ್ಕದಲ್ಲಿ ಇನ್ನೊಂದು ಗೋಪುರದಂತೆ ಗುಳ್ಳೆ ಮೇಲೆ ಏಳುತ್ತಿತ್ತು. ಹೀಗೆ ತಲೆಯ ತುಂಬಾ ಐದಾರು ಗುಳ್ಳೆಗಳಾದವು. ಯಾವ ಆಸ್ಪತ್ರೆಗೆ ಹೋಗಿ ತೋರಿಸಿದರು ವಾಸಿಯಾಗಲಿಲ್ಲ. ಆಗ ಕೈ ಹಿಡಿದಿದ್ದು ಮತ್ತದೇ ನಾಟಿ ವೈದ್ಯ. ಒಮ್ಮೆ ಇದ್ದಕ್ಕಿದ್ದಂತೆ ಗುಳ್ಳೆಗಳ ನೋವಿನ ಬಾಧೆಗೋ ಏನೋ ಮಗು ಒಂದೇ ಸಮನೆ ಅಳತೊಡಗಿತು. ಹಗಲು ರಾತ್ರಿ ಮೂರು ದಿನ ಮಗು ಅತ್ತು ಅತ್ತು ಸುಸ್ತಾಗಿ ಹೋಯಿತು. ಆಗ ರಾತ್ರಿ ಒಂದು ಸರಿ ಹೊತ್ತಿನಲ್ಲಿ ಮಗುವನ್ನು ಕರೆದುಕೊಂಡು ನಮ್ಮ ಅಪ್ಪ ಅಮ್ಮ ಪಂಡಿತರ ಬಳಿಗೆ ಹೋದರು. ಆಗ ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೆ.
ಮಗುವಿನ ಸ್ಥಿತಿ ನೋಡಿ ಪಂಡಿತರು ಮಗುವಿಗೆ ಯಾರೋ ಕೆಡುಕು ಮಾಡಿಸಿದ್ದಾರೆ, ಪರಿಹಾರ ನಿಮಿತ್ತ ಒಂದು ಪೂಜೆ ಮಾಡಿಸಬೇಕು ಎಂದು ಹೇಳಿದರು.ಅಪ್ಪನಿಗೆ ಇಂತದ್ದರಲ್ಲೆಲ್ಲಾ ನಂಬಿಕೆ ಇರಲಿಲ್ಲ. ಆದರೆ ಮನೆಯವರ ಒತ್ತಾಯಕ್ಕೆ ಒಪ್ಪಿಕೊಂಡರು. ನಂತರ ಮಗುವಿನ ತಲೆಯಲ್ಲಿ ಆದ ಗುಳ್ಳೆಗಳನ್ನು ತೋರಿಸಿದಾಗ ಅದಕ್ಕೆ ಹಚ್ಚಲು ಒಂದು ರೀತಿಯ ಕಾಡಿಗೆಯಂತಹ ಅಂಟು ದ್ರವವನ್ನು ಕೊಟ್ಟಿದ್ದರು. ಯಾವ ಆಸ್ಪತ್ರೆಯ ವೈದ್ಯರು ಕೊಟ್ಟ ಔಷಧಿ ಕೂಡ ಕೆಲಸ ಮಾಡಿರಲಿಲ್ಲ. ಏನೂ ಓದಲು ಬಾರದ ಒಬ್ಬ ಹಳ್ಳಿ ವೈದ್ಯನ ನಾಟಿ ಔಷಧಿಯಿಂದ ಗಾಯ ವಾಸಿಯಾಗಿತ್ತು. ಅವಳಿಗೆ ತಲೆಯ ಹಿಂಭಾಗದಲ್ಲಿ ಗಾಯದ ಗುರುತು ಈಗಲೂ ಹಾಗೆ ಇದೆ.

ಫೋಟೋ ಕೃಪೆ : google
ಇನ್ನೊಂದು ಸ್ವಾರಸ್ಯಕರ ಘಟನೆ ಏನೆಂದರೆ ನಮ್ಮೂರಿನಲ್ಲಿ ಒಮ್ಮೆ ಬೀಡಿ ಲಿಂಗಮ್ಮಜ್ಜಿ ಸೊಸೆಗೆ ಹೆರಿಗೆಯಾಗಿತ್ತು. ಹೆರಿಗೆಯಾದ ಒಂದೆರಡು ತಿಂಗಳಿಗೆ ಆಕೆಗೆ ಬಾಣಂತಿ ಸನ್ನಿ ಅಟಕಾಯಿಸಿಕೊಂಡಿತು. ಬಾಣಂತಿ ಸನ್ನಿ ಅಂದರೆ ಏನೆಂದು ಆಗ ನನಗೆ ಗೊತ್ತಿರಲಿಲ್ಲ. ಈಗಲೂ ಅಷ್ಟೊಂದು ಮಾಹಿತಿ ಇಲ್ಲ, ಗೂಗಲ್ ಸರ್ಚ್ ಮಾಡಿದಾಗ ಬಾಣಂತಿ ಸನ್ನಿ ಎನ್ನುವುದು ಬಾಣಂತಿಯರಲ್ಲಿ ಕಾಣಿಸಿಕೊಳ್ಳುವ ಒಂದು ಮಾನಸಿಕ ಕಾಯಿಲೆ ಎಂದು ತಿಳಿದುಬಂದಿತು. ಕೆಲವು ಸ್ತ್ರೀಯರಲ್ಲಿ ಇದು ಹೆರಿಗೆಯಾದ ಒಂದೆರಡು ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ತೀವ್ರ ಖಿನ್ನತೆ,ವಿಚಿತ್ರ ನಡವಳಿಕೆ , ದೈಹಿಕ ಸ್ವಚ್ಛತೆ ಕಡೆ ನಿರ್ಲಕ್ಷ್ಯ ಮುಂತಾದ ಲಕ್ಷಣಗಳಿರುತ್ತವೆ ಎಂದು ತಿಳಿದು ಬಂದಿತು. ಬಹುಷಃ ಈ ರೀತಿಯ ನಡವಳಿಕೆಗಳು ಲಿಂಗಮಜ್ಜಿಯ ಸೊಸೆಗೂ ಬಂದಿದ್ದವೇನೋ. ಆಗ ಅವರು ಆ ಕಾಯಿಲೆಗೆ ಮದ್ದಾಗಿ ಒಂದು ಹುಳುವಿನ ರಸವನ್ನು ಆ ಬಾಣಂತಿಗೆ ಕುಡಿಸಿದರು. ತಿಪ್ಪೆ ಗುಂಡಿಯ ಗೊಬ್ಬರದಲ್ಲಿ ಇರುತ್ತಿದ್ದ ಕಾಗೆ ಕಡುಬು ಎಂಬ ಹುಳುವಿನ ಹಿಂಭಾಗದ ಮೃದು ಭಾಗವನ್ನು ಹಿಚುಕಿದಾಗ ಒಂದು ರೀತಿಯ ಕಪ್ಪು ದ್ರವ ಹೊರಬರುತ್ತದೆ. ಆ ದ್ರವವನ್ನು ಒಳಲೆಗೆ ಹಾಕಿಕೊಂಡು ಆಕೆ ಬೇಡ ಬೇಡ ಎಂದು ಬೊಬ್ಬೆ ಹಾಕುತ್ತಿದರೂ ಬಿಡದೆ ಕೈಕಾಲು ಗಟ್ಟಿಯಾಗಿ ಹಿಡಿದು ಕೊಂಡು ಕುಡಿಸಿದರು. ಏನಾಗಿದೆ ಎಂದು ಕೇಳಿದ್ದಕ್ಕೆ ಬಾಣಂತಿ ಸನ್ನಿ ಎಂದು ಅಮ್ಮ ಹೇಳಿದಳು. ಆಮೇಲೆ ಆ ಹುಳುವಿನ ದ್ರಾವಣ ಕುಡಿಸಿದ ಮೇಲೆ ಆಕೆ ಮತ್ತೆ ಮೊದಲಿನಂತಾದಳು. ಇದು ವಿಚಿತ್ರ ಹಾಗೂ ಅಸಹ್ಯ ಎನಿಸಿದರು ಸತ್ಯ. ನಾನು ಕಣ್ಣಾರೆ ಕಂಡ ಘಟನೆ. ಮತ್ತೆ ಆಕೆ ಮಾಮೂಲಿ ನಂತಾದಳು.

ಫೋಟೋ ಕೃಪೆ : google
ಮತ್ತೊಂದು ವಿಷಯ ಏನೆಂದರೆ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಕುಡಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ ಎಂಬುದು. ಇದಂತೂ ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ನನ್ನ ಮಕ್ಕಳ ವಿಷಯದಲ್ಲಿ ಇದು ಮಾತ್ರ ಸತ್ಯ. ಆಗ ನನ್ನ ಮಗನಿಗೆ ನಾಲ್ಕು ವರ್ಷ, ನನ್ನ ಮಗಳಿಗೆ ನಾಲ್ಕು ತಿಂಗಳು. ಆಗ ನಾವು ಹಳ್ಳಿಯಲ್ಲಿದ್ದವು.ಆಗ ಕತ್ತೆ ಹಾಲನ್ನು ಮಾರಲು ಕೆಲವರು ಕತ್ತೆಗಳನ್ನು ಹೊಡೆದುಕೊಂಡು ಬಂದಿದ್ದರು. ನನ್ನ ಮಗನಿಗೆ ಒಂದು ಒಳಲೆ ಹಾಗೂ ನನ್ನ ಮಗಳಿಗೆ ಒಂದು ಒಳಲೆ ಕತ್ತೆ ಹಾಲು ಕುಡಿಸಿದೆವು. ತುಂಬಾ ಚಿಕ್ಕವಳಾದ ನನ್ನ ಮಗಳಿಗೆ ಕತ್ತೆ ಹಾಲು ದಕ್ಕಿದವು. ಅಂದರೆ ಆ ಹಾಲು ಅವಳ ಮೈಗೆ ಒಗ್ಗಿ ಅವಳ ಜೀರ್ಣ ಶಕ್ತಿ ಹೆಚ್ಚಾಯಿತು. ಆದರೆ ನಾಲ್ಕು ವರ್ಷದವನಾದ ನನ್ನ ಮಗನಿಗೆ ಹಾಲು ಮೈ ಹಿಡಿದಿರಲಿಲ್ಲ. ಅಂದರೆ ಚಿಕ್ಕ ಮಗುವಾಗಿದ್ದಾಗಲೇ ಕತ್ತೆ ಹಾಲು ಕುಡಿಸಬೇಕಿತ್ತಂತೆ. ಆದರೆ ಆ ಸಮಯಕ್ಕೆ ಕತ್ತೆ ಹಾಲು ಸಿಕ್ಕಿರಲಿಲ್ಲ. ಹಾಗಾಗಿ ಅವನ ಜೀರ್ಣ ಶಕ್ತಿ ಅಷ್ಟಕ್ಕಷ್ಟೇ. ಮಗನು ಒಂದು ಸಲ ಊಟ ಮಾಡಿದರೆ ಮಗಳು ಎರಡು ಸಲ ಊಟ ಮಾಡುತ್ತಾಳೆ. ಹಸಿವಿಗೆ ಅವಳು ತಡೆಯಲಾರಳು. ಆಗ ಅವಳಿಗೆ ಕತ್ತೆ ಹಾಲು ಕುಡಿಸಿದ್ದು ನೆನಪಾಗುತ್ತದೆ. ಹೀಗೆ ಇಂತಹ ಹಳ್ಳಿಯ ಸಂಪ್ರದಾಯಗಳು,ರೂಢಿಗಳು, ಆಚರಣೆಗಳನ್ನು ನೋಡಿದಾಗ ಇವುಗಳನ್ನು ನಂಬಬೇಕೋ ಬಿಡಬೇಕೋ ಎಂಬ ಗೊಂದಲ ಉಂಟಾಗುತ್ತದೆ. ಇವು ನಂಬಿಕೆಯೋ… ಮೂಡನಂಬಿಕೆಯೋ… ಕಾಕತಾಳಿಯವೋ ಒಂದೂ ತಿಳಿಯುವುದಿಲ್ಲ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ‘ಚೌಚೌ ಬಾತ್’ ಅಂಕಣ (ಭಾಗ – ೨೭) – ಅತಿಮಾನುಷ ಶಕ್ತಿಯ ಅನುಭವ
- ‘ಚೌಚೌ ಬಾತ್’ ಅಂಕಣ (ಭಾಗ – ೨೮) – ಸಬ್ಬಸಿಗೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ – ೨೯) – ಊರ್ ಉಸಾಬರಿ ನಮಗ್ಯಾಕೆ
- ‘ಚೌಚೌ ಬಾತ್’ ಅಂಕಣ (ಭಾಗ – ೩೦) – ಮದುವೆ ಊಟದ ಕಿರಿಕಿರಿ
- ‘ಚೌಚೌ ಬಾತ್’ ಅಂಕಣ (ಭಾಗ – ೩೧) – ‘ಸಂಸ್ಕಾರ ಕಲಿಸಿದ ಪುಸ್ತಕ’
- ‘ಚೌಚೌ ಬಾತ್’ ಅಂಕಣ (ಭಾಗ – ೩೨) – ‘ಭೂತಣ್ಣನ ಹಲಸಿನ ಹಣ್ಣು’
- ‘ಚೌಚೌ ಬಾತ್’ ಅಂಕಣ (ಭಾಗ – ೩೩) – ‘ಕಾಲ್ಗೆಜ್ಜೆಯ ನಾದವಿಲ್ಲ’
- ‘ಚೌಚೌ ಬಾತ್’ ಅಂಕಣ (ಭಾಗ – ೩೪) – ‘ತಾಯಿಯ ಆಶಯ’
- ‘ಚೌಚೌ ಬಾತ್’ ಅಂಕಣ (ಭಾಗ – ೩೫) -‘ಮಿಕ್ಸಿ ಆನ್ ಮಾಡಿದಾಗ’
- ‘ಚೌಚೌ ಬಾತ್’ ಅಂಕಣ (ಭಾಗ – ೩೬) -‘ಏನೆಂದು ಹೆಸರಿಡಲಿ ಈ ಚಂದ ಅನುಬಂಧಕೆ’
- ‘ಚೌಚೌ ಬಾತ್’ ಅಂಕಣ (ಭಾಗ – ೩೭) –ಬದಲಾದ ಜೀವನಶೈಲಿ
- ‘ಚೌಚೌ ಬಾತ್’ ಅಂಕಣ (ಭಾಗ – ೩೮) – ವೃತ್ತಿ ಜೀವನದ ಆರಂಭ
- ‘ಚೌಚೌ ಬಾತ್’ ಅಂಕಣ (ಭಾಗ – ೩೯) – ಮೌಲ್ಯ ಶಿಕ್ಷಣದ ಅಗತ್ಯತೆ
- ‘ಚೌಚೌ ಬಾತ್’ ಅಂಕಣ (ಭಾಗ – ೪೧) – ‘ಹುಚ್ಚ ಹೊಡೆದ ಕಹಿ ನೆನಪು’
- ‘ಚೌಚೌ ಬಾತ್’ ಅಂಕಣ (ಭಾಗ – ೪೨) – ‘ಪವಿತ್ರ ಜಲಕ್ಕೆ ಬಂದ ಕುತ್ತು’
- ಸರ್ವಮಂಗಳ ಜಯರಾಂ – ಶಿಕ್ಷಕಿ, ಗೌರಿಬಿದನೂರು.
