ಊಟದ ಜೊತೆಗೆ ಚಟ್ನಿ ಇದ್ರೆ ಗಮ್ಮತ್ತೇ ಬೇರೆ. ಆ ಚಟ್ನಿ ವೆರೈಟಿ ಇದ್ರಂತೂ ಆಹಾ…ಊಟ ಸೂಪರ್ ಆಗಿರುತ್ತೆ ಅಲ್ವಾ?…ಆದರೆ ವೆರೈಟಿ ಚಟ್ನಿ ಮಾಡೋದು ಹೇಗೆ ಅಂತ ಪಾಕತಜ್ಞೆ ಮಮತಾ ತೋಟೇಶ್ ಸೀಕ್ರೆಟ್ ರೆಸಿಪಿಯನ್ನು ಬಹಿರಂಗಪಡಿಸಿದ್ದಾರೆ. ಅದನ್ನು ತಪ್ಪದೆ ಮಾಡಿ ನೋಡಿ…
ಮಾತು ಬಲ್ಲವನಿಗೆ ಜಗಳವಿಲ್ಲ..ಊಟ ಬಲ್ಲವನಿಗೆ ರೋಗವಿಲ್ಲ… ಹಿರಿಯರು ಗಾದೆನೇ ಮಾಡಿದ್ದಾರೆ. ಅಡುಗೆ ಮಾಡೋದು ಕೂಡಾ ಒಂದು ಕಲೆಯೇ… ಎಷ್ಟೇ ತರಹದ ಅಡುಗೆ ಬರುತ್ತೆ ಅಂದ್ರು ಕಲಿಯೋದು ಇದ್ದೆ ಇರುತ್ತೆ. ಅಡುಗೆಗಳಲ್ಲಿ ಅನ್ನ, ಸಾರು, ಪಲ್ಯ, ಕೋಸಂಬರಿ, ಚಟ್ನಿ, ವಡೆ, ಹಪ್ಪಳ, ಸಂಡಿಗೆ, ಸಿಹಿ ತಿನಿಸುಗಳು ಎಷ್ಟೆಲ್ಲ ಬಗೆ ಬಗೆ… ಒಮ್ಮೊಮ್ಮೆ ಹುಷಾರಿಲ್ಲದಿರುವಾಗ ಬಾಯಿ ಕೆಟ್ಟು ಅಂದ್ರೆ ಬಾಯಿಗೆ ರುಚಿ ಬರ್ತಾ ಇಲ್ಲ ಅಂದಾಗ ಖಾರ ಖಾರವಾಗಿ ಏನಾದ್ರು ತಿನ್ನಬೇಕು ಅನ್ಸುತ್ತೆ. ಆಗ ಒಳ್ಳೆ ಚಟ್ನಿ ಮಾಡ್ಕೊಂಡು ಬಿಸಿ ಬಿಸಿ ಅನ್ನಕ್ಕೆ, ತುಪ್ಪ ಹಾಕಿ ಕಲಸಿ ತಿಂದ್ರೆ.. ಆಹಾ … ರುಚಿಯೋ ರುಚಿ.
ಇವತ್ತು ಬೆಳಗ್ಗೆ ನೀರ್ ದೋಸೆ ಜೊತೆ ಕಡ್ಲೆ ಬೇಳೆ, ಬ್ಯಾಡಗಿ ಮೆಣಸು ಚಟ್ನಿ, ಹಾಗೆ ಚಪಾತಿ ಜೊತೆ ಬದನೇಕಾಯಿ ಸುಟ್ಟು ಮಾಡಿದ ಚಟ್ನಿ ಮಾಡ್ತಾ ಇದ್ದಾಗ ಒಂದು ಪೋಸ್ಟ್ ಹಾಕಬೇಕು ಅಂತ ನೆನಪಾಯ್ತು. ಹಾಗಾಗಿ ಈ ಕೆಳಗಿನ ಚಟ್ನಿಗಳು ನಿಮಗಾಗಿ,
ಕಡ್ಲೆಕಾಳು, ಬ್ಯಾಡಗಿ ಮೆಣಸು ಚಟ್ನಿ :

ಬಾಣಲೆಗೆ 2/3 ಸ್ಪೂನ್ ಕಡ್ಲೆ ಕಾಳು, ಜೊತೆಗೆ 2 ಹಸಿಮೆಣಸು ಹಾಕಿ, ಕಾಲು ಸ್ಪೂನ್ ಎಣ್ಣೆ ಹಾಕಿ ಹುರಿಯಬೇಕು. ನಂತರ ಬ್ಯಾಡಗಿ ಮೆಣಸಿನಕಾಯಿ 8/10 ತೊಳೆದು ಅದೇ ಬಾಣಲೆಗೆ ಹಾಕಿ ಗರಿ ಗರಿ ಆಗುವ ವರೆಗೆ ಹುರಿಯಬೇಕು. ಕಡ್ಲೆಕಾಳು ಕೆಂಪಗೆ ಆಗುವ ವರೆಗೆ ಹುರಿಯಬೇಕು. ನಂತರ ಕಾಯಿ, ಅರ್ಧ ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಹುಳಿ, ಉಪ್ಪು ಹಾಕಿ ರುಬ್ಬಿ, ಸಾಸಿವೆ ಒಗ್ಗರಣೆ ಕೊಟ್ರೆ ರುಚಿಯಾದ ಚಟ್ನಿ ರೆಡಿ. ನೀರ್ ದೋಸೆ, ಚಪಾತಿ, ಅಣ್ಣದೊಟ್ಟಿಗೆ ಬಲು ರುಚಿ.
ಬದನೇಕಾಯಿ ಸುಟ್ಟ ಚಟ್ನಿ/ಬರೀತ್:

ಬದನೇಕಾಯಿ ತೊಳೆದು, ಸ್ವಲ್ಪ ಎಣ್ಣೆ ಸವರಿ ಒಲೆಯ ಮೇಲಿಟ್ಟು ಸುಡಬೇಕು. ಮಂದ ಉರಿಯಲ್ಲಿ. ಎಲ್ಲಾ ಕಡೆ ಹದವಾಗಿ ಸುಡಬೇಕು. ಒಗ್ಗರಣೆಗೆ ಸಾಸಿವೆ, ಜೀರಿಗೆ,ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ, ಚೆನ್ನಾಗಿ ಬಾಡಿಸಿ, ಸುಟ್ಟ ಬದನೇಕಾಯಿಯ ಸಿಪ್ಪೆ ತೆಗೆದು ಚಾಕುವಿನಿಂದ ಚಿಕ್ಕದಾಗಿ ಮ್ಯಾಷ್ ಮಾಡಿ, ಒಗ್ಗರಣೆಗೆ ಹಾಕಿ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ,5 ನಿಮಿಷ ಬಾಡಿಸಿದರೆ ರುಚಿಯಾದ ಚಟ್ನಿ ತಯಾರು. ರೊಟ್ಟಿಯೊಂದಿಗೆ ಬಲು ರುಚಿ.
ಟೊಮ್ಯಾಟೋ ಕಾಯಿ ಪುದಿನಾ ಚಟ್ನಿ :

ಹಸಿ ಟೊಮ್ಯಾಟೋ ಕಾಯಿ ಹೋಳು ಹೆಚ್ಚಿ, ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಹುರಿಯ ಬೇಕು. ಇದರೊಟ್ಟಿಗೆ ಖಾರಕ್ಕೆ ತಕ್ಕಷ್ಟು ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹಸಿ ವಾಸನೆ ಹೋಗುವ ವರೆಗೂ ಹುರಿಯಬೇಕು. ನಂತರ ಒಂದು ಹಿಡಿ ತೊಳೆದ ಪುದಿನಾ ಸೊಪ್ಪು ಹಾಕಿ ಬಾಡಿಸಬೇಕು. ನಂತರ ಮಿಕ್ಸಿ ಜಾರಿಗೆ 4/5 ಬೆಳ್ಳುಳ್ಳಿ ಎಸಳು, ಸ್ವಲ್ಪ ಕೊತ್ತಂಬರಿ ಸೊಪ್ಪು, ಹುರಿದಿಟ್ಟ ಟೊಮ್ಯಾಟೋ ಕಾಯಿ, ಹಸಿಮೆಣಸಿನಕಾಯಿ, ಪುದಿನಾ ಹಾಕಿ, ಉಪ್ಪು ಹಾಕಿ ನುಣ್ಣಗೆ ರುಬ್ಬುಬೇಕು. ಸಾಸಿವೆ, ಕರಿಬೇವು ಒಗ್ಗರಣೆ ಕೊಟ್ಟರೆ ಘಮ ಘಮಿಸುವ ಚಟ್ನಿ ರೆಡಿ.
ಬೆಂಡೆಕಾಯಿ ಚಟ್ನಿ :
ಇದು ನನ್ನ ಫೇವರಿಟ್. ಬೆಂಡೆಕಾಯಿ ತೊಳೆದು, ಬಟ್ಟೆಯಲ್ಲಿ ಒರೆಸಿ, ಕತ್ತರಿಸಬೇಕು. ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಮೊದಲು 4/5 ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದು ತೆಗೆದು, ಅದೇ ಬಾಣಲೆಗೆ ಬೆಂಡೆಕಾಯಿ ಹಾಕಿ ಚೆನ್ನಾಗಿ ಬಾಡಿಸಬೇಕು. ಮಿಕ್ಸಿ ಜಾರಿಗೆ ಹುರಿದ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಕೊತ್ತಂಬರಿ ಸೊಪ್ಪು ಹಾಕಿ ಎರೆಡು ಸುತ್ತು ತಿರುಗಿಸಿ ನಂತರ ಹುರಿದ ಬೆಂಡೆಕಾಯಿ, ಉಪ್ಪು ಹಾಕಿ ತರಿ ತರಿಯಾಗಿ ರುಬ್ಬುಬೇಕು. ರುಚಿಯಾದ, ಘಮ ಘಮ ಚಟ್ನಿ ರೆಡಿ.
ಮಾವಿನಕಾಯಿ ಚಟ್ನಿ :

ಮಾವಿನಕಾಯಿ ತುರಿದಿಟ್ಟು ಕೊಳ್ಳಬೇಕು. ಬಾಣಲೆಗೆ ಬ್ಯಾಡಗಿ ಮೆಣಸಿನಕಾಯಿ 8/10, ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ನಂತರ ತುರಿದ ಮಾವಿನಕಾಯಿ ತುರಿ ಹಾಕಿ ಚೆನ್ನಾಗಿ ಬಾಡಿಸಬೇಕು. ಮಿಕ್ಸಿ ಜಾರಿಗೆ ಹುರಿದ ಪದಾರ್ಥ, ಕಾಯಿ ತುರಿ, 2 ಚಮಚ ಹುರಿಗಡಲೆ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ನುಣ್ಣಗೆ ರುಬ್ಬಬೇಕು. ಒಗ್ಗರಣೆ ಸಾಸಿವೆ, ಇಂಗು, ಒಣಮೆಣಸು ಮುರಿದು ಹಾಕಬೇಕು. ಖಾರ, ಖಾರ.. ರುಚಿಯಾದ, ಚಟ್ನಿ ರೆಡಿ. ಅನ್ನ ದೊಟ್ಟಿಗೆ ಸಕತ್ ರುಚಿ .
- ಕೈಚಳಕ,ಫೋಟೋ : (ಗೃಹಿಣಿ , ಪಾಕಪ್ರವೀಣೆ )
