‘ಸರ್ವಂ ಶ್ರೀ ಕೃಷ್ಣಾರ್ಪಣ ಮಸ್ತು’ ಅಲ್ಲ, ಸಕಲವೂ ಕಾಫೀಗೆ ಅರ್ಪಣೆ

ಒಳ್ಳೆಯ ಕಾಫೀ ಕುಡಿದಾಗ ‘ಪರಮಾತ್ಮ ತೃಪ್ತಿಯಾದ ಕಣಪ್ಪ’ ಎಂದು ಹೇಳುವುದಿದೆ. ಹಾಗಾದರೆ ಈ ‘ಪರಮಾತ್ಮ’ ಯಾರು? ಹಾಗಾದರೆ ಮನಸ್ಸೇ ಪರಮಾತ್ಮನೇ? ‘ಈ ದೇಹಕ್ಕೂ’ ಮತ್ತು ‘ಆ ಆತ್ಮಕ್ಕೂ’ ಇರುವ ಸಂಬಂಧವೇನು?. ಎನ್.ವಿ.ರಘುರಾಂ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಬೆಳಿಗ್ಗೆ ಎದ್ದು ಹಲ್ಲುಜ್ಜಿಕೊಂಡು ಬಂದರೆ ಮೊದಲು ಮಾಡುವ ಕೆಲಸವೇ ಕಾಫೀ ಕುಡಿಯುವುದು. ಗಮ, ಗಮ ಕಾಫೀ ಕೈಯಲ್ಲಿ ಹಿಡಿದು ದಿನ ಪತ್ರಿಕೆ ಓದಲು ಪ್ರಾರಂಭ ಮಾಡಿದರೆ ಅದು ದಿನ ಸರಿಯಾಗಿ ಪ್ರಾರಂಭವಾಗಿರುವ ಸೂಚನೆ. ಕಾಫೀ ಕುಡಿಯದೇ ದಿನ ಪ್ರಾರಂಭವಾಗುವುದನ್ನು ಊಹಿಸಿ ಕೊಳ್ಳಲೂ ಆಗುವುದಿಲ್ಲ. ಅಮೇಲೆ ತಿಂಡಿಯಾದ ಮೇಲೆ ಮತ್ತೆ ಕಾಫೀ ಬೇಕು. ಕಛೇರಿಯಲ್ಲಿ ಕೂಡ ಯಾವುದೇ ಮೀಟಿಂಗ್ ಕಾಫೀ ಇಲ್ಲದೇ ಮುಗಿಯುವುದಿಲ್ಲ. ಮೀಟಿಂಗ್ ಇಲ್ಲದಿದ್ದರೆ ಅನಧಿಕೃತ ಕಾಫೀ ಬ್ರೇಕ್ ನಲ್ಲಿ ಕ್ಯಾಂಟೀನ್ ನಲ್ಲಿ ಕಾಫೀ ಕುಡಿಯುವುದು ಬಹಳ ಕಾಲದಿಂದ ಬಂದಿರುವ ರೂಢಿ. ಸಂಜೆ ಮನೆಗೆ ಬಂದ ನಂತರ ಮತ್ತೆ ಕಾಫೀ.

ಮನೆಗೆ ನೆಂಟರು, ಇಷ್ಟರು ಬಂದರೆ ಕನಿಷ್ಠ ಕಾಫೀ ಕೊಡದೆ ಕಳುಹಿಸುವವರು ಯಾರು? ಅವರ ಜೊತೆಗೆ ನಾವು ಸ್ವಲ್ಪನಾದರೂ ಕಾಫೀ ಕುಡಿಯುವುದು ಸಾಮಾನ್ಯವೇ ಸರಿ. ಕಾಫೀ ಬದಲು ಕೆಲವರು ಅದರ ಸಹೋದರ ‘ಟೀ’ ಕುಡಿಯಬಹುದು ಅಷ್ಟೇ.

ಫೋಟೋ ಕೃಪೆ : google

ಬೇರೆಯವರ ಮನೆಗೆ ಹೋದಾಗ ‘ಕಾಫೀ’ ಕೊಡುವ ರೀತಿಯಲ್ಲೇ ಕೊಡುವವರ ಮನಸ್ಥಿತಿ ಹೇಳಬಹುದು. ಯಾರ ಮನೆಗಾದ್ರು ಹೋದ ತಕ್ಷಣ ಉಭಯ ಕುಶಲೋಪರಿ ವಿಚಾರಿಸಿ ತಾವಾಗಿಯೇ ‘ಕಾಫೀ’ ತಂದು ಕೊಡುವವರು ನಿಮ್ಮ ಆಗಮನವನ್ನು ಇಷ್ಟಪಟ್ಟಿದ್ದಾರೆ ಎಂದೇ ಅರ್ಥ. ಕಾಫೀ ಕುಡಿಯುತ್ತಾ ಮಾತನಾಡುತ್ತಾ ಕೂತ್ರೆ, ಅದರ ಸುಖವೇ ಬೇರೆ. ನೀವು ಹೋಗಿ ಹದಿನೈದು ನಿಮಿಷ ಆದ ನಂತರ ‘ಕಾಫೀ’ ಕೊಟ್ಟರೆ, ನೀವು ಬಂದಿದ್ದು ಬೇಸರವಿಲ್ಲ ಎಂದರ್ಥ. ಇನ್ನು ಕೆಲವರು ನಾವು ಹೊರಡುವ ಸೂಚನೆ ಕೊಟ್ಟಾಗ, ‘ಸ್ವಲ್ಪ ಕಾಫೀನಾದ್ರು ತಗೋಳ್ಳಿ’ ಎನ್ನುತ್ತಾ ಕಾಫೀ ತರಲು ಹೋದರೆ ಬಂದವರಿಗೆ ಏನಾದ್ರು ಕೊಡಲೇ ಬೇಕಲ್ಲ ಎನ್ನುವ ಭಾವನೆ ಸ್ಪಷ್ಟ. ಇದಾದರೂ ಪರವಾಗಿಲ್ಲ, ಇನ್ನು ಕೆಲವರು ಹೊರಟು ನಿಂತ ಮೇಲೆ, ‘ಸ್ವಲ್ಪ ಕಾಫೀ ಮಾಡಲೇ’ ಎನ್ನುತ್ತಾರೆ ಹೊರತು ಅಡಿಗೆ ಮನೆ ಕಡೆಗೆ ತಿರುಗಿ ಕೂಡ ನೋಡುವುದಿಲ್ಲ. ನೀವು ಬರದಿದ್ದರೂ ನಷ್ಟವಿರಲಿಲ್ಲ ಎಂದು ಹೇಳುವ ರೀತಿಯಿದು. ಇನ್ನು ಅಕಸ್ಮಾತ್ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಯಾರ ಮನೆಗಾದ್ರು ಹೋಗಿ ಮಾತನಾಡಿಸಿಕೊಂಡು ಹೊರಟರೆ, ‘ಈಗಿನ್ನೂ ಊಟ ಆಗಿರ ಬೇಕಲ್ಲ! ಸ್ವಲ್ಪ ಐದು ಗಂಟೆನಾದ್ರು ಆಗಿದ್ದರೆ ಕಾಫೀ ಕುಡಿದು ಹೋಗಬಹುದಿತ್ತು’ ಎನ್ನುವ ಬಾಯಿ ಉಪಚಾರ ಮಾಡಿದರೆ, ‘ಆಕಾಲ’ದಲ್ಲಿ ಬಂದಿದ್ದೀರಿ ಎಂದು ಹೇಳುವ ರೀತಿಯಿದು. ಹಾಗಂತ, ನೀವೆನಾದ್ರು ಐದು ಗಂಟೆಗೆ ಹೋದರೆ, ‘ನಾಲ್ಕು ಗಂಟೆ ಮೇಲೆ ಕಾಫೀ ಕುಡಿದ್ರೆ ನಿದ್ದೆ ಬರಲ್ಲಂತೆ’ ಎನ್ನುವ ಅಪಾದನೆ ಕಾಫೀ ಮೇಲೆ ಮಾಡಿದರೆ, ನೀವು ಬರುವುದು ಬೇಕಾಗಿರಲಿಲ್ಲ ಎಂದೇ ಅರ್ಥ. ಮನೆಯಿಂದ ಆಗ ತಾನೇ ಕಾಫೀ ಕುಡಿದು ಹೊರಟ್ಟಿದ್ದರೂ, ಹೋದವರ ಮನೆಯಲ್ಲಿ ಕನಿಷ್ಠ ಕಾಫೀನಾದ್ರು ಕೊಡದೆ ಅವರು ಕಳುಹಿಸಿದರೆ, ಮನಸ್ಸಿಗೆ ‘ಪಿಚ್’ ಎನ್ನಿಸುವುದು ಸತ್ಯ. ಈ ಕಾಫೀ ನಮ್ಮ ಭಾವನೆಗಳ ಮೇಲೆ ಸಾಧಿಸಿರುವ ಹಿಡಿತ ಇನ್ಯಾವುದೋ ವಸ್ತುಗಳು ಮಾಡಿಲ್ಲವೆಂದೇ ಹೇಳಬಹುದು.

ಒಂದು ಲೋಟ ಕಾಫೀ ಅಂದರೆ, ಕನಿಷ್ಠ ಐವತ್ತು ಎಂ.ಎಲ್. ಇರುತ್ತದೆಯಲ್ಲ. ಅಂದರೆ ದಿನಕ್ಕೆ ನಾಲ್ಕು ಬಾರಿ ಕುಡಿದರೆ ಇನ್ನೂರು ಎಂ.ಎಲ್. ಆಗುತ್ತೆ. ಅಂದರೆ ತಿಂಗಳಿಗೆ ಆರು ಸಾವಿರ ಎಂ.ಎಲ್. ಅಂದರೆ ಆರು ಲೀಟರ್. ಹಾಗಾದ್ರೆ ವರ್ಷಕ್ಕೆ ಎಪ್ಪತ್ತೆರಡು ಲೀಟರ್, ಅಂದರೆ ಕಳೆದ ಐವತ್ತು ವರ್ಷಗಳಲ್ಲಿ ೩೬೦೦ಲೀಟರ್ ಕಾಫೀ ಕುಡಿದಿದ್ದೇನೆ. ಅಂದರೆ ಒಂದು ಸಣ್ಣ ಸಿಂಟೆಕ್ಸ್ ಟ್ಯಾಂಕಿನಲ್ಲಿ ಹಿಡಿಯುವಷ್ಟು ಕಾಫೀ ಕುಡಿದಿದ್ದೇನೆ. ಎಷ್ಟು ಸಾರಿ ಕಾಫೀ ಕುಡಿದರೂ ಪ್ರತಿಸಾರಿ ಕುಡಿದಾಗಲೂ ಅದರ ರುಚಿಯ ಅನುಭವ ಹೊಸದಾಗಿಯೇ ಇರುತ್ತದೆ.

ಕಾಫೀಯನ್ನು ಮೊದಲು ನೋಡುವುದೇ ಕಣ್ಣು. ಕಾಫೀ ಬಣ್ಣ ನೋಡಿಯೇ, ಅದು ಸ್ಟ್ರಾಂಗ್ ಅಥವಾ ಲೈಟ್ ಎಂದು ನಿರ್ಧರಿಸಿ ಬಿಡುತ್ತದೆ. ಮೂಗು ಸುವಾಸನೆ ಆಘ್ರಾಣಿಸಿ ಅದರ ತಾಜಾತನ ನಿರ್ಧರಿಸುತ್ತೆ. ಲೋಟ ಕೈಯಲ್ಲಿ ಹಿಡಿದುಕೊಂಡಾಗ, ಸ್ಪರ್ಷ (ಚರ್ಮ) ಅದರ ಉಷ್ಣತೆಯನ್ನು ಅಳೆಯುತ್ತದೆ. ನಂತರ ನಾಲಿಗೆ ಅದರ ರುಚಿ ನೋಡುತ್ತದೆ. ಆದರೆ ಬಣ್ಣ, ಸುವಾಸನೆ, ಉಷ್ಣತೆ, ರುಚಿ ಎಲ್ಲಾ ಸರಿಯಾಗಿದೆಯೇ ಎಂದು ನಿರ್ಧಾರವಾಗುವುದು ಮೆದುಳಿನಲ್ಲಿ! ಕೊನೆಗೆ ಅದು ಹೋಗುವುದು ಹೊಟ್ಟೆಗೆ. ಈ ಹೊಟ್ಟೆ ಮತ್ತು ಮೆದುಳಿಗೂ ಹೊರಗಿನ ಪ್ರಪಂಚದ ಗಾಳಿ, ನೀರು, ಬೆಂಕಿಗಳ ಜೊತೆ ನೇರ ಸಂಪರ್ಕವಿಲ್ಲ. ಹೊರಗಿನ ಪಂಚಭೂತಗಳ ಜೊತೆ ಇರುವುದು ನಮ್ಮ ಪಂಚೇಂದ್ರಿಯಗಳು ಮಾತ್ರ. ಆದರೆ ಅದನ್ನು ನಿಯಂತ್ರಿಸುವುದು ಈ ಮೆದುಳು. ಈ ಮೆದುಳು ನಾವು ಕುಡಿಯುವ ಕಾಫೀ ಸುಮ್ಮನೆ ಸರಿಯಿದೆ ಎಂದು ಹೇಳುವುದಿಲ್ಲ. ಪ್ರತಿ ಸಾರಿ ಕುಡಿದಾಗಲೂ ಹಿಂದಿನ ಸಾರಿ ಕುಡಿದ ಕಾಫೀ ರುಚಿಯ ಜೊತೆಗೆ ಹೋಲಿಕೆ ಮಾಡಿ, ನಂತರ ಚೆನ್ನಾಗಿದೆ, ಸಾಧಾರಣ ಅಥವಾ ಪರವಾಗಿಲ್ಲ ಎನ್ನುವ ತಿರ್ಮಾನಕ್ಕೆ ಬರುತ್ತದೆ.

ಫೋಟೋ ಕೃಪೆ : google

ನಿಜವಾಗಲೂ ಇವೆಲ್ಲಾ ತೀರ್ಮಾನ ಮಾಡುವುದು ಮೆದುಳೆ ಅಥವಾ ಮನಸ್ಸೇ? ಮೆದುಳಿಗೆ ಆಕಾರವಿದೆ, ವಿಜ್ಞಾನ ಓದಿದವರು ಅಥವಾ ವೈದ್ಯಕೀಯ ಶಿಕ್ಷಣ ಪಡೆದವರು ಅದರ ಬಗ್ಗೆ ಸಾಕಷ್ಟು ಹೇಳುತ್ತಾರೆ. ಆದರೆ ಈ ಮನಸ್ಸಿಗೆ ಯಾವ ಆಕಾರವಿದೆ? ಇದನ್ನು ನೋಡಿದವರು ಯಾರಿದ್ದಾರೆ? ಈ ಮನೋ ಶಾಸ್ತ್ರಜ್ಞರು (ಸೈಕ್ಯಾಟ್ರಿಷ್ಟ್) ಮನಸ್ಸನ್ನು ನೋಡಿರಬಹುದೇ ಎಂಬ ಪ್ರಶ್ನೆ ಎದುರಾಗಬಹುದಲ್ಲವೇ? ಅವರಿಗೂ ಕೂಡ ಮನಸ್ಸಿನ ಸ್ಥಿತಿ-ಗತಿಗಳು ಮಾತ್ರ ಗೊತ್ತಾಗುತ್ತದೆ ಹೊರತು ಅದರ ಆಕಾರ ಗೊತ್ತಾಗುವುದಿಲ್ಲ. ನನಗೆ ಗೊತ್ತಿರುವ ಹಾಗೆ ಈ ಮನಸ್ಸು ನೋಡಿರುವವರು ಕವಿಗಳು ಮಾತ್ರ. ಈ ಕವಿಗಳಿಗೆ ಇರುವ ಇನ್ನೊಂದು ಶಕ್ತಿಯೆಂದರೆ, ಮನಸ್ಸಿಗೆ ಅವರಿಗೆ ಬೇಕಾದ ಆಕಾರ ಕೊಡಬಲ್ಲರು! ಈ ಆಕಾರವಿಲ್ಲದ ಮನಸ್ಸಿನ ಹುಡುಕಾಟದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೊಳ್ಳುವ ಇನ್ನೊಂದು ಗುಂಪು ಎಂದರೆ ಮದುವೆ ಗೊತ್ತಾಗಿರುವ ಪ್ರಣಯಪಕ್ಷಿಗಳು. ಉಳಿದವರಿಗೆಲ್ಲಾ ಈ ಮನಸ್ಸು ಅಮಾರ್ತ ಮಾತ್ರ.

ಒಳ್ಳೆಯ ಕಾಫೀ ಕುಡಿದಾಗ ‘ಪರಮಾತ್ಮ ತೃಪ್ತಿಯಾದ ಕಣಪ್ಪ’ ಎಂದು ಹೇಳುವುದಿದೆ. ಹಾಗಾದರೆ ಈ ‘ಪರಮಾತ್ಮ’ ಯಾರು? ಹಾಗಾದರೆ ಮನಸ್ಸೇ ಪರಮಾತ್ಮನೇ? ಕಾಫೀ ಹೋಗುವುದು ಸ್ಪಷ್ಟವಾದ ಆಕಾರವುಳ್ಳ, ಎಲ್ಲರ ಕಣ್ಣಿಗೆ ಕಾಣುವ ದೇಹದ ಒಳಗೆ. ಆದರೆ ಆ ಕಾಫೀಯ ರುಚಿ ನಿರ್ಧರಿಸುವುದು ಕಣ್ಣಿಗೆ ಕಾಣದೆ, ಆಕಾರವಿಲ್ಲದ ಪರಮಾತ್ಮ ಅಂದರೆ ಆತ್ಮವೇ? ಹಾಗಾದರೆ ‘ಈ ದೇಹಕ್ಕೂ’ ಮತ್ತು ‘ಆ ಆತ್ಮಕ್ಕೂ’ ಇರುವ ಸಂಬಂಧವೇನು? ಹಾಗಾದ್ರೆ ‘ನಾನು ಯಾರು? ದೇಹವೇ ಅಥವಾ ಆತ್ಮವೇ?’ ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆ ಮನಸ್ಸಿಗೆ ಬಂದರೆ ತಲೆ ಕೆರೆದು ಕೊಳ್ಳುತ್ತಾ ಇನ್ನೊಂದು ಲೋಟ ಕಾಫೀ ಕೈಯಲ್ಲಿ ಹಿಡಿದು ಕೊಂಡು ಕೂರುವ ಸಮಯ ಬಂದಿದೆ ಎಂದರ್ಥ!

‘ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಸುಲಭದ ಕೆಲಸ. ನಾನು ಇಂತವರ ಮಗ, ಇವಳ ಗಂಡ, ಅವಳ ಅಪ್ಪ, ಇಂಜಿನೀಯರ್, ಡಾಕ್ಟರ್, ಟೀಚರ್….. ಹೀಗೆ ಹೇಳುತ್ತಾ ಹೋಗಬಹುದು. ಎಲ್ಲವೂ ನಿರ್ದಿಷ್ಟ. ಹಾಗಾದ್ರೆ ನಾನು ಅಂದರೆ ದೇಹ ಮಾತ್ರವೇ. ಹಾಗಾದ್ರೆ ಈ ಆತ್ಮ ಎಲ್ಲಿಂದ ಬಂತು. ಮೊದಲಿಗೆ ದೇಹ ಮತ್ತು ಆತ್ಮ ಎರಡೂ ಬೇರೆ, ಬೇರೆ ಎಂದು ಯೋಚಿಸುವುದೇ ತಪ್ಪೇ? ಇದೊಂದು ಇಲ್ಲ ಸಲ್ಲದ ಯೋಚನೆಯೇ? ಈ ರೀತಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುವುದು ಸಾಮಾನ್ಯ. ಈ ಪ್ರಶ್ನೆಗಳು ಹುಟ್ಟಿದಾಗ ನಾವು ಇರುವ ಸುತ್ತಲಿನ ಪರಿಸರದ ರೀತಿ ನಮಗೆ ಉತ್ತರ ಸಿಗುತ್ತದೆ. ಒಂದು ಸಾಧಾರಣ ಪರಿಸರದಲ್ಲಿದ್ದರೆ ‘ಇವನು ಏನೇನೋ ಹೇಳುತ್ತಾನೆ’ ಎನ್ನುತ್ತಾರೆ. ಇನ್ನು ಕೆಲವರು ‘ಇಷ್ಟು ದಿವಸ ಸರಿಗಿದ್ದ. ಈಗೇನಾಯ್ತು ಇವ್ನಿಗೆ’ ಎಂದು ಕೊಳ್ಳುತ್ತಾರೆ? ಸಜ್ಜನರ ಸಹವಾಸ ಮಾಡಿದರೆ ಯಾರಾದ್ರು ಗುರುಗಳ ಮಾರ್ಗದರ್ಶನ ದೊರೆಯಬಹುದು. ಗುರುವರ್ಯರ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ಲಭ್ಯವಿದೆ. ಆದರೆ ಯಾರೂ ಕೂಡ ಬಹುಶಃ ನೇರವಾದ ಉತ್ತರ ಕೊಡುವುದಿಲ್ಲ. ಆದರೆ ಅವರು ಯಾವ ದಾರಿಯಲ್ಲಿ ನಡೆದರೆ ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ. ಹಾಗೆ ಹುಡುಕಾಟದಲ್ಲಿ ಇದ್ದಾಗ ಎದುರಾಗಿದ್ದೇ ಈ ಅದ್ವೈತ ಸಿದ್ಧಾಂತ.

ಫೋಟೋ ಕೃಪೆ : google

ಅದ್ವೈತವೆಂದರೆ ಎರಡಲ್ಲದ್ದು..! ಒಂದೇ ಎನ್ನುವ ತತ್ವ. ಒಂದು ದಿನ ಪತ್ರಿಕೆಯಲ್ಲಿ ಇದರ ಬಗ್ಗೆ ಬರೆದ ಬರಹ ಕಾಣಿಸಿತು. ಆದರ ಪ್ರಕಾರ ‘ಪರಮಾತ್ಮನು ಮತ್ತು ನಾನು’ ಬೇರೆ ಬೇರೆಯಲ್ಲ ಎರಡೂ ಒಂದೇ ಎನ್ನುವುದೇ ಶ್ರೀ ಶಂಕರರ ವಾದ. ಅವನು ‘ಪರಮ-ಆತ್ಮ’ ನಾನು ಆತ್ಮ..! ಪರಮಾತ್ಮನಿಂದ ಸಿಡಿದ ಒಂದು ಕಿರಣ. ಸಮುದ್ರದಿಂದ ಒಂದು ಬೊಗಸೆ ನೀರನ್ನು ತೆಗೆದರೆ, ಬೊಗಸೆಯಲ್ಲಿರುವುದೂ ಸಮುದ್ರದ ನೀರೇ! ಸಮುದ್ರದಲ್ಲಿರುವುದು ಅದೇ ನೀರು. ಬೊಗಸೆಯಲ್ಲಿ ಅಲ್ಪವಾಗಿದೆ, ಸಮುದ್ರದಲ್ಲಿ ಅಖಂಡವಾಗಿದೆ. ಬೊಗಸೆಯನ್ನು ಚೆಲ್ಲಿದರೆ ಆ ನೀರು ಸಮುದ್ರವನ್ನು ಸೇರಿ, ಸಮುದ್ರವೇ ಆಗಿಬಿಡುತ್ತದೆ. ಆದ್ದರಿಂದ ಆ ಎರಡೂ ಒಂದೇ! ಹಾಗೆಯೇ ಪರಮಾತ್ಮನಿಂದ ಸಿಡಿದ ಒಂದು ಸಣ್ಣ ಕಿರಣ ದೇಹದ ಗೂಡನ್ನು ಸೇರುತ್ತದೆ. ದೇಹದ ಸಾವಿನೊಂದಿಗೆ ಪುನಃ ಪರಮಾತ್ಮನನ್ನೇ ಸೇರಿಬಿಡುತ್ತದೆ. ಆದ್ದರಿಂದ ‘ಪರಮಾತ್ಮ ಮತ್ತು ನಾನು’ ಎರಡೂ ಬೇರೆ ಬೇರೆಯಲ್ಲ ಎರಡೂ ಒಂದೇ..! ಇದೇ ‘ಅದ್ವೈತ’. ಇದೊಂದು ಅತ್ಯಂತ ರೋಮಾಂಚನಕಾರಿಯಾದ ಸಂಗತಿ. ಪರಮಾತ್ಮನ ಅಂಶವೇ ನಾನು. ನಾನು ಬ್ರಹ್ಮ – ಅಹಂ ಬ್ರಹ್ಮಾಸ್ಮಿ..! ನಾನು ಮಾತ್ರವಲ್ಲ ನೀವೂ ಬ್ರಹ್ಮ.. ಎಲ್ಲರೂ ಬ್ರಹ್ಮರೇ..! ‘ಎಲ್ಲರೂ ಸಮಾನರು’ ಎನ್ನುವುದು ಶ್ರೀ ಶಂಕರರ ಕ್ರಾಂತಿಕಾರಿ ನಿಲುವು.

॥ ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು ॥
ಅಲ್ಲ
॥ ಸಕಲವೂ ಕಾಫೀಗೆ ಅರ್ಪಣೆ ॥


  • ಎನ್.ವಿ.ರಘುರಾಂ – (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading