
ಮಡಿಕೇರಿಯಿಂದ 10 ಕಿ.ಮೀ ದೂರವಿರುವ ಬಿಳಿಗೇರಿ ಗ್ರಾಮದಲ್ಲಿ ರಾಯರ ದೇವಾಲಯವಿದೆ, ಅದು “ಕೊಡಗಿನ ಮಂತ್ರಾಲಯ” ಎಂದೇ ಖ್ಯಾತಿ ಪಡೆದಿದೆ, ದೇವಾಲಯದ ಮಹಿಮೆಯ ಕುರಿತು ಲೇಖಕ ಬಾಲು ದೇರಾಜೆ ಅವರು ಬರೆದಿರುವ ಲೇಖನ ಓದುವುದರ ಜೊತೆಗೆ ದೇವಾಲಯಕ್ಕೆ ತಪ್ಪದೆ ಭೇಟಿ ನೀಡಿ…
ಮಡಿಕೇರಿ ಯಿಂದ 10 ಕಿ.ಮೀ ದೂರದ ಗ್ರಾಮವಾದ ಬಿಳಿಗೇರಿಯಲ್ಲಿರುವುದು ಶ್ರೀ ಅರ್ಧನಾರೀಶ್ವರ ಹಾಗೂ ಶ್ರೀ ಭಗವತಿ ದೇವಾಲಯದ ಸಾನಿಧ್ಯ. ಈ ಪ್ರದೇಶದ ಮೇಲ್ಭಾಗದ ವಿಸ್ತಾರವಾದ ಜಾಗ(ಮೊಟ್ಟೆ) ದಲ್ಲಿರುವ ಮನೆಯ ಒಂದು ತುದಿಯಲ್ಲಿ ಕಾಣಬಹುದು..
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ//
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ//
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ವಾಸವಾಗಿದ್ದು, ಹಲವು ವರ್ಷಗಳ ಹಿಂದೆ ನಿಧರಾಗಿದ್ದ ದಂಪತಿಗಳು ಶ್ರೀ ಮಂಜಯ್ಯ ಹುಲಿತಾಳ್ ಹಾಗೂ ಶ್ರೀಮತಿ ಕಾವೇರಿ ಅಮ್ಮ ಹುಲಿತಾಳ್ . ಇವರ ಮೂರು ಗಂಡು ಮಕ್ಕಳಲ್ಲಿ ಎರಡನೆಯವರಾದ ಶ್ರೀ ಗೋಪಾಲಕೃಷ್ಣ ಹುಲಿತಾಳ್ .ಇವರು ಕೃಷಿಕರಾಗಿದ್ದು , ಸ್ವಂತ ಉದ್ಯೋಗಕ್ಕಾಗಿ ಮರದ ವ್ಯಾಪಾರವನ್ನು ಆಯ್ಕೆ ಮಾಡಿಕೊಂಡಿದ್ದರು.

ಮೊಟ್ಟೆ ಮನೆ..
ಇಸವಿ 1957 ರಲ್ಲಿ ತಮ್ಮ ಆಸ್ತಿ ವಿಭಾಗಗೊಂಡಾಗ ಇವರ ಪಾಲಿಗೆ ದೊರಕಿದ್ದು ಪಕ್ಕದ ಗ್ರಾಮವಾದ ಬಿಳಿಗೇರಿಯಲ್ಲಿ ಒಂದು ಖಾಲಿ ಜಾಗ .ಇಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದುಕೊಂಡು ,ನಂತರ ಮದುವೆಯಾಗಿ ,ಸ್ವತಃ ಭೂಮಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿ ,ಅಭಿವೃದ್ಧಿ ಪಡಿಸಿ ,ಪಾಲಿಗೆ ಬಂದದ್ದರಲ್ಲಿ ಪಂಚಾಮೃತವನ್ನೇ ಕಂಡವರು. ಕಾಫಿ ಏಲಕ್ಕಿ, ಭತ್ತ ಮುಂತಾದವುಗಳನ್ನು ಬೆಳೆಸಿದ್ರು..
1967 ರಲ್ಲಿ ಇಲ್ಲಿಯೇ ನೂತನವಾಗಿ ಗೃಹ ನಿರ್ಮಾಣ ಮಾಡಿಕೊಂಡರು. ಶ್ರೀ ರಾಯರ ಭಕ್ತನಾಗಿದ್ದು ,ಹಲವು ಬಾರಿ ಮಂತ್ರಾಲಯಕ್ಕೆ ಭೇಟಿ ಕೊಟ್ಟಾಗ ಒಂದು ಬಾರಿ ರಾತ್ರಿ ಕನಸಿನಲ್ಲಿ ಶ್ರೀ ರಾಯರು ಬಂದು ನೀನು ಬಂದ ಜಾಗಕ್ಕೆ ಹಿಂತಿರುಗಿ ಹೋಗು ,ನಿನ್ನ ಜಾಗದ ಬದಿಯಲ್ಲಿ ಹಳೆಯ ಕಾಲದ ಈಶ್ವರ ಲಿಂಗವಿದ್ದು ,ಅದನ್ನು ಜೀರ್ಣೋದ್ಧಾರ ಗೊಳಿಸಿದಲ್ಲಿ ನಾನು ಅಲ್ಲಿಗೇ ಬಂದು ನೆಲೆಸುತ್ತೇನೆ ಅಂದರಂತೆ. ಹಿಂತಿರುಗಿ ಬಂದವರು ಗಣ್ಯ ವ್ಯಕ್ತಿಗಳ ಜೊತೆ ಸಮಾಲೋಚಿಸಿ, ಅವರ ಸಲಹೆ ಸೂಚನೆಯಂತೆ ಊರವರನ್ನು ಸೇರಿಸಿ ,ಸಮಿತಿಯನ್ನೂ ರಚಿಸಿಕೊಂಡು ,ಶಿವನ ಸಾನಿಧ್ಯ ,ಬಿಲ ಸೊಂಡಿಲು ಗಣಪತಿ ,ನಾಗ, ಶಾಸ್ತಾವು ಹಾಗೂ ಇದರ ಸನಿಹದಲ್ಲೇ ರಾಘವೇಂದ್ರ ಬೃಂದಾವನ ನಿರ್ಮಿಸಲು ಭಕ್ತಾದಿಗಳೊಂದಿಗೆ ಸಂಕಲ್ಪ ಮಾಡಿಕೊಂಡು ,ನಿರ್ಮಾಣ ಕಾರ್ಯಕ್ಕೆ ಮುಂದಾಗಿ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ1ಎಕ್ರೆ ಜಾಗವನ್ನು ಉದಾರವಾಗಿ ಬಿಟ್ಟು ಕೊಟ್ಟು ,ಇದರ ಜೀರ್ಣೋದ್ಧಾರ ಆಗುವ ತನಕ ತಮ್ಮ ಮನೆಯ ಒಂದು ಬದಿಯ ಕೊಠಡಿಯಲ್ಲಿ ಶ್ರೀ ಸ್ವಾಮಿಯ ಫೋಟೋ ಮತ್ತು ಮೂರ್ತಿಯನ್ನು ಇಟ್ಟು ಪೂಜಿಸುತ್ತಿದ್ದರು. ಆರಾಧನೋತ್ಸವ ವಿಜೃಂಭಣೆಯಿಂದ ನಡೆಯುತ್ತಿತ್ತು. ಈ ಸಮಯದಲ್ಲಿ ಊರಿನ ಹಲವಾರು ಭಕ್ತಾದಿಗಳು ಆಗಮಿಸುತ್ತಿದ್ದರು. ಅವರ ಅಪೇಕ್ಷೆಯಲ್ಲಿ ಪ್ರಾರ್ಥಿಸಿ ,ಮಂತ್ರಾಕ್ಷತೆ ನೀಡಿ ಕಷ್ಟಗಳು ದೂರಗೊಳ್ಳುತ್ತಿದ್ದವು. ಇವರು ಯಾರಲ್ಲೂ ಹಣದ ಅಪೇಕ್ಷೆ ಪಟ್ಟವರಲ್ಲ, ಬಿಡಿಗಾಸಿಗೂ ಕೈ ಚಾಚಿದವರಲ್ಲ. ಇಲ್ಲಿನ ನಂಬಿಕೆ ಸಕಲ ಕಾರ್ಯವು ಸಿದ್ಧಿ ಎಂಬ ಭಾವನೆಯಿಂದ ಇದ್ದವರು. “ಕೊಡಗಿನ ಮಂತ್ರಾಲಯ” ಎಂದೇ ಪ್ರಖ್ಯಾತಿಗೊಂಡಿದ್ದು , ಮಾಜಿ ಮುಖ್ಯಮಂತ್ರಿ ಶ್ರೀ ಆರ್ ಗುಂಡೂರಾವ್, ಡಾ.ರಾಜ್ ಕುಮಾರ್ ಮೊದಲಾದವರು ಇಲ್ಲಿಗೆ ಆಗಮಿಸಿ ಶ್ರೀ ರಾಯರ ಕೃಪೆಗೆ ಪಾತ್ರರಾಗಿದ್ದಾರೆ.
1972-73ರಲ್ಲಿ ತಮ್ಮ ಮನೆಯ ಕೊಠಡಿಯಲ್ಲಿ ಸ್ವಾಮಿ ಯ ಪೂಜಿಸಲು ಆರಂಭಿಸಿದ ಶ್ರೀ ಗೋಪಾಲಕೃಷ್ಣ ರ ಜಾಗದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿ ಬೃಂದಾವನ ನಿರ್ಮಾಣ ಸಮಿತಿ (ರಿ)ಬಿಳಿಗೇರಿ ಯಿಂದ ಬೃಂದಾವನ ಕಟ್ಟಡ ನಿರ್ಮಾಣ ಕಾರ್ಯಕ್ಕೆ 1-11-1979 ರಂದು ಮಂತ್ರಾಲಯ ದ ಪೂಜಾರ್ ಶ್ರೀ ಗುರುರಾಜಾಚಾರ್ ರವರಿಂದ ಶಂಕುಸ್ಥಾಪನೆ ಗೊಂಡರೂ ,ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿತು. ಬೃಂದಾವನ ನಿರ್ಮಾಣ ಕಾರ್ಯಕ್ಕೆ ಮುಖ್ಯ ಕಾರಣಕರ್ತರಾದ ಶ್ರೀ ಹೆಚ್ ಎಂ ಗೋಪಾಲಕೃಷ್ಣ ರ ಕನಸು ಕನಸಾಗಿಯೇ ಉಳಿದುಕೊಂಡು ತಮ್ಮ ಜೀವಿತಾವಧಿ ಯ ಇಸವಿ 2002 ರಲ್ಲಿ ಇಹಲೋಕ ತ್ಯಜಿಸಿದರು . ಇವರ ಪತ್ನಿ ಶ್ರೀಮತಿ ಮೂಕಾಂಬಿಕೆಯು 2013ರಲ್ಲಿ ನಿಧನರಾದರು. ಏಕೈಕ ಮಗಳು ರಾಜೇಶ್ವರಿ ಗೆ ಮದುವೆ ಆಗಿದ್ದು ,3 ಜನ ಗಂಡು ಮಕ್ಕಳಲ್ಲಿ ಮೊದಲನೆಯವರು ಶ್ರಿ ಗಣೇಶ ಹುಲಿತಾಳ್, ಶ್ರೀ ಮಂಜಯ್ಯ(ರಾಜಣ್ಣ)ಹುಲಿತಾಳ್, ಹಾಗೂ ಕಿರಿಯ ಪುತ್ರ ಶ್ರೀ ಚಂದ್ರಶೇಖರ ಹುಲಿತಾಳ್ ಅಸೌಖ್ಯತೆಯಿಂದ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿರುತ್ತಾರೆ.

ಶಂಕುಸ್ಥಾಪನ ಫಲಕ.
ಶ್ರೀ ಗಣೇಶ್ ರು ತಮ್ಮ ವಿದ್ಯಾಭ್ಯಾಸದಲ್ಲಿ ಮುಂದುವರೆದು ಕೊನೇಗೆ ಮಡಿಕೇರಿ ಈಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜ್ ನಲ್ಲಿ ಪದವೀಧರಾಗಿ ,ಮನೆಯನ್ನು ಸೇರಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿದರು. ತೋಟದಲ್ಲಿ ಕೂಲಿಯಾಳುಗಳ ಜೊತೆಗೆ ದುಡಿದರು ಹೊಲದ ಉಳುಮೆಯಲ್ಲಿ ಜೊತೆ ಎತ್ತುಗಳ ಜೊತೆಯಲ್ಲಿ ಹೆಜ್ಜೆ ಹಾಕಿದವರು. ನಾಟಿ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು.ಕೊಟ್ಟಿಗೆ ತುಂಬಾ ಹಸುಗಳು ,ಇದರ ಕೆಲಸ ಆರೈಕೆಗಳನ್ನು ರಾಜಣ್ಣ ಬಹಳ ಶೃದ್ದೆಯಿಂದ ನಿಭಾಯಿಸುತ್ತಾರೆ. ಕಾಲ ಸರಿದಂತೆ ಗಣೇಶ್ ಪತ್ನಿಯಾಗಿಸಿಕೊಂಡ ಸಂಧ್ಯಾ ಕುಮಾರಿ ಚಿತ್ರ ಕಲೆ ,ಛಾಯಾಚಿತ್ರ ಕಲೆ ಹಾಗೂ ಸಂಗೀತದ ಲ್ಲಿ ಆಸಕ್ತಿ ಉಳ್ಳವರಾಗಿದ್ದು ಮೊದಲು ಸಂಗೀತ ಶಿಕ್ಷಕಿಯಾಗಿದ್ದವರು. ಈ ದಂಪತಿಗಳಿಗೆ ಮಗ-ಮಗಳಾಗಿ ನೌಕರಿಯಲ್ಲಿದ್ದಾರೆ.
ಶ್ರೀ ಗಣೇಶ ರು ತಮ್ಮ ಅಪ್ಪನ ಕಾಲಾನಂತರದಿಂದ ಶ್ರೀ ರಾಯರ ಪೂಜಾ ಕಾರ್ಯದಲ್ಲಿ ತೊಡಗಿದ್ದು ,ಇನ್ನು ಮುಂದಕ್ಕೆ ಊರವರ ಸಹಕಾರದಿಂದ ಈಗಾಗಲೇ ಕುಂಠಿತಗೊಂಡ ಕಾರ್ಯವು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಿ ಶ್ರೀ ಶಿವನ ಸಾನಿಧ್ಯ ಹಾಗೂ ರಾಯರ ಬೃಂದಾವನ ನಿರ್ಮಾಣ ವಾಗಲಿ ಎನ್ನುವ ಮನದಾಳದ ಅಪೇಕ್ಷೆ ಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಶ್ರೀ ರಾಯರು ಕೃಪೆ ತೋರಲಿ…
ಗೋಪಾಲಕೃಷ್ಣ ರ ಕನಸು ನನಸಾಗಲಿ
ಇದು ನಮ್ಮೆಲ್ಲರ ಆಶಯವಾಗಿರಲಿ…
- ಲೇಖನ ಮತ್ತು ಕ್ಯಾಮೆರಾ ಹಿಂದಿನ ಕಣ್ಣು : ಬಾಲು ದೇರಾಜೆ, ಸುಳ್ಯ
