ಅದೊಂದು ದಿನ ನನ್ನ ಮಕ್ಕಳ ಶಾಲೆಯಿಂದ ಕರೆ ಬಂತು. ಯಾವುದೊ ಗುಂಗಿನಲ್ಲಿದ್ದ ನಾನು, ಶಾಲೆಯ ನಂಬರ್ ನೋಡುತ್ತಿದ್ದಂತೆ ತಳಮಳ ಶುರುವಾಯಿತು. ‘ಇದೇನಪ್ಪಾ, ಈ ಲಾಕ್ ಡೌನ್ ನಡುವೆ ಶಾಲೆಯವರು ಕಾಲ್ ಮಾಡ್ತಿದ್ದಾರೆ ಎಂದರೆ ಬಹುಶಃ ಫೀಸ್ ಗೆ ಬೆನ್ನ ಹತ್ತಿರಬೇಕು ಎನ್ನುವ ಅನುಮಾನ ಬಂತು. ಆ ಕಾರಣಕ್ಕೆ ಬಂದ ಕರೆಯನ್ನು ನಾನು ಸ್ವೀಕರಿಸಲಿಲ್ಲ. ನನ್ನ ಗಂಡನ ಮುಂದೆ ‘ಶಾಲೆಯವರು ಹೀಗೆ ಲಾಕ್ ಡೌನ್ ಮಧ್ಯೆ ಫೀಸ್ ಕಟ್ಟು ಎಂದರೆ ಎಲ್ಲಿಂದ ಕಟ್ಟೋದು. ಅವರನ್ನ ಸುಮ್ನೆ ಬಿಡಬಾರದು’ ಎಂದು ಹಿಗ್ಗಾಮುಗ್ಗಾ ಬಯ್ಯುತ್ತಿದ್ದೆ, ಅಷ್ಟರಲ್ಲಿನನ್ನ ಗಂಡನ ಮೊಬೈಲ್ ಗೂ ಶಾಲೆಯಿಂದ ಕರೆ ಬಂತು. ‘ಲೇ ನನ್ನ ಮೊಬೈಲ್ ಗೂ ಕರೆ ಮಾಡ್ತಿದ್ದಾರೆ. ಸ್ವಲ್ಪ ಹೊತ್ತು ಸುಮ್ನಿರು. ನೀನು tension ತಗೋಬೇಡ. ಈ ಸಮಯದಲ್ಲಿ ಫೀಸ್ ಕೇಳಿದ್ರೆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಸರ್ಕಾರವೇ ಹೇಳಿದೆ. ಸುಮ್ನೆನೀನು ತಲೆಕೆಡಸ್ಕೊಂಡು, ನನ್ನ ತಲೇನೂ ಕೆಡಸ್ತೀಯಾ. ನಾನು ಎಲ್ಲ ಮಾತಾಡ್ತೀನಿ. ನೀನು ಸ್ವಲ್ಪ ಹೊತ್ತು ಸುಮ್ನಿರು’ ಎಂದು ಗುನುಗುತ್ತಾ ಕರೆಯನ್ನು ಸ್ವೀಕರಿಸಿದರು. ಆ ಕಡೆಯ ಮಾತುಗಳು ನನಗೆ ಸರಿಯಾಗಿ ಕೇಳುತ್ತಿರಲಿಲ್ಲ. ಆದರೆ ನನ್ನ ಗಂಡ ನಗು ನಗುತ್ತ ಮಾತಾಡುತ್ತಿದ್ದನ್ನು ನೋಡಿ ‘ರೀ… ಅವರೆಲ್ಲ ಮೊದ್ಲು ಬೆಣ್ಣೆಯಲ್ಲಿ ಕೂದಲು ತಗೆದ ಹಾಗೆ ನಾಜೂಕಾಗಿಯೇ ಮಾತಾಡೋದು. ನೀವು ಸ್ವಲ್ಪ ಸೀರಿಯಸ್ ಆಗಿ ಮಾತಾಡಿ’ ಎಂದು ಬದಿಯಲ್ಲಿ ಕೂತು ಒಟಗುಟ್ಟುತ್ತಿದ್ದೆ. ‘ಪಾಪ… ನನ್ನ ಗಂಡ ಇಬ್ಬರ ಮಧ್ಯೆ ಯಾರ ಮಾತೂಂತ ಕೇಳ್ತಾರೆ. ತಮ್ಮ ಪಕ್ಕದಲ್ಲಿದ್ದ ಪಿಲ್ಲೋವನ್ನು ನನ್ನ ಮೇಲೆ ಎತ್ತಿ ಬಿಸಾಕಿ, ಸುಮ್ಮನಿರು ಅಂತ ಸನ್ನೆ ಮಾಡಿದರು.
ಗಂಡ ಪಿಲ್ಲೋ ಎಸೆದ ಮಾತ್ರಕ್ಕೆ ಹೆದರಕೊಂಡು ಕೂಡೋಕೆ ಹಿಂದಿನ ಕಾಲದ ಹೆಂಡ್ತೀರಾ ನಾವು?. ಅದೇ ಪಿಲ್ಲೋನ್ನ ಅವರಿಗೆ ವಾಪಸ್ಸ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದೆ. ಅವರ ಫೋನ್ ಕಾಲ್ ಮುಗಿದ ಮೇಲೆ ಮುಖ ಉಬ್ಬಿಸಿಕೊಂಡು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ‘ಲೇ, ಡುಮ್ಮಿ ಹಿಂದೆ- ಮುಂದೆ ತಿಳಿದೇ ಯಾರನ್ನು ಬಯ್ಯೋಕೆ ಹೋಗಬೇಡೆ. ನೋಡು ಪಾಪ… ಈ ಕರೋನ ವೈರಸ್ ನಡುವೆ ಅವರೆಲ್ಲ ಎಷ್ಟು ಒಳ್ಳೆ ಕೆಲಸ ಮಾಡ್ತಿದ್ದಾರೆ. ಅವರ ಶ್ರಮಕ್ಕೆ ಬಯ್ಯೋ ಬದಲು ಥ್ಯಾಂಕ್ಸ್ ಹೇಳಬೇಕು ನೋಡು’ ಅಂತ ಅವರನ್ನ ನನ್ನ ಗಂಡ ವರ್ಣನೆ ಮಾಡುತ್ತಿದ್ದರು. ಮೊದಲೇ ನನ್ನ ಗಂಡ ಪಾಪದವನು. ಬಿಳಿದಿರೋದೆಲ್ಲ ಹಾಲೇ ಎಂದು ನಂಬೋ ಮನುಷ್ಯ. ಈ ಶಾಲೆಯವರು ಏನಂತ ಹೇಳಿ ನನ್ನ ಗಂಡನ್ನ ನಂಬಿಸಿದ್ರೋ ಏನೋ ಗೊತ್ತಿಲ್ಲ. ಅವರ ಹೊಗಳಿಕೆಗೆ ನನಗೆ ಕೋಪ ನೆತ್ತಿಗೇರಿತು. ಆ ಕೋಪಕ್ಕೆ ‘ಅಯ್ಯ… ಅಯ್ಯಾ.. ಅದೇನು ಪಿಟೀಲು ಕೂಯ್ದ ಹಾಗೆ ಕುಯ್ತೀರಾ?. ನೇರ ವಿಷಯಕ್ಕೆ ಬನ್ನಿ. ಶಾಲೆಯವರು ಏನಂತ ಹೇಳಿದ್ರು? ನೀವೇನು ಹೇಳಿದ್ರಿ?. ಬೇಗ ಬೇಗ ಹೇಳಿ ಮುಗಿಸಿ. ನನಗೆ ಸಿಕ್ಕಾಪಟ್ಟೆ ಕೆಲಸ ಇದೆ ಎಂದು ನಾನು ಕೂಡ ಗತ್ತು-ಗಮ್ಮತ್ತನ್ನು ತೋರಿಸಿದೆ.
ಆದರೆ ಒಳಒಳಗೆ ಅವರ ಉತ್ತರಕ್ಕೆ ಕಾತುರಳಾಗಿದ್ದೆ. ‘ನೋಡು ಭವ್ಯ… ಅವರು ಕಾಲ್ ಮಾಡಿದಾಗ ಮೊದ್ಲು ಕೇಳಿದ್ದು ಫೀಸ್ ನಲ್ಲ. ಬದಲಾಗಿ ಮನೆಯವರೆಲ್ಲ ಹೇಗಿದ್ದೀರಾ?. ಮಕ್ಕಳು ಹೇಗಿದ್ದಾರೆ? ಅಂತ. ಇಂತಹ ಸಂದರ್ಭದಲ್ಲಿ ನಮ್ಮ ನೆಂಟರಿಷ್ಟರೆ ಹೇಗಿದ್ದೀರಾ? ಅಂತ ಒಂದು ಕಾಲ್ ಮಾಡಿ ಕೇಳಿಲ್ಲ. ಅಂಥದರಲ್ಲಿ ಒಂದು ಶಾಲೆಯವರು ಕಾಲ್ ಮಾಡಿ ನಮ್ಮನ್ನ, ಮಕ್ಕಳನ್ನ ಕೇಳ್ತಾರೆ ಅಂದರೆ ನಮ್ಮ ಮಕ್ಕಳು ಆ ಶಾಲೆಯಲ್ಲಿ ಎಷ್ಟು ಸೇಫ್ ಆಗಿದ್ದಾರೆ ಅಂತ ತಿಳ್ಕೊ. ಮಕ್ಕಳಿಗೆ ಕರೋನ ಬಗ್ಗೆ ಏನು ಅರಿವಿಲ್ಲ. ಅವರ ಲೋಕವೇ ಬೇರೆ. ಅಂಥದರಲ್ಲಿ ಮಕ್ಕಳನ್ನ ಒಂದು ದಿನ ಅಲ್ಲ,ಒಂದು ವಾರ ಅಲ್ಲ, ತಿಂಗಳಾನುಗಂಟಲೇ ಮನೆಯಲ್ಲೇ ಕೂರಿಸೋದ್ರಿಂದ ಮಾನಸಿಕವಾಗಿ ಕುಗ್ಗಿ ಹೋಗಬಹುದು, ಸರಿಯಾಗಿ ಊಟ ಸೇವಿಸದೇ ಅವರ ಬೆಳವಣಿಗೆಯು ಕುಠಿತವಾಗಬಹುದು ಇವೆಲ್ಲವೂ ಅಪ್ಪ-ಅಮ್ಮಂದಿರಗಿರುವ ದೊಡ್ಡ ಸವಾಲುಗಳು. ಅವರನ್ನ ಕರೋನ ವಿರುದ್ಧ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಪ್ರಶ್ನೆಗಳು,ಭಯ, ಅಸಹಾಯಕತೆ ಎಲ್ಲವೂ ಕಾಡುತ್ತಿದ್ದಾಗ ನಿಮ್ಮ ಮಕ್ಕಳನ್ನು ಕಾಪಾಡುವಲ್ಲಿ ನಾವು ಕೈ ಜೋಡಸ್ತೀವಿ ಅಂತ ಶಾಲೆಯವರು ಮುಂದೆ ಬಂದಿರುವುದು ಗ್ರೇಟ್ ಅಲ್ವೇನೆ’ ಎಂದರು ಅವರು. ವಿಷಯ ಕೇಳುವ ತವಕ ನನಗಿತ್ತೇ ಹೊರತು, ತಾಳ್ಮೆ ನನ್ನಲ್ಲಿ ಇರದದ್ದರಿಂದ ‘ರೀ… ನೀವು ವಿಷಯಗಳನ್ನ ರಬ್ಬರ್ ಥರ ತುಂಬಾನೇ ಏಳಿತ್ತೀರಾ. ವಿಷಯ ಏನುಂತ ಬಿಡಿಸಿ ಬೇಗ ಹೇಳ್ರಿ’. ಎಂದೆ.
ಅದಕ್ಕೆ ನನ್ನ ಪತಿರಾಯ ‘ಲೇ… ನಿನಗೆ ವಿಷಯ ಕೇಳೋಕೆ ಎಷ್ಟು ಆತುರನೆ, ಕೇಳು ಹಾಗಿದ್ದರೆ ಇನ್ಮೇಲೆ ಶಾಲೆಯವರು ಆನ್ಲೈನ್ ಮುಖಾಂತರ ದಿನ ಒಂದೊಂದು ಟಾಸ್ಕ್ ಕೊಡ್ತಾರೆ ಅಂತೇ, ಅದನ್ನ ಮಕ್ಕಳು ಮಾಡಬೇಕು ಅಂತೇ’ ಅಂದರು. ‘ರಜೆಯಲ್ಲಿ ಮಕ್ಕಳು ಆಟಾಡೋದು ಬೇಡವಾ? ಬರಿ… ಓದು ಅಂದ್ರೆ ಹೇಗೆ? ಸರಿಯಾಗಿ ಕೇಳ್ಬೇಕಿತ್ತು ಅವರಿಗೆ. ನನಗೆ ಇದು ಸರಿ ಅನ್ನಿಸ್ತಿಲ್ಲ ರೀ’. ಎಂದು ನನ್ನ ಗಂಡನ ಮಾತಿಗೆ ಫುಲ್ ಸ್ಟಾಪ್ ಹಾಕಲು ಪ್ರಯತ್ನಿಸಿದೆ. ಅವರು ನಗುತ್ತಾ ‘ಟಾಸ್ಕ್ ಅಂದ್ರೆ ಬರಿ ಓದೋದೇ ಇರೋಲ್ಲ ಕಣೆ. ಡಾನ್ಸ್, ಹಾಡು, ಡ್ರಾಯಿಂಗ್ ಎಲ್ಲ ಚಟುವಟಿಕೆಗಳು ಇರುತ್ತೆ. ಅವರಿಗೂ ಮಕ್ಕಳು,ಕುಟುಂಬ ಅಂತ ಎಲ್ಲ ಇದ್ರೂ, ನಮ್ಮ ಮಕ್ಕಳ ಬಗ್ಗೆನೂ ಯೋಚಸ್ತಾರಲ್ವೇ ಅದು ಒಳ್ಳೇದಲ್ವಾ. ಎಷ್ಟೋ ಶಾಲೆಗಳು ಈ ರೀತಿ ಯೋಚಸೋದು ಬಹಳ ಕಮ್ಮಿ. ಈಗ ಮಕ್ಕಳಿಗೆ ಅವರ ಸಹಪಾಠಿಗಳು,ಶಿಕ್ಷಕರ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಎಲ್ಲ ಶಾಲೆಯವರು ಮುಂದೆ ಬಂದರೆ ಮಕ್ಕಳನ್ನ ಆದಷ್ಟು ಮನೆಯಲ್ಲೇ ಕೂರಿಸುವ ಪ್ರಯತ್ನ ಎಲ್ಲರೂ ಸೇರಿ ಮಾಡಬಹುದಲ್ವಾ? ನೀನೇ ಯೋಚಸು’ ಎಂದು ನನ್ನ ತಲೆಯಲ್ಲಿ ಹುಳ ಬಿಟ್ಟಾಗ ನಾನು ಕೂಡ ಯೋಚಸ ತೊಡಗಿದೆ.ಈಗ ಶಾಲೆಯ ಶಿಕ್ಷಕರ ಅವಶ್ಯಕತೆ ಮನೆ- ಮನೆಯಲ್ಲಿನ ಮಕ್ಕಳಿಗಿದೆ ಎನ್ನುವ ಸತ್ಯ ಅರಿವಾಯಿತು. ‘ನಿಜ ರೀ… ಈ ಕರೋನ ಸಮಯದಲ್ಲಿ ಪೊಲೀಸ್ ರು ಡಾಕ್ಟರ್, ನರ್ಸ್ ಅಷ್ಟೇ worriers ಅನ್ಕೊಂಡಿದ್ದೆ. ಆದ್ರೆ ಈ ಶಾಲೆಯವರು ಮಾಡುತ್ತಿರೋ ಒಳ್ಳೆ ಕೆಲಸ ನೋಡಿ ನಿಜವಾಗ್ಲೂ ಮನಸ್ಸು ತುಂಬಿ ಬರ್ತಿದೆ. ಈಗಿನ ಶಾಲೆಗಳೆಂದರೆ ದೊಡ್ಡ ದೊಡ್ಡ ಬಿಲ್ಡಿಂಗ್ ತೋರಸಿ, ಬುಟ್ಟಿಗೆ ಹಾಕೊಂಡು ಲಕ್ಷಗಂಟಲೇ ಫೀಸ್,ಡೊನೇಷನ್ ಅಂತ ಹಣ ಕಿತ್ತಕೊತ್ತಾರೆ. ಒಂದು ರೀತಿಯಲ್ಲಿ ಶಾಲೆಗಳುದುಡ್ಡು ಮಾಡೋ ಉದ್ಯಮವಾಗಿ ಹೋಗಿದೆ. ಮಕ್ಕಳು- ಶಾಲೆಗಳ ನಡುವೆ ದುಡ್ಡಿನ ಬಾಂದವ್ಯವಿರುವುದೇ ಹೆಚ್ಚು. ಆದರೆ ಎಲ್ಲ ಸಂದರ್ಭದಲ್ಲಿ ದುಡ್ಡೇ ಮುಖ್ಯವಾಗಲ್ಲ. ಕೆಲವು ಸಂದರ್ಭದಲ್ಲಿ ಮಾನವೀಯತೆಯೂ ಬೇಕು. ಅದನ್ನ ನಮ್ಮ ಮಕ್ಕಳ ಶಾಲೆ ನಿರೂಪಿಸಿಬಿಡ್ತು.
(ಈ ಲೇಖನದ ಮೂಲಕ ಒಳ್ಳೆ ಕೆಲಸಕ್ಕೆ ಕೈ ಜೋಡಿಸಿದ ಶ್ರೀ ಚೈತನ್ಯ ಟೆಕ್ನೋ ಶಾಲೆಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಏಕೆಂದರೆ ಶಾಲೆಯ ಹುಳುಕನ್ನು ಮುಲಾಜಿಲ್ಲದೆ ಸಾರ್ವಜನಿಕವಾಗಿ ಬಯ್ಯುತ್ತೇವೆ. ಅದೇ ಶಾಲೆ ಒಂದು ಒಳ್ಳೆ ಕೆಲಸ ಮಾಡಿದಾಗ ಸಾರ್ವಜನಿಕವಾಗಿ ಕೃತಜ್ಞತೆಯನ್ನು ಸಲ್ಲಿಸದಿದ್ದರೆ ತಪ್ಪಾಗುತ್ತದೆ. ನನ್ನ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ಪ್ರತಿ ದಿನ ಈ ಶಾಲೆಯು ಮಕ್ಕಳಿಗಾಗಿ ಹೊಸ ಹೊಸ ವಿಷಯಗಳನ್ನ ಆನ್ಲೈನ್ ಮುಖಾಂತರ ಕಳುಹಿಸಿಕೊಡುತ್ತಿದೆ. ಮಕ್ಕಳು ಈ ಹೊಸ ವಿಚಾರಗಳ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಪ್ಪ-ಅಮ್ಮಂದಿರ ಕೆಲಸ ಈಗ ಹಗುರವಾಗಿದೆ. ಮಕ್ಕಳನ್ನು ಈ ಕರೋನ ಸಂದರ್ಭದಲ್ಲಿ ಮಕ್ಕಳನ್ನು ಎಷ್ಟು ಮನೆಯಲ್ಲಿ ಹಿಡಿದಿಡಲು ಸಾಧ್ಯವೋ ಅಷ್ಟು ಶಾಲೆಯ ವೃಂದದವರೆಲ್ಲ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಾರಕ್ಕೊಮ್ಮೆ ಶಾಲೆಯಿಂದ ಶಿಕ್ಷಕರು ಕರೆ ಮಾಡಿ ಮಕ್ಕಳ ಆರೋಗ್ಯವನ್ನು ವಿಚಾರಿಸುತ್ತಾರೆ. ಅವರ ಪ್ರೀತಿಗೆ ಮನೆಯವರೆಲ್ಲ ಆಭಾರಿಯಾಗಿದ್ದೇವೆ.)
ಲೇಖನ :ಶಾಲಿನಿ ಹೂಲಿ ಪ್ರದೀಪ್