ನಮ್ಮೆಲ್ಲರ ಪ್ರೀತಿಯ ದತ್ತಣ್ಣ ಎಂದರೆ ಎಚ್.ಜ.ದತ್ತಾತ್ರೇಯ ಅವರ 78ನೇ ಹುಟ್ಟು ಹಬ್ಬ. ಅವರು ಕಲಾವಿದರಾಗಿ ಎಲ್ಲರೂ ಗೊತ್ತು ಗಳಿಸಿದ ಬಹುಮಾನಗಳು ಗೊತ್ತು. ನಾಟಕ, ಸಿನಿಮಾ ಕುರಿತು ಬೇಕಾದಷ್ಟು ಲೇಖನಗಳೂ ಬಂದಿವೆ. ಆದರೆ ಬಹಳ ಜನಕ್ಕೆ ಗೊತ್ತಿಲ್ಲದ ವಿಷಯ ಒಂದಿದೆ. ಎಸ್.ಎಸ್.ಎಲ್.ಸಿಯಲ್ಲಿ ರಾಂಕ್ ಪಡೆದಿದ್ದ ದತ್ತಣ್ಣ ಆ ಕಾಲದಲ್ಲಿಯೇ ಎಂ.ಇ ಪದವಿ ಪಡೆದವರು.
1964ರಲ್ಲಿ ಭಾರತೀಯ ವಾಯು ಸೇನೆ ಸೇರಿ ವಿಂಗ್ ಕಮ್ಯಾಂಡರ್ ಹುದ್ದೆಯವರೆಗೂ ಏರಿದವರು. ಸೇರಿದ ಆರಂಭದಲ್ಲಿಯೇ ಎದುರಾಗಿದ್ದು ಭಾರತ ಮತ್ತು ಚೀನಾ ಯುದ್ಧ ನಂತರ ಭಾರತ ಪಾಕಿಸ್ತಾನ ಯುದ್ಧ ಹೀಗೆ ಮೂರು ಮಹತ್ವದ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ನೂರಾರು ವಾಯುದಳದ ಸೇನಾನಿಗಳಿಗೆ ಪಾಠ ಹೇಳಿ ಅವರನ್ನು ದೇಶದ ಸುರಕ್ಷತೆಗೆ ಸಿದ್ದಗೊಳಿಸಿದವರು. ವಾಯುದಳ ಎನ್ನುವುದು ಹೊಸದಾಗಿದ್ದ ಕಾಲದಲ್ಲಿ ದತ್ತಣ್ಣನವರ ದೇಶ ಸೇವೆ ಎಷ್ಟು ಮುಖ್ಯವಾದದ್ದು ಎಂದು ಊಹಿಸಬಹುದು.ಆದರೆ ಇದನ್ನು ಕನ್ನಡ ಚಿತ್ರರಂಗ ಬಳಸಿಕೊಳ್ಳಲೇ ಇಲ್ಲ.ಇಷ್ಟು ಹತ್ತಿರದಿಂದ ಸೇನೆಯನ್ನು ಬಲ್ಲ ಮಹಾನ್ ಕಲಾವಿದ ನಮ್ಮ ನಡುವೆ ಇದ್ದರೂ ಅದನ್ನು ಬಳಸಿಕೊಳ್ಳಬೇಕು ಎಂದು ನಮ್ಮ ಚಿತ್ರರಂಗದ ಮಂದಿಗೆ ಅನ್ನಿಸದಿರುವುದು ಅಚ್ಚರಿ.
ನಾನಂತೂ ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ಬೆಂಗಳೂರು ವಿವಿಧ ಭಾರತಿಗೆ ಅವರನ್ನು ಸಂದರ್ಶಿಸಿದಾಗಿನಿಂದ ಸೇನೆಯ ನೆನಪುಗಳನ್ನು ಬರೆಯಿರಿ ಎಂದು ಒತ್ತಾಯಿಸುತ್ತಲೇ ಇದ್ದೇನೆ. ಹುಟ್ಟು ಹಬ್ಬದ ಶುಭಾಶಯ ಕೋರುತ್ತಾ ಈ ಒತ್ತಾಯವನ್ನು ನವೀಕರಿಸಿದ್ದೇನೆ. ಅದಕ್ಕೆ ನೀವೂ ಕೈಗೂಡಿಸಿದರೆ ಸಂತೋಷ… ಅಷ್ಟೇ ಅಲ್ಲ ದತ್ತಣ್ಣನವರ ಫಿಲಂ ಫೆಸ್ಟಿವಲ್ ಅಗತ್ಯವಾಗಿ ಆಗ ಬೇಕು. ಹೀಗೆ ಸಾಕಷ್ಟು ಆಗ ಬೇಕಾದ ಕೆಲಸಗಳಿವೆ. ಏಕೆಂದರೆ ದತ್ತಣ್ಣ ಎಂದರೆ ನಮ್ಮ ಹೆಮ್ಮೆ!
ಲೇಖನ : ಶ್ರೀಧರ್ ಮೂರ್ತಿ